ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘು ರವರ ಸೆವೆನ್ ಸ್ಟಾರ್ ಪಿಚ್ಚರ್ಸ್ ಪ್ರೊಡಡಕ್ಷನ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಹಾಗೂ ಕರ್ನಾಟಕದ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅಭಿನಯಯದ, ವಿಜಯ್ ಕನ್ನಡಿಗ ನಿರ್ದೇಶನ ಹೊಂದಿರುವ ‘ಜೋಗ್ 101’ ಚಿತ್ರವು ಇದೇ ಮಾರ್ಚ್ 07 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ತೇಜಸ್ವಿನಿ ಶೇಖರ್, ತಿಲಕ್ ಶೇಖರ್, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ಗೋವಿಂದೇ ಗೌಡ, ನಿರಂಜನ್ ದೇಶಪಾಂಡೆ ಹಾಗು ಇನ್ನು ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಅವಿನಾಶ್ ಆರ್ ಬಸುತ್ಕರ್ ರವರ ಸಂಗೀತವಿದ್ದು, ಸುನೀತ್ ಹಲಗೇರಿಯವರ ಛಾಯಾಗ್ರಹಣವನ್ನು ಹೊಂದಿದೆ.
ವಿಶ್ವವಿಖ್ಯಾತ ಜೋಗ್ ಜಲಪಾತದ ಸುತ್ತಮುತ್ತಲಿನ ಕಾಡುಗಳಲ್ಲಿ, ಮಲೆನಾಡ ಸೊಬಗಿನ ಜೊತೆ ಒಂದು ಸಂಗೀತಮಯವಾದ ಥ್ರಿಲ್ಲರ್ ಅನುಭವವನ್ನು “ಜೋಗ್ 101” ಚಿತ್ರ ಕಟ್ಟಿಕೊಡುತ್ತದೆ.
ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರಕ್ಕಾಗಿ ಗೀತ ಸಾಹಿತಿ ಗೌಸ್ ಪೀರ್ ಅವರು ಬರದಿರುವ “ನೀನೇ ನೀನೇ” ಎಂಬ ಸುಮಧುರ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿದರು. “ಸರಿಗಮಪ” ಖ್ಯಾತಿಯ ನಿಹಾಲ್ ತೌರೊ ಹಾಗೂ ಆರತಿ ಅಶ್ವಿನ್ ಈ ಹಾಡಿಗೆ ಧ್ವನಿಯಾಗಿದ್ದು ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದಾರೆ.
ಚಿತ್ರದ ಹಾಡುಗಳು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಪ್ರಮೋದ್ ಜಯ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಹಾಡುಗಳು ಹಾಗೂ ಟೀಸರ್ ಮೂಲಕ ಪ್ರಮೋದ್ ಜಯ ಭರವಸೆ ಮೂಡಿಸಿದ್ದಾರೆ. ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿರುವ ವಿಶ್ವಾಸ ನಮಗಿದೆ. ಉತ್ತಮ ಕಥೆಗಳಿರುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ. ದಯವಿಟ್ಟು ಜನ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬನ್ನಿ. ಆಗ ಮಾತ್ರ ಚಿತ್ರಗಳು ಯಶಸ್ಸಿಯಾಗಲು ಸಾಧ್ಯ ಎಂದರು ಅತಿಥಿಗಳಾಗಿ ಆಗಮಿಸಿದ್ದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗು ಬಹದ್ದೂರ್ ಚೇತನ್ ಕುಮಾರ್.
ನಾನು ಸಿಂಪಲ್ ಸುನಿ ಅವರ ಹತ್ತಿರ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಾಕಷ್ಟು ಕೆಲಸ ಕಲಿತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹಾಡು ಬಿಡುಗಡೆ ಮಾಡಿಕೊಟ್ಟ ಮೂರು ಜನ ನಿರ್ದೇಶಕರಿಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ಪ್ರಮೋದ್ ಜಯ ತಿಳಿಸಿದರು.
ಈ ಚಿತ್ರದಲ್ಲಿ ಖುಷ್ ನನ್ನ ಹೆಸರು. ಲವಲವಿಕೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಂಜಿತ್. ದಿಲ್ಮಯ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಸ್ಪಂದನ ಸೋಮಣ್ಣ. ನಟರಾದ ಧರ್ಮಣ್ಣ, ರಘು ರಾಮನಕೊಪ್ಪ ಮಂತಾದ ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು “ದಿಲ್ ಖುಷ್” ಚಿತ್ರದ ಬಗ್ಗೆ ಮಾತನಾಡಿದರು.
ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ “ದಿಲ್ ಖುಷ್” ಚಿತ್ರವನ್ನು ನಿರ್ಮಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನೂತನ ಪ್ರತಿಭೆ ರಘು ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೂತನ ಚಿತ್ರವೊಂದರ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದ್ದು, ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ನೆಲಮಂಗಲದ ಬಳಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಅನಾವರಣವಾಯಿತು. ಚಿತ್ರಕ್ಕೆ “ಪರವಶ” ಎಂದು ಹೆಸರಿಡಲಾಗಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಸಮಾರಂಭ ನೆರವೇರಿತು.
ಅವ್ಯಕ್ತ ಸಿನಿಮಾಸ್ ಲಾಂಛನದಲ್ಲಿ ಹರೀಶ್ ಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಧೀಂದ್ರ ನಾಡಿಗರ್ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹೊಸತಂಡದ ಜೊತೆಗೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಾನು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ಸುಧೀಂದ್ರ ನಾಡಿಗರ್ ಅವರ ನಿರ್ದೇಶನದ ಶೈಲಿ ವಿನೂತನವಾಗಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಈಗಾಗಲೇ ನಲವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರದಲ್ಲಿ ಚಿತ್ರೀಕರಣವಾಗಿದೆ. ರವಿಚಂದ್ರನ್, ರಘು ಭಟ್, ಸೋನಾಲ್ ಮೊಂಟೆರೊ, ಪವಿತ್ರ ಲೋಕೇಶ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನಾಯಕ ರಘು ಭಟ್ “ಪರವಶ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡವಳ್ಳಿ ಬರೆದಿದ್ದಾರೆ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ತಿಳಿಸಿದರು.
ನಮ್ಮೂರಿನಲ್ಲಿ ನಾನು ನಿರ್ಮಿಸುತ್ತಿರುವ “ಪರವಶ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿರುವುದು ಖುಷಿಯಾಗಿದೆ. ಹೊಸತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ರವಿಚಂದ್ರನ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹರೀಶ್ ಗೌಡ.
ಥ್ರಿಲ್ಲರ್, ಕೌಟುಂಬಿಕ ಹಾಗೂ ಪ್ರೇಮ ಕಥಾಹಂದರವುಳ್ಳ “ಪರವಶ” ಚಿತ್ರದಲ್ಲಿ ಜನರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಒಟ್ಟಿನಲ್ಲಿ ಪ್ರೇಕ್ಷಕ ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಚಿತ್ರವಿದು. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಕೂಡ ಮುದ ನೀಡುತ್ತದೆ ಎಂದು ನಾಯಕ ಹಾಗೂ ಕಥೆಗಾರ ರಘು ಭಟ್ ತಿಳಿಸಿದರು.
ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದರು ನಾಯಕಿ ಸೋನಾಲ್ ಮೊಂಟೆರೊ
ಕಲಾವಿದರಾದ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಹಾಗೂ ಛಾಯಾಗ್ರಾಹಕ ಆನಂದ್ ಮೀನಾಕ್ಷಿ ಚಿತ್ರತಂಡದ ಅನೇಕ ಸದಸ್ಯರು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರತ್ನಮ್ಮ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ “ಬಾನಿನಿಂದ” ಹಾಡು ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮಹರ್ಷಿ ಆನಂದ ಗುರೂಜಿ ಅವರು ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಅವರು ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು.
“ಕೋರ” ಎಂದರೆ ಬುಡಕಟ್ಟು ಜನಾಂಗದ ಹೆಸರು ಎಂದು ಮಾತನಾಡಿದ ನಿರ್ಮಾಪಕ ಪಿ.ಮೂರ್ತಿ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಒರಟ ಶ್ರೀ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ.
ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಇನ್ನು ಹೇಮಂತ್ ಕುಮಾರ್ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ವಿಶೇಷವಾಗಿ ಇಂದು ಬಿಡುಗಡೆಯಾಗಿರುವ “ಬಾನಿನಿಂದ” ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಹಾಡು ಬಿಡುಗಡೆ ಮಾಡಿಕೊಟ್ಟ ಆನಂದ್ ಗುರೂಜಿ ಅವರಿಗೆ ಮತ್ತು ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ “ಕೋರ” ಚಿತ್ರದ ನಾಯಕಿ. ನಿರ್ಮಾಪಕ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ.
ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಧನ್ಯವಾದ ತಿಳಿಸಿತ್ತಾ, ಹುಟ್ಟುಹಬ್ಬದ ಶುಭಾಶಯ ಕೂಡ ಹೇಳುತ್ತೇನೆ. ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಸುನಾಮಿ ಕಿಟ್ಟಿ ತಿಳಿಸಿದರು.
ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು “ಕೋರ” ಚಿತ್ರದ ಕುರಿತು ಮಾತನಾಡಿದರು.
ನಿರ್ದೇಶನ, ನಿರ್ಮಾಣ : ದಿವಾಕರ್ ಡಿಂಡಿಮ ತಾರಾಗಣ: ಮಾನಸಿ ಸುಧೀರ್, ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅರ್ಚನಾ ಕೊಟ್ಟಿಗೆ, ಅರವಿಂದ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ ಇತರರು.
ಒಂದು ಕಡೆ ಹುಡುಗ ಹುಡುಗಿಯ ವಾಸ್ತವತೆಯ ಮಾತು ಕತೆ. ಮತ್ತೊಂದೆಡೆ ಮೂಗ, ಕಿವುಡ ಮತ್ತು ಅಂಧನೊಬ್ಬನ ಪೀಕಲಾಟ. ಇನ್ನೊಂದೆಡೆ ತಾಯಿ ಆಗಬೇಕೆಂಬ ಹಂಬಲ ಇರೋ ಬಂಜೆಯೊಬ್ಬಳ ಒಳನೋವಿನ ಕಣ್ಣೀರು…
ಈ ಮೂರು ಟ್ರಾಕ್ ಇಟ್ಟುಕೊಂಡು ಒಂದೊಳ್ಳೆಯ ಬರಹದ ಮೂಲಕ ಗಟ್ಟಿ ಕಥೆ ಕಟ್ಟಿಕೊಟ್ಟಿರುವ ಜುಗಲ್ ಬಂದಿ, ನಿಜಕ್ಕೂ ಮನ ತಟ್ಟುವ ಚಿತ್ರ. ಒಂದೇ ಮಾತಲ್ಲಿ ಹೇಳೋದಾದರೆ, ಇದು ಎಲ್ಲರೊಳಗಿನ ಜುಗಲ್ ಬಂದಿ. ನೆನಪುಗಳ ಹೂರಣದ ಸಾರ ಇಲ್ಲಿ ಬಂಧುವಾಗಿದೆ ಮತ್ತು ಬಂದಿಯಾಗಿದೆ.
ನಿರ್ದೇಶಕ ದಿವಾಕರ್ ಡಿಂಡಿಮ ಅವರು ಮೊದಲ ಪ್ರಯತ್ನದಲ್ಲೇ ಬಾಲ್ ಬೀಟ್ ಮಾಡದೆ ಬೌಂಡರಿ ಟಚ್ ಮಾಡಿದ್ದಾರೆ. ಅವರೊಳಗೊಬ್ಬ ಅತ್ಯುತ್ತಮ ಬರಹಗಾರ ಇದ್ದಾನೆ. ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ಕೊರತೆ ಇಲ್ಲ ಅನ್ನೋದಕ್ಕೆ ಈ ಸಿನಿಮಾ ಮತ್ತೊಂದು ಸಾಕ್ಷಿ ಎನ್ನಬಹುದು.
ಜುಗಲ್ ಬಂದಿ ನೋಡಿ ಹೊರ ಬಂದವರಿಗೆ ಕೊಂಚ ಎದೆ ಭಾರ ಎನಿಸದಿರದು. ಕಾರಣ, ನಿರ್ದೇಶಕರು ಕಟ್ಟಿಕೊಟ್ಟಿರುವ ಈ ನೆಲದ ಗಟ್ಟಿ ಕಥೆ. ಅದರಲ್ಲೂ ವಾಸ್ತವಕ್ಕೆ ಹತ್ತಿರ ಎಂಬಂತೆ ಭಾಸವಾಗುವ ಪಾತ್ರಗಳು, ಸನ್ನಿವೇಶಗಳು ನೋಡುಗರ ಕಣ್ಮನ ತಟ್ಟುತ್ತವೆ. ಸೂಕ್ಷ್ಮ ಸಂವೇದನೆಯ ಅಂಶ ಸಿನಿಮಾದುದ್ದಕ್ಕೂ ಎಡತಾಕುತ್ತದೆ.
