Categories
ಸಿನಿ ಸುದ್ದಿ

ಲವ್ ಲಿ ಹಾಡಿಗೆ ಜೈ ಅಂದ ಪ್ರೇಕ್ಷಕ: ಟೈಟಲ್ ಸಾಂಗ್ ರಿಲೀಸ್ ಮಾಡಿದ ತಾರೆಯರು

ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ‘ಲವ್ ಲಿ’ ಚಿತ್ರದ ಟೈಟಲ್ ಹಾಡು ಇತ್ತೀಚಿಗೆ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವಾದ ಈ ಗೀತೆಯನ್ನು ಬಿಡುಗಡೆ ಮಾಡಲು ಮುಖ್ಯ ಅಥಿತಿಗಳಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ‘ನೆನಪಿರಲಿ’ ಪ್ರೇಮ್, ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಆಗಮಿಸಿದ್ದರು. ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ಯುವ ಪ್ರತಿಭೆ ಚೇತನ್ ಕೇಶವ್.

‘ನಿರ್ಮಾಪಕರ ಸಹಕಾರದಿಂದ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ. ಸಾಂಗ್ ನಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿ ಬಂದಿದೆ. ಪ್ರೀತಿಯಲ್ಲಿ ಎನೆಲ್ಲಾ ಇರುತ್ತೆ ಎಂಬುದು ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾಂಟಿಕ್ ಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಕಂಟೆಂಟ್ ಬಗ್ಗೆ ಹೇಳಲಾಗಿದೆ. ನಾನು 9 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶಕ ನರ್ತನ್ ಜೊತೆ ‘ಮಫ್ತಿ’ ಚಿತ್ರಕ್ಕೆ ಕೆಲಸ ಮಾಡಿದ್ದೇನೆ. ಸ್ಕೂಲ್ ದಿನಗಳಿಂದ ನನಗೆ ಸಿನಿಮಾ ಮಾಡುವ ಆಸೆ. ಉಪೇಂದ್ರ, ರವಿಚಂದ್ರನ್ ಅವರು ನನಗೆ ಸ್ಪೂರ್ತಿ. ಆದರೆ ನಾನು ಹೆಚ್ಚಾಗಿ ಆ್ಯಕ್ಷನ್ ಸಿನಿಮಾಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ಮಾಸ್ , ಕ್ಲಾಸ್ ಎರಡನ್ನು ಬಳಸಿದ್ದೇನೆ.

ಚಿತ್ರದಲ್ಲಿ ಸೋಷಿಯಲ್ ಮೆಸೇಜ್ ಕೂಡ ಇದೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಲಂಡನ್ ನಲ್ಲಿ ಒಂದು ಸಾಂಗ್ ಶೂಟಿಂಗ್ ಮಾಡಲು ಯೋಜನೆ ಹಾಕಲಾಗಿದೆ. ರೌಡಿಸಮ್, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಜಾನರ್ ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ ಮೇಲೆ ಸಂಬಂಧಗಳು ಮುಖ್ಯ. ಅವುಗಳನ್ನು ಹೇಗೆ ಉಳಿಸುಕೊಳ್ಳಬೇಕು? ಎಂಬುದು ಕಥೆಯಲ್ಲಿ ಇದೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಮೂರು ಆ್ಯಕ್ಷನ್, ನಾಲ್ಕು ಹಾಡುಗಳಿದೆ’ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ ಮಾತನಾಡಿ, ‘ನನ್ನನ್ನು ತುಂಬಾ ಕಾಡಿದಂತಹ ಸಿನಿಮಾ ಇದು. ಈಗ ಈ ಹಾಡಿನಿಂದ ಪ್ರಮೋಷನ್ ಶುರು ಮಾಡಿದ್ದು, ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಇದು ಸುಂದರ ಪ್ರೇಮಕಥೆಯ ಚಿತ್ರ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು.

ನಂತರ ನಾಯಕಿ ಸ್ಟೇಪಿ ಪಟೇಲ್ ‘ನಾನು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು ಕನ್ನಡ ಮೊದಲ ಸಿನಿಮಾ. ಒಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಾನು ಇನ್ನಷ್ಟು ಸಿನಿಮಾ ಮಾಡಲು ನಿಮ್ಮ ಆಶಿರ್ವಾದ ಬೇಕು. ನಾನು ಈ ಚಿತ್ರದಲ್ಲಿ ಜನನಿ ಎಂಬ ಪಾತ್ರ ನಿರ್ವಹಿಸಿದ್ದೇನೆ’ ಎಂದು ಹೇಳಿದರು.

