Categories
ಸಿನಿ ಸುದ್ದಿ

ಅದು ಯೆಲ್ಲೋ ಗ್ಯಾಂಗ್ಸ್! ಗೆಳೆಯರೇ ಕಟ್ಟಿದ ಗ್ಯಾಂಗ್ ಇದು: ಟ್ರೇಲರ್ ಬಂತು- ನ.11ಕ್ಕೆ ಸಿನಿಮಾ ಬರುತ್ತೆ…

ಮಾಮೂಲಿ ತರಹದ ಕಥೆಯಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದದ್ದು ಹೆಚ್ಚು. ಅಂತಹ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಯೆಲ್ಲೋ ಗ್ಯಾಂಗ್ಸ್” ಚಿತ್ರದ ಟ್ರೇಲರ್ ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಹಲವಾರು ಸ್ನೇಹಿತರ ಸಮ್ಮಿಲನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ನವೆಂಬರ್ 11 ರಂದು ತೆರೆ ಕಾಣುತ್ತಿದೆ.

ಬೇರೊಂದು ಉದ್ಯೋಗ ಮಾಡುತ್ತಿದ್ದ ನನ್ನನ್ನು ಚಿತ್ರರಂಗ ಆಕರ್ಷಿಸಿತ್ತು. ಮೊದಲ ಪ್ರಯತ್ನವಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳು ಬಂದಿದೆಯಾದರೂ, ಇದು ಸ್ವಲ್ಪ ಭಿನ್ನ. ನಾಯಕ ದೇವ್ ದೇವಯ್ಯ, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಹತ್ತೊಂಬತ್ತು ಪ್ರಮುಖ ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಎಲ್ಲಾ ಪಾತ್ರಗಳ ಮೇಲೂ ನಮ್ಮ ಚಿತ್ರದ ಕಥೆ ಸಾಗುತ್ತದೆ. ಮೂರು ಗ್ಯಾಂಗ್ ಗಳಿದ್ದು, ಅದಕ್ಕೆ ಮೂರು ಜನ ಮುಖ್ಯಸ್ಥರಿರುತ್ತಾರೆ.

ಸುಜ್ಞಾನ್ ಅವರ ಸುಂದರ ಛಾಯಾಗ್ರಹಣ ಹಾಗೂ ರೋಹಿತ್ ಸೋವರ್ ಅವರ ಸಂಗೀತ ನಿರ್ದೇಶನ ಈ ಚಿತ್ರದ ಹೈಲೆಟ್. ಇಡೀ ಚಿತ್ರವನ್ನು ಟ್ರ್ಯಾಲಿ ಬಳಸದೆ , ಕೈಯಲ್ಲಿ ಕ್ಯಾಮೆರಾ ಹಿಡಿದು ಚಿತ್ರಿಸಿರುವುದು ವಿಶೇಷ. ಇಂತಹ ಹಲವು ವಿಶೇಷಗಳ ಸಂಗಮವಾಗಿರುವ ನಮ್ಮ “ಯೆಲ್ಲೋ ಗ್ಯಾಂಗ್ಸ್” ಗೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ.

ವಿಭಿನ್ನ ಸ್ಟುಡಿಯೋಸ್, ವಾಟ್ ನೆಕ್ಸ್ಟ್ ಮೂವೀಸ್ ಹಾಗೂ ಕೀ ಲೈಟ್ಸ್ ಸಂಸ್ಥೆ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ಓದಿರುವ ಸಾಕಷ್ಟು ವಿದ್ಯಾರ್ಥಿಗಳು ಈ ಚಿತ್ರಕ್ಕೆ ಹಣ ಹೂಡಿದ್ದೇವೆ. ಏಕೆಂದರೆ ನಿರ್ದೇಶಕ ರವೀಂದ್ರ ನಮ್ಮ ಸಹಪಾಠಿ. ಮೊದಲಿನಿಂದಲೂ ಅವರ ಯೋಚನೆ ವಿಭಿನ್ನವಾಗಿರುವುದರಿಂದ ನಮ್ಮ ಸಂಸ್ಥೆಗೆ ವಿಭಿನ್ನ ಸ್ಟುಡಿಯೋಸ್ ಎಂದು ಹೆಸರಿಟ್ಟಿದ್ದೇವೆ ಎಂದರು ನಿರಂಜನ್.

ವಿಕ್ರಮ್ ಎಂಬ ಹೆಸರಿನಿಂದ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ನಾಯಕ ದೇವ್ ದೇವಯ್ಯ ಹೇಳಿದರು. ನನಗೆ ಇದೊಂದು ಉತ್ತಮ ಚಿತ್ರವೆಂದರು ನಾಯಕಿ ಅರ್ಚನಾ ಕೊಟ್ಟಿಗೆ.

ಚಿತ್ರದಲ್ಲಿ ನಟಿಸಿರುವ ಸತ್ಯ ಬಿ.ಜಿ, ಅರುಣ್ ಕುಮಾರ್, ನಾಟ್ಯ ರಂಗ, ವಿನೀತ್ ಕಟ್ಟಿ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಹಾಡುಗಳಿಲ್ಲ. ರೀರೇಕಾರ್ಡಿಂಗ್ ಚಿತ್ರದ ಹೈಲೆಟ್ ಎಂದರು ಸಂಗೀತ ನಿರ್ದೇಶಕ ರೋಹಿತ್.

