Categories
ಸಿನಿ ಸುದ್ದಿ

ಗುಂಮ್ಟಿ ಎಂಬ ಕುಡುಬಿ ಜನ ಜೀವನದ ವಿಶೇಷ ಚಿತ್ರ : ಹೊರಬಂತು ಅರ್ಥಪೂರ್ಣ ಗೀತೆ

ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರ ಮೂಲಕ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಸುಮಧುರ ಗೀತೆಯೊಂದನ್ನು ಬಿಡುಗಡೆ ಮಾಡಿದೆ.

‘ಹಾಡುವ ಹಕ್ಕಿ ಹಾಡುತೈತಿ ಮನುಸಾ… ಕಾಯಕ ಮಾಡಿ ಕಾಣೋ ನೀನು ಕನಸಾ…’ ಎಂಬ ಸಾಲುಗಳಿಂದ ಆರಂಭವಾಗುವ ‘ಗುಂಮ್ಟಿ’ ಚಿತ್ರದ ಈ ಗೀತೆಗೆ ಮೆಹಬೂಬ್ ಸಾಬ್ ಧ್ವನಿಯಾಗಿದ್ದು, ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಗುಂಮ್ಟಿ’ ಹಾಡಿನ ಬಗ್ಗೆ ಮತ್ತು ‘ಗುಂಮ್ಟಿ’ ಚಿತ್ರದ ಬಗ್ಗೆ ತಂಡ ಹೇಳಿದ್ದಿಷ್ಟು.
ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆೆ.

‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ವಿವರಣೆ ನೀಡಿದರು.

‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ.

‘ಗುಂಮ್ಟಿ’ ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಹಂಚಿಕೊಂಡರು.

ಇನ್ನು ‘ಗುಂಮ್ಟಿ’ ಸಿನೆಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸದ್ಯ ಯಶಸ್ವಿಯಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗುಂಮ್ಟಿ’ ಸೆನ್ಸಾರ್ ಮುಂದಿದೆ. ಇದೀಗ ಹಾಡಿನ ಬಿಡುಗಡೆ ಮೂಲಕ ‘ಗುಂಮ್ಟಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ‘ಗುಂಮ್ಟಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Categories
ಸಿನಿ ಸುದ್ದಿ

ಚಿತ್ರಮಂದಿರಕ್ಕೆ ಭೀಮ ಬಲ! ಆಗಸ್ಟ್ 9ಕ್ಕೆ ರಿಲೀಸ್

ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ “ಭೀಮ” ಚಿತ್ರವು ಸೆನ್ಸರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಗಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು ಸೇರಿದಂತೆ ಮತ್ತಷ್ಟು ಜಾನಪದ ಶೈಲಿಯ ಬೇರೆ ಬೇರೆ ಹಾಡುಗಳನ್ನು ಆ ಜನಾಂಗದ ಪ್ರತಿಭೆಗಳನ್ನ ಕರೆಸಿ ವೇದಿಕೆಯ ಮೇಲೆ ಹಾಡಿಸಿದ್ದು ವಿಶೇಷವಾಗಿತ್ತು. ಪ್ರಸ್ತುತ ಚಿತ್ರೋದ್ಯಮದ ಪರಿಸ್ಥಿತಿ, ಸಕ್ಸಸ್ ಕಾಣದ ಚಿತ್ರಗಳ ನಡುವೆ ಹೊಸ ಚೈತನ್ಯ ನೀಡಲು ಬಲ ಭೀಮನಾಗಿ ಬರಲು ಸಿದ್ಧವಾಗಿರುವ ಚಿತ್ರ ಇದಾಗಿದೆ.

ಈ ಚಿತ್ರದ ನಿರ್ದೇಶಕ , ನಟ , ವಿಜಯ್ ಕುಮಾರ್ (ದುನಿಯಾ ವಿಜಯ್) ಮಾತನಾಡಿ, ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ , ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಈಗ ಚಿತ್ರ ಸೆನ್ಸರ್ನಿಂದ ಹೊರ ಬಂದಿದೆ, ನಾನು ಶಾಲಾ ದಿನಗಳಿಂದಲೂ ಬಿ ಪ್ಲಸ್ , ಸಿ ಪ್ಲಸ್ , ಪಡೆಯುತ್ತಿದೆ. ಈಗ ನನ್ನ ಸಿನಿಮಾ ಮೂಲಕ ಸೆನ್ಸರ್ನಿಂದ ಎ ಪ್ಲಸ್ ಸಿಕ್ಕಂತಾಗಿದೆ ಎನ್ನುತ್ತಾ ಎ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಸಮರ್ಥಿಸಿಕೊಂಡರು.

