Categories
ಆಡಿಯೋ ಕಾರ್ನರ್

ನಾನು ಗಾಯಕನಾಗಲೂ ಅನೂಪ್‌ ಕಾರಣ – ವಸಿಷ್ಠ ಸಿಂಹ ಗುಣಗಾನ

ವಸಿಷ್ಠ ಅವರೊಳಗಿನ ಗಾಯಕನನ್ನ ಗಮನಿಸಿದ ಸೀಳಿನ್

ಅದು ಯಾವುದೇ ಕ್ಷೇತ್ರ ಇರಬಹುದು. ಸಾಮಾನ್ಯವಾಗಿ ಯಾರೇ ಗುರುತಿಸಿಕೊಂಡರು ಅವರ ಹಿಂದೆ ಒಬ್ಬರು ಸಾಥ್‌ ಕೊಟ್ಟಿರುತ್ತಾರೆ. ಅವರ ಗೆಲುವಿನ ಹಿಂದಿನ ಶಕ್ತಿಯಾಗಿರುತ್ತಾರೆ. ಒಬ್ಬ ಹೀರೋ ಆದವರು, ನಿರ್ದೇಶಕರಾದವರು, ಕಲಾವಿದರಾದವರು ಹೀಗೆ ಏನೇ ಆಗಿದ್ದರೂ, ಅವರು ಆ ಮಟ್ಟಕ್ಕೆ ಬಂದು ಗುರುತಿಸಿಕೊಳ್ಳಬೇಕಾದರೆ, ಒಬ್ಬರ ಸಹಕಾರ ಇದ್ದೇ ಇರುತ್ತೆ. ಈಗ ಇಲ್ಲಿ ಹೇಳಹೊರಟಿರುವ ವಿಷಯವಿಷ್ಟೆ. ನಾಯಕ ವಸಿಷ್ಠ ಸಿಂಹ ಅವರು ಗಾಯಕ ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಅವರ ಖಡಕ್‌ ವಾಯ್ಸ್‌ ಹೇಗಿದೆಯೋ ಹಾಗೆಯೇ ಅವರ ಹಾಡಲ್ಲೂ ಅಂಥದ್ದೊಂದು ರಾ ಫೀಲ್‌ ಸಿಗುತ್ತೆ. ಆ ಕಾರಣಕ್ಕಾಗಿಯೋ ಏನೋ, ಅವರನ್ನು ಗುರುತಿಸಿ ಹಾಡಿಸಿದ್ದೂ ಉಂಟು.


ಅಷ್ಟಕ್ಕೂ ವಸಿಷ್ಠ ಸಿಂಹ ಗಾಯಕ ಆಗೋಕೆ ಕಾರಣ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಅನ್ನುವುದು ಅವರ ಮಾತು. ಈ ಕುರಿತು ಸ್ವತಃ ವಸಿಷ್ಠ ಸಿಂಹ ಅವರೇ ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ “ಕಿರಿಕ್‌ ಪಾರ್ಟಿ” ಚಿತ್ರದಲ್ಲಿ ಧನಂಜಯ್‌ ರಾಜನ್‌ ಬರೆದ “ನೀಚ ಸುಳ್ಳು ಸುತ್ತೋ ನಾಲಿಗೆ…” ಹಾಡನ್ನು ಹಾಡಿದ್ದೆ. ಆದರೆ, ಅದೆಷ್ಟೋ ಜನ ವಾಯ್ಸ್‌ ಹಾಗಿದೆ, ಹೀಗಿದೆ ಅನ್ನೋ ಮಾತುಗಳನ್ನಾಡಿದರು. ಅದು ನನ್ನ ಕಿವಿಗೂ ಬಿತ್ತು. ಆದರೆ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಬಂದೆ. “ದಯವಿಟ್ಟು ಗಮನಿಸಿ” ಚಿತ್ರದಲ್ಲಿ ಅನೂಪ್‌ ಸೀಳಿನ್‌ ಕೆಲಸ ಮಾಡುವಾಗ, ಜಯಂತ್‌ ಕಾಯ್ಕಿಣಿ ಅವರು ಅ ಚಿತ್ರಕ್ಕೆ ಬರೆದ ಸಾಹಿತ್ಯ ಅದ್ಭುತವಾಗಿತ್ತು. ಆ ಹಾಡಿಗೆ ಫ್ರೆಶ್‌ ವಾಯ್ಸ್‌ ಇದ್ದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌, ಅಂಥದ್ದೊಂದು ವಾಯ್ಸ್‌ಗೆ ಹುಡುಕಾಟ ನಡೆಸಿದ್ದರಂತೆ.

ಆ ವಿಷಯ ಆ ಚಿತ್ರದಲ್ಲಿ ನಟಿಸಿದ್ದ ವಸಿಷ್ಠ ಸಿಂಹ ಅವರ ಕಿವಿಗೆ ಬಿದ್ದಾಗ, ವಸಿಷ್ಠ ಅನ್ನೋ ಹುಡುಗ ಇದ್ದಾನೆ ಅವನ ಕೈಯಲ್ಲಿ ಹಾಡಿಸಿ ಅಂತ ಹಾಗೆ ಸುಮ್ಮನೆ ಜೋಕ್‌ ಮಾಡಿದ್ದರಂತೆ. ಆದರೆ, ಅನೂಪ್‌ ಸೀಳಿನ್‌ ಮಾತ್ರ ವಸಿಷ್ಠ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡು, ವಸಿಷ್ಠ ಅವರ ಬಳಿ “ಮರೆತು ಹೋದೆನು..” ಹಾಡನ್ನು ಹಾಡಿಸಿದರಂತೆ. ಆ ಹಾಡು ಸೂಪರ್‌ ಹಿಟ್‌ ಕೂಡ ಆಯ್ತು.
ಅನೂಪ್‌ ಸೀಳಿನ್‌ ಅವರು ವಸಿಷ್ಠ ಸಿಂಹ ಅವರೊಳಗಿನ ಗಾಯಕನನ್ನು ಗುರುತಿಸಿ ಹಾಡಿಸಿದ್ದರಿಂದ, ಈಗ ವಸಿಷ್ಠ ಸಿಂಹ ಗಾಯಕ ಆಗಿದ್ದಾರೆ. ಇದನ್ನು ಎಲ್ಲಿ ಹೋದರೂ ವಸಿಷ್ಠ ಹೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಡೆದ ಹೆಸರಿಡದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವಸಿಷ್ಠ ಗಾಯಕ ಆಗೋಕೆ ಅನೂಪ್‌ ಕಾರಣ ಎಂದು ಹೇಳಿಕೊಂಡರು.