ಸಹ ನಿರ್ಮಾಪಕ ಮನೋಜ್ ಪಿ ಅವರ ಪುತ್ರಿ ಪ್ರತೀಕ್ಷ ಟ್ರೇಲರ್ ಬಿಡುಗಡೆ ಮಾಡಿದರು. ನಿರ್ದೇಶಕರೊಟ್ಟಿಗೆ ಸಂಭಾಷಣೆ ಬರೆದಿರುವ ಪ್ರವೀಣ್ ಕುಮಾರ್ ಇದ್ದರು.

Categories
ಸಿನಿ ಸುದ್ದಿ

ಕಾಶ್ಮೀರಿ ಪಂಡಿತರ ಮೇಲಾದ ಘೋರ‌ ಹತ್ಯೆಯ ಕಥೆ! ವಿಧಿ ಆರ್ಟಿಕಲ್ 370 ಪೋಸ್ಟರ್ ರಿಲೀಸ್…

ಲೈರಾ ಎಂಟರ್‌ ಟೈನರ್ ಬ್ಯಾನರ್ ಮೂಲಕ ಭರತ್ ಗೌಡ, ಸಿ.ರಮೇಶ್ ಅವರು ನಿರ್ಮಿಸಿರುವ ಚಿತ್ರ ಆರ್ಟಿಕಲ್ 370. ಕೆ.ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ, ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ ಈ ವೇಳೆ ಆಗ ಅಲ್ಲಿ‌ ನೆಲೆಸಿದ್ದ ಪಂಡಿತರೂ ಆದ ಆರ್.ಕೆ.ಮುಟ್ಟು, ಮಾಜಿ ಸೈನಿಕ ಪ್ರಹ್ಲಾದ್ ವಿ.ಕುಲಕರ್ಣಿ ಸೇರಿದಂತೆ ಇತರೆ ಸೈನಿಕರು ಅಲ್ಲಿ ಹಾಜರಿದ್ದರು.
ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ಘೋರ ಹಲ್ಲೆ, ದೌರ್ಜನ್ಯದ ಕಥೆ ಇಟ್ಟುಕೊಂಡು ಹಿಂದಿಯಲ್ಲಿ ಕಶ್ಮೀರಿ ಫೈಲ್ಸ್ ಚಿತ್ರ ಬಂದಿತ್ತು. ಈಗ ಅಲ್ಲಿ ಅರ್ಟಿಕಲ್ 370 ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಹಾಗಾಗಿ ಸೈನಿಕರಿಗೆ, ಕಾಶ್ಮೀರಿ ಪಂಡಿತರಿಗೆ ಈ ಸಿನಿಮಾ ಅರ್ಪಣೆ ಎಂದು ಚಿತ್ರತಂಡ ಹೇಳಿದೆ.

ಆ ಸಮಯದಲ್ಲಿ ಅಲ್ಲೇ ಇದ್ದು ನಡೆದ ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡ ಮುಟ್ಟು ಅವರು ಮಾತನಾಡಿ, ನಾನ 1990ರಲ್ಲಿ ಬೆಂಗಳೂರಗೆ ಬಂದೆ. ಕರ್ನಾಟಕದ ಜನ ಒಳ್ಳೆಯವರು. ತುಂಬಾ ಚೆನ್ನಾಗಿ ನೋಡಿಕೊಂಡರು. ಆಗ ಸುಮಾರು 800 ರಿಂದ 850 ಪಂಡಿತರನ್ನು ಕೊಲೆ ಮಾಡಲಾಯಿತು, ಮಹಿಳೆಯರ ಮೇಲೆ ರೇಪ್ ಮಾಡುವುದು, ರುಂಡ ಕತ್ತರಿಸುವುದು ಹೆಚ್ಚಾಗಿ ನಡೀತು. 32 ವರ್ಷಗಳಿಂದ ಅಲ್ಲಿನ ಜನ ಈ ಯಾತನೆಯನ್ನು ಅನುಭವಿಸುತ್ತಾ ಇದ್ದರು. 370, 35 ಎ ಮೊದಲು ಎಲ್ಲಾ ಬೇರೆಯಾಗಿತ್ತು, ಈಗ ಇದನ್ನು ತೆಗೆದಿದ್ದರಿಂದ ಖುಷಿ ಇದೆ ಎಂದು ವಿವರಿಸಿದರು.


ಮಾಜಿ ಸೈನಿಕರಾದ ಪ್ರಹ್ಲಾದ ವಿ ಕುಲಕರ್ಣಿ ಮಾತನಾಡಿ. ನಾನು 16ನೇ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿದೆ. ಅಲ್ಲಿ ಧರ್ಮದ ಬಗ್ಗೆ ಬೇದಭಾವ ಇರಲ್ಲ. ಹೃದಯ ಕೈನಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಹೋರಾಟ ಮಾಡಿದ್ದೇವೆ. 370 ವಿಧಿ ಅವರಿಗೆ ಕೊಟ್ಟ ನಂತರ ನಮ್ಮ ಮೇಲೆ ಹಲ್ಲೆ ಮಾಡುತ್ತಾ ಬಂದರು. ಈಗ ಅದನ್ನು ತೆಗೆದಿದ್ದರಿಂದ ಒಳ್ಳೆಯದಾಗುತ್ತಿದೆ. ಕಾಶ್ಮೀರ ನಮ್ಮ ಭಾರತದ ಒಂದು ಭಾಗ ಎಂದು ಹೇಳಿದರು. ಸೈನಿಕರಾದ ಈರಣ್ಣ,ಈರಪ್ಪ, ಇವರೆಲ್ಲ ಆ ವಿಧಿಯ ಕುರಿತು ಮಾತನಾಡಿದರು.


