ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ರೇಟಿಂಗ್ : 3.5/5
ಚಿತ್ರ : 19 20 21
ನಿರ್ಮಾಣ : ದೇವರಾಜ್ ಆರ್.
ನಿರ್ದೇಶನ : ಮಂಸೋರೆ
ತಾರಾಗಣ: ಶೃಂಗ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್, ರಾಜೇಶ್ ನಟರಂಗ ಇತರರು.
‘ಕೇಸ್ ಚಾರ್ಜ್ ಶೀಟ್ ಗಟ್ಟಿ ಆಗಬೇಕು ಅಂದರೆ, ಹಿಂಗೆ ಕಥೆ ಕಟ್ಟಬೇಕು…’
ಹೀಗೆ ಆ ಪೊಲೀಸ್ ಅಧಿಕಾರಿ ಹೇಳುವ ಹೊತ್ತಿಗೆ, ಕಾಡನ್ನೇ ನಂಬಿ ಬದುಕುವ ಆದಿವಾಸಿ ಕುಟುಂಬದ ಮುಗ್ಧ ಅಪ್ಪ, ಮಗನ ಮೇಲೊಂದು ಆರೋಪದ ಸಂಚು ನಡೆದು ಹೋಗಿರುತ್ತೆ. ಇಷ್ಟು ಹೇಳಿದ ಮೇಲೆ ಇದೊಂದು ಮನಕಲಕುವ ಕಥೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಡೀ ಚಿತ್ರ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಗಟ್ಟಿ ಕಥೆ ಮತ್ತು ನಿರೂಪಣೆ ಕಾರಣ.
ನಿರ್ದೇಶಕ ಮಂಸೋರೆ ಸಿನಿಮಾಗಳಲ್ಲಿ ವ್ಯವಸ್ಥೆ, ಅಸಹಾಯಕತೆ, ನೋವು, ದನಿ ಇಲ್ಲದವರ ಬವಣೆ ಇತ್ಯಾದಿ ವಿಷಯಗಳು ಹೈಲೆಟ್. ಈ ಕಥೆಯೊಳಗಿನ ವಿಷಯಗಳು ಅವುಗಳಿಗೆ ಹೊರತಲ್ಲ.

ಮೊದಲೇ ಹೇಳಿದಂತೆ ಇದು ದನಿ ಕಳಕೊಂಡವರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯ ಕಥೆ ಮತ್ತು ವ್ಯಥೆ. ನೈಜ ಘಟನೆ ಇಟ್ಟುಕೊಂಡು ಹೆಣೆದ ಚಿತ್ರಕಥೆ ಸಿನಿಮಾದ ಜೀವಾಳ. ನಿರ್ದೇಶಕರ ನಿರೂಪಣೆ ಶೈಲಿ ಸೀಟಿನ ತುದಿಯಲ್ಲಿ ಕೂರಿಸುವಷ್ಟರ ಮಟ್ಟಿಗೆ ಮೂಡಿದೆ. ಹಾಗಂತ ಚಿತ್ರದುದ್ದಕ್ಕೂ ಯಾವುದೇ ನ್ಯೂನ್ಯತೆಗಳಿಲ್ಲ ಅಂದುಕೊಳ್ಳುವಂತಿಲ್ಲ. ಮೊದಲರ್ಧ ಕಥೆ ಅಲ್ಲಲ್ಲೇ ಸುತ್ತುತ್ತದೆ ಅಂತ ಹೇಳಬಹುದು. ದ್ವಿತಿಯಾರ್ಧ ಅತ್ತಿತ್ತ ನೋಡದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ.