ಚಿತ್ರದ ಸಂಭಾಷಣೆ ವಿಚಾರವಾಗಿ ಒಂದಷ್ಟು ಕಟ್ಸ್ , ಮ್ಯೂಟ್ಸ್ ಮಾಡಲು ಹೇಳಿದ್ದಾರೆ, ಅದರಂತೆ ಎಲ್ಲವನ್ನ ಮಾಡುತ್ತೇವೆ. ವಿದ್ಯಾರ್ಥಿಗಳು , ಹರಿಹರಿಯದವರ ಬದುಕಿನ ದು ಸ್ಥಿತಿಯ ವಿಚಾರವು ಸೇರಿದಂತೆ ಒಂದಷ್ಟು ನಾ ಕಂಡು ಕೇಳಿದಂತ ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ. ಹಾಗೂ ನನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ತುಂಬಾ ಸಾತ್ ನೀಡಿದ್ದಾರೆ. ನನ್ನ ಎಲ್ಲಾ ವಿಚಾರಕ್ಕೂ ಸೈ ಎಂದಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈಗಾಗಲೇ ಹಾಡುಗಳ ಮೂಲಕ ಸಕ್ಸಸ್ ತಂದು ಕೊಟ್ಟಿದ್ದಾರೆ. ರೀ-ರೆಕಾರ್ಡಿಂಗ್ ಕೂಡ ಅದ್ಭುತವಾಗಿ ಮಾಡಿದ್ದಾರೆ. ಇನ್ನು ಛಾಯಾಗ್ರಹಕ ಶಿವಸೇನಾ, ಸಂಕಲನ ದೀಪು. ಎಸ್. ಕುಮಾರ್ , ಸಂಭಾಷಣೆ ಮಾಸ್ತಿ , ಫೈಟ್ಸ್ಗಳನ್ನ ವಿನೋದ್ , ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ , ರಾಜು ಸೇರಿದಂತೆ ಇಡೀ ನಮ್ಮ ಚಿತ್ರಕ್ಕೆ ತಾರಾಬಳಗ ಹಾಗೂ ತಾಂತ್ರಿಕ ವರ್ಗ ಬಹಳಷ್ಟು ಶ್ರಮವಿಸಿ ಕೆಲಸ ಮಾಡಿದ್ದೇವೆ. ಬುಡಕಟ್ಟು ಜನಾಂಗದವರು ಸೇರಿದಂತೆ ಒಂದಷ್ಟು ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನೀವೆಲ್ಲರೂ ಆಗಸ್ಟ್ 9ಕ್ಕೆ ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮಾತನಾಡಿ, ನಮ್ಮ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ, ಸೆನ್ಸರ್ ಹಂತದಲ್ಲಿ ಹೋದಾಗ ಕೊಂಚ ಭಯ ಇತ್ತು, ಆದರೆ ನಿರ್ದೇಶಕ ವಿಜಯ್ ಸರ್ ಸೆನ್ಸರ್ ಅಧಿಕಾರಿಗಳಿಗೆ ನಮ್ಮ ಸಿನಿಮಾದ ಕಂಟೆಂಟ್ ಬಗ್ಗೆ ಕನ್ವಿನ್ಸ್ ಮಾಡಿದ ರೀತಿ ಅದ್ಭುತ.
ಈಗಾಗಲೇ ಸಿನಿಮಾದ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು.

ನಿರ್ಮಾಪಕ ಜಗದೀಶ್ ಗೌಡ ಮಾತನಾಡುತ್ತಾ ನಾನು ಒಬ್ಬ ವಿತರಕ , ಈ ಚಿತ್ರವನ್ನು ನಿರ್ಮಿಸಿದಾಗ ಒಂದಷ್ಟು ವಿಚಾರ ನನಗೂ ತಿಳಿಯಿತು. ಬಹಳ ಶ್ರಮವಹಿಸಿ ಒಂದು ಉತ್ತಮ ಸಂದೇಶವಿರುವ ಚಿತ್ರವನ್ನು ಬಿಡುಗಡೆ ಹಂತಕ್ಕೆ ತಂದಿದ್ದೇವೆ. ಸದ್ಯ ಚಿತ್ರಮಂದಿರಗಳ ಪರಿಸ್ಥಿತಿ ನಮಗೂ ತಿಳಿದಿದೆ. ಮುಚ್ಚು ಹೋಗುತ್ತಿರುವ 18 ಚಿತ್ರಮಂದಿರಗಳು ನಮ್ಮ ಭೀಮ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಲ್ಲಿ ನಮ್ಮ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಕೂಡ ನಮ್ಮ ಚಿತ್ರ ನೇರವಾಗಿ ರಿಲೀಸ್ ಆಗುತ್ತಿದ್ದು, ವಿದೇಶದಲ್ಲಿ ಕೂಡ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಎಲ್ಲಾ ಏರಿಯ ಸೋಲ್ಡ್ ಔಟ್ ಆಗಿದ್ದು , ಬಿಕೆಟಿಯನ್ನು ನಾನೇ ಉಳಿಸಿಕೊಂಡಿದ್ದೇನೆ. ಸದ್ಯ ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ನಮ್ಮ ಚಿತ್ರದ ಮೂಲಕ ಒಂದಷ್ಟು ಚೈತನ್ಯ ಸಿಗುವಂತಾಗಲಿ, ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಬಂದು ನೋಡಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರದಲ್ಲಿ ಅಭಿನಯಿಸಿದಂತ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಈ ಭೀಮ ಚಿತ್ರದಲ್ಲಿ ಸಮಾಜಿ ಕಳಕಳಿ ಸಂದೇಶ ಒಳಗೊಂಡಿದೆಯಂತೆ.
ಈ ಚಿತ್ರ ಬಿಡುಗಡೆ ನಂತರ ಒಂದಷ್ಟು ಚರ್ಚೆಗೆ ದಾರಿ ಮಾಡಿಕೊಳ್ಳುತ್ತದೆ ಎಂಬ ಅಭಿಪ್ರಾಯ ಚಿತ್ರ ತಂಡದ್ದು,
ಬಹಳ ನೈಜಕ್ಕೆ ಒತ್ತುಕೊಟ್ಟು ಸೂಕ್ಷ್ಮ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಇನ್ನು ನಟ , ನಿರ್ದೇಶಕ ವಿಜಯ್ ಕುಮಾರ್ ಅಲಿಯಾಸ್ (ದುನಿಯಾ ವಿಜಯ್) ತಮ್ಮ ಪಾತ್ರದ ಕುರಿತು ಹೆಚ್ಚು ಮಾತನಾಡದೆ , ನನ್ನ ಈ ನಿರ್ದೇಶನದ ಚಿತ್ರ ಖಂಡಿತ ಇಷ್ಟವಾಗುತ್ತೆ ಎಂಬ ಅಭಿಪ್ರಾಯವಿದೆ. ದಯವಿಟ್ಟು ಎಲ್ಲರೂ ಆಗಸ್ಟ್ 9ಕ್ಕೆ ಬಂದು ಚಿತ್ರವನ್ನು ನೋಡಿ ಎಂದು ವಿನಂತಿಸಿದರು.

