Categories
ಸಿನಿ ಸುದ್ದಿ

ಮಂಡಳಿ ಅಧ್ಯಕ್ಷ ಆಕಾಂಕ್ಷಿಯ ಭರಪೂರ ಭರವಸೆ: ಚುನಾವಣೆ ಮುನ್ನ ಕೋಟಿ ದೇಣಿಗೆ ತಂದ ಎಂಎನ್ ಸುರೇಶ್

  • ಕಾವೇರಿಗಾಗಿ ತ್ಯಾಗಕ್ಕೆ ಸಿದ್ದ: ಚಿತ್ರರಂಗಕ್ಕೆ ಹೊಸತನದೊಂದಿಗೆ ಅಭಿವೃದ್ದಿಗೆ ಬದ್ದ
  • ವಾಣಿಜ್ಯಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂ.ಎನ್.ಸುರೇಶ್‌ರಿಂದ ಭರವಸೆಯ ಆಶ್ವಾಸನೆ
  • ಚುನಾವಣೆಗೂ ಮುನ್ನವೇ ನಿರ್ಮಾಪಕರ ಸಂಘಕ್ಕೆ ಕೋಟಿ ಕೋಟಿ ದೇಣಿಗೆ ತಂದ ಎನ್ ಎಂ ಸುರೇಶ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಜಿದ್ದಾಜಿದ್ದಿನ ಕಣದಲ್ಲಿರುವ ಅಭ್ಯರ್ಥಿಗಳು ಮಂಡಳಿಯ ಚುನಾವಣಾ ರಣಕಣದಲ್ಲಿ ಯುದ್ದಕ್ಕೆ ಸಜ್ಜಾಗಿದ್ದಾರೆ. 2023ರ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾರುವ ಹಿರಿಯ ನಿರ್ಮಾಪಕ ಎನ್ ಎಂ ಸುರೇಶ್ ಸುದ್ದಿಗೋಷ್ಠಿ ನಡೆಸಿ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ತಮ್ಮ ಯೋಜನೆಗಳನ್ನು ವಿವರಿಸಿದರು. ತಮ್ಮ ನೇತೃತ್ವದ ತಂಡಕ್ಕೆ ಬೆಂಬಲ ಕೇಳುವುದರ ಜೊತೆಗೆ ವಾಣಿಜ್ಯ ಮಂಡಳಿಯ ಸಮಗ್ರ ಅಭಿವೃದ್ದಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡರು.

ಸುದ್ದಿಗೋಷ್ಠಿಯ ಆರಂಭದಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸದ್ಯ ಉಂಟಾಗಿರುವ ಸಮಸ್ಯೆಗೆ ತಮ್ಮ ತಂಡದ ಸಂಪೂರ್ಣ ಬೆಂಬಲ ಇದೆ ಎಂದು ಹಿರಿಯ ನಿರ್ಮಾಪಕ ಎನ್ ಎಂ ಸುರೇಶ್‌ ಘೋಷಿಸಿದರು.

‘ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಕಾವೇರಿಗಾಗಿ ಹಿಂದೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಕಣದಲ್ಲಿರುವ ನಮ್ಮ ತಂಡ, ಸದಾ ಈ ಕನ್ನಡ ನಾಡಿನ ಅಸ್ಮಿತೆಯ ವಿಚಾರಗಳಿಗೆ ಬೆಂಬಲವಷ್ಟೆ ಅಲ್ಲದೆ ಯಾವುದೇ ಹಂತದ ಹೋರಾಟ ಅಥವ ತ್ಯಾಗಕ್ಕೆ ಸಿದ್ದರಿದ್ದೇವೆ’ ಎಂದು ಕಾವೇರಿ ಸಮಸ್ಯೆಗೆ ಬಹಿರಂಗ ಬೆಂಬಲ ಘೋಷಿಸಿದರು.

ಚುನಾವಣೆ ಎಂದರೆ ಕೇವಲ ಅಧಿಕಾರ ಅಥವ ಹುದ್ದೆಯ ನಿರೀಕ್ಷೆಯಷ್ಟೆ ಅಲ್ಲ, 75 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಚಲನಚಿತ್ರೋಧ್ಯಮದ ಸಮಗ್ರ ಅಭಿವೃದ್ದಿ, ಆಧುನಿಕತೆ, ತಂತ್ರಜ್ಞಾನ, ಹಾಗೂ ಹಿರಿಯ ಅನುಭವಿಗಳ ಸೂಕ್ತ ಸಲಹೆಗಳೊಂದಿಗೆ ಮಂಡಳಿಯ ಸಮಗ್ರ ಅಭಿವೃದ್ದಿಯನ್ನ ವಾಸ್ತವಿಕವಾಗಿ ಕಟ್ಟಿಕೊಡೋ ಕೆಲಸವಾಗಿದೆ. 30 ವರ್ಷಗಳಿಂದ ಚಿತ್ರೋಧ್ಯಮದಲ್ಲಿರುವ ನಾನು ಕೇವಲ ಹುದ್ದೆಯ ಆಕಾಂಕ್ಷಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಬದಲಿಗೆ ಈ ಚುನಾವಣೆಯ ಸದಾವಕಾಶವನ್ನು ಬಳಸಿಕೊಂಡು ದಶಕಗಳಿಂದ ಇರುವ ವಾಣಿಜ್ಯ ಮಂಡಳಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವ ಸದುದ್ದೇಶ ಹೊಂದಿದ್ದೇವೆ’ ಎಂದು ತಿಳಿಸಿದರು.

ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ದೇಶದದಲ್ಲೇ ಒಂದು ಮಾದರಿ ಮಂಡಳಿಯನ್ನಾಗಿಸುವುದೇ ನಮ್ಮ ಗುರಿಯಾಗಿದೆ. ಚಿತ್ರರಂಗದಲ್ಲಿನ ನೌಕರರ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ನಟ ನಟಿಯರ ಗೌರವ ಹೆಚ್ಚಿಸುವ ವೇದಿಕೆ ಸೃಷ್ಟಿ ಮಾಡಬೇಕಿದೆ. ಅಲ್ಲದೆ ನೆಲ,ಜಲ,ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಸೇತುವೆಯಂತೆ ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು.

