ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಆಯುಷ್ ಟಿ.ವಿ ಕಳೆದ 7 ವರ್ಷಗಳಿಂದ ಆರೋಗ್ಯಕರ ಜೀವನ ಶೈಲಿಗಾಗಿ ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದ್ದು, ಪ್ರಸ್ತುತ ಕರ್ನಾಟಕದ ಜನಪ್ರಿಯ ಮನೋರಂಜನಾ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ “ಫಿಟ್ ಬಾಸ್”.
ಮನುಷ್ಯನಿಗೆ ಎಲ್ಲದಕ್ಕಿಂತ ಆರೋಗ್ಯವೇ ಹೆಚ್ಚು ಎಂಬ ಧ್ಯೇಯದಿಂದ ನಮ್ಮ ಆಯೂಷ್ ಟಿವಿ ಕಳೆದ ಏಳು ವರ್ಷಗಳಿಂದ ಆರೋಗ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥೂಲಕಾಯದವರಿಗಾಗಿ(ಹೆಚ್ಚು ದಪ್ಪ) “ಫಿಟ್ ಬಾಸ್” ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ. ನಮ್ಮೊಂದಿಗೆ ಸಿರಿಕನ್ನಡ ವಾಹಿನಿ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರ(ಕ್ಷೇಮವನ) ಕೈ ಜೋಡಿಸಿದೆ ಎಂದು ಆಯೂಷ್ ಟಿವಿ ವೈಸ್ ಚೇರ್ಮನ್ ಅರುಣಾಚಲಂ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯೂಷ್ ಟಿವಿಯ “ಫಿಟ್ ಬಾಸ್” ರಿಯಾಲಿಟಿ ಶೋ ಜೊತೆಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿ ಸಂಜೆ 7 ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ ಎಂದರು ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ.
ಈ ರಿಯಾಲಿಟಿ ಶೋ ನ ಆಡಿಷನ್ ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದರು. ಅದರಲ್ಲಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇಪ್ಪತ್ತೊಂದು ದಿನ ,ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ, ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋ ನಲ್ಲಿ ಕಲಿತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು “ಫಿಟ್ ಬಾಸ್” ರಿಯಾಲಿಟಿ ಶೋ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.
21 ದಿನಗಳಕಾಲ ಪ್ರತಿ ದಿನ ಮುಂಜಾನೆ 5 ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾದರೆ ಕ್ರಮೇಣ ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳು ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಸಿರುವಂತೆ ಮಾಡಿದ್ದವು ಎಂಬ ಮಾಹಿತಿಯನ್ನು “ಕ್ಷೇಮವನ”ದ ಮುಖ್ಯ ಕ್ಷೇಮಾಧಿಕಾರಿ ಡಾ.ನರೇಂದ್ರ ಶೆಟ್ಟಿ ನೀಡಿದರು.
” ಫಿಟ್ ಬಾಸ್” ರಿಯಾಲಿಟಿ ಶೋ ನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಕೆಲಸ ಮಾಡಿದ್ದು ಖುಷಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ನೋಡಬೇಕೆಂದರು ಪ್ರಶಾಂತ್ ಸಂಬರ್ಗಿ.
