ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ “ಕಡಲೂರ ಕಣ್ಮಣಿ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ಕಡಲೂರ ಕಣ್ಮಣಿ” ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ ನನಗೂ ಸಹ ಈ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿದೆ. ಅದು ನಮ್ಮ ಚಿತ್ರದ ನಾಯಕ, ನಾಯಕಿ ಹಾಗೂ ನಿರ್ಮಾಪಕರು. ಇವರ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಚಿತ್ರ ಜುಲೈ 19 ರಂದು ತೆರೆಗೆ ಬರಲಿದೆ. ಇದೇ ತಂಡದೊಂದಿಗೆ “ಕಡಲೂರ ಕಣ್ಮಣಿ” ಎರಡನೇ ಭಾಗದಲ್ಲಿ ತರುವ ಸಿದ್ದತೆ ನಡೆಯುತ್ತಿದೆ ಎಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ರಾಮ್ ಪ್ರಸನ್ನ ಹುಣಸೂರು ತಿಳಿಸಿದರು.
“ವರ್ಣಪಟಲ” ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ನನಗೆ ನಾಯಕನಾಗಿ ಇದು ಮೊದಲ ಚಿತ್ರ. ಅವಕಾಶ ನೀಡಿದ ನಿರ್ದೇಶಕ ಹಾಗು ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ಅರ್ಜುನ್ ನಗರಕರ್.
ನಾವು ಬ್ಯಾಂಕ್ ಉದ್ಯೋಗಿಗಳು. ಜೊತೆಗೆ ಆಪ್ತಮಿತ್ರರು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ಎಲ್ಲರು ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ನಿರ್ಮಾಪಕರಾದ ಕೊಳ ಶೈಲೇಶ್ ಆರ್ ಪೂಜಾರಿ, ಬಸವರಾಜ್ ಗಚ್ಚಿ ತಿಳಿಸಿದರು. ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದ ಆಕ್ಷನ್ ಸನ್ನಿವೇಶಗಳ ಬಗ್ಗೆ ಚಂದ್ರು ಬಂಡೆ ಮಾಹಿತಿ ನೀಡಿದರು. ಚಿತ್ರವನ್ನು 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಡಿಎಸ್ಕೆ ಸಿನಿಮಾಸ್ ಸಂಸ್ಥೆಯ Dr ಸುನೀಲ್ ಕುಂಬಾರ್ ತಿಳಿಸಿದರು.
ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹಿರಣ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ನಟಿ ರಾಗಿಣಿ ದ್ವಿವೇದಿ ವಿಶೇಷ ಅತಿಥಿಯಾಗಿ ಭಾಗಿಯಾಗಿ ನಾಯಕ ರಾಜವರ್ಧನ್ ಹೊಸ ಪ್ರಯತ್ನಕ್ಕೆ ಬೆಂಬಲ ನೀಡಿದರು. ಈ ವೇಳೆ ಇಡೀ ಹಿರಣ್ಯ ತಂಡ ಭಾಗಿಯಾಗಿತ್ತು.
