ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಘೋಷಣೆಯಾಗಿವೆ. ಏಕಕಾಲಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಗಳು ಅನೌನ್ಸ್ ಆಗಿವೆ. ಈ ಪೈಕಿ ಶಿವಣ್ಣ SCFC01 ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕರಾದ ಸ್ಯಾಮ್ ಸಿ.ಎಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ವಿಕ್ರಂ ವೇದ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿರುವ ಸ್ಯಾಮ್ ಕರುನಾಡ ಚಕ್ರವರ್ತಿ ಶಿವಣ್ಣ ಬಣ್ಣ ಹಚ್ಚಲಿರುವ ಅಪ್ ಕಮ್ಮಿಂಗ್ ಪ್ರಾಜೆಕ್ಟ್ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಧೀರ್ ಚಂದ್ರ ಪದ್ರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಾರ್ತಿಕ್ ಅದ್ವೈತ್ ನಿರ್ದೇಶನದಲ್ಲಿ ಮಾಡಲಿದ್ದಾರೆ.
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಪ್ರಾಜೆಕ್ಟ್ ಮೂಲಕ ಸ್ಯಾಮ್ ಸಿ ಎಸ್ ಪ್ಯಾನ್ ಇಂಡಿಯಾ ಮ್ಯೂಸಿಕಲ್ ಐಕಾನ್ ಆಗಲಿದ್ದಾರೆ.
ಈ ಹಿಂದೆ ‘ಜಂಟಲ್ ಮ್ಯಾನ್’, ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ.
ಈ ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಅದಕ್ಕೂ ಮುನ್ನ, ಸಂಗೀತ ಸಂಯೋಜನೆಯ ಕೆಲಸಗಳು ಪ್ರಾರಂಭವಾಗಿವೆ. RRR ಚಿತ್ರದ ‘ನಾಟ್ಟು ನಾಟ್ಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಕೀರವಾಣಿ ಸಂಗೀತಕ್ಕೆ ಖ್ಯಾತ ಗೀತರಚನೆಕಾರ ವೈರಮುತ್ತು ಸಾಹಿತ್ಯ ರಚಿಸುತ್ತಿದ್ದಾರೆ. ಈಗಾಗಲೇ ಸೋಮವಾರದಿಂದ ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಟ್ಯೂನ್ ಹಾಕುವ ಕೆಲಸ ಪ್ರಾರಂಭವಾಗಿದೆ. ಈ ಸೆಷನ್ನಲ್ಲಿ ಕೀರವಾಣಿ, ವೈರಮುತ್ತು, ಕುಂಜುಮೋನ್, ಗೋಕುಲ್ ಕೃಷ್ಣ ಮುಂತಾದವರು ಭಾಗವಹಿಸಿದ್ದಾರೆ.
‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಎ. ಗೋಕುಲ್ ಕೃಷ್ಣ ಕಥೆ-ಚಿತ್ರಕಥೆ ರಚಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.
ನಟ ಸುದೀಪ್ ಅವರು ನಮಗೆ ಮಾತು ಕೊಟ್ಟಂತೆ ನಮಗೆ ಡೇಟ್ ನೀಡಿ ಜೊತೆಗೆ ಸಿನಿಮಾ ಮಾಡಬೇಕು. ಒಂದು ವೇಳೆ ಸಿನಿಮಾ ಮಾಡಲು ಡೇಟ್ ಕೊಡದಿದ್ದರೆ ಅವರ ಮನೆಯ ಮುಂದೆ ಧರಣಿ ಕೂರುವುದಾಗಿ ನಿರ್ಮಾಪಕ ಎನ್.ಕುಮಾರ್ ಹೇಳಿಕೆ ನೀಡಿದ್ದರು. ಆದರೆ, ಕುಮಾರ್ ಅವರು ಸುದೀಪ್ ಮನೆಯ ಮುಂದೆ ಧರಣಿ ಮಾಡಲಿಲ್ಲ. ಸುದೀಪ್ ಮನೆಯ ಮುಂದರ ಧರಣಿ ಮಾಡದೆ, ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದರು ಧರಣಿ ನಡೆಸಿದ್ದಾರೆ.