Categories
ಸಿನಿ ಸುದ್ದಿ

ಗೌರಿಯ ಮುದ್ದಾದ” ಹಾಡಿಗೆ ಸಖತ್ ರೆಸ್ಪಾನ್ಸ್ : ಇಂದ್ರಜಿತ್ ಲಂಕೇಶ್ ಪುತ್ರನ ಭರ್ಜರಿ ತಯಾರಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಆಗಸ್ಟ್ 15ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಅಷ್ಟೇ ಅಲ್ಲ, ಸಿನಿಮಾದ ಹಾಡುಗಳ ಮೂಲಕ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗೆ “ಗೌರಿ” ಚಿತ್ರದ “ಮುದ್ದಾದ” ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಗಿದ್ದು ಎಲ್ಲೆಡೆ ಜೋರು ಸದ್ದು ಮಾಡಿದೆ. ಅಂದಹಾಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ “ಗೌರಿ” ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದು ಎಲ್ಲರಿಗೂ ಗೊತ್ತೆ ಇದೆ. ಈ ವೇಳೆ ಮೊನಾಲಿಸ ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ”ಗೌರಿ” ಚಿತ್ರದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಇದ್ದರು.

ಆ ಹಾಡಿಗೆ ಸಿಕ್ಕಾ ಪಟ್ಟೆ ಕಾಮೆಂಟ್ಸ್ ಬರುತ್ತಿದೆ. ಅಷ್ಟೇ ಅಲ್ಲ, ಮುದ್ದಾದ ಹಾಡಿನ ರೀಲ್ಸ್ ಕೂಡ ಶುರುವಾಗಿದೆ. ಈಗಾಗಲೇ ಟೈಮ್ ಬರುತ್ತೆ ಎಂಬ ಸಾಂಗ್ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹಾಟ್ ಫೇವರ್ ಎನಿಸಿಕೊಂಡಿದೆ.

“ಗೌರಿ” ಹಾಡಿಗೆ ಕೆ.ಕಲ್ಯಾಣ್ ಹಾಗೂ “ಮುದ್ದಾದ” ಹಾಡಿಗೆ ಕವಿರಾಜ್ ಸಾಹಿತ್ಯವಿದೆ.

ಇನ್ನು “ಗೌರಿ” ಚಿತ್ರದಲ್ಲಿ ಏಳು ಹಾಡುಗಳಿದ್ದು,. ಸಂಗೀತ ಪ್ರಧಾನ ಸಿನಿಮಾ ಇದು. ಕವಿರಾಜ್ ಅವರ ಮುದ್ದಾದ ಹಾಡಿಗೆ, ನಿಹಾಲ್ ತವ್ರು ಧ್ವನಿ ಇದೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
ಕೆ.ಕಲ್ಯಾಣ್ ಅವರು ಬರೆದ ಹಾಡನ್ನು, ಇಂದ್ರಜಿತ್ ಅವರ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. ಚಿತ್ರಕ್ಕೆ “ಯು” ಸರ್ಟಿಫಿಕೇಟ್ ಸಿಕ್ಕಿದೆ.

Categories
ಸಿನಿ ಸುದ್ದಿ

ಭಗವತಿ ಇದು ಮಕ್ಕಳ ಸಾಹಸದ ಕಥೆ

ಬಂಗಾರಿ, ಶಿವನಪಾದ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ಮಾಚಂದ್ರು ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ಮಕ್ಕಳ ಸಾಹಸದ ಕಥೆ ಇರುವ ಮತ್ತೊಂದು ಚಿತ್ರ ಭಗವತಿ. ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ವಿಜಯ ನಗರದ ಮಾರುತಿ ಮಂದಿರದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ವಿದ್ಯಾಧರೆ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದೆ.