ಸಹ ನಿರ್ಮಾಪಕರಾದ ಬಾಲಕೃಷ್ಣ ಜಿ.ಎನ್, ಕೃಷ್ಣ, ಬೇಬಿ ವಂಶಿಕಾ ತಮ್ಮ ಅನುಭವ ಹಂಚಿಕೊಂಡರು. ಅಥಿತಿಗಳಾಗಿ ಆಗಮಿಸಿದ್ದ ರವಿಚಂದ್ರನ್ ಅಭುವನಾಸ್ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿ ಚಿತ್ರ ‘ಲವ್ ಲಿ’ ಆಗಿರುತ್ತದೆ. ಹೊಸಬರಲ್ಲಿ ಉತ್ಸಾಹವಿದ್ದು, ಹಾಡು ಚೆನ್ನಾಗಿ ಬಂದಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

ಹಾಡು ಬಿಡುಗಡೆ ಮಾಡಿದ ಉಪೇಂದ್ರ ಅವರು ಮಾತನಾಡಿ ‘ಸಾಂಗ್ ಇಂಪಾಗಿದ್ದು, ಇಂಟ್ರೆಸ್ಟ್ ಆಗಿ ಕೂಡ ಇದೆ. ಸಾಂಗ್ ನೋಡುತ್ತಿದ್ದರೆ ನಂಗೆ ಸಿನಿಮಾ ನೋಡಬೇಕು ಅನಿಸುತ್ತಿದೆ’ ಎಂದರು.

ನೆನಪಿರಲಿ ಪ್ರೇಮ್ ‘ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಪ್ರಿಯಂಕಾ ಉಪೇಂದ್ರ ಹಾಗೂ ಹರಿಪ್ರಿಯ ಅವರು ಹಾಡಿನ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು.

Categories
ಸಿನಿ ಸುದ್ದಿ

ಸಂಜೆ ಆದ್ರೆ ಆಗು ರೆಡಿ, ನೈಂಟಿ ಹೊಡಿ, ಮನೀಗ್ ನಡಿ: ಇದು ಬಿರಾದಾರ ನಟನೆಯ 500 ನೇ ಸಿನಿಮಾ‌ ಸಾಂಗು

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಬಿರಾದಾರ್ ಅಭಿನಯದ ಐನೂರನೇ ಸಿನಿಮಾ ಸುದ್ದಿಯಲ್ಲಿದ್ದ “90 ಬಿಡಿ ಮನೀಗ್ ನಡಿ” ಸಿನಿಮಾ ಇದೀಗ ಚಿತ್ರದ ಟೈಟಲ್ ಹಾಡನ್ನ ಬಿಡುಗಡೆಗೊಳಿಸಿ ಸದ್ದು ಮಾಡತೊಡಗಿದೆ. ಈ ಹಿಂದೆ ಉತ್ತರ ಕರ್ನಾಟಕದ ನಾಟಿ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಜವಾರಿ ಹಾಡು ಬಿಟ್ಟು ಹಿಟ್ ಮಾಡಿಕೊಂಡಿತ್ತು. ಎಪ್ಪತ್ತು ವರ್ಷದ ಬಿರಾದಾರ್ ಚಿತ್ರದ ನಾಯಕಿಯ ಜೊತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿಕೊಂಡಿತ್ತು.

ಚಿತ್ರತಂಡ ಇದೀಗ ಡಾ. ವಿ. ನಾಗೇಂದ್ರ ಪ್ರಸಾದ್ ರಚನೆಯ, ಡಾ. ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಹಾಡು ಬಿಡುಗಡೆಗೊಳಿಸಿದೆ. ಕಿರಣ್ ಶಂಕರ್ ಸಂಗೀತ ನಿರ್ದೇಶನವಿರುವ ಈ ಹಾಡು ” ಸಂಜೆ ಗಂಟ ಸುಮ್ನೆ ದುಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲುಗಳಿಂದ ಪ್ರಾರಂಭಗೊಂಡು, “ಸಂಜೆ ಆದ್ರೆ ಆಗು ರೆಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲಿನ ಜೊತೆ ಸೇರಿಕೊಂಡು ” ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ” ಎನ್ನುತ್ತಾ ಮಜವಾಗಿ ಕೊನೆಗೊಳ್ಳುತ್ತದೆ.