ನಮ್ಮ ಜೊತೆಗೆ ಒಂದು ಸಿನಿಮಾ ಮಡಿಕೊಡಬೇಕು ಎಂದು ಸುದೀಪ್ ಅವರಿಗೆ ಅಡ್ವಾನ್ಸ್ ಕೊಡಲಾಗಿತ್ತಂತೆ. ಆಎರೆ, ಸುದೀಪ್ ಮಾತ್ರ ಸಿನಿಮಾ ಮಾಡಲು ಡೇಟ್ ಕೊಡದೆ, ಅಡ್ವಾನ್ಸ್ ಕೂಡ ಕೊಡದೆ ಚಿತ್ರ ಮುಂದೂಡುತ್ತಿದ್ದಾರೆ. ಹೀಗಾಗಿ ನನಗೆ ನಷ್ಟ ಕಷ್ಟ ಎರಡೂ ಆಗಿದೆ ಅಂತ ಈ ಹಿಂದೆ ಕುಮಾರ್ ಅವರು ವಾಣಿಜ್ಯ ಮಂಡಳಿಯಲ್ಲಿಬಪ್ರೆಸ್ ಮೀಟ್ ಮಾಡಿ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಆಗ ಕುಮಾರ್, ನನಗೆ ಸುದೀಪ್ ಸ್ಪಂದಿಸದಿದ್ದರೆ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದರು. ಆದರೆ, ಕುಮಾರ್ ಮಾತ್ರ ಸುದೀಪ್ ಅವರ ಮನೆಯ ಮುಂದೆ ಧರಣಿ ಮಾಡಲಿಲ್ಲ.
ಸುದೀಪ್ ಕೂಡ ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ನಾನು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ನಾನು ತಪ್ಪು ಮಾಡಿದ್ದರೆ ಅಲ್ಲೇ ದಂಡ ಕಟ್ಟುತ್ತೇನೆ ಎಂದಿದ್ದರು. ಆದರೆ, ಕುಮಾರ್ ಇದಕ್ಕೆ ಒಪ್ಪದೆ ವಾಣಿಜ್ಯ ಮಂಡಳಿಯಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದು ಚೇಂಬರ್ ಮುಂದೆ ಧರಣಿ ನಡೆಸಿದ್ದಾರೆ.
ಧರಣಿ ವೇಳೆ ಕುಮಾರ್ ಹೇಳಿದಿಷ್ಟು, ವಾಣಿಜ್ಯ ಮಂಡಳಿ ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಿ, ಆ ಸಭೆಗೆ ಸುದೀಪ್ ಬರಬೇಕು. ಅಲ್ಲೇ ನಾನು ಎಲ್ಲಾ ದಾಖಲೆ ಕೊಡುತ್ತೇನೆ. ಸುದೀಪ್ ಬಗ್ಗೆ ಎಲ್ಲೂ ಕೆಟ್ಟ ಪದ ಮಾತಾಡಿಲ್ಲ. ನನ್ನ ಸಮಸ್ಯೆಗೆ ಅವರು ಸ್ಪಂದಿಸಿಲ್ಲ ಎಂದು ಹೇಳಿದ್ದೇನೆ. ಚೇಂಬರ್ ನಮ್ಮ ಮಾತೃಸಂಸ್ಥೆ . ಏನೇ ಸಮಸ್ಯೆ ಇದ್ದರೂ ಅಲ್ಲೇ ಬಗೆಹರಿಸಿಕೊಳ್ಳೋಣ ಎಂದರು.
ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾದಂಬರಿ ಆಧಾರಿತ ಈ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ಅನಾವರಣಗೊಂಡಿದೆ.