‘ಈಗಾಗಲೇ ನನಗೆ ಸಿಕ್ಕಿರುವ ಸೇವೆಯ ಅವಕಾಶ ಬಳಸಿಕೊಂಡು ಹೊಂಬಾಳೆ ಫಿಲ್ಮ್ ಸಂಸ್ಥೆಯಿಂದ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ದೇಣಿಗೆ ತಂದಿದ್ದೇವೆ. ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ 3 ಕೋಟಿ ಸಾಲ ಮಂಜೂರು ಮಾಡಿಸಿ ಕಟ್ಟಡ ಕಾಮಗಾರಿಗೆ ತ್ವರಿತ ರೂಪ ನೀಡಿದ್ದೇವೆ. ಇದು ಸೇವೆಗಾಗಿ ಸಿಕ್ಕ ವೇದಿಕೆಯಾಗಿದೆ. ಚಿತ್ರರಂಗದ ಋಣ ನನ್ನ ಮೇಲೆ ಸಾಕಷ್ಟು ಇದೆ, ಆದರೆ ಅದನ್ನ ಸ್ವಲ್ಪ ಮಟ್ಟಿಗಾದರೂ ತೀರಿಸುವ ಕೆಲಸವನ್ನು ಈ ಚುನಾವಣೆಯ ಮೂಲಕ ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ಹಿರಿಯ ನಿರ್ಮಾಪಕ ಎಂ.ಎನ್.ಸುರೇಶ್‌ ಹೇಳಿದರು.

ಚಿತ್ರೋದ್ಯಮಕ್ಕೆ ಆಧುನಿಕತೆ, ತಂತ್ರಜ್ಞಾನದ ಜೊತೆಗೆ ಹೊಸತನ ಜೊತೆಯಾದಾಗ ಅಷ್ಟೇ ಪ್ರಮಾಣದಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅದು ನಟ, ನಟಿಯರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಸಂಬಂಧಿಸಿದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಹೊಸ ಕನಸುಗಳೊಂದಿಗೆ ಚಿತ್ರರಂಗಕ್ಕೆ ಬರುವ ಹೊಸಬರಿಗಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಈ ಎಲ್ಲಾ ಕಾರಣದಿಂದ ಈ ಬಾರಿಯ ಚುನಾವಣೆಯಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನಲ್ಲಿ ಚುನಾವಣೆಗೆ ಸಜ್ಜಾಗಿರುವ ನಮ್ಮ ತಂಡವನ್ನು ಬೆಂಬಲಿಸಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ಸಹಕರಿಸಬೇಕು’ ಎಂದು ವಿನಂತಿಸಿಕೊಂಡರು.

ಎಂ.ಎನ್.ಸುರೇಶ್‌ ನೇತೃತ್ವದ ಈ ತಂಡಕ್ಕೆ ಮಾರ್ಗದರ್ಶಕರಾಗಿ ಹಿರಿಯ ನಿರ್ಮಾಪಕ,ಹೋರಾಟಗಾರ ಸಾ.ರಾ.ಗೋವಿಂದ್ ನಿಂತಿದ್ದಾರೆ. ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವಿತರಕ ವಲಯದಿಂದ ಜಿ.ವೆಂಕಟೇಶ್‌ ಚಿಂಗಾರಿ ಬಿ ಮಹದೇವ್ ಹಾಗೂ ಪ್ರದರ್ಶಕರಿಂದ ಎಂ ನರಸಿಂಹಲು ಸ್ಪರ್ಧೆಗಿಳಿದಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ರಾಜೇಶ್ ಬ್ರಹ್ಮಾವರ್, ವಿತರಕ ವಲಯದಿಂದ ಕೆ ಪಾರ್ಥ ಸಾರಥಿ, ಖಜಾಂಚಿ ಸ್ಥಾನಕ್ಕೆ ದಯಾಳ್ ಪದ್ಮನಾಭನ್ ಸ್ಪರ್ಧೆ ಮಾಡುತ್ತಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಹಾಜರಾಗಿ ಚುನಾವಣೆಗೆ ಬೆಂಬಲ ಕೇಳಿದರು.

Categories
ಸಿನಿ ಸುದ್ದಿ

ಪೆನ್ ಸ್ಟುಡಿಯೋ ಸಂಸ್ಥೆಗೆ ಘೋಸ್ಟ್ ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ

ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. “ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.

ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು ಹೊರೆತು ಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ “ಘೋಸ್ಟ್” ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ. ಇತ್ತೀಚೆಗೆ ಪೆನ್ ಸ್ಟುಡಿಯೋ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದಾರೆ.

ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ‌.