ಈ ಹಿಂದೆ ಲೂಸ್ ಮಾದ ಯೋಗಿ, ರಾಗಿಣಿ ಅಭಿನಯದ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಶಿವನಪಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಈ ಸಲ ಮಕ್ಕಳ ಸಾಹಸದ ಕಥಾನಕ‌ ಒಳಗೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಿಡಿದುನಿಂತ ಮಕ್ಕಳು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಗೆಲ್ಲುವಂಥ ಮಕ್ಕಳ ಸಾಹಸಮಯ ಕಾಥಾಹಂದರ ಈ ಚಿತ್ರದಲ್ಲಿದೆ. ಈಗಿನ ಜನರೇಶನ್ ಕುರಿತಾದ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರದಲ್ಲಿ ಮಕ್ಕಳು ಹೇಗೆ ಹೋರಾಡಿ ಗೆಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ರೋಚಕ ಕಥೆಯೊಂದಿಗೆ ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ರಾಜೇಶ್ ಗೌಡ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ.

ಆಗಸ್ಟ್ 5ರಿಂದ ಆರಂಭಿಸಿ ಬೆಂಗಳೂರು, ಕನಕಪುರ ಹಾಗೂ ಮಡಿಕೇರಿಯ ಸುತ್ತಮುತ್ತ ಭಗವತಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಬಾಲ ಕಲಾವಿದರಾದ ರಿಷಿಕಾ ರಾಮ್, ದೀಪಕ್ ಪಿ.ಕೆ, ಅದ್ವೈತ್ ಪ್ರೇರಣ್, ಅದೇಶ್ ಪ್ರೇರಣ್, ಅಭಿನವ್ ಸಮರ್ಥ, ವೇದಾಂತ್, ಮೇಘನಾ, ಮಾನ್ವಿ, ರೋಶಿನಿ, ತೇಜಸ್, ಸುಷ್ಮಾ, ಶ್ವೇತಾ, ವಿಷ್ಣು, ಜಿ.ಡಿ. ಹೇರಂಭ , ಭಾನು, ಮೋಹನ್ ಕುಮಾರ್ ಡಿ.ಕೆ. ಸತೀಶ್, ಶರತ್, ಹರ್ಷ. ಮುಂತಾದವರು ಅಭಿನಯಿಸುತ್ತಿದ್ದಾರೆ. ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತಿದೆ.

Categories
ಸಿನಿ ಸುದ್ದಿ

ಇದು ಜವಾರಿ ಹುಡುಗನ ಕನಸು: ಜುಲೈ 26ಕ್ಕೆ ರಕ್ತಾಕ್ಷ ರಿಲೀಸ್

ಶಾಲೆಯ ದಿನಗಳಲ್ಲೇ ಸಿನಿಮಾ ಕನಸು ಕಂಡಿದ್ದ ರೋಹಿತ್ ಕೊನೆಗೂ ಕಷ್ಟ ಪಟ್ಟ ತಾನೇ ದುಡಿದು ಹಾಕಿ ನಿರ್ಮಾಣ‌ ಮಾಡಿದ ಸಿನಿಮಾ ರಕ್ತಾಕ್ಷ. ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿರುವ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಅಗಮನವಾಗುತ್ತಲೇ ಇದೆ. ಆ ಸಾಲಿಗೆ ರಕ್ತಾಕ್ಷ ಸಿನಿಮಾದ ಹೀರೋ ರೋಹಿತ್ ಕೂಡ ಒಬ್ಬರು, ಹೌದು ರೋಹಿತ್ ಉತ್ತರ ಕರ್ನಾಟಕ ಮೂಲದ ಜವಾರಿ ಹುಡುಗ.

ರಕ್ತಾಕ್ಷ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಾಯಕರಾಗಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರೋಹಿತ್ ಅವರ ಕನಸಿನ ರಕ್ತಾಕ್ಷ ಚಿತ್ರ ಜುಲೈ 26 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ.

ಅಂದಹಾಗೆ, ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ವಾಸುದೇವ ಎಸ್.ಎನ್. ಈ ಸಿನಿಮಾದ ನಿರ್ದೇಶಕರು. ಇವರಿಗೂ ಇದು ಚೊಚ್ಚಲ ಚಿತ್ರ.

ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಹೊಸಬರ ವಿಭಿನ್ನ ಪ್ರಯತ್ನ ಇದಾಗಿದ್ದು, ಚಿತ್ರಕಥೆ ಹಾಗು ನಿರೂಪಣಾ ಶೈಲಿ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಹೀರೋ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ ಚಿತ್ರದ ಹೈಲೆಟ್. ಚಿತ್ರದ ಮತ್ತೊಂದು ವಿಶೇಷ ಅಂದರೆ, ನಟ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಟ್ರೇಲರ್ ಕೂಡ ಭರ್ಜರಿ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ರೋಹಿತ್, ಪ್ರಮೋದ್ ಶೆಟ್ಟಿ, ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ,ರಚನಾ ದಶರಥ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಇತರರು ಇದ್ದಾರೆ.

ಇನ್ನು, ಚಿತ್ರಕ್ಕೆ ದಾಸ್ ಮೋಡ್ ಅವರ ಸಂಗೀತವಿದೆ. ಸುಜಿತ್ ಹಾಗು ವೆಂಕಟರಾಮಯ್ಯ ಅವರ ಸಾಹಿತ್ಯ ಚಿತ್ರಕ್ಕಿದೆ. ವಸಿಷ್ಠ ಸಿಂಹ, ಸುಪ್ರಿಯಾ ರಾಮ್ ಹಾಡಿದ್ದಾರೆ. ಆದರ್ಶ್ ಶಿರಾಸ್ ಅವರ ಛಾಯಾಗ್ರಹಣವಿದೆ. ಸತೀಶ್ ಚಂದ್ರಯ್ಯ ಸಂಕಲನ ಮಾಡಿದರೆ, ಸ್ಟಂಟ್ ಶಿವ ಅವರ ಸಾಹಸವಿದೆ.