ಮೊದಲು ಇಲ್ಲಿ ಇಷ್ಟ ಆಗೋದು ಕಥೆ. ಅದು ಸಿಂಪಲ್ ಎನಿಸಿದರೂ, ನಿರೂಪಣೆ ವಿಷಯದಲ್ಲಿ ಗೊಂದಲವಿಲ್ಲ. ಆರಂಭದಿಂದ ಅಂತ್ಯದವರೆಗೂ ಚಿತ್ರಕಥೆಯ ಹಿಡಿತ ಸಡಿಲವಾಗಿಲ್ಲ. ಹಾಗಾಗಿ ಸಿನಿಮಾದ ಮೊದಲರ್ಧ ಮುಗಿಯೋದು ಗೊತ್ತಾಗಲ್ಲ. ದ್ವಿತಿಯಾರ್ಧ ಜುಗಲ್ ಬಂದಿಯ ಮಾತುಕತೆ ನೋಡುವ ಕುತೂಹಲ ಹೆಚ್ಚಿಸುತ್ತಾ ಹೋಗುತ್ತೆ.
ಇಲ್ಲಿ ಮುಖ್ಯವಾಗಿ ಆಸೆ, ದುರಾಸೆ, ಪ್ರೀತಿ, ಬದುಕು, ಹತಾಶೆ, ಅಸಹಾಯಕತೆ, ಹಂಬಲ ಇತ್ಯಾದಿ ಕಾಣಸಿಕ್ಕರೂ ಕೊಂಚ ತಿಳಿ ಹಾಸ್ಯದೊಂದಿಗೆ ಭಾವುಕತೆ ಹೆಚ್ಚಿಸುತ್ತಾ ಹೋಗುತ್ತದೆ. ಅದೇ ಸಿನಿಮಾದ ಜೀವಾಳ.
ಸಿನಿಮಾ ಸರಾಗವಾಗಿ ಸಾಗಲು ಸಂಗೀತ ಹಾಗು ಕ್ಯಾಮರಾ ಕೈಚಳಕ ಸಾಥ್ ನೀಡಿದೆ. ಖುಷಿ ಕೊಡೋದು ಸಂಭಾಷಣೆ. ಮಜವೆನಿಸೋ ದೃಶ್ಯಗಳ ಜೊತೆಯಲ್ಲೇ ಆಗಾಗ ತಾಯಿ ತನ್ನ ಮಗುವಿನಿಂದ ‘ಅಮ್ಮ’ ಅಂತ ಕರೆಸಿಕೊಳ್ಳಬೇಕೆಂಬ ಹಂಬಲದ ದೃಶ್ಯಕೂಡ ಇಲ್ಲಿ ಕಣ್ತುಂಬಿಸದೇ ಇರದು.
ಕಥೆ ಇಷ್ಟು…
ಉದ್ಯಮಿಯೊಬ್ಬ ಖರೀದಿಸಿ ಮನೆಯೊಳಗಿಟ್ಟ ಬೆಲೆಬಾಳುವ ಕ್ರಿಸ್ಟಲ್ ಕದಿಯೋಕೆ ಅಂತ ಬರುವ ಮಾತು ಬಾರದ, ಕಿವಿ ಕೇಳದ ಕಳ್ಳ, ಅದಾಗಲೇ ಆ ಮನೆಯೊಳಗಿರೋ ಮತ್ತೊಬ್ಬ ‘ಅಂಧ’ ಕಳ್ಳ. ಈ ಇಬ್ಬರ ನಡುವಿನ ಜುಗಲ್ ಬಂದಿ ಮಧ್ಯೆ ಕಾಣಸಿಗೋ ಹುಡುಗ ಹುಡುಗಿಯ ಲವ್ ಸ್ಟೋರಿ, ಅಮ್ಮನಾಗೋ ಹಂಬಲದಲ್ಲಿ ನೋವಲ್ಲೇ ದಿನದೂಡುವ ತಾಯಿಯೊಬ್ಬಳ ಕಣ್ಣೀರಧಾರೆ. ಇದರ ಮಧ್ಯೆ ಬರುವ ಒಂದಷ್ಟು ತರಹೇವಾರಿ ಪಾತ್ರಗಳು.
