ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಿಚ್ಚೋತ್ಸವಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ಬಾರಿ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳೊಟ್ಟಿಗೆ ತಮ್ಮ ದಿನವನ್ನು ಸಂಭ್ರಮಿಸಲಿದ್ದಾರೆ. ಕಿಚ್ಚನ ಜನ್ಮದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗಿದೆ. ನೆಚ್ಚಿನ ಸ್ಟಾರ್ಸ್ ಹುಟ್ಟುಹಬ್ಬಕ್ಕೆ ಕಿಚ್ಚನ ಗುಣಗಾನ ಮಾಡುವ ಸ್ಪೆಷಲ್ ಹಾಡುಗಳು ಯೂಟ್ಯೂಬ್ ಅಂಗಳ ಪ್ರವೇಶಿಸಿವೆ. ಅದರ ಹೊರತಾಗಿ ಅರಸು ಕ್ರಿಯೇಷನ್ಸ್ ಸುದೀಪ್ 50ನೇ ಜನ್ಮೋತ್ಸವಕ್ಕೆ ವಿಶೇಷ ಉಡುಗೊರೆ ನೀಡಿದೆ.
ಕಳೆದ ಎರಡು ವರ್ಷಗಳಿಂದ PRO ಆಗಿ ಕನ್ನಡ ಮಾಧ್ಯಮದ ನಡುವೆ ಕೆಲಸ ಮಾಡುತ್ತಿರುವ ಹರೀಶ್ ಅರಸು ತಮ್ಮದೇ ಅರಸು ಕ್ರಿಯೇಷನ್ಸ್ ನಡಿ ಸುದೀಪ್ ಹುಟ್ಟಹಬ್ಬಕ್ಕೆ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡಿದ್ದಾರೆ.
ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ ಭೂಮಿಯಲ್ಲಿ ಎಂಬ ಅರ್ಥಪೂರ್ಣ ಸಂದೇಶದ ಮೂಲಕ ಕಿಚ್ಚನಿಗೆ ಅರಸು ಕ್ರಿಯೇಷನ್ಸ್ ಮನದುಂಬಿ ಶುಭಾಶಯ ಕೋರಿದೆ.
ಕಿಚ್ಚ ಸುದೀಪ್ ಬರ್ತ್ ಡೇ 46ನೇ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. ಮಧ್ಯರಾತ್ರಿ 12ಕ್ಕೆ ಶೀರ್ಷಿಕೆ ಘೋಷಣೆಯಾಗಲಿದೆ. ಈ ಮೊದಲು ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಮಾತ್ರ ಜನ್ಮದಿನ ಆಚರಿಸಿಕೊಳ್ತಾರೆ. ಮನೆ ಬಳಿ ಯಾವುದೇ ಸಂಭ್ರಮ ಇರುವುದಿಲ್ಲ ಎಂದಿದ್ದರು. ಈಗ ಸುದೀಪ್ ಜೆಪಿ ನಗರದಲ್ಲಿಯೂ ಕಿಚ್ಚೋತ್ಸವ ನಡೆಯಲಿದೆ.
‘ನಾವ್ ಮನುಷ್ಯರಾಗಿ ಹುಟ್ಟಿಲ್ಲ. ಮನುಷ್ಯರಾಗೋಕೆ ಹುಟ್ಟಿದ್ದೇವೆ…’ ಇದು ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಅರ್ಥಪೂರ್ಣ ಸಂಭಾಷಣೆ...
ಈ ಸಂಭಾಷಣೆ ಈ ಚಿತ್ರದಲ್ಲೂ ಸಂಧರ್ಭಕ್ಕನುಸಾರ ಇಡಲಾಗಿದೆ. ಆದರೆ, ಈ ಡೈಲಾಗ್ ಬರುವ ಹೊತ್ತಿಗೆ ಆ ಹೀರೋ ಸ್ಥಿತಿ ಮರುಕ ಹುಟ್ಟಿಸುವಂತಿರುತ್ತೆ. ನಿರ್ದೇಶಕರ ಕಥೆ ಚೆನ್ನಾಗಿದೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿಯೂ ನಿರೂಪಿಸಿದ್ದಾರೆ. ಆದರೆ, ಅವಧಿ ಕೊಂಚ ಹೆಚ್ಚಾಯ್ತು ಎಂಬ ಮಾತು ಬಿಟ್ಟರೆ ಚಿತ್ರದ ಬಗ್ಗೆ ಯಾವ ತಕರಾರಿಲ್ಲ. ಮೊದಲರ್ಧ ಲವಲವಿಕೆಯಲ್ಲೇ ಸಾಗುತ್ತೆ ಆಗಾಗ, ಒಂದೊಂದೇ ಟ್ವಿಸ್ಟುಗಳು ನೋಡುಗನ ಟೆಸ್ಟು ಮಾಡುತ್ತಾ ಹೋಗುತ್ತವೆ.
