Categories
ಸಿನಿ ಸುದ್ದಿ

ಜೀ ವಾಹಿನಿ ಹೊಸ ಸಾಹಸ: ಅಯ್ಯನ ಮನೆ ಮಿನಿ ವೆಬ್ ಸೀರೀಸ್ ಶುರು

25ರಿಂದ ʼಅಯ್ಯನ ಮನೆʼಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್! ಇದು ರಮೇಶ್ ಇಂದಿರಾ ನಿರ್ದೇಶನದ ಸೀರೀಸ್

ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದು ZEE5. ಹಲವು ಸೂಪರ್ ಹಿಟ್ ಸಿನಿಮಾಗಳು ಈ ಒಟಿಟಿ ಫ್ಲಾರ್ಟ್ ನಲ್ಲಿ ಲಭ್ಯವಿದೆ. ಇದೀಗ ZEE5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಕನ್ನಡ ಸಿನಿಮಾಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ನ್ನು ಪರಿಚಯಿಸಿದೆ. ZEE5 ನಿಂದ ಬರ್ತಿರುವ ಮೊದಲ ಕನ್ನಡ ಮಿನಿ ವೆಬ್ ಸೀರೀಸ್ ನ್ನು ಖ್ಯಾತ ನಿರ್ದೇಶಕ ಹಾಗೂ ಕಲಾವಿದರ ರಮೇಶ್ ಇಂದಿರಾ ನಿರ್ಮಾಣ ಮಾಡಿದ್ದಾರೆ. ಆ ಸೀರೀಸ್ ಗೆ ಅಯ್ಯನ ಮನೆ ಎಂದು ಟೈಟಲ್ ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ.

ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ʼಅಯ್ಯನ ಮನೆʼ ವೆಬ್ ಸೀರೀಸ್ ಗೆ ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಘರ್ಷಿಸುವ ಕಥೆಯನ್ನೊಳಗೊಂಡಿದ್ದು, ಇದೇ ತಿಂಗಳ 25ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.


ಚಿಕ್ಕಮಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರೀ ಕಥೆಯೊಳಗೊಂಡಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಎಕ್ಸೈಟ್ ಆಗುವಂತೆ ಮಾಡುತ್ತದೆ. ಈಗಾಗಲೇ ಹಲವು ಹಿಟ್ ಚಿತ್ರ ಕೊಟ್ಟುರುವ ರಮೇಶ್ ಇಂದಿರಾ ಹೊಸ ಬಗೆಯ ಕಥೆಯ ಮೂಲಕ ಒಟಿಟಿ ಪ್ರೇಕ್ಷಕರನ್ನು ತಲುಪಲಿದ್ದಾರೆ.

ಅಯ್ಯನ ಮನೆ ವೆಬ್ ಸೀರೀಸ್ ಬಗ್ಗೆ ನಿರ್ದೇಶಕರಾದ ರಮೇಶ್ ಇಂದಿರಾ ಮಾತನಾಡಿ, ಅಯ್ಯನ ಮನೆ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಫ್ಯಾಮಿಲಿ ಕಥೆಯೊನ್ನೊಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ಅಯ್ಯನ ಮನೆ ವೆಬ್ ಸರಣಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರುವಂತೆ ಮಾಡುತ್ತದೆ ಎಂದರು.

ಜಾಜಿ ಪಾತ್ರ ಮಾಡಿರುವ ಖುಷಿ ರವಿ ಮಾತನಾಡಿ, ಮುಗ್ದತೆ, ಗಂಡನ ಪ್ರೀತಿಯ ಹೆಂಡತಿ, ಸಂಪ್ರದಾಯಕ್ಕೆ ನಡೆದುಕೊಳ್ಳುವ ಹೆಣ್ಣು ಮಗಳಾಗಿ ನಟಿಸಿದ್ದೇನೆ. ಇದೊಂದು ಎಮೋಷನ್ ಪಯಣ. ಜೊತೆಗೆ ಅನೇಕ ರಹಸ್ಯಗಳ ಕಥಾಹಂದರ. ನಾನು ವೆಬ್ ಸರಣಿ ನೋಡಲು ಕಾತರಳಾಗಿದ್ದೇನೆ ಎಂದು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ವರ್ಣವೇದಂ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಹಾಡಿಗೆ ಸೋನು ನಿಗಂ ದನಿ

ತಮ್ಮ ಅಮೋಘ ಕಂಠಸಿರಿಯಿಂದ ವಿಶ್ವದಾದ್ಯಂತ ಹೆಸರು ಮಾಡಿರುವ ಜನಪ್ರಿಯ ಗಾಯಕ ಸೋನು ನಿಗಂ, “ನಾನು ಮತ್ತು ಗುಂಡ” ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ವರ್ಣವೇದಂ”‌ ಚಿತ್ರಕ್ಕಾಗಿ ” ಓ ವೇದ ಓ ವೇದ” ಎಂಬ ಸುಂದರ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಗಗನ್ ಭಡೇರಿಯಾ ಸಂಗೀತ ನೀಡಿರುವ ಈ ಹಾಡನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರೆ ಬರೆದಿದ್ದಾರೆ. ಇತ್ತೀಚಿಗೆ ಈ ಹಾಡಿನ ಧ್ವನಿಮುದ್ರಣ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣವಾಗಲಿದೆ. ಭೂಷಣ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಶ್ರೀನಿವಾಸ್ ತಿಮ್ಮಯ್ಯ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭೀಮೇಶ್, ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ಗೋಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಲರ್ ಮಾಫಿಯಾ ಕುರಿತಾದ ಕಥಾಹಂದರ ಹೊಂದಿರುವ ಕಾರಣ ಈ ಚಿತ್ರಕ್ಕೆ “ವರ್ಣವೇದಂ” ಎಂದು ಶೀರ್ಷಿಕೆ ಇಡಲಾಗಿದೆ.