Categories
ಸಿನಿ ಸುದ್ದಿ

ಇವರು ಮಿಸ್ಟರ್ ಅಂಡ್ ಮಿಸಸ್ ಮನ್ಮಥ! ಹೊಸ ಸಿನಿಮಾ ಟ್ರೇಲರ್ ಬಂತು

ಅಂದು ಹಾಸ್ಯನಟ ಕಾಶೀನಾಥ್ ಅವರು ಮನ್ಮಥನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು, ಈಗ ಮಿ.ಅಂಡ್ ಮಿಸಸ್ ಮನ್ಮಥ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅದರಲ್ಲಿ ಸುಬ್ರಮಣಿ ಅವರು ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ. ಸುಬ್ರಮಣಿ ಅವರೇ ನಿರ್ದೇಶನ ಮಾಡಿರುವ “ಮಿಸ್ಟರ್ ಅಂಡ್ ಮಿಸ್ ಮನ್ಮಥ” ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ಇದೊಂದು ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಇರುವ ಚಿತ್ರವಾಗಿದ್ದು, ಮೂರು ದಶಕಗಳಿಂದ ಸೀರಿಯಲ್, ಸಿನಿಮಾ, ನಾಟಕ ಅಂತ ಅಭಿನಯದಲ್ಲಿ ತೊಡಗಿಕೊಂಡಿರುವ ಎ.ಸುಬ್ರಮಣಿ ರಾಮಗೊಂಡನಹಳ್ಳಿ ಅವರು ಈ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗೂ ಸಹ ಅಭಿನಯಿಸಿದ್ದಾರೆ,‌ ರೈತ ಕುಟುಂಬದಿಂದ ಬಂದ ಸುಬ್ರಮಣಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಪಳಗಿ ಈಗ ಚಿತ್ರ ನಿರ್ಮಾಪಕನಾಗಿದ್ದಾರೆ, ಓರ್ವ ಶ್ರೀಮಂತ ಹಾಗೂ ಆಧುನಿಕ ಮನ್ಮಥನ ಕಥೆ ಇದಾಗಿದ್ದು, ಚಿತ್ರದಲ್ಲಿ ಶಕುಂತಲಾ, ಚಂದನಾ ಹಾಗೂ ವೈಶಾಲಿ(ಮಂಗಳಮುಖಿ) ಎಂಬ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ, ನಾಯಕ ಸುಬ್ರಮಣಿ, ಕಳೆದ 94ರಿಂದಲೂ ಒಬ್ಬ ಹೀರೋ ಆಗಬೇಕೆಂದು ಪ್ರಯತ್ನಿಸಿದೆ, ಐದಾರು ಸೀರಿಯಲ್ ಹಾಗೂ ಅರಬ್ಬೀ ಕಡಲತೀರದಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಮನ್ಮಥ ಒಬ್ಬ ಮೂಗನಾಗಿದ್ದು, ಶ್ರೀಮಂತನಾದ ಆತನಲ್ಲಿರುವ ಹಣವನ್ನು ಲಪಟಾಯಿಸಲು ಜಾಕ್ ಅಂಡ್ ಜಿಲ್ ಎಂಬ ಇಬ್ಬರು ವ್ಯಕ್ತಿಗಳು ಆತನ ಹಿಂದೆ ಮೂವರು ಹುಡುಗಿಯರನ್ನು ಛೂ ಬಿಡುತ್ತಾರೆ, ಆದರೆ ಆತ ಯಾವುದೇ ಅಮಿಶಕ್ಕೂ ಬಗ್ಗಲ್ಲ, ಹೀಗೆ ಮನರಂಜನಾತ್ಮಕವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದೇವೆ. ಚಿತ್ರಕ್ಕೆ ಬೆಂಗಳೂರು, ಅರಸೀಕೆರೆ, ಮಂಗಳೂರು ಮತ್ತು ಉಡುಪಿ ಸುತ್ತಮತ್ತ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರವನ್ನು ಅ.6ಕ್ಕೆ ರಿಲೀಸ್ ಮಾಡುವ ಯೋಜನೆಯಿದೆ ಎಂದರು.

ನಾಯಕಿ ವೈಶಾಲಿ ಮಾತನಾಡಿ, ಸಿನಿಮಾದಲ್ಲಿ ಅಭಿನಯಿಸಬೇಕೆಂದು ತುಂಬಾ ಆಸೆಯಿತ್ತು, ನಮಗಾರೂ ಅವಕಾಶ ನೀಡಿರಲಿಲ್ಲ, ಸುಬ್ರಮಣಿ ಅವರು ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ರಮ್ಯ ಎಂಬ ಯುವತಿಯ ಪಾತ್ರ ಮಾಡಿದ್ದೇನೆ ಎಂದರು.

ನಟಿ ಚಂದನಾ ಮಾತನಾಡಿ ನನ್ನದು ಒಬ್ಬ ಲವರ್ ಪಾತ್ರ, ನಾನು ಸಕಲೇಶಪುರದವಳು ಎಂದು ಹೇಳಿದರು, ಸಂಗೀತ ನಿರ್ದೇಶಕ ಕೆವಿನ್, ಇದು ನನ್ನ ಸಂಗೀತ ನಿರ್ದೇಶನದ 8ನೇ ಚಿತ್ರ, ಚಿತ್ರದಲ್ಲಿ 4 ಹಾಡುಗಳಿದ್ದು, ಎಲ್ಲವೂ ವಿಭಿನ್ನವಾಗಿವೆ ಎಂದರು.

ಮಜಾಭಾರತದಲ್ಲಿ ಅಭಿನಯಿಸಿದ ಬಸವರಾಜ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ, ಮತ್ತೊಬ್ಬ ಸ್ನೇಹಿತನಾಗಿ ರವಿ ಕುಂದಾಪುರ ನಟಿಸಿದ್ದಾರೆ, ಮಾನ್ಯ ಶ್ರೇಯಶ್ರೀ ಕ್ರಿಯೇಶನ್ಸ್ ನಿರ್ಮಾಣದ ಈ ಚಿತ್ರಕ್ಕೆ ವಿಜಯರಾಜ್ ಅವರ ಕಥೆ-ಸಂಕಲನ, ರವಿಶ್ರೀ ಮಾರುತಿ ಅವರ ಸಹನಿರ್ದೇಶನ ಮತ್ತು ಸಂಭಾಷಣೆ, ರವಿ ಅವರ ಛಾಯಾಗ್ರಹಣ, ಜೈಪ್ರಕಾಶ್ ಅವರ ನೃತ್ಯ ನಿರ್ದೇಶನ, ಶಿವು ಅವರ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ದ ಜಡ್ಜ್ ಮೆಂಟ್ ಚಿತ್ರಕ್ಕೆ ಅದ್ಧೂರಿ ಕ್ಲೈಮ್ಯಾಕ್ಸ್: ಇದು ರವಿಚಂದ್ರನ್ ಚಿತ್ರ