ಆರಂಭದಲ್ಲಿ ತುಸು ಏರುಪೇರು ಎನಿಸಿದರೂ, ಇಡೀ ಚಿತ್ರ ಮುಗಿಯುವ ಹೊತ್ತಿಗೆ ಎದೆಭಾರ ಎನಿಸುತ್ತೆ. ಒಂದೊಳ್ಳೆಯ ಪ್ರೇಮಕಥೆಯೊಳಗೆ ನೂರಾರು ಭಾವನೆಗಳು, ಹಲವಾರು ಕನಸುಗಳು, ಹತ್ತಾರು ಆಸೆ-ಆಕಾಂಕ್ಷೆಗಳು ತೆರೆದುಕೊಳ್ಳುತ್ತಲೇ ನೋಡುಗನನ್ನು ಭಾವುಕತೆಗೆ ದೂಡಿ ಹೊರಬಂದಾಗಲೂ ಕೊಂಚ ಕಾಡುತ್ತದೆ.
ಇದುವರೆಗೆ ಸಾಕಷ್ಟು ಲವ್ ಸ್ಟೋರಿಗಳು ಬಂದಿವೆ. ಇಲ್ಲೂ ಲವ್ ಸ್ಟೋರಿ ಇದೆಯಾದರೂ, ಅದು ವಿಭಿನ್ನ. ಯಾವ ಪ್ರೀತಿಯಲ್ಲಿ ನೋವಿರಲ್ಲ ಹೇಳಿ? ಇಲ್ಲೂ ಒಲವು ಚೆಲುವು ನೋವು ಮೇಳೈಸಿದೆ. ಸಿನಿಮಾ ಶುರುವಿಗೇ ನಾಯಕ ಮನು ಮತ್ತು ನಾಯಕಿ ಪ್ರಿಯಾ (ಪುಟ್ಟಿ) ಮದ್ವೆ ಹಂತಕ್ಕೆ ಬಂದಿರುತ್ತಾರೆ. ಹಾಗಾಗಿ ನಿರ್ದೇಶಕರು ಇಲ್ಲಿ ವಿನಾಕಾರಣ ಹಾಡು ಇಟ್ಟು ಇಬ್ಬರಿಗೂ ಮರಸುತ್ತಿಸಿಲ್ಲ.
ನಾಯಕಿಗಾಗಿ ಹೀರೋ ಭರ್ಜರಿಯಾಗಿ ಹೊಡೆದಾಡಿಯೂ ಇಲ್ಲ. ಸಿನಿಮಾ ಪ್ರೀತಿ ಮತ್ತು ಆಪ್ತತೆಯನ್ನು ಎತ್ತಿ ತೋರಿಸುತ್ತದೆ. ಒಂದೊಳ್ಳೆಯ ಹಿತಾನುಭವದ ಜೊತೆ ‘ಛೇ’ ಎಂಬ ಉದ್ಘಾರವೂ ಹಾಗೊಮ್ಮೆ ಬರುತ್ತೆ. ಅಷ್ಟರ ಮಟ್ಟಿಗೆ ಯುವ ಪ್ರೇಮಿಗಳ ಲವ್ ಸ್ಟೋರಿ ಇಷ್ಟವಾಗುತ್ತೆ.
ಸಿನಿಮಾ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಕತ್ತರಿ ಪ್ರಯೋಗ ಕೂಡ ಕಿರಿಕಿರಿ ಎನಿಸಲ್ಲ. ಇನ್ನು ಕ್ಯಾಮೆರಾ ಕೈಚಳಕವೂ ಇದಕ್ಕೆ ಹೊರತಲ್ಲ. ಇನ್ನು ನಿರ್ದೇಶಕರು ನೈಜತೆಗೆ ಹೆಚ್ಚು ಒತ್ತ ನೀಡಿದ್ದಾರೆ.