ಚಿತ್ರದಲ್ಲಿ ನಾಯಕಿಯ ಹೆಸರು ವರ್ಣ ಹಾಗೂ ನಾಯಕನ ಹೆಸರು ವೇದ ಎಂದು ಹೇಳಿದ್ದಾರೆ‌. ನೈಋತ್ಯ ಹಾಗೂ ಪ್ರತೀಕ್ಷ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.
ಹೆಸರಾಂತ ಕಲಾವಿದರ ತಾರಾಬಳಗವಿರುವ “ವರ್ಣವೇದಂ” ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣವಿದೆ.

ಗಗನ್ ಭಡೇರಿಯಾ ಸಂಗೀತ ಸಂಯೋನೆಯಲ್ಲಿ ಆರು ಸುಮಧುರ ಹಾಡುಗಳು ಚಿತ್ರದಲ್ಲಿದ್ದು, ಸೋನು ನಿಗಂ ಸೇರಿದಂತೆ ಜನಪ್ರಿಯ ಗಾಯಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಗ್ಲೋಬಲ್’ ಲೆವೆಲಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ: .ಪಾಕಿಸ್ತಾನ ಪ್ರವಾಸ ಮಾಡಿದ ಮೊದಲ ಯೂಟ್ಯೂಬರ್!

ಇದು ಸೋಷಿಯಲ್ ಮೀಡಿಯಾ ಜಮಾನ..ಮನೆ ಮನೆಯಲ್ಲಿಯೂ ಯೂಟ್ಯೂಬ್ ಗಳ ಹಂಗಾಮ. ಇಂತಹ ಕಾಲಘಟ್ಟದಲ್ಲಿ ಯೂಟ್ಯೂಬರ್ ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ ಮಾಡಿದ್ದಾರೆ.

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಪಾಕಿಸ್ತಾನದಲ್ಲಿ ಸುತ್ತಿ ವಿಡಿಯೋ ಮಾಡಿದ ಮೊದಲ ಯೂಟ್ಯೂಬರ್ ಎಂಬ ಖ್ಯಾತಿ ಗ್ಲೋಬಲ್ ಕನ್ನಡಿಗ ರಾಮ್ ಗೆ ಸಿಕ್ಕಿದೆ. ಇನ್ನೂ ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.

ಫೆಬ್ರವರಿ 2025 ಭಾರತದ ಅತ್ತಾರಿ ಗಡಿಯಿಂದ ಪಾಕಿಸ್ತಾನದ ಅಫೀಷಿಯಲ್ ವೀಸಾ ಒಂದಿಗೆ ಪಾಕಿಸ್ತಾನದ ವಾಗಾ ಗಡಿಯ ಕಡೆಗೆ ಕಾಲಿಟ್ಟು ಅಲ್ಲಿಂದ 22 kms ದೂರದಲ್ಲಿ ಇರುವ ಲಾಹೊರ್ ನಗರಕ್ಕೆ ತಲುಪಿದೆ. ಅಂದಿನ ಸಂಜೆ ಸಿಖ್ ಸಮುದಾಯದ ದೇರಾ ಸಹಿಬ್ ಗುರುದ್ವಾರವನ್ನು ಅನ್ವೇಷಸಿ ನಂತರ ಲಾಹೋರ್ ನಗರದ ಸುಪ್ರಸಿದ್ಧ ಫುಡ್ ಸ್ಟ್ರೀಟ್ ಸುತ್ತಾಡಿ, ಅಲ್ಲಿಂದ ಬಹಳ ವಿಶೇಷವಾದ ಹವೇಲಿ ರೆಸ್ಟುರೆಂಟ್ ನಲ್ಲಿ ಬಾದ್ಶಾಹಿ ಮಸೀದಿಯ ವ್ಯೂ ನಲ್ಲಿ ಕುಳಿತು ರಾತ್ರಿಯ ಉಪಹಾರ ಮಾಡಿದೆ.

ಎರಡೇನೆಯ ದಿನ ಲಾಹೋರ್ ನ ಗಲ್ಲಿ ಗಳನ್ನು ಸುತ್ತಿ ಅಲ್ಲಿನ ಲೋಕಲ್ ಜೀವನವನ್ನು ಗಮನಿಸಿದ್ದು. ಅಂದು ಚಾಂಪಿಯನ್ಸ್ ಟ್ರೋಫಿ ಭಾರತದ ಹಾಗು ಪಾಕಿಸ್ತಾನದ ಪಂದ್ಯ ಎಂಜಾಯ್ ಮಾಡಿ, ಅಂದಿನ ದಿನ ಅಲ್ಲಿನ ಲೋಕಲ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಅವರ ಜೊತೆ ಮಾತಾಡಿದ್ದು ವಿಶೇಷವಾಗಿತ್ತು.

ನಮ್ಮ ಜೊತೆಯಲ್ಲಿ ಲಾಹೋರ್ ಪೊಲೀಸ್ ನ 24/7 ಬಂದೋಬಸ್ತ್ ಇರುತಿತ್ತು, ಪೊಲೀಸ್ ಕೈಯಲ್ಲಿ ಎಕೆ 47 ಬಂದೂಕು, ಪ್ರತಿ ಊರಿನ ಬದಲಾವಣೆಯ ದಿನ ಅಲ್ಲಿನ ಲೋಕಲ್ ಪೊಲೀಸ್ ಸ್ಟೇಷನ್ ಹೋಗಿ ನಾನು ರಿಜಿಸ್ಟರ್ ಮಾಡಬೇಕಾದದ್ದು ಕಡ್ಡಾಯವಾಗಿತ್ತು. ಲಾಹೋರ್ ನ ರಂಗಲೀಲಾ ಆಟೋದಲ್ಲಿ ಓಡಾಡಿದ್ದು ಮರೆಯಲಾರದ ಅನುಭವ. ಪಾಕಿಸ್ತಾನದ ಸರ್ವೇ ಸಾಮಾನ್ಯ ಜನರು ತುಂಬಾ ಖುಷಿಯಾಗಿದ್ದರು. ನಾನು ಭಾರತೀಯ ಅಂತ ತಿಳಿದಮೇಲೆ. ಒಬ್ಬರು ಕೂಡಾ ಕೋಪ ಆವೇಶ ತೋರಿಸಲಿಲ್ಲ.