Categories
ಆಡಿಯೋ ಕಾರ್ನರ್

ಆಲ್ಬಂ ಸಾಂಗ್‌ಗೆ ಮೇಘಾ ಶೆಟ್ಟಿ ಸ್ಟೆಪ್‌- ನೋಡು ಶಿವ ಅಂತ ಹಾಡ್ತಾರೆ ಚಂದನ್‌ ಶೆಟ್ಟಿ

ಹಾಡಿಗೆ ಅದ್ಧೂರಿ ಬಜೆಟ್‌

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂ ಸಾಂಗ್‌ ಹೊರಬಂದಿವೆ. ಆ ಸಾಲಿಗೆ ಈಗ “ನೋಡು ಶಿವ..” ಶೀರ್ಷಿಕೆಯ ಹಾಡೊಂದು ಸಿದ್ಧಗೊಳ್ಳುತ್ತಿದೆ. ಈ ಹಾಡಿನ ವಿಶೇಷವೆಂದರೆ, “ಜೊತೆ ಜೊತೆಯಲ್ಲಿ” ಧಾರಾವಾಹಿ ಖ್ಯಾತಿಯ ಮೇಘಾಶೆಟ್ಟಿ ಹೆಜ್ಜೆ ಹಾಕುತ್ತಿರುವುದು. ಹೌದು, ಮೋನಿಕಾ ಕಲ್ಲೂರಿ ಆರ್ಟ್ಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ವಿಡಿಯೋ ಆಲ್ಬಂ ಸಾಂಗ್‌ಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡಿದ್ದಾರೆ. ಸುಮೀತ್ ಎಂ.ಕೆ ಈ ಹಾಡಿಗೆ ಸಾಹಿತ್ಯ ಬರೆದು ನಿರ್ದೇಶಿಸುವುದರ ಜೊತೆಗೆ ಹಾಡಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಚಂದನ್‌ ಶೆಟ್ಟಿ ಕೂಡ ಸ್ಟೆಪ್‌ ಹಾಕುತ್ತಿದ್ದಾರೆ.

ಮೋನಿಕಾ

ಎಎಂಸಿ ಸಿಟಿ ಗ್ರೂಪ್​ ಆಫ್​ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ವೈಸ್ ಪ್ರೆಸೆಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡುವ ಮೋನಿಕಾ, ‘ನೋಡು ಶಿವ..” ಎಂಬ ಹಾಡು ತುಂಬಾನೇ ವಿಶೇಷವಾಗಿ ಮೂಡಿಬರಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಮಾತಾಡ್ತಾನೆ, ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನೇ ಹಾಸ್ಯ ರೂಪದಲ್ಲಿ ಹಾಡಿನ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಮೋನಿಕಾ ಮಾತು.

ಸುಮೀತ್

ಕನ್ನಡದ ಮಟ್ಟಿಗೆ ಇದೊಂದು ಅದ್ಧೂರಿ ಆಲ್ಬಂ ಸಾಂಗ್‌ ಆಗಲಿದೆ. ಹೊಸತನವೂ ಇರಲಿದೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸುವ ಮಟ್ಟಿಗೆ ಹಾಡು ಮೂಡಿಬರಲಿದೆ. ಸುಮಾರು 30ಲಕ್ಷ ಬಜೆಟ್ ನಲ್ಲಿ ಈ ಹಾಡು ಸಿದ್ದವಾಗಲಿದೆ ಎಂಬುದು ಮೋನಿಕಾ ಮಾತು.  ಹಾಡಿನ ಸಾಹಿತ್ಯ ಕೇಳಿ ಇಷ್ಟಪಟ್ಟು, ಚಂದನ್​ ಶೆಟ್ಟಿ ಸಂಯೋಜಿಸಿ, ಧ್ವನಿಯನ್ನೂ ನೀಡಿದ್ದಾರೆ. ಈ ಹಾಡಿನ ತಯಾರಿ ಜೋರಾಗಿದ್ದು, ಸುಮಾರು 200 ಜನ ಇದಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡ್ಯಾನ್ಸರ್​ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್​ನಲ್ಲಿಯೇ ಶೂಟಿಂಗ್​ ಮುಗಿಸಿಕೊಳ್ಳುವ ಪ್ಲಾನ್​ ತಂಡದ್ದಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ಇನ್ನು ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾ, ಮೊದಲಿಂದಲೂ ಕಲೆಯತ್ತ ಆಸಕ್ತಿ. ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಅಂದಹಾಗೆ, ಡಿಸೆಂಬರ್ ವೇಳೆಗೆ ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ಚಂದನ್‌ ಶೆಟ್ಟಿ

 