ನಿರ್ಮಾಪಕ‌ ಭರತ ಗೌಡ ಮಾತನಾಡಿ, ನಿರ್ದೇಶಕರು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಅಲ್ಲಿ ಚಿತ್ರೀಕರಣಕ್ಕೆ ಹೋದಾಗ ಸೈನಿಕರು ತುಂಬಾ ಸಪೋರ್ಟ್ ಮಾಡಿದರು ಎಂದರು.


ನಿರ್ದೇಶಕ ಶಂಕರ್ ಮಾತನಾಡಿ, ಒಂದಿಷ್ಟು ವಿಷಯ ಕಲೆ ಹಾಕಿ ಈ ಚಿತ್ರವನ್ನು ಮಾಡಿದ್ದೇವೆ. 60 ದಿನ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಕಾಶ್ಮೀರದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಶಶಿಕುಮಾರ್, ಶೃತಿ, ಶಿವರಾಂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಸೆನ್ಸಾರ್ ಆಗಿದ್ದು, ಬರುವ ನವೆಂಬರ್ ನಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿಯೂ ಹೇಳಿದರು.

Categories
ಸಿನಿ ಸುದ್ದಿ

ಇದು ಹಾಡುವ ಸಮಯ: ಕಾಣೆಯಾಗಿದ್ದಾಳೆ ಹಾಡು ಹೊರಬಂತು…

ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ ಹಾಗೂ ಕೌಶಿಕ್ ಸಂಗೀತ ನೀಡಿರುವ
“ಕಾಣೆಯಾಗಿದ್ದಾಳೆ” ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಚಿತ್ರಕ್ಕೆ ಹುಡುಕಿ ಕೊಟ್ಟವರಿಗೆ ಬಹುಮಾನ ಎಂಬ ಅಡಿಬರಹವಿದೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್, ನಟಿ, ನಿರ್ದೇಶಕಿ ಪ್ರಿಯಾಹಾಸನ್, ನಟಿಯರಾದ ಶರಣ್ಯ, ನಿಶಿತಾ ಗೌಡ, “ಫಾರ್ ರಿಜಿಸ್ಟ್ರೇಶನ್” ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್, ನಿರ್ಮಾಪಕ ನವೀನ್ ರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ನಾನು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದ ಜೊತೆ ಒಡನಾಟ ಹೊಂದಿದ್ದೇನೆ. ಇದು ನನ್ನ ಎರಡನೇ ನಿರ್ದೇಶನದ ಚಿತ್ರ. ಸಮಾಜಿಕ ಕಳಕಳಿಯಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬಹುದು. ಹೆಚ್ಚಿನ ಓದಿನ ಸಲುವಾಗಿ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳು ಯಾವರೀತಿ ತೊಂದರೆ ಅನುಭವಿಸುತ್ತಾಳೆ ಎನ್ನುವುದೇ ಪ್ರಮುಖ ಕಥಾಹಂದರ.

ವಿನಯ್ ಕಾರ್ತಿ ನಾಯಕನಾಗಿ ನಟಿಸಿದ್ದು, ಕೀರ್ತಿ ಭಟ್ ಈ ಚಿತ್ರದ ನಾಯಕಿ. ಸದ್ಯ ತೆಲುಗು ಬಿಗ್ ಬಾಸ್ ನಲ್ಲಿ ನಮ್ಮ ನಾಯಕಿ ಇರುವುದರಿಂದ ಇಲ್ಲಿಗೆ ಬಂದಿಲ್ಲ. ಹಿರಿಯ ನಟಿ ಗಿರಿಜಾ ಲೋಕೇಶ್, ವಿನಯಾ‌ಪ್ರಸಾದ್, ಬಿರಾದಾರ್ ಮುಂತಾದವರು ಚಿತ್ರದಲ್ಲಿದ್ದಾರೆ. ಕೌಶಿಕ್ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಸಹ ಚಿತ್ರವನ್ನು ವೀಕ್ಷಿಸಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲವಾರ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ – ನಿರ್ಮಾಪಕ ಆರ್.ಕೆ.

ನಾನು ಹೊಸಕೋಟೆ ಬಳಿಯ ಹಳ್ಳಿಯವನು. ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದೆ. ಆನಂತರ ನಿರ್ದೇಶಕ ಆರ್ ಕೆ ಅವರು ಭೇಟಿಯಾದಾಗ ಈ ಚಿತ್ರದ ಬಗ್ಗೆ ಹೇಳಿದರು. ನನ್ನನ್ನು ನಾಯಕನಾಗಿ ಆಯ್ಕೆ ಮಾಡಿದರು ಎಂದು ನಾಯಕ ವಿನಯ್ ಕಾರ್ತಿ ತಿಳಿಸಿದರು.

