Categories
ಸಿನಿ ಸುದ್ದಿ

ಕನ್ನಡಕ್ಕೆ ಕಾಲಿಟ್ಟ ದಿ ಗ್ರೇಟ್ ಖಲಿ! ಕೆಂಡದ ಸೆರಗು ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ ಡಬ್ಲ್ಯು ಡಬ್ಲ್ಯ ಎಫ್ ಚಾಂಪಿಯನ್‌

ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ‘ಕೆಂಡದ ಸೆರಗು’. ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಕುಸ್ತಿ ಕುರಿತ ಸಿನಿಮಾ. ಭೂಮಿ ಶೆಟ್ಟಿ, ಮಾಲಾಶ್ರೀ ಮುಖ್ಯ ತಾರಾಬಳಗದ ಈ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಕೆಂಡದ ಸೆರಗು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಜಗತ್ತಿಗೆ ವರ್ಲ್ಡ್ ಚಾಂಪಿಯನ್ ಕುಸ್ತಿ ಪಟು ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟಿದ್ದಾರೆ.

ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಅವರೇ ಬರೆದ ಕಾದಂಬರಿ ‘ಕೆಂಡದ ಸೆರಗು’ ಆಧರಿಸಿದ ಸಿನಿಮಾ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರ ಕುಸ್ತಿ ಪಟು ಕಥೆ ಹೇಳಲಿದೆ. ಕಮರ್ಶಿಯಲ್ ಎಳೆಯಲ್ಲಿ ಸಿನಿಮಾವನ್ನು ತೆರೆ ಮೇಲೆ ತರಲಾಗುತ್ತಿದ್ದು, ಇದೀಗ ನಿರ್ದೇಶಕ ರಾಕಿ ಸೋಮ್ಲಿ ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿಯನ್ನು ಕರೆ ತರುವ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದಾರೆ.

ನಿರ್ದೇಶಕ ರಾಕಿ ಸೋಮ್ಲಿ ದಿ ಗ್ರೇಟ್ ಖಲಿಯನ್ನು ಭೇಟಿ ಮಾಡಿ ಸಿನಿಮಾ ಕಥೆ ಹಾಗೂ ಅವರ ಪಾತ್ರದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಕೇಳಿ ಥ್ರಿಲ್ ಆಗಿರುವ ಖಲಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ ಖಲಿ. ಸದ್ಯದಲ್ಲೇ ಖಲಿ ಚಿತ್ರತಂಡ ಸೇರಿಕೊಳ್ಳಲಿದ್ದು, ಚಿತ್ರೀಕರಣ ಆರಂಭವಾಗಲಿದೆ.

ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪ್ರಭುತ್ವಕ್ಕೊಂದು ಮೆಲೋಡಿ ಗೀತೆ: ಚೇತನ್ ಚಂದ್ರ ಸಿನಿಮಾ ರಿಲೀಸ್ ಗೆ ರೆಡಿ…

ಮೇಘಡಹಳ್ಳಿ ಡಾ.ಶಿವಕುಮಾರ್ ಅರ್ಪಿಸುವ, ರವಿರಾಜ್ ಎಸ್ ಕುಮಾರ್ ನಿರ್ಮಿಸಿರುವ ಹಾಗೂ ಆರ್ ರಂಗನಾಥ್ ನಿರ್ದೇಶನದಲ್ಲಿ ಚೇತನ್ ಚಂದ್ರ ನಾಯಕರಾಗಿ ನಟಿಸಿರುವ “ಪ್ರಭುತ್ವ” ಚಿತ್ರದಿಂದ “ನೀನೇನಾ ನೀನೇನಾ” ಎಂಬ ಮೆಲೋಡಿ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

“ಪ್ರಭುತ್ವ” ಚಿತ್ರ ನನ್ನ ಸಿನಿಪಯಣದಲ್ಲೇ ಬಿಗ್ ಬಜೆಟ್ ಚಿತ್ರ ಎನ್ನಬಹುದು. ಇದಕ್ಕೆ ಕಾರಣ ನಿರ್ಮಾಪಕರು. ಯಾವುದಕ್ಕೂ ಕೊರತೆ ಇಲ್ಲದೆ ನಿರ್ಮಾಣ‌ ಮಾಡಿದ್ದಾರೆ. ಇನ್ನು, ನಿರ್ದೇಶಕ ರಂಗನಾಥ್ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ, ಹಾಡಿನ ಬಗ್ಗೆ ಹೇಳುತ್ತೇನೆ. ನಿರ್ದೇಶಕ ಹರಿ ಸಂತೋಷ್ ಈ ಹಾಡನ್ನು ಬರೆದಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾ ರಾಮ್ ಸೊಗಸಾಗಿ ಹಾಡಿದ್ದಾರೆ.

ಎಮಿಲ್ ಅಷ್ಟೇ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಕೂಡ ಸುಂದರವಾಗಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ನನ್ನ ಜೊತೆ‌ ನಟಿಸಿರುವ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ ಎಂದು ನಾಯಕ ಚೇತನ್ ಚಂದ್ರ ಹೇಳಿದರು.