ರೋಹಿತ್ ಉತ್ತರ ಕರ್ನಾಟಕದ ಹುಡುಗ. ಹಾಗಾಗಿ ಹುಬ್ಬಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಅಪ್ಪು ಹುಟ್ಟುಹಬ್ಬ ಸಂದರ್ಭದಲ್ಲಿ ರಕ್ತಾಕ್ಷ ಚಿತ್ರತಂಡದಿಂದ ‘ಅಪ್ಪು’ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿತ್ತು. ಸಾವರ್ಜನಿಕ ಕಾರ್ಯಕ್ರಮದಲ್ಲಿ ರಕ್ತಾಕ್ಷ ತಂಡದ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.

ರೋಹಿತ್ ತೆರೆ ಮೇಲೆ ಹೀರೋ ಮಾತ್ರವಲ್ಲ, ತೆರೆ ಹಿಂದೆಯೂ ಮೆಚ್ಚುಗೆ ಕೆಲಸ ಮಾಡುತ್ತಿದ್ದಾರೆ. ಸದ್ದಿಲ್ಲದೆಯೇ ಒಂದಷ್ಟು ಸಾಮಾಜಿಕ‌ಕಾರ್ಯದಲ್ಲಿ ನಿರತರಾದವರು. ಹುಬ್ಬಳ್ಳಿಯ ಅನಾಥಾಶ್ರಮದ ಸುಮಾರು 200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಮಾಡಿದ್ದಾರೆ. ಅನಾಥಾಶ್ರಮ ಹಾಗು ವೃದ್ಧಾಶ್ರಮಗಳಿಗೆ ಪ್ರತಿ ತಿಂಗಳು ಅಪ್ಪು ಹೆಸರಲ್ಲಿ ಕೈಲಾದಷ್ಟು ಆಹಾರ ಧಾನ್ಯದ ಕಿಟ್ ವಿತರಿಸುತ್ತ ಬಂದಿದ್ದಾರೆ‌ ಎಂಬುದು ವಿಶೇಷ.

ಸದ್ಯ ರಕ್ತಾಕ್ಷ ಸಿನಿಮಾ ಜುಲೈ 26 ಕ್ಕೆ ಬರುತ್ತಿದೆ. ರಿಲೀಸ್ ಮುನ್ನವೇ ಕ್ರೇಜ್ ಹುಟ್ಟಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಲಾವಿದರಿದ್ದರೂ ಹೀರೋಗಳ ಸಂಖ್ಯೆ ಇಲ್ಲ. ಆ ಸಾಲಿಗೆ ಈಗ ರೋಹಿತ್ ಮೊದಲ ಸಾಲಲಲ್ಲಿ ಕಾಣುತ್ತಿದ್ದಾರೆ. ಆ ಭಾಗದಲ್ಲಿ ಈಗಾಗಲೇ ಸಿನಿಮಾಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಕನಸು ಕಂಗಳ ಹುಡುಗನ ಕನಸಿನ ಸಿನಿಮಾ ಇದು.

Categories
ಸಿನಿ ಸುದ್ದಿ

ಶಿವಣ್ಣನ 131 ನೇ ಸಿನಿಮಾ ಯಾವುದು ಗೊತ್ತಾ? ಫ್ಯಾನ್ಸ್ ಗೆ ಗುಡ್ ನ್ಯೂಸ್

ಕರುನಾಡ ಕಿಂಗ್ ಶಿವರಾಜ್ ಕುಮಾರ್ 131ನೇ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಶಿವಣ್ಣನ ಜನ್ಮದಿನಕ್ಕೆ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿ ಶಿವಸೈನ್ಯವನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದ ಚಿತ್ರತಂಡವೀಗ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಶೀಘ್ರದಲ್ಲಿಯೇ ಶಿವಣ್ಣನ 131ನೇ ಸಿನಿಮಾದ ಮುಹೂರ್ತ ನೆರವೇರಲಿದೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 131ನೇ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಲು ಚಿತ್ರತಂಡ ಸಜ್ಜಾಗಿದೆ. ಆದಷ್ಟು ಬೇಗ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣ ನಡೆಸಲು ಇಡೀ ಬಳಗ ಸಜ್ಜಾಗಿದೆ. ಅದಕ್ಕಾಗಿ ಇಂದು ಇಡೀ ತಂಡ ಶಿವಣ್ಣನನ್ನು ಭೇಟಿಯಾಗಿದೆ. ಕರುನಾಡ ಕಿಂಗ್ ನಾಗವಾರ ನಿವಾಸಕ್ಕೆ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್ ಎಸ್ ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎಜೆ ಶೆಟ್ಟಿ, ಸಂಕಲನಕಾರ ದೀಪು ಎಸ್ ಕುಮಾರ್ ಭೇಟಿ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಕಾರ್ತಿಕ್ ಅದ್ವೈತ್, ಶಿವಣ್ಣನಿಗೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಘೋಸ್ಟ್ ಖ್ಯಾತಿಯ ವಿಎಂ ಪ್ರಸನ್ನ ಹಾಗೂ ಸೀತಾರಾಮಂ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಸಾಥ್ ಕೊಡುತ್ತಿದ್ದಾರೆ,.
ವಿಕ್ರಂ ವೇದ, ಆರ್ ಡಿ ಎಕ್ಸ್, ಖೈದಿ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ.

ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಮಣ ರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಫಾರೆಸ್ಟ್ ನಲ್ಲಿ ಚಿಕ್ಕಣ್ಣ ಹಾಡು ಕುಣಿತ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ ಫಾರೆಸ್ಟ್ ಚಿತ್ರೀಕರಣ ಮುಕ್ತಾಯ

ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹುದೇ ಉತ್ತಮ ಕಂಟೆಂಟ್ ನೊಂದಿಗೆ ಕನ್ನಡಿಗರ ಮುಂದೆ ಬರಲಿದೆ “ಫಾರೆಸ್ಟ್” ಚಿತ್ರ.

ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ “ಓಡೋ ಓಡೋ” ಹಾಡು ಎನ್ ಎಂ ಕೆ ಸಿನಿಮಾಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ ಹನ್ನೊಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದು. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ “ಫಾರೆಸ್ಟ್” ಚಿತ್ರಕ್ಕಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಗ್ಗ ಹಿಡಿದ ಆರ್ ಚಂದ್ರು: ಹಾರರ್ ಟೀಸರ್ ಬಂತು

ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖಪಾತ್ರದಲ್ಲಿ ನಟಿಸಿರುವ “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು,‌ ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು “ಹಗ್ಗ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ಅವಿನಾಶ್, ನಾನು ಮೂಲತಃ ಮ್ಯಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು “ಹಗ್ಗ” ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ “ಹಗ್ಗ” ನೇ ನಮ್ಮ ಚಿತ್ರದ ನಾಯಕ. ಹಾರಾರ್ ಜಾನರ್ ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.

ಚಿತ್ರಕ್ಕೆ ನಾನೇ ಕಥೆ‌ ಬರೆದು ನಿರ್ಮಾಣ ಮಾಡಿದ್ದೇನೆ.‌ ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗು ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ “ಹಗ್ಗ” ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.

ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು “ಸೂಪರ್ ಹೀರೋ” ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌‌. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.

ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಛ ತಿಳಿಸಿದರು.

ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ.

ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಿರಣ್ಯನ ಕಾರುಣ್ಯ ಮನಸು!

ಚಿತ್ರ ವಿಮರ್ಶೆ

ರೇಟಿಂಗ್: 3/5

ವಿಜಯ್ ಭರಮಸಾಗರ

ಚಿತ್ರ : ಹಿರಣ್ಯ
ನಿರ್ದೇಶನ: ಪ್ರವೀಣ್ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ, ವಿಜಯ್‌ ಕುಮಾರ್‌
ತಾರಾಗಣ: ರಾಜವರ್ಧನ್, ದಿವ್ಯಾ,ಅರವಿಂದ್, ರಿಹಾನ, ದಿಲೀಪ್, ಹುಲಿ ಕಾರ್ತಿಕ್ ಇತರರು.

ಅವನೊಬ್ಬ ಅನಾಥ. ಡಾನ್ ಜೊತೆ ದುಷ್ಟ ಕೆಲಸ. ಸುಪಾರಿ ಕೊಟ್ಟರೆ ಏನ್ ಬೇಕಾದರೂ ಮಾಡೋ ಕ್ರಿಮಿನಲ್. ದಯೆ, ಕರುಣೆ, ಮಾನವೀಯತೆ ಇರದ ಕಲ್ಲು ಹೃದಯದವನು. ಅಂಥ ಕ್ರಿಮಿನಲ್ ಒಂದು ಡೀಲ್ ಒಪ್ಪುತ್ತಾನೆ. ಮಗುವೊಂದನ್ನು ಕಿಡ್ನಾಪ್ ಮಾಡಿ ಡಾನ್ ಕೈಗೆ ಕೊಡಬೇಕು. ಇದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.