“ಫಿಟ್ ಬಾಸ್” ಕಾರ್ಯಕ್ರಮದ ಬಗ್ಗೆ ಆಯೂಷ್ ಟಿವಿಯ ದಿವ್ಯ ಅವರು ಮಾತನಾಡಿದರು
ಹರಿಕೃಷ್ಣ, ವ್ಯವಸ್ಥಾಪಕ ನಿರ್ದೇಶಕರು ಆಯುಷ್ ಟಿ ವಿ, ಸಂಜಯ್ ಶಿಂಧೆ, ಸಂಸ್ಥಾಪಕ ನಿರ್ದೇಶಕರು ಸಿರಿ ಕನ್ನಡ ವಾಹಿನಿ ಪ್ರಶಾಂತ್ ಸಂಬರ್ಗಿ, ಕಲಾವಿದರು ಹಾಗೂ ಫಿಟ್ ಬಾಸ್ ಗ್ರ್ಯಾಂಡ್ ಫಿನಾಲೆ ನಿರೂಪಕರು ಬಾಲಕೃಷ್ಣ, ಫಿಟ್ ಬಾಸ್ ರಿಯಾಲಿಟಿ ಷೋ ನಿರ್ದೇಶಕರು ಅರುಣಾಚಲಂ , ವೈಸ್ ಚೇರ್ಮನ್ ಆಯುಷ್ ಟಿವಿ ಅರವಿಂದ್ ಎನ್.ಜೆ , ಪವನ್ ಕುಮಾರ್ , ವಿನಾಯಕ್ ಪೈ , ದಿವ್ಯ(ಆಯೂಷ್ ಟಿವಿ), ರಾಜೇಶ್ ರಾಜಘಟ್ಟ ಮುಖ್ಯಸ್ಥರು , ಸಿರಿ ಕನ್ನಡ ವಾಹಿನಿ ಇದ್ದರು
ಮಾಲಾಶ್ರೀ ಅಂದಾಕ್ಷಣ ನೆನಪಿಗೆ ಬರೋದೇ ಖಡಕ್ ಪೊಲೀಸ್ ಅಧಿಕಾರಿ. ಅಂಥದ್ದೊಂದು ಖದರ್ ಇರುವ ಸಿನಿಮಾವೊಂದು ಈ ವಾರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಹೌದು, ಬಹಳ ದಿನಗಳ ಬಳಿಕ ಮಾಲಾಶ್ರೀ ಅವರು ಸಖತ್ ಫೋರ್ಸ್ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದ ಹೆಸರು ಮಾರಕಾಸ್ತ್ರ.
ಸಿನಿಮಾದ ಶೀರ್ಷಿಕೆ ಹೇಳುವಂತೆ ಇದೊಂದು ಭ್ರಷ್ಠರ ವಿರುದ್ಧ ಸೆಣೆಸಾಡುವ ಕಥೆ. ಈ ಸಿನಿಮಾದಲ್ಲಿ ಸಾಕಷ್ಟು ಸಾಮಾಜಿಕ ಪರಿಣಾಮ ಬೀರುವ ಅಂಶಗಳಿವೆ.
ಅಂದಹಾಗೆ, ಗುರುಮೂರ್ತಿ ಸುನಾಮಿ ಈ ಸಿನಿಮಾದ ನಿರ್ದೇಶಕರು.ಕೋಮಲ ನಟರಾಜ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮಾಲಾಶ್ರೀ ಅವರು ಹೈಲೆಟ್. ಅವರೊಂದಿಗೆ ದೊಡ್ಡ ತಾರಾ ಬಳಗವೇ ಇದೆ.
ಮಾಲಾಶ್ರೀ ಇದ್ದಾರೆಂದರೆ ಸಾಹಸಮಯ ದೃಶ್ಯಗಳಿಗೇನೂ ಕಮ್ಮಿ ಇಲ್ಲ ಬಿಡಿ. ಮೈ ನವಿರೇಳಿಸುವ ಸಾಹಸ ದೃಶ್ಯಗಳೇ ತುಂಬಿವೆ. ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಕಾಂಬಿನೇಷನ್ ಸಾಹಸದಲ್ಲಿ ಅದ್ಭುತ ಸ್ಟಂಟ್ಸ್ ಮಾಡಿದ್ದಾರೆ ಮಾಲಾಶ್ರೀ.
ಇನ್ನು, ಸಿನಿಮಾ ರಿಲೀಸ್ ಮೊದಲೇ ನಿರ್ಮಾಪಕರ ಮೊಗದಲ್ಲಿ ಮಂದಹಾಸ ಬೀರಿದೆ. ಕಾರಣ, ಸಿನಿಮಾ ಡಬ್ಬಿಂಗ್ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ತಂಡ ಕೂಡ ಖುಷಿಯಲ್ಲಿದೆ.
ಮೊದಲ ಸಲ ನಿರ್ಮಾಣ ಮಾಡಿರುವ ಕೋಮಲ ನಟರಾಜ್ ಅವರು ಸಿನಿಮಾಗೆ ಏನೆಲ್ಲ ಬೇಕೋ ಎಲ್ಲವನ್ನೂ ಅಚ್ಚುಕಟ್ಟಾಗಿ ಒದಗಿಸಿದ್ದರಿಂದಲೇ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು.