ಇಲ್ಲಿ ಆದಿವಾಸಿಗಳ ಆಕ್ರಂದನವಿದೆ, ಬಡತನ, ದಾರಿದ್ರ್ಯ, ಮುಗ್ಧರ ಮೇಲಿನ ಶೋಷಣೆ ತುಂಬಿದೆ, ತುಂಡು ಭೂಮಿಯಲ್ಲೇ ಬದುಕು ಸವೆಸುವ ಕಾಡ ಮಕ್ಕಳ ಒಕ್ಕಲೆಬಿಸುವಿಕೆ ಇದೆ, ದಬ್ಬಾಳಿಕೆ, ಬೆದರಿಸುವಿಕೆ ಇಂಚಿಂಚಿಗೂ ಕಾಣ ಸಿಗುತ್ತೆ. ಕಾಡಿನ ಮಕ್ಕಳು ನೋವಲ್ಲಿದ್ದರೂ, ಕಾನೂನು ಕಣ್ಣಿಗೆ ಮಾತ್ರ ಕಳ್ಳರು! ಇಂತಹ ಅನೇಕ ಮನಕಲಕುವ ವಿಷಯಗಳು ನೋಡುಗರ ಎದೆಭಾರ ಎನಿಸುತ್ತವೆ.
ಸಿನಿಮಾ ವೇಗಕ್ಕೆ ಸಂಗೀತ ಹಾಗು ಹಾಡು ಸಾಥ್ ನೀಡಿದರೆ, ಕತ್ತರಿ ಪ್ರಯೋಗವೂ ಹೆಗಲು ನೀಡಿದೆ. ಇಂತಹ ಸಿನಿಮಾಗಳಿಗೆ ಮಾತಿನ ಮೌಲ್ಯ ಮುಖ್ಯ. ಹಾಗಾಗಿ ಪ್ರತಿ ಪಾತ್ರಗಳು ಹರಿಬಿಡುವ ಡೈಲಾಗ್ ಕೂಡ ಚಿತ್ರದ ತೂಕ ಹೆಚ್ಚಿಸಿವೆ. ಇಡೀ ಸಿನಿಮಾ ಗಂಭೀರತೆಗೆ ದೂಡುವುದರ ಜೊತೆಗೆ, ಆಗಾಗ ಕೆಟ್ಟ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಹಾಕಬೇಕೆನ್ನುವಷ್ಟರ ಮಟ್ಟಿಗೆ ನಿರ್ದೇಶಕರ ಕೆಲಸ ಇಷ್ಟವಾಗುತ್ತೆ.

ಇಂತಹ ನೈಜ ಘಟನೆ ಚಿತ್ರಗಳಿಗೆ ಬೇಕಿರೋದು ನೈಜತೆ ಎನಿಸುವಂತಹ ದೃಶ್ಯಗಳು. ಅಷ್ಟೇ ಪರಿಣಾಮಕಾರಿಯಾಗಿ ಹಿಡಿದಿಡುವಲ್ಲಿ ನಿರ್ದೇಶಕ ಮತ್ತವರ ತಂಡ ಯಶಸ್ವಿ ಎನ್ನಬಹುದು. ಕಾಡಿನ ಮಕ್ಕಳ ಕಥೆ ಹೆಣೆದು, ಅದನ್ನು ಅಷ್ಟೇ ಅದ್ಭುತ ಅನ್ನುವಂತೆ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ.
ಕಥೆ ಏನು?
ಕಾಡಲ್ಲಿ ವಾಸ ಮಾಡುವ ಆದಿವಾಸಿ ಕುಟುಂಬದ ಅಮಾಯಕ ಮುಗ್ಧ ವಿದ್ಯಾರ್ಥಿ ಹಾಗು ಅವನ ತಂದೆಯನ್ನು ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ನಕ್ಸಲ್ ಆರೋಪ ಹೊರಿಸಿ, ಜೈಲಿಗೆ ಕಳಿಸುತ್ತಾರೆ.
ರೇಷನ್ ಕಾರ್ಡ್ ಕೂಡ ಇಲ್ಲದ ಆದಿವಾಸಿಗಳ ಮೇಲೆ ದೇಶ ದ್ರೋಹದ ಕೇಸ್ ಹಾಕಲಾಗುತ್ತೆ. ದೇಶದ್ರೋಹ ಹಾಗು ದೇಶಕ್ಕೆ ಧಕ್ಕೆ ತರುವ ಆರೋಪದಡಿ ಅವರಿಗೆ ಜಾಮೀನು ನಿರಾಕರಣೆಯಾಗುತ್ತೆ. ಈ ನಡುವೆ, ಅಲ್ಲಿ ನಡೆಯೋ ವ್ಯಥೆ, ಅವರು ಅನುಭವಿಸುವ ನರಕ ಯಾತನೆ ಅಷ್ಟಿಷ್ಟಲ್ಲ.

ಕಾನೂನಿಗೆ ಕಳ್ಳರು ಎನಿಸುವ ಆ ಮುಗ್ಧ ಅಪ್ಪ, ಮಗನ ಪರ ಲಾಲ್ ಸಲಾಮ್ ಎನ್ನುತ್ತಲೇ ಕೆಂಪು ಬಾವುಟ ಹಿಡಿದು ಬರುವ ಕಾಮ್ರೇಡ್ ಸದಸ್ಯರು, ಪತ್ರಕರ್ತರು, ವಕೀಲರು ಹೋರಾಟಕ್ಕಿಳಿಯುತ್ತಾರೆ. ಈ ನಡುವೆ ಪತ್ರಿಕೋದ್ಯಮ ವಿದ್ಯಾರ್ಥಿ ಆಗಿದ್ದ ಆದಿವಾಸಿ ಹುಡುಗನ ಭವಿಷ್ಯ ಹಾಳಾಗಲು ಬಿಡಬಾರದು ಅಂತ ಹೋರಾಡುವ ಕಾಮ್ರೇಡ್ ಗಳು, ವಕೀಲರು ಸಿನಿಮಾದ ಆಕರ್ಷಣೆ.