ಕೆಂಡದ ಸೆರಗು’ ಚಿತ್ರವನ್ನು ನಿರ್ದೇಶಿಸಿರುವ ರಾಕಿ ಸೋಮ್ಲಿ ಈ ಹುಡುಗಿ ಎಷ್ಟು ಚೆಂದ ಹಾಡಿಗೆ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಕಂಠ ಕುಣಿಸಿದ್ದು, ವೀರೇಶ್ ಕಬ್ಲಿ ಟ್ಯೂನ್ ಹಾಕಿದ್ದಾರೆ. ಪಿ ಆರ್ ಒ ಕಂ ಯುವ ನಟ ಹರೀಶ್ ಅರಸು ಹಾಗೂ ಪೂರ್ಣಿಮಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.
ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ, ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ನನ್ನ ಸಿಪಾಯಿ ಮತ್ತು ಗರುಡ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ. ನಾಯಕನಾಗಿ ಬಣ್ಣ ಹಚ್ಚುತ್ತಿರುವ ಸಿದ್ದಾರ್ಥ್ ಮಹೇಶ್ ನಿರ್ದೇಶಕರಾಗಿಯೂ ಹೊಸ ಹೆಜ್ಜೆ ಇಡುತ್ತಿದ್ದಾರೆ. ಬಹಳ ವರ್ಷದಿಂದಲೂ ಸಿದ್ದಾರ್ಥ್ ಅವರಿಗೆ ಡೈರೆಕ್ಟರ್ ಕ್ಯಾಪ್ ತೊಡಬೇಕೆಂಬ ಕನಸು ಇತ್ತು.
ಆದರೆ ಅದಕ್ಕೆ ಘಳಿಗೆ ಕೂಡಿ ಬಂದಿರಲಿಲ್ಲ. ಈಗ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಹಿಂದೆ ನನ್ನ ಸಿಪಾಯಿ ಸಿನಿಮಾದ ಕಥೆಯಲ್ಲಿ ಸಿದ್ಧಾರ್ಥ್ ಕೂಡ ಕೆಲಸ ಮಾಡಿದ್ದರು. ಅದೇ ಅನುಭವದ ಮೇಲೆ ‘ಗರುಡ’ ಸಿನಿಮಾದ ಕಥೆಯನ್ನು ಬರೆದಿದ್ದರು. ಈಗ ಅವರ ನಿರ್ದೇಶನದ ಚಿತ್ರಕ್ಕೂ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅತಶ್ರೀ ಮೀಡಿಯಾ ಕ್ರಿಯೇಶನ್ಸ್ ಮತ್ತು ಆರೇಂಜ್ ಪಿಕ್ಸೆಲ್ಸ್ ನಡಿ ಸಿದ್ದಾರ್ಥ್ ಮಹೇಶ್ ಸ್ನೇಹಿತರಾಗಿರುವ ಎಸ್.ಚಂದನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳು ಸಿನಿಮಾ ನಿರ್ಮಿಸಿದ್ದ ಚಂದನ್ ಅವರಿಗೆ ಇದು ಚೊಚ್ಚಲ ನಿರ್ಮಾಣದ ಕನ್ನಡ ಚಿತ್ರ. ತಾನೇ ನಿರ್ದೇಶನ ಮಾಡಬೇಕೆಂದು ಸಿದ್ದಾರ್ಥ್ ಗೆ ಪ್ರೋತ್ಸಾಹ ಕೊಟ್ಟು ಹಣ ಹಾಕುತ್ತಿದ್ದಾರೆ.
ಕಥೆ ಕೊನೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್ ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೇ ಸಿದ್ದಾರ್ಥ್ ಮಹೇಶ್ ನಟಿಸಿ ನಿರ್ದೇಶನದ ಸಿನಿಮಾ ಪ್ರೇಮಕಥೆ ಆಕ್ಷನ್ ಕಥಾಹಂದರ ಹೊಂದಿದೆ.