ನಾನು ಆರ್ ಕೆ ಅವರ ಜೊತೆ ನಟಿಸಿರುವ ಎರಡನೇ ಸಿನಿಮಾ. ಅದ್ಭುತ ನಿರ್ದೇಶಕ ಈತ. ಒಳ್ಳೆಯ ಸಿನಿಮಾ ಮಾಡಿದ್ದಾರೆ ಪ್ರೋತ್ಸಾಹ ನೀಡಿ ಎನ್ನುತ್ತಾರೆ ಹಿರಿಯ ನಟಿ ಗಿರಿಜಾ ಲೋಕೇಶ್‌.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕೌಶಿಕ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಸಂಜಯ್ ಹಾಗೂ ಚಿತ್ರದಲ್ಲಿ ನಟಿಸಿರುವ ಅಂಜನಾ ಗಿರೀಶ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಚಾಂಪಿಯನ್ ಫುಲ್ ಖುಷ್: ಗೆಲುವಿನ ಸಂಭ್ರಮದಲ್ಲಿ ತಂಡ- ಬಾರದ ನಾಯಕಿ ಮೇಲೆ ಟೀಮ್ ಬೇಸರ…

ಉತ್ತರ ಕರ್ನಾಟಕದ ಯುವ ಪ್ರತಿಭೆ ಸಚಿನ್ ಧನಪಾಲ್ ನಾಯಕನಾಗಿ ಅಭಿನಯಸಿದ ಚಾಂಪಿಯನ್ ಚಿತ್ರಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಚಿತ್ರ ವೀಕ್ಷಿಸಿದ ಬಹುತೇಕರು ಆ್ಯಕ್ಷನ್ ಬ್ಲಾಕ್ ಹಾಗೂ ಹಾಡುಗಳ ಬಗ್ಗೆಯೇ ಹೆಚ್ಚು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗೆಲುವಿನ ಸಂತಸವನ್ನು ನಿರ್ಮಾಪಕ ಶಿವಾನಂದ್ ಎಸ್.ನೀಲಣ್ಣನವರ್ ಹಾಗೂ ನಾಯಕ ಸಚಿನ್ ಧನಪಾಲ್ ಮಾದ್ಯಮ ಜೊತೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್, ಪ್ರತಿಯೊಬ್ಬರೂ ಚಿತ್ರದ ಮೇಕಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ನಮ್ಮ ನಿರೀಕ್ಷೆಯಂತೆಯೇ ಚಿತ್ರ ಜನರನ್ನು ತಲುಪಿದೆ. ಆಕ್ಷನ್ ಸೀಕ್ವೇನ್ಸ್ ಬಗ್ಗೆ ಸಾಕಷ್ಟು ಜನ ಮಾತಾಡುತ್ತಿದ್ದಾರೆ. ಗುಡ್ ಮೇಕಿಂಗ್ ಚಿತ್ರ, ಹೊಸಬರ ಸಿನಿಮಾ ಅಂತ ಎಲ್ಲೂ ಅನಿಸಲ್ಲ ಎನ್ನುವ ಪ್ರತಿಕ್ರಿಯೆ ಬರುತ್ತಿದೆ. ಉತ್ತರ ಕರ್ನಾಟಕದಾದ್ಯಂತ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಳಗಾವಿ,
ಹುಬ್ಬಳ್ಳಿ, ಬೀದರ್, ಗುಲ್ಬರ್ಗ, ರಾಯಚೂರಿನಲ್ಲಿ ಎಲ್ಲಾ ಶೋ ಭರ್ತಿಯಾಗಿದೆ. ಜನರ ಈ ಪ್ರತಿಕ್ರಿಯೆ ಕಂಡು ನಾವು ಈವರೆಗೆ ಪಟ್ಟಂಥ ಶ್ರಮ ಸಾರ್ಥಕ ಎನಿಸಿದೆ, ಇದಕ್ಕೆಲ್ಲ ನಿರ್ಮಾಪಕರ ಸಹಕಾರ, ಬೆಂಬಲವೇ ಕಾರಣ ಎಂದರು.

ಸೀನ್ ಹಾಗೂ ಹಾಡುಗಳಲ್ಲಿ ತಮ್ಮ ಲುಕ್‌ನ ವ್ಯತ್ಯಾಸದ ಕುರಿತು ವಿವರಿಸಿದ ಸಚಿನ್, 2019ರಲ್ಲೇ ಚಿತ್ರದ ಟಾಕೀ ಪೋರ್ಷನ್ ಮುಗಿಯಿತು. 2 ವರ್ಷದ ನಂತರ ಹಾಡುಗಳನ್ನು ಚಿತ್ರೀಕರಿಸಿದೆವು. ಹಾಗಾಗಿ ಸ್ವಲ್ಪ ಚೇಂಜ್ ಆಗಿದೆ. ಮೊದಲು 96 ಕೆಜಿ ಇದ್ದ ನಾನು ಸ್ಪೋರ್ಟ್ ಯುವಕನ ಪಾತ್ರಕ್ಕಾಗಿ 72 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದೆ. ಸಾಂಗ್‌ನಲ್ಲಿ ಗ್ಲಾಮರ್ ಇರಬೇಕು ಅಂತ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಆರ್ಮಿ ಸಬ್ಜೆಕ್ಟ್ ಮಾಡಬೇಕೆನ್ನುವುದು ನನ್ನಾಸೆ. ಸಂದೀಪ್ ಉನ್ನಿಕೃಷ್ಣನ್ ಅವರ ಬಯಾಗ್ರಫಿ ಮಾಡುವ ಆಸೆಯೂ ಇದೆ ಎನ್ನುವ ಸಚಿನ್ ಇದಕ್ಕೆಲ್ಲ ಕನ್ನಡ ಜನತೆಯ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ. ಚಿತ್ರದ ಪ್ರೊಮೋಷನ್‌ಗೆ ನಾಯಕಿ ಅದಿತಿ ಅವರು ಗೈರಾದ ಬಗ್ಗೆ ಮಾತನಾಡುತ್ತ ಅವರಿಗೆ ನಾವು ಎಲ್ಲಾ ಪ್ರೆಸ್‌ಮೀಟ್ ಬಗ್ಗೆ ಹೇಳುತ್ತಲೇ ಬಂದಿದ್ದೇವೆ, ಆದರೂ ಅವರು ಯಾವುದಕ್ಕೂ ಬರುತ್ತಿಲ್ಲ ಎಂದರು.

