Categories
ಸಿನಿ ಸುದ್ದಿ

ಸಕ್ಕತ್ ಸ್ಟುಡಿಯೋದ ಸಖತ್ ಸಿನಿಮಾ ಮುಗೀತು

ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಸಕ್ಕತ್ ಸ್ಟುಡಿಯೋ ಟ್ರೆಂಡ್ಸೆಟ್ಟರ್ ಆಗಿರುವುದು ಸುಳ್ಳಲ್ಲಾ. ಸುನೀಲ್ ರಾವ್, ಅನುಪಮಾ ಗೌಡ, ಸಿಂಧು ಲೋಕನಾಥ್ ಮುಂತಾದವರು ನಟಿಸಿರುವ “ಲೂಸ್ ಕನೆಕ್ಷನ್” ನಮ್ಮ ಕನ್ನಡದ ಮೊದಲ ವೆಬ್ ಸರಣಿಯ ನಿರ್ಮಿಸಿದ್ದು ಇದೇ ಸಂಸ್ಥೆ. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ನೇತೃತ್ವದಲ್ಲಿ ಶುರುವಾದ ಸಕ್ಕತ್ ಸ್ಟುಡಿಯೋ ವೈವಿಧ್ಯಮಯ ವೆಬ್

ಸರಣಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇತ್ತು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಹಯೋಗದೊಂದಿಗೆ ಸಕ್ಕತ್ ಸ್ಟುಡಿಯೋ, ನಾಗಭೂಷಣ ಮತ್ತು ಸಂಜನಾ ಆನಂದ್ ಅಭಿನಯದ “ಹನಿಮೂನ್”, ಪೂರ್ಣ ಮೈಸೂರು ಮತ್ತು ಸಿರಿ ರವಿಕುಮಾರ್ ಅಭಿನಯದ “ಬೈ ಮಿಸ್ಟೇಕ್” ಮತ್ತು ಅರವಿಂದ್ ಅಯ್ಯರ್ ಮತ್ತು ದಿಶಾ ಮದನ್ ಅಭಿನಯದ “ಹೇಟ್ ಯು ರೋಮಿಯೋ” ಹೀಗೆ ಉನ್ನತ ಮಟ್ಟದ ಸರಣಿಗಳು ನಿರ್ಮಾಣವಾಗಿ ವೂಟ್ ( Voot), ಆಹಾ (Aha ), ಮುಂತಾದ ಒಟಿಟಿ ಪ್ಲಾಟ್‌ಫಾರಂ ಗಳಲ್ಲಿ ನೋಡುಗರ ಗಮನ ಸೆಳೆದಿವೆ.

ಡಿಜಿಟಲ್ ಕ್ಷೇತ್ರದಲ್ಲಿ ಒಂದು ಸ್ಥಾನವನ್ನು ಯಶಸ್ವಿಯಾಗಿಸಿ, ಸಕ್ಕತ್ ಸ್ಟುಡಿಯೋ ಈಗ ಸಿನಿಮಾ ಜಗತ್ತಿಗೆ ಕಾಲಿಡುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ತನ್ನ ಮೊಟ್ಟಮೊದಲ ಚಿತ್ರದ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದು ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಿತ್ರದ ಮಹೂರ್ತಕ್ಕೆ ಆಗಮಿಸಿ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.

ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ “ದಿ ಬೆಸ್ಟ್ ಆಕ್ಟರ್” ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಇದೀಗ ಸಕ್ಕತ್ ಸ್ಟುಡಿಯೋದ ಮೊದಲ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮುಂಬರುವ ವಾರದಲ್ಲಿ ವಿಶಿಷ್ಟ ಶೀರ್ಷಿಕೆ, ಪರಿಕಲ್ಪನೆ ಮತ್ತು ತಾರಾಗಣವನ್ನು ಅನಾವರಣಗೊಳಿಸಲು ಯೋಜಿಸಿದೆ. ಇದು ಒಂದು ಅದ್ಭುತವಾದ ಸಿನಿಮೀಯ ಅನುಭವದ ಭರವಸೆಯನ್ನು ಈ ತಂಡ ನೀಡುತ್ತದೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗಬೇಕು ಹಾಗು ಗೆಲ್ಲಬೇಕೆಂಬ ನಿರೀಕ್ಷೆಯಲ್ಲಿರುವ ಪ್ರೇಕ್ಷಕ ವರ್ಗ, ಝೀ5ನ ಒಟಿಟಿ ಕ್ಷೇತ್ರದಲ್ಲಿ ಪ್ರದೀಪ್ ಅವರ ಹಿಂದಿನ ನಾಯಕತ್ವ ಮತ್ತು ಛಾಯಾಗ್ರಹಣ ಮತ್ತು ಕಥೆ ಹೇಳುವಿಕೆಯಲ್ಲಿ ನಾಗರಾಜ್ ಅವರ ಪ್ರಭಾವ, ಸೃಜನಶೀಲ ಮನಸ್ಸುಗಳನ್ನು ಒಳಗೊಂಡಿರುವ ತಂಡವು ನಿಸ್ಸಂದೇಹವಾಗಿ ‘ಸಕ್ಕತ್’ ಕನ್ನಡ ಚಿತ್ರವನ್ನು ಪ್ರೇಕ್ಷಕನಿಗೆ ನೀಡುತ್ತಾರೆಂಬ ಭರವಸೆ ಮೂಡಿಸಿದೆ.