ನಾನು ಈ ಹಿಂದೆ “ಅರಿವು” ಹಾಗೂ “ಕೂಗು” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ಮೂರನೇ ಚಿತ್ರ. ನಿರ್ಮಾಪಕ ರವಿರಾಜ್ ಅವರ ತಂದೆ ಮೇಘಡಹಳ್ಳಿ ಡಾ. ಶಿವಕುಮಾರ್ ಅವರೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಂಭಾಷಣೆ ವಿನಯ್ ಅವರದು. ಎಮಿಲ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. “ಮತದಾನ” ದ ಮಹತ್ವ ಸಾರುವ ಚಿತ್ರ ಅಂತ ಹೇಳಬಹುದು. ಚೇತನ್ ಚಂದ್ರ, ಪಾವನ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಉತ್ತಮ ಕಾರ್ಯವೈಖರಿಯಿಂದ ಚಿತ್ರ ಚೆನ್ನಾಗಿ ಬಂದಿದೆ. ‌ಮುಂದಿನ ದಿನಗಳಲ್ಲಿ ಇನ್ನೂ ಎರಡು ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ ರಂಗನಾಥ್.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕಿ ಪಾವನ, ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ ಎಂದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಮೊದಲು ಮೊಲೋಡಿ ಸಾಂಗ್ ಬಿಡುಗಡೆಯಾಗಿದೆ. ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಈ ಹಾಡನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಎಮಿಲ್ ಮಾಹಿತಿ ನೀಡಿದರು.

ನಟರಾದ ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.

ಕಥೆ ಬರೆದಿರುವ ಮೇಘಡಹಳ್ಳಿ ಡಾ. ಶಿವಕುಮಾರ್ ಮುಂದಿನ ದಿನಗಳಲ್ಲಿ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡದ ಪ್ರತಿಯೊಬ್ಬರಿಗೂ ನಿರ್ಮಾಪಕ ರವಿರಾಜ್ ಎಸ್ ಕುಮಾರ್ ಧನ್ಯವಾದ ತಿಳಿಸಿದರು.

Categories
ಸಿನಿ ಸುದ್ದಿ

ಕಾಡಿನ ಮಕ್ಕಳ ಮನಕಲಕುವ ಕಥೆ-ವ್ಯಥೆ! ಮಂಸೋರೆ ಕ್ರಾಂತಿಯಲ್ಲಿ ನ್ಯಾಯ ಗೆದ್ದ ವಿದ್ಯಾರ್ಥಿ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ


ರೇಟಿಂಗ್ : 3.5/5


ಚಿತ್ರ : 19 20 21
ನಿರ್ಮಾಣ : ದೇವರಾಜ್ ಆರ್.
ನಿರ್ದೇಶನ : ಮಂಸೋರೆ
ತಾರಾಗಣ: ಶೃಂಗ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್, ರಾಜೇಶ್ ನಟರಂಗ ಇತರರು.

ಕೇಸ್ ಚಾರ್ಜ್ ಶೀಟ್ ಗಟ್ಟಿ ಆಗಬೇಕು ಅಂದರೆ, ಹಿಂಗೆ ಕಥೆ ಕಟ್ಟಬೇಕು…’

ಹೀಗೆ ಆ ಪೊಲೀಸ್ ಅಧಿಕಾರಿ ಹೇಳುವ ಹೊತ್ತಿಗೆ, ಕಾಡನ್ನೇ ನಂಬಿ ಬದುಕುವ ಆದಿವಾಸಿ ಕುಟುಂಬದ ಮುಗ್ಧ ಅಪ್ಪ, ಮಗನ ಮೇಲೊಂದು ಆರೋಪದ ಸಂಚು ನಡೆದು ಹೋಗಿರುತ್ತೆ. ಇಷ್ಟು ಹೇಳಿದ ಮೇಲೆ ಇದೊಂದು ಮನಕಲಕುವ ಕಥೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಡೀ ಚಿತ್ರ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಗಟ್ಟಿ ಕಥೆ ಮತ್ತು ನಿರೂಪಣೆ ಕಾರಣ.

ನಿರ್ದೇಶಕ ಮಂಸೋರೆ ಸಿನಿಮಾಗಳಲ್ಲಿ ವ್ಯವಸ್ಥೆ, ಅಸಹಾಯಕತೆ, ನೋವು, ದನಿ ಇಲ್ಲದವರ ಬವಣೆ ಇತ್ಯಾದಿ ವಿಷಯಗಳು ಹೈಲೆಟ್. ಈ ಕಥೆಯೊಳಗಿನ ವಿಷಯಗಳು ಅವುಗಳಿಗೆ ಹೊರತಲ್ಲ.

