Categories
ಸಿನಿ ಸುದ್ದಿ

ಲಿಯೋ ಕನ್ನಡ ಪೋಸ್ಟರ್ ರಿಲೀಸ್: ಇದು ಇಳಯ ದಳಪತಿ ವಿಜಯ್ ಚಿತ್ರ

ವಿಜಯ್‍ ಅಭಿನಯದ ‘ಲಿಯೋ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಈ ಮಧ್ಯೆ, ಚಿತ್ರವನ್ನು ನಿರ್ಮಿಸುತ್ತಿರುವ 7 ಸ್ಕ್ರೀನ್‍ ಸ್ಟುಡಿಯೋ ಸಂಸ್ಥೆಯು, ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ ಮಾಡಿದೆ.
ತಮಿಳಿನ ಜನಪ್ರಿಯ ನಿರ್ದೇಶಕರಾದ ಲೋಕೇಶ್‍ ಕನಕರಾಜ್‍ ನಿರ್ದೇಶಿಸಿರುವ ‘ಲಿಯೋ’ ಚಿತ್ರದಲ್ಲಿ ‘ಇಳಯದಳಪತಿ’ ವಿಜಯ್‍, ತ್ರಿಷಾ, ಸಂಜಯ್‍ ದತ್‍, ಅರ್ಜುನ್‍ ಸರ್ಜಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.


‘ಲಿಯೋ’ ಚಿತ್ರವು ಒಂದು ಅದ್ಭುತ ಅನುಭವ ನೀಡುವ ಚಿತ್ರವಾಗಿ ರೂಪುಗೊಂಡಿದ್ದು, ಇದರಲ್ಲಿ ಆಕ್ಷನ್‍, ಡ್ರಾಮಾ, ಎಮೋಷನ್‍ ಸೇರಿದಂತೆ ಎಲ್ಲಾ ಭಾಷೆಯ ಮತ್ತು ಪ್ರದೇಶದ ಜನರನ್ನು ಆಕರ್ಷಿಸುವಂತಹ ಅಂಶಗಳಿವೆ.


ಇನ್ನು, ಚಿತ್ರದ ಕರ್ನಾಟಕ ವಿತರಣೆಯ ಹಕ್ಕುಗಳನ್ನು ಸ್ವಾಗತ್‍ ಎಂಟರ್ ಪ್ರೈಸಸ್ ಸಂಸ್ಥೆಯು ತನ್ನದಾಗಿಸಿಕೊಂಡಿದ್ದು, ಚಿತ್ರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.
‘ಲಿಯೋ’ ಚಿತ್ರವು ಅಕ್ಟೋಬರ್‍ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಕರಡಿ ಗುಡ್ಡ ಶೀರ್ಷಿಕೆ ಬಿಡುಗಡೆ: ಇದು ಮಕ್ಕಳ ಚಿತ್ರ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಪಂಚಮುಖಿ ವಿನಾಯಕ ದೇವಸ್ಥಾನದಲ್ಲಿ ವಿ. ನಾಗೇಂದ್ರ ಪ್ರಸಾದ್ ರವರು “ಕರಡಿಗುಡ್ಡ” ಸಿನಿಮಾದ ಶೀರ್ಷಿಕೆ ಮತ್ತು ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರಾದ ವೀಣಾ ವೆಂಕಟೇಶ್. ವಿ , ಅಂಬಿಕಾ ಚಂದ್ರಪ್ಪ ರವರಿಗೆ ಹಾಗೂ ನಿರ್ದೇಶಕರಾದ ಅಮಿತ್ ರಾವ್ ರವರಿಗೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು.

ಈಗಾಗಲೇ “ಹವಾಲಾ” ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 72 ಪ್ರಶಸ್ತಿಗಳನ್ನು ಬಾಚಿಕೊಂಡಿರುವ “ಯಾದ್ಭಾವಂ ತದ್ಭವತಿ” ಚಿತ್ರ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿರುವ ಅಮಿತ್ ರಾವ್ ರವರ ಮೂರನೇಯ ನಿರ್ದೇಶನದ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಜಯಂತ್ ಚಂದ್ರಪ್ಪ ರವರ ಕಥೆ ಇದ್ದು, ಮಕ್ಕಳ ಸಾಹಸಮಯ ಚಿತ್ರವಿದು.