ಟ್ರೇಲರ್ ಬಿಡುಗಡೆ ಬಳಿಕ ನಟ ಡಾಲಿ ಧನಂಜಯ್ ಮಾತನಾಡಿ, ಹಿರಣ್ಯ ಹಾಗೂ ರಾಜು ಇಡೀ ತಂಡಕ್ಕೆ ಆಲ್ ದಿ ಬೆಸ್ಟ್..ರಾಜವರ್ಧನ್ ನನಗೆ 10 ವರ್ಷದಿಂದ ಪರಿಚಯ. 2013 ಅಥವಾ 2012 ರಲ್ಲಿ ಇಬ್ಬರು ಸಿನಿಮಾವೊಂದಕ್ಕೆ ಫೋಟೋಶೂಟ್ ಮಾಡಿಸಿದ್ದೇವು. ಆದರೆ ಅದು ಸಿನಿಮಾವಾಗಲಿಲ್ಲ. ಜೆಪಿ ನಗರ, ಜಯನಗರಕ್ಕೆ ಬಂದಾಗಲೆಲ್ಲಾ ಸಿಗುತ್ತಾರೆ. ಜರ್ನಿ ನೆನಪು ಮಾಡಿಕೊಂಡಾಗ ಅವತ್ತಿನಿಂದ ಇವತ್ತಿನವರೆಗೂ ನಟನಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾನೆ. ಒಳ್ಳೆ ಬರವಣಿಗೆ, ಸ್ಕ್ರೀಪ್ಟ್, ನಿರ್ದೇಶಕರು, ಅದನ್ನು ಅಷ್ಟೇ ಚೆನ್ನಾಗಿ ಪ್ರೀತಿಸುವ ನಿರ್ಮಾಪಕರು ಇದ್ದಾಗ ಮಾತ್ರ ಒಳ್ಳೆ ಸಿನಿಮಾವಾಗುತ್ತದೆ. ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ಒಳ್ಳೆ ಶುಕ್ರವಾರ ಸಿಗಲಿ. ನಿರ್ಮಾಪಕರು ತುಂಬಾ ಫ್ಯಾಷನೇಟೆಡ್ ಇದ್ದಾರೆ. ಸಿನಿಮಾ ಚೆನ್ನಾಗಿ ಆಗಲಿ ಎಂದರು,
ನಟ ರಾಗಿಣಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಹೊಸ ತಂಡ ಇಂಡಸ್ಟ್ರೀಗೆ ಎಂಟ್ರಿಯಾಗುತ್ತಿರುವುದು. ತುಂಬಾ ಅದ್ಭುತವಾಗಿ ಟೆಕ್ನಿಕಲ್ ಆಗಿ, ಕಲರ್ ಫುಲ್ ಆಗಿರುವ ಟ್ಯಾಲೆಂಟೆಂಡ್ ಟೀಂ ಎಂಟ್ರಿಯಾಗುತ್ತಿರುವುದು ಖುಷಿ. ಹೊಸದಾಗಿ ಸಿನಿಮಾ ಮಾಡುವುದು ತುಂಬಾ ಚಾಲೆಂಜಿಂಗ್ ಕೆಲಸ. ಹೊಸದಾಗಿ ಪ್ರಯತ್ನ ಮಾಡುವುದು ಸುಲಭವಲ್ಲ. ಬೇರೆ ಇಂಡಸ್ಟ್ರೀಗೆ ಹೋಲಿಕೆ ಮಾಡಿದರೆ ನಮ್ಮ ಇಂಡಸ್ಟ್ರೀಯಲ್ಲಿ ಹೊಸಬರಿಗೆ ಸಾಕಷ್ಟು ಅವಕಾಶವಿದೆ. ರಾಜ್ ಹೊಸಬಗೆಯ ಪಾತ್ರ ಮಾಡುತ್ತಾರೆ. ನನಗೆ ಹೆಮ್ಮೆ ಎನಿಸುತ್ತದೆ. ನಿಮಗೆ ಪ್ರೇಕ್ಷಕ ಪ್ರೀತಿ ಕೊಡ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.
ನಟ ರಾಜವರ್ಧನ್ ಮಾತನಾಡಿ, ಶಿವಣ್ಣ ಟ್ರೇಲರ್ ನೋಡಿ ಇಷ್ಟಪಟ್ಟು ಮನೆಗೆ ಕರೆಸಿ ಇಡೀ ತಂಡಕ್ಕೆ ಒಳ್ಳೆ ಉಪಚಾರ ಮಾಡಿದ್ದು ಖುಷಿಯಾಯ್ತು. ಹಿರಣ್ಯ ಒಳ್ಳೆ ಸ್ಟೋರಿ ಲೈನ್. ನಾನು ಅದನ್ನು ನಂಬಿದೆ. ಒಳ್ಳೆ ಸಿನಿಮಾವಾಗಿದೆ. ಸಿನಿಮಾಗೆ ಒಳ್ಳೆ ಟೈಟಲ್ ಬೇಕಿತ್ತು. ಅದು ಧನು ಬಳಿ ಇತ್ತು. ಅವರು ಅದನ್ನು ಕೇಳಿದ ತಕ್ಷಣ ಕೊಟ್ಟರು. ಎಲ್ಲೂ ಏನು ಮೋಸವಾಗದೆ ಸಿನಿಮಾ ಮಾಡಿದ್ದೇವೆ. ಧನು ಥ್ಯಾಂಕು. ನಮ್ಮ ನಿರ್ಮಾಪಕರು ವಿಜಿ ನಾನು ತುಂಬಾ ಕಿತ್ತಾಡಿದ್ದೇವೆ. ಪ್ರೊಡ್ಯೂಸರ್ ತುಂಬಾ ಕನಸು ಇಟ್ಟುಕೊಂಡು ಬಂದಿದ್ದಾರೆ. ಅವರು ಹಾಕಿದ ದುಡ್ಡು ರಿರ್ಟನ್ ಆಗಬೇಕು ಅನ್ನುವುದು ನಮ್ಮ ಜವಾಬ್ದಾರಿ. ನಿರ್ದೇಶಕರು ಹೊಸ ಕನಸು ಇಟ್ಟುಕೊಂಡು ಬಂದಿದ್ದಾರೆ. ಹೊಸತಂಡ ಸಿನಿಮಾ ಕಲಿತು ಮಾಡಿದ್ದಾರೆ. ಇಡೀ ತಂಡ ಎಫರ್ಟ್ ಹಾಕಿ ಚಿತ್ರ ಮಾಡಿದ್ದಾರೆ ಎಂದರು.