ಮೊದಲೇ ಹೇಳಿದಂತೆ ಇದು ದನಿ ಕಳಕೊಂಡವರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯ ಕಥೆ ಮತ್ತು ವ್ಯಥೆ. ನೈಜ ಘಟನೆ ಇಟ್ಟುಕೊಂಡು ಹೆಣೆದ ಚಿತ್ರಕಥೆ ಸಿನಿಮಾದ ಜೀವಾಳ. ನಿರ್ದೇಶಕರ ನಿರೂಪಣೆ ಶೈಲಿ ಸೀಟಿನ ತುದಿಯಲ್ಲಿ ಕೂರಿಸುವಷ್ಟರ ಮಟ್ಟಿಗೆ ಮೂಡಿದೆ. ಹಾಗಂತ ಚಿತ್ರದುದ್ದಕ್ಕೂ ಯಾವುದೇ ನ್ಯೂನ್ಯತೆಗಳಿಲ್ಲ ಅಂದುಕೊಳ್ಳುವಂತಿಲ್ಲ. ಮೊದಲರ್ಧ ಕಥೆ ಅಲ್ಲಲ್ಲೇ ಸುತ್ತುತ್ತದೆ ಅಂತ ಹೇಳಬಹುದು. ದ್ವಿತಿಯಾರ್ಧ ಅತ್ತಿತ್ತ ನೋಡದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ.

ಇಲ್ಲಿ ಆದಿವಾಸಿಗಳ ಆಕ್ರಂದನವಿದೆ, ಬಡತನ, ದಾರಿದ್ರ್ಯ, ಮುಗ್ಧರ ಮೇಲಿನ ಶೋಷಣೆ ತುಂಬಿದೆ, ತುಂಡು ಭೂಮಿಯಲ್ಲೇ ಬದುಕು ಸವೆಸುವ ಕಾಡ ಮಕ್ಕಳ ಒಕ್ಕಲೆಬಿಸುವಿಕೆ ಇದೆ, ದಬ್ಬಾಳಿಕೆ, ಬೆದರಿಸುವಿಕೆ ಇಂಚಿಂಚಿಗೂ ಕಾಣ ಸಿಗುತ್ತೆ. ಕಾಡಿನ ಮಕ್ಕಳು ನೋವಲ್ಲಿದ್ದರೂ, ಕಾನೂನು ಕಣ್ಣಿಗೆ ಮಾತ್ರ ಕಳ್ಳರು! ಇಂತಹ ಅನೇಕ ಮನಕಲಕುವ ವಿಷಯಗಳು ನೋಡುಗರ ಎದೆಭಾರ ಎನಿಸುತ್ತವೆ.

ಸಿನಿಮಾ ವೇಗಕ್ಕೆ ಸಂಗೀತ ಹಾಗು ಹಾಡು ಸಾಥ್ ನೀಡಿದರೆ, ಕತ್ತರಿ ಪ್ರಯೋಗವೂ ಹೆಗಲು ನೀಡಿದೆ. ಇಂತಹ ಸಿನಿಮಾಗಳಿಗೆ ಮಾತಿನ ಮೌಲ್ಯ ಮುಖ್ಯ. ಹಾಗಾಗಿ ಪ್ರತಿ ಪಾತ್ರಗಳು ಹರಿಬಿಡುವ ಡೈಲಾಗ್ ಕೂಡ ಚಿತ್ರದ ತೂಕ ಹೆಚ್ಚಿಸಿವೆ. ಇಡೀ ಸಿನಿಮಾ ಗಂಭೀರತೆಗೆ ದೂಡುವುದರ ಜೊತೆಗೆ, ಆಗಾಗ ಕೆಟ್ಟ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಹಾಕಬೇಕೆನ್ನುವಷ್ಟರ ಮಟ್ಟಿಗೆ ನಿರ್ದೇಶಕರ ಕೆಲಸ ಇಷ್ಟವಾಗುತ್ತೆ.

ಇಂತಹ ನೈಜ ಘಟನೆ ಚಿತ್ರಗಳಿಗೆ ಬೇಕಿರೋದು ನೈಜತೆ ಎನಿಸುವಂತಹ ದೃಶ್ಯಗಳು. ಅಷ್ಟೇ ಪರಿಣಾಮಕಾರಿಯಾಗಿ ಹಿಡಿದಿಡುವಲ್ಲಿ ನಿರ್ದೇಶಕ ಮತ್ತವರ ತಂಡ ಯಶಸ್ವಿ ಎನ್ನಬಹುದು. ಕಾಡಿನ ಮಕ್ಕಳ ಕಥೆ ಹೆಣೆದು, ಅದನ್ನು ಅಷ್ಟೇ ಅದ್ಭುತ ಅನ್ನುವಂತೆ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.