ಡಾ. ವಿ ನಾಗೇಂದ್ರ ಪ್ರಸಾದ್ ರವರು ಕೂಡ ಈ ಚಿತ್ರದಲ್ಲಿ ಸಾಹಿತ್ಯದ ಜೊತೆ ತಂಡದಲ್ಲಿ ಒಬ್ಬರಾಗಿ “ಕರಡಿಗುಡ್ಡ”ದ ಜೊತೆ ಸಾಗುತ್ತಿದ್ದಾರೆ, ಅದಲ್ಲದೆ ತಂತ್ರಜ್ಞರಾಗಿ – ಛಾಯಾಗ್ರಹಕರಾಗಿ ವಿ. ಪವನ್ ಕುಮಾರ್, ಸಂಗೀತ ನಿರ್ದೇಶಕ ಕಿಶೋರ್ ಎಕ್ಸ, ಪ್ರೊಡಕ್ಷನ್ ಡಿಸೈನರ್ ಆಗಿ ನಿರ್ದೇಶಕ ನಟ ಮಂಜುನಾಥ್ ದೈವಜ್ಞ ಇದ್ದಾರೆ.

ಗೂ ತಂತ್ರಜ್ಞರ ಜೊತೆಗೆ ಹೊಸ ಪ್ರತಿಭೆಯಾಗಿ ವಿಶೇಷ ವೆಂಕಟೇಶ್, ವೆಂಕಟೇಶ್ ಗೌಡ, ನಾಗೇಂದ್ರ ಅರಸ್, ಭವಾನಿಪ್ರಕಾಶ್, ಮತ್ತು ಪುಟಾಣಿ ಮಕ್ಕಳು ಕಲಾವಿದರಾಗಿ ಇನ್ನಿತರೆ ಕಲಾವಿದರೊಂದಿಗೆ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ತಯಾರಿಯಲ್ಲಿದೆ “ಕರಡಿಗುಡ್ಡ” ಚಿತ್ರತಂಡ.
ತಲಕಾಡಿನ ಸುತ್ತಮುತ್ತಲ್ಲಲ್ಲಿ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ದಿಗ್ವಿಜಯ ಟ್ರೇಲರ್ ಮತ್ತು ಆಡಿಯೋ ಬಂತು

ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ನಿರ್ದೇಶಕ ದುರ್ಗಾ ಪಿ.ಎಸ್. ಅವರು ತಮ್ಮ ನಿರ್ದೇಶನದ ದಿಗ್ವಿಜಯ ಚಿತ್ರದ ಮೂಲಕ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಯಾಗಿದೆ.

ಈ ವೇಳೆ ಮಾತನಾಡಿದ ನಿರ್ದೇಶಕ ದುರ್ಗಾ ಪಿ.ಎಸ್. ಕಳೆದ 18 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. 65ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನ‌ ಮಾಡಿದ್ದು, ಸೀಯು, ಕರ್ತ ನಂತರ ಇದು ನನ್ನ ನಿರ್ದೇಶನದ 5 ನೇ ಚಿತ್ರ. ಇತ್ತೀಚೆಗೆ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪರಿಹಾರದ ಹಣಕ್ಕಾಗಿ ಸೂಸೈಡ್ ಮಾಡಿಕೊಳ್ತಿದ್ದಾರೆ ಅನ್ನೋ ರಾಜಕಾರಣಿಗಳ ಹೇಳಿಕೆ ಕೇಳಿ ನನ್ನ ಮನಸಿಗೆ ತುಂಬಾ ನೋವಾಯಿತು. ರೈತರು ಸೂಸೈಡ್ ಮಾಡಿಕೊಳ್ಳಲು ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಅದನ್ನು ಯಾವ ರೀತಿ ಪರಿಹರಿಸಬಹುದು ಎಂದು ಯೋಚಿಸಿ ಈ ಕಾನ್ಸೆಪ್ಟ್ ಮಾಡಿದ್ದೇನೆ. ರೈತರು ಸಾಲ ಮಾಡಿಕೊಳ್ಳದ ಹಾಗಿರಲು ಏನು ಅನುಕೂಲ ಮಾಡಿಕೊಡಬಹುದು ಎಂದೂ ಹೇಳಿದ್ದೇನೆ. ಮಾಧ್ಯಮ ಮನಸ್ಸು ಮಾಡಿದರೆ ಎಂಥ ಸಮಸ್ಯೆಯೇ ಆದರೂ ಬಗೆಹರಿಸಬಹುದು ಎನ್ನುವುದು ಚಿತ್ರದಲ್ಲಿದೆ.