ಇಷ್ಟಕ್ಕೂ ಆ ಬೆಲೆಬಾಳುವ ಕ್ರಿಸ್ಟಲ್ ಯಾರ ಕೈ ಸೇರುತ್ತೆ. ಆ ಯುವ ಪ್ರೇಮಿಗಳು ಒಂದಾಗುತ್ತಾರಾ? ಆ ತಾಯಿ ಆಸೆ ಈಡೇರುತ್ತಾ? ಈ ಕುತೂಹಲ ಇದ್ದರೆ ಒಮ್ಮೆ ಜುಗಲ್ ಬಂದಿ ನೋಡಲ್ಲಡ್ಡಿಯಿಲ್ಲ.
ಯಾರು ಹೇಗೆ?
ಇಲ್ಲಿ ಮಗುವಿಗಾಗಿ ಹಂಬಲಿಸುವ ತಾಯಿಯಾಗಿ ಮಾನಸಿ ಸುಧೀರ್ ಗಮನ ಸೆಳೆದರೆ, ಅಂಧನಾಗಿ ಯಶ್ ಶೆಟ್ಟಿ ಇಷ್ಟವಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಕಳ್ಳನಾಗಿ ಸಂತೋಷ್ ಆಶ್ರಯ್ ಸ್ಕೋರ್ ಮಾಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್, ಅರವಿಂದ್ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬರುವ ಪಾತ್ರಗಳನ್ನು ಕಡೆಗಣಿಸುವಂತಿಲ್ಲ.
ಪ್ರದ್ಯೋತ್ನ ಸಂಗೀತದ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಇರಬೇಕಿತ್ತು. ಕ್ಯಾಮರಾ ಕೆಲಸ ಜುಗಲ್ ಬಂದಿ ಅಂದ ಹೆಚ್ಚಿಸಿದೆ.
ವಿದ್ಯಾಪತಿಯಾಗಿರುವ ನಾಗಭೂಷಣ್ ಗೆ ಜೋಡಿ ಸಿಕ್ಕಾಗಿದೆ. ಉಪಾಧ್ಯಕ್ಷ ಸುಂದರಿ ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ಟಗರು ಪಲ್ಯ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಮತ್ತೊಮ್ಮೆ ಧನು ಹಾಗೂ ನಾಗಭೂಷಣ್ ಕೈ ಜೋಡಿಸಿದ್ದು, ಈ ಚಿತ್ರಕ್ಕೆ ವಿದ್ಯಾಪತಿ ಎಂಬ ಟೈಟಲ್ ಇಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣನಿಗೆ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಮಿಂಚಿದ್ದ ಮಲೈಕಾ ವಸೂಪಾಲ್ ಈಗ ವಿದ್ಯಾಪತಿಗೆ ಜೋಡಿಯಾಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ ಉಪಾಧ್ಯಕ್ಷ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಉಪಾಧ್ಯಕ್ಷ ಸಿನಿಮಾದಲ್ಲಿ ಇವ್ರ ನಟನೆ ನೋಡಿ ಮೆಚ್ಚಿಕೊಂಡಿರುವ ವಿದ್ಯಾಪತಿ ಟೀಂ ತಮ್ಮ ತಂಡಕ್ಕೆ ಅವರನ್ನು ಸ್ವಾಗತಿಸಿದೆ.
ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.
ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಚಿತ್ರದಲ್ಲಿ ನಾಗಭೂಷಣ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ವಸೂಪಾಲ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
ತೆಲುಗಿನಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿರುವ, ಈವರೆಗೂ ತೆಲುಗು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಚಲನಚಿತ್ರಗಳನ್ನು ವಿತರಣೆ ಮಾಡಿರುವ ಚಲದವಾಡ ಶ್ರೀನಿವಾಸರಾವ್ ನಿರ್ಮಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಚಿತ್ರ “ರೆಕಾರ್ಡ್ ಬ್ರೇಕ್”. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಮಾರ್ಚ್ 8, ಮಹಾ ಶಿವರಾತ್ರಿ ದಿನದಂದು ಎಲ್ಲಾ ಭಾಷೆಗಳಲ್ಲೂ ಭಾರತದಾದ್ಯಂತ ಸುಮಾರು ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ.