ಕಥೆ ಇಷ್ಟು…
‘ಅವನು ಕ್ಯಾಬ್ ಡ್ರೈವರ್. ಅವಳು ಸಿಂಗರ್. ಇಬ್ಬರದೂ ಗಾಢ ಪ್ರೀತಿ. ಅವಳಿಗೆ ಅವನೇ ಸಮುದ್ರ. ಆಕೆಗೆ ಕಡಲ ತೀರದಲ್ಲಿ ಪುಟ್ಟ ಮನೆ ಮಾಡಿ ಬದುಕು ಸವೆಸಬೇಕೆಂಬ ಆಸೆ. ಆದರೆ ಅವನು ಡ್ರೈವರ್ ಆಗಿದ್ದರಿಂದ ಪ್ರೀತಿಸಿದವಳ ಆಸೆ ಪೂರೈಸಲು ಹೆಣಗಾಡುತ್ತಾನೆ. ಹೀಗಿರುವಾಗಲೇ ಒಂದು ಘಟನೆ ಸಂಭವಿಸುತ್ತೆ. ಅಲ್ಲಿಂದ ಅವರಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತಲೇ ಎಲ್ಲರ ಎದೆಭಾರವಾಗಿಸುತ್ತ ಹೋಗುತ್ತೆ.
ಪ್ರೀತಿಸಿದ ಹುಡುಗಿಯ ಆಸೆ ಈಡೇರಿಸಲು ಮಾಡದ ತಪ್ಪನ್ನು ಒಪ್ಪಿ ಜೈಲು ಸೇರುತ್ತಾನೆ. ಅತ್ತ, ಯಮ ಹಿಂಸೆ ಪಡುವ ಅವನಿಗೆ ನನ್ನಾಕೆಯ ಆಸೆ ಈಡೇರಿಸಬೇಕೆಂಬ ಹಠವೊಂದೇ. ಇದರ ನಡುವೆ ಒಂದಷ್ಟು ಡ್ರಾಮಾಗಳು. ಕೊನೆಗೆ ಇಬ್ಬರು ಒಂದಾಗುತ್ತಾರಾ, ಅವಳ ಆಸೆ ಈಡೇರಿಸುತ್ತಾನಾ ಇಲ್ಲವೋ ಅನ್ನೋದು ಸಸ್ಪೆನ್ಸ್ .
ಯಾರು ಹೇಗೆ?
ರಕ್ಷಿತ್ ಶೆಟ್ಟಿ ಅವರ ನಟನೆ ಬಗ್ಗೆ ಹೊಗಳುವಂಥದ್ದೇನೂ ಇಲ್ಲ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಸ್ವಲ್ಪ ಬೆಳವಣಿಗೆ ಕಾಣುತ್ತೆ. ಆದರೆ, ಅವರ ಮೌನ ಮತ್ತು ಭಾವುಕರಾಗುವ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ. ರುಕ್ಮಿಣಿ ವಸಂತ್ ನಟನೆಯಲ್ಲಿ ಲವಲವಿಕೆ ಇದೆ. ಒಂದರ್ಥದಲ್ಲಿ ಇಡೀ ಸಿನಿಮಾದ ಕೇಂದ್ರಬಿಂದು.
ಮಿಡಲ್ ಕ್ಲಾಸ್ ಹುಡುಗಿಯಾಗಿ ಇಷ್ಟವಾಗುತ್ತಾರೆ. ನೈಜವಾಗಿಯೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಇತರರು ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೆಲಸ ಚಿತ್ರದ ಪ್ಲಸ್ ಎನ್ನಬಹುದು.
ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್, ನಗುವಿನ ಸುಂದರಿ ಶರಣ್ಯಾ ಶೆಟ್ಟಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿರುವ “ನಗುವಿನ ಹೂಗಳ ಮೇಲೆ” ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.
ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ನಗುವಿನ ಹೂಗಳ ಮೇಲೆ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ತೂಕವಾದ ಹೆಸರು. ಡಾ. ರಾಜ್ ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಚೆನ್ನಾಗಿ ಮಾಡುವ ಜವಾಬ್ದಾರಿ ಹೆಚ್ಚಿತ್ತು. ಶರಣ್ಯ ಹಾಗೂ ಅಭಿ ಕಾಂಬಿನೇಷನ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ನಗುವಿನ ಹೂಗಳ ಮೇಲೆ ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ನೋಡಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ. ವಯಸ್ಸಿಲ್ಲ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳು ಶೂಟಿಂಗ್ ಮಾಡಿ ಮುಗಿಸಿದ್ದೇವೆ ಎಂದು ತಿಳಿಸಿದರು.
ನಟ ಅಭಿದಾಸ್ ಮಾತನಾಡಿ, ಸೋಲೋ ಹೀರೋ ಆಗಿ ಇದು ನನ್ನ ಮೊದಲ ಸಿನಿಮಾ. ವೆಂಕಟ್ ಸರ್, ರಾಧಾ ಮೋಹನ್ ಸರ್ ಧನ್ಯವಾದ ನನ್ನ ಸೆಲೆಕ್ಟ್ ಮಾಡಿದ್ದಕ್ಕೆ. ನಾಲ್ಕು ಮೆಲೋಡಿ ಹಾಡು ಕೊಟ್ಟಿದ್ದಾರೆ. “ಇರಲಿ ಬಿಡು”, “ಗೊತ್ತಿಲ್ಲ ಯಾರಿಗೂ” ನನ್ನ ಫೇವರೇಟ್ ಹಾಡುಗಳು ಎಂದರು.
ನಾಯಕಿ ಶರಣ್ಯಾ ಶೆಟ್ಟಿ ಮಾತನಾಡಿ, ನಗುವಿನ ಹೂಗಳ ಮೇಲೆ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಸೋಲೋ ಹೀರೋಯಿನ್ ಆಗಿ ಫಸ್ಟ್ ಸೈನ್ ಮಾಡಿದ ಮೂವೀ. ಎರಡು ವರ್ಷದ ಹಿಂದೆ ಶೂಟ್ ಮಾಡಿದ್ದು ಇದು. ಸ್ಕ್ರೀನ್ ನಲ್ಲಿ ನನ್ನ ಮುಗ್ದತೆ ಕಾಣಿಸುತ್ತದೆ. ಶೂಟಿಂಗ್ ಪ್ರೋಸೆಸ್ ತುಂಬಾ ಚೆನ್ನಾಗಿತ್ತು. ಈ ಸಿನಿಮಾ ಟ್ರೂ ಲವ್ ಸ್ಟೋರಿ ಬೆಸೆಡ್ ಇದೆ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನು ಎಂದರು.
ಗೊತ್ತಿಲ್ಲ ಯಾರಿಗೂ ಎಂಬ ಪ್ರೇಮಗೀತೆಗೆ ಲವ್ ಪ್ರಾನ್ ಮೆಹತಾ ಟ್ಯೂನ್ ಹಾಕಿದ್ದು, ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದು, ತಜೀಂದರ್ ಸಿಂಗ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಶರಣ್ಯ ಹಾಗೂ ಅಭಿದಾಸ್ ಮಿಂಚಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇರಲಿ ಬಿಡು ಈ ಜೀವ ನಿನಗಾಗಿ ಗಾನಲಹರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಆಮ್ಲೆಟ್, ಕೆಂಪಿರ್ವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿದ್ದು, ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.
ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸೆಪ್ಟಂಬರ್ 1ಕ್ಕೆ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ರಿಲೀಸ್ ಆಗಲಿದೆ. ಮೈತ್ರಿ ಮೂವಿ ಬ್ಯಾನರ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ ‘ಮಜಿಲಿ’ ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಆಕ್ಷನ್ ಕಟ್ ಹೇಳಿದ್ದಾರೆ.
ರೊಮ್ಯಾಂಟಿಕ್ ಲವ್ ಎಂಟರ್ಟೈನರ್ ‘ಖುಷಿ’ ಸಿನಿಮಾದಲ್ಲಿ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೇಷಾಂ ಅಬ್ದುಲ್ ವಹಾಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ. ಸಾಲು ಸಾಲು ಸೋಲು ಕಂಡಿರುವ ವಿಜಯ್ ದೇವರಕೊಂಡಗೆ ಖುಇಷಿ ಸಕ್ಸಸ್ ಕೊಡಲಿದೆ ಎಂಬ ನಿರೀಕ್ಷೆ ಹೆಚ್ಚಿಸಿದೆ.