ಶ್ರೀಕಾಂತ್ ನನ್ನ ಸ್ನೇಹಿತ, ಇಬ್ಬರೂ ಸೇರಿ ಸಿನಿಮಾ ನಿರ್ದೇಶನ‌ ಮಾಡಿದ್ದೇವೆ. ಈ ಸಿನಿಮಾ ಆಗಲು ರಫೀಕ್ ಕಾರಣ. ಅವರೇ ಜಯಪ್ರಭು ಅವರನ್ನು ಪರಿಚಯಿಸಿದ್ದು, 30 ಜನ ನಿಜವಾದ ರೈತರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜತೆಗೆ ಒತ್ತುಕೊಟ್ಟು ಸಿನಿಮಾ ಮಾಡಿದ್ದೇವೆ. ನಾಯಕ‌ ಹಳ್ಳಿಯಿಂದ ಸಿಟಿಗೆ ಬಂದು ಪತ್ರಿಕೆಯಲ್ಲಿ ವರ್ಕ್ ಮಾಡುತ್ತಿರುತ್ತಾನೆ ಎಂದು ವಿವರಿಸಿದರು.

ಮತ್ತೊಬ್ಬ ನಿರ್ದೇಶಕ ಹಾಗೂ ನಟ ಶ್ರೀಕಾಂತ್ ಹೊನ್ನವಳ್ಳಿ ಮಾತನಾಡಿ ನಾನೂ ಒಬ್ಬ ರೈತನಾಗೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ತಂದೆಯವರು ರೈತನಾಗಿ ಅಪ್ಪನ ಪಾತ್ರ ಮಾಡಿದ್ದಾರೆ ಎಂದರು.

ಚಿತ್ರದ ನಾಯಕ ಕಂ ನಿರ್ಮಾಪಕ ಜಯಪ್ರಭು ಮಾತನಾಡಿ, ಈ ಹಿಂದೆ ಸ್ಕೇರಿ ಫಾರೆಸ್ಟ್ ಎಂಬ ಚಿತ್ರ ಮಾಡಿದ್ದೆ. ನಾನೂ ಸಹ ರೈತ. ಕುಟುಂಬದಿಂದಲೇ ಬಂದವನು. ಕಂಟೆಂಟ್ ಜೊತೆ ಕಮರ್ಷಿಯಲ್ ಎಲಿಮೆಂಟ್ ಇರುವ ಚಿತ್ರ. ಸಿನಿಮಾ ಮೂಲಕ ಜನರಿಗೆ ಏನಾದರೂ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನಾನೊಬ್ಬ ಪತ್ರಕರ್ತ, ಆತ ಐಡಿಯಾ ಮಾಡಿ 48 ಗಂಟೆಗಳಲ್ಲಿ ಹೇಗೆ ರೈತರ ಸಾಲ‌ ಮನ್ನಾ ಮಾಡಿಸಿದ ಎಂದು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.

ಚಿತ್ರವನ್ನು ಜೆ.ಪಿ. ಎಂಟರ್ ಟೈನ್ ಮೆಂಟ್ ಅಡಿ ಜಯಪ್ರಭು ಆರ್. ಲಿಂಗಾಯತ್, ಅರುಣ್ ಸುಕದರ್ ಹಾಗೂ ಹರೀಶ್ ಆರ್.ಸಿ. ನಿರ್ಮಿಸಿದ್ದಾರೆ. ದುರ್ಗಾ ಪಿ. ಎಸ್. ಹಾಗೂ ಹೊನ್ನವಳ್ಳಿ ಶ್ರೀಕಾಂತ್ ಸೇರಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.