ನಾನು ಮೂಲತಃ ಟಿಂಬರ್ ಉದ್ಯಮಿ. ಅಯೋಧ್ಯಾ ಶ್ರೀರಾಮನ ದೇವಸ್ಥಾನ ಸೇರಿದಂತೆ ಅನೇಕ ಜಗತ್ಪ್ರಸಿದ್ಧ ದೇವಸ್ಥಾನಗಳಿಗೆ ಮರ ಒದಗಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇವೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅನೇಕ ಭಾಷೆಗಳ ಚಿತ್ರಗಳನ್ನು ವಿತರಣೆ ಕೂಡ ಮಾಡಿದ್ದೇವೆ. ದುಡ್ಡು ಮಾಡುವುದಕ್ಕಿಂತ ನೋಡುಗರಿಗೆ ಒಳ್ಳೆಯ ಚಿತ್ರ ಕೊಡುವ ಆಸೆ ನನ್ನದು. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, ಚಂಟಿ ಹಾಗೂ ಬಂಟಿ ಎಂಬ ಅನಾಥ ಹುಡುಗರಿಬ್ಬರು ತಾವು ಅಂದುಕೊಂಡದ್ದನ್ನು ಹಾಗೂ ಯಾರು ನಿರೀಕ್ಷಿಸದ್ದನ್ನು ಸಾಧಿಸುವ ಕಥೆಯಿದು.
ಖ್ಯಾತ ನಟಿ ಜಯಸುಧಾ ಅವರ ಪುತ್ರ ನಿಹಾರ್ ಹಾಗೂ ಹೊಸ ಪ್ರತಿಭೆ ನಾಗಾರ್ಜುನ ಚಂಟಿ ಹಾಗೂ ಬಂಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಗ್ದಾ ಇಫ್ತೇಕರ್ ಈ ಚಿತ್ರದ ನಾಯಕಿ. ಸತ್ಯಕೃಷ್ಣ, ಸಂಜನಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ಮಾರ್ಚ್ 8ರಂದು ಮಹಾ ಶಿವರಾತ್ರಿ ಶುಭದಿವಸ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಲಿ, ಒಡಿಯಾ ಭಾಷೆಗಳಲ್ಲಿ ಏಕಕಾಲಕ್ಕೆ ಭಾರತದಾದ್ಯಂತ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನೋಡಿ. ಹಾರೈಸಿ ಎಂದರು ನಿರ್ಮಪಕ & ನಿರ್ದೇಶಕ ಚಲದವಾಡ ಶ್ರೀನಿವಾಸರಾವ್.
ನಾಯಕರಾದ ನಿಹಾರ್, ನಾಗಾರ್ಜುನ, ನಾಯಕಿ ರಗ್ದಾ ಇಫ್ತೇಕರ್, ನಟಿ ಸತ್ಯಕೃಷ್ಣ ಹಾಗೂ ನಟ ಪ್ರಸನ್ನ ಕುಮಾರ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಿರ್ದೇಶಕ ಅಜಯ್ ಕುಮಾರ್ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇತ್ತೀಚಿನ ದಿಗಳಲ್ಲಿ ಭಕ್ತಿಪ್ರಧಾನ ಮತ್ತು ಪೌರಾಣಿಕ ಚಿತ್ರಗಳ ನಿರ್ಮಾಣ ಕಡಿಮೆಯಾಗುತ್ತಿವೆ. ಅದರಲ್ಲೂ ಕೆಲವರು ಅಂಥಾ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ಅವರು ಸೂರ್ಯವಂಶದ ಸಾಮ್ರಾಟ್ ಮಾಂಧಾತನ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ನಿರ್ಮಾಣದ ಜೊತೆಗೆ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ.
ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಸಾಮ್ರಾಟ್ ಮಾಂಧಾತ ಚಿತ್ರದ ಟ್ರೈಲರನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಬಿಡುಗಡೆಗೊಳಿಸಿದರು.
ಇಕ್ಷ್ವಾಕು ವಂಶದ (ಸೂರ್ಯವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ ಸತ್ಯ ಮತ್ತು ಧರ್ಮದ ಆಡಳಿತದಿಂದಲೇ ಪ್ರಖ್ಯಾತಿ ಗಳಿಸಿದ್ದನು. ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತಿದೆ. ಆತನ ಕಥೆಯನ್ನು “ಸಾಮ್ರಾಟ್ ಮಾಂಧಾತ” ಚಿತ್ರದ ಮೂಲಕ ಹೇಮಂತ್ ಅವರು ನಿರೂಪಿಸಹೊರಟಿದ್ದಾರೆ.