ರಾಜವರ್ಧನ್ ಮೊದಲ ಸಲ ಇಲ್ಲಿ ವಿಭಿನ್ನ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ. ಒಂದು ಸರಳ ಕಥೆಗೆ ನಿರೂಪಣೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ಆರಂಭದಲ್ಲಿ ಅಷ್ಟೇನೂ ಕುತೂಹಲ ಎನಿಸಲ್ಲ.ಮಧ್ಯಂತರ ಬಳಿಕ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾ ಮಗು ಮತ್ತು ಹೀರೋ ಮೇಲೆ ಸಾಗುತ್ತೆ. ಮೊದಲರ್ಧ ಚಿತ್ರಕಥೆಯ ವೇಗ ಕೊಂಚ ಹೆಚ್ಚಬೇಕಿತ್ತು. ದ್ವಿತಿಯಾರ್ಧ ಸಿನಿಮಾ ಬೇರೇನೆ ಆಯಾಮ ಪಡೆದುಕೊಳ್ಳುತ್ತೆ. ಈ ರೀತಿಯ ಕಥೆ ಬಂದಿವೆಯಾದರೂ, ಇಲ್ಲಿ ಮಗು ಮತ್ತೊಂದು ಹೈಲೆಟ್. ಆ ಮಗು ಯಾರದ್ದು, ಯಾಕೆ ಅ ಮಗುನ ಕೊಲೆ ಮಾಡಲು ವಿಲನ್ ಸಂಚು ಹಾಕ್ತಾನೆ, ಆ ಮಗು ಹೀರೋ ಕೈಯಲ್ಲಿ ಸಿಕ್ಕ ಬಳಿಕ ಏನೆಲ್ಲಾ ಆಗುತ್ತೆ, ಅಷ್ಟಕ್ಕೂ ಕಲ್ಲು ಹೃದಯದ ಹೀರೋ ಮನಸ್ಸು ಕರಗುತ್ತಾ? ಇವಿಷ್ಟು ಪ್ರಶ್ನೆಯಲ್ಲೇ ಸಿನಿಮಾ ಅರ್ಧ ಮುಗಿದಿರುತ್ತೆ.

ಇಲ್ಲಿ ಕಥೆಯ ಎಳೆ ಚೆನ್ನಾಗಿದೆ. ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ವೇಗ ಹೆಚ್ಚಿಸಬೇಕಿತ್ತು. ಮುಖ್ಯವಾಗಿ ಇಂತಹ ಸಿನಿಮಾಗಳಿಗೆ ಸಂಕಲನ ಮುಖ್ಯ. ಅದಿಲ್ಲಿ ಮತ್ತಷ್ಟು ಚುರುಕಾಗುವ ಅಗತ್ಯವಿತ್ತು. ಆದರೂ ಸಿನಿಮಾ ಥ್ರಿಲ್ ಕೊಡುವ ಅಂಶಗಳೊಂದಿಗೆ ಸಾಗುತ್ತೆ. ಎಲ್ಲೋ ಒಂದು ಕಡೆ ಟ್ರಾಕ್ ಬದಲಾಗ್ತ ಇದೆಯೇ ಎನ್ನುವಷ್ಟರಲ್ಲಿ ಹಾಡು ಬಂದು ಮತ್ತದೇ ಟ್ರಾಕ್ ಗೆ ಕರೆದೊಯ್ಯುತ್ತೆ. ಒಂದರ್ಥದಲ್ಲಿ ಮಗು ಕಿಡ್ನಾಪ್ ದೃಶ್ಯ ಮತ್ತು ಆ ಮಗುವನ್ನು ಕಾಪಾಡುವ ಸೀನ್ ಸಿನಿಮಾದ ಹೈಲೆಟ್. ಇಡೀ ಸಿನಿಮಾದ ಕೇಂದ್ರಬಿಂದು ಆ ಮಗು. ಆ ಬಗ್ಗೆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.

ಕಥೆ ಎಳೆ ಇದು..

ಅವನ ಹೆಸರು ರಾಣ. (ರಾಜವರ್ಧನ) ದುಡ್ಡು ಕೊಟ್ಟರೆ ಕೊಲೆ ಮಾಡೋಕೂ ಹಿಂದೆ ಮುಂದೆ ನೋಡಲ್ಲ. ಒಂದು ಸಮಯದಲ್ಲಿ ಮಗುವೊಂದರ ಕಿಡ್ನಾಪ್‌ಡೀಲ್ ಸಿಗುತ್ತೆ. ಆ ಮಗುವನ್ನು ಕಿಡ್ನಾಪ್‌ಮಾಡ್ತಾನೆ. ಇನ್ನೇನು ಆ ಡಾನ್ ಮಗುನ ಕೊಲೆ ಮಾಡಬೇಕು ಅನ್ನುವಷ್ಟರಲ್ಲಿ ಆ ರಾಣನಿಗೆ ಒಂದು ಘಟನೆ ನೆನಪಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಟ್ವಿಸ್ಟ್.

ಇಲ್ಲಿ ಮಗು ಕೊಲೆ ನಡೆಯುತ್ತಾ? ಅದರ ಸುತ್ತವೇ ಕಥೆ ಸಾಗುತ್ತೆ. ಬಹುಶಃ ಮಗುವೇ ಕಥೆಯ ಮೂಲ. ಇಲ್ಲಿ ಎರಡು ಟ್ವಿಸ್ಟ್ ಗಳಿವೆ. ಊಹೆ ಮಾಡದ ಕಥೆಯ ಎಳೆ ಅದು. ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ರಾಜವರ್ಧನ್ ಇಲ್ಲಿ ಎಂದಿಗಿಂತ ಚೆನ್ನಾಗಿ, ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಜೊತೆಗೆ ಸ್ಟಂಟ್ ನಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ. ಆರಡಿ ಹೈಟಿಗೆ ಜಬರ್ದಸ್ತ್ ಫೈಟು ಹೈಲೆಟ್. ಮಾಸ್ ಹೀರೋ ಗೆ ಇರಬೇಕಾದ ಎಲ್ಲಾ ಲಕ್ಷಣ ಅವರಲ್ಲಿದೆ. ಕಥೆಗೆ ಪೂರಕವಾಗಿ ಅವರ ಹಾವಭಾವವೂ ಇದೆ. ಕೋಪಿಷ್ಟನಾಗಿ ಕಷ್ಟ ಎನಿಸಿದರೂ, ಮಗು ಕಾಪಾಡುವ ಕರುಣಾಮಯಿ ಆಗಿ ಇಷ್ಟವಾಗುತ್ತಾರೆ.