ಒಬ್ಬರಿಗೆ ಕಿವಿ ಕೇಳಲ್ಲ, ಇನ್ನೊಬ್ಬರಿಗೆ ಮಾತೇ ಬರಲ್ಲ, ಮತ್ತೊಬ್ಬರಿಗೆ ಕಣ್ಣೇ ಕಾಣಲ್ಲ! ಈ ಮೂವರು ಸೇರಿ ಸಿನಿಮಾ ಮೂಲಕ ರಂಜಿಸೋಕೆ ಅಣಿಯಾಗಿದ್ದಾರೆ. ಹೌದು, ಪರ್ಯಾಯ ಸಿನಿಮಾ ಸೆಪ್ಟೆಂಬರ್ 8 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಸಧ್ಯದ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ.
ಪರ್ಯಾಯ ಇದು ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗು ಇಂದುಮತಿ ರಾಜ್ ಕುಮಾರ್ ಅವರ ನಿರ್ಮಾಣದ ಚಿತ್ರ. ವಿಭಿನ್ನ ಮನಸ್ಥಿತಿಯುಳ್ಳ ವಿಶೇಷ ಚೇತನರು ಬದುಕು ಕಟ್ಟಿಕೊಳ್ಳುವಲ್ಲಿ ಮಾಡುವ ಪ್ರಯತ್ನಗಳು, ಜನರ ಬೆಂಬಲ ಸಿಗದಿದ್ದಾಗ ಅವರು ಹುಡುಕಿಕೊಳ್ಳುವ ಪರ್ಯಾಯ ಮಾರ್ಗಗಳ ಸುತ್ತ ನಡೆಯೋ ಕಥೆಯನ್ನು ಹೇಳುವ ಪರ್ಯಾಯ ಚಿತ್ರ ಸೆ.8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅಂಧ, ಮೂಗ ಮತ್ತು ಕಿವುಡ ಈ ಮೂರು ಪಾತ್ರಗಳನ್ನಿಟ್ಟುಕೊಂಡು ರಮಾನಂದ ಮಿತ್ರ ಅವರು ಅಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಿರ್ಮಾಪಕ ರಾಜ್ ಕುಮಾರ್ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಮಾನಂದ ಮಿತ್ರಾ ಮಾತನಾಡಿ,’ ನಮ್ಮ ಚಿತ್ರ ಬಿಡುಗಡೆಯ ಹಂತ ತಲುಪಿದೆ, ಒತ್ತಡ, ಖುಷಿ, ಕಾತುರವೂ ಇದೆ. ಪ್ರೇಕ್ಷಕರ ನಾಡಿ ಮಿಡಿತ ಅರಿಯುವ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ಪಾತ್ರದ ಮೂಲಕ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ. ಪ್ರತಿ ಪಾತ್ರದಲ್ಲೂ ತಿರುವುಗಳಿವೆ. ಹೊಸಬರ ಬಳಿ ಪಾತ್ರ ಮಾಡಿಸಿದ್ದು ಸವಾಲಿನಿಂದ ಕೂಡಿತ್ತು.
ಮೊದಲ ದಿನ ಸ್ವಲ್ಪ ಕಷ್ಟ ಆಯಿತು. ಆನಂತರ ಸುಲಭವಾಯಿತು. ಮಾಮುಲಿ ಪ್ಯಾಟ್ರನ್ ಗಿಂತ ಬೇರೆ ರೀತಿ ಪ್ರಯತ್ನಿಸಿದ್ದೇವೆ. ಎಲ್ಲ ಕಲಾವಿದರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪರೀಕ್ಷೆ ಬರೆದಿದ್ದೇನೆ. ಫಲಿತಾಂಶಕ್ಕೆ ನಾವೆಲ್ಲ ಕಾಯುತ್ತಿದ್ದೇವೆ. ಉತ್ತರ ಕರ್ನಾಟಕದ ಹೆಚ್ಚಿನ ಥೇಟರುಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿರ್ಮಾಪಕ ಕಮ್ ನಟ ರಾಜ್ ಕುಮಾರ್, ಮಾತನಾಡಿ, ನಾವೆಲ್ಲ ಅಪ್ಪು ಅವರ ಅಭಿಮಾನಿಗಳು, ನಾನು ಕುರುಡನ ಪಾತ್ರ ಮಾಡಿದ್ದೇನೆ. ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲಿ ಏನೇನೆಲ್ಲ ಆಗುತ್ತೆ ಅನ್ನೋದೇ ಈ ಕಥೆ. ನಿರ್ದೇಶಕರ ಬೆಂಬಲದಿಂದ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ರಂಜನ್ ಕುಮಾರ್ ಮಾತನಾಡಿ, ಚಿತ್ರದಲ್ಲಿ ನನ್ನದು ಮೂಗನ ಪಾತ್ರ, ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.