ನಿರ್ಮಾಪಕ ಶಿವಾನಂದ್ ಅವರು ಕೂಡ ಉತ್ತರ ಕರ್ನಾಟಕದವರು ಅಂತ ನಮ್ಮ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಮಾಡಿಕೊಂಡೆವು.
ಅವರು ಪ್ರಚಾರಕ್ಕೆ ಏಕೆ ಬರುತ್ತಿಲ್ಲವೋ ಗೊತ್ತಿಲ್ಲ, ಸಾಂಗ್, ಟೀಸರ್ ಬಿಡುಗಡೆ ಮಾಡುವಾಗಲೂ ನಾವು ಕರೆದಿದ್ದೆವು. ಆದರೆ ಅವರು ಬರಲಿಲ್ಲ, ಥ್ಯಾಂಕ್ಸ್ ಗಿವಿಂಗ್ ಸಮಯದಲ್ಲಾದರೂ ಅವರು ಇಲ್ಲಿರಬೇಕಿತ್ತು. ಅವರಿಗೆ ಕೊಡಬೇಕಾದ ಸಂಭಾವನೆ ಪೂರ್ತಿ ಕೊಟ್ಟಿದ್ದೇವೆ, ಯಾವುದೆ ಬಾಕಿ ಉಳಿಸಿಕೊಂಡಿಲ್ಲ ಎಂದು ಬೇಸರದಿಂದಲೇ ಹೇಳಿಕೊಂಡರು.

ನಂತರ ಚಿತ್ರದ ಯಶಸ್ಸಿನ ಕುರಿತು ಮಾತನಾಡುತ್ತ ಕಾಂತಾರ ಹಿಸ್ಟರಿ ಕ್ರಿಯೇಟ್ ಮಾಡುತ್ತಿದೆ. ಅಂಥಾ ಸಮಯದಲ್ಲಿ ನಾವು ಬಂದಿದ್ದರೂ ಜನ ನಮ್ಮ ಚಿತ್ರವನ್ನೂ ಇಷ್ಟಪಟ್ಟು ನೋಡುತ್ತಿದ್ದಾರೆ. ಗಂಗಾವತಿ, ಬೆಳಗಾವಿ, ಗೋಕಾಕ್, ನಿಪ್ಪಾಣಿಯಂಥ ಗಡಿ ಪ್ರದೇಶಗಳಲ್ಲಿ ಎರಡು ದಿನವೂ ಹೌಸ್ಫುಲ್ ಪ್ರದರ್ಶನ ಆಗಿದೆ. ಮೌತ್ ಪಬ್ಲಿಸಿಟಿಯಿಂದ ಹೆಚ್ಚು ಹೆಚ್ಚು ಜನ ಥಿಯೇಟರಿಗೆ ಬರುತ್ತಿದ್ದಾರೆ. ತುಂಬಾ ಕಷ್ಟಬಿದ್ದು ಈ ಚಿತ್ರವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾನು
ಕರ್ನಾಟಕದ ಮನೆಮನೆಗೂ ಹೋಗಿ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸರವಣನ್ ನಟರಾಜನ್, ಜಯರಾಮ್. ಮತ್ತಿತರರು ಹಾಜರಿದ್ದರು,

Categories
ಸಿನಿ ಸುದ್ದಿ

ಕಾಂತಾರಾ ಮತ್ತೊಂದು ದಾಖಲೆ: ಒಂದೇ ದಿನ 15 ಕೋಟಿ ಗಳಿಕೆ…

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ಶನಿವಾರ (ಅ. 15) ಹೊಸ ದಾಖಲೆ ಸೃಷ್ಟಿ ಮಾಡಿದೆ. ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ.
ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ‘ಕಾಂತಾರ’ ಚಿತ್ರದ ಕನ್ನಡ ಅವತರಣಿಕೆಯು ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14,15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು.


ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂ. ಸಂಗ್ರಹಿಸಿದೆ. ಹಿಂದಿ ಅವತರಣಿಕೆಯು ಶುಕ್ರವಾರವಷ್ಟೇ (ಅ. 14) ಬಿಡುಗಡೆಯಾಗಿತ್ತು. ಮೊದಲ ದಿನದ ಕಲೆಕ್ಷನ್ ಗೆ ಹೋಲಿಸಿದರೆ, ಎರಡನೆಯ ದಿನ ದ್ವಿಗುಣ ಕಲೆಕ್ಷನ್ ಆಗಿರುವುದು ವಿಶೇಷ. ಇನ್ನು, ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ 12 ಕೋಟಿ ರೂ. ಗಳಿಕೆ ಆಗಿದೆ. ಒಟ್ಟಾರೆ, ಶನಿವಾರವೊಂದೇ ‘ಕಾಂತಾರ‘ ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ 15 ಕೋಟಿ ರೂ. ಗಳಿಕೆ ಕಂಡಿದೆ.

‘ಕಾಂತಾರ’ ಚಿತ್ರದ ಕನ್ನಡ ಅವತರಿಣಿಕೆಯು ಸೆ. 30ರಂದು ಬಿಡುಗಡೆಯಾಗಿದ್ದು, ಶನಿವಾರಕ್ಕೆ 16 ದಿನಗಳಾಗಿವೆ. 16ನೇ ದಿನ ನಾಲ್ಕು ಭಾಷೆಗಳಿಂದ 15 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ.


‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ರಾಣಾ ಬರ್ತ್ ಡೇಗೆ ಹೊಸ ಸಿನಿಮಾ ಥೀಮ್ ಪೋಸ್ಟರ್ ರಿಲೀಸ್…

‘ಏಕ್ ಲವ್ ಯಾ’ ಸಿನಿಮಾ ಖ್ಯಾತಿಯ ನಟ ರಾಣಾ ಎರಡನೇ ಸಿನಿಮಾ ಯಾರ ಜೊತೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಸಿಕ್ಕಾಗಿದೆ. ಪ್ರೇಮ್ ಶಿಷ್ಯ ವಿಜಯ್ ಈಶ್ವರ್ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕುತ್ತಿದ್ದು, ಮೊದಲ ಸಿನಿಮಾವನ್ನು ರಾಣಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅ.15 ರಾಣಾ ಹುಟ್ಟುಹಬ್ಬ. ಹಾಗಾಗಿ ಚಿತ್ರತಂಡ ಮೊದಲ ಬಾರಿಗೆ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ರಾಣಾಗೆ ಶುಭ ಕೋರಿದೆ.

‘ಏಕ್ ಲವ್ ಯಾ’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ರಾಣಾ ತಮ್ಮ ಎರಡನೇ ಸಿನಿಮಾ ಮೂಲಕ ಮಗದೊಮ್ಮೆ ಸಿನಿರಸಿಕರ ಮನಗೆಲ್ಲಲ್ಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚಲಿರುವ ರಾಣಾ ಸಿನಿಮಾಗಾಗಿ ಭರ್ಜರಿ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಪೋಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದ್ದು, ಶಾನ್ವಿ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಪ್ರೇಮ್ ಜೊತೆ ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ ಗೆ ಚಿತ್ರರಂಗದಲ್ಲಿ ಎಂಟು ವರ್ಷಗಳ ಅನುಭವವಿದೆ. ಮೊದಲ ಬಾರಿಗೆ ಕಥೆ ಬರೆದು ಸಿನಿಮಾ ನಿರ್ದೇಶನ ಸಾಹಸಕ್ಕೆ ಕೈ ಹಾಕಿರುವ ವಿಜಯ್ ಈಶ್ವರ್ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಲ್ಟ್, ಮಾಸ್ ಸಬ್ಜೆಕ್ಟ್ ಒಳಗೊಂಡ ಚಿತ್ರದ ಟೈಟಲ್ ಸದ್ಯದಲ್ಲೇ ರಿವೀಲ್ ಆಗಲಿದೆ.

ಚಿತ್ರದಲ್ಲಿ ರಾಣಾ ಲುಕ್ ಕಂಪ್ಲೀಟ್ ಡಿಫ್ರೆಂಟ್ ಆಗಿರಲಿದ್ದು, ಬಿಡುಗಡೆಯಾಗಿರುವ ಥೀಮ್ ಪೋಸ್ಟರ್ ಕೂಡ ಅದನ್ನೇ ಹೇಳುತ್ತಿದೆ. ಬಿಗ್ ಬಜೆಟ್ ನಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟರೊಬ್ಬರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಗೆಸ್ಟ್ ಅಪಿಯರೆನ್ಸ್ ಕೂಡ ಸಿನಿಮಾದಲ್ಲಿರಲಿದೆ ಎನ್ನುತ್ತಾರೆ ನಿರ್ದೇಶಕರು. ಸಿನಿಮಾ ಟೈಟಲ್ ತಾಂತ್ರಿಕ ವರ್ಗ, ಎಲ್ಲದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

Categories
ಸಿನಿ ಸುದ್ದಿ

ಹರ್ಷಿಕಾ ನ್ಯೂ ಲುಕ್! ಥರ ಥರ ಹಿಡಿಸುವ ಕೊಡಗಿನ ಬೆಡಗಿ…

ನಟಿ ಹರ್ಷಿಕಾ ಪೂಣಚ್ಚ ಸದಾ ಸುದ್ದಿಯಲ್ಲಿರೋ ಬೆಡಗಿ. ಅವರು ಸಿನಿಮಾಗಳ ಮೇಲೆ‌ಸಿನಿಮಾ ಮಾಡುತ್ತಲೇ ಸಾಕಷ್ಟು ಬಿಝಿ‌ ನಟಿ‌ ಎನಿಸಿಕೊಂಡಿದ್ದಾರೆ. ಅದರಲ್ಲೂ ಅವರು ಸೋಷಿಯಲ್ ‌ಮೀಡಿಯಾದಲ್ಲಂತೂ ಸದಾ ಸಕ್ರಿಯ. ಈಗ ಇಲ್ಲಿ ಅವರ ಬಗೆಗಿನ ಹೊಸ ಸುದ್ದಿಯೆಂದರೆ, ಅವರ ಹೊಸ ಲುಕ್.