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಆತ್ಮಸ್ಥೈರ್ಯ ತುಂಬುವ ಆತ್ಮ ನಿರ್ಭರತ ಭಾರತ ಹಾಡು

ವಿಡಿಯೋ ಸಾಂಗ್‌ ರಿಲೀಸ್

ಇಡೀ ಪ್ರಪಂಚದಲ್ಲಿ ಕೊರೊನಾ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಸಿನಿಮಾರಂಗ ಕೂಡ ಇದಕ್ಕೆ ಹೊರತಲ್ಲ. ದೊಡ್ಡ ಹೊಡೆತ ತಿಂದಿರುವ ಸಿನಿಮಾರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಸಿನಿಮಾಗಳು ಬಿಡುಗಡೆ ಕಂಡರೆ, ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಇದರ ನಡುವೆಯೇ ಸಾಕಷ್ಟು ಚಿತ್ರಗಳು ಪ್ರಚಾರಕ್ಕೂ ಇಳಿದಿವೆ. ತಮ್ಮ ಚಿತ್ರದ ಟ್ರೇಲರ್‌, ಟೀಸರ್‌, ಫಸ್ಟ್‌ ಲುಕ್‌ ಹೀಗೆ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಮುಂದಾಗಿವೆ. ಇನ್ನು, ಕೊರೊನಾ ಸಮಸ್ಯೆ ಕುರಿತಂತೆಯೂ ಒಂದಷ್ಟು ಕಿರುಚಿತ್ರಗಳು, ಆಲ್ಬಂ ಸಾಂಗ್‌ಗಳೂ ಹೊರಬಂದಿವೆ. ಆ ಸಾಲಿಗೆ ಈಗ “ಆತ್ಮ ನಿರ್ಭರತ ಭಾರತ” ವಿಶ್ವಕ್ಕೆ ಗುರುವಾಗಲಿ.. ಎಂಬ ವಿಡಿಯೋ ಆಲ್ಬಂ ಸಾಂಗ್‌ ನಿರ್ಮಾಣಗೊಂಡಿದೆ.

ಕಳೆದ ಒಂಬತ್ತು ತಿಂಗಳಿನಿಂದಲೂ ಕೊರೊನಾ ಹಾವಳಿ ಅಷ್ಟಿಷ್ಟಲ್ಲ. ಇದರಿಂದಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯಂತೂ ಹೇಳತೀರದು. ಪ್ರತಿಯೊಂದು ಕುಟುಂಬದ ಮೇಲೂ ಸಾಕಷ್ಟು ಗಂಭೀರ ಪರಿಣಾಮ ಬೀರಿ, ಸಾರ್ವಜನಿಕರ ಜನಜೀವನ ಬದುಕಿನ ಶೈಲಿಯೇ ಬದಲಾಗಿದ್ದು ಎಲ್ಲರಿಗೂ ಗೊತ್ತಿದೆ. ಇಂತಹ ಸ್ಥಿತಿಯಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡಲು, ಆತ್ಮಸ್ಥೈರ್ಯ ತುಂಬುವ ಸಲುವಾಗಿ “ಆತ್ಮ ನಿರ್ಭರತ ಭಾರತ” ಎಂಬ ವಿಡಿಯೋ ಸಾಂಗ್ ನಿರ್ಮಿಸಲಾಗಿದೆ.

ಮಹೇಂದ್ರ ಮುನೋತ್‌

ಈ ವಿಡಿಯೊ ಆಲ್ಬಂ ಸಾಂಗ್‌ನಲ್ಲಿ ನಮ್ಮ ಪರಂಪರೆ, ನಮ್ಮ ಶಕ್ತಿ, ನಮ್ಮ ಸಾಧನೆ ಏನು ಎಂಬ ಅಂಶಗಳೊಂದಿಗೆ ಧೈರ್ಯ ತುಂಬುವುದರ ಜೊತೆಯಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿರುವ ನಾವು ಕೊರೋನ ವಿರುದ್ಧ ಹೋರಡಲಾರೆವಾ? ಎಂದು ಎಲ್ಲರಿಗೂ ಧೈರ್ಯ ತುಂಬುವ ಗೀತೆಯಾಗಿ ಈ ಹಾಡನ್ನು ಹೊರತರಲಾಗಿದೆ. ಅಂದಹಾಗೆ, ಮಾರುತಿ ಮೆಡಿಕಲ್ಸ್‌ ಮಹೇಂದ್ರ ಮುನೋತ್‌ ಅವರು ಆನಂದ್ ಸಿನಿಮಾಸ್ ಮೂಲಕ‌‌ ಈ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ಹಿಂದೆ “ನಮಗಾಗಿ ಜೀವ ಕೊಟ್ಟವರು” ಎಂಬ ವಿಡಿಯೋ ಸಾಂಗ್ ಕೂಡ ಬಿಡುಗಡೆ ಮಾಡಿದ್ದರು. ಈಗ “ಆತ್ಮ ನಿರ್ಭರತ ಭಾರತ” ಮಾಡಿದ್ದಾರೆ. ಎಂ.ಗಜೇಂದ್ರ ನಿರ್ದೇಶನ ಮಾಡಿದ್ದಾರೆ. ಇನ್ನು, ಈ ಹಾಡಿಗೆ ಮೂರುರಾಯರಗಂಡ ಅವರ ಸಾಹಿತ್ಯವಿದೆ. ವಿಜಯ್‌ ಕೃಷ್ಣ ಅವರ ಸಂಗೀತವಿದೆ. ರಾಜ್ಯ ಪ್ರಶಸ್ತಿ ವಿಜೇತ ಗಾಯಕ ತೇಜಸ್ವಿ ಹರಿದಾಸ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಲಕ್ಷ್ಮೀಕಾಂತ್ ಮತ್ತು ವೀರೇಶ್ ಅವರ ಛಾಯಾಗ್ರಹಣ‌ವಿದೆ. ಜವಳಿ ಅವರ ಸಂಕಲನವಿದೆ.