ಮಲ್ಟಿಮೀಡಿಯಾ ಬಗ್ಗೆ ಶಿಕ್ಷಣ ಜ್ಞಾನ ಹೊಂದಿರುವ ಅವರು ನಿರ್ದೇಶನಕ್ಕೆ ಸಹಾಯಕಾರಿ ಎನ್ನುತ್ತಾರೆ. ಬಹಳ ವರ್ಷಗಳಿಂದ ನಿರ್ದೇಶಕನ ಆಗಬೇಕು ಎಂಬ ಸಿದ್ದಾರ್ಥ್ ಮಹೇಶ್ ಕನಸು ಈಗ ಸಹಕಾರವಾಗುತ್ತಿದೆ.
ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಆ ಪೈಕಿ ಶಿವಮ್ಮ ಕೂಡ ಸೇರಿದೆ.
ಹೌದು ರಿಷಬ್ ಶೆಟ್ಟಿ ಸಂಸ್ಥೆಯ ಶಿವಮ್ಮ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.
ಜ್ಯೆಶಂಕರ್ ಆರ್ಯರ್, ನಿರ್ದೇಶನದ ಚೊಚ್ಚಲ ಚಿತ್ರ. ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ನಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ‘ಶಿವಮ್ಮ’ ಚಿತ್ರ ತನ್ನ ಗೆಲುವಿನ ಪ್ರಯಾಣವನ್ನು ಮುಂದುವರಿಸಿದೆ.
ಇಲ್ಲೆಲ್ಲಾ ಪ್ರಶಸ್ತಿ ಬಂದಿದೆ…
ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ,2022 ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್ , ನಾಂಟೆಸ್ 2022 ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ ,ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ , ರಷ್ಯಾ.
ನೂತನ ಪ್ರತಿಭೆ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ಡೇವಿಡ್ ” ಚಿತ್ರ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.
ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಕುರುತು ನಾಯಕ ಶ್ರೇಯಸ್ ಚಿಂಗಾ ಅವರು, ಧನರಾಜ ಬಾಬು ಅವರ ಬಳಿ ಹೇಳಿದಾಗ, ಹೊಸತಂಡದ ಹೊಸಪ್ರಯತ್ನಕ್ಕೆ ಧನರಾಜ ಬಾಬು ಅವರು ಪ್ರೋತ್ಸಾಹ ನೀಡಲು ಮುಂದಾದರು.
ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಾಕಷ್ಟು ಮಾತನಾಡಿದರು.
“ಡೇವಿಡ್” ಒಂದು ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ ಎಂದು ಮಾತು ಆರಂಭಿಸಿದ ನಾಯಕ, ನಿರ್ದೇಶಕ ಶ್ರೇಯಸ್ ಚಿಂಗಾ ಇದೊಂದು ಅದ್ಭುತ ಚಿತ್ರ. ಈವರೆಗೂ ನಾವು ನೋಡಿರದ ಬೆಂಗಳೂರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ಇದೊಂದು ತಂತ್ರಜ್ಞರ ಸಿನಿಮಾ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾನು ಹಾಗೂ ಭಾರ್ಗವ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದೇವೆ. ಚಿತ್ರ ಜುಲೈ 21 ರಂದು ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.
ನಾನು ಈ ಹಿಂದೆ “ಭರತ – ಬಾಹುಬಲಿ” ಚಿತ್ರದಲ್ಲಿ ನಟಿಸಿದ್ದೆ. “ಡೇವಿಡ್” ನನ್ನ ಎರಡನೇ ಚಿತ್ರ. ಈ ಹಿಂದೆ ಪ್ರಸಿದ್ದ ಜಾಹೀರಾತುಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದ ಪಾತ್ರ ಚೆನ್ನಾಗಿದೆ ಎಂದು ನಾಯಕಿ ಸಾರಾ ಹರೀಶ್ ತಿಳಿಸಿದರು.