Categories
ಸಿನಿ ಸುದ್ದಿ

ಇದು ಸಂಬಂಧಗಳ ಭಾವಜೀವ! ಹಳ್ಳಿಗಾಡಿನ ಆನಂದಮಯ ಚಿತ್ರ

ಚಿತ್ರ: ನಾಕೋಳಿಕ್ಕೆ ರಂಗ
ನಿರ್ದೇಶನ: ಗೊರವಾಲೆ ಮಹೇಶ್
ನಿರ್ಮಾಣ: ಎಸ್.ಟಿ.ಸೋಮಶೇಖರ್
ತಾರಾಗಣ: ಮಾಸ್ಟರ್ ಆನಂದ್, ಭವ್ಯಾ, ರಾಜೇಶ್ವರಿ, ಪುಂಗ, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಸುಧಾಕರ್ ಇತರರು.

ರೇಟಿಂಗ್ ; 5/3

ವಿಜಯ್ ಭರಮಸಾಗರ

ನನ್ ಮಗನಿಗೆ ಒಳ್ಳೆಯದಾದರೆ ಸುಕ್ಕುರಾಜನ ಬಲಿ ಕೊಡ್ತೀನಿ…’ ಹೀಗಂತ ಊರ ದೇವತೆ ಮಾರವ್ವನ ಮುಂದೆ ಆ ತಾಯಿ ಹರಕೆ ಹೊರುತಾಳೆ! ಆಕೆಯ ಮಗ ಚೇತರಿಸಿಕೊಳ್ತಾನಾ? ಅವಳ ಹರಕೆ ತೀರುತ್ತಾ? ಆ ಹರಕೆ ಏನು ಅನ್ನೋದೇ ಚಿತ್ರದ ಇಂಟ್ರೆಸ್ಟಿಂಗ್ ಕಥೆ.

ಈ ವಾರ ತೆರೆ ಕಂಡ ‘ನಾಕೋಳಿಕ್ಕೆ ರಂಗ’ ಸಿನಿಮಾ ಕಥೆ ಇದು. ಪಲ್ಕಾ ಹಳ್ಳಿಗಾಡಿನ ಸೊಗಡು ತುಂಬಿರುವ ಕಥಾಹಂದರದಲ್ಲಿ ಹಾಸ್ಯ, ಗೆಳೆತನ, ಚಿಗುರೊಡೆವ ಸಣ್ಣ ಪ್ರೀತಿ, ನಂಬಿಕೆ, ಅಪನಂಬಿಕೆ, ಮೌಢ್ಯ ಕಂದಾಚಾರ, ಅಚಾರ, ವಿಚಾರ ಇತ್ಯಾದಿ ಚಿತ್ರದೊಳಗಿರುವ ಹೂರಣ.

ಇಲ್ಲಿ ಅಮ್ಮ, ಮಗ ಮತ್ತು ಕೋಳಿ ಹೈಲೆಟ್. ಇಡೀ ಸಿನಿಮಾ ಕಥೆ ಕೋಳಿ ಮತ್ತು ನಾಯಕ ರಂಗನ ಸುತ್ತವೇ ತಿರುಗುತ್ತೆ. ಹಾಗಾಗಿ ಅಲ್ಲಿನ ಸಂಸ್ಕೃತಿ, ಆಚರಣೆಗಳು ನೋಡುಗರನ್ನು ಸೆಳೆಯುತ್ತವೆ. ವಿಶೇಷವಾಗಿ ನಿರ್ದೇಶಕರು ಇಲ್ಲಿ ಮೌಢ್ಯ ಕಂದಾಚಾರ, ನಂಬಿಕೆ, ಅಪನಂಬಿಕೆ ಕುರಿತು ಹೇಳಿದ್ದಾರೆ. ಆ ಮೂಲಕ ಸಂಬಂಧಗಳ ಮೌಲ್ಯ, ಮಾನವೀಯ ಗುಣದ ಬಗ್ಗೆಯೂ ಹೇಳುವ ಮೂಲಕ ನೋಡುಗರ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಮೊದಲರ್ಧ ಹಾಸ್ಯದ ಮೂಲಕ ಸಾಗುವ ಸಿನಿಮಾ ಕೊಂಚ ನಿಧಾನವೆನಿಸಿದರೂ, ದ್ವಿತಿಯಾರ್ಧ ಎಮೋಷನ್ಸ್ ಕಟ್ಟಿಕೊಟ್ಟು ಕುತೂಹಲ ಕೆರಳಿಸುತ್ತಾರೆ. ಕೆಲವು ಕಡೆ ಭಾವುಕತೆಗೆ ದೂಡುವುದರ ಜೊತೆ ಸ್ವಾರಸ್ಯಕರ ಅಂಶಗಳು ಗಮನಸೆಳೆಯುತ್ತವೆ. ಇನ್ನು ಕಥೆಗೆ ಪೂರಕವಾಗಿ ಸಂಗೀತವೂ ಸಾಥ್ ನೀಡಿದೆ.

ಎಲ್ಲೂ ಗೊಂದಲವಿಲ್ಲದೆ, ಅರಾಮವಾಗಿ ನಗುತ್ತಲೇ, ಆಗಾಗ ಎದೆಭಾರವಾಗಿಸಿಕೊಂಡು ಒಂದೊಳ್ಳೆಯ ದೃಶ್ಯಾವಳಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿಸಿರುವ ಸಿನಿಮಾ ಹಳ್ಳಿಯ ವಾತಾವರಣಕ್ಕೆ ತಳ್ಳುತ್ತದೆ. ನೋಡುಗರಿಗೆ ಪ್ರಾಣಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಕಥೆ ಏನು?