ಸಂದೇಪ್ರೊಡಕ್ಷನ್ಸ್ ನಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸಿ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಇದೇ ಅಕ್ಟೋಬರ್ 19 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಅಖಿಲ ಕರ್ನಾಟಕ ಡಾ.ಶಿವರಾಜಕುಮಾರ್ ಅಭಿಮಾನಿಗಳ ಸಂಘದವರು ಹಾಡೊಂದನ್ನು ಸಿದ್ದಪಡಿಸಿ “ಘೋಸ್ಟ್” ಚಿತ್ರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಈ ರೀತಿ ಅಭಿಮಾನಿಗಳು ಚಿತ್ರವೊಂದಕ್ಕೆ ಹಾಡಿನ ಉಡುಗೊರೆ ನೀಡಿರುವುದು ಇದೇ ಮೊದಲು. ಅಭಿಮಾನಿಗಳು ಅಭಿಮಾನದಿಂದ ನೀಡಿರುವ ಈ ಹಾಡನ್ನು ರೋಲಿಂಗ್ ಟೈಟಲ್ಸ್ ನಲ್ಲಿ ಬಳಸಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ಅಕ್ಟೋಬರ್ 11 ರ ಮಧ್ಯಾಹ್ನ 1ಗಂಟೆಗೆ ಈ ಹಾಡು ಹೊಸಪೇಟೆಯ “ಮೀರ್ ಅಲ್ಲಂ” ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಸಂಸ್ಥೆಯ ಹೆಮ್ಮೆಯ ಚಲನಚಿತ್ರ, “ಶಿವಮ್ಮ,” ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ.
ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ.
“ಶಿವಮ್ಮ” ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ.
ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ.
ಇರಾನ್‌ನಲ್ಲಿ ನಡೆದ ಫಜರ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಇದಾಗಿದೆ.
ಚಿತ್ರವು ಈಗಾಗಲೇ ಐದು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಚಿತ್ರದ ಟೀಸರ್ ಇಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, “ರಾಘು” ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ “chef ಚಿದಂಬರ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು. ಅಕ್ಟೋಬರ್ 10ರಂದು ಮುಕ್ತಾಯವಾಗಿದೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಆನಂದರಾಜ್, ನಮ್ಮ ಚಿತ್ರಕ್ಕೆ ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಚಿತ್ರ. ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ತಿಳಿಸಿದರು.
ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಅನಿರುದ್ಧ್ ಜತಕರ್.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ.
ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದರು ನಾಯಕಿ ರೆಚೆಲ್ ಡೇವಿಡ್.
ನಿರ್ಮಾಪಕಿ ರೂಪ ಡಿ.ಎನ್, ಛಾಯಾಗ್ರಾಹಕ ಉದಯ್ ಲೀಲಾ, ಚಿತ್ರದಲ್ಲಿ ನಟಿಸಿರುವ ಮಹಾಂತೇಶ್, ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಇದ್ದರು.
ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ “chef ಚಿದಂಬರ” ಚಿತ್ರಕ್ಕಿದೆ.
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುದನ್ನು ಸೈಕಲ್ ಸವಾರಿ ಚಿತ್ರದ ಮೂಲಕ ನಿರ್ದೇಶಕ ದೇವು ಕೆ.ಅಂಬಿಗ ಅವರು ಹೇಳಹೊರಟಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ವತಿಯಿಂದ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೋಹನ್ ಎಸ್. ದೇಸಾಯಿ ಅವರು ಸಂಗೀತದ ಜೊತೆಗೆ ಕ್ಯಾಮೆರಾ ವರ್ಕ್, ಡಿ.ಐ. ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ.