ನಾನು ಈ ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಪ್ರತಾಪ್ ನಾರಾಯಣ್ ಹೇಳಿದರು.
ಕರ್ನಾಟಕದ ಪ್ರಸಿದ್ದ ರಾಪರ್ ಗಳಾದ ಎಂ.ಸಿ.ಬಿಜು, ಸಿದ್ ಈ ಚಿತ್ರದಲ್ಲೂ ರಾಪರ್ ಪಾತ್ರದಲ್ಲೇ ಅಭಿನಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿನಯದ ಬಗ್ಗೆ ಹೇಳಿಕೊಂಡ ರಾಪರ್ ದ್ವಯರು ಸುಂದರವಾದ ರಾಪ್ ಹಾಡೊಂದನ್ನು ಹಾಡಿದರು.
ನಿರ್ಮಾಪಕ ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ನಟ ಮೋಹಿತ್ ವಾಸ್ವನಿ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈ ಚಿತ್ರವನ್ನು ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಮಾರ್ಕೆಟಿಂಗ್ ಹಾಗೂ ಪ್ರಮೋಷನ್ ರೋಶನಿ ರಾಮಪುರಂ ಅವರದು.
ಶ್ರೇಯಸ್ ಚಿಂಗಾ, ರಾಕೇಶ್ ಅಡಿಗ, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು,ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ. “ಡೇವಿಡ್” ಬುಲೆಟ್ ಪ್ರಕಾಶ್ ಅವರ ನಟಸಿರುವ ಕೊನೆಯ ಚಿತ್ರ.
ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಅನಾವರಣ ಮಾಡಿದರು.
ಈ ಟ್ರೇಲರ್ ನಲ್ಲಿ ಬಹಳ ಒಳ್ಳೆಯ ಕಥೆಯನ್ನು ಕಂಡೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ ಸುದೀಪ್,ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷ ಇದೆ. ಶಶಾಂಕ್ ಅವರು ಎಮೋಷನ್ ಗಳನ್ನು ಹಿಡಿದಿಡುವ ರೀತಿ ನನಗೆ ಇಷ್ಟ. ಚಿತ್ರದ ಹಾಡುಗಳು ಚೆನ್ನಾಗಿವೆ. ಈ ಚಿತ್ರ ಸಹ ಚೆನ್ನಾಗಿ ಮೂಡಿಬಂದಿರುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಇದು. ಕಾರಣ ಈ ಚಿತ್ರದ ಕಥೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ರಿಲೇಟ್ ಆಗುವ ಕಥೆ ಇದು. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ.
ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ನಿರೀಕ್ಷೆಗೂ ಮೀರಿ ಅವರು ನಟಿಸಿದ್ದಾರೆ. ಬೃಂದಾ ಅವರ ಅಭಿನಯ ಕೂಡ ಅದ್ಭುತವಾಗಿದೆ. ಜುಲೈ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇಷ್ಟವಾಗಬಹುದೆಂಬ ನಂಬಿಕೆ ಇದೆ ಎಂದು ನರ್ದೇಶಕ ಶಶಾಂಕ್ ತಿಳಿಸಿದರು.
ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕಥೆ ಇದು ಎಂದ ನಾಯಕ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ಶಶಾಂಕ್ ಅವರು ಬಂದಾಗ, ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಕೇಳಿದರು. ನೀವು ನಿಮ್ಮ ಸ್ಟೈಲ್ ನಲ್ಲೇ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಮುಗಿದ ಚಿತ್ರ ಇದು. ನಟನೆ ಮಾಡಿದ್ದೇ ಗೊತ್ತಾಗಲಿಲ್ಲ. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ತಿಳಿಸಿದರು.
ಶಶಾಂಕ್ ಅವರು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ಎಂದು ಬಿ.ಸಿ.ಪಾಟೀಲ್.
ಚಿತ್ರದಲ್ಲಿ ನಟಿಸಿರುವ ಮಿಲನ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.