ನಿರ್ದೆಶಕ ಪ್ರವೀಣ್ ಅವ್ಯೂಕ್, ಕ್ರೂರ ಗುಣ ಹೊಂದಿದ ಪಾತ್ರವನ್ನಿಟ್ಟುಕೊಂಡು ‘ಹಿರಣ್ಯ’ ಸಿನೆಮಾದ ಕಥೆ ಹೆಣೆದಿದ್ದಾರೆ. ಈ ಹಿಂದೆ ಬಿಚ್ಚುಗತ್ತಿ ಸಿನೆಮಾ ಮೂಲಕ ಭರವಸೆ ಮೂಡಿಸಿದ್ದ ರಾಜವರ್ಧನ್ ನಾಯಕ. ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಜುಲೈ 19ಕ್ಕೆ ಹಿರಣ್ಯ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಂಜು ಒಡೆತನದ ಶಾಲಿನಿ ಆರ್ಟ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಮಾಡಲಿದ್ದಾರೆ.
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಅವರು ಮಾತನಾಡಿ ಪ್ರಮುಖ ವಿಷಯವನ್ನು ಹಂಚಿಕೊಂಡಿದ್ದಾರೆ.1
“ಹುಟ್ಟುಹಬ್ಬ ಎನ್ನುವುದು ತಂದೆ ತಾಯಿ ನಮಗೆ ನೀಡಿರುವ ಗಿಫ್ಟ್. ಅವರಿಗೆ ನಾವು ಯಾವಾಗಲೂ ಚಿರ ಋಣಿಯಾಗಿರಬೇಕು. ಜುಲೈ 12, ನನ್ನ ಅರವತ್ತೆರಡನೇ ಹುಟ್ಟುಹಬ್ಬ. ಇಷ್ಟು ವರ್ಷಗಳಿಂದ ಸಾವಿರಾರು ಅಭಿಮಾನಿಗಳು ನಮ್ಮ ಮನೆಗೆ ಬಂದು ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದ. ಈ ಸಲದ ಹುಟ್ಟುಹಬ್ಬಕ್ಕೆ ನಾನು ನಿಮಗೊಂದು ಸ್ಪೆಷಲ್ ಗಿಫ್ಟ್ ಕೊಡಲಿದ್ದೇನೆ. ಅದೇನೆಂದರೆ, ನನ್ನ ಹುಟ್ಟುಹಬ್ಬದ ದಿನ ಬಹು ನಿರೀಕ್ಷಿತ “45” ಚಿತ್ರದ ನನ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ, ಅರ್ಜುನ್ ಜನ್ಯ ಮೊದಲ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದೇವೆ. ಈ ಚಿತ್ರ ಇಂಡಿಯನ್ ಸ್ಕ್ರೀನ್ ನಲ್ಲೇ ಉತ್ತಮ ಚಿತ್ರವಾಗಲಿದೆ ಎಂದು ನನ್ನ ನಂಬಿಕೆ. ಅದಕ್ಕೆ ದೇವರ ಆಶೀರ್ವಾದ ಬೇಕು. ಆ ದೇವರು ಎಂದರೆ ಅಪ್ಪಾಜಿ ಹೇಳಿದ ಹಾಗೆ ಅಭಿಮಾನಿಗಳು. ಅಭಿಮಾನಿ ದೇವರುಗಳು ಈ ಚಿತ್ರವನ್ನು ನೋಡಿ ಹಾರೈಸಿ” ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ “45”.
ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿರುವ ಡಾ. ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ “45” ಚಿತ್ರತಂಡ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
ಕನ್ನಡ ಚಿತ್ರರಂಗದ ಮೂವರು ಹೆಸರಾಂತ ನಾಯಕನಟರ ಸಮಾಗಮದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ ಸದ್ಯದಲ್ಲೇ ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶ ಮೂವತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.