ನ.3ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದೇವು ವಿಜಯಪುರದಲ್ಲಿ ನಮ್ಮದೇ ಸ್ಟುಡಿಯೋ ಆರಂಭಿಸಿ ಒಂದಷ್ಟು ಶಾರ್ಟ್ ಫಿಲಂಗಳನ್ನು ಮಾಡಿರುವೆ. ಸಿನಿಮಾವೊಂದರ ಪೋಸ್ಟ್ ಪ್ರೊಡಕ್ಷನ್ ಕೂಡ ಅದರಲ್ಲೇ ನಡೆದಿದೆ. ಲಾಕ್ ಡೌನ್ ಸಮಯದಲ್ಲಿ 2 ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಈ ಕಥೆ ಬರೆದಿದ್ದೆ. ನಂತರ ಅದು ಸಿನಿಮಾ ಆಯಿತು. ಅಗ ನಮ್ಮಲ್ಲಿದ್ದುದು 5ಲಕ್ಷ ಮಾತ್ರ. ನಂತರ ಸುರೇಶ್ ಶಿವೂರು ಅವರು ನಮ್ಮ ಸಹಾಯಕ್ಕೆ ನಿಂತರು. ಕಡ್ಡಿಹೋಗಿ ದೊಡ್ಡ ಗುಡ್ಡವೇ ಆಯ್ತು. ಚಿತ್ರದಲ್ಲಿ 5 ಹಾಡುಗಳಿದ್ದು ಯಾವುದೂ ಕಥೆಯನ್ನು ಬಿಟ್ಟು ಇಲ್ಲ. ನಂತರ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಲೋಕೇಶ್ ಸವದಿ ಅವರು ಕೈಜೋಡಿಸಿದರು. ಅವರಿಂದಲೇ ಈಗ ಸಿನಿಮಾ ಬಿಡುಗಡೆಯಾಗುತ್ತಿದೆ.
ಶಿವಾಜಿ ಮೆಟಗಾರ್ ಪ್ರತಿ ಹಂತದಲ್ಲೂ ಜೊತೆಗಿದ್ದು ಸಹಕರಿಸಿದರು. ನಾನು ಊರಲ್ಲಿ ಬಾಂಬೆ ಮಿಠಾಯಿ ಮಾರುವ ಬಸು ಎಂಬ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾಹುಕಾರ್ ಮನೆಯ ಹುಡುಗಿ ಈತನ ಹಿಂದೆ ಬಿದ್ದು ಲವ್ ಮಾಡಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾ ಎಂದರು. ನಾಯಕಿ ದೀಕ್ಷಾ ಬೀಸೆ ಮಾತನಾಡಿ ಮೂಲತಃ ನಾನೊಬ್ಬ ಭರತನಾಟ್ಯ ನೃತ್ಯಗಾರ್ತಿ. ಚಿಕ್ಕವಯಸಿನಿಂದಲೂ ಕಲಾವಿದೆಯಾಗಬೇಕೆಂಬ ಆಸೆಯಿತ್ತು. ಅದು ಈ ಚಿತ್ರದಿಂದ ಈಡೇರಿದೆ. ಯಾವುದೇ ತರಬೇತಿ ಇಲ್ಲದೆ ಅಭಿನಯಿಸಿದ್ದೇನೆ ಎಂದರು.
ಸಂಗೀತ-ಕ್ಯಾಮೆರಾ ಎರಡನ್ನೂ ನಿಭಾಯಿಸಿರುವ ರೋಹನ್ ದೇಸಾಯಿ ಮಾತನಾಡಿ ಕಡಿಮೆ ಟೆಕ್ನೀಷಿಯನ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಅಕ್ಷನ್, ಮಾಸ್, ಕಾಮಿಡಿ, ಸಸ್ಪೆನ್ಸ್, ಲವ್ ಎಲ್ಲಾ ಥರದ ಅಂಶಗಳು ಚಿತ್ರದಲ್ಲಿವೆ ಎಂದರು. ನಿರ್ಮಾಪಕರಲ್ಲೊಬ್ಬರಾದ ಲೋಕೇಶ್ ಸವದಿ ಮಾತನಾಡಿ ಮೊದಲು ನನಗೆ ಸಿನಿಮಾ ಬಗ್ಗೆ ಅಂಥಾ ಇಂಟರೆಸ್ಟ್ ಇರಲಿಲ್ಲ. ಒಮ್ಮೆ ಶಿವಾಜಿ ಬಂದು ಈ ವಿಚಾರ ಹೇಳಿದರು. ಒಂದು ಐಟಂ ಸಾಂಗನ್ನು 5 ದಿನ ಮಾಡಿದ್ದನ್ನು ನೋಡಿದಾಗ ಚಿತ್ರತಂಡದವರು ಎಷ್ಟು ಎಫರ್ಟ್ ಹಾಕ್ತಾರೆ ಅನ್ನೋದು ಗೊತ್ತಾಯ್ತು ಎಂದು ಹೇಳಿದರು.