ಚಿತ್ರ : ಅಪರೂಪ ನಿರ್ದೇಶಕ : ಮಹೇಶ್ ಬಾಬು ನಿರ್ಮಾಪಕ :ಕೆ.ಆರ್.ಮಹೇಶ್ ತಾರಾಗಣ : ಸುಘೋಷ್, ಹೃತಿಕಾ, ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜ ಇತರರು…
‘ಅವನದು ಬಚ್ಚಿಟ್ಕೊಳ್ಳೋ ಕ್ಯಾರೆಕ್ಟರ್ ಅಲ್ಲ ಅಣ್ಣ, ಬೆಚ್ಚಿ ಬೀಳೀಸೋ ಕ್ಯಾರೆಕ್ಟರ್…’
ಸಿನಿಮಾ ಶುರುವಿಗೆ ಈ ಡೈಲಾಗ್ ತೂರಿ ಬರುತ್ತೆ. ಅಲ್ಲಿಗೆ ಹೀರೋ ಎಂಟ್ರಿ, ರಗಡ್ ಫೈಟು ಗೀಟು ಇತ್ಯಾದಿ ಕಾಣಸಿಗುತ್ತೆ. ಎಲ್ಲಾ ಸಿನಿಮಾಗಳಲ್ಲೂ ಇರುವಂತೆ ಇಲ್ಲೂ ಹೀರೋಯಿಸಮ್ ಗೆ ಬೇಕಾದ ಬಿಲ್ಡಪ್ ಫೈಟು, ಓಪನಿಂಗ್ ಸಾಂಗು ಇದೆ. ಅಲ್ಲಿಗೆ ಇದೊಂದು ಕಮರ್ಷಿಯಲ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಸಿನಿಮಾ ಮೂಲಕ ಸುಘೋಷ್ ಎಂಬ ಹೊಸ ಪ್ರತಿಭೆ ಸಿನಿಮಾರಂಗ ಸ್ಪರ್ಶಿಸಿದೆ. ನಿರ್ದೇಶಕ ಮಹೇಶ್ ಬಾಬು ಹೊಸತೇನೋ ಹೇಳಿದ್ದಾರೆ ಅಂತ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಹೇಳಿಕೊಳ್ಳುವಂತಹ ಕಥೆಯಾಗಲಿ, ನಿರೂಪಣೆಯಾಗಲಿ ಕಾಣಸಿಗಲ್ಲ. ಹೊಸ ಹೀರೋ ಸಿನಿಮಾ ಅಂದರೆ, ಒಂದಷ್ಟು ಹೊಸತನವಾದರೂ ಬೇಕಿತ್ತು. ಅದು ಕಥೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ ಇಲ್ಲ. ಸಿಂಪಲ್ ಲವ್ ಸ್ಟೋರಿಯಾದರೂ ಅದನ್ನು ಇನ್ನಷ್ಟು ರಿಚ್ ಆಗಿ ಹೇಳಬಹುದಿತ್ತು. ಹಾಗಂತ ಸಿನಿಮಾ ರಿಚ್ಚಾಗಿ ಇಲ್ಲವಂತಲ್ಲ, ಅಲ್ಲಲ್ಲಿ ಅದ್ಧೂರಿತನ ಕಾಣುತ್ತೆ.
ಪ್ರೀತಿ ಪ್ರೇಮ ಕಥೆಗಳು ಸಾಕಷ್ಟು ಬಂದಿವೆ. ಅಂತಹ ಪ್ರೀತಿ ಕಥೆಗಳ ಸಾಲಿಗೆ ಇದೂ ಒಂದಷ್ಟೇ. ಇಲ್ಲಿರು ಪ್ರೀತಿ ಕಥೆಯಲ್ಲೇನೂ ವಿಶೇಷತೆ ಇಲ್ಲ. ಆದರೆ, ಹಾಡು, ಡ್ಯಾನ್ಸು, ಫೈಟು ಇಷ್ಟಪಡೋರಿಗೆ ಸಿನಿಮಾ ನಿರಾಸೆ ಮಾಡಲ್ಲ. ಮೊದಲರ್ಧ ಹಾಡು, ಡ್ಯಾನ್ಸು ಫೈಟಿನೊಂದಿಗೆ ಮುಗಿದರೆ, ದ್ವಿತಿಯಾರ್ಧ ಕೊಂಚ ಭಾವುಕತೆ, ತಲ್ಲಣ,ನೋವು, ನಗು ಖುಷಿಯೊಂದಿಗೆ ಮುಗಿಯುತ್ತೆ.