ನಟಿ ಅರ್ಚನಾ ಶೆಟ್ಟಿ ಮಾತನಾಡಿ, ಒಂದಷ್ಟು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಕಥೆ ಹೇಳಿಲ್ಲ, ಕಿವುಡನ ಹೆಂಡತಿ ಪಾತ್ರ ಮಾಡಿದ್ದೇನೆ ಎಂದರು. ಕಿವುಡನ ಪಾತ್ರ ಮಾಡಿರುವ ಮುರುಗೇಶ್ ಬಿ ಶಿವಪೂಜೆ ಮಾತನಾಡಿ, ಹಿಂದೆ ಕೊನೆಯಪುಟ, ಬೆಳಕಿನ ಕನ್ನಡಿ ಸೇರಿ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾರರ್, ಕಾಮಿಡಿ, ಮನರಂಜನೆಯಂಥ ಎಲ್ಲಾ ಅಂಶಗಳು ನಮ್ನ ಚಿತ್ರದಲ್ಲಿವೆ ಎಂದರು.
ವಿತರಕ ನವರತ್ನ ಪ್ರಸಾದ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಎ.ಟಿ ರವೀಶ್ ಮಾತನಾಡಿ, ಆರ್.ಆರ್.ಮಾಡುವಾಗ ಚಿತ್ರ ನೋಡಿದ್ದೇನೆ. ತುಂಬಾ ಚೆನ್ನಾಗಿ ಬಂದಿದೆ.ಸಙಗೀತಕ್ಕೆ ಹೆಚ್ಚು ಸ್ಕೋಪ್ ಇದೆ ಎಂದು ಹೇಳಿದರು. ಬೆಳಗಾವಿ ನಗರ ಅಲ್ಲದೆ ಹೆಚ್ಚಾಗಿ ಕೊಂಕಣಿ ಮಾತಾಡುವ ಚಿಗುಳೆ ಎಂಬ ಹಳ್ಳಿಯಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಜಿ.ರಂಗಸ್ವಾಮಿ ಅವರು ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಜೀವನ್ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಜಯಂತಿ ರೇವಡಿ, ಅರ್ಚನಾಶೆಟ್ಟಿ, ಪ್ರಿಯಾ ಕೊಠಾರಿ, ಭೀಮಾನಾಯಕ್, ಸುರೇಶ್ ಬೆಳಗಾವಿ, ರೋಹನ್ ಕುಬ್ಸದ್ ಮುಂತಾದವರು ಪರ್ಯಾಯ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ ಅನೇಕ ಸದಭಿರುಚಿಯ ಸಿನಿಮಾಗಳು ಬಂದಿವೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್ ಇರುವ ಸಿನಿಮಾಗಳೂ ಸುದ್ದಿಯಾಗಿವೆ. ಈಗ ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ‘ದಂತಕಥೆ’ ಶುರುವಾಗಲಿದೆ
ಹೌದು, ದಂತಕಥೆ ಸಿನಿಮಾ ಮೋಷನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅನಾವರಣಗೊಳಿಸುವುದರ ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.