ಜಿ9 ಕಮ್ಯೂನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ “ದ ಜಡ್ಜ್ ಮೆಂಟ್” ಚಿತ್ರದ ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಇತ್ತೀಚಿಗೆ ಮೈಸೂರು ರಸ್ತೆಯಲ್ಲಿ ಇರುವ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ನಡೆಯಿತು. ರವಿಚಂದ್ರನ್, ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ರಂಗಾಯಣ ರಘು, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರಿ, ಜಗದೀಶ್ ಮಲ್ನಾಡ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ ಮತ್ತು ಅರವಿಂದ್ ಕುಪ್ಳೀಕರ್ ಮುಂತಾದ ನುರಿತ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ದೇಶನದಲ್ಲಿ, ಅನುಭವಿ ಪಿ ಕೆ ಹೆಚ್ ದಾಸ್ ಮೂರು ಕ್ಯಾಮರಾಗಳನ್ನು ಬಳಸಿಕೊಂಡು ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರಿಸಿಕೊಂಡರು. ವಿಶ್ವನಾಥ ಗುಪ್ತಾ, ರಾಮು ರಾಯಚೂರು ಮತ್ತು ರಾಜಶೇಖರ ಪಾಟೀಲ್ ಈ ಚಿತ್ರದ ನಿರ್ಮಾಪಕರು.

“ದ ಜಡ್ಜ್ ಮೆಂಟ್” ಕಥೆ ಲೀಗಲ್ ಥ್ರಿಲ್ಲರ್ ಶೈಲಿಯದಾಗಿದ್ದು, ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ತಿಳಿಸಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮ್ ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಸುಜಯ್ ಶಾಸ್ತ್ರಿ, ರಾಜೇಂದ್ರ ಕಾರಂತ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಮ್, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್ ಮತ್ತು ಜಗದೀಶ್ ಮಲ್ನಾಡ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ‌, ಪ್ರಮೋದ್ ಮರವಂತೆ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಡಾ॥ ರವಿ ವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ “ದ ಜಡ್ಜ್ ಮೆಂಟ್” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ರೀಲ್ಸ್ ಮಾಡಿ ಐ ಫೋನ್ 15 ಗೆಲ್ಲಿ! ಯಾರಿಗುಂಟು ಯಾರಿಗಿಲ್ಲ!! ಸಪ್ಲೈಯರ್ ಶಂಕರ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿ…

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೇಯರ್ ಶಂಕರ” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ “ಮಾಡೊ ಕೆಲಸವ ನೀನು ಮರೆಸಿದೆ” ಎಂಬ ಪ್ರೇಮಗೀತೆ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ‌.

ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರು ಹಾಡಿರುವ ಈ ಹಾಡಿಗೆ ಆಸಕ್ತರು ರೀಲ್ಸ್ ಮಾಡಬಹುದು. ಯಾರ ರೀಲ್ಸ್ ಗೆ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಬರುವುದೊ, ಅವರಿಗೆ ಚಿತ್ರತಂಡದಿಂದ I PHONE 15 ಸಿಗಲಿದೆ.


ಆಸಕ್ತರು ಕೆಳಗಿನ ನಿಯಮ ಅನುಸರಿಸಬೇಕು

FOLLOW THESE 4 SIMPLE STEPS TO PARTICIPATE IN THE CONTEST

  1. Create Reel using Audio from Instagram “Mado Kelasava Neenu”
  2. Follow @trinethra_films Instagram page.
  3. Subscribe to Trinethra films YouTube Channel.
  4. Use hashtag #MaadoKelasavaNeenuMareside and #SupplierShankara and tag @trinethra_films @aanandaaudio
Categories
ಸಿನಿ ಸುದ್ದಿ

13ರ ಗೆಲುವು ನಗುವು! ಪ್ರೇಕ್ಷಕನ ಭರಪೂರ ಮೆಚ್ಚುಗೆ: ತಂಡದಲ್ಲಿ ಹೆಚ್ಚಿದ ಉತ್ಸಾಹ

ಹಣ ಮನುಷ್ಯನ ಜೀವನದಲ್ಲಿ ಏನೆಲ್ಲ ಆಟ ಆಡಿಸುತ್ತೆ ಎಂದು ಹೇಳುವ ಚಿತ್ರ “13” ತೆರೆಕಂಡಿದ್ದು, ವೀಕ್ಷಕರ ಹಾಗು ಮಾದ್ಯಮಗಳ ಪ್ರಶಂಸೆಗೆ ಪಾತ್ರವಾಗಿದೆ. ಸಿನಿಮಾ ಇಷ್ಟಪಟ್ಟು ನೋಡುತ್ತಿರುವ ವೀಕ್ಷಕರಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರಾದ ಮಂಜುನಾಥ್ ಗೌಡ, ಕೇಶವಮೂರ್ತಿ, ಮಂಜುನಾಥ ಹೆಚ್.ಎಸ್. ಹಾಜರಿದ್ದು ಚಿತ್ರದ ಗೆಲುವಿನ‌ ಸಂಭ್ರಮ ಹಂಚಿಕೊಂಡರು.

ರಾಘವೇಂದ್ರ ರಾಜಕುಮಾರ್ ಮಾತನಾಡಿ, ಮಾದ್ಯಮದವರು ಜನರಿಗೆ ಏನು ತಲುಪಿಸಬೇಕೋ ಅದನ್ನು ತಲುಪಿಸಿದ್ದೀರಿ, ಪ್ರತಿಯೊಬ್ಬರ ಕೆಲಸವನ್ನೂ ಗುರ್ತಿಸಿದ್ದೀರಿ, ಚಿತ್ರದಲ್ಲಿ ನಾವೊಬ್ಬರೇ ಕಾಣಿಸಿಕೊಂಡಾಗ ಖುಷಿಯಾಗಲ್ಲ, ನಿಮ್ಮ ಅಭಿಪ್ರಾಯ ನೋಡಿ ತೃಪ್ತಿಯಾಯಿತು. ಯಾರನ್ನೂ ಹೊಗಳದೆ ಸಿನಿಮಾ ನೋಡಿ ಅನಿಸಿದ್ದನ್ನು ಹಾಗೇ ಬರೆದಿದ್ದೀರಿ, ತಮಿಳುನಾಡಲ್ಲೂ ನನ್ನ ಫ್ರೆಂಡ್ಸ್ ಇದ್ದಾರೆ, ಅವರೆಲ್ಲ ಕಾಲ್ ಮಾಡಿ ಇಲ್ಲಿಯೂ ಸಿನಿಮಾ ಬರುತ್ತಾ ಅಂತ ಕೇಳ್ತಿದ್ದಾರೆ. ನಮ್ಮ ನಿಮ್ಮೆಲ್ಲರ ಕೆಲಸ ಆಗಿದೆ. ಇನ್ನೂ ಹೆಚ್ಚು
ಜನ ನೋಡಿ ಹರಸಬೇಕು. ಸಿನಿಮಾ ನೋಡುತ್ತಿರುವ ಎಲ್ಲಾ ಪ್ರೇಕ್ಷಕರಿಗೆ ನನ್ನ ಕೋಟಿ ನಮನಗಳು ಎಂದರು.