ಕಥೆ ಏನು?
ಇಲ್ಲೂ ಮುದ್ದಾದ ಜೋಡಿ ಇದೆ. ಅವರ ಪ್ರೀತಿ, ಮುನಿಸು, ಕಿತ್ತಾಟ, ಸುತ್ತಾಟ, ಸಂಭ್ರಮ, ಸಂಕಷ್ಟ, ಒಂದಷ್ಟು ಹಾಸ್ಯ, ಅಪ್ಪ ಅಮ್ಮನ ಪ್ರೀತಿ, ಬಾತ್ಸಲ್ಯ, ಗೆಳೆತನ, ಹಗೆತನ ಇತ್ಯಾದಿ ಇದೆ.
ಇಲ್ಲಿ ಹೀರೋ ವಿಜಯ್ (ಸುಘೋಷ್) ಮಧ್ಯಮ ವರ್ಗದ ಹುಡುಗ. ಅಪ್ಪ, ಅಮ್ಮ ತಂಗಿ ಅವನ ಪ್ರಪಂಚ. ಕುಡಿತ ಅವನ ಅರೆಕಾಲಿಕ ಚಟ. ಅದಕ್ಕೆ ಕಾರಣ ಕೈ ಕೊಟ್ಟ ಪ್ರೀತಿ. ಪ್ರೀತಿಸಿದ ಹುಡುಗಿ ದೂರವಾಗೋಕೆ ಕಾರಣ, ತುಂಬಾ ಸಿಂಪಲ್. ಅದು ಏನು ಎಂಬ ಕುತೂಹಲ ಇದ್ದರೆ ‘ಅಪರೂಪ’ದ ನೋಡಿ!
ನಾಯಕಿ ಶ್ರೀಮಂತನ ಮಗಳು. ಅಪ್ಪನಿಗೆ ಮಗಳೆಂದರೆ ಪ್ರಾಣ, ಆ ಮಗಳಿಗೆ ‘ಈಡಿಯಟ್’ನಂತಹ ಹುಡುಗನ ಮೇಲೆ ಪ್ರೀತಿ. ಅವರಿಬ್ಬರ ಪ್ರೀತಿ ಅಪ್ಪನಿಗೆ ಇಷ್ಟ ಇಲ್ಲ. ಅತ್ತ, ಹುಡುಗನ ಅಪ್ಪ ಅಮ್ಮನಿಗೆ ಮಗ ಪ್ರೀತಿಸಿದ ಹುಡುಗಿ ಅಚ್ಚುಮೆಚ್ಚು. ಹೀಗಿರುವಾಗ, ಪ್ರೀತಿ ಕಾರಣವೊಂದಕ್ಕೆ ಬ್ರೇಕಪ್ ಆಗುತ್ತೆ. ಮೇಲೆ ಅವರಿಬ್ಬರು ಒಂದಾಗ್ತಾರ? ಅದೇ ಸಸ್ಪೆನ್ಸ್.