ವಿಲನ್ ಪಾತ್ರ ಮಾಡಿರುವ ಶಿವಾಜಿ ಮಾತನಾಡಿ ನನ್ನ ಒಂದೇ ಮಾತಿಗೆ ಸ್ನೇಹಿತರೂ ಆದ ಲೋಕೇಶ್ ಹಣ ಹಾಕಲು ಒಪ್ಪಿದರು. ಮರಳುದಂದೆ ನಡೆಸುವ ಖಳನಾಯಕ, ನಾಯಕಿಯ ತಾತನಾಗೂ ಕಾಣಿಸಿಕೊಂಡಿದ್ದೇನೆ ಎಂದರು. ನಾಯಕನ ತಾಯಿ ಪಾತ್ರಧಾರಿ ಗೀತಾ ರಾಘವೇಂದ್ರ, ಎರಡನೇ ನಾಯಕಿ ಕಾವ್ಯ ಚಿತ್ರದ ಕುರಿತು ಮಾತನಾಡಿದರು.
ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ನಿರ್ದೇಶಕ ದೇವು ಅವರೇ ಬರೆದಿದ್ದಾರೆ.
ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಕೆ.ನರೇಂದ್ರ ಬಾಬು ಅವರು ನೆನಪಿರಲಿ ಪ್ರೇಮ್ ಅಭಿನಯದ ಪಲ್ಲಕ್ಕಿ, ರಾಘಣ್ಣ ಶೃತಿ ಅಭಿನಯದ 13 ಸೇರಿದಂತೆ ಹಲವಾರು ವಿಭಿನ್ನ ಜಾನರ್ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿದ್ದಾರೆ. ಈಗ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.
ದಶಕಗಳ ಹಿಂದೆ ನಟ ಕಮಲಹಾಸನ್ ಅಭಿನಯದಲ್ಲಿ ತೆರೆಕಂಡಿದ್ದ, ಸೂಪರ್ ಹಿಟ್ ಚಲನಚಿತ್ರವೊಂದರ ಶೀರ್ಷಿಕೆ ಇಟ್ಟುಕೊಂಡು ವಿಭಿನ್ನ ಪ್ರೇಮಕಥೆಯೊಂದನ್ನು ಹೇಳಹೊರಟಿದ್ದಾರೆ.
ವಿನ್ಸ್ ಡೆವಲಪರ್ಸ್ ಅರ್ಪಿಸಿ, ಎಸ್.ಕೆ. ಸಿನಿ ಎಂಟರ್ ಟೈನರ್ಸ್ ಅಡಿಯಲ್ಲಿ, ಶ್ರೀಮತಿ ಚೇತನಾ ಮಂಜುನಾಥ್ ಅವರು ನಿರ್ಮಿಸುತ್ತಿರುವ ಆ ಚಿತ್ರದ ಹೆಸರು “ಮರಿಯಾ ಮೈ ಡಾರ್ಲಿಂಗ್ “ ಇದು ಮತ್ತೊಂದು ಅಪ್ಪಟ ಪ್ರೇಮ ಕಾವ್ಯವಾಗಿದ್ದು ಕನ್ನಡ ಸಿನಿರಸಿಕರಿಗೆ ಹೊಸತನದ ಸಿಂಚನ ನೀಡುವ ಕಥಾಹಂದರವನ್ನು ಒಳಗೊಂಡಿದೆ.