ಪಾಕಿಸ್ತಾನದ katasraj ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದು ನೆನಪಿನಲ್ಲಿ ಉಳಿಯುವಂತಹದ್ದು. ಅಲ್ಲಿ ಭಗವಾನ್ ಕೃಷ್ಣ ಸ್ಥಾಪಿಸಿರುವ ಶಿವಲಿಂಗಕ್ಕೆ ಕರ್ನಾಟಕದ ಪಂಚೆ ಸಿಲ್ಕ್ ಶರ್ಟ್ ಹಾಕಿ ಗ್ಲೋಬಲ್ ಕನ್ನಡಿಗ ಪೂಜೆ ಮಾಡಿದ್ದು ಬಹಳ ವಿಶೇಷ. ಅಲ್ಲಿ ಶ್ರೀ ರಾಮನ ದೇವಸ್ಥಾನ, ಹನುಮಂತನ ದೇವಸ್ಥಾನ ಕೂಡಾ ಭೇಟಿ ನೀಡಿ ಆಶೀರ್ವಾದ ಪಡೆದಿದ್ದು ವಿಶೇಷ.


ನಂತರ ಹೋಗಿದ್ದು ಒಂದು ಪಾಕಿಸ್ತಾನಿ ಹಳ್ಳಿಗೆ, ಅಲ್ಲಿನ ಜನರ ನಿತ್ಯ ಜೀವನ, ವ್ಯಾಪಾರ ವಹಿವಾಟು ತಿಳಿದು ಅವರ ಜೀವನ ಶೈಲಿ ಅರಿತಿದ್ದು ವಿಶೇಷ . ನಂತರ ಹೋಗಿದ್ದು ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಬಾದ್ ಗೆ, ಅಲ್ಲಿಯ ಮೆಲೋಡಿ ಮಾರುಕಟ್ಟೆ, ಲೋಕಲ್ ಸ್ಟ್ರೀಟ್ ಫುಡ್, ಅಲ್ಲಿನ ಉಡುಪುಗಳ ಅಂಗಡಿ ಹಾಗೆ ಅಲ್ಲಿನ ಪ್ರಸಿದ್ಧವಾದ ಹಿಲ್ ಸ್ಟೇಷನ್ ಆದ daman- e – koh ಗೆ ಮಳೆಯಲ್ಲಿ ಛತ್ರಿ ಹಿಡಿದು ಭೇಟಿ ನೀಡಿ ಅಲ್ಲಿ ಬಂದ ಲೋಕಲ್ ಜನರ ಜೊತೆ ಮಾತಾಡಿ ಅವರ ಅಭಿಪ್ರಾಯ ಅರಿತಿದ್ದು ಚೆನ್ನಾಗಿ ಇತ್ತು.

ಅಲ್ಲಿನವರು ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಉಂಟು. ಇಸ್ಲಾಮಬಾದ್ ನ ಹಣ್ಣು ತರಕಾರಿಗಳ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ದರಗಳನ್ನು ಅರಿತಿದ್ದು, ಲಾಹೋರ್ ನ ಐತಿಹಾಸಿಕ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿನ ರುಚಿಯಾದ ಲೋಕಲ್ ಚಿಕನ್ ಬಿರಿಯಾನಿಯನ್ನು ಸೇವಿಸಿದ್ದು ಅದ್ಭುತವಾಗಿತ್ತು. ಒಟ್ಟು 7 ದಿನಗಳ ಪ್ರವಾಸ, ಯಾವುದೇ ರೀತಿ ಅಹಿತಕರ ಘಟನೆ ಜರುಗದೆ ಮುಕ್ತ ಮನಸ್ಸಿನಿಂದ ಪಾಕಿಸ್ತಾನ್ ದೇಶವನ್ನ ಸುತ್ತಾಡಿದ್ದು ಸದಾ ಮನಸಿನಲ್ಲಿ ಹಾಗು ಗ್ಲೋಬಲ್ ಕನ್ನಡಿಗನ ವಿಡಿಯೋಗಲ್ಲಿ ಸದಾ ನೆನಪಿನಲ್ಲಿ ಉಳಿಯುವುದು.

Categories
ಸಿನಿ ಸುದ್ದಿ

ʼಅಜ್ಞಾತವಾಸಿʼ ಏಪ್ರಿಲ್ 11ಕ್ಕೆ ರಿಲೀಸ್: ಇದು ರಂಗಾಯಣ ರಘು ಚಿತ್ರ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಜ್ಞಾತವಾಸಿ ಸಿನಿಮಾ ಕೂಡ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ. ಆದರೆ ಈ ಚಿತ್ರ ಬೇರೆಯದ್ದೇ ಕಂಟೆಂಟ್ ಹೊಂದಿದೆ ಅನ್ನೋದನ್ನು ಟ್ರೇಲರ್ ಹೇಳುತ್ತಿದೆ. ಅಜ್ಞಾತವಾಸಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆಯುತ್ತಿದೆ.

ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮಾತನಾಡಿ, ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವಿ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ. ಗುಲ್ಟು ಬಳಿಕ ಏನೂ ಮಾಡಬೇಕು ಅಂದುಕೊಂಡಾಗ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು. ಹೇಮಂತ್ ಅವರಿಗೆ ಕಥೆ ಹೇಳಿದ ಅವರಿಗೆ ಇಷ್ಟವಾಯ್ತು. ಏಪ್ರಿಲ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರೂ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಹೇಮಂತ್ ಎಂ ರಾವ್ ಮಾತನಾಡಿ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ಬಳಿಕ ನಾನು ರಕ್ಷಿತ್ ಮಾತಾಡಿಕೊಳ್ಳುತ್ತಿದ್ದೇವು. ಈ ರೀತಿ ಸಿನಿಮಾ ಮಾಡಲು ಯಾಕೆ ಇಷ್ಟು ಒದ್ದಾಟ ಮಾಡಬೇಕು. ಅವತ್ತು ನಾವಿಬ್ಬರು ಈ ರೀತಿಯ ಒಳ್ಳೆ ಕಥೆಗೆ ಬಂಡವಾಳ ಹಾಕಲು ತೀರ್ಮಾನ ಮಾಡಿಕೊಂಡಿದ್ದೇವು. ಅದರಂತೆ ಅಜ್ಞಾತವಾಸಿ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಒಳ್ಳೆ ಸಿನಿಮಾ ಮೇಕರ್. ನಮ್ಮ ಇಂಡಸ್ಟ್ರೀಯ ಬ್ರೈಟ್ ಫಿಲ್ಮಂ ಮೇಕರ್. ರಘು ಸರ್ ಸೇರಿದಂತೆ ಇಡಿ ತಂಡ ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಜನರನ್ನು ನಂಬಿ ಈ ರೀತಿ ಸಿನಿಮಾ ಮಾಡಿದ್ದೇವೆ. ನೀವು ಈ ಚಿತ್ರಗಳಿಗೆ ಬೆಂಬಲ ಕೊಡಿ ಎಂದು ತಿಳಿಸಿದರು.

ರಂಗಾಯಣ ರಘು ಮಾತನಾಡಿ, ಒಬ್ಬರಿಗೊಬ್ಬರು ನಿರ್ದೇಶಕರು ಬೆಳೆಯಲಿ ಎಂದು ಈ ರೀತಿ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ವಿಚಾರ. ಜನಾರ್ಧನ್ ಕಥೆ ಹೇಳಿದಾಗ ಎಲ್ಲಾ ಪಾತ್ರಗಳ ಮೇಲೆ ಹೊಟ್ಟೆ ಕಿಚ್ಚು ಬಂದಿತ್ತು. ಅಷ್ಟೂ ಚೆನ್ನಾಗಿವೆ ಪಾತ್ರಗಳು. ಇದು ಮರ್ಡರ್ ಮಿಸ್ಟ್ರಿ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈ ಚಿತ್ರವನ್ನು ಜನಾರ್ಧನ್ ಹೇಮಂತ್ ಸೇರಿಸುತ್ತಾರೆ. ಆ ರೀತಿ ಕೆಲಸವನ್ನು ಎಲ್ಲರೂ ಮಾಡಿದ್ದಾರೆ. ಇದೊಂದು ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದು ತಿಳಿಸಿದರು.

2 ನಿಮಿಷ 6 ಸೆಕೆಂಡ್ ಇರುವ ಅಜ್ಞಾತವಾಸಿ ಟ್ರೇಲರ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮಲೆನಾಡಿ ಸೊಬಗಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಕಥೆ ರಣರೋಚಕವಾಗಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಕಟ್ಟಿಕೊಟ್ಟಿದ್ದಾರೆ. ಇನ್ನೂ ಎಂದಿನಂತೆ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಟ್ರೇಲರ್ ನಲ್ಲಿಒ ಗಮನಸೆಳೆಯುತ್ತಾರೆ. ಚರಣ್ ರಾಜ್ ಸಂಗೀತ, ಹಾಗೂ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಟ್ರೇಲರ್ ಅಂದವನ್ನು ಹೆಚ್ಚಿಸಿದೆ.

ಅಜ್ಞಾತವಾಸಿ ಚಿತ್ರಕ್ಕೆ ‘ಗುಳ್ಟು’ ಸಾರಥಿ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ರಾಯರ ಸನ್ನಿಧಿಯಲ್ಲಿ ಕಾಲಘಟ್ಟ ಪೋಸ್ಟರ್ ರಿಲೀಸ್

ಬೇಡಿದನ್ನೆಲ್ಲಾ ನೀಡುವ ಕಲಿಯುಗದ ಕಾಮಧೇನುಗಳೆಂದೆ ಖ್ಯಾತರಾದ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನ ಸ್ಥಳ ಮಂತ್ರಾಲಯದಲ್ಲಿ ಲಯನ್ ಚಿಕ್ಕೇಗೌಡ ಟಿ.ಸಿ ತಳಗವಾಡಿ ಅವರು ನಿರ್ಮಿಸಿರುವ ಹಾಗೂ ಕೆ.ಪ್ರಕಾಶ್ ಅಂಬಳೆ ನಿರ್ದೇಶನದ “ಕಾಲಘಟ್ಟ” ಚಿತ್ರದ ಮೊದಲ ಪೋಸ್ಟರ್ ಯುಗಾದಿ ಹಬ್ಬದ ದಿನದಂದು ಬಿಡುಗಡೆಯಾಯಿತು. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಚಿತ್ರತಂಡದವರನ್ನು ಆಶೀರ್ವದಿಸಿದರು.

“ಕಾಲಘಟ್ಟ” ಇದು ಎರಡು “ಕಾಲಘಟ್ಟ”ಗಳಲ್ಲಿ ನಡೆಯುವ ಕಥೆ. ಪೂರ್ವಾರ್ಧ ಮೂವತ್ತು ವರ್ಷಗಳ ಹಿಂದೆ ನಡೆದರೆ, ದ್ವಿತೀಯಾರ್ಧ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಯ ಬಗ್ಗೆ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೈಸೂರು, ನಂಜನಗೂಡು ಹಾಗೂ ಕಳಲೆಯಲ್ಲಿ ಚಿತ್ರೀಕರಣ ನಡೆದಿದೆ.