Categories
ಆಡಿಯೋ ಕಾರ್ನರ್

ಹೊಸಬರ ರಿಚ್ಚಿ ಹಾಡು ಬಂತು

ಸನಿಹ ನೀ ಇರುವಾಗ ಸಲುಗೆಯ ಅನುರಾಗ…

ಈಗ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ ಹಾಡುಗಳ ಬಿಡುಗಡೆ ಪರ್ವ. ಆ ಸಾಲಿಗೆ ಈಗ “ರಿಚ್ಚಿ” ಸಿನಿಮಾ ಸೇರಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಹೊರಬಂದಿದೆ. ನಾಯಕ ರಿಚ್ಚಿ ಹಾಗೂ ನಿಷ್ಕಲ ಜೋಡಿಯಾಗಿ ಕಾಣಿಸಿಕೊಂಡಿರುವ “ರಿಚ್ಚಿ” ಚಿತ್ರಕ್ಕೆ ರಿಚ್ಚಿ ನಟನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿರವ ರಿಚ್ಚಿ, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಅಗಸ್ತ್ಯ ಸಂತೋಷ್‌ ಸಂಗೀತ ನೀಡಿದ್ದಾರೆ.

ಸೋನು ನಿಗಂ ಈ ಹಾಡಿಗೆ ಧ್ವನಿಯಾಗಿದ್ದಾರೆ. ಚಿನ್ನಿ ಪ್ರಕಾಶ್‌ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. “ಸನಿಹ ನೀ ಇರುವಾಗ ಸಲುಗೆಯ ಅನುರಾಗ…” ಹಾಡಲ್ಲಿ ನಾಯಕ ರಿಚ್ಚಿ ಮತ್ತು ನಿಷ್ಕಲ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ವಿನೋದ್ ಅವರ ಸಾಹಿತ್ಯವಿದೆ. ಬಹುತೇಕ ಕೊಡಗು ಸುತ್ತಮುತ್ತ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವೀರೇಶ್ ಛಾಯಾಗ್ರಹಣವಿರು ಈ ಚಿತ್ರದಲ್ಲಿ ಸಸ್ಪೆನ್ಸ್‌ ಅಂಶಗಳೇ ಹೆಚ್ಚಾಗಿವೆ.


ಹೀರೋ ರಿಚ್ಚಿ ಚಿತ್ರದಲ್ಲಿ ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಥಾಹಂದರವಿದ್ದು, ನಾಯಕ ಇಲ್ಲಿ ಒಂದು ರಿಸ್ಕ್‌ನಲ್ಲಿ ಸಿಲುಕಿಕೊಂಡು ಆ ಬಳಿಕ ಹೇಗೆ ಹೊರಬರುತ್ತಾನೆ ಅನ್ನೋದೇ ಕಥೆ. ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಶೇ.೭೦ ರಷ್ಟು ಬೆಂಗಳೂರು ಹಾಗೂ ಕೊಡಗಿನಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರಕ್ಕೆ ಮಂಜು ಸಹ ನಿರ್ದೇಶನವಿದೆ. ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ಪುರುಷೋತ್ತಮ್‌ ಕಲಾ ನಿರ್ದೇಶನವಿದೆ. ವಿಕ್ರಮ್‌ ಅವರ ಸಾಹಸಿವೆ. ಪ್ರಕಾಶ್‌ರಾವ್‌ ಸಹ ನಿರ್ಮಾಣವಿದೆ. ಚಿತ್ರದಲ್ಲಿ ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಇತರರು ನಟಿಸಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಮಮ್ಮಿ ಪ್ಲೀಸ್‌ ಮಮ್ಮಿ ಸಾಂಗ್ ಭರ್ಜರಿ ಸೌಂಡು!

ತ್ರಿವಿಕ್ರಮ ಲಿರಿಕಲ್‌ ವಿಡಿಯೋ ಸಾಂಗ್‌ ಹೊರಬಂತು

ಮಕ್ಕಳ ದಿನಾಚರಣೆಗೊಂದು ಸ್ಪೆಷಲ್‌ ಗಾನ

ಕನ್ನಡದಲ್ಲಿ ಸದ್ಯಕ್ಕೆ “ತ್ರಿವಿಕ್ರಮ” ಸಿನಿಮಾ ಜೋರು ಸುದ್ದಿ ಮಾಡುತ್ತಲೇ ಇದೆ. ಆರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ. ಈಗಾಗಲೇ ಕ್ರೇಜಿಸ್ಟಾರ್‌ ಎರಡನೇ ಪುತ್ರ ವಿಕ್ರಮ್‌ ರವಿಚಂದ್ರನ್‌ “ತ್ರಿವಿಕ್ರಮ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ನಿರೀಕ್ಷೆ ಮೂಡಿಸಿರುವುದಂತೂ ನಿಜ. ಆ ನಿರೀಕ್ಷೆಗೆ ತಕ್ಕಂತೆಯೇ ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಟೀಸರ್ , ಮೋಷನ್‌ ಪೋಸ್ಟರ್‌ ಎಲ್ಲವೂ ಮಾತಾಡುತ್ತಿದೆ. ಅಷ್ಟೇ ಯಾಕೆ, ಕಳೆದ ಮಹಲಾಕ್ಷ್ಮಿ ಹಬ್ಬದಂದೇ ವಿಕ್ರಮ್‌ ಅಭಿನಯದ ಈ “ತ್ರಿವಿಕ್ರಮ” ಚಿತ್ರದ ಆಡಿಯೋ ಹಕ್ಕು ದಾಖಲೆ ಮಟ್ಟಕ್ಕೆ ಮಾರಾಟ ಆಗಿದ್ದು ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈಗ ಅದೇ ಖುಷಿಯಲ್ಲಿ ನವೆಂಬರ್‌ ೧೪ರಂದು ಮಕ್ಕಳ ದಿನಾಚರಣೆ ಅಂಗವಾಗಿ, ಸಖತ್‌ ಆಗಿರುವ ಹಾಡೊಂದನ್ನು ಬಿಡುಗಡೆ ಮಾಡಿದೆ.