ಇದೇ ಚಿತ್ರದ “ಸಿಂಗಲ್ ಕಣ್ಣಾ” ಹಾಡಿಗೆ ಬಿರಾದಾರ್ ಜೊತೆ ಪ್ರಯೋಗ ಮಾಡಿ ಗೆದ್ದ ಭೂಷಣ್ ಇಲ್ಲಿಯೂ ಕೊರಿಯೋಗ್ರಫಿಯಲ್ಲಿ ಸದ್ದು ಮಾಡಿದ್ದಾರೆ.
‘ಅಮ್ಮ ಟಾಕೀಸ್ ಬಾಗಲಕೋಟೆ’ ಸಂಸ್ಥೆಯಡಿ ರತ್ನಮಾಲ ಬಾದರದಿನ್ನಿ ನಿರ್ಮಿಸಿರುವ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ.

ಒಟ್ಟಿನಲ್ಲಿ ಮಜವಾದ ಸಾಹಿತ್ಯದ ಜೊತೆ ನಶೆ ಏರಿಸುವ ಎಣ್ಣೆ ಹಾಡಿಗೆ ನಟ ಬಿರಾದಾರ್ ಜೊತೆ ಕರಿಸುಬ್ಬು, ಪ್ರಶಾಂತ್ ಸಿದ್ದಿ ಸಖತ್ ಸ್ಟೆಪ್ ಹಾಕಿದ್ದು, ಹಾಡಿಗೊಂದು ಮೆರಗುಕೊಟ್ಟಿದ್ದಾರೆ. ಅಂದಹಾಗೆ ಇದೇ ಬರುವ ಹದಿನೇಳನೇ ತಾರೀಖಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ಸಿದ್ಧತೆಯಲ್ಲಿ ಚಿತ್ರತಂಡವಿದೆ.

Categories
ಸಿನಿ ಸುದ್ದಿ

ಸಪ್ಲೈಯರ್ ಶಂಕರ ಶೂಟಿಂಗ್ ಮುಗಿಸಿದ: ಗಂಟುಮೂಟೆ ಹುಡುಗ ಸಿನಿಮಾ ಹೀರೋ

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ Supplier ಶಂಕರ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ Supplier ಶಂಕರ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಟೈಟಲ್ ಹೇಳುವಂತೆ ಒಬ್ಬ ಬಾರ್ Supplier ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ನಿಶ್ಚಿತ್ ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ನಟಿಸಿದ್ದು, ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ. Supplier ಶಂಕರ ಸಿನಿಮಾಗೆ ರಂಜಿತ್, ಕಥೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

ವಿಜಯ್ ಪ್ರಕಾಶ್, ಅಮ್ಮ ನನ್ನೀ ಈ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ.

ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ Supplier ಶಂಕರ್ ಸಿನಿಮಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರವು ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಭೀಮನ ಹಿಂದೆ ನಿಂತ ನಿರ್ದೇಶಕ ಹರ್ಷ: ಗೋಪಿಚಂದ್ ಫಸ್ಟ್ ಲುಕ್ ಇದು…

ತೆಲುಗಿನ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡ ಎ.ಹರ್ಷ ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ ಜನ್ಮದಿನದ ಪ್ರಯುಕ್ತ ಫಸ್ಟ್ ಹಾಗೂ ಟೈಟಲ್ ನ್ನು ಚಿತ್ರತಂಡ ರಿವೀಲ್ ಮಾಡಿದೆ. ಭೀಮನಾಗಿ ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌ ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ.

ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ.ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ.

ಹೈದ್ರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.

Categories
ಸಿನಿ ಸುದ್ದಿ

ಅಣ್ಣ ತಂಗಿಯ ಅನುಬಂಧ! ವಿನೋದ್-ಸೌಂದರ್ಯ ಜಯಮಾಲ ಅಪರೂಪದ ಭೇಟಿ: ಬಾಲ್ಯದ ನೆನಪಿಗೆ ಜಾರಿದ ಬ್ರದರ್-ಸಿಸ್ಟರ್

ಅಭಿಷೇಕ್ ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ.. ಹೇಗಿತ್ತು ಗೊತ್ತಾ ಅಣ್ಣ ತಂಗಿಯ ಮಾತುಕತೆ?

ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ. ಈ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆಕಾಣಿಸಿಕೊಂಡಿರಲಿಲ್ಲ. ಒಬ್ಬರಿಗೊಬ್ಬರು ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ. ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಈ ಅಣ್ಣ ತಂಗಿ ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿಲ್ಲ.

ವಿನೋದ್ ಹಾಗೂ ಸೌಂದರ್ಯ ಇಂದಿಗೂ, ಎಂದೆಂದಿಗೂ ಅಣ್ಣ ತಂಗಿಯೇ. ಆದ್ರೆ ಅವರಿಬ್ಬರನ್ನು ಅವರ ಅಕ್ಕ-ಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ. ಆದ್ರೆ ಸಮಯ-ಸಂದರ್ಭ ಇದೆಲ್ಲಾ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ. ಮೊನ್ನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ..ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ.

ಬಾಲ್ಯದ ಆಟ-ತುಂಟಾಟ ನೆನಪುಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ. ಅದು ಬಿಟ್ರೆ ಅವ್ರು ದೂರವಾಗಿದ್ದರೆ ,ಅವ್ರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಸತ್ಯಕ್ಕೆ ದೂರವಾದುದ್ದು.

Categories
ಸಿನಿ ಸುದ್ದಿ

ಆದಿಪುರುಷನ ಹಿಂದೆ ಬಿದ್ದ ಕೆ ಆರ್ ಜಿ ಸ್ಟುಡಿಯೋಸ್! ಪ್ರಭಾಸ್ ಸಿನಿಮಾ ವಿತರಣೆಗೆ ಮುಂದಾದ ಕನ್ನಡ ನಿರ್ಮಾಣ ಸಂಸ್ಥೆ

ಬಹಳ ಯಶಸ್ಸು ಕಂಡ ಕೆ.ಜಿ.ಎಫ್ 1, ಕೆ.ಜಿ.ಎಫ್ 2, ಕಾಂತಾರ, ಚಾರ್ಲಿ 777, ಗಂಧದಗುಡಿ, ವಕೀಲ್ ಸಾಬ್ ಮತ್ತು ದಸರಾ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದೀಗ ಆದಿಪುರುಷ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. .

ಕರ್ನಾಟಕದಲ್ಲಿ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಇದುವರೆಗೂ ಬಹಳ ಶ್ರದ್ದೆಯಿಂದ ಚಿತ್ರಗಳನ್ನು ಬಿಡುಗಡೆ ಮಾಡಿಕೊಂಡು ಬರುತ್ತಿರುವುದು ಕರ್ನಾಟಕದ ಜನತೆಗೆ ತಿಳಿದುರುವ ವಿಷಯ. ಸದಭಿರುಚಿಯ ಚಿತ್ರಗಳನ್ನು ಸಿನಿಮಾ ಪ್ರೇಕ್ಷರಿಗೆ ತಲುಪಿಸುವ ಕೈಕಂರ್ಯದಲ್ಲಿ ಕೆ.ಆರ್.ಜಿ.ಸ್ಟುಡಿಯೋಸ್ ಸಂಸ್ಥೆ ತೊಡಗಿದೆ. ಈ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಆದಿಪುರುಷ್ ಆಗಲಿದೆ ಅನ್ನುವುದು ಸಂಸ್ಥೆಯ ನಂಬಿಕೆ.

ನಮ್ಮ ಹಿಂದೂ ಸಂಸ್ಕೃತಿಯ ಮಹಾಕಾವ್ಯ ಎಂದೇ ಹೇಳಲ್ಪಡುವ ಪವಿತ್ರ ಗ್ರಂಥ ರಾಮಾಯಣದ ಎಳೆಯನ್ನು ಆಧಿರಿಸಿ ತಯಾರಿಸಿರುವ ಚಿತ್ರ ಆದಿಪುರುಷ್.
ಟಿ. ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕಥೆ ಹೆಣೆದು ನಿರ್ದೇಶನ ಮಾಡುತ್ತಿರುವುದು ಓಂ ರಾವತ್ ಅವರು. ಆದಿಪುರುಷ್ ಚಿತ್ರವು ಏಕಕಾಲಕ್ಕೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಪ್ರಭಾಸ್, ಕ್ರಿತಿ ಸನೋನ್ , ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