ಯಗಾದಿಯ ದಿನದಂದು ಮಂತ್ರಾಲಯದ‌ ರಾಯರ ಸನ್ನಿಧಾನದಲ್ಲಿ ನಮ್ಮ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ” ಕಾಲಘಟ್ಟ” ನನ್ನ ನಿರ್ದೇಶನದ ಎರಡನೇ ಚಿತ್ರ. ಇದಕ್ಕೂ ಮೊದಲು “ಖಾಲಿ ಡಬ್ಬ” ಎಂಬ‌ ಚಿತ್ರವನ್ನು ನಿರ್ದೇಶಿಸಿದ್ದೆ. ಅದು ಕೂಡ ತೆರೆಗೆ ಬರಲು ಸಿದ್ದವಾಗಿದೆ ಎಂದು ನಿರ್ದೇಶಕ ಪ್ರಕಾಶ್ ಅಂಬಳೆ ತಿಳಿಸಿದ್ದಾರೆ.

ನಿರ್ದೇಶಕ ಪ್ರಕಾಶ್ ಅಂಬಳೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್ ಅವರ ಛಾಯಾಗ್ರಹಣ, ಎ.ಎಂ.ನೀಲ್ ಸಂಗೀತ ನಿರ್ದೇಶನ, ವೆಂಕಿ ಯು.ಡಿ.ವಿ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.

ಅಭಿಲಾಶ್ ಹಾಗೂ ನಿತಿನ್ “ಕಾಲಘಟ್ಟ” ದ ನಾಯಕರಾಗಿ ನಟಿಸಿದ್ದು, ಮೇಘ ಮತ್ತು ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಶೋಭ್ ರಾಜ್, ಭವ್ಯ, ಪ್ರಶಾಂತ್ ಹಾಗೂ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಫಾರೆಸ್ಟ್ ಗೆ ಯಶಸ್ವಿ 50 ದಿನ: ಈಗ ಅಮೇಜಾನ್ ನಲ್ಲೂ ಮೆಚ್ಚುಗೆ

ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಲ್ಟಿ ಸ್ಟಾರರ್ “ಫಾರೆಸ್ಟ್” ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ಸಾಗುತ್ತಿದೆ.

ಇತ್ತೀಚೆಗಷ್ಟೇ ಕಾಡಿನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲೂ ಸಹ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ವೀಕ್ಷಿಸುತ್ತಿದ್ದು ಮೆಚ್ಚುಗೆಯ ಮಹಾಪೂರವನ್ನೇ ಹರಸುತ್ತಿದ್ದಾರೆ. ಒಂದೊಳ್ಳೆ ಕಂಟೆಂಟ್ ವುಳ್ಳ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಹಂಬಲವಿರುವ ಎನ್ ಎಂ ಕಾಂತರಾಜ್ ಅವರು ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫಾರೆಸ್ಟ್” ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ನಿರ್ಮಾಪಕರು ಧನ್ಯವಾದ ತಿಳಿಸಿದ್ದಾರೆ.

ಚಂದ್ರಮೋಹನ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಅವರೆ ಸಂಭಾಷಣೆಯನ್ನೂ ಬರೆದಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು “ಫಾರೆಸ್ಟ್” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ವಿಜಯ್‌ ಸೇತುಪತಿಗೆ ಪುರಿ ಜಗನ್ನಾಥ್‌ ಸಿನಿಮಾ: ಜೂನ್‌ ಗೆ ಶೂಟಿಂಗ್‌

ತೆಲುಗಿನ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್ ಮೊದಲ ಬಾರಿಗೆ ಮಕ್ಕಳ್ ಸೆಲ್ವನ್ ಖ್ಯಾತಿಯ ವಿಜಯ್ ಸೇತುಪತಿ ಜೊತೆ ಕೈ ಜೋಡಿಸಿದ್ದಾರೆ. ಯುಗಾದಿ ಹಬ್ಬದ ವಿಶೇಷವಾಗಿ ಪುರಿ ಜಗನ್ನಾಥ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌ ಕೊಟ್ಟಿದ್ದಾರೆ.

ಬಹಳ ದಿನಗಳಿಂದಲೂ ಈ ಡೆಡ್ಲಿ ಕಾಂಬಿನೇಷನ್‌ ಒಂದಾಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಅದರಂತೆ ಇಂದು ಪುರಿ ಜಗನ್ನಾಥ್‌ ತಮ್ಮ ಮುಂದಿನ ಚಿತ್ರವನ್ನು ವಿಜಯ್‌ ಸೇತುಪತಿ ಜೊತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯ್‌ ಸೇತುಪತಿಯವರಿಗಾಗಿಯೇ ಪುರಿ ಒಂದೊಳ್ಳೆ ಅದ್ಭುತ ಕಥೆಯನ್ನು ಸಿದ್ದಪಡಿಸಿಕೊಂಡಿದ್ದು, ಹಿಂದೆಂದೂ ಕಾಣದ ಲುಕ್‌ ನಲ್ಲಿ ಅವರನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ.

ಪುರಿ ಕನೆಕ್ಟ್ಸ್‌ ಬ್ಯಾನರ್‌ ನಡಿ ಪುರಿ ಜಗನ್ನಾಥ್‌ ಹಾಗೂ ಚಾರ್ಮಿ ಕೌರ್‌ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್‌ ಆಗಿದ್ದು, ಜೂನ್‌ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಇತ್ತೀಚೆಗೆ ವಿಜಯ್‌ ಸೇತುಪತಿ ಅಭಿನಯದ ಮಹಾರಾಜ ಸಿನಿಮಾ ಬಾಕ್ಸಾಫೀಸ್‌ ನಲ್ಲಿ ದಾಖಲೆ ಬರೆದಿತ್ತು. ಹೀಗಾಗಿ ಸೇತುಪತಿ ಮುಂದಿನ ಪ್ರಾಜೆಕ್ಟ್‌ ಏನು ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ.