ನಿರ್ದೇಶಕ ನರೇಂದ್ರ ಬಾಬು ಮಾತನಾಡಿ ಒಂದೊಳ್ಳೆ ಪ್ರಯತ್ನವನ್ನು ನೀವೆಲ್ಲ ಜನರಿಗೆ ತಲುಪಿಸಿದ್ದೀರಿ, ಹೃದಯಪೂರ್ವಕ‌ ಧನ್ಯವಾದಗಳು, ಟೆಕ್ನೀಷಿಯನ್ ಗಳ ಕೆಲಸ ಗುರ್ತಿಸಿದ್ದು ನನಗೆ ಹೆಮ್ಮೆಯೆನಿಸಿತು. ಶೃತಿ ಮೇಡಂ ಪಾತ್ರ ಸಿನಿಮಾನ ಒಂದು ಪೀಕ್ ನಲ್ಲಿ ತೆಗೆದುಕೊಂಡು ಹೋಗುತ್ತೆ ಎಂದರು.

‘ಚಿತ್ರದ ಬಗ್ಗೆ ಒಳ್ಳೆ ರಿವ್ಯೂಸ್ ಬಂದಿದೆ. 25 ವರ್ಷಗಳ ನಂತರ ರಾಘಣ್ಣ ಜೊತೆ ಆ್ಯಕ್ಟ್ ಮಾಡಿದ್ದು, ಅದನ್ನು ಜನ ಮೆಚ್ಚಿರುವುದು ನಿಜಕ್ಕೂ ಖುಷಿಯಾಗಿದೆ. ನಾನೇನಾದರೂ ಚೆನ್ನಾಗಿ ಪರ್ ಫಾರ್ಮ್ ಮಾಡಿದ್ದೇನೆಂದರೆ ಅದರ ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು, ರಾಘಣ್ಣ ಕೂಡ ತುಂಬಾ ಕೋ ಆಪರೇಟ್ ಮಾಡಿದರು’ ಎಂದು ಶೃತಿ ದೂರದ ಮಲೇಶಿಯಾದಿಂದಲೇ ವಾಯ್ಸ್ ಮೂಲಕ ಮಾತಾಡಿದ್ದಾರೆ.

ನಿರ್ಮಾಪಕ ಮಂಜುನಾಥ್ ಗೌಡ ಮಾತನಾಡಿ, ನಮ್ಮ ಚಿತ್ರವನ್ನು ತುಂಬಾ ಚೆನ್ನಾಗಿ ಜನರಿಗೆ ತಲುಪಿಸಿದ್ದೀರಿ, ರಿವ್ಯೂಸ್ ನೋಡಿ ಹೆಚ್ಚು ಹೆಚ್ಚು ಜನ ಥೇಟರಿಗೆ ಬರುತ್ತಿದ್ದಾರೆ. ಹಬ್ಬ ಇದ್ದರೂ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಬರುತ್ತಿದೆ. ಮುಂದಿನ ವಾರದಿಂದ 30 ಥೇಟರ್ ಗಳನ್ನು ಹೆಚ್ಚಿಸುತ್ತಿದ್ದೇವೆ. ಚಿತ್ರ ನೋಡಿದವರೆಲ್ಲ ಇಬ್ಬರಿಗಾದರೂ ಹೇಳುತ್ತಿದ್ದಾರೆ. ಹೀಗೆ ಒಬ್ಬರಿಂದ ಮತ್ತೆರಡು ಫ್ಯಾಮಿಲಿ ಸಿನಿಮಾಗೆ ಬರುತ್ತಿದ್ದಾರೆ ಎಂದು ಹೇಳಿದರು.

ಪ್ರಮೋದ್ ಶೆಟ್ಟಿ ಮಾತನಾಡಿ ಸ್ವಲ್ಪ ತೊಂದರೆ ಆದರೂ ನಿರ್ಮಾಪಕರು ಚಿತ್ರವನ್ನು ಎತ್ತಿ ಹಿಡಿಯಬೇಕು ಅಂತಿದ್ದರು. ಆದರೆ ಜನರೇ ಸಿನಿಮಾನ ಎತ್ತಿ ಹಿಡಿದಿದ್ದಾರೆ. ಕುಂದಾಪುರದಲ್ಲಿ ಹಬ್ಬದ ದಿನವೂ 70-80 % ಕಲೆಕ್ಷನ್ ಆಗಿದೆ. ರಾಘಣ್ಣ ಶೃತಿ ಅವರ ಪಾತ್ರಗಳನ್ನು ನೋಡಲೆಂದೇ ಜನ ಬರ್ತಿದ್ದಾರೆ. ಸುಮಾರು ಚಿತ್ರಗಳಲ್ಲಿ ಪೋಲಿಸ್ ಪಾತ್ರಗಳನ್ನು ಮಾಡಿದ್ದರೂ ಈ ಚಿತ್ರದಲ್ಲಿ ವಿಶೇಷವಾಗಿ ಗುರ್ತಿಸ್ತಿದಾರೆ ಎಂದರು. ’13’ ಕೋಟಿ ಹವಾಲ ಹಣದ ಸುತ್ತ ನಡೆಯುವ ಕುತೂಹಲಕರ ಕಥೆ ಈ ಚಿತ್ರದಲ್ಲಿದ್ದು, ಅದರ ಸುತ್ತ ಚಿತ್ರದ ಎಲ್ಲಾ ಪಾತ್ರಗಳು ಯಾವರೀತಿ ಕನೆಕ್ಟ್ ಆಗುತ್ತ ಹೋಗುತ್ತವೆ, ಕೊನೆಗೆ ಆ ಹಣ ಏನಾಯ್ತು ಅನ್ನೋದೇ ಈ ಚಿತ್ರದ ಕಥೆ.