ಇಷ್ಟು ದಿನಗಳ ಕಾಲ ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿರುವುದು ಕನ್ನಡದಲ್ಲಿ ಇದೇ ಮೊದಲಿರಬಹುದು. ಸೆಪ್ಟೆಂಬರ್ ನಲ್ಲಿ “45” ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಅವರು ಜನಪ್ರಿಯ ಸಂಗೀತ ನಿರ್ದೇಶಕರೇ ಆಗಿರುವುದರಿಂದ ಚಿತ್ರದ ಹಾಡುಗಳ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆಯಿದೆ. .
ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣದ ಡೀಟೆಲ್ ಮಾತುಕತೆ: ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತ ಅಯ್ಯಂಗಾರ್ ಏನಂದ್ರು ಗೊತ್ತಾ?
ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರೀಕರಣ ಅದ್ಧೂರಿಯಾಗಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸಾಗುತ್ತಿದೆ.
ಫಾದರ್ ಸಿನಿಮಾದ ಶೂಟಿಂಗ್ ಸೆಟ್ ಗೆ ಸಿನಿಮಾ ಪತ್ರಕರ್ತರು ಭೇಟಿ ನೀಡಿದ ವೇಳೆ ಚಿತ್ರತಂಡ ಮಾತಿಗಿಳಿಯಿತು. ಪ್ರಕಾಶ್ ರೈ ಮತ್ತು ‘ಡಾರ್ಲಿಂಗ್’ ಕೃಷ್ಣ ತಂದೆ-ಮಗನಾಗಿ ಅಭಿನಯಿಸುತ್ತಿರುವ ‘ಫಾದರ್’ ಚಿತ್ರದ ಚಿತ್ರೀಕರಣ ಮೈಸೂರಿನ ಸುಮಾರು ನೂರು ವರ್ಷಗಳ ಹಳೆಯ ಮನೆಯಲ್ಲಿ ಕಲರ್ ಫುಲ್ ಆಗಿ ನಡೆಯುತ್ತಿದೆ. ಈ ವೇಳೆ ಸಿನಿಮಾ ತಂಡ ಹೇಳಿಕೊಂಡಿದ್ದು ಹೀಗೆ.
ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ನಾನು ನಿಜಕ್ಕೂ ಲಕ್ಕಿ ಮ್ಯಾನ್. ಯಾಕೆಂದರೆ ಒಳ್ಳೆಯ ಕಥೆಗಳೇ ನನ್ನ ಪಾಲಾಗುತ್ತಿವೆ. ನಾನು ಈ ಕಥೆ ಕೇಳಿದಾಗ, ಮೊದಲು ಇಷ್ಟಪಟ್ಟಿದ್ದು ಪತ್ನಿ ಮಿಲನಾ. ಕಥೆ ಚೆನ್ನಾಗಿದೆ. ನೀವು ಮಾಡಲೇಬೇಕೆಂದು ಹೇಳಿದರು. ಇನ್ನು, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ ಪ್ರಕಾಶ್ ರೈ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆಯುತ್ತಿದ್ದೆ. ‘ಫಾದರ್’ ಜನರ ಮನಸಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ’ ಎಂದರು ಡಾರ್ಲಿಂಗ್ ಕೃಷ್ಣ.
ಸಿನಿಮಾದ ಆಕರ್ಷಣೆ ಪ್ರಕಾಶ್ ರೈ ಮಾತನಾಡಿ, ‘ಚಂದ್ರು ಜೊತೆಗೆ ನಾನು ಮೊದಲು ‘ಕಬ್ಜ’ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ “ಫಾದರ್” ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಕಥೆ ಕೇಳಿದಾಗ ನನಗೆ ಇದು ಇಂದಿಗೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು.
ಇದೊಂದು ಕಾಡುವಂತಹ ಚಿತ್ರ. ಆರ್ ಚಂದ್ರು ಆರ್ ಸಿ ಸ್ಟುಡಿಯೋಸ್ ಮೂಲಕ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಹಾಗೂ ನಾನು ಬಹಳ ಇಷ್ಟೊಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ಖುಷಿಯಾಗಿದೆ. ಇಂತಹ ನಿರ್ಮಾಣ ಸಂಸ್ಥೆಗಳು ಕನ್ನಡಕ್ಕೆ ಬೇಕು. ಕನ್ನಡ ಸಿನಿಮಾ ರಂಗಕ್ಕೆ ಚಂದ್ರು ಅವರ ಕೊಡುಗೆ ಇದೆ. ಇಂತಹವರು ಇಂಡಸ್ಟ್ರಿಗೆ ಬೇಕು ಎಂಬುದನ್ನು ಒತ್ತಿ ಹೇಳಿದರು ಪ್ರಕಾಶ್ ರೈ.