Categories
ಸಿನಿ ಸುದ್ದಿ

ಚಿರಂಜೀವಿ ಹೊಸ ಚಿತ್ರಕ್ಕೆ ಪೂಜೆ: 157ಗೆ ಕ್ಲಾಪ್ ಮಾಡಿದ ವಿಕ್ಟರಿ ವೆಂಕಟೇಶ್

ಯುಗಾದಿ ಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್ ನಲ್ಲಿಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ಫಸ್ಟ್ ಶಾಟ್ ಗೆ ಆಕ್ಷನ್ ಕಟ್ ಹೇಳಿದರು. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಸ್ಕ್ರಿಪ್ಟ್ ಹಸ್ತಾಂತರಿಸಿದರು.

ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಬಾಬಿ, ವಸಿಷ್ಠ, ಶ್ರೀಕಾಂತ್ ಒಡೆಲಾ, ಖ್ಯಾತ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿರು 157ನೇ ಚಿತ್ರಕ್ಕೆ ಸಂಕ್ರಾಂತಿಕಿ ವಸ್ತುನ್ನಾಂ ಖ್ಯಾತಿಯ ನಿರ್ದೇಶಕ‌ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮೆಗಾ ಸ್ಟಾರ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಲು ರೆಡಿಯಾಗಿದ್ದಾರೆ. ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.‌‌ಅನಿಲ್ ರವಿಪುಡಿ ಮನರಂಜನೆಗೆ ಎಮೋಷನ್ ಟಚ್ ಕೊಟ್ಟು ಕಥೆ ರೂಪಿಸಿದ್ದಾರಂತೆ.

ಶೈನ್ ಸ್ಕ್ರೀನ್‌ಗಳು ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಡಿ ಸಾಹು ಗರಪತಿ ಮತ್ತು ಸುಶ್ಮಿತಾ ಕೊನಿಡೇಲ ಚಿತ್ರ ನಿರ್ಮಾಣ ಮಾಡುತ್ತಿದ್ದು, ಅರ್ಚನಾ ಪ್ರೆಸೆಂಟ್ ಮಾಡುತ್ತಿದ್ದಾರೆ. ಭೀಮ್ ಸಿಸಿರೋಲಿಯೋ ಸಂಗೀತ ನಿರ್ದೇಶನ, ತಮ್ಮಿರಾಜು ಸಂಕಲನ, ಸಮೀರ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಶೀಘ್ರದಲ್ಲೇ ಚಿರಂಜೀವಿಯವರ 157 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಬ್ರ್ಯಾಟ್ ಎಂಬ ಡಾರ್ಲಿಂಗ್ ಕೃಷ್ಣ ಹೊಸ ಚಿತ್ರ: ಇದೂ ಪ್ಯಾನ್ ಇಂಡಿಯಾ ಚಿತ್ರವಂತೆ!

ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರ ಶುರುವಾಗುತ್ತಿದೆ. ಅದಕ್ಕೆ “ಬ್ರ್ಯಾಟ್” ಎಂದು ಹೆಸರಿಡಲಾಗಿದೆ. ಮಂಜುನಾಥ್ ಕಂದಕೂರ್ ನಿರ್ಮಾಪಕರು. ಈ ಚಿತ್ರದ ಶೀರ್ಷಿಕೆಯನ್ನು. ನಿರ್ಮಾಪಕರ ಸಹೋದರ ಬದರೀನಾಥ್ ಅನಾವರಣ ಮಾಡಿದರು.

ನಾನು ಹಾಗೂ ನಿರ್ದೇಶಕ ಶಶಾಂಕ್ ಅವರು “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ನಂತರ ಈ ಚಿತ್ರ ಮಾಡುತ್ತಿದ್ದೇವೆ. ಆದರೆ ಶಶಾಂಕ್ ಅವರು ಈವರೆಗೂ ನಿರ್ದೇಶನ ಮಾಡಿರದ ಹಾಗೂ ನಾನು ಕೂಡ ಈವರೆಗೂ ಮಾಡಿರದ ವಿಭಿನ್ನ ಕಥೆಯುಳ್ಳ ಚಿತ್ರ “ಬ್ರ್ಯಾಟ್”. ನನ್ನ ಪ್ರಕಾರ ಕನ್ನಡದಲ್ಲಿ ತೀರ ಅಪರೂಪವಾದ ಕಥಾಹಂದರ ಹೊಂದಿರುವ ಚಿತ್ರವಿದು. ಪ್ರೇಮಕಥೆಗಳು, ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಗಳಲ್ಲಿ ನಟಿಸುತ್ತಿದ್ದ ನನಗೆ ಇದು ಹೊಸ ತರಹದ ಚಿತ್ರ. ಈ ಚಿತ್ರಕ್ಕಾಗಿ ನಾನು ಮೊದಲ ಬಾರಿಗೆ ವರ್ಕ್ ಶಾಪ್ ಸಹ ಮಾಡಿದ್ದೇನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಮನಿಶಾ ಅವರು‌ ಕನ್ನಡದವರೆ ಆಗಿದರೂ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾವುದೇ ಕೊರತೆ ಇಲ್ಲದ ಹಾಗೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದಾರೆ. ಅದ್ಭುತ ‌ಕಲಾವಿದರ ಹಾಗೂ ಅನುಭವಿ ತಂತ್ರಜ್ಞರ ದಂಡೇ ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ಅತೀ ಹೆಚ್ಚು ತರಲೆ ಮಾಡುವ ಹುಡುಗರನ್ನು ಸಾಮಾನ್ಯವಾಗಿ “ಬ್ರ್ಯಾಟ್” ಎಂದು ಕರೆಯುತ್ತಾರೆ. ಅದರಲ್ಲೂ ಹದಿನಾರು ವರ್ಷದ ಒಳಗಿರುವ ಮಕ್ಕಳಿಗೆ ಈ ಪದ ಬಳಸುವುದು ಹೆಚ್ಚು. ನಮ್ಮ ಚಿತ್ರದ ಕಥೆಯೂ ಸಹ ಯುವಜನತೆಗೆ ಹತ್ತಿರವಾಗಿರುವುದರಿಂದ ಈ ಶೀರ್ಷಿಕೆ ಸೂಕ್ತವೆನಿಸಿತು. ಕನ್ನಡದಲ್ಲಿ ಶೀರ್ಷಿಕೆ ಇಡೋಣ ಎಂದು ಕೊಂಡು ನೋಡಿದಾಗ ಸಾಕಷ್ಟು ಈಗಾಗಲೇ ಬಂದಿರುವ ಚಿತ್ರಗಳ ಶೀರ್ಷಿಕೆಗಳೆ ದೊರಕಿತು. ಹಾಗಾಗಿ, ಹೇಗಿದ್ದರೂ ಇದು ಕನ್ನಡ ಸೇರಿದಂತೆ ಐದು‌ ಭಾಷೆಗಳಲ್ಲಿ ಬರುತ್ತಿರುವ ಚಿತ್ರವಾಗಿರುವುದರಿಂದ “ಬ್ರ್ಯಾಟ್” ಶೀರ್ಷಿಕೆಯೇ ಸರಿ ಎನಿಸಿತು. ಈವರೆಗೂ‌ ಈ ಹೆಸರಿನಲ್ಲಿ ಯಾವ ಭಾಷೆಗಳಲ್ಲೂ ಸಿನಿಮಾ ಬಂದಿಲ್ಲ. ನಮ್ಮದೇ ಮೊದಲು.