ಕಥೆ ಏನು?
ಕಾಡಲ್ಲಿ ವಾಸ ಮಾಡುವ ಆದಿವಾಸಿ ಕುಟುಂಬದ ಅಮಾಯಕ ಮುಗ್ಧ ವಿದ್ಯಾರ್ಥಿ ಹಾಗು ಅವನ ತಂದೆಯನ್ನು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ನಕ್ಸಲ್ ಆರೋಪ ಹೊರಿಸಿ, ಜೈಲಿಗೆ ಕಳಿಸುತ್ತಾರೆ.
ರೇಷನ್ ಕಾರ್ಡ್ ಕೂಡ ಇಲ್ಲದ ಆದಿವಾಸಿಗಳ ಮೇಲೆ ದೇಶ ದ್ರೋಹದ ಕೇಸ್ ಹಾಕಲಾಗುತ್ತೆ. ದೇಶದ್ರೋಹ ಹಾಗು ದೇಶಕ್ಕೆ ಧಕ್ಕೆ ತರುವ ಆರೋಪದಡಿ ಅವರಿಗೆ ಜಾಮೀನು ನಿರಾಕರಣೆಯಾಗುತ್ತೆ. ಈ ನಡುವೆ, ಅಲ್ಲಿ ನಡೆಯೋ ವ್ಯಥೆ, ಅವರು ಅನುಭವಿಸುವ ನರಕ ಯಾತನೆ ಅಷ್ಟಿಷ್ಟಲ್ಲ.

ಕಾನೂನಿಗೆ ಕಳ್ಳರು ಎನಿಸುವ ಆ ಮುಗ್ಧ ಅಪ್ಪ, ಮಗನ ಪರ ಲಾಲ್ ಸಲಾಮ್ ಎನ್ನುತ್ತಲೇ ಕೆಂಪು ಬಾವುಟ ಹಿಡಿದು ಬರುವ ಕಾಮ್ರೇಡ್ ಸದಸ್ಯರು, ಪತ್ರಕರ್ತರು, ವಕೀಲರು ಹೋರಾಟಕ್ಕಿಳಿಯುತ್ತಾರೆ. ಈ ನಡುವೆ ಪತ್ರಿಕೋದ್ಯಮ ವಿದ್ಯಾರ್ಥಿ ಆಗಿದ್ದ ಆದಿವಾಸಿ ಹುಡುಗನ ಭವಿಷ್ಯ ಹಾಳಾಗಲು ಬಿಡಬಾರದು ಅಂತ ಹೋರಾಡುವ ಕಾಮ್ರೇಡ್ ಗಳು, ವಕೀಲರು ಸಿನಿಮಾದ ಆಕರ್ಷಣೆ.

ಇಷ್ಟಕ್ಕೂ ಆ ಮುಗ್ಧರು ಮಾಡಿದ ತಪ್ಪೇನು, ಆ ಕೆಟ್ಟ ವ್ಯವಸ್ಥೆ ಬಡಪಾಯಿಗಳ ಮೇಲೆ ಎರಗುವುದೇಕೆ, ಯಾವೆಲ್ಲಾ ಕಾರಣಗಳು ಅವರ ಮೇಲೆ ದಬ್ಬಾಳಿಕೆ ನಡೆಸುತ್ತವೆ, ಆ ಅಮಾಯಕ ಅಪ್ಪ, ಮಗ ಜೈಲಿಂದ ಹೊರಬರುತ್ತಾರಾ, ವಿದ್ಯಾರ್ಥಿ ಭವಿಷ್ಯ ಮುಂದೇನಾಗುತ್ತೆ ಎಂಬ ಕುತೂಹಲ ಇದ್ದರೆ ಒಂದೊಮ್ಮೆ ತಾಳ್ಮೆಯಿಂದ ಸಿನಿಮಾ ನೋಡಬಹುದು.

ಯಾರು ಹೇಗೆ?
ಸಿನಿಮಾದ ಕೇಂದ್ರಬಿಂದು ಅನ್ನುವುದಾದರೆ, ಥೇಟ್ ಅಮಾಯಕನಂತೆ ಕಾಣುವ, ಒಮ್ಮೆಲೆ ಇಷ್ಟವಾಗುವ ಶೃಂಗ ಅವರ ನಟನೆ ಆಪ್ತವೆನಿಸಿದೆ. ಅವರ ಅಭಿನಯದಲ್ಲಿ ನೈಜತೆ ಇದೆ. ಪಾತ್ರವನ್ನೇ ಜೀವಿಸುವ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ.
ಬಾಲಾಜಿ ಮನೋಹರ್ ಅವರು ಚಿತ್ರದ ಹೈಲೆಟ್. ವಕೀಲರಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ತಮ್ಮ ಪಾತ್ರದ ಮೂಲಕ ಒಂದಷ್ಟು ಮನಸುಗಳಿಗೆ ಖುಷಿಕೊಡುತ್ತಾರೆ.

ತಾಯಿಯಾಗಿ ಎಂ.ಡಿ.ಪಲ್ಲವಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಕಾಮ್ರೇಡ್ ಆಗಿ ರಾಜೇಶ್ ನಟರಂಗ ಗಮನ ಸೆಳೆದರೆ, ಹನುಮಣ್ಣನ ಪಾತ್ರದ ಮೂಲಕ ಸಂಪತ್ ಕುಮಾರ್ ನೋಡುಗರ ಕಣ್ಣು ಒದ್ದೆ ಮಾಡುತ್ತಾರೆ. ಉಳಿದಂತೆ ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಪ್ರತಿ ಪಾತ್ರವೂ ನ್ಯಾಯ ಸಲ್ಲಿಸಿದೆ.

ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಬಿಂದು ಮಾಲಿನಿ ಅವರ ಸಂಗೀತದ ಕಿರಣ್ ಕಾವೇರಪ್ಪ ಅವರ ಸಾಹಿತ್ಯದ ಹಾಡೊಂದು ಕಾಡ ದೇವರ ಆಚರಣೆ, ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸುರೇಶ್ ಆರ್ಮುಗಂ ಅವರ ಸಂಕಲನ ವೇಗ ಹೆಚ್ಚಿಸಿದೆ. ವೀರೇಂದ್ರ ಮಲ್ಲಣ್ಣ,ಅವಿನಾಶ್ ಅವರ ಸಂಭಾಷಣೆಯಲ್ಲಿ ಗಟ್ಟಿ ದನಿ ಇದೆ. ಶಿವು ಬಿ.ಕೆ.ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ‘ಕಾಡ ಬೆಳದಿಂಗಳು’ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ‘ಯುವ’ ರಾಜಕುಮಾರ! ರಾಜ್ ಮೊಮ್ಮಗನ ಹೊಸ ಸಿನಿಮಾಗೆ ಚಾಲನೆ! ಇದು ಹೊಂಬಾಳೆ ಫಿಲಂಸ್ ಕೊಡುಗೆ…


ಕನ್ನಡ ನಾಡಿಗೆ ಹಾಗು ರಾಷ್ಟ್ರಕ್ಕೆ ಸತತ ಸದಬಿರುಚಿಯ ಹಾಗು ದಾಖಲೆ ನಿರ್ಮಿಸಿದಂತಹ ಚಲನಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮತ್ತೊಂದು ಹೆಮ್ಮೆಯ ಚಿತ್ರ ಸಮರ್ಪಣೆ “ಯುವ”.
ಚಿತ್ರರಂಗಕ್ಕೆ ತಮ್ಮ ಮೌಲ್ಯಾದಾರಿತ ಆಲೋಚನೆಗಳು ಹಾಗು ಮನೋರಂಜನೆ ತುಂಬಿದ ಚಿತ್ರಕತೆಗಳಿಂದ ಒಂದರ ಹಿಂದೆ ಮತ್ತೊಂದು ದಾಖಲೆ ನಿರ್ಮಿಸಿದ ಚಲನಚಿತ್ರಗಳನ್ನು ನೀಡಿದ ಸಂತೋಷ್ ಆನಂದ್‌ರಾಮ್ ರವರ ಐದನೆಯ ಬಹು ನಿರೀಕ್ಷಿತ ಚಿತ್ರ “ಯುವ”. ಹೊಂಬಾಳೆ ಫಿಲ್ಮ್ಸ್ ಹಾಗು ಸಂತೋಷ್ ಆನಂದ್‌ರಾಮ್ ರವರ ಕಾಂಬಿನೇಶನ್ ನ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ.


ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂಬ ಅನ್ವರ್ಥನಾಮ ಇರುವ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ರವರ ಕುಟುಂಬದಿಂದ ಈ ನಾಡಿಗೆ ಹಾಗು ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ದಶಕಗಳಿಂದ ನಮ್ಮ ರಾಜ್ಯಕ್ಕೆ ದೊರೆತಿದೆ. ಡಾ. ಪಾರ್ವತಮ್ಮ ರಾಜಕುಮಾರ್ ರ ಆದಿಯಾಗಿ, ಡಾ.ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ್ ಹಾಗು ಡಾ.ಪುನೀತ್ ರಾಜಕುಮಾರ್ ಕಲಾ ಸೇವೆಯಲ್ಲಿ ಅಂದಿನಿಂದಲೂ ಮೊದಲ ಸಾಲಿನಲ್ಲಿ ಇರುತ್ತಾರೆ . ಇಂತಹ ಜವಾಬ್ದಾರಿಯುತ ಕಲಾ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ಯುವರಾಜಕುಮಾರ್.


ಯುವರಾಜಕುಮಾರ್ ಅವರ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗು ಚಿತ್ರದ ಮುಹೂರ್ತ ಇಂದು ಬೆಂಗಳೂರು ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ವಿಜೃಂಭಣೆಯಿಂದ ಜರುಗಿದೆ. ಈ ಭವ್ಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ನಟ ಯುವರಾಜಕುಮಾರ್,

ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಹಾಗು ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಹಾಗು ಡಾ. ರಾಜ್ ಕುಟುಂಬದ ಅನೇಕ ಗಣ್ಯರು ಹಿತೈಷಿಗಳು ಪಾಲ್ಗೊಂಡಿದ್ದರು.