ಹೌದು ಹರ್ಷಿಕಾ ಪೂಣಚ್ಚ ಸದಾ ಲವಲವಿಕೆ ಹುಡುಗಿ. ನಗುಮೊಗದಲ್ಲೇ ಏನಾದರೊಂದು ಸುದ್ದಿಯಲ್ಲೇ ಇರುತ್ತಾರೆ. ಒಂದಷ್ಟು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಸುದ್ದಿಯಾದರೆ,

ಇನ್ನೊಂದಡೆ, ಕಲರ್ ಫುಲ್ ಕಾಸ್ಟ್ಯೂಮ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಅಂಥದ್ದೊಂದು ಸುದ್ದಿಗೆ ಮೊನ್ನೆ ಬೆಂಗಳೂರಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್ ಸಾಕ್ಷಿಯಾಯಿತು.

ಹರ್ಷಿಕಾ ಪೂಣಚ್ಚ ಸದಾ ಒಂದಿಲ್ಲೊಂದು ವಿಶೇಷ ಫೋಟೋಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಮಿಂಚುತ್ತಾರೆ. ಹಾಗಾಗಿ ಅವರು ಫಿಲ್ಮ್ ಫೇರ್ ಅವಾರ್ಡ್ ವೇಳೆ ಮತ್ತೊಂದು ಹೊಸ ಲುಕ್‌ನಲ್ಲಿ ಪ್ರತ್ಯಕ್ಷರಾಗಿದ್ದರು.

ತಿಳಿ ನೀಲಿ ಬಣ್ಣದ ವಿಶೇಷ ವಿನ್ಯಾಸದ ಶಾರ್ಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಮಿರಿ ಮಿರಿ ಮಿಂಚಿದ್ದಾರೆ. ಕೂದಲಿಗೂ ಹರಳಿನ ಸಿಂಗಾರ ಮಾಡಿಕೊಂಡು ಪಡ್ಡೆ ಹುಡುಗರನ್ನು ಖುಷಿಪಡಿಸಿದ್ದಾರೆ.

ಆ ಬ್ಯೂಟಿಫುಲ್ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹರ್ಷಿಕಾ ಹಂಚಿಕೊಂಡಿದ್ದು ಸಾಕಷ್ಟು ಕಾಮೆಂಟ್ಸ್ ಬಂದಿದೆ. ಅಂದಹಾಗೆ. ಲಕ್ಷ್ಮೀ ಕೃಷ್ಣ ಅವರ ಡ್ರೆಸ್ ವಿನ್ಯಾಸ ಮಾಡಿದರೆ, ಅಚ್ಚು ಫೋಟೋ ಕ್ಲಿಕ್ಕಿಸಿದ್ದಾರೆ.

Categories
ಸಿನಿ ಸುದ್ದಿ

ಶೂಟಿಂಗ್ ಮುಗಿಯುವ ಹಂತದಲ್ಲಿ ಅಬ ಜಬ ದಬ

ಕಳೆದವರ್ಷ “ಕನ್ನಡ್ ಗೊತ್ತಿಲ್ಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಅಬ ಜಬ ದಬ” ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ.

“ಕನ್ನಡ್ ಗೊತ್ತಿಲ್ಲ” ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ಸಿದ್ದಾವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಮನೆಯಲ್ಲಿ ನನ್ನ ಅಣ್ಣ, ಅವಳ ಮಗಳಿಗೆ ಅದೇನು ಹೇಳುತ್ತಾಳೊ.. ಗೊತ್ತೆ ಆಗಲ್ಲ “ಅಬ ಜಬ ದಬ” ಅಂತಾಳೆ ಎಂದ. ನಾನು ತಕ್ಷಣ ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದೇ ಇಟ್ಟಿದ್ದೀನಿ. ಆನಂತರ ಸ್ನೇಹಿತ ಅನಂತ ಕೃಷ್ಣ ನಿರ್ಮಾಣಕ್ಕೆ ಮುಂದಾದರು. ಪೃಥ್ವಿ ಅಂಬರ್ – ಅಂಕಿತ ಅಮರ್ ನಾಯಕ – ನಾಯಕಿ ಅಂತ ನಿಗದಿಯಾದರು. ಅಚ್ಯುತಕುಮಾರ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ನಮ್ಮ ಚಿತ್ರದಲ್ಲಿ ‌ಅಭಿನಯಿಸಲು ಒಪ್ಪಿದ್ದರು.‌ ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಮೀರ ಸಿಂಹ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.‌ ಎಲ್ಲರ ಸಹಕಾರದಿಂದ “ಅಬ ಜಬ ದಬ” ಒಳ್ಳೆಯ ಚಿತ್ರವಾಗಿ ಹೊರಹೊಮ್ಮಲಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ದೇಶಕ ಮಯೂರ ರಾಘವೇಂದ್ರ.