ಬರುವ ನವೆಂಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಿ, ಉತ್ತರ ಭಾರತದ ಕಾಶ್ಮೀರ ಮತ್ತು ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದ ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಕೆ. ನರೇಂದ್ರಬಾಬು ಅವರು ತಿಳಿಸಿದ್ದಾರೆ.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮಾ ಲವ್ ರೆಡ್ಡಿ. ಟೈಟಲ್ ಹೇಳುವಂತೆ ಇದೊಂದು ಸುಂದರ ಪ್ರೇಮಕಥೆ ಜೊತೆಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ. ಈ ಹಿಂದೆ ಲವ್ ರೆಡ್ಡಿ ಸಿನಿಮಾದ ಫಸ್ಟ್ ಲುಕ್ ನ್ನು ನಟಸಿಂಹ ಬಾಲಯ್ಯ ಬಿಡುಗಡೆ ಮಾಡಿದ್ದರು. ಇದೀಗ ಫಸ್ಟ್ ಝಲಕ್ ನ್ನು ಜನಪ್ರಿಯ ಶಾಸಕರಾದ ಪ್ರದೀಪ್ ಈಶ್ವರ್ ಅನಾವರಣ ಮಾಡಿ ತಮ್ಮೂರಿನ ಸಿನಿಮೋತ್ಸಾಹಿಗಳಿಗೆ ಸಾಥ್ ಕೊಟ್ಟಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಅಂಜನ್ ರಾಮಚಂದ್ರ ನಮ್ಮ ಜಿಲ್ಲೆಯ ಹುಡುಗ. ಇನ್ಫೋಸಿಸ್ ನಾರಾಯಣ್ ಮೂರ್ತಿಯವರಿಗೆ ಜನ್ಮ ಕೊಟ್ಟ ಜಿಲ್ಲೆ ನಮ್ಮದು. ಎರಡು ಭಾರತ ರತ್ನ, ಎರಡು ಪದ್ಮಶ್ರೀ, ಒಂದು ಪದ್ಮಭೂಷಣ ಪಡೆದ ಜಿಲ್ಲೆ ನಮ್ಮದು. ಆರ್ ಆರ್ ಆರ್ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ವರದರಾಜು ಚಿಕ್ಕಬಳ್ಳಾಪುರ ಇದ್ದಾರೆ. ಇಂತಹ ಜಿಲ್ಲೆಯಿಂದ ಅಂಜನ್ ರಾಮಚಂದ್ರನ್ ಹೀರೋ ಆಗಿ ಬರ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಕನ್ನಡಿಗರು ಈ ಚಿತ್ರವನ್ನು ಆರಾಧಿಸಬೇಕು. ಹಾರೈಸಬೇಕು ಎಂದರು.
ನಾಯಕ ಅಂಜನ್ ಮಾತನಾಡಿ, ಈ ಸಿನಿಮಾ ಶುರುವಾಗುವ ಮೊದಲು ನಾನು ನಮ್ಮ ಡೈರೆಕ್ಟರ್ ಸಾಕಷ್ಟು ಸ್ಟ್ರಗಲ್ ಮಾಡಿದ್ದೇವೆ. ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ತುಂಬಾ ಜನ ಈ ಚಿತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದಿಂದ ತುಂಬಾ ಜನ ಇಂಡಸ್ಟ್ರೀಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದರು.
ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ನಾನು ಮೂಲತಃ ಹೈದ್ರಾಬಾದ್. ಲವ್ ರೆಡ್ಡಿ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದೆ. ಈ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಕಳೆದ ಏಳು ವರ್ಷದಿಂದ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು.
ಲವ್ ರೆಡ್ಡಿ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇಂಪ್ರೆಸ್ ಆಗಿ ಮೂಡಿಬಂದಿದ್ದು, ಗಾಢವಾದ ಪ್ರೇಮಛಾಯೆ ಕಾಣ್ತಿದೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವಾಗ ಹಾಗೇ ನಾಯಕಿ ನೋಡಿ ಪ್ರೀತಿಯಲ್ಲಿ ಬೀಳುವ ನಾಯಕ ಲವ್ ರೆಡ್ಡಿ ಝಲಕ್ ಹೈಲೆಟ್. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಹೆಜ್ಜೆ.