ಆ ಊರಲ್ಲಿ ರಂಗನಿಗೆ ಅವನವ್ವ ಮತ್ತು ಪ್ರೀತಿಯ ಕೋಳಿ ಅಚ್ಚುಮೆಚ್ಚು. ಕೋಳಿ ಅಂದರೆ ರಂಗನಿಗೆ ಪ್ರಾಣ. ಗೆಳೆಯರ ಜೊತೆ ಸುತ್ತಾಡಿ ಕಿತಾಪತಿ ಮಾಡುವ ರಂಗ, ಕೆಲ ಘಟನೆಗಳಿಗೆ ಕಾರಣವಾಗುತ್ತಾನೆ. ಓದು ಬರಹ ಬಾರದ ರಂಗ ಒಮ್ಮೆ ಪಾಟೀಲರ ಹೊಲದಲ್ಲಿ ರಾತ್ರಿ ಕೆಲಸ ಮಾಡುವಾಗ ದೃಶ್ಯವೊಂದನ್ನು ಕಂಡು ಎಚ್ಚರ ತಪ್ಪಿ ಬೀಳುತ್ತಾನೆ. ಅವನ ತಾಯಿ ಊರ ದೇವತೆ ಮಾರಮ್ಮ ಬಳಿ ಮಗನ ಚೇತರಿಕೆಗೆ ಬೇಡಿಕೊಳ್ಳುತ್ತಾಳೆ.

ಅಲ್ಲಿನ ಪೂಜಾರಿ ಮಗ ಸರಿಹೋಗಬೇಕಾದರೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಕೋಳಿನ ಬಲಿ ಕೊಡಬೇಕು ಅಂತಾನೆ. ರಂಗನ ತಾಯಿ ಒಲ್ಲದ ಮನಸ್ಸಲ್ಲೇ ಒಪ್ಪುತ್ತಾಳೆ. ಈ ವಿಷಯ ರಂಗನಿಗೆ ಗೊತ್ತಾಗುತ್ತೆ. ಆಮೇಲೆ ರಂಗನ ಕೋಳಿ ಹರಕೆಗೆ ಬಲಿಯಾಗುತ್ತೋ ಇಲ್ಲವೋ ಅನ್ನೋದು ಕಥೆ. ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.

ಯಾರು ಹೇಗೆ?

ಮಾಸ್ಟರ್ ಆನಂದ್ ಪಕ್ಕಾ ಹಳ್ಳಿಗನಾಗಿ ವಿಜೃಂಭಿಸಿದ್ದಾರೆ. ಟೈಮಿಂಗ್ ಮೂಲಕ ನಗಿಸಿ ಭಾವುಕತೆಗು ತಳ್ಳುತ್ತಾರೆ. ನಮ್ಮ ಪಲ್ಕದ ಮನೆ ಹುಡುಗನಂತೆ ಕಾಣುವ ಆನಂದ್, ಕಚಗುಳಿ ಇಡುವ ಮೂಲಕ ಗಮನಸೆಳೆಯುತ್ತಾರೆ.
ರಾಜೇಶ್ವರಿ ಅವರಿಗೆ ಮೊದಲ ಸಿನಿಮಾ ಅನಿಸಲ್ಲ. ಮುಗ್ಧ ಹುಡುಗಿಯಾಗಿ ಇಷ್ಟವಾಗುತ್ತಾರೆ.

ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಭವ್ಯಾ ಅವರು ತಾಯಿಯಾಗಿ ಆಕರ್ಷಣೆಯಾದರೆ, ಅಲ್ಲಲ್ಲಿ ಬರುವ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ವಿಶೇಷವಾಗಿ ಶಕೀಲಾ ಇಲ್ಲೊಂದು ಮುಖ್ಯ ಪಾತ್ರ ಮಾಡಿ, ಹೀಗೂ ಮಾಡ್ತೀನಿ ಎಂಬುದನ್ನ ತೋರಿಸಿದ್ದಾರೆ. ಉಳಿದಂತೆ, ರಾಕ್ ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ ಅವರು ಪಾತ್ರಕ್ಕೆ ಮೋಸ ಮಾಡಿಲ್ಲ.

ರಾಜು ಎಮ್ಮಿಗನೂರು ಅವರ ಸಂಗೀತದಲ್ಲಿ ಕೋ ಕೋ ನಾ ಕೋಳಿಕೆ‌ರಂಗ ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತವೂ ಪೂರಕ.
ಧನಪಾಲ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಸೊಗಡು ಅಂದವಾಗಿದೆ.

Categories
ಸಿನಿ ಸುದ್ದಿ

ಯಶ್ ಅಭಿಮಾನಿಯ ಗೋಲ್ಡ್ ಚಿತ್ರ: ಭೈರ್ಯ ಕೆಎ-07 ಇದು ಕೆಜಿಎಫ್ ಕಥಾನಕ

ಅನಾಥನಾಗಿ ಬೇರೆಯವರ ಆಶ್ರಯದಲ್ಲಿ ಬೆಳೆದ ಗೌರಿಬಿದನೂರಿನ ರೋಷನ್.ಎಂ.ರಾವ್ ಭರತನಾಟ್ಯ ಪ್ರವೀಣ, ಮುಂಬೈನಲ್ಲಿ ನಟನೆ ತರಭೇತಿ ಪಡೆದುಕೊಂಡು ಬಂದಿದ್ದಾರೆ. ಮುಂದೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿ, ಸ್ಕ್ರಿಪ್ಟ್ ಬರೆದುಕೊಂಡು ಹಲವು ಚಿತ್ರಗಳಿಗೆ ಸೆಟ್ ಕೆಲಸ ನಿರ್ವಹಿಸಿ, ಮಧ್ಯೆ ’ತಲ್ವಾರ್’ ಕಿರುಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲಾ ಅನುಭವದಿಂದ ’ಭೈರ್ಯ ಕೆಎ-೦7’ ಚಿತ್ರಕ್ಕೆ ಕಥೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿರುವ ಕನ್ನಡ ಪ್ರೇಮಿ ಬಾಗಲಕೋಟೆಯ ಷರೀಫ ಬೇಗಂ ನಡಾಫ್, ಎನ್‌ಜಿಓ ಸಂಘ ನಡೆಸುತ್ತಿದ್ದು, ಸಾಧನೆ ಮಾಡುವ ಸಲುವಾಗಿ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಹಿತೈಷಿ ಉದ್ಯಮಿ ಜಿ.ಬಾಲಾಜಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಭೂಗತ ಲೋಕದ ಕಥೆಯಲ್ಲಿ ನಾಯಕನ ಹೆಸರು ಶೀರ್ಷಿಕೆಯಾಗಿರುತ್ತದೆ. ಬೆಂಗಳೂರಿನ ಡಾನ್‌ಗಳ ಕುರಿತಂತೆ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟವನ್ನು ಜನರು ಮರೆತು ಹೋಗಿದ್ದಾರೆ. ಕೆಜಿಎಫ್‌ದಲ್ಲಿರುವ ಚಿನ್ನದ ಗಣಿಯನ್ನು ರಕ್ಷಣೆ ಮಾಡಿದವರು ಯಾರು? ಅಂದು ಅಧ್ಯಕ್ಷರಾಗಿದ್ದವರು ಯಾರು?