ನನಗೆ ಮಯೂರ ರಾಘವೇಂದ್ರ ಕಥೆ ಇಷ್ಟವಾಯಿತು. ಇದು ಬರೀ ಕಾಮಿಡಿ ಸಿನಿಮಾ ಅಲ್ಲ. ಫ್ಯಾಂಟಸಿ ಕಾಮಿಡಿ ಸಿನಿಮಾ. ಚಿತ್ರದ ಹಾಡುಗಳು ಚೆನ್ನಾಗಿದೆ. ಊರ್ವಶಿ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಗಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನನ್ನ ಪಾತ್ರ ಕೂಡ ಸುಂದರವಾಗಿದೆ ಎಂದರು ನಾಯಕ ಪೃಥ್ವಿ ಅಂಬರ್.

ಇದು ನಾನು ಬಣ್ಣ ಹಚ್ಚಿದ ಮೊದಲ ಚಿತ್ರ. ಪ್ರಿಯ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಗಾಯಕಿ. ಎಸ್.ಪಿ.ಬಿ ಅವರ ಅಭಿಮಾನಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಅಂಕಿತ ಅಮರ್ ಮಾಹಿತಿ ನೀಡಿದರು.

ಮೂರು ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸುನಂದಾ ಕಾಂಬ್ರೇಕರ್ ನನ್ನ ಪಾತ್ರದ ಹೆಸರು. ವಿಶೇಷ ಪಾತ್ರ ಅಂತ ಹೇಳಬಹುದು ಎಂದರು ನಟಿ ಸಂಗೀತಾ ಭಟ್.

ನಿರ್ಮಾಪಕ ಅನಂತ ಕೃಷ್ಣ, ಛಾಯಾಗ್ರಾಹಕ ಗಿರಿಧರ್ ದಿವಾನ್ ಹಾಗೂ ನಟ ಬಾಬು ಹಿರಣ್ಣಯ್ಯ ಚಿತ್ರದ ಕುರಿತು ಮಾತನಾಡಿದರು. ಸತೀಶ್ ರಘುನಾಥನ್ ಈ ಚಿತ್ರದ ಸಂಗೀತ ನಿರ್ದೇಶಕರು.

Categories
ಸಿನಿ ಸುದ್ದಿ

ಪ್ರೇಕ್ಷಕರ ಎದುರು ನಿಲ್ಲೋಕೆ ಬರಲಿರುವ ಚಾಂಪಿಯನ್!

ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ ” ಚಾಂಪಿಯನ್ ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ “ಚಾಂಪಿಯನ್” ಚಿತ್ರದ ನಾಯಕಿ. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸರವಣನ್ ನಟರಾಜನ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿರುವ “ಚಾಂಪಿಯನ್” ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

“ಚಾಂಪಿಯನ್” ಚಿತ್ರದ ಬಗ್ಗೆ
ನಿರ್ದೇಶಕ ಶಾಹುರಾಜ್ ಶಿಂಧೆ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಚಿತ್ರ ಬಿಡುಗಡೆಗೂ ಮುಂಚೆಯೇ ಶಾಹುರಾಜ್ ಶಿಂಧೆ ವಿಧಿವಶರಾಗಿರುವುದು ನಿಜಕ್ಕೂ ದುಃಖದ ಸಂಗತಿ.

Categories
ಸಿನಿ ಸುದ್ದಿ

ಶಿವಣ್ಣ ಹೊಸ ಸಿನಿಮಾ ಘೊಸ್ಟ್ ಗೆ ಚಾಲನೆ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸುತ್ತಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ “ಘೋಸ್ಟ್‌” ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿದರು. ಬೃಂದಾ ಜಯರಾಂ ಕ್ಯಾಮೆರಾ ಚಾಲನೆ ಮಾಡಿದರು.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅದ್ದೂರಿ ಸೆಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಮಿನರ್ವ ಮಿಲ್ ನಲ್ಲಿ 15 ತರಹದ ಸೆಟ್ ಗಳನ್ನು ಹಾಗೂ ಮೈಸೂರಿನಲ್ಲಿ 4 ತರಹದ ಸೆಟ್ ಗಳನ್ನು ಕಲಾ‌ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮಿನರ್ವ ಮಿಲ್ ನಲ್ಲಿ ನಿರ್ಮಿಸಲಾಗಿರುವ ಜೈಲ್ ಸೆಟ್ ನಲ್ಲೇ 24 ದಿನಗಳ ಚಿತ್ರೀಕರಣ ನಡೆಯಲಿದೆ. ಈ ಅದ್ದೂರಿ ಸೆಟ್ ಗಳ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ವೆಚ್ಚವಾಗಿದೆಯಂತೆ.

“ಶ್ರೀನಿವಾಸ ಕಲ್ಯಾಣ”, ” ಓಲ್ಡ್ ಮಾಂಕ್” ಸೇರಿದಂತೆ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ ನಿರ್ದೇಶನದ ಐದನೇ ಚಿತ್ರ “ಘೋಸ್ಟ್”. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್‌ ” ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.

ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!