ಅಂಜನ್ ರಾಮಚಂದ್ರ ಒಂದಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ಗಳಲ್ಲಿ ನಟಿಸಿರುವ ಅನುಭವವಿದೆ. ನಿರ್ದೇಶಕ ಸ್ಮರಣ್ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಇದೀಗ ನಾಯಕನಾಗಿ ಚೊಚ್ಚಲ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹೊಸ ಕನಸ್ಸಿನೊಂದಿಗೆ ಅಂಜನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲವ್ ರೆಡ್ಡಿ ಸಿನಿಮಾ ಮೂಲಕ ಒಂದಷ್ಟು ಯುವ ಸಿನಿಮೋತ್ಸಾಹಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಸುತ್ತಮುತ್ತ ಲವ್ ರೆಡ್ಡಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ, ಎಂಜಿಆರ್ ಫಿಲಂಸ್, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುನಂದಾ ಬಿ ರೆಡ್ಡಿ, ಮದನ್ ಗೋಪಾಲ್ ರೆಡ್ಡಿ, ಪ್ರಭಂಜನ್ ರೆಡ್ಡಿ, ಹೇಮಲತಾ ರೆಡ್ಡಿ, ನಾಗರಾಜ್ ಬೀರಪ್ಪ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಾಹಣ, ಬಾಹುಬಲಿಯ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಲವ್ ರೆಡ್ಡಿ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
‘ ನಾನು ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ ಕಾರಣ ‘ ನಾ ಕೋಳಿಕ್ಕೆರಂಗ’ ಸಿನಿಮಾ. ಹೌದು, ಮಾಸ್ಟರ್ ಆನಂದ್ ಈ ಸಿನಿಮಾದ ಹೀರೋ. ಇದೊಂದು ಹಳ್ಳಿ ಕಥೆ. ಸಿನಿಮಾದ ಶೀರ್ಷಿಕೆ ಹೇಳುವಂತೆ, ಕೋಳಿ ಹಾಗು ರಂಗನ ಕಥೆ. ಅದೊಂದು ಅಪರೂಪದ ಭಾವ ಸಂಗಮ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 10 ರಂದು ರಿಲೀಸ್ ಆಗುತ್ತಿದೆ.
ತಮ್ಮ ಸಿನಿಮಾ ಬಗ್ಗೆ ಮಾತಿಗಿಳಿದ ನಾಯಕ ಮಾಸ್ಟರ್ ಆನಂದ್, ‘ಕೊರೊನಾ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ಚಿತ್ರದಲ್ಲೊಂದು ಹಾಡಿದೆ. ‘ ಮರೆಯೋದುಂಟೆ ಮೈಸೂರ ದೊರೆಯ’ ಈ ಹಾಡು ಹೈಲೆಟ್. ಮೈಸೂರು ದಸರಾ ಮತ್ತು ಮಹಾರಾಜರ ಬಗ್ಗೆ ವಿಷಯವಿದೆ. ಹಾಗಾಗಿ ದಸರಾ ವೇಳೆ ರಿಲೀಸ್ ಮಾಡುವ ಉದ್ದೇಶ ಇತ್ತು. ನವೆಂಬರ್ 10 ರಂದು ಬಿಡುಗಡೆ ಆಗಲಿದೆ ಎಂದರು.
ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ ಮೈಸೂರು ಸೊಗಡಿನ ಭಾಷೆ ಇದೆ.
ಇನ್ನು ಭವ್ಯಾ ಮೇಡಮ್ ಅವರು ತಾಯಿ ಪಾತ್ರ ಮಾಡಿದ್ದಾರೆ. ಅವರು ಹಿರಿಯ ಕಲಾವಿದರು. ನನ್ನ ತಾಯಿ ಪಾತ್ರ ಮಾಡಲು ಒಪ್ಪಿದ್ದೇ ಖುಷಿ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಅನ್ನೋದು ಸಸ್ಪೆನ್ಸ್.
ಇಲ್ಲಿ ಮನರಂಜನೆ ಜಾಸ್ತಿ ಇದೆ. ರಾಜೇಶ್ವರಿ ಅವರು ನಾಯಕಿಯಾಗಿ ಚೆನ್ನಾಗಿ ನಟಿಸಿದ್ದಾರೆ. ಹಳ್ಳಿ ಪ್ರಭಾವಿ ವ್ಯಕ್ತಿ ಮೇಲೆ ದ್ವೇಷ ಬರಲು ನಾಯಕಿ ಕಾರಣ. ಊರು ಬಿಡೋಕು ನಾಯಕಿ ಕಾರಣ ಆಗುತ್ತಾಳೆ. ಕಾಮಿಡಿ ಕಿಲಾಡಿ ತಂಡ ಕೂಡ ನಟಿಸಿದೆ.