ಹೌದು, ಮಕ್ಕಳ ದಿನಾಚರಣೆಯ ದಿನದಂದು ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವ, ತಾಯಂದಿರಿಗೂ ಇಷ್ಟವಾಗುವ ಹಾಡು ಹೊರಬಂದಿದೆ. ಅರ್ಜುನ್‌ ಜನ್ಯಾ ಸಂಗೀತವಿರುವ ಈ ಹಾಡಿಗೆ ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿದೆ. “ಮಮ್ಮಿ ಪ್ಲೀಸ್‌ ಮಮ್ಮಿ” ಎಂಬ ಹಾಡು ಈಗ ಹೊರಬಂದಿದೆ. ಈ ಹಾಡಿಗೆ ಗಾಯಕ ವಿಜಯಪ್ರಕಾಶ್‌ ಧ್ವನಿಯಾಗಿದ್ದಾರೆ.

ಅಮ್ಮನನ್ನು ಕಾಡುವ, ಬೇಡವ ಚಿನಕುರಳಿಯಂತಿರುವ ಹಾಡು ಕೇಳುವುದಕ್ಕೆ ಒಂದು ರೀತಿ ಮಜಾ ಇದೆ. ಈಗಾಗಲೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಬಹುತೇಕ ಹುಡುಗರು ಹಾಡನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡು ಎಂಜಾಯ್‌ ಮಾಡುತ್ತಿದ್ದಾರೆ.

ಇನ್ನು, ವಿಕ್ರಮ್‌ ಅವರನ್ನ ಹೀರೋ ಮಾಡಿದ್ದು ನಿರ್ದೇಶಕ ಸಹನಾ ಮೂರ್ತಿ. ಈ “ತ್ರಿವಿಕ್ರಮ” ಎಂಬ ಅದ್ಧೂರಿ ಬಜೆಟ್‌ ಚಿತ್ರವನ್ನು ಗೌರಿ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಿರೋದು ಸೋಮಣ್ಣ. ವಿಕ್ರಮ್‌ ಅವರ ಲುಕ್‌ ಮತ್ತು ಮ್ಯಾನರಿಸಂಗೆ ತಕ್ಕ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.

ಆರಂಭದಿಂದಲೂ ತುಂಬಾನೇ ಸ್ಪೆಷಲ್‌ ಆಗಿಯೇ ಸಿನಿಮಾವನ್ನು ರೆಡಿ ಮಾಡಿರುವ ನಿರ್ದೇಶಕ ಸಹನಾ ಮೂರ್ತಿ, ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದ ಈಗ ಸಿನಿಮಾವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಹೊರಬಂದಿರುವ “ತ್ರಿವಿಕ್ರಮ” ಚಿತ್ರದ ಫಸ್ಟ್ ಲುಕ್ ಟೀಸರ್ ಸಾಕ್ಷಿಯಾಗಿದೆ.

ಸೋಮಣ್ಣ, ನಿರ್ಮಾಪಕ

ನಿರ್ಮಾಪಕ, ನಿರ್ದೇಶಕರ ಕಾಳಜಿಯ ವಿಕ್ರಮ!
ಸಿನಿಮಾ ಅಂದಮೇಲೆ ಪ್ರೀತಿ ಇರಬೇಕು. ಆ ಪ್ರೀತಿ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ಹೊರಬರುತ್ತವೆ. ಆ ಸಾಲಿಗೆ “ತ್ರಿವಿಕ್ರಮ” ಸಿನಿಮಾ ಕೂಡ ಸೇರುವುದರಲ್ಲಿ ಎರಡು ಮಾತಿಲ್ಲ. ಕನಸುಗಾರನ ಮಗನನ್ನು ಸಖತ್‌ ಆಗಿಯೇ ತೋರಿಸುವ ಕನಸು ಕಂಡಿದ್ದ ನಿರ್ದೇಶಕ ಸಹನಾ ಮೂರ್ತಿ ಹಾಗೂ ನಿರ್ಮಾಪಕ ಸೋಮಣ್ಣ ಎಷ್ಟೇ ರಿಸ್ಕ್‌ ಇದ್ದರೂ ಸರಿ, ಅದ್ಭುತವಾಗಿಯೇ ಸಿನಿಮಾವನ್ನು ತೋರಿಸಬೇಕು ಎಂಬ ಉದ್ದೇಶದಿಂದ ಕೋಟಿಗಟ್ಟಲೆ ಹಣ ಹಾಕಿದ್ದಾರೆ. “ತ್ರಿವಿಕ್ರಮʼ ಸಿನಿಮಾ ಮೇಲೆ ಇವರಿಬ್ಬರಿಗೂ ತೃಪ್ತಭಾವವಿದೆ. ಈಗಾಗಲೇ ಈ ಅದ್ಧೂರಿಗೆ ಸಾಕ್ಷಿಯೆಂಬಂತೆ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಮೂಡಿಬಂದಿರೋದು.