ಈ ಚಿತ್ರ ಕೂಡ ನಾನು ಈವರೆಗೂ ಮಾಡಿರದ ಬೇರೆ ಜಾನರ್‌ ಚಿತ್ರ. ಮಂಜುನಾಥ್ ಈ ಕಥೆಯನ್ನು ಮೆಚ್ಚಿಕೊಂಡು ಮತ್ತೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರ ಅದ್ದೂರಿಯಾಗಿ ಮೂಡಿಬರಲು ಅವರ ಸಹಕಾರವೇ ಕಾರಣ. ಇನ್ನೂ, ಸಾಮಾನ್ಯವಾಗಿ ಎಲ್ಲರೂ ಶೀರ್ಷಿಕೆಯನ್ನು ವಿಡಿಯೋ ತುಣಕಿನಲ್ಲೂ‌ ಅಥವಾ ಪೋಸ್ಟರ್ ನಲ್ಲೂ ಬಿಡುಗಡೆ ಮಾಡುತ್ತಾರೆ. ಆದರೆ ನಮ್ಮ ಚಿತ್ರದ ಶೀರ್ಷಿಕೆಯನ್ನು ವಿಶೇಷವಾಗಿ ಹಾಡೊಂದರ ಮೂಲಕ ಅನಾವರಣ ಮಾಡಿದ್ದೇವೆ. ಐದು‌ ಭಾಷೆಗಳಲ್ಲಿ ಈ ಶೀರ್ಷಿಕೆಗೀತೆ ಇರುತ್ತದೆ. ರಾಪರ್ ರಾಹುಲ್ ಡಿಟೋ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಚಿತ್ರದಲ್ಲಿರುವುದಿಲ್ಲ‌. ಚಿತ್ರದಲ್ಲಿ‌ ಅರ್ಜುನ್ ಜನ್ಯ ಸಂಗೀತ ನೀಡಿರುವ ಮೂರು ಹಾಡುಗಳಿರುತ್ತದೆ. ಈಗಾಗಲೇ ಆನಂದ್ ಆಡಿಯೋದವರು ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ. “ಬ್ರ್ಯಾಟ್” ಇದು ಅಪ್ಪ – ಮಗನ ಸಂಘರ್ಷ. ಅಪ್ಪನಿಗೆ ಮಗನೇ “ಬ್ರ್ಯಾಟ್”. ಅಪ್ಪನ ಪಾತ್ರದಲ್ಲಿ ಅಚ್ಯುತ ಕುಮಾರ್ ಅಭಿನಯಿಸುತ್ತಿದ್ದಾರೆ. ಮನೀಶ ನಾಯಕಿ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ ಶೇಕಡಾ 80 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.

ನಮ್ಮ “ಫಸ್ಟ್ ರ‍್ಯಾಂಕ್ ರಾಜು” ಚಿತ್ರಕ್ಕೆ ನೀವೆಲ್ಲರೂ ನೀಡಿದ ಪ್ರೋತ್ಸಾಹ ಅಪಾರ. ಶಶಾಂಕ್ ಅವರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಐದು ವರ್ಷಗಳ ನಂತರ ‌ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.

ನಾನು ಕನ್ನಡದವಳು. ಈಗಾಗಲೇ ತೆಲುಗಿನ ಒಂದು ಚಿತ್ರದಲ್ಲಿ ನಟಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಇದರಲ್ಲಿ ನನ್ನದು ಮಧ್ಯಮ ವರ್ಗದ ಹುಡುಗಿ ಪಾತ್ರ ಎಂದರು ನಾಯಕಿ ಮನಿಶಾ ಕಂದಕೂರ್.