ಉಳಿದಂತೆ ಹಾಸ್ಯ ಸನ್ನಿವೇಶದಲ್ಲಿ ಸ್ವತಂತ್ರ ನೀಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಕೂಡ ಸಿನಿಮಾಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ. ರಾಜು ಎಮ್ಮಿಗನೂರು ಸಂಗೀತ ಇದೆ. ಇದೇ ಮೊದಲ ಸಲ ಅಪ್ಪು ಅವರು ನನ್ನ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಹಾಡಿದ್ದಾರೆ. ಅದು ಮರೆಯದ ಅನುಭವ ಎಂದರು ಮಾಸ್ಟರ್ ಆನಂದ್.
ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಮೌಢ್ಯಗಳ ಕುರಿತು ಕಥೆ ಸಾಗಲಿದೆ. ಹರಕೆಗೆ ಬಲಿ ಬಗ್ಗೆಯ ಹಳ್ಳಿ ಕಥೆ ಇದೆ. ಒಂದೊಳ್ಳೆಯ ವಿಷಯ ಈ ಮೂಲಕ ಹೇಳ ಹೊರಟಿದ್ದೇನೆ. ಮಾಸ್ಟರ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಭವ್ಯಾ ಮೇಡಮ್ ತಾಯಿ ಪಾತ್ರದ ಮೂಲಕ ಭಾವುಕತೆ ಹೆಚ್ಚಿಸುತ್ತಾರೆ. ಇಡೀ ಚಿತ್ರ ನಗಿಸುತ್ತಲೇ ಭಾವುಕತೆಗೆ ದೂಡುತ್ತದೆ ಎಂದರು ಗೊರವಾಲೆ ಮಹೇಶ್.
ಹಿರಿಯ ಕಲಾವಿದೆ ಭವ್ಯಾ ಮಾತನಾಡಿ, ಒಂದು ಭಾವನಾತ್ಮಕ ವಿಷಯದ ಸುತ್ತ ಕಥೆ ಸಾಗಲಿದೆ. ಹಳ್ಳಿ ಜನರ ಭಾವನೆಗಳು, ತುಡಿತ ಹೇಗೆಲ್ಲಾ ಇರುತ್ತೆ ಎಂಬುದು ಇಲ್ಲಿ ಹೈಲೆಟ್. ಕೋಳಿ ಮತ್ತು ಮಗನ ಸುತ್ತ ನಡೆಯುವ ಕಥೆ ಎಲ್ಲರಿಗೂ ಇಷ್ಟ ಆಗುತ್ತೆ ಎಂದರು ಭವ್ಯಾ.
ನಿರ್ಮಾಪಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ. ಮಗಳು ರಾಜೇಶ್ವರಿ ನಾಯಕಿಯಾಗಿದ್ದಾರೆ. ಹೊಸ ಬಗೆಯ ಕಥೆ ಇಲ್ಲಿದೆ. ಮನರಂಜನಾ ಅಂಶಗಳು ಹೆಚ್ಚಾಗಿವೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ಸೋಮಶೇಖರ್.
ನಾಯಕಿ ರಾಜೇಶ್ವರಿ ಅವರಿಗೆ ಇದು ಮೊದಲ ಚಿತ್ರ. ಮೊದಲ ಸಲ ಕ್ಯಾಮೆರಾ ಮುಂದೆ ನಿಂತಾಗ ಭಯ ಆಯ್ತು. ಆನಂದ್ ಸರ್ ಧೈರ್ಯ ತುಂಬಿ ನಟಿಸಲು ಉತ್ಸಾಹ ತುಂಬಿದರು. ಭವ್ಯಾ ಮೇಡಂ ಜೊತೆ ನಟಿಸಿದ್ದು ಮರೆಯದ ಅನುಭವ ಅಂದರು.
ಸಂಕಲನಕಾರ ವಿಶ್ವ ಅವರಿಗೆ ಈ ಚಿತ್ರ ವಿಶೇಷ. ಕಾರಣ, ಇಲ್ಲಿ ಮೈಸೂರು ಮಹಾರಾಜರ ಹಾಡು ಜನರನ್ನು ತಲುಪುತ್ತೆ ಎಂಬುದು. ಆ ಹಾಡಿನ ಮೂಲಕ ರಾಜರ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದರು.
ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ನಟಿಸಿದ್ದಾರೆ.