ಸಹನಾ ಮೂರ್ತಿ, ನಿರ್ದೇಶಕ

ಈಗಾಗಲೇ, 50 ಲಕ್ಷ ಮೊತ್ತಕ್ಕೆ ಎ೨ ಮ್ಯೂಸಿಕ್‌ ಸಂಸ್ಥೆ ಆಡಿಯೋ ಹಕ್ಕು ಕೂಡ ಮಾರಾಟವಾಗಿರುವುದು ಸಿನಿಮಾದ ಮೊದಲ ಗೆಲುವು ಎನ್ನಬಹುದು. ಹೀಗಾಗಿ ತ್ರಿವಿಕ್ರಮನಿಗೆ ಡಿಮ್ಯಾಂಡ್‌ ಇರೋದಂತು ನಿಜ. ಅಂದಹಾಗೆ, ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಹಾಡೊಂದು ಈಗ ಹೊರಬಂದಿದ್ದು ಭರ್ಜರಿ‌ ಸೌಂಡು ಮಾಡುತ್ತಿದೆ.

ಆಕಾಂಕ್ಷ, ನಟಿ

ಪಕ್ಕಾ ಮಾಸ್‌ ಮತ್ತುಕ್ಲಾಸ್‌ ಸಿನ್ಮಾ
ಈ ಹಿಂದೆ “ರೋಜ್‌” ಹಾಗೂ “ಲೀಡರ್‌” ಸಿನಿಮಾವನ್ನು ಕಟ್ಟಿ ಕೊಟ್ಟ ನಿರ್ದೇಶಕ ಸಹನಾಮೂರ್ತಿ ಅವರು ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದಾಗಿ ಮಾಸ್‌ ಮತ್ತು ಕ್ಲಾಸ್‌ ಸಿನಿಮಾ ಮಾಡಿದ್ದಾರೆ. ಹಾಗೆಯೇ ಹಾಡುಗಳನ್ನೂ ಅದ್ಭುತವಾಗಿ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಅರ್ಜುನ್‌ ಜನ್ಯಾ ಬಳಿ ಸಂಗೀತ ಮಾಡಿಸಿದ್ದು, ಹಿರಿಯ ಗೀತ ಸಾಹಿತಿಗಳ ಬಳಿ ಹಾಡನ್ನು ಬರೆಸಿ, ಹಾಡಿಸಿದ್ದಾರೆ. ವಿಜಯಪ್ರಕಾಶ್‌ ಈಗ ” ಮಮ್ಮಿ ಪ್ಲೀಸ್‌ ಮಮ್ಮಿ” ಹಾಡು ಹೊಸ ಕ್ರೇಜ್‌ ಹುಟ್ಟಿಸಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಖುಷಿಯಾಗಿದೆ.

Categories
ಆಡಿಯೋ ಕಾರ್ನರ್

ಮಂಗಳವಾರ ರಜಾದಿನ ನ. 24 ಕ್ಕೆ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್

 ಭಟ್ಟರ ಹಾಡಿಗೆ ವಿಜಯಪ್ರಕಾಶ್ ಧ್ವನಿ

“ಮಂಗಳವಾರ ರಜಾದಿನ” ಸಿನಿಮಾ ಆರಂಭದಿಂದಲೂ ಸದ್ದು ಮಾಡುತ್ತಲೇ ಇದೆ. ಶೀರ್ಷಿಕೆಯೇ ಇದೊಂದು ಮಜಾ ಎನಿಸುವ ಸಿನಿಮಾ ಎಂಬ ಭರವಸೆ ಮೂಡಿಸಿದೆ. ಈಗ ಚಿತ್ರದ ಶೀರ್ಷಿಕೆ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ‌ ನಡೆಸಿದೆ.
ನವೆಂಬರ್ 24ರಂದು ಬನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಬಿಡುಗಡೆಯಾಗಲಿದೆ. ವಿಜಯಪ್ರಕಾಶ್ ಗಾಯನದ ಈ‌ ಚಿತ್ರಕ್ಕೆ ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಈ ಹಾಡು ಲಹರಿ‌ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ ಎಂಬುದು ವಿಶೇಷ.
ಇದು ಕ್ಷೌರಿಕನ ಸುತ್ತ ಹೆಣೆಯಲಾಗಿರುವ ಚಿತ್ರ. ಈ ಚಿತ್ರದ ಶೀರ್ಷಿಕೆ ಗೀತೆ ಕೂಡ ಸವಿತಾ ಸಮಾಜದವರ ಕೀರ್ತಿ ಸಾರುವಂತಿದೆ ಎಂಬುದು ನಿರ್ದೇಶಕ ಯುವಿನ್ ಮಾತು


ತ್ರಿವರ್ಗ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದೆ. ಈಗಾಗಲೇ ಚಿತ್ರೀಕರಣ ‌ಮುಕ್ತಾಯವಾಗಿದ್ದು,
ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ.
ಚಿತ್ರದಲ್ಲಿ ಚಂದನ್ ಆಚಾರ್ ನಟಿಸಿದ್ದು, ಅವರಿಲ್ಲಿ ಕ್ಷೌರಿಕನ ಪಾತ್ರ ನಿರ್ವಹಿಸಿದ್ದಾರೆ.
ಅವರಿಗೆ ಲಾಸ್ಯ ನಾಗರಾಜ್ ನಾಯಕಿ.
ಉಳಿದಂತೆ ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಇತರರು ನಟಿಸಿದ್ದಾರೆ.
ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣವಿದೆ.