ಜಯಪ್ರಭು, ಸ್ನೇಹ, ಸುಚೇಂದ್ರ ಪ್ರಸಾದ್, ದುಬೈ ರಫೀಕ್, ಪಟ್ರೆ ನಾಗರಾಜ್, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ ಪಿ, ಉಳಿದ ಪಾತ್ರಗಳಲ್ಲಿದ್ದಾರೆ. ಚಿತ್ರದ 5 ಹಾಡುಗಳಿಗೆ ಹರ್ಷ ಸಂಗೀತ ನೀಡಿದ್ದು, ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಸಿರಿ ಕನ್ನಡದಲ್ಲಿ ಹಾಸ್ಯ ಕನ್ನಡ! ಹಾಸ್ಯ ದಿಗ್ಗಜರ ದರ್ಬಾರ್ ಶುರು

ಕನ್ನಡ ಕಿರುತೆರೆ ಲೋಕದಲ್ಲಿ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಒಂದೊಂದೆ ಯಶಸ್ವಿ ಹಂತಗಳನ್ನು
ಮುಟ್ಟುತ್ತಿರುವ ಸಿರಿಕನ್ನಡ ವಾಹಿನಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಆ ಪೈಕಿ ಕರ್ನಾಟಕದ ಹೆಸರಾಂತ ಹಾಸ್ಯ ದಿಗ್ಗಜರು ನಡೆಸಿಕೊಡುವ “ಹಾಸ್ಯ ದರ್ಬಾರ್ ಸೀಸನ್ 02” ಹಾಗೂ ತಾಯಿ – ಮಗು ಭಾಗವಹಿಸುವ
“ಲಿಟಲ್ ಕಿಲಾಡೀಸ್” ಗೇಮ್ ಶೋ ಆರಂಭವಾಗಿದೆ.

ವಾಹಿನಿಯ ರಾಜೇಶ್ ರಾಜಘಟ್ಟ‌, “ಹಾಸ್ಯ ದರ್ಬಾರ್ ಸೀಸನ್ 2” ನಲ್ಲಿ ಭಾಗಿಯಾಗಿರುವ ಎಲ್ಲಾ ಹಾಸ್ಯ ದಿಗ್ಗಜರು ಹಾಗೂ “ಲಿಟಲ್ ಕಿಲಾಡೀಸ್” ಕಾರ್ಯಕ್ರಮದ ನಿರ್ದೇಶಕ ಮಂಜೇಶ್ ಮಾಹಿತಿ ನೀಡಿದರು. ನಿರೂಪಕಿ ರಶ್ಮಿತಾ ಚಂಗಪ್ಪ ಉಪಸ್ಥಿತರಿದ್ದರು.

ಮಾತನಾಡಿದ ಸಿರಿಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ, ನಾಡಿನ ಪ್ರತಿಯೊಬ್ಬ ವೀಕ್ಷಕರನ್ನು ತಲುಪುವಂತಹ ಎರಡು ಜನಪ್ರಿಯ ಕಾರ್ಯಕ್ರಮಗಳು ನಮ್ಮ ವಾಹಿನಿಯಲ್ಲಿ ಆರಂಭವಾಗಿದೆ. ಅದರಲ್ಲಿ ನಾಡಿನ ಪ್ರಮುಖ ಹಾಸ್ಯ ದಿಗ್ಗಜರು ನಡೆಸಿಕೊಡುವ “ಹಾಸ್ಯ ದರ್ಬಾರ್ ಸೀಸನ್ 2” ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ರಿಂದ 9 ರವರೆಗೂ ಪ್ರಸಾರವಾಗಲಿದೆ. ಮಕ್ಕಳು ಹಾಗೂ
ಅಮ್ಮಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿಸಿ ತಾಯಿ ಮಗುವಿನ emotion, fun, game, drama ಹಾಗೂ team building activity ಗಳನ್ನು ಒಳಗೊಂಡ
” ಲಿಟಲ್ ಕಿಲಾಡೀಸ್”ಎಂಬ ವಿಭಿನ್ನ ಗೇಮ್ ಶೋ ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ 7
ಗಂಟೆಯವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಕಿರುತೆರೆಯ ಜನಪ್ರಿಯ ನಟಿ ರಶ್ಮಿತಾ ಚಂಗಪ್ಪ
ನಿರೂಪಣೆಯಲ್ಲಿ ಅಮೋಘವಾಗಿ ಮೂಡಿ ಬರುತ್ತಿದೆ. ಎರಡು ಕಾರ್ಯಕ್ರಮಗಳು ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬರುತ್ತಿದ್ದು ಜನಮನ್ನಣೆ ಪಡೆಯುತ್ತಿದೆ ಎಂದರು.