ಇವತ್ತಿನವರೆಗೂ ಅದು ಯಾಕೆ ಸರ್ಕಾರದ ಅಧೀನದಲ್ಲಿಲ್ಲ? ಇಂತಹ ಎಲ್ಲಾ ರೀತಿಯ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇಷ್ಟೆಲ್ಲಾ ವಿಷಯಗಳನ್ನು ಸಂಶೋಧನೆ ನಡೆಸಿ, ಅಧ್ಯಯನ ಮಾಡಿ ಚಿತ್ರಕಥೆಯನ್ನು ತಂಡದೊಂದಿಗೆ ಸೇರಿಕೊಂಡು ಸಿದ್ದಪಡಿಸಲಾಗಿದೆ. 1970 ರಿಂದ 1985ರ ತನಕ ಸಿನಿಮಾವು ಸಾಗುತ್ತದೆ.

ಶಿವಮೊಗ್ಗ ಮೂಲದ ಆಶಿಕಾರಾವ್ ನಾಯಕಿಯಾಗಿ ಎರಡನೇ ಅವಕಾಶ. ಇನ್ನುಳಿದಂತೆ ನಿರ್ದೇಶಕ, ಹಿರಿಯ ಪೋಷಕ ಕಲಾವಿದರು, ಹೆಸರಾಂತ ತಂತ್ರಜ್ಘರು ಚಿತ್ರದಲ್ಲಿ ಇದ್ದಾರೆ. ಇವೆಲ್ಲಾ ಮಾಹಿತಿಗಳನ್ನು ಮುಂದಿನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನೀಡುವುದಾಗಿ ರೋಷನ್ ಮಾಧ್ಯಮದವರನ್ನು ಕೋರಿಕೊಂಡಿದ್ದಾರೆ. ಬೆಂಗಳೂರು, ಕೋಲಾರ, ಕೆಜಿಎಫ್ ಕಡೆಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿ, ಕ್ಲೈಮಾಕ್ಸ್ ಬಾಕಿ ಇದ್ದು, ಅದನ್ನು ಹೆಚ್‌ಎಂಟಿ ಕಾರ್ಖಾನೆಯಲ್ಲಿ ಸೆಟ್ ಹಾಕಿ ಸೆರೆಹಿಡಿಯಲು ಯೋಜನೆ ಹಾಕಲಾಗಿದೆ.

Categories
ಸಿನಿ ಸುದ್ದಿ

ಸತ್ಯಂ ಎಂಬ ಥ್ರಿಲ್ಲರ್ ಚಿತ್ರ: ಇದು ತಾತ ಮೊಮ್ಮಗನ ಬಾಂಧವ್ಯ ಕಥೆ

ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ಅಶೋಕ್ ಕಡಬ ಅವರು ನಿರ್ದೇಶಿಸಿರುವ ಚಿತ್ರ “ಸತ್ಯಂ” ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಾಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ಮಾಪಕ ಮಾಂತೇಶ್. ವಿ.ಕೆ. ಮಾತನಾಡಿ, ನಮ್ಮ ಸಂಸ್ಥೆಯ ಎರಡನೇ ಚಿತ್ರವಿದು. ಈ ಹಿಂದೆ ಮಹಾಮಹಿಮ ಲಡ್ಡು ಮುತ್ಯ ಎಂಬ ಚಿತ್ರ ನಿರ್ಮಿಸಿದ್ದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿ ಬಂದಿದೆ. ನಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರೂ ಸಿನಿಮಾ ಮೇಲೆ ತುಂಬಾ ಆಸಕ್ತಿ, ಪ್ರೀತಿಯಿದೆ. ನಮ್ಮ ಬ್ಯಾನರ್ ಮೂಲಕ ಸದಭಿರುಚಿಯ ಚಿತ್ರವನ್ನು ನೀಡುವುದು ನಮ್ಮ ಉದ್ದೇಶ. ಅಶೋಕ್ ಕಡಬ ಅವರು ಈ ಕಥೆ ತಂದಾಗ ವಿಶೇಷ ಅನಿಸಿತು. ಎರಡು ಕಾಲಘಟ್ಟಗಳಲ್ಲಿ ನಡೆಯೋ ಕಥೆಯಿದು. ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ.