ಕೆಲವು ಕಡೆ ಸಣ್ಣ ಸಣ್ಣ ಟ್ವಿಸ್ಟುಗಳಿವೆ. ನೋಡುಗರಿಗೆ ಅಲ್ಲಲ್ಲಿ ಟೆಸ್ಟೂ ಇದೆ. ಅಪರೂಪ ಎಂಬ ಶೀರ್ಷಿಕೆಗೆ ತಕ್ಕಂತೆ ಅಪರೂಪ ಎನಿಸುವ ಯಾವ ಅಂಶಗಳು ಇಲ್ಲ ಎಂಬುದು ಬೇಸರವಷ್ಟೆ. ಅದು ಬಿಟ್ಟರೆ, ಸುಮನೆ ಎರಡು ತಾಸು ಕುಳಿತು, ಅವರ ಪ್ರೀತಿ, ಜಗಳ, ಹಾಡು, ಕುಣಿತ ಇತ್ಯಾದಿ ನೋಡಬೇಕಷ್ಟೆ.
ಯಾರು ಹೇಗೆ?
ನಿರ್ದೇಶಕ ಮಹೇಶ್ ಬಾಬು ಅವರ ಈ ಸಿನಿಮಾ ಕಥೆಯಲ್ಲಿ ಇನ್ನಷ್ಟು ಧಮ್ ಇರಬೇಕಿತ್ತು. ಅಲ್ಲಲ್ಲಿ ಸಣ್ಣಪುಟ್ಟ ಎಡವಟ್ಟುಗಳನ್ನು ಸರಿಪಡಿಸಬೇಕಿತ್ತು. ಇನ್ನು ಹೀರೋ ಸುಘೋಷ್ ಅವರ ಮೊದಲ ಪ್ರಯತ್ನ ಇದು. ಮೊದಲ ಬಾಲ್ ನಲ್ಲೇ ಒಳ್ಳೆಯ ಸ್ಕೊರ್ ಮಾಡಿದ್ದಾರೆ. ಡ್ಯಾನ್ಸ್, ಫೈಟ್ ಚೆನ್ನಾಗಿ ಮಾಡಿದ್ದಾರೆ. ಲವಲವಿಕೆ ಎದ್ದು ಕಾಣುತ್ತೆ. ನಾಯಕಿ ಹೃತಿಕಾ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ವಿಜಯ್ ಚೆಂಡೂರ್ ಸ್ಕ್ರೀನ್ ಮೇಲೆ ಕಾಣುವಾಗೆಲ್ಲ ನಗೆಬುಗ್ಗೆ ಸಿಗುತ್ತೆ. ಉಳಿದಂತೆ ಅಶೋಕ್, ಅವಿನಾಶ್, ಅರುಣಾ ಬಾಲರಾಜ್, ಕಡ್ಡಿಪುಡಿ ಚಂದ್ರು ಪಾತ್ರಕ್ಕೆ ಮೋಸ ಮಾಡಿಲ್ಲ. ಪ್ರಜ್ವಲ್ ಪೈ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಹಿನ್ನೆಲೆ ಸಂಗೀತಕ್ಕೆ ಕೊಂಚ ಗಮನಕೊಡಬೇಕಿತ್ತು. ಸೂರ್ಯಕಾಂತ್ ಕ್ಯಾಮರಾ ಕೈಚಳಕ ಪರವಾಗಿಲ್ಲ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಡ್ಯಾನ್ಸ್ ಕಿಂಗ್ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೇ ಅಭಿನಯಿಸಿರುವ ರಾಕ್‌ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ‘ಕರಟಕ ದಮನಕ’ ಚಿತ್ರದ EXCLUSIVE ಮೊದಲ ಝಲಕ್ ಬಿಡುಗಡೆಯಾಗಿದೆ.
‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು “ಕರಟಕ” ಇನ್ನೊಂದರ ಹೆಸರು “ದಮನಕ”. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ…!! ಎಚ್ಚರಿಕೆ’ ❗ಎಂಬ ಈ ಬರಹದ ಮೂಲಕ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.
ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ರವಿ ಈ ಚಿತ್ರಕ್ಕೆ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್ ಭಟ್, ರವಿ ಹಾಗೂ ಸುಬ್ರಹ್ಮಣ್ಯ ಬರೆದಿದ್ದಾರೆ.