ಅಂದಹಾಗೆ, ದಂತಕಥೆ ಅಂದರೆ, ಅದೊಂದು, ಜಾನಪದ ಸಾಹಿತ್ಯದ ಪ್ರಾಕಾರ. ಇತಿಹಾಸದಲ್ಲಿ ನಡೆದ ಘಟನೆಯನ್ನು , ನಂಬಲಸಾಧ್ಯವಾದ ವಿಷಯ ಒಳಗೊಂಡಿರುವುದಕ್ಕೆ ದಂತಕಥೆ ಎನ್ನುತ್ತಾರೆ. ತಾರದ ಸಿನಿಮಾ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ದಂತಕಥೆ ಹುಟ್ಟಿಕೊಳ್ಳಲಿದೆ ಎಂಬುದು ವಿಶೇಷ.
ಈ ದಂತಕಥೆಗೆ ನಟ ರಘುಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಡುಗಡೆ ಮಾಡಿದ್ದಾರೆ.
ವಚನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಲ್ಮಿಡಿ ಪ್ರೊಡಕ್ಷನ್ ಹಾಗೂ ಜನರತ್ನ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.
ಮೋಷನ್ ಪೋಸ್ಟರ್ ನ ಕೊನೆಯಲ್ಲಿ ” ಇನ್ವೆಸ್ಟಿಗೇಷನ್ ಶುರು ” ಎನ್ನುವ ಲೈನ್ ಸದ್ಯ ಕುತೂಹಲ ಮೂಡಿಸಿದೆ. ಆದಷ್ಟು ಬೇಗ ದಂತಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಿ ನಡೆಸಿದೆ.
ನಟ ವಿಜಯ ರಾಘವೇಂದ್ರ ಅವರು “ಜೋಗ್ 101” ಎಂಬ ಹೊಸ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಕುತೂಹಲ ಮೂಡಿಸಿದ್ದು, ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ.
ಸೆವೆನ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ರಘು (ರಾಘವೇಂದ್ರ ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರದ ನಿರ್ದೇಶಕರು.
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ “ಜೋಗ್ 101” ಚಿತ್ರ ಈಗಾಗಲೇ ಬಿಡುಗಡೆಯ ಸನಿಹದಲ್ಲಿದೆ. ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ಹೆಜ್ಜೆಯಾಗಿ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮುಂದೆ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಸಹ ಬರಲಿದೆ.
ಅವಿನಾಶ್ ಆರ್ ಬಾಸೂತ್ಕರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಮನ್ವರ್ಷಿ ನವಲಗುಂದ ಬರೆದಿದ್ದಾರೆ. ರಘು ದೀಕ್ಷಿತ್ ಮತ್ತು ಸಂಚಿತ್ ಹೆಗಡೆ ಹಾಡಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ “ಜೋಗ್ 101” ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ ನಿರ್ದೇಶನದ ” ಜಲಪಾತ” ಚಿತ್ರಕ್ಕಾಗಿ ರಮೇಶ್ ಬೇಗಾರ್ ಅವರೆ ಬರೆದಿರುವ “ಎದೆಯ ದನಿಯ ಹಾಡು ಕೇಳು” ಎಂಬ ಪರಿಸರದ ಕುರಿತಾದ ಹಾಡು ಇತ್ತೀಚೆಗೆ ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ. ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
“ಜಲಪಾತ” ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ. ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ .ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.
ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ “ಜಲಪಾತ” ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಅನಸೂಯ ಕೋಮಲ್ ಕುಮಾರ್ ನಿರ್ಮಾಣದ ಮತಿವಣನ್ ನಿರ್ದೇಶನದ “ಕಾಲಾಯ ನಮಃ” ಚಿತ್ರದಲ್ಲಿ ಬಹಳ ದಿನಗಳ ನಂತರ ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅಭಿನಯಿಸುತ್ತಿದ್ದಾರೆ. ಇವರಿಬ್ಬರು ಭಾಗವಹಿಸಿರುವ ಹಾಡೊಂದರ ಚಿತ್ರೀಕರಣ ಜಾಲಿವುಡ್ ಸ್ಟುಡಿಯೋದಲ್ಲಿ ಜೋರಾಗಿ ನಡೆಯುತ್ತಿದೆ
‘ನಾನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್, ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಅವತ್ತಿನಿಂದ ಹೇಳುತ್ತಿದ್ದೇನೆ. ಕೋಮಲ್ ಅದ್ಭುತ ಕಲಾವಿದ ಎಂದು. ಇದರಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂರು ಜನ ನಟಿಸಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿದೆ. “ಕಾಲಾಯ ನಮಃ” ಸಹ ಪ್ರಚಂಡ ಯಶಸ್ಸು ಕಾಣಲಿ ಎಂದು ಜಗ್ಗೇಶ್ ಹಾರೈಸಿದರು.