ತಾತ ಮೊಮ್ಮಗನ ಕಥೆ ತುಂಬಾ ವಿಶೇಷವಾಗಿದೆ. ತಾತನಾಗಿ ಹಿರಿಯ ನಟ ಸುಮನ್ ಹಾಗೂ ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್ ಉತ್ತಮ ಅಭಿನಯ ನೀಡಿದ್ದಾರೆ. ಇದೊಂದು ಫ್ಯಾಮಿಲಿ ಕಂಟೆಂಟ್ , ಥ್ರಿಲ್ಲರ್ ಚಿತ್ರ. ವಿಶೇಷವಾಗಿ ಆನೇಕಲ್ ಬಾಲರಾಜ್ ಅವರನ್ನು ನೆನಪಿಸಿಕೊಳ್ಳಬೇಕು, ಈ ಕಥೆಯನ್ನು ಕೇಳಿದ ಅವರು ಇದೊಂದು ಒಳ್ಳೆಯ ಕಥೆ. ನನ್ನ ಬೆಂಬಲ ಸದಾ ಇದೆ ಎಂದಿದ್ದರು. ಅವರ ಆಶೀರ್ವಾದ ಇದ್ದೇ ಇರುತ್ತೆ. ಅವರ ಮಗ ಸಂತೋಷ ನಾಯಕನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ವಿತರಣೆ ಹಕ್ಕನ್ನು ನಿರ್ಮಾಪಕ ಕೆ.ಎ. ಸುರೇಶ್ ವಹಿಸಿಕೊಂಡಿದ್ದಾರೆ. ಸದ್ಯದಲ್ಲೆ ಟ್ರೈಲರ್ , ಹಾಡುಗಳು ಬಿಡುಗಡೆ ಮಾಡಿ, ಡಿಸೆಂಬರ್ ವೇಳೆಗೆ ತೆರೆಗೆ ತರುವ ಪ್ಲಾನ್ ಇದೆ ಎಂದು ಹೇಳಿದರು.

ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಇದೊಂದು ಫ್ಯಾಮಿಲಿ ಎಂಟೈನರ್. ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ ಗಳನ್ನು ಹಾಕಿದ್ದೆವು. 2019ರಲ್ಲೇ ನಾವೀ ಕಥೆ ಮಾಡಿದ್ದೆವು, ಕಾಂತಾರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು. ಈ ಚಿತ್ರದ ಟೀಸರ್ ನಲ್ಲಿ ಕಾಣುವ ಹುಲಿ ಉಗುರು ಒರಿಜಿನಲ್ ಅಲ್ಲ. ಕಾಸ್ಟ್ಯೂಮರ್ ಕೊಟ್ಟಿರುವ ಡುಪ್ಲಿಕೇಟ್ ಉಗುರು ಎಂದರು. ಹಾರರ್, ಸಸ್ಪೆನ್ಸ್ , ಲವ್ ಕಂಟೆಂಟ್ ಒಳಗೊಂಡ ಚಿತ್ರವನ್ನು ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದೇವೆ. ರವಿ ಬಸ್ರೂರು ಸಂಗೀತ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ. ಸಿನಿಟೆಕ್ ಸೂರಿ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ. ವಿ. ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಲ್ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. ಆಡಿಯೋ ಹಕ್ಕನ್ನ A2 ಮ್ಯೂಸಿಕ್ ಉತ್ತಮ ಮೊತ್ತ ನೀಡಿ ಪಡದಿದೆ ಎಂದು ಮಾಹಿತಿ ನೀಡಿದರು.

ನಾಯಕ ಸಂತೋಷ್ ಬಾಲರಾಜ್ ಮಾತನಾಡಿ, ನಾನು ಈ ಹಿಂದೆ ಮಾಡಿದ ಕೆಂಪ, ಕರಿಯ-2, ಗಣಪ ಸಿನಿಮಾಗಳೇ ಒಂದಾದರೆ, ಇದು ಆ ಮೂರಕ್ಕಿಂತ ಡಿಫ್ರೆಂಟ್ ಆಗಿ ಮೂಡಿ ಬಂದಿರುವ ಚಿತ್ರ. ನನ್ನ ಪಾತ್ರದ ಹೆಸರು ಸತ್ಯ, ನನ್ನ ತಂದೆ ಬದುಕಿದ್ದರೆ ತುಂಬಾ ಇಷ್ಟಪಡುತ್ತಿದ್ದರು. ಆರಂಭದಲ್ಲಿ ಈ ಕಥೆಯನ್ನು ಒಪ್ಪಿ ಇದೊಂದು ಉತ್ತಮ ಚಿತ್ರವಾಗಿ ಮೂಡಿಬರುತ್ತೆ ಅಂದಿದ್ದರು. ನನಗೆ ದರ್ಶನ್ ಅವರ ಸಪೋರ್ಟ್ ಕೂಡ ತುಂಬಾ ಇದೆ. ಬಹಳ ಗ್ಯಾಪ್ ಆಗಿತ್ತು, ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದರು.

ನಾಯಕಿ ರಂಜಿನಿ ರಾಘವನ್ ಮಾತನಾಡಿ, ಸತ್ಯಂ ಟೀಸರ್ ಗಾಗಿ ನಾನು ತುಂಬಾ ಕಾದಿದ್ದೆ. ಅಚಾನಕ್ಕಾಗಿ ನಾನು ಈ ಚಿತ್ರತಂಡಕ್ಕೆ ಸೇರ್ಪಡೆಯಾದೆ. ನನ್ನ ಪಾತ್ರ ಚಿತ್ರದ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು , ಕಥೆಯ ಜೊತೆಗೇ ಸಾಗುತ್ತೆ. ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಚಿತ್ರದ ಹಾಡುಗಳು ಚೆನ್ನಾಗಿ ಬಂದಿದೆ ಎಂದರು. ನಂತರ ಸಾಹಿತಿ ಹಾಗೂ ಸಂಭಾಷಣೆಕಾರ ಕಿನ್ನಲ್ ರಾಜ್ , ಛಾಯಾಗ್ರಹಕ ಸಿನಿಟೆಕ್ ಸೂರಿ, ಮೊದಲ ಬಾರಿಗೆ ಬೇರೆ ಬ್ಯಾನರ್ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ.ಎ. ಸುರೇಶ್ ಚಿತ್ರದ ಕುರಿತಂತೆ ಮಾತನಾಡಿದರು.