ಶೋಗನ್‌ಬಾಬು ಅವರ ಸಂಗೀತ, ಅಜಯ್ ಮಂಜು ಅವರ ಕ್ಯಾಮೆರಾ ವರ್ಕ್, ಗಿರೀಶ್ ಕುಮಾರ್ ಅವರ ಸಂಕಲನ, ಮದನ್ ಹರಿಣಿ, ಸಶಿಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಸಿಂಹ ಸಂಭಾಷಣೆಯನ್ನು ಬರೆದಿದ್ದಾರೆ.

Categories
ಸಿನಿ ಸುದ್ದಿ

ವಿಷ್ಣು ಹುಟ್ದಬ್ಬಕ್ಕೆ ತಗ್ಗಟ್ಟಿ ಫಸ್ಟ್ ಲುಕ್ ಬಂತು

ಕೊರೋನ ನಂತರ “ಕಿಲಾಡಿಗಳು” ಎಂಬ ಚಿತ್ರ ನಿರ್ದೇಶಿಸಿದ್ದ ಬಿ.ಪಿ ಹರಿಹರನ್, ಈಗ “ತಗ್ಗಟ್ಟಿ” ಎಂಬ ವಿಶೇಷ ಶೀರ್ಷಿಕೆಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. “ತಗ್ಗಟ್ಟಿ” ಎಂದರೆ ಒಂದು ಊರಿನ ಹೆಸರು

ನಾನು ವಿಷ್ಣುವರ್ಧನ್ ಅಭಿಮಾನಿ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ “ತಗ್ಗಟ್ಟಿ” ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಬಿ.ಪಿ.ಹರಿಹರನ್.

ತಗ್ಗಟ್ಟಿ ಗೆ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ದ್ವಿತೀಯ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದಿದ್ದಾರೆ.

ಸಿ ಸಿ ಸಿನಿ ಪ್ರೊಡಕ್ಷನ್ ಅಡಿ ಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ನಿರ್ಮಾಣದ ಹೊಣೆಯನ್ನು ಚಂದ್ರಮ್ಮ ಚನ್ನಾಚಾರಿ ಹೊತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಪ್ರವೀಣ್, ನವರತ್ನ, ಅಕ್ಷತ, ಸೂರ್ಯ, ವಿನಯ್, ಮಲ್ಲೇಶ್, ಮಂಡ್ಯ ಸಿದ್ದು, ಗಹನ, ಪಲ್ಲವಿ, ರಕ್ಷಿತಾ ನಟಿಸುತ್ತಿದ್ದು, ಪೋಷಕ ಪಾತ್ರದಲ್ಲಿ ಬಾಲ ರಾಜ್ವಾಡಿ, ರೇಖಾದಾಸ್, ಶಿವಕುಮಾರ್ ಆರಾಧ್ಯ, ರೇಣು ಶಿಕಾರಿ ಇನ್ನು ಮುಂತಾದ ಪ್ರಮುಖ ಕಲಾವಿದರಿದ್ದಾರೆ.

ಕ್ರಿಯೇಟಿವ್ ಹೆಡ್ ಆಗಿ ಕನ್ನಡ ಚಿತ್ರರಂಗದ ಪ್ರಮುಖ ಬರಹಗಾರ ಹಾಗೂ ಸಾಹಿತಿ “ಲವ್ ಇನ್ ಮಂಡ್ಯ” ಚಿತ್ರದ ನಿರ್ದೇಶಕ ಅರಸು ಅಂತಾರೆ ಕೂಡ ಕೈ ಜೋಡಿಸಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ, ರವೀಶ್ ಎ ಟಿ ಸಂಗೀತ, ಮುತ್ತುರಾಜ್ ಟಿ ಸಂಕಲನ, ಅರಸು ಅಂತಾರೆ ಮತ್ತು ರೇವಣ್ಣ ನಾಯಕ್ ಸಾಹಿತ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದೆ ವರ್ಷ ಚಿತ್ರವನ್ನು ತೆರೆ ಮೇಲೆ ತರುವ ಉದ್ದೇಶ ಮತ್ತು ಉತ್ಸಾಹವನ್ನು ಚಿತ್ರ ತಂಡ ಹೊಂದಿದೆ.

Categories
ಸಿನಿ ಸುದ್ದಿ

ಚಂದನ್ ಶೆಟ್ಟಿ ಹೊಸ ಯೂಟ್ಯೂಬ್ ಚಾನಲ್ ಶುರು: ನಾದ ಯೋಗಿಯಲ್ಲಿ ಗಂ ಗಣಪತಿ ಹಾಡು

ಸಂಗೀತ ನಿರ್ದೇಶಕ, ಗಾಯಕ, ನಾಯಕ ಚಂದನ್ ಶೆಟ್ಟಿ ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು‌. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಚಾಲನೆ ನೀಡಿದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಕುರಿತಾದ “ಗಂ ಗಣಪತಿ” ಹಾಡಿನೊಂದಿಗೆ ಚಾನಲ್ ಆರಂಭವಾಗಿದೆ.