“ಹಾಸ್ಯ ದರ್ಬಾರ್ ಸೀಸನ್ 2” ನಲ್ಲಿ ಭಾಗವಹಿಸುತ್ತಿರುವ ಹಿರೇಮಗಳೂರು ಕಣ್ಣನ್, ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಪ್ರಾಣೇಶ್, ಪ್ರೊ .ಕೃಷ್ಣೇ ಗೌಡ, ಎಂ.ಎಸ್ ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಯಶವಂತ ಸರ್ ದೇಶಪಾಂಡೆ, ಗುಂಡುರಾವ್, ದುಂಡಿರಾಜ್, ನರಸಿಂಹ ಜೋಶಿ, ಮಹಾಮನೆ ಮುಂತಾದವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ “ಸಿರಿ ಕನ್ನಡ” ವಾಹಿನಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಗೌರಿಗಣೇಶ ಹಬ್ಬದ ಪ್ರಯುಕ್ತ “ಲಿಟಲ್ ಕಿಲಾಡೀಸ್” ಕಾರ್ಯಕ್ರಮದಲ್ಲಿ “ಟಗರು’ ಖ್ಯಾತಿಯ ಮಾನ್ವಿತಾ ಕಾಮತ್
ನಿಮ್ಮನೆಲ್ಲಾ ಮನರಂಜಿಸಲಿದ್ದಾರೆ. ಹಾಗೂ ಮತ್ತಷ್ಟು ವಿಶೇಷ ಮನರಂಜನೆಯ ಕಾರ್ಯಕ್ರಮಗಳು
ಮೂಡಿಬರಲಿದೆ. ಇದರೊಟ್ಟಿಗೆ ಇತರ ಕಾರ್ಯಕ್ರಮಗಳನ್ನು ವೀಕ್ಷಿಸುವ ವೀಕ್ಷಕರಿಗೆ ವರಮಹಾಲಕ್ಷ್ಮೀ
ಹಬ್ಬದಿಂದ ದೀಪಾವಳಿಯವರೆಗೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ಸಿರಿಕನ್ನಡ ವಾಹಿನಿ ನೀಡುತ್ತಿದ್ದು,
ಪ್ರತೀದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯ ವರೆಗೂ ನಿರ್ದಿಷ್ಟ ಅವಧಿಯಲ್ಲಿ ಮಿಸ್ ಕಾಲ್
ಕೊಟ್ಟವರಿಗೆ ಬಹುಮಾನ ಸಿಗಲಿದೆ ಎಂದು ಸಿರಿ ಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ತಿಳಿಸಿದರು ‌

ಶೀಘ್ರದಲ್ಲೇ “ಅಮೃತ ಘಳಿಗೆ” ಎಂಬ ಹೊಚ್ಚ ಹೊಸ ಧಾರಾವಾಹಿ ಸಹ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Categories
ಸಿನಿ ಸುದ್ದಿ

ದೇಶ ಪ್ರೇಮ ಮೆರೆವ ಯಂಗ್ ಮ್ಯಾನ್! ಇದು ಸಿಂಗಲ್ ಟೇಕ್ ಸಿನಿಮಾ ಕಣ್ರೀ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಿರುತ್ತದೆ. ಆ ಸಾಲಿಗೆ ಹೊಸ ಚಿತ್ರವೂ ಸೇರಿದೆ. ಹೊಸತಂಡದಿಂದ 2 ಗಂಟೆ 38 ನಿಮಿಷಗಳ ಅವಧಿಯ “ಯಂಗ್ ಮ್ಯಾನ್” ಎಂಬ ಚಿತ್ರ ನಿರ್ಮಾಣವಾಗಿದೆ. ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವುದು ಈ ಚಿತ್ರದ ವಿಶೇಷ.