Categories
ಸಿನಿ ಸುದ್ದಿ

ನನಸಾಗಲಿದೆ ಆ ನಟಿಯ ಕನಸು! ಎಸ್ತರ್ ನರೋನ್ಹಾ ನಿರ್ದೇಶನದ ದಿ ವೆಂಕಟ್ ಹೌಸ್ ನವೆಂಬರ್17ಕ್ಕೆ ರಿಲೀಸ್

ಗ್ಲಾಮರ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಇನಾಮ್ದಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬ್ಯೂಟಿ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಕನಸ್ಸಿಗೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

ನಟಿ ಎಸ್ತಾರ್ ನರೋನ್ಹಾ ಮಾತನಾಡಿ, ದಿ ವೆಕೆಂಟ್ ಹೌಸ್..ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತಾ ಸಾಗುವ ಕಥೆ. ಈಗಿನ ಯೂತ್ ಗೆ ಬಹಳ ಕನೆಕ್ಟ್ ಆಗುವ ಸಿನಿಮಾವಿದು. ಪ್ರೀತಿ ಮತ್ತು ಎಮೋಷನ್ ಎರಡನ್ನು ಸೇರಿ ಎಣೆದ ಕಥೆ. ಡೈರೆಕ್ಷನ್ ಮಾಡಿದ್ದು ಖುಷಿ ಅನಿಸಿತು. ನನ್ನ ವಿಷನ್ ನ್ನು ನಾನು ಓಪನ್ ಆಗಿ ಹೇಳುವ ಸ್ವಾತಂತ್ರ ನನ್ನ ಸಿನಿಮಾದಲ್ಲಿ ಸಿಕ್ಕಿದೆ.

ನಾನು ಎಂಟು ವರ್ಷದಿಂದ ಸಿಂಗರ್.. ನಾನು ರಂಗಭೂಮಿಗೆ ಬಂದಿದ್ದು ಸಿಂಗರ್ ಆಗಿಯೇ..ಹೀಗಾಗಿ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1.40 ನಿಮಿಷವಿದೆ. ಎಲ್ಲಿಯೂ ಬೋರಿಂಗ್ ಹೊಡೆಸಲ್ಲ. ಚಿತ್ರದ ಮೇಲೆ ನಿಮ್ಮ ಬೆಂಬಲವಿರಲಿ ಎಂದರು.

‘ದಿ ವೆಕೆಂಟ್ ಹೌಸ್’ ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದ್ದರೆ, ವಿಜಯ್ ರಾಜ್ ಸಂಕಲನವಿದೆ. ‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧರಿತ ಸಿನಿಮಾ ಮಾಡಲಾಗಿದೆ.

ಅಂದ್ಹಾಗೆ ಎಸ್ತರ್‌ ನರೋನ್ಹಾ ಮಂಗಳೂರಿನವರಾದರು. ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಕನ್ನಡ ಸಿನಿಮಾ ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಎಸ್ತರ್ ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಇಷ್ಟು ವರ್ಷದ ನಟನೆ ಅನುಭವವನ್ನು ಧಾರೆ ಎರೆದು ದಿ ವೆಕೆಂಟ್ ಹೌಸ್ ಸಿನಿಮಾ ನಿರ್ದೇಶಿಸಿ ನಟಿಸಿ ತಮ್ಮದೇ ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ನಿರ್ಮಾಣ ಕೂಡ ಮಾಡಿದ್ದಾರೆ. ಇದೇ ತಿಂಗಳ 17ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ.

Categories
ಸಿನಿ ಸುದ್ದಿ

ಉಳಗನಾಯಗನ್ 234ನೇ ಸಿನಿಮಾ ಟೈಟಲ್ ರಿವೀಲ್ : ಕಮಲ್ ಹಾಸನ್, ಮಣಿರತ್ನಂ ಚಿತ್ರಕ್ಕೆ ‘ಥಗ್ ಲೈಫ್’ ಟೈಟಲ್ ಫಿಕ್ಸ್..

ಉಳಗನಾಯಗನ್ ಕಮಲ್ ಹಾಸನ್ ಹಾಗೂ ವಿಷನರಿ ಡೈರೆಕ್ಟರ್ ಮಣಿರತ್ನಂ 37 ವರ್ಷದ ಬಳಿಕ ಮತ್ತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಕಮಲ್ ನಟಿಸ್ತಿರುವ ಮಣಿರತ್ನಂ ನಿರ್ದೇಶಿಸ್ತಿರುವ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. 2.55 ನಿಮಿಷದ ವಿಡಿಯೋ ಝಲಕ್ ಮೂಲಕ ಉಳಗನಾಯಗನ್ 234ನೇ ಸಿನಿಮಾದ ಶೀರ್ಷಿಕೆ ಏನು? ಯಾವ ಜಾನರ್ ಎಂಬ ಬಗ್ಗೆ ಸಣ್ಣದೊಂದು ಇಂಟ್ ಸಿಕ್ಕಿದೆ.

ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ಥಗ್ ಲೈಫ್ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಅಂತಾ ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋದಲ್ಲಿ ಹೈಲೆಟ್ ಆಗಿದೆ.

ಪಕ್ಕ ಆಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮಂಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತಿ ನಿರ್ಮಿಸುತ್ತಿದ್ದಾರೆ.

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಆರ್ ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಾಹಣ ಥಗ್ ಲೈಫ್ ಸಿನಿಮಾದಲ್ಲಿದೆ. 1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಈಗಲ್ ಇದು ಮಾಸ್ ಮಹಾರಾಜ ರವಿತೇಜ ಚಿತ್ರ: ಟೀಸರ್ ಬಂತು- ಜನವರಿ13ಕ್ಕೆ ಬಿಡುಗಡೆ

ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಿರುವ ‘ಈಗಲ್’ ಸಿನಿಮಾದ ಸಣ್ಣ ಗ್ಲಿಂಪ್ಸ್ ಭಾರೀ ಸದ್ದು ಮಾಡಿತ್ತು. ಇದೀಗ ಈಗಲ್ ಟೀಸರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡ್ತಿದೆ.