ಸದಾ ಸಿನಿಮಾ ಧ್ಯಾನಿಯಾಗಿರುವ ಆರ್. ಚಂದ್ರ, ತಮ್ಮ ಫಾದರ್ ಬಗ್ಗೆ ಹೇಳಿದ್ದು ಹೀಗೆ. ‘ ನನ್ನ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಐದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಇದು ಸುಲಭವಲ್ಲ. ಸಿನಿಮಾ ಪ್ರೀತಿಯೇ ಇದಕ್ಕೆ ಕಾರಣ. ಫಾದರ್ ಒಂದು ಅದ್ಭುತ ಕಥೆ. ಪ್ರತಿತೊಬ್ಬ ತಂದೆ ಮಗನ ಬಾಂಧವ್ಯಬಿಲ್ಲಿ ಹೇಳಲಾಗುತ್ತಿದೆ. ಇಂಥದ್ದೊಂದು ಕಂಟೆಂಟ್ ಸಿನಿಮಾ ಮಾಡೋಕೆ ಹೆಮ್ಮೆ ಎನಿಸುತ್ತಿದೆ. ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ ಅನ್ನೋದು ಹೆಗ್ಗಳಿಕೆ. ಈ ಚಿತ್ರಕ್ಕೆ ಗ್ರಾಂಡ್ ಫಾದರ್ ಅಂದರೆ ಅದು ಪ್ರಕಾಶ್ ರಾಜ್ ಎನ್ನಬಹುದು. ಕೃಷ್ಣ ಅವರ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಈಗ ಸಾಧ್ಯವಾಗುತ್ತಿದೆ. ಇದು ‘ತಾಜಮಹಲ್’ ತರಹ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದೆ. ‘ಫಾದರ್’ ಚ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಚಿತ್ರೀಕರಿಸುವ ಯೋಜನೆಇದೆ ಎಂದರು ಆರ್.ಚಂದ್ರು.
ಅಮೃತಾ ಅಯ್ಯಂಗಾರ್ ಅವರಿಗೆ ಒಂದೊಳ್ಳೆಯ ಕಥೆ ಮತ್ತು ಪಾತ್ರ ಇರುವ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆಯಂತೆ. ಅದರಲ್ಲೂ ನಮ್ಮೂರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಪ್ರಕಾಶ್ ರೈ ಅವರ ಜೊತೆಗೆ ನಟಿಸುವ ಆಸೆ ಈಡೇರಿದೆ ಎಂದರು ಅಮೃತಾ.
ದಯಾಳ್ ಪದ್ಮನಾಭ್ ಫಾದರ್ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರು. ಅವರು ಫಾದರ್ ಕುರಿತು ಹೇಳಿದ್ಸಿಷ್ಟು, ‘ಚಂದ್ರು ನನ್ನ ‘ಸಖ ಸಖಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೀನಿ ಎಂದರು.
‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ‘ಹನುಮಾನ್’ ಖ್ಯಾತಿಯ ಗೌರ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನ ವಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (51) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನಶಂಕರಿಯಲ್ಲಿನ ಮನೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಅಪರ್ಣಾ ಅವರು 1984ರಲ್ಲಿ ತೆರೆಕಂಡ ‘ಮಸಣದ ಹೂವು’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲೂ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು.
80-90 ರ ದಶಕದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಅಪರ್ಣಾ ಅವರು, ನಿರೂಪಕಿಯಾಗಿಯೂ ಗಮನಸೆಳೆದಿದ್ದರು.
ಅಪರ್ಣಾ ಅವರು ಚಿಕ್ಕಮಂಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದರು. ಆರಂಭದಲ್ಲಿ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕನ್ನಡಿಗರ ಮನ ಗೆದ್ದಿದ್ದರು.
ನಂತರದ ದಿನಗಳಲ್ಲಿ ಅವರು ಕಿರುತೆರೆಯಲ್ಲೂ ಮಿಂಚಿದ್ದರು. ಅಪ್ಪಟ ಕನ್ನಡತಿಯಾಗಿ ಸ್ಪಷ್ಟ ಕನ್ನಡದಲ್ಲೇ ಮಾತಿಗಿಳಿದು, ಮನೆಮಾತಾಗಿದ್ದರು. ಮೂಡಲಮನೆ, ಮುಕ್ತ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.