ಇದು ನಮ್ಮ ಸಂಸ್ಥೆಯ ಚಿತ್ರ. ನನ್ನ ಹೆಂಡತಿ ಅನಸೂಯ ಅವರು ನಿರ್ಮಾಪಕರು ಎಂದು ಮಾತು ಆರಂಭಿಸಿದ ಕೋಮಲ್ ಕುಮಾರ್, “ಕಾಲಾಯ ನಮಃ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಮ್ಮ ಅಣ್ಣ ಜಗ್ಗೇಶ್, ನಾನು ಹಾಗೂ ಮುಂಬೈ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿಯಾಗಿ ಆಸಿಯಾ ಫಿರ್ದೋಸ್ ನಟಿಸಿದ್ದಾರೆ. ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಂದುಕೊಂಡ ಹಾಗೆ ಆದರೆ, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ ಎಂದರು.
ಇದೊಂದು ಸಮಯದ ಸುತ್ತ ನಡೆಯುವ ಕಥೆ. ಜಗ್ಗೇಶ್, ಕೋಮಲ್ ಅವರು ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮತಿವಣನ್. ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಮಾತನಾಡಿದರು.
ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ” ಗನ್ಸ್ ಅಂಡ್ ರೋಸಸ್” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ
ನಿರ್ಮಾಪಕ ಹೆಚ್ ಆರ್ ನಟರಾಜ್ ಮಾತನಾಡಿದ್ದು ಹೀಗೆ; ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ನನ್ನ ಬಗ್ಗೆ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ಆದರೆ ನಾನು ಒಂದು ಕಂಡೀಶನ್ ಹಾಕಿದ್ದೇನೆ. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎಂದು. ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಗೆ ಚಿತ್ರ ತೆರೆಗೆ ಬರಲು ಸಿದ್ದವಾಗಿರುತ್ತದೆ ಎಂದರು.
ನಾನು ಸಾಕಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಯಶ್ವಿಕ ನಿಷ್ಕಲ ಈ ಚಿತ್ರದ ನಾಯಕಿ. ಶಶಿಕುಮಾರ್ ಸಂಗೀತ ನೀಡುತ್ತಿದ್ದಾರೆ. ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶರತ್ ಬರೆದಿದ್ದಾರೆ ಎಂದರು ನಿರ್ದೇಶಕ ಶ್ರೀನಿವಾಸ್ ಕುಮಾರ್.
ಇದು ನನ್ನ ಚೊಚ್ಚಲ ಚಿತ್ರ. ಈ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ ಎಂದರು ನಾಯಕ ಅರ್ಜುನ್. ನಾಯಕಿ ಯಶ್ವಿಕ ನಿಷ್ಕಲ ತಮ್ಮ ಪಾತ್ರದ ಕುರಿತು ಮಾತನಾಡಿದರು.
“ಗನ್ಸ್ ಅಂಡ್ ರೋಸಸ್” ಚಿತ್ರದಲ್ಲಿ ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಎರಡು ಇರುತ್ತದೆ ಎಂದರು ಕಥೆ ಬರೆದಿರುವ ಶರತ್.
ಈ ಚಿತ್ರದ ಮೂಲಕ ನನ್ನ ಮಗ ನಾಯಕನಾಗುತ್ತಿದ್ದೇನೆ. ಸಾಕಷ್ಟು ವರ್ಷಗಳಿಂದ ನನಗೆ ತಾವೆಲ್ಲರು ಪ್ರೋತ್ಸಾಹ ನೀಡಿದ್ದೀರಿ. ನನ್ನ ಮಗನಿಗೂ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ಅಜಯ್ ಕುಮಾರ್.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕ ಶಶಿಕುಮಾರ್, ಛಾಯಾಗ್ರಹಕ ಜನಾರ್ದನ್ ಮಾತ್ತು ನಟರಾದ ಜೀವನ್ ರಿಚಿ ಹಾಗೂ ಹರೀಶ್ ಚಿತ್ರದ ಕುರಿತು ಮಾತನಾಡಿದರು.