ಫಸ್ಟ್ ಗ್ಲಿಂಪ್ಸ್ ನಲ್ಲಿ ರವಿತೇಜ ಮುಖವನ್ನು ರಿವೀಲ್ ಮಾಡದೇ ಸಸ್ಪೆನ್ಸ್ ಕಾಯ್ದುಕೊಂಡಿದ್ದ ಚಿತ್ರತಂಡ ಕುತೂಹಲಕ್ಕೆ ಬ್ರೇಕ್ ಹಾಕಿದೆ. ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ಮಾಸ್ ಮಹಾರಾಜ ಎಂಟ್ರಿ ಕೊಟ್ಟಿದ್ದು, ಅನುಪಮಾ ಪರಮೇಶ್ವರನ್, ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಜನವರಿ 13 ಸಂಕ್ರಾಂತಿ ಹಬ್ಬ ಸಿನಿಮಾ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಅನಾವರಣಗೊಂಡ ಹೊಸ ಹಾಡು: ಅರ್ಜುನ್ ಯೋಗಿ, ಸಾರಿಕಾ ರಾವ್ ಜೋಡಿಯ ಗಾನ ಬಜಾನ

ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ , ರಚನಾ ಬಿ. ಹೆಚ್ ನಿರ್ಮಾಣದ ಅನಾವರಣ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಏನಾಗಿದೆ ಎಂಬ ಪ್ರೇಮಗೀತೆಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅನಾವರಣ ಸಿನಿಮಾದ ರೀ ದೇವರೇ ಎಂಬ ಮತ್ತೊಂದು ಗಾನಬಜಾನ ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠ ಕುಣಿಸಿದ್ದಾರೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ರೀ ದೇವರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ.. ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.

ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.

ವೆಂಕಿ UDV ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ವಿಜಯ್ ಸಿನಿಮಾಸ್ ಬಿಡುಗಡೆ ಮಾಡಲಿದ್ದಾರೆ.

ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಂತೂ ಬಹಳಷ್ಟು ಹೆಸರು ಮಾಡಿದರು. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಅದ್ಭುತಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿ ತಮ್ಮ ಅಭಿನಯ ಶಕ್ತಿಯನ್ನು ತೋರಿಸಿದರು. ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಚೆನ್ನಾಗಿ ಹೆಸರು ಮಾಡಿದ್ದಾರೆ.

Categories
ಸಿನಿ ಸುದ್ದಿ

ಇದು ಕನ್ನಡಿಗರ ಜಯಭೇರಿ! ಕನ್ನಡಕ್ಕೆ ಜೈ ಎಂದ ಯಶಸ್ ಸೂರ್ಯ-ನಿಶ್ವಿಕಾ ನಾಯ್ಡು- ಕಿರಣ್ ರಾಜ್: ವೈದ್ಯರ ಹಾಡಿಗೆ ಸಿಎಂ ಶುಭಾಶಯ

ವೃತ್ತಿಯಲ್ಲಿ ಅವರಿಬ್ಬರೂ ವೈದ್ಯರು. ಒಬ್ಬರು ಡಾ.ಶೈಲೇಶ್ ಕುಮಾರ್. ಇನ್ನೊಬ್ಬರು ಡಾ.ಶಶಿಕಲಾ ಪುಟ್ಟಸ್ವಾಮಿ. ಡಾ.ಶೈಲೇಶ್ ಅವರಿಗೆ ಕನ್ನಡ ಮೇಲೆ ಅತೀವ ಪ್ರೀತಿ. ಡಾ.ಶಶಿಕಲಾ ಅವರಿಗೆ ಕನ್ನಡ ಬರಹದ ಮೇಲೆ ಅತೀವ ಪ್ರೀತಿ. ಶಶಿಕಲಾ ಅವರು ಬರೆದ ಕನ್ನಡ ಗೀತೆಯೊಂದನ್ನು ವಿಡಿಯೋ ಸಾಂಗ್ ಮಾಡಲು ಮುಂದಾಗಿದ್ದು ಡಾ. ಶೈಲೇಶ್. ಹಾಗಾಗಿ ಅದಕ್ಕೆ ಜಯಭೇರಿ ಕನ್ನಡ ಎಂದು ಹೆಸರಿಟ್ಟು ಸೊಗಸಾದ ಕನ್ನಡ ವಿಡಿಯೋ ಗೀತೆ ಮಾಡಿದ್ದಾರೆ.

ಈಗ ಕನ್ನಡ ರಾಜ್ಯೋತ್ಸವದ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ “ಜಯಭೇರಿ ಕನ್ನಡ” ಎಂಬ ಹಾಡು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಡಾ.ಶೈಲೇಶ್ ಮಾತನಾಡಿ, ನಾನು ವೃತ್ತಿಯಲ್ಲಿ ವೈದ್ಯ. ಸಿನಿಮಾ ರಂಗದಲ್ಲಿ ನನಗೆ ಡಾ.ರಾಜಕುಮಾರ್ ಅವರು ಪ್ರೇರಣೆ. ನಮ್ಮ ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದ “6 ನೇ ಮೈಲಿ” ಚಿತ್ರ ನಿರ್ಮಾಣ ಮಾಡಿದ್ದೆ. ಈಗ “ತಲ್ವಾರ್ ಪೇಟೆ” ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ “ಜಯಭೇರಿ ಕನ್ನಡ” ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ. ಡಾ. ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್, ಅನಿರುದ್ದ್ ಶಾಸ್ತ್ರಿ , ಅನುರಾಧ ಭಟ್ ಹಾಡಿದ್ದಾರೆ. ಯಶಸ್ ಸೂರ್ಯ, ನಿಶ್ವಿಕಾ ನಾಯ್ಡು, ಕಿರಣ್ ರಾಜ್, ವೀಣಾ ಪೊನ್ನಪ್ಪ ಹಾಗೂ ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇವೆ. ಈ ಹಾಡನ್ನು ನಿರ್ಮಾಣ ಮಾಡಿ ಮಾನ್ಯ ಸಚಿವರಾದ ಶಿವರಾಜ್ ತಂಗಡಗಿ ಅವರ ಬಳಿ ಹೇಳಿದಾಗ, ಅವರು ಈ ಹಾಡನ್ನು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ಡಾ.ಶೈಲೇಶ್ ಕುಮಾರ್.