ತಮ್ಮ ಅಮೋಘ ಅಭಿನಯ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಆಕಾಶವಾಣಿಯಲ್ಲೂ ನಿರೂಪಕಿಯಾಗಿದ್ದರು. ಮಜಾ ಟಾಕೀಸ್ ರಿಯಾಲಿಟಿ ಶೋ ನಲ್ಲಿ ವರಲಕ್ಷ್ಮಿಯಾಗಿ ಜನಪ್ರಿಯಗೊಂಡಿದ್ದರು. 2013ರ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಅಪರ್ಣಾ ಇನ್ನು ನೆನಪು ಮಾತ್ರ….
ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ ಭೈರತಿ ರಣಗಲ್ ಸಿನಿಮಾ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಈ ಸಿನಿಮಾ ಇದೀಗ, ದೊಡ್ಡ ಅಚ್ಚರಿಯೊಂದನ್ನು ಎಲ್ಲರೆದಿರಿಡಲು ಸಿದ್ಧತೆ ನಡೆಸಿದೆ. ಅಂದರೆ ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈ ಟೀಸರ್ ಅನ್ನು First Verdict ಎಂದು ಚಿತ್ರತಂಡ ಕರೆದುಕೊಂಡಿದೆ.
ಗೀತಾ ಪಿಕ್ಚರ್ಸ್ ಅಡಿಯಲ್ಲಿ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದು.
ಅಂದಹಾಗೆ ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಲಾಯರ್ ಆಗಿ ಎದುರಾಗಿದ್ದಾರೆ ಶಿವಣ್ಣ.
ಆನಂದ್ ಆಡಿಯೋಗೆ ಭೈರತಿ ಹಕ್ಕುಗಳು
ಆನಂದ್ ಆಡಿಯೋ ಸಂಸ್ಥೆ ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ವರ್ಷ ತೆರೆಕಾಣುತ್ತಿರುವ ಕನ್ನಡದ ದೊಡ್ಡ ಸಿನಿಮಾ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ.
ಕೆಲ ಮೂಲಗಳ ಪ್ರಕಾರ, ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕನ್ನು ಬಹುಕೋಟಿ ಕೊಟ್ಟು ಖರೀದಿಸಿದೆಯಂತೆ ಆನಂದ್ ಆಡಿಯೋ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದು, ಚಿತ್ರಮಂದಿರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.
ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುತಾರಾಗಣದ ಚಿತ್ರ `ಜೀಬ್ರಾ’ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾಗೆ ಸತ್ಯದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಮಾತ್ರವಲ್ಲ ಸ್ಯಾಂಡಲ್ವುಡ್ ಸ್ಟಾರ್ ಡಾಲಿ ಧನಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ, ಸತ್ಯದೇವ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಫಸ್ಟ್ ಲುಕ್ ರಿವೀಲ್ ಮಾಡಿದೆ.
ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸತ್ಯ ದೇವ್ ಸಹ ಮುಖ್ಯ ಪಾತ್ರದಲ್ಲಿರಲಿದ್ದಾರೆ. ಪದ್ಮಜಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್ಗಳ ಅಡಿಯಲ್ಲಿ ಎಸ್ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಜೀಬ್ರಾ ತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ.
ಪೋಸ್ಟರ್ನಲ್ಲಿ ಸತ್ಯದೇವ್ ಅತ್ಯಂತ ಸ್ಟೈಲಿಶ್ ಅವತಾರ ತಾಳಿದ್ದಾರೆ. ಸೂಟ್ ಧರಿಸಿ ಅತ್ಯಂತ ಖಡಕ್ ಲುಕ್ನಲ್ಲಿ ಕಂಡಿದ್ದಾರೆ. ತುಂಬಾ ಗಂಭೀರವಾಗಿ ಕಂಡಿದ್ದಾರೆ ಸತ್ಯದೇವ್. ಭುಜದ ಮೇಲೆ ಚೀಲವನ್ನು ಹೊತ್ತುಕೊಂಡು ಬಹಳ ಗಭೀರದಿಂದ ನಡೆಯುತ್ತಿರುವ ಲುಕ್ನಲ್ಲಿ ಕಂಡಿದ್ದಾರೆ. ಇನ್ನೊಂದು ಕೈಯಲ್ಲಿ ಪೆನ್ನು ಇದೆ. ಪೋಸ್ಟರ್ ಬ್ಯಾಕ್ರೌಂಡ್ನಲ್ಲಿ ನೋಟುಗಳು ಚೆಲ್ಲಾಪಿಲ್ಲಿಯಾಗಿವೆ. ʻಜೀಬ್ರಾ’ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸತ್ಯದೇವ್, ನಟಿ ಅಮೃತಾ ಐಯ್ಯಂಗಾರ್, ಪ್ರಿಯಾ ಭವಾನಿ ಶಂಕರ್, ತೆಲುಗಿನ ಜನಪ್ರಿಯ ಹಾಸ್ಯನಟ ಸುನಿಲ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಊರ್ವಶಿ ರೌಟೆಲ್ಲಾ ಇನ್ನೂ ಕೆಲವು ಪ್ರತಿಭಾವಂತ ನಟರು ಇರಲಿದ್ದಾರೆ. ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ.