. ಮಧು ತುಂಬಕೆರೆ ಸಂಕಲನ ಮಾಡಿದರೆ, ಭೂಷಣ್ ಅವರ ನೃತ್ಯ ನಿರ್ದೇಶನವಿದೆ.
ಈಗಾಗಲೇ ಚಿತ್ರದ ಟ್ರೇಲರ್ ಮೆಚ್ಚುಗೆ ಪಡೆದಿದೆ.
ಡಿಸೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ತಂಡಕ್ಕಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಊರ ಬಿಟ್ಟು ಊರೀಗೆ ಬಂದೀವಿ ಹಾಡಿಗೆ ಮೆಚ್ಚುಗೆ… ಯು ಟರ್ನ್‌ಗೆ ನವೀನ್‌ಸಜ್ಜು ಗಾನ


ಕನ್ನಡದಲ್ಲಿ “ಯು ಟರ್ನ್‌ ” ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಜೋರು ಸುದ್ದಿ ಮಾಡಿದ ಚಿತ್ರವದು. ಈಗ ಮತ್ತೆ “ಯು ಟರ್ನ್‌ ” ಸುದ್ದಿ ಮಾಡುತ್ತಿದೆ. ಆದರೆ, ಇದು ಆ “ಯು ಟರ್ನ್‌ ” ಅಲ್ಲ ಅನ್ನೋದು ವಿಶೇಷ. ಹೌದು, ಇದು “ಯು ಟರ್ನ್‌ 2” ಹಾಗಂತ, ಆ “ಯು ಟರ್ನ್‌ ” ಚಿತ್ರಕ್ಕೂ ಈ “ಯು ಟರ್ನ್‌ 2” ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ. ಹೊಸ ಬಗೆಯ ಕಥೆ, ಚಿತ್ರಕಥೆ, ನಿರೂಪಣೆಯೊಂದಿಗೆ ತಯಾರಾಗಿರುವ ಸಿನಿಮಾ ಇದು. ಈ ಚಿತ್ರದ ಮೂಲಕ ಚಂದ್ರು ಓಬಯ್ಯ ನಿರ್ದೇಶಕರಾಗುತ್ತಿದ್ದಾರೆ. ಹಾಗಂತ ಚಂದ್ರು ಓಬಯ್ಯ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಚಂದ್ರು ಓಬಯ್ಯ ಅವರು ನಿರ್ದೇಶಕರಾಗುವುದಕ್ಕೂ ಮುನ್ನ ಸಂಗೀತ ನಿರ್ದೇಶಕರಾದವರು. “ಟ್ರಿಗರ್‌”, “ಮನೋರಥ”, ” ರಾಜಪಥ” ಚಿತ್ರಗಳಿಗೆ ಸಂಗೀತ ಸಂಯೋಜಿಸಿದವರು. ಈಗ “ಯು ಟರ್ನ್‌ 2” ನಿರ್ದೇಶನದ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರಂಗಿನ ಲೋಕಕ್ಕೆ ಕಲರ್‌ ಫುಲ್‌ ಕನಸಿನೊಂದಿಗೆ ಎಂಟ್ರಿಯಾದ ಚಂದ್ರ ಓಬಯ್ಯ ಇದೀಗ ತಮ್ಮ ಕನಸಿನ ನಿರ್ದೇಶನದ ಚಿತ್ರದ ಮೂಲಕ ಹೊಸ ಯಶಸ್ಸು ಕಾಣುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದ ಮೊದಲ ಮೆಟ್ಟಿಲೆಂಬಂತೆ ಚಿತ್ರದ ಲಿರಿಕಲ್‌ ಸಾಂಗ್ ಕೂಡ ರಿಲೀಸ್‌ ಆಗಿದ್ದು, ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
“ಯು ಟರ್ನ್‌ 2” ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಐದು ದಿನಗಳ ಪ್ಯಾಚ್‌ ವರ್ಕ್‌ ಮುಗಿದರೆ ಸಿನಿಮಾ ಕಂಪ್ಲೀಟ್‌ ಆಗಲಿದೆ. ಸೆ. 11 ರಂದು ಚಿತ್ರದ ಲಿರಿಕಲ್‌ ವಿಡಿಯೊ ರಿಲೀಸ್‌ ಆಗಿದ್ದು, “ಊರ ಬಿಟ್ಟು ಊರೀಗೆ ಬಂದೀವಿ…” ಎಂಬ ಅರ್ಥಪೂರ್ಣ ಸಾಹಿತ್ಯವಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನವೀನ್‌ ಸಜ್ಜು ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಆನಂದ್‌ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ರಿಲೀಸ್‌ ಆದ ಕೆಲ ಗಂಟೆಗಳಲ್ಲೇ ಸಾವಿರಾರು ಲೈಕ್ಸ್‌ ಪಡೆದುಕೊಂಡಿದೆ. ಹಾಡಲ್ಲಿ ಸಾಹಿತ್ಯದ ಜೊತೆಗೆ ಸಂಗೀತದ ಮಾಧುರ್ಯ ಕೂಡ ಸೊಗಸಾಗಿದೆ. ಲೈವ್‌ ಜರ್ಮನ್‌ ಫ್ಲ್ಯೂಟ್‌ ಬಳಸಲಾಗಿದೆ. ಗುಣಮಟ್ಟದಿಂದ ಕೂಡಿರುವ ಹಾಡು ಕೊಡುವ ಉದ್ದೇಶದಿಂದ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಹಾಡನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂಬುದು ನಿರ್ದೇಶಕ ಚಂದ್ರು ಓಬಯ್ಯ ಅವರ ಮಾತು.
ಮೂವೀಸ್‌ ಫೋರ್ಟ್‌ ಬ್ಯಾನರ್‌ ನಲ್ಲಿ ಸಿನಿಮಾ ತಯಾರಾಗಿದ್ದು, ಆನಂದ್‌ ಸಂಪಂಗಿ ನಿರ್ಮಾಣವಿದೆ. ಇನ್ನು, ಈ ಸಿನಿಮಾದಲ್ಲಿ “ತಿಥಿʼ ಖ್ಯಾತಿಯ ಪೂಜಾ ನಾಯಕಿಯಾದರೆ, ಪ್ರಮುಖವಾಗಿ ನಿರ್ದೇಶಕ ಚಂದ್ರು ಓಬಯ್ಯ, ಕರಿಸುಬ್ಬು, “ಕಿರಿಕ್‌ ಪಾರ್ಟಿ” ರಾಘು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇದೊಂದು ಹಾರರ್‌ ಜಾನರ್‌ ಸಿನಿಮಾ ಆಗಿದ್ದು, ಮೊದಲು ಬಂದ ಯು ಟರ್ನ್‌ ಸಿನಿಮಾಗೂ ಈ ಚಿತ್ರಕ್ಕೂ ಯಾವ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಸಾಂಗ್‌ ಶೂಟ್‌ ಮಾಡಿದರೆ ಚಿತ್ರೀಕರಣ ಮುಗಿಯಲಿದೆ. ಚಿತ್ರಕ್ಕೆ ನವೀನ್‌ ತುರುವೇಕೆರೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಚೆಲುವ ಮೂರ್ತಿ, ಪ್ರಮೋದ್‌ ಗೌಡ, ಸ್ವರಾಜ್‌, ಅಶೋಕ್‌ ಇತರರು ” ಯು ಟರ್ನ್‌ 2 ” ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರೆಡಿಯಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