ಈ ಸಮಾರಂಭದಲ್ಲಿ ಚಿತ್ರದ ಮೊದಲ ಕ್ಲಾಪ್ ಅನ್ನು ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್ ಮಾಡಿದರೆ, ಕ್ಯಾಮೆರಾ ಚಾಲನೆ ನೀಡಿದ್ದು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್. ಚಿತ್ರದ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದವರು ಡಾ. ಶಿವರಾಜಕುಮಾರ್.
ಚಿತ್ರವು 22-ಡಿಸೆಂಬರ್-2023 ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ

Categories
ಸಿನಿ ಸುದ್ದಿ

ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಶಿವಣ್ಣ …

ಆರ್.ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ಹಲವು ವಿಶೇಷಗಳಿಂದ ಕೂಡಿದೆ. ವಿಶ್ವದಾದ್ಯಂತ ಎಲ್ಲರ‌ ಗಮನ ಸೆಳೆದಿರುವ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರತಂಡದಿಂದ ಮತ್ತೊಂದು ಮಹತ್ತರವಾದ ವಿಷಯ ಹೊರಬಂದಿದೆ.‌ ತಮ್ಮ ಅಮೋಘ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ” ಕಬ್ಜ ” ಚಿತ್ರದಲ್ಲಿ ನಟಿಸಿದ್ದಾರೆ.

ಉಪೇಂದ್ರ, ಸುದೀಪ್ ಹಾಗೂ ಶಿವರಾಜಕುಮಾರ್ ಮೂವರು ನಟರನ್ನು ಒಂದೇ ಚಿತ್ರದಲ್ಲಿ ನೋಡುತ್ತಿರುವುದು ಅಭಿಮಾನಿಗಳ ಪಾಲಿಗಂತೂ ದೊಡ್ಡ ಹಬ್ಬವೇ ಸರಿ.
ಮಾರ್ಚ್ 4 ರಂದು ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ‌ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆ‌ ಕಾಣಲಿದೆ.

Categories
ಸಿನಿ ಸುದ್ದಿ

19.20.21 ಇದು ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಬಹು ನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ನಾಳೆ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ.

2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು.

ವಿಠಲ್ ಮಲೆಕುಡಿಯ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ.

ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ಅರವಿಂದ್ ಸ್ವಾಮಿಗೆ ಅರ್ಜುನ್ ಸಾಥ್! ಆರಾಮ್ ಆಗಿ ಸಂಗೀತ ನೀಡ್ತಾರೆ ಜನ್ಯ

ನಟ ಅನೀಶ್ ತೇಜೇಶ್ವರ್, ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಆರಾಮ್ ಅರವಿಂದ್ ಸ್ವಾಮಿ’. ಮಾಸ್ ಹೀರೋ ಆಗಿ ಮಿಂಚಿದ್ದ ಅನೀಶ್ ತೇಜೇಶ್ವರ್ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್ ಮೂಲಕ ಗಮನ ಸೆಳೆದಿರುವ ಈ ಚಿತ್ರದಿಂದ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ.

ರೋಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ. ಚಿತ್ರತಂಡ ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಅರ್ಜುನ್ ಜನ್ಯ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ.

‘ನಮ್ ಗಣಿ ಬಿಕಾಂ ಪಾಸ್, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಅನೀಶ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

‘ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಎರಡು ಶೆಡ್ಯೂಲ್ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮೂರನೇ ಶೆಡ್ಯೂಲ್ ಕೇರಳದಲ್ಲಿ ಸೆರೆ ಹಿಡಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನವಿದೆ.

Categories
ಸಿನಿ ಸುದ್ದಿ

2.0 ಇದು ರಾಮಚಾರಿಯ ಹೊಸ ವಿಷನ್! ರಾಘಣ್ಣ ಟ್ರೇಲರ್ ರಿಲೀಸ್

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ತೇಜ್ ನಟಿಸಿರುವ “ರಾಮಾಚಾರಿ 2.0” ಚಿತ್ರದ ಟ್ರೇಲರ್ ಅನಾವರಣವಾಗಿದೆ. ಇತ್ತೇಚೆಗೆ ರಾಘವೇಂದ್ರ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ಆನಂತರ ಪ್ರವೀಣ್ ನಾಯಕ್ ನಿರ್ದೇಶನದ “ಮೀಸೆ ಚಿಗುರಿದಾಗ” ಚಿತ್ರದಲ್ಲಿ ಅಭಿನಯಿಸಿದ್ದೆ. ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ‌ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾನು, ಮೂರು ವರ್ಷಗಳ ಹಿಂದೆ “ರಿವೈಂಡ್” ಚಿತ್ರ‌ ಮಾಡಿದ್ದೆ. “ನಾಗರಹಾವು” ಕಾಲದಿಂದಲೂ “ರಾಮಾಚಾರಿ” ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ.

“ರಾಮಾಚಾರಿ 2.0” ವಿಭಿನ್ನ ಕಥೆಯುಳ್ಳ ಸಿನಿಮಾ. ರಾಘವೇಂದ್ರ ರಾಜಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ. ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ತೇಜ್.

ತೇಜ್ ಅವರು ನನಗದ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಘವೇಂದ್ರ ರಾಜಕುಮಾರ್.