“ಆದಿಪುರುಷ್ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ” ಎಂದು ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರು ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರು ಆಗಿರುವ ಕಾರ್ತಿಕ್ ಗೌಡ ಸಂತಸ ವ್ಯಕ್ತ ಪಡಿಸಿದ್ದಾರೆ. ನಮ್ಮ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿರುವ ಸಾರವನ್ನು ಇಂದಿನ ಕಾಲಘಟ್ಟಕ್ಕೆ ಮತ್ತು ಇಂದಿನ ಪೀಳಿಗೆಗೆ ಅನುಗುಣವಾಗಿ ಆದಿಪುರುಷ್ ಚಿತ್ರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರವು ಪ್ರಭಾಸ್ ಮತ್ತು ಯು. ವಿ ಕ್ರಿಯೇಷನ್ಸ್ ಜೊತೆಗಿನ ಕೆ.ಆರ್.ಜಿ ಸ್ಟುಡಿಯೋಸ್ ಒಡನಾಟಕ್ಕೂ ಸಾಕ್ಷಿಯಾಗಲಿದೆ.

ಆದಿಪುರುಷ್ ಚಿತ್ರ ಜೂನ್ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಆಗಸ್ಟ್‌ನಲ್ಲಿ ರೇವ್ ಪಾರ್ಟಿ!

ರಾಜು ಬೋನಗಾನಿ ನಿರ್ದೇಶನದ ವಿಭಿನ್ನ ಕಥಾಹಂದರದ ‘ರೇವ್ ಪಾರ್ಟಿ’ ಚಿತ್ರದ ಚಿತ್ರೀಕರಣವು ಯಶಸ್ವಿಯಾಗಿ ಮುಗಿದಿದ್ದು, ಚಿತ್ರವು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ.


ಬೋನಗಾನಿ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ರಾಜು ಬೋನಗಾನಿ ನಿರ್ಮಿಸುತ್ತಿರುವ ‘ರೇವ್ ಪಾರ್ಟಿ’ ಚಿತ್ರದಲ್ಲಿ ಕ್ರಿಶ್ ಸಿದ್ದಿಪಲ್ಲಿ, ರಿತಿಕಾ ಚರ್ಕವರ್ತಿ, ಐಶ್ವರ್ಯಾ ಗೌಡ, ಸುಚೇಂದ್ರ ಪ್ರಸಾದ್, ತಾರಕ್ ಪೊನ್ನಪ್ಪ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಉಡುಪಿಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಈ ಚಿತ್ರಕ್ಕೆ ರಾಜು ಬೋನಗಾನಿ ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ.


ಯಶಸ್ವಿಯಾಗಿ ಚಿತ್ರೀಕರಣ ಮುಕ್ತಾಯವಾಗಲು ಸಹಕರಿಸಿದ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ
ರಾಜು ಬೋನಗಾನಿ ಧನ್ಯವಾದ ತಿಳಿಸಿದ್ದಾರೆ.

ಸಾಮಾನ್ಯವಾಗಿ ರೇವ್ ಪಾರ್ಟಿಗಳು ಬೆಂಗಳೂರು, ಉಡುಪಿ ಮತ್ತು ಗೋವಾದಲ್ಲಿ ನಡೆಯುತ್ತವೆ. ಈ ಪಾರ್ಟಿಗಳು ಹೇಗೆ ನಡೆಯುತ್ತವೆ? ಅದರ ಹಿಂದೆ ಯಾರೆಲ್ಲಾ ಇರುತ್ತಾರೆ? ಈ ಪಾರ್ಟಿಗಳು ಯುವ ಜನತೆಯ ಮೇಲೆ ಏನೆಲ್ಲಾ ದುಷ್ಪರಿಣಾಮಗಳು ಬೀರುತ್ತವೆ ಎಂಬ ಅಂಶಗಳನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ.

‘ರೇವ್ ಪಾರ್ಟಿ’ ಚಿತ್ರವು ಇಂದಿನ ಯುವ ಜನತೆಗೆ ಬಹಳ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ನಿರ್ದೇಶಕ ರಾಜು ಬೋನಗಾನಿ.