ನಾನು ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ ಈ ಚಿತ್ರವನ್ನು ಸಿಂಗಲ್ ಟೇಕ್ ನಲ್ಲಿ ಮಾಡಿ ಮುಗಿಸಿದ್ದೇನೆ. ಈ ಹಿಂದೆ ಶಂಕರ್ ನಾಗ್, ಎಸ್ ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾಗಳ ಸ್ಪೂರ್ತಿಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ.

ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಭೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ದೇಶಪ್ರೇಮವನ್ನು ಆಧರಿಸಿದ ಕಥೆಯಿದೆ. ಯಾರು ಊಹಿಸಲಾಗದ್ದ ಕ್ಲೈಮ್ಯಾಕ್ಸ್ ಸಹ ಇದೆ. ನನ್ನ ಈ ಕನಸ್ಸನ್ನು ನನಸು ಮಾಡಿದ ನನ್ನ ತಾಯಿ ತಂದೆ ವಿಜಯಲಕ್ಷ್ಮಿ – ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕ್ರಿಯೇಟಿವ್ ಹೆಡ್ ಮುರಳಿ ಎಸ್ ವೈ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಮುತ್ತುರಾಜ್.

ಸಿಂಗಲ್ ಟೇಕ್ ನಲ್ಲಿ ಚಿತ್ರ ಮಾಡುವುದು ಸುಲಭದ ಮಾತಲ್ಲ ಎಂದು ಮಾತನಾಡಿದ ಛಾಯಾಗ್ರಾಹಕ ವೀನಸ್ ನಾಗರಾಜ್ ಮೂರ್ತಿ, ನಾವು ಅಂದುಕೊಂಡ ಹಾಗೆ ಚಿತ್ರೀಕರಣ ಮಾಡಲು ಸಹಕಾರ ನೀಡಿದ ಕಲಾವಿದರಿಗೆ ಧನ್ಯವಾದ ಹೇಳಬೇಕು. ಅವರ ಸಹಕಾರವಿಲ್ಲದಿದ್ದರೆ ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿರಲಿಲ್ಲ. ಕನಕಪುರದ ಬಳಿಯ ಮನೆಯೊಂದರಲ್ಲಿ ವಿಶೇಷ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದಾಗಿ ಹೇಳಿದರು.

ಚಿತ್ರವನ್ನು ಲಿಮ್ಕಾ ದಾಖಲೆಗೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುತ್ತಿರುವುದಾಗಿ ಕ್ರಿಯೇಟಿವ್ ಹಡ್ ಮುರಳಿ ತಿಳಿಸಿದರು.

ನಿರ್ಮಾಪಕರಾದ ವಿಜಯಲಕ್ಷ್ಮಿ ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕಲಾವಿದರಾದ ಸುನೀಲ್ ಗೌಡ, ನಯನ ಪುಟ್ಟಸ್ವಾಮಿ, ಹರೀಶ್ ಆಚಾರ್ಯ, ಆನಂದ್ ಕೆಂಗೇರಿ, ರಾಶಿಕ ಪುಟ್ಟಸ್ವಾಮಿ, ತನುಜಾ, ಶೃತಿ ಗೌಡ ಮುಂತಾದವರು “ಯಂಗ್ ಮ್ಯಾನ್” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಮಾದೇವ ಚಿತ್ರೀಕರಣ ಪೂರ್ಣ: ಪೋಸ್ಟ್ ಪ್ರೊಡಕ್ಷನ್ ನಲ್ಲಿ ವಿನೋದ್ ಪ್ರಭಾಕರ್ ಸಿನಿಮಾ

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾಗೆ ಚಿತ್ರೀಕರಣ ಪೂರ್ಣಗೊಂಡಿದೆ. ನವೀನ್ ರೆಡ್ಡಿ ಮಾದೇವ ಸಿನಿಮಾದ ನಿರ್ದೇಶಕ. ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮಾದೇವ ಸಿನಿಮಾಗೆ ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮಂಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಹಿಂದೆಂದೂ ಕಂಡಿರದಂತಹ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರಂತೆ. ಖಳನಾಯಕನಾಗಿ ಶ್ರೀನಗರಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ರಾಬರ್ಟ್‌’ ಸಿನಿಮಾದಲ್ಲಿ ರಾಘವ್‌ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದ ವಿನೋದ್‌ ಪ್ರಭಾಕರ್‌ ಮತ್ತು ಸೋನಲ್‌ ಮೊಂಥೆರೋ ‘ಮಾದೇವ’ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.

ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್‌ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Categories
ಸಿನಿ ಸುದ್ದಿ

ಕನ್ನಡದಲ್ಲೂ ನಂದಿ ಫಿಲ್ಮ್ ಅವಾರ್ಡ್: ಲೋಗೋ ಲಾಂಚ್ ಮಾಡಿದ ಸಿಎಂ ಸಿದ್ದರಾಮಯ್ಯ

ತೆಲುಗು ಸಿನಿಮಾ ರಂಗದಲ್ಲಿ ಅನನ್ಯ ಸೇವೆಗೈದ ಸಾಧಕರಿಗೆ ಕೊಡ ಮಾಡುವ ನಂದಿ ಪ್ರಶಸ್ತಿ ಈಗ ಕನ್ನಡದಲ್ಲಿಯೂ ಪ್ರಾರಂಭವಾಗುತ್ತಿದೆ. ಅದರ ಮೊದಲ ಭಾಗ ಎನ್ನುವಂತೆ ನಂದಿ ಅವಾರ್ಡ್ ಲೋಗೋ ಬಿಡುಗಡೆ ಮಾಡಲಾಗಿದೆ. ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಗೋ ಲಾಂಚ್ ಮಾಡಿ ಶುಭ ಕೋರಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದಲ್ಲಿ ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲೋಗೋ ಅನಾವರಣ ಮಾಡಿಸಿದ್ದಾರೆ. ಅನಿತಾ ರೆಡ್ಡಿ, ನಿತ್ಯನಂದ ಪ್ರಭು, ಪದ್ಮವತಿ ಚಂದ್ರಶೇಖರ್, ಭಾಮಾ ಗಿರೀಶ್, Aiplex ಗಿರೀಶ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂದಿ..ಕನ್ನಡದ ಹೆಮ್ಮೆ..ಈ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕೆಂಬು ಸಿನಿಮಾ ರಂಗದ ಸ್ನೇಹಿರೊಟ್ಟಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಅಧ್ಯಕ್ಷ ಭಾ.ಮಾಹರೀಶ್ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಪ್ರತಿ ವರ್ಷ ಸಿನಿಮಾ ರಂಗದಲ್ಲಿ ಸಾಧನೆ ಮಾಡಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ನಂದಿ ಪ್ರಶಸ್ತಿ ನೀಡಲಾಗುತ್ತದೆ.

ಸದ್ಯ ನಂದಿ ಪ್ರಶಸ್ತಿ ಲೋಗೋ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪರೇಷೆಗಳನ್ನು ತಿಳಿಸಲಾಗುತ್ತದೆ. ಸೈಮಾ, ಫಿಲ್ಮಂ ಫೇರ್ ಮಾದರಿಯಲ್ಲಿಯೇ ಕನ್ನಡ ಸಿನಿಮಾರಂಗಕ್ಕೆ ಪ್ರತ್ಯಕ್ಷ ಪ್ರಶಸ್ತಿ ನಂದಿ ಎನ್ನುತ್ತಾರೆ ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಫೈಟರ್ ಸಿನಿಮಾದ ಹಾಡು ಹೊರ ಬಂತು : ಅಕ್ಟೋಬರ್ ಗೆ ವಿನೋದ್ ಪ್ರಭಾಕರ್ ನಟನೆಯ ಚಿತ್ರ ರಿಲೀಸ್

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ “ಫೈಟರ್” ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ಐ ವಾನ ಫಾಲೋ ಯು” ಎಂಬ ಹಾಡು ಬಿಡುಗಡೆಯಾಗಿದೆ. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ.