ನನ್ನನ್ನು ತೇಜ್ ತಮಿಳು ಚಿತ್ರದ ಮುಹೂರ್ತಕ್ಕೆ ಆಹ್ವಾನಿಸಿದ್ದರು. ಅಂದು ನೀವು ಒಳ್ಳೆಯ ನಟ ಆಗುತ್ತೀರಾ ಅಂದಿದ್ದೆ. ಎರಡು ಸಾವಿರ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದೆ. ಸುರದ್ರೂಪಿ ನಟ ತೇಜ್ ಈಗ “ರಾಮಾಚಾರಿ 2.0” ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ಹಾರೈಸಿದರು. ಚಿತ್ರರಂಗದ ಅನೇಕ ಗಣ್ಯರು ಶುಭ ಕೋರಿದರು.

ಚಿತ್ರದಲ್ಲಿ ನಟಿಸಿರುವ ಕೌಸ್ತುಭ, ಚಂದನ, ವಿಜಯ್ ಚೆಂಡೂರ್, ಮುನಿಕೃಷ್ಣ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು. ಸ್ಪರ್ಶ ರೇಖ, ಸ್ವಾತಿ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಕಡಲ ತೀರ ನೋಡುವ ಬನ್ನಿ! ಈ ವಾರ ಕಡಲ ತೀರದ ಭಾರ್ಗವನ ಸಿನಿಮಾ ರಿಲೀಸ್…

ಉತ್ಸಾಹಿ ಯುವಕರ ತಂಡದಿಂದ ಮೂಡಿ ಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರ ಮಾರ್ಚ್ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಕಡಲತೀರದ ಭಾರ್ಗವ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡಾ. ಶಿವರಾಮ ಕಾರಂತರು. ಕನ್ನಡ ನಾಡಿನಲ್ಲಿ ಅವರು ‘ಕಡಲ ತೀರದ ಭಾರ್ಗವ’ ಎಂಬ ಬಿರುದಿನಿಂದಲೇ ಅವರು ಪ್ರಸಿದ್ಧರಾದವರು. ಆದರೆ, ಅವರಿಗೂ, ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಅವರ ಜೀವನದ ಕಥೆಯಲ್ಲ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿರುವ ಪನ್ನಗ ಸೋಮಶೇಖರ್.


ಈ ಕುರಿತು ಮಾತನಾಡುವ ಅವರು, ‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇನೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳಲ್ಲಿ ಬರುವ ಒಂದು ಪವರ್ಫುಲ್ ಪಾತ್ರ. ಇಲ್ಲಿ ನಾಯಕ ಭಾರ್ಗವ, ಪರಶುರಾಮನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲದಿಂದ ಮುನ್ನಡೆಯುತ್ತಿರುತ್ತಾನೆ. ಹಾಗಾಗಿ, ಚಿತ್ರಕ್ಕೆ ‘ಕಡಲತೀರದ ಭಾರ್ಗವ’ ಎಂದು ಹೆಸರಿಟ್ಟಿದ್ದೇವೆ.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಡಾ. ಶಿವರಾಮ ಕಾರಂತರಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನೂ ಮಾಡಿಲ್ಲ. ಈಗಾಗಲೇ ಚಿತ್ರವನ್ನು ಹಲವರಿಗೆ ತೋರಿಸಿದ್ದೇವೆ. ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಶೀರ್ಷಿಕೆಗೆ ನ್ಯಾಯ ಸಲ್ಲಿಸಿದ್ದೇನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ’ ಎನ್ನುತ್ತಾರೆ ಪನ್ನಗ ಸೋಮಶೇಖರ್.


‘ಒಬ್ಬ ಮನುಷ್ಯನಲ್ಲಿ ಎಲ್ಲ ತರಹದ ಭಾವನೆಗಳಿರುತ್ತವೆ. ಆ ಎಮೋಷನ್ಗಳನ್ನು ಇಟ್ಟುಕೊಂಡು ಮಾಡಿರುವ ಕಥೆಯೇ ‘ಕಡಲತೀರದ ಭಾರ್ಗವ’’ ಎನ್ನುತ್ತಾರೆ ಚಿತ್ರದ ನಾಯಕರಲ್ಲೊಬ್ಬರಾದ ವರುಣ್ ರಾಜು.

‘ಚಿತ್ರದ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ನೋಡಿದವರೆಲ್ಲ, ಬಹಳ ಗ್ರಿಪ್ಪಿಂಗ್ ಆಗಿದೆ, ಕಥೆ ಗೊತ್ತಾಗುತ್ತಿಲ್ಲ, ಹೊಸಬರೇ ಸೇರಿ ಈ ಚಿತ್ರ ಮಾಡಿದ್ದು ಎಂದನಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಾಳೆ ಚಿತ್ರ ನೋಡುವ ಪ್ರೇಕ್ಷಕರು ಸಹ ಇದೇ ಅಭಿಪ್ರಾಯಪಟ್ಟರೆ ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ವರುಣ್.
ಈಗಾಗಲೇ ‘ಕಡಲತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ ದಾಖಲೆಯ ಎರಡೂವರೆ ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಮಾತಾಟವಾಗಿದೆ. ನಾಯಕ ವರುಣ್ ರಾಜು ಅವರ ಸಂಬಂಧಿಯೂ ಆದ ಮೋಹನ್ ರಾಜು ದುಡ್ಡು ಕೊಟ್ಟು ಮೊದಲ ಟಿಕೆಟ್ ಪಡೆದಿದ್ದಾರೆ.


‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಮಾರ್ಚ್ 10ಕ್ಕೆ ಚೌಕಾಬಾರ ಆಟ ಶುರು: ಟ್ರೇಲರ್ ಗೆ ಮೆಚ್ಚುಗೆ…

ನವಿ ನಿರ್ಮಿತಿ ಬ್ಯಾನರ್ ನಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.. ಸಾಹಿತಿಗಳಾದ ಹೆಚ್. ಎಸ್. ವೆಂಕಟೇಶ್ ಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಭಾ.ಮ.ಹರೀಶ್, ನಟ ಸುಂದರರಾಜ್, ಲಹರಿ ವೇಲು, ರಘು ಭಟ್, ನಿರ್ಮಾಪಕ ಸಂಜಯ್ ಗೌಡ , ಸಚಿವ ಆರ್ ಅಶೋಕ್ ಪುತ್ರ ಶರತ್, ಉದ್ಯಮಿ ಉಮೇಶ್ ಕುಮಾರ್‌, ಸಂಜಯ್ ಸೂರಿ ಸೇರಿದಂತೆ ಅನೇರು ಟ್ರೇಲರ್ ಬಿಡುಗಡೆ ವೇಳೆ ಇದ್ದರು.

ವಿಕ್ರಮ್ ಸೂರಿ ನನಗೆ “ಚಿನ್ನಾರಿ‌ಮುತ್ತ” ಚಿತ್ರದ ಸಮಯದಿಂ ದಲೂ ಪರಿಚಯ. ಸಾಹಿತ್ಯದ ಬಗ್ಗೆ ವಿಶೇಷ ಕಾಳಜಿಯಿರುವ ವಿಕ್ರಮ್ ಸೂರಿ – ನಮಿತಾರಾವ್ ದಂಪತಿ ನನ್ನ ಹತ್ತಿರ ಈ ಚಿತ್ರಕ್ಕೆ ಹಾಡೊಂದು ಬರೆಸಿದ್ದಾರೆ. ಹಾಡುಗಳು ಹಾಗೂ ಟ್ರೇಲರ್ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂದರು ಹಿರಿಯ ಸಾಹಿತಿ ಹೆಚ್ ಎಸ್ ವೆಂಕಟೇಶ್ ಮೂರ್ತಿ.

ನಾನು ಹಾಗೂ ಹೆಚ್. ಎಸ್. ವಿ. ಇಬ್ಬರು ಈ ಚಿತ್ರಕ್ಕೆ ಹಾಡು ಬರೆದಿರುವುದು ಖುಷಿಯಾಗಿದೆ. ನಮ್ಮ ಹಾಡಿಗೆ ಅಶ್ವಿನ್ ಕುಮಾರ್ ಉತ್ತಮವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಹಾರೈಸಿದರು.

ಭಾ.ಮ.ಹರೀಶ್, ಸುಂದರರಾಜ್, ಲಹರಿ ವೇಲು, ರಘು ಭಟ್, ಸಂಜಯ್ ಗೌಡ ಮುಂತಾದ ಗಣ್ಯರು “ಚೌಕಾಬಾರ” ಚಿತ್ರ ಯಶಸ್ವಿಯಾಗಲೆಂದು ಶುಭ ಕೋರಿದರು.

ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ “ಚೌಕಾಬಾರ” ಚಿತ್ರ, ಇದೇ ಮಾರ್ಚ್ ಹತ್ತರಂದು ಬಿಡುಗಡೆಯಾಗಲಿದೆ. ಚಿತ್ರದ ಆರಂಭದಿಂದಲೂ ನಿಮ್ಮೆಲ್ಲರ ಪ್ರೋತ್ಸಾಹ ಅಪಾರ. ಮುಂದು ಕೂಡ ನಿಮ್ಮ ಪ್ರೋತ್ಸಾಹ ಮುಂದುವರೆಯಲಿ ಎಂದರು ನಿರ್ಮಾಪಕಿ – ನಟಿ ನಮಿತಾರಾವ್ ಹಾಗೂ ನಿರ್ದೇಶಕ ವಿಕ್ರಮ್ ಸೂರಿ.

ಚಿತ್ರದ ನಾಯಕ ವಿಹಾನ್ ಪ್ರಭಂಜನ್, ನಟಿ ಕಾವ್ಯ ರಮೇಶ್ ಮುಂತಾದ ಕಲಾವಿದರು ಸಮಾರಂಭದಲ್ಲಿದ್ದರು. .

error: Content is protected !!