ಇಷ್ಟಕ್ಕೂ ಆ ಮುಗ್ಧರು ಮಾಡಿದ ತಪ್ಪೇನು, ಆ ಕೆಟ್ಟ ವ್ಯವಸ್ಥೆ ಬಡಪಾಯಿಗಳ ಮೇಲೆ ಎರಗುವುದೇಕೆ, ಯಾವೆಲ್ಲಾ ಕಾರಣಗಳು ಅವರ ಮೇಲೆ ದಬ್ಬಾಳಿಕೆ ನಡೆಸುತ್ತವೆ, ಆ ಅಮಾಯಕ ಅಪ್ಪ, ಮಗ ಜೈಲಿಂದ ಹೊರಬರುತ್ತಾರಾ, ವಿದ್ಯಾರ್ಥಿ ಭವಿಷ್ಯ ಮುಂದೇನಾಗುತ್ತೆ ಎಂಬ ಕುತೂಹಲ ಇದ್ದರೆ ಒಂದೊಮ್ಮೆ ತಾಳ್ಮೆಯಿಂದ ಸಿನಿಮಾ ನೋಡಬಹುದು.
ಯಾರು ಹೇಗೆ?
ಸಿನಿಮಾದ ಕೇಂದ್ರಬಿಂದು ಅನ್ನುವುದಾದರೆ, ಥೇಟ್ ಅಮಾಯಕನಂತೆ ಕಾಣುವ, ಒಮ್ಮೆಲೆ ಇಷ್ಟವಾಗುವ ಶೃಂಗ ಅವರ ನಟನೆ ಆಪ್ತವೆನಿಸಿದೆ. ಅವರ ಅಭಿನಯದಲ್ಲಿ ನೈಜತೆ ಇದೆ. ಪಾತ್ರವನ್ನೇ ಜೀವಿಸುವ ಮೂಲಕ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ.
ಬಾಲಾಜಿ ಮನೋಹರ್ ಅವರು ಚಿತ್ರದ ಹೈಲೆಟ್. ವಕೀಲರಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ತಮ್ಮ ಪಾತ್ರದ ಮೂಲಕ ಒಂದಷ್ಟು ಮನಸುಗಳಿಗೆ ಖುಷಿಕೊಡುತ್ತಾರೆ.
ತಾಯಿಯಾಗಿ ಎಂ.ಡಿ.ಪಲ್ಲವಿ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಕಾಮ್ರೇಡ್ ಆಗಿ ರಾಜೇಶ್ ನಟರಂಗ ಗಮನ ಸೆಳೆದರೆ, ಹನುಮಣ್ಣನ ಪಾತ್ರದ ಮೂಲಕ ಸಂಪತ್ ಕುಮಾರ್ ನೋಡುಗರ ಕಣ್ಣು ಒದ್ದೆ ಮಾಡುತ್ತಾರೆ. ಉಳಿದಂತೆ ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಪ್ರತಿ ಪಾತ್ರವೂ ನ್ಯಾಯ ಸಲ್ಲಿಸಿದೆ.

ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಬಿಂದು ಮಾಲಿನಿ ಅವರ ಸಂಗೀತದ ಕಿರಣ್ ಕಾವೇರಪ್ಪ ಅವರ ಸಾಹಿತ್ಯದ ಹಾಡೊಂದು ಕಾಡ ದೇವರ ಆಚರಣೆ, ಆದಿವಾಸಿಗಳ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸುರೇಶ್ ಆರ್ಮುಗಂ ಅವರ ಸಂಕಲನ ವೇಗ ಹೆಚ್ಚಿಸಿದೆ. ವೀರೇಂದ್ರ ಮಲ್ಲಣ್ಣ,ಅವಿನಾಶ್ ಅವರ ಸಂಭಾಷಣೆಯಲ್ಲಿ ಗಟ್ಟಿ ದನಿ ಇದೆ. ಶಿವು ಬಿ.ಕೆ.ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ‘ಕಾಡ ಬೆಳದಿಂಗಳು’ ಹೆಚ್ಚಿಸಿದೆ.