ಕಳೆದ ಎಂಟು ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನನ್ನ ಮೊದಲ ಹಾಡು ಬಿಡುಗಡೆಯಾಗಿತ್ತು. ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದೇನೆ. “ನಾದ ಯೋಗಿ” ಎಂಬ ಹೊಸ ಯೂಟ್ಯೂಬ್ ಚಾನಲನ್ನು ಜೀರೋ ಸಬ್ ಸ್ಕ್ರೈಬರ್ ನೊಂದಿಗೆ ಆರಂಭಿಸಿದ್ದೇನೆ. ಈ ಚಾನಲ್ ಬರೀ ಭಕ್ತಿಗೀತೆಗಳಿಗೆ ಮೀಸಲು. ಈಗಿನ ಯುವಜನತೆಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸುವ ಸಲುವಾಗಿ “ನಾದಯೋಗಿ” ಚಾನಲನ್ನು ಆರಂಭಿಸಿದ್ದೇನೆ. ಇದಕ್ಕೆ ನನಗೆ ಮೈಸೂರಿನ ಅರ್ಜುನ್ ಅವದೂತರು ಪ್ರೇರಣೆ. ಇದರ ಮೊದಲ ಗೀತೆಯಾಗಿ “ಗಂ ಗಣಪತಿ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ‌.

ಮುಂದೆ ಕೂಡ ಹನುಮ, ಶಿವ ಸೇರಿದಂತೆ ಅನೇಕ ದೇವರುಗಳ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ‌. ಈಗ ಬಿಡುಗಡೆಯಾಗಿರುವ ಗಣಪತಿ ಹಾಡಿನಲ್ಲಿ ನಲವತ್ತೆಂಟು ಗಣಪತಿ ನಾಮಗಳಿದೆ. ನನ್ನ ತಮ್ಮ ಪುನೀತ್ ಅದ್ಭುತವಾಗಿ ಈ ಹಾಡಿನ ವಿಡಿಯೋ ಮಾಡಿದ್ದಾನೆ. ನಾನೇ ಹಾಡಿದ್ದೇ‌ನೆ. ಮುಂದೆ “ನಾದ ಯೋಗಿ” ಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ಚಂದನ್ ಶೆಟ್ಟಿ ತಿಳಿಸಿದರು‌.

ಚಂದನ್ ಶೆಟ್ಟಿ ಅವರ ನೂತನ ಪ್ರಯತ್ನಕ್ಕೆ ಶುಭಕೋರಲು ನಿರ್ಮಾಪಕರಾದ ಸಂಜಯ್ ಗೌಡ, ಗೋವಿಂದರಾಜು, ನವರಸನ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು. ಪುನೀತ್ ಶೆಟ್ಟಿ ಅವರು ಹಾಡಿನ ಬಗ್ಗೆ ಮಾತನಾಡಿದರು. ಸಮಾರಂಭದ ನಂತರ ಕೇಕ್ ಕಟ್ ಮಾಡುವ ಮೂಲಕ ಚಂದನ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.

Categories
ಸಿನಿ ಸುದ್ದಿ

ಕರ್ನಾಟಕ ಅಳಿಯನಿಗೆ ಮುದ್ದಿನ ಅಳಿಯನ ಮೆಚ್ಚುಗೆ! ಪ್ರಥಮ್ ಸಿನಿಮಾ ಹಾಡು ಬಂತು

” ಮುದ್ದಿನ ಅಳಿಯ” ಚಿತ್ರದ ನಾಯಕ ಶಶಿಕುಮಾರ್ ಅವರು ಬಿಗ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ “ಕರ್ನಾಟಕದ ಅಳಿಯ” ಚಿತ್ರದ “ಮನಸಿಗೆ ಹಿಡಿಸಿದನು ಇವನು” ಹಾಡನ್ನು ಬಿಡುಗಡೆ ಮಾಡಿದರು. ಕೆ.ರಾಮನಾರಾಯಣ್ ಈ ಹಾಡನ್ನು ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ‌. ಅದಿತಿ ಸಾಗರ್ ಹಾಡಿದ್ದಾರೆ.

ನಮ್ಮಲ್ಲಿ “ಮುದ್ದಿನ ಅಳಿಯ”, ” ಗಡಿಬಿಡಿ ಅಳಿಯ” ಹೀಗೆ ಸಾಕಷ್ಟು ಜನ ಅಳಿಯಂದರಿದ್ದೀವಿ. ಈಗ ಪ್ರಥಮ್ “ಕರ್ನಾಟಕದ ಅಳಿಯ” ಆಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರು ಹಾಡು ಬಿಡುಗಡೆಗೆ ಬರುತ್ತಾರೆ ಅಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಅವರು ಬಂದಿಲ್ಲ. ಆದರೆ ವಿಡಿಯೋ ಮೂಲಕ ಹಾರೈಸಿದ್ದಾರೆ. ಅವರು ಹೇಳಿರುವ ಪ್ರೀತಿಯ ಮಾತುಗಳಿಗೆ ನಾನು ಆಭಾರಿ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ. ಇಂದು ಬಿಡುಗಡೆಯಾಗಿರುವ ಈ ಹಾಡು ಬಹಳ ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲಲಿ ಎಂದು ನಟ ಶಶಿಕುಮಾರ್ ಹಾರೈಸಿದರು.

“ಕರ್ನಾಟಕದ ಅಳಿಯ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ಮಾತು ಆರಂಭಿಸಿದ ಪ್ರಥಮ್, ಇಂದು ಹಾಡು ಬಿಡುಗಡೆಯಾಗಿದೆ. ವಿದೇಶದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಣಜಿ ನಾಗರಾಜ್ ಅವರ ಛಾಯಾಗ್ರಹಣ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರದ್ಯೋತನ್ ಸಂಗೀತ ನಿರ್ದೇಶನದಲ್ಲಿ ರಾಮನಾರಾಯಣ್ ಬರೆದಿರುವ ಈ ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೊಂದು ವಾಮಾಚಾರದ ಕುರಿತಾದ ಸಿನಿಮಾವಾಗಿದ್ದು, ಮೂವತ್ತು ವರ್ಷಗಳ ಹಿಂದೆ “ತುಳಸಿದಳ” ಎಂಬ ಸಿನಿಮಾ ಬಂದಿತ್ತು.

ಆನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಇರಬಹುದು. ನಾನು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದೇನೆ. ರಾಘವೇಂದ್ರ ರಾಜಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ‌. ಅಕ್ಷಿತ ಬೋಪಯ್ಯ, ಜ್ಯೋತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದರು.

ನಾಯಕಿ ಜ್ಯೋತಿ, ನಟ ಕೋಟೆ ಪ್ರಭಾಕರ್, ಹಾಡು ಬರೆದಿರುವ ರಾಮನಾರಾಯಣ್ ಹಾಗೂ ಛಾಯಾಗ್ರಾಹಕ ಅಣಜಿ ನಾಗರಾಜ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. ಅರುಣ್ ಸಾಗರ್ ಚಿತ್ರಕ್ಕೆ ಶುಭ ಹಾರೈಸಿದರು.

Categories
ಸಿನಿ ಸುದ್ದಿ

ಪ್ರೇಮ ಪ್ರಸಂಗದಲ್ಲಿ ಅರಸಯ್ಯ! ಅಯ್ಯಯ್ಯೋ ರಾಮ ಹಾಡು ಬಂತು

“ಫ್ರೆಂಚ್ ಬಿರಿಯಾನಿ” , “ಗುರು ಶಿಷ್ಯರು” ಚಿತ್ರದ ಮೂಲಕ ಜನಪ್ರಿಯರಾಗಿರುವ ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಅರಸಯ್ಯನ ಪ್ರೇಮಪ್ರಸಂಗ” ಚಿತ್ರಕ್ಕಾಗಿ ಕೃಷ್ಣ ರಿತ್ತಿ ಬರೆದಿರುವ “ಅಯ್ಯಯ್ಯೋ ರಾಮ” ಚಿತ್ರದ ಹಾಡು ಬಿಡುಗಡೆಯಾಗಿದೆ. ಪ್ರವೀಣ್ – ಪ್ರದೀಪ್ ಸಂಗೀತ ನೀಡಿದ್ದಾರೆ‌. ಶಂಕರ್ ಭಾರತಿಪುರ ಹಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡು A2. Music ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡಿ ಶುಭ ಕೋರಿದರು.

ನಾನು ಅಭಿನಯ ತರಂಗದಲ್ಲಿ ನಟನೆ ಹಾಗೂ ನಿರ್ದೇಶನದ ತರಬೇತಿ ಪಡೆದಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಜೆ.ವಿ.ಆರ್ ದೀಪು, ನಿರ್ಮಾಪಕ ರಾಜೇಶ್ ಸಹ ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದರು. ಈ ಚಿತ್ರದ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರ ಕಾಮಿಡಿ ಡ್ರಾಮ ಎನ್ನಬಹುದು. ಹಾಡಿನ ಬಗ್ಗೆ ಹೇಳಬೇಕಾದರೆ, ಹಳ್ಳಿಗಳಲ್ಲಿ ಯಾರಾದರೂ ಸತ್ತಾಗ ರಾತ್ರಿ ಸಮಯದಲ್ಲಿ ಭಜನೆ ಮಾಡುತ್ತಾರೆ. ಆ ರೀತಿ ನಮ್ಮ ಚಿತ್ರದಲ್ಲೂ ಬರುವ ಒಂದು ಪ್ರಸಂಗದಲ್ಲಿ ಈ ಹಾಡು ಬರುತ್ತದೆ. ಪ್ರವೀಣ್ – ಪ್ರದೀಪ್ ಸಂಗೀತದಲ್ಲಿ, ಶಂಕರ್ ಭಾರತಿಪುರ ಅವರ ಕಂಠಸಿರಿಯಲ್ಲಿ ಈ ಹಾಡು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.


.
ನಾನು ಕೂಡ ಅಭಿನಯ ತರಂಗದ ವಿದ್ಯಾರ್ಥಿ. ನಿರ್ದೇಶಕ ದೀಪು ಈ ಕಥೆ ಹೇಳಿದಾಗ, ಗ್ರಾಮೀಣ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಪತ್ನಿ ಮೇಘಶ್ರೀ ರಾಜೇಶ್ ಈ ಚಿತ್ರದ ನಿರ್ಮಾಪಕಿ. ಇಂದು ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ರಾಜೇಶ್.

ನಾನು ನಾಯಕ ಎಂದು ಯಾವತ್ತೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕ ನಟನಾಗಿರುವುದಕ್ಕೆ ಇಷ್ಟ ಪಡುತ್ತೇನೆ. ನಿರ್ಮಾಪಕರು, ನಿರ್ದೇಶಕರು ನೀನೇ ಈ ಚಿತ್ರದ ನಾಯಕ ಎಂದಾಗ ಆಶ್ಚರ್ಯವಾಯಿತು.

ದೀಪು ಹಳ್ಳಿಸೊಗಡಿನ ಅದ್ಭುತ ಕಥೆ ಆಯ್ಕೆ ಮಾಡಿಕೊಂಡು, ಅಷ್ಟೇ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನಪ್ರಿಯವಾಗಲಿದೆ‌‌‌. ಚಿತ್ರ ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ನಟ ಮಹಾಂತೇಶ್ ಹಿರೇಮಠ್ ತಿಳಿಸಿದರು.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್ ಮಾಹಿತಿ ನೀಡಿದರು. ಗಾಯಕ ಶಂಕರ್ ಭಾರತಿಪುರ ಗಾಯನದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ನಾಯಕಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ.ಡಿ.ಸತೀಶ್ ಸೇರಿದಂತೆ ಅನೇಕ ಕಲಾವಿದರು, ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್ , ಸಂಕಲನಕಾರ ಸುನೀಲ್ ಕಶ್ಯಪ್ ಮುಂತಾದ ತಂತ್ರಜ್ಞರು “ಅರಸಯ್ಯನ ಪ್ರೇಮಪ್ರಸಂಗ” ದ ಬಗ್ಗೆ ಮಾತನಾಡಿದರು. .

error: Content is protected !!