‘ರೇವ್ ಪಾರ್ಟಿ’ ಚಿತ್ರಕ್ಕೆ ದಿಲೀಪ್ ಭಂಡಾರಿ ಸಂಗೀತ ಸಂಯೋಜಿಸಿದ್ದು, ವೆಂಕಟ್ ಮನ್ನಂ ಛಾಯಾಗ್ರಹಣ ಮಾಡಿದ್ದಾರೆ. ರವಿಕುಮಾರ್ ಅವರ ಸಂಕಲನ, ವೆಂಕಟ್ ಆರೆ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ರೋಡ್ ಕಿಂಗ್ ಹಾಡಿದಾಗ: ಜೂನ್ 23ಕ್ಕೆ ಚಿತ್ರ ರಿಲೀಸ್

ಮತೀನ್ ಹುಸೇನ್ ನಾಯಕರಾಗಿ ನಟಿಸಿರುವ `ರೋಡ್ ಕಿಂಗ್’ ಚಿತ್ರದ ಮೂರು ಹಾಡುಗಳು trendsetter productions ಯೂಟ್ಯೂಬ್ ಚಾನಲ್ ನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಕಲಾರಸಿಕರ ಮನ ಗೆದ್ದಿದೆ. ಪ್ರಭು ಎಸ್ ಆರ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚಂದನ್ ಶೆಟ್ಟಿ ಮಾಧುರಿ ಹಾಗೂ ವಿಶಾಲ್ ಹಾಡಿದ್ದಾರೆ. ಡಾ||ವಿ.ನಾಗೇಂದ್ರ ಪ್ರಸಾದ್, ಮತೀನ್ ಹುಸೇನ್ ಹಾಗೂ ಸಾಯಿ ನವೀನ್ ಹಾಡುಗಳನ್ನು ಬರೆದಿದ್ದಾರೆ. ಟ್ರೇಲರ್ ಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಜೂನ್ 23 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದಿಲೀಪ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮತೀನ್ ಹುಸೇನ್ ಕಥೆ ಬರೆದಿದ್ದು, ರಾಂಡಿ ಕೆಂಟ್ ನಿರ್ದೇಶನ ಮಾಡಿದ್ದಾರೆ. ಮತೀನ್ ಹುಸೇನ್, ಮಹೇಶ್ ಅವರ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ.

ರಾಂಡಿ ಕೆಂಟ್ ಹಾಗೂ ಮತೀನ್ ಹುಸೇನ್ ಸ್ನೇಹಿತರು. ಅಮೇರಿಕಾದಲ್ಲಿರುವ ರಾಂಡಿ ಅವರು ಅಲ್ಲಿಂದಲೇ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ವಿಶೇಷ.

ನಾಯಕಿಯಾಗಿ `ರನ್ ಆಂಟೋನಿ’ ಖ್ಯಾತಿಯ ರುಕ್ಸರ್ ನಟಿಸಿದ್ದಾರೆ. ಲೀಲಾ ಮೋಹನ್, ಹರೀಶ್ ಕುಮಾರ್, ಸುಮಾ ರಾವ್, ನಯನಾ ಶೆಟ್ಟಿ, ಭುವನ್ ರಾಜ್, ರಿಜ್ವಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆರಿಫ್ ಲಲಾನಿ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಹಳ್ಳಿ ಕಥೆ ಹೇಳ್ತಾರೆ ವಿನಯ್ ರಾಜಕುಮಾರ್! ಗ್ರಾಮಾಯಣ ಸಿನಿಮಾಗೆ ಪೂಜೆ

ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ
“ಗ್ರಾಮಾಯಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಆರ್ ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಗ್ರಾಮಾಯಣ” ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೆ ಈ ಕಥೆಗೆ ಇವರೆ ಸೂಕ್ತ ನಾಯಕ ಅಂದುಕೊಂಡೆ. ಅವರು ಕಥೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರಾದ ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ದೇವನೂರು ಚಂದ್ರು.

ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ “ಗ್ರಾಮಾಯಣ. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು ಎಂದರು ವಿನಯ್ ರಾಜಕುಮಾರ್.

“U I” ಚಿತ್ರದ ಸೆಟ್ ನಲ್ಲಿ “ಗ್ರಾಮಾಯಣ” ಚಿತ್ರದ ಟೀಸರ್ ನೋಡಿದೆ. ಟೀಸರ್ ಗೆ ತುಂಬಾ ಪಾಸಿಟಿವ್ ಕಾಮೆಂಟ್ಸ್ ಗಳು ಬಂದಿದ್ದವು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲಂಸ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದೇನೆ ಎನ್ನುತ್ತಾರೆ ಕೆ.ಪಿ.ಶ್ರೀಕಾಂತ್.

ನಾನು “ಗ್ರಾಮಾಯಣ”ದ ಹಾಡೊಂದು ಕೇಳಿ ತುಂಬಾ ಖುಷಿಪಟ್ಟಿದೆ. ಈಗ ನಮ್ಮ ಅಣ್ಣ ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಚೆನ್ನಾಗಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾವಿರಲಿ ಎಂದರು ಲಹರಿ ವೇಲು.