ಶೀರ್ಷಿಕೆ ಗೀತೆ ಹಾಡಿರುವ ರಾಹುಲ್ ಡಿಟೋ, ಆನಂದ್ ಆಡಿಯೋ ಶ್ಯಾಮ್, ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ರಮೇಶ್ ಇಂದಿರ, ಡ್ಯಾಗನ್ ಮಂಜು, ನಾಯಕನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀವತ್ಸ, ತೇಜಸ್, ಗೌರವ್ ಶೆಟ್ಟಿ ಸಂಚಿತ್ ಹಾಗೂ ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ “ಬ್ರ್ಯಾಟ್” ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

Categories
ಸಿನಿ ಸುದ್ದಿ

ವಾಮನ ಟ್ರೇಲರ್ ರಿಲೀಸ್ ಮಾಡಿದ ದರ್ಶನ್: ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ

ಚೇತನ್ ಗೌಡ ಅವರು ನಿರ್ಮಿಸಿರುವ, ಶಂಕರ್ ರಾಮನ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ “ವಾಮನ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಡಿಯೋ ಮೂಲಕ “ವಾಮನ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಪ್ರಸನ್ನ ಚಿತ್ರಮಂದಿರದಲ್ಲಿ ಸಹಸ್ರಾರು ದರ್ಶನ್ ಅವರ ಅಭಿಮಾನಿಗಳು ಈ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾದರು.

ಧನ್ವೀರ್ ಅಭಿನಯದ ನಾಲ್ಕನೇ ಚಿತ್ರ “ವಾಮನ”. ಧನ್ವೀರ್ ಅವರ ಹಿಂದಿನ ಮೂರು ಚಿತ್ರಗಳೂ ವಿಭಿನ್ನವಾಗಿತ್ತು. ಅದರಲ್ಲೂ ” ಕೈವಾ” ನನ್ನಿಷ್ಟದ ಚಿತ್ರ. “ವಾಮನ” ಚಿತ್ರ ಕೂಡ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಈ ಚಿತ್ರದ “ಮುದ್ದು ರಾಕ್ಷಸಿ” ಹಾಡು ನನಗೆ ಬಹಳ ಇಷ್ಟ. ಇಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 10ರಂದು ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ‌. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ನಾನು ಕೂಡ “ವಾಮನ” ಚಿತ್ರವನ್ನು ಧನ್ವೀರ್ ಜೊತೆಗೆ ನೋಡುತ್ತೇನೆ ಎಂದು ದರ್ಶನ್ ತಿಳಿಸಿದರು.

ನಾನು ಮೊದಲಿಗೆ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ನಮ್ಮ ಚಿತ್ರದ ತಾಯಿ – ಮಗನ ಬಾಂಧವ್ಯ ಸಾರುವ ಹಾಡನ್ನು ಅನಾವರಣ ಮಾಡಿದ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ದರ್ಶನ್ ಅವರು ಇಂದಿನ ಸಮಾರಂಭಕ್ಕೆ ಬರಬೇಕಿತ್ತು. ಆದರೆ ಅವರು ದೂರದ ಊರಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನನ್ನಿಂದ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಅವರದು.

ಹಾಗಾಗಿ ನನ್ನನ್ನು ಅವರಿರುವ ಕಡೆಗೆ ಕರೆಸಿಕೊಂಡು ಟ್ರೇಲರ್ ವೀಕ್ಷಿಸಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳಾಡಿದ್ದಾರೆ. ಚಿತ್ರಮಂದಿರದಲ್ಲೇ “ವಾಮನ” ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ. ಇಷ್ಟು ಜನರು ನಮ್ಮ ಚಿತ್ರದ ಸಮಾರಂಭಕ್ಕೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ನಮ್ಮ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ. ತಂತ್ರಜ್ಞರ ಸಹಕಾರ ಕೂಡ ಅಪಾರವಾಗಿದೆ ಎಂದು ನಾಯಕ ಧನ್ವೀರ್ ತಿಳಿಸಿದರು.

ನಮ್ಮ ಚಿತ್ರದ ಟ್ರೇಲರ್ ಹಾಗೂ ಹಾಡನ್ನು ಬಿಡುಗಡೆ ಮಾಡಿಕೊಟ್ಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ವಿಶೇಷ ಧನ್ಯವಾದ. “ವಾಮನ” ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ. ನಿರ್ದೇಶಕರು ಒಂದೊಳ್ಳೆ‌ ಚಿತ್ರ ಮಾಡಿಕೊಟ್ಟಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ನೋಡಿ.‌ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಚೇತನ್ ಗೌಡ.
ಸಹ ನಿರ್ಮಾಪಕಿ ರೂಪ ಚೇತನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ವಾಮನ” ತಾಯಿ – ಮಗನ‌ ಬಾಂಧವ್ಯದ ಕಥೆ. ಇದರೆ ಜೊತೆಗೆ ನೋಡುಗರಿಗೆ ಬೇಕಾದ‌ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರ ‌ಉತ್ತಮವಾಗಿ ಮೂಡಿ ಬರಲು ಇಡೀ ತಂಡದ ಸಹಕರವೇ ಕಾರಣ ಎಂದು ನಿರ್ದೇಶಕ ಶಂಕರ್ ರಾಮನ್ ತಿಳಿಸಿದರು.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ನಮ್ಮ‌ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಇಷ್ಟು ಜನ ಬಂದು ಹಾರೈಸಿದ್ದಾರೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಾಯಕಿ ರೀಷ್ಮಾ ನಾಣಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ತಾರಾ ಅನುರಾಧ, ಬಹುಭಾಷಾ ನಟ ಸಂಪತ್ ರಾಜ್, ಚಿತ್ಕಲಾ ಬಿರಾದಾರ್, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕಾಕ್ರೋಜ್ ಸುಧೀ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ ಹಾಗೂ ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ನೃತ್ಯ ನಿರ್ದೇಶಕ ಭೂಷಣ್ ಮುಂತಾದವರು “ವಾಮನ” ಚಿತ್ರದ ಕುರಿತು ಮಾತನಾಡಿದರು.
.

error: Content is protected !!