ಗುರುರಂಜನ್ ಶೆಟ್ಟಿ(ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ , ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ಕೆ.ಎನ್.ನಾಗೇಶ್ ಕುಮಾರ್ ಮುಂತಾದ ಗಣ್ಯರು “ಐ ವಾನ ಫಾಲೋ ಯು” ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಹಾಡಿನ ಮೊದಲ ಪದ “ಐ ವಾನ ಫಾಲೋ” ಎಂಬುದನ್ನು ನಿರ್ದೇಶಕರು ಹೇಳಿದಾಗ “ಫಾಲೋ” ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.

ಈ ಹಾಡನ್ನು ಪಾಂಡಿಚೆರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ “ಫಾಲೋ ಯು” ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.

ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನೆಯುತ್ತಾ ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಈ “ಫೈಟರ್” ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ “ಫೈಟರ್”. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ ,ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ ನಲ್ಲಿ ಪಾಂಡಿಚೆರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.

ಇಡೀ ಚಿತ್ರತಂಡದ ಶ್ರಮದಿಂದ ” ಫೈಟರ್ ” ಚಿತ್ರ ಉತ್ತಮವಾಗಿ ಮೂಡಿಬಂದಿದೆ. ‌ಇಂದು ಹಾಡು ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ.

ಹಾಡು ಬರೆದಿರುವ ಕವಿರಾಜ್, ಹಾಡಿರುವ ಚೈತ್ರ ಹಾಗೂ ನಾಯಕಿ ಲೇಖಾ ಚಂದ್ರ ” ಫಾಲೋ ಯು” ಹಾಡಿನ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಲವ್ಲಿ ಡಾಟರ್ ಈಗ ಸೂರ್ಯಕಾಂತಿ! ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್

ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂರನೇ ಪ್ರಯತ್ನವೇ ‘ಟಗರು ಪಲ್ಯ’. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರತಂಡ ಸೂರ್ಯಕಾಂತಿ ನಾನು ಎಂಬ ಮೆಲೋಡಿ ಹಾಡನ್ನು ಅನಾವರಣ ಮಾಡಿದೆ. ಸ್ವತಃ ಧನಂಜಯ್ ಅವರೇ ಕ್ಯಾಚಿ‌ ಮ್ಯಾಚಿ ಪದಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು, ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಾಗಭೂಷಣ್ ಟಗರು ಪಲ್ಯದ ನಾಯಕ.

‘ಟಗರು ಪಲ್ಯ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಪ್ರಚಾರ ಕಾರ್ಯ ಆರಂಭಿಸಿರುವ ಟಗರು ಪಲ್ಯ ತಂಡ ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.

Categories
ಸಿನಿ ಸುದ್ದಿ

ಪ್ರೇಮಗೀತೆ ಹಾಡಿದ ಸಪ್ಲೈಯರ್ ಶಂಕರ!

ತ್ರಿನೇತ್ರ ಫಿಲಂಸ್ ಬ್ಯಾನರ್ ನಲ್ಲಿ ಎಂ. ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೈಯರ್ ಶಂಕರ” ಚಿತ್ರದ ಎರಡನೇ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಪ್ರಮೋದ್ ಮರವಂತೆ ಬರೆದಿರುವ “ಮಾಡೊ ಕೆಲಸವ ನೀನು ಮರೆಸಿದೆ” ಎಂಬ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿ ಬಂದಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

“ಸಪ್ಲೈಯರ್ ಶಂಕರ” ಬಾರ್ ಸಪ್ಲೈಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. “ಗಂಟು ಮೂಟೆ” ಮತ್ತು “ಟಾಮ್ & ಜೆರ್ರಿ” ಚಿತ್ರಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ “ಸಪ್ಲೈಯರ್ ಶಂಕರ” ನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ರಂಜಿತ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್, ಬಾರ್ ಸಪ್ಲೇಯರ್ ಜೀವನದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.
ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ “ಸಪ್ಲೇಯರ್ ಶಂಕರ” ಚಿತ್ರಕ್ಕಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ “ಸಪ್ಲೈಯರ್ ಶಂಕರ”, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾನೆ. ಈ ವರ್ಷದ ಕೊನೆಗೆ ತೆರೆಯ ಮೇಲೆ ರಾರಾಜಿಸಲಿದ್ದಾನೆ.

error: Content is protected !!