 

 

Categories
ಆಡಿಯೋ ಕಾರ್ನರ್

ಗಣಪತಿ ಹಬ್ಬಕ್ಕೆ ಲಾಂಚ್ ಆಯ್ತು ‘ಕೋಲು ಮಂಡೆ’ ವಿಡಿಯೋ ಆಲ್ಬಂ

ಆನಂದ್ ಆಡಿಯೋ ಹೊಸ ಪ್ರಯತ್ನಕ್ಕೆ ಚಂದನ್ ಶೆಟ್ಟಿ ಸಾಥ್

…………………………………………

ಕನ್ನಡ ಚಿತ್ರರಂಗದಲ್ಲಿ ಸರ್ವಕಾಲಿಕ ದಾಖಲೆ ಎನ್ನಬಹುದಾದ, ಬಹು ತಾರಾಬಳಗದ ಅದ್ದೂರಿ ಚಿತ್ರ ಹಬ್ಬ. ಈ ಚಿತ್ರದ ಹಾಡುಗಳು ಜನರ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಇಂತಹ ಯಶಸ್ವಿ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮ‌ೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಆನಂದ್ ಆಡಿಯೋ ಸಂಸ್ಥೆ ಈ ವರೆಗೂ ಸಾಕಷ್ಟು ಯಶಸ್ವಿ ಚಿತ್ರಗಳ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 

ಈಗ ‘ಕೋಲುಮಂಡೆ’ ಎಂಬ ವಿಡಿಯೋ ಆಲ್ಬಂ ಈ‌ ಸಂಸ್ಥೆಯಿಂದ ನಿರ್ಮಾಣವಾಗಿದ್ದು, ಗಣಪತಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಖ್ಯಾತ ಗಾಯಕ ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದ್ದು, ಚಂದನ್ ಶೆಟ್ಟಿ ಅವರೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸುವ ಈ ವಿಭಿನ್ನ ವಿಡಿಯೋ ಆಲ್ಬಂ ಅನ್ನು ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಸಂಕಲನವಿರುವ ಈ ಆಲ್ಬಂನ ಪರಿಕಲ್ಪನೆ ಮಯೂರಿ ಉಪಾಧ್ಯ ಅವರದು.


ಸುಪ್ರಸಿದ್ಧ ಜನಪದ ಹಾಡನ್ನು ತಮ್ಮದೇ ವಿಭಿನ್ನ ಶೈಲಿಯಲ್ಲಿ ಹಾಡುತಾ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. ಶಿವು, ನಂದಿನಿ ಹಾಗೂ ಸಾಕಷ್ಟು ಸಹ ಕಲಾವಿದರು ಈ ‘ಕೋಲುಮಂಡೆ’ ವಿಡಿಯೋ ಆಲ್ಬಂನಲ್ಲಿ ನಟಿಸಿದ್ದಾರೆ.
ಕೊರೋನ ಹಾವಳಿಯ ಈ ಸಮಯದಲ್ಲಿ ಸಾಕಷ್ಟು ಜನರಿಗೆ ಕೆಲಸ ವಿಲ್ಲದಂತಾಗಿದೆ. ಈ ಸಮಯದಲ್ಲಿ ಏನಾದರೂ ಮಾಡೋಣ ಎಂದು ಯೋಚಿಸುತ್ತಿದ್ದಾಗ ಈ ವಿಡಿಯೋ ಆಲ್ಬಂ ನಿರ್ಮಾಣ ಮಾಡೋಣ ಅನಿಸಿತು. ಅಂದುಕೊಂಡ ಹಾಗೆ ಈ ಆಲ್ಬಂ ನಿರ್ಮಿಸಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಮಾಧ್ಯಮದವರ ಹಾಗೂ ನೋಡಗರ ಸಹಕಾರವಿರಲಿ ಎನ್ನುತ್ತಾರೆ ಆನಂದ್ ಆಡಿಯೋ ಶ್ಯಾಮ್ ಹಾಗೂ ಆನಂದ್.

error: Content is protected !!