ಡಾ. ಶೈಲೇಶ್ ಕುಮಾರ್ ಅವರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಾಡೊಂದನ್ನು ನಿರ್ಮಾಣ ಮಾಡುತ್ತಿದ್ದೇನೆ. ನೀವೇ ಬರೆದು ನಿರ್ದೇಶನ ಮಾಡಬೇಕೆಂದರು. ತುಂಬಾ ಸಂತೋಷವಾಯಿತು. ಜೊತೆಗೆ ಕನ್ನಡದ ಕುರಿತು ಹಾಡನ್ನು ಬರೆಯುವಾಗ ಸ್ವಲ್ಪ ಭಾವುಕಳಾದೆ. ಇಡೀ ತಂಡದ ಸಹಕಾರದಿಂದ ಈ ಹಾಡು ಅದ್ದೂರಿಯಾಗಿ ಬಂದಿದೆ ಎಂದರು ನಿರ್ದೇಶಕಿ ಶಶಿಕಲಾ ಪುಟ್ಟಸ್ವಾಮಿ.

ನನಗೆ ಶೈಲೇಶ್ ಕುಮಾರ್ ಅವರು ಈ ರೀತಿ ಕನ್ನಡದ ಹಾಡೊಂದರಲ್ಲಿ ಅಭಿನಯಿಸಬೇಕೆಂದು ಕೇಳಿದರು. ಕನ್ನಡದ ಮೇಲಿನ ಅಭಿಮಾನದಿಂದ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಹಾಡು ಚೆನ್ನಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.

ಕನ್ನಡ ನನ್ನ ಉಸಿರು. ಅಂತಹ ಕನ್ನಡದ ಸುಂದರ ಗೀತೆಯೊಂದರಲ್ಲಿ ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಅಭಿನಯಿಸಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಟ ಯಶಸ್ ಸೂರ್ಯ.

ಸಂಗೀತ ನಿರ್ದೇಶಕ ಸಾಯಿಕಿರಣ್ ಸಹ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಧನು ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

Categories
ಸಿನಿ ಸುದ್ದಿ

ಎಲೆಕ್ಟ್ರಾನಿಕ್ ಸಿಟಿ ಇದು ಸಿನಿಮಾ ಹೆಸರು! ಐಟಿ ಮಂದಿಯ ವರ್ಕ್ ಲೈಫ್ ಸ್ಟೋರಿ

ಬಹುಶಃ “ಎಲೆಕ್ಟ್ರಾನಿಕ್ ಸಿಟಿ” ಎಂಬ ಹೆಸರನ್ನು ಕೇಳದವರು ಯಾರು ಇಲ್ಲ ಎನ್ನಬಹುದು. ಅದರಲ್ಲೂ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವರಿಗಂತೂ ಈ ಹೆಸರು ಚಿರಪರಿಚಿತ.

ಬೆಂಗಳೂರಿನ ಈ ಸುಪ್ರಸಿದ್ಧ ಬಡಾವಣೆಯಲ್ಲಿ ಸಾಕಷ್ಟು ಐಟಿ ಕಂಪನಿಗಳಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ನವೆಂಬರ್ 24 ರಂದು ತೆರೆಗೆ ಬರುತ್ತಿದೆ.

ಮೂಲತಃ ಐಟಿ ಉದ್ಯೋಗಿಯಾಗಿರುವ ಆರ್ ಚಿಕ್ಕಣ್ಣ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶಿಸಿದ್ದಾರೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ಚಿಕ್ಕಣ್ಣ ನಿರ್ದೇಶಿಸಿದ್ದಾರೆ.

ಈಗಿನ ಬಹುಪಾಲು ಯುವಕರು ಐಟಿ ಉದ್ಯೋಗಿಗಳಾಗಿದ್ದು, ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಅಂತಹ ಐಟಿ ಕಂಪನಿಯ ಉದ್ಯೋಗಿಯ ವರ್ಕ್ ಲೈಫ್ ಹೇಗಿರುತ್ತದೆ? ಎಂಬ ಪ್ರಮುಖ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತ್ರಿಕೋನ ಪ್ರೇಮ ಕಥೆ ಸಹ ಇದೆ.

“ಎಲೆಕ್ಟ್ರಾನಿಕ್ ಸಿಟಿ” ಈಗಾಗಲೇ ಅನೇಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನವೆಂಬರ್ 24 ಚಿತ್ರ ಬಿಡುಗಡೆಯಾಗುತ್ತಿದೆ.

ಆರ್ಯನ್ ಹರ್ಷ “ಎಲೆಕ್ಟ್ರಾನಿಕ್ ಸಿಟಿ ಚಿತ್ರದ ನಾಯಕನಾಗಿದ್ದು, ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ನಾಯಕಿಯರಾಗಿ ನಟಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಚಂದ್ರಶೇಖರ್ ಶ್ರೀವಾಸ್ತವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಅವರ ಕಲಾ ನಿರ್ದೇಶನ “ಎಲೆಕ್ಟ್ರಾನಿಕ್ ಸಿಟಿ” ಚಿತ್ರಕ್ಕಿದೆ.

error: Content is protected !!