ʻಲಕ್ ಫೇವರ್ಸ್ ದಿ ಬ್ರೇವ್ʼ ಎಂದು ಅಡಿಬರಹ ಕೂಡ ಇದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆಗುತ್ತಿವೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.
ಈಶ್ವರ್ ಕಾರ್ತಿಕ್ ನಿರ್ದೇಶನದ ಈ ಕ್ರೈಮ್ ಆಕ್ಷನ್ ಎಂಟರ್ಟೈನರ್ನಲ್ಲಿ ಪ್ರಿಯಾ ಭವಾನಿ ಶಂಕರ್ ಮತ್ತು ಜೆನ್ನಿಫರ್ ಪಿಕ್ಕಿನಾಟೊ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸತ್ಯ ಅಕಾಲ ಮತ್ತು ಸುನಿಲ್ ಇತರ ಪ್ರಮುಖ ಪಾತ್ರಧಾರಿಗಳು. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ,ಮೀರಾಖ್ ಸಂಭಾಷಣೆ ಇದೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಚಿತ್ರ ಸತ್ಯದೇವ್, ಡಾಲಿ ಧನಂಜಯ, ಸತ್ಯರಾಜ್, ಪ್ರಿಯಾ ಭವಾನಿ ಶಂಕರ್, ಜೆನ್ನಿಫರ್ ಪಿಕ್ಕಿನಾಟೊ, ಸತ್ಯ ಅಕಾಲ, ಸುನಿಲ್ ಹೀಗೆ ಬಹು ತಾರಾಗಣ ಹೊಂದಿದೆ.
‘ಕರಾವಳಿ’ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಮತ್ತು ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತದೆ. ಕರಾವಳಿ ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಮತ್ತೊಂದು ಭರ್ಜರಿ ಪೋಸ್ಟ್ ಅನಾವರಣವಾಗಿದೆ.
ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ಕರಾವಳಿ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ವೈರಲ್ ಆಗಿದೆ. ಇದೀಗ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಮತ್ತೊಂದು ಲುಕ್ ಗಮನ ಸೆಳೆಯುತ್ತದೆ.
ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್ ನ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.
ಬರ್ತಡೇ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ.
ಕರಾವಳಿ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ, ‘ದೇವರು ರುಜು ಮಾಡಿದನು’ ಎಂಬುದು ಕುವೆಂಪುರವರ ಕವಿತೆ ಸಾಲಾಗಿದ್ದು ಅದನ್ನೇ ಚಿತ್ರದ ಟೈಟಲ್ ಆಗಿ ಇಟ್ಟಿದ್ದಾರೆ.
ಇನ್ನೂ ಚಿತ್ರದ ನಾಯಕ. ವಿರಾಜ್ ರಂಗಭೂಮಿ ಪ್ರತಿಭೆಯಾಗಿದ್ದು ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ, ವಿರಾಜ್ ತಂದೆ ಗೋವಿಂದ್ ರಾಜ್ ರವರ ಗ್ರೀನ್ ಹೌಸ್, ಪ್ರೆಸ್ ಮೀಟ್ ಮತ್ತು ಇವೆಂಟ್ ಗಳಿಗೆ ಹೆಸರಾಗಿದ್ದು ಈಗ ಅವರದೇ ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ,
ಚಿತ್ರದ ತಂಡ ನಾಯಕಿ ಮತ್ತು ಇನ್ನಿತರ ಕಲಾವಿದರ ಹುಡುಕಾಟದಲಿದ್ದು, ಶೂಟಿಂಗ್ ಅನ್ನು ಸೆಪ್ಟೆಂಬರ್ ನಲ್ಲಿ ಶುರು ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ, ಮುಂದಿನ ಅಪ್ಡೇಟ್ ಗಳನ್ನು ಚಿತ್ರತಂಡ ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಿದ್ದಾರೆ.