ಸಹ ನಿರ್ಮಾಪಕ ನವೀನ್ ಮನೋಹರನ್, ಕಲಾವಿದರಾದ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ “ಗ್ರಾಮಾಯಣ” ದ ಕುರಿತು ಮಾತನಾಡಿದರು. ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ಅಷ್ಟು ಗಣ್ಯರು “ಗ್ರಾಮಾಯಣ”, ” ರಾಮಾಯಣ” ದಷ್ಟೇ ಕೀರ್ತಿ ಪಡೆಯಲಿ ಎಂದು ಹಾರೈಸಿದರು.

Categories
ಸಿನಿ ಸುದ್ದಿ

ಎ2 ಮ್ಯೂಸಿಕ್ ಹೊಸ ಹೆಜ್ಜೆ: ಎ2 ಒರಿಜಿನಲ್ಸ್ ಮೂಲಕ ನಿನಗಾಗಿ ಮ್ಯೂಸಿಕಲ್ ಆಲ್ಬಂ: ರಿಲೀಸ್ ಮಾಡಿ ಶುಭ ಕೋರಿದ ಅಜೇಯ್ ರಾವ್

ಕನ್ನಡ ಸಿನಿಮಾ ಪ್ರಪಂಚದ ಸಂಗೀತ ಪ್ರೇಮಿಗಳು ಸದಾ ಗುನುಗುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು ಎ2 ಮ್ಯೂಸಿಕ್. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ ಅಶ್ವಿನಿ ಮೀಡಿಯಾ ನೆಟ್ವರ್ಕ್‌ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು. ಸಲಗ ಸಿನಿಮಾ ಮೂಲಕ ಗಾಂಧಿ ನಗರದಲ್ಲಿ ಹೊಸ ಹೆಜ್ಜೆ ಇಟ್ಟು ವಿಜಯೋತ್ಸವನ್ನು ಸಂಭ್ರಮಿಸಿತು. ಬಳಿಕ A2 ಸಂಸ್ಥೆ ಭತ್ತಳಿಕೆಯಿಂದ ಬಂದ ಹಾಡುಗಳೆಲ್ಲವೂ ದಾಖಲೆ ಬರೆದಿವೆ.

ಇತ್ತೀಚೆಗೆ ಸೂತ್ರಧಾರ, ಹಂಟರ್, ಕೆಟಿಎಂ, ಯುದ್ಧಕಾಂಡ, ಹಾಸ್ಟೆಲ್ ಹುಡುಗರು ಸೇರಿದಂತೆ ನೂರಕ್ಕೂ ಹೆಚ್ಚು ಹೊಸ ಸಿನಿಮಾಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ. ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ. ಹೊಸ ಪ್ರತಿಭೆಗಳಿವೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಮ್ಯೂಸಿಕಲ್ ಸೀರೀಸ್ ನಿರ್ಮಾಣಕ್ಕೂ ಕೈ ಹಾಕಿದೆ.

A2 ಸಂಸ್ಥೆಯ ಈ ಸಾಹಸಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ. ‌ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್ ಗಳಲ್ಲಿ ಬರ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮಂ ಪ್ಯಾನ್ ಇಂಡಿಯಾ ನಿನಗಾಗಿ ಆಲ್ಬಂ ಇದಾಗಿದೆ. ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ಮಾತನಾಡಿದೆ ಅಜಯ್ ರಾವ್, ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಹಾಗೂ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ. ವ್ಯಕ್ತಿಗಳು, ಸಂಪರ್ಕ, ಸಂಬಂಧ ಎಲ್ಲಾ ಅವರೇ. ಆ ಅಭಿಮಾನ, ಪ್ರೀತಿ ಅಲ್ಲಿಂದ ಬೆಳವಣಿಗೆ ಆಗಿದೆ. ಎಕ್ಸ್ ಕ್ಯೂಸ್ ಮಿ‌ ಸಮಯದಲ್ಲಿಯೂ ನಾನು ಹೊಸಬ. ನನಗೂ ಯಾರು ಪರಿಚಯ ಇರಲಿಲ್ಲ. ಯಾರೋ ಒಬ್ಬರು ಅವಕಾಶ ಕೊಟ್ಟರು. ಇವತ್ತು ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದೇನೆ. ಆರ್ಟಿಸ್ಟ್ ಪ್ರಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ. ನೈಜತೆಯಾಗಿ ಹಾಡು ಮೂಡಿದೆ. ನನ್ನ ಹೊಸ ಸಿನಿಮಾ ಯುದ್ಧಕಾಂಡ ಆಡಿಯೋ ಎ2 ಮ್ಯೂಸಿಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