ದಿವ್ಯಾ ಅವರ ಪಾತ್ರ ಇಲ್ಲಿ ಸ್ಪೆಷಲ್ ಎನಿಸುತ್ತೆ. ಅವರಿಲ್ಲಿ ಸಖತ್ ಗ್ಲಾಮರ್ ಆಗಿದ್ದರೂ, ನಮ್ಮ ನಡುವೆ ಕಾಣುವ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಹಾಡೊಂದರಲ್ಲಿ ಪಡ್ಡೆಗಳ ನಿದ್ದೆಗೆಡಿಸುವಂತಹ ಸ್ಟೆಪ್ ಹಾಕಿದ್ದಾರೆ.
ರಿಹಾನಾ ತಾಯಿಯಾಗಿ ಇಷ್ಟವಾಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ದಿಲೀಪ್ ಇಷ್ಟವಾಗುತ್ತಾರೆ. ತೆರೆ ಮೇಲೆ ಇರುವಷ್ಟು ಕಾಲ ಹುಲಿ ಕಾರ್ತಿಕ್ ಗಮನ ಸೆಳೆಯುತ್ತಾರೆ. ಅರವಿಂದ ಸಿಕ್ಕ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿಕೊಂಡಿವೆ.

ಇನ್ನು, ಜೂಡಾ ಸ್ಯಾಂಡಿ ಸಂಗೀತದ ಎರಡು ಹಾಡುಗಳು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಬೇಕಿತ್ತು. ಯೋಗೇಶ್ವರನ್‌ ಕ್ಯಾಮೆರಾ ಕೈ ಚಳಕ ಸೊಗಸಾಗಿದೆ. ಸ್ಟಂಟ್ಸ್ ಸಿನಿಮಾದ ಹೈಲೆಟ್, ಕಾರು ಚೇಸ್ ಇಲ್ಲಿನ ಆಕರ್ಷಣೆ. ಎನ್ನಬಹುದು.

Categories
ಸಿನಿ ಸುದ್ದಿ

ಸೈಮಾ ನಾಮಿನೇಷನ್-ಸೈಮಾ ರೇಸ್ ನಲ್ಲಿ ಕಾಟೇರ, ಸಪ್ತ ಸಾಗರದಾಚೆ ಎಲ್ಲೋ ಸೈಡ್-ಎ

ಪ್ರತಿಷ್ಠಿತ ಸೈಮಾ ಪ್ರಶಸ್ತಿ ಮತ್ತೆ ಬಂದಿದೆ. ಈ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೈಮಾ ಎಂದರೆ, ‘ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್’ ಎಂದು. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾತ್ರವೇ ಕೊಡಲಾಗುತ್ತದೆ. ಪ್ರತಿ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು, ಕಲಾವಿದರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. 2024ರ ಸೈಮಾ ನಾಮೀಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನ ಯಾವ ಸಿನಿಮಾಗಳು ರೇಸ್ ನಲ್ಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

SIIMA ನ ಅಧ್ಯಕ್ಷರಾದ ಬೃಂದಾ ಪ್ರಸಾದ್ ಅಡುಸುಮಿಲ್ಲಿ ಅವರು 2023ರ SIIMA ನಾಮನಿರ್ದೇಶನ ಸಿನಿಮಾ ಪಟ್ಟಿ ಘೋಷಿಸಿದ್ದಾರೆ. ನಾಮನಿರ್ದೇಶನ ಸಿನಿಮಾ ಬಗ್ಗೆ ಮಾತನಾಡುತ್ತಾ ಬೃಂದಾ ಪ್ರಸಾದ್ “ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾದ ಪ್ರಾದೇಶಿಕ ಸಿನಿಮಾಗಳು ಭಾಷೆಯನ್ನು ಮೀರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ SIIMA 2024 ಪ್ರಬಲ ಸ್ಪರ್ಧಿಗಳ ಪಟ್ಟಿಯನ್ನು ಹೊಂದಿರುತ್ತದೆ” ಎಂದಿದ್ದಾರೆ.

ಸೈಮಾ ರೇಸ್ ನಲ್ಲಿರುವ ಸಿನಿಮಾಗಳು

ಕನ್ನಡ-ಕಾಟೇರ
ತೆಲುಗು-ದಸರಾ
ತಮಿಳು-ಜೈಲರ್
ಮಲಯಾಳಂ-2018

ಕಾಟೇರ ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನಾನ್ನ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ.

ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಮಲಯಾಳಂನಲ್ಲಿ, ಟೋವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.

ಆನ್‌ಲೈನ್ ವೋಟಿಂಗ್ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಮತ್ತು ಚಲನಚಿತ್ರಗಳಿಗೆ www.siima.in ಮತ್ತು SIIMA ನ ಫೇಸ್‌ಬುಕ್ ಪುಟದಲ್ಲಿ ವೋಟ್ ಮಾಡಬಹುದು.
ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು 2024ರ ಸೈಮಾ ನಡೆಯಲಿದೆ.

error: Content is protected !!