ಹೇಮಂತ್ ಎಂ ರಾವ್ ಮತ್ತು ಶಿವ ರಾಜ್ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಭೈರವನ ಕೊನೆ ಪಾಠ ಎಂದು ಹೆಸರಿಡಲಾಗಿದೆ. ಭೈರವನ ಕೊನೆ ಪಾಠ’ ತಲೆಮಾರುಗಳವರೆಗೆ ನೆನಪುಳಿಯುವಂಥ ಚಲನಚಿತ್ರವಾಗಲಿದೆ – ವೈಶಾಖ್ ಜೆ ಗೌಡ
ಡಾ.ವೈಶಾಖ್ ಜೆ ಗೌಡ ಅವರ ವಿಜೆಎಫ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭೈರವನ ಕೊನೆ ಪಾಠ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ – ಕಟ್ ಹೇಳಲಿದ್ದು, ಡಾ.ಶಿವ ರಾಜ್ಕುಮಾರ್ ನಾಯಕ ನಟರಾಗಿ ಬಣ್ಣ ಹಚ್ಚಲಿದ್ದಾರೆ.
ಹೇಮಂತ್ ಎಂ ರಾವ್ ಅವರ ಸಿನೆಮಾಗಳ ಶೀರ್ಷಿಕೆಗಳು ಯಾವಾಗಲೂ ವಿಶಿಷ್ಟವಾಗಿರುತ್ತವೆ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು, “ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನೆಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಸಪ್ತ ಸಾಗರದಾಚೆ ಎಲ್ಲೋ’ ಸಿನೆಮಾ ಶೀರ್ಷಿಕೆಗಳು ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾದವು. ‘ಭೈರವನ ಕೊನೆ ಪಾಠ’ ಕೂಡಾ ಆ ಸಾಲಿಗೆ ಸೇರಲಿದೆ. ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ ಉದ್ದೇಶ ನಮ್ಮದು. ಅದರಲ್ಲೂ ನಾನು ಬಹಳವಾಗಿ ಇಷ್ಟಪಡುವ ಶಿವಣ್ಣ ಅವರ ಸಿನೆಮಾ ಶೀರ್ಷಿಕೆಗಳ ಸೌಂದರ್ಯವನ್ನು ಸದಾ ಕಾಲ ನೆನಪಿರುವಂತೆ ಮಾಡುವುದು ನನ್ನ ಬಯಕೆ. ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಇದರ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಯಶಸ್ವಿಯಾಗಿ ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆ” ಎಂದು ವಿವರಿಸಿದರು.
ಇದು ನಿರ್ಮಾಪಕ ವೈಶಾಖ್ ಜೆ ಗೌಡ ನಿರ್ಮಾಣದ ಚೊಚ್ಚಲ ಚಿತ್ರವಾಗಿದ್ದು, ಶೀರ್ಷಿಕೆ ಬಗ್ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ಸಂತೋಷದಿಂದ ಹೇಳಿಕೊಂಡರು. “ಈ ಶೀರ್ಷಿಕೆಯನ್ನು ಮೊದಲ ಬಾರಿ ಕೇಳಿದಾಗ ನಾನೆಷ್ಟು ಉತ್ಸಾಹಗೊಂಡಿದ್ದೆನೋ ಅದೇ ಉತ್ಸಾಹ ಜನರಲ್ಲೂ ಕಂಡುಬರುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರವಾಗಿ ಮೂಡಿಬರಲಿದ್ದು, ಮುಂದಿನ ತಲೆಮಾರುಗಳವರೆಗೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಸಿನೆಮಾದಲ್ಲಿ ಬಳಸಲಾಗಿರುವ ಬಾಣದ ಗುರುತಿನ ಬಗ್ಗೆ ತೂರಿಬಂದ ಪ್ರಶ್ನೆಗಳಿಗೆ “ಸದ್ಯದಲ್ಲೇ ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅದಕ್ಕೆ ಉತ್ತರ ಸಿಗಲಿದೆ” ಎಂಬ ಒಕ್ಕೊರಲಿನ ಪ್ರತಿಕ್ರಿಯೆ ಕೇಳಿಬಂತು.
ಈ ವರ್ಷ ಡಾ.ಶಿವ ರಾಜ್ಕುಮಾರ್ ಅವರ ಹುಟ್ಟುಹಬ್ಬಕ್ಕೆ ಮೊದಲು ಭೈರವನ ಕೊನೆ ಪಾಠ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.