A2 ಮ್ಯೂಸಿಕ್ ಸಂಸ್ಥೆಯ ಪ್ರವೀಣ್ ಮಾತನಾಡಿ, ಕಾನ್ಸೆಪ್ಟ್ ಚೆನ್ನಾಗಿದೆ ಎಂದು‌ ಮಾಡಿದ್ದೇವೆ. ಹೊಸಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೇವೆ‌ ಎಂದು ತಿಳಿಸಿದರು.

ನಿರ್ದೇಶಕ ಅಕ್ಷ, ಇದೊಂದು ಮ್ಯೂಸಿಕಲ್ ಸೀರೀಸ್.‌ ಕನ್ನಡದಲ್ಲಿ ನಿನಗಾಗಿ ಎಂಬ ಟೈಟಲ್ ನಡಿ ರಿಲೀಸ್ ಆಗುತ್ತಿದೆ. ಬೇರೆ ಭಾಷೆಯಲ್ಲಿಯೂ ಬರುತ್ತಿದೆ. ಕನ್ನಡ ವರ್ಷನ್ ಆಲ್ಬಂನ್ನು ಲಾಕ್ ಡೌನ್ ಗೂ‌ ಮೊದಲು ಶುರು ಮಾಡಿದ್ದೆವು. ನಾನು ಮತ್ತು ಡಾರ್ಕ್ ಕಾಲೇಜ್ ದಿನಗಳಲ್ಲಿ ಚರ್ಚೆ ಮಾಡಿದ್ದೇವು. ಇಷ್ಡು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಅಂದುಕೊಂಡಿರಲಿಲ್ಲ. ಒಂದು ವರ್ಷ ಆದಮೇಲೆ‌ ನಾಲ್ಕು ಹಾಡುಗಳನ್ನು ಒಂದು ಕಥೆಯಲ್ಲಿ ನರೇಟ್ ಮಾಡಬೇಕು ಎಂಬ ಐಡಿಯಾ ಬಂತು ಎಂದರು.

ನಿನಗಾಗಿ ಆಲ್ಬಂ ಸೀರೀಸ್ ಗೆ ಸಂಗೀತ ನಿರ್ದೇಶನ ಜೊತೆಗೆ ಪದಪುಂಜ ಪೊಣಿಸಿರುವುದು ಯುವ ಪ್ರತಿಭೆ ಟಾರ್ಕ್( ಆದರ್ಶ್). ಅಕ್ಷ್ ನಿರ್ದೇಶನದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ನಿರೀಕ್ಷಿತ್ ಹಾಗೂ ಯಾನ್ವಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಆಲ್ಬಂ ಕನ್ನಡದಲ್ಲಿ ವಿಭಿನ್ನ ಹಾಗೂ ಹೊಚ್ಚ ಹೊಸ ಪ್ರಯತ್ನವಾಗಿದೆ.
ಚಿಕ್ಕಮಗಳೂರು, ಹಾಸನ್, ಸಕಲೇಶಪುರ ಸುತ್ತಮುತ್ತಲಿನ ರಮಣೀಯ ಪ್ರದೇಶದಲ್ಲಿ ಈ ಆಲ್ಬಂನ ಚಿತ್ರೀಕರಣ ಮಾಡಲಾಗಿದೆ.

. ಶಶಾಂಕ್, ಜಂಗಮ್, ವಿಕ್ಕಿ ಮತ್ತು ದೀಪು ನಾರಾಯಣ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥ ಹೊಸ ಪ್ರಯತ್ನಗಳಿಗೆ ಎ2 ಒರಿಜಿನಲ್ಸ್ ಮುಂದಾಗಲಿದ್ದು, ಈ ಹೊಸತನದಿಂದ ಕೂಡಿರುವ ಮ್ಯೂಸಿಕಲ್ ಆಲ್ಬಂ ಅನ್ನು ಕನ್ನಡಿಗರು ಮೆಚ್ಚಿ ಹಂಚಿ ಹಾರೈಸಬೇಕಿದೆ.

error: Content is protected !!