ಅಂದುಕೊಂಡಂತೆ ಆದರೆ ಏಪ್ರಿಲ್‍ನಲ್ಲಿ ಸಾಮ್ರಾಟ ಮಾಂಧಾತ ತೆರೆಗೆ ಬರುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಮಾತನಾಡಿದ ಓಂ ಸಾಯಿ ಪ್ರಕಾಶ್ ಆಗಿನ ಕಾಲದಲ್ಲಿ ಕಥೆ ಬರೆಯಲು 6 ತಿಂಗಳು, ವರ್ಷ ಕಷ್ಟಪಡುತ್ತಿದ್ದೆವು. ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಮಾಡಿದ ಯಾವುದೇ ಸಿನಿಮಾ ಯಶಸ್ವಿಯಾಗುತ್ತವೆ. ಅದೇ ರೀತಿ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ನಿರ್ಮಾಪಕ ಹೇಮಂತ್ ಕುಮಾರ್ ಮಾತನಾಡಿ ಇದು ಪೌರಾಣಿಕ ಚಿತ್ರ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರು. ಐದಾರು ತಿಂಗಳವರೆಗೆ ಎಲ್ಲರಿಗೂ ತರಬೇತಿ ನೀಡಿದ ನಂತರ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ .ಕೋರೋನಾ ಸಮಯದಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ವಿಎಫ್‍ಎಕ್ಸ್ ಜಾಸ್ತಿ ಇರೋದ್ರಿಂದ ಚಿತ್ರ ಮೂರು ವರ್ಷ ತೆಗೆದುಕೊಂಡಿತು. ಮುಂದಿನವಾರ ಸೆನ್ಸಾರ್ ಗೆ ಅಪ್ಲೈ ಮಾಡಿ, ಏಪ್ರಿಲ್‍ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ. ತ್ರೇತಾಯುಗದ ಆದಿಭಾಗದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ ಶನಿ ಮಹಾತ್ಮನ ಮೊರೆ ಹೋಗುತ್ತಾನೆ.
ಆ ಸಂದರ್ಭದಲ್ಲಿ ಶನಿ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಸಾಮ್ರಾಟ್ ಮಾಂಧಾತ ಎಂದರು ಚಿತ್ರದಲ್ಲಿ ಮಾಂಧಾತನಾಗಿ ನಟಿಸಿರುವ ಬಸವರಾಜು ಅವರು ನಾಟಕದಲ್ಲೂ ಸಹ ಅದೇ ಪಾತ್ರ ಮಾಡಿ ಗುರುತಿಸಿಕೊಂಡವರು. ಉಳಿದಂತೆ ಶನಿದೇವನಾಗಿ ನಟಿಸಿರುವ ಸುಂದರಬಾಬು, ಬಿಂದುಮತಿಯಾಗಿ ಕಾಣಿಸಿಕೊಂಡಿರಯವ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿರುವ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ, ಕಲಾನಿರ್ದೇಶಕ ರವಿ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.
ಯುವನಟ ಅನೂಪ್ ರೇವಣ್ಣ ಅಭಿನಯದ ನಾಲ್ಕನೇ ಚಿತ್ರ ಹೈಡ್ ಅಂಡ್ ಸೀಕ್ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ, ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು ಹಾಗೂ ವಸಂತ್‌ರಾವ್ ಎಂ. ಕುಲಕರ್ಣಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಳೆದ ಸೋಮವಾರ ನಡೆಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿ.ಪ.ಸದಸ್ಯ ಎಸ್.ವಿಶ್ವನಾಥ್ ಅವರುಗಳು ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ರೇವಣ್ಣ ಅವರ ಅನೇಕ ಸ್ನೇಹಿತರು ಹಾಜರಿದ್ದು, ಶುಭ ಹಾರೈಸಿದರು.
ಈ ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ಒಬ್ಬ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಧನ್ಯಾ ರಾಮ್‌ಕುಮಾರ್ ಚಿತ್ರದ ನಾಯಕಿ.
ವೇದಿಕೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡುತ್ತ ರೇವಣ್ಣ ಅವರ ಮಗ ಹೀರೋ ಆಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ, ಇದು ಅವರ ನಾಲ್ಕನೇ ಚಿತ್ರ. ಟ್ರೈಲರ್ ನಲ್ಲಿ ಆತನ ಅಭಿನಯ ಚೆನ್ನಾಗಿ ಬಂದಿದೆ, ಚಿತ್ರವೂ ಸಹ ಚೆನ್ನಾಗಿರುತ್ತದೆ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಬರಬೇಕು ಎಂದು ಶುಭ ಹಾರೈಸಿದರು.
ನಂತರ ಎಸ್.ವಿಶ್ವನಾಥ್ ಮಾತನಾಡುತ್ತ ಈ ಚಿತ್ರದಲ್ಲಿ ನಮ್ಮ ಹುಡುಗನೇ ಹೀರೋ ಆಗಿದ್ದಾನೆ. ರಾಜ್‌ಕುಮಾರ್ ಅವರ ಮೊಮ್ಮಗಳು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎಲ್ಲರ ಮನಗೆಲ್ಲಲಿ ಎಂದು ಹಾರೈಸಿದರು.
ಸೀನಿಯರ್ ಪ್ರೊಫೆಸರ್ ಡಿ.ಕೆ.ರವಿ ಮಾತನಾಡಿ ಟ್ರೈಲರ್ ತುಂಬಾ ಇಂಪ್ರೆಸಿವ್ ಆಗಿದೆ. ಅನೂಪ್ ಒಳ್ಳೇ ಹುಡುಗ, ಆತನಿಗೆ ಉತ್ತಮ ಭವಿಷ್ಯವಿದೆ, ನಾಯಕಿ ಕೂಡ ಶೃಗಾರ್ ನಾಗರಾಜ್ ಹಾಗೂ ರಾಜ್‌ಕುಮಾರ್ ಅವರ ಮೊಮ್ಮಗಳು, ಎಲ್ಲರೂ ಚಿತ್ರ ನೋಡಿ ಹರಸಿ ಎಂದು ಹೇಳಿದರು. ನಂತರ ಮಾಜಿ ಸಚಿವ ರೇವಣ್ಣ ಮಾತನಾಡಿ ಚಿತ್ರರಂಗ ಇವತ್ತು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು, ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್‌ನಲ್ಲಿ ಹೋಗಿದ್ದೇನೆ, ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೇನ್ ರಾಮ್ ಕುಮಾರ್ ಮಾತನಾಡಿ ಹೈಡ್ ಅಂಡ್ ಸೀಕ್ ಮಾ.15ಕ್ಕೆ ರಿಲೀಸಾಗ್ತಿದೆ. ನನ್ನ ತಂಗಿ ಧನ್ಯಾ, ಅನೂಪ್ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ನಿರ್ದೇಶಕ ಪುನೀತ್ ನಾಗರಾಜು ಮಾತನಾಡುತ್ತ ಕಿಡ್ನಾಪಿಂಗ್ ಕೂಡ ಹೇಗೆ ಒಂದು ಆರ್ಗನೈಜೇಶನ್ ಮೂಲಕ ನಡೆಯುತ್ತೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ, ಬೆಂಗಳೂರು, ಮಾಗಡಿ, ಚಿಕ್ಕಮಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಹೆಚ್ಚು ಮಾತನಾಡದ, ಯಾವುದನ್ನೂ ಎಕ್ಸ್ಪ್ರೆಸ್ ಮಾಡದ ವ್ಯಕ್ತಿಯ ಪಾತ್ರ ಅನೂಪ್ ರೇವಣ್ಣ ಅವರದು. ಅಲ್ಲದೆ ನಾಯಕಿ ಒಬ್ಬ ಬ್ಯುಸಿನೆಸ್ ಮ್ಯಾನ್ ಮಗಳಾಗಿರುತ್ತಾರೆ, ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ ನನ್ನ ಪಾತ್ರದ ಹೆಸರು ಹಾಸಿನಿ, ಒಳ್ಳೇ ಫ್ಯಾಮಿಲಿಯಿಂದ ಬಂದ ಹುಡುಗಿ, ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥಾದ್ದು, ಆ ಕಿಡ್ನಾರ‍್ಸ್ ಉದ್ದೇಶ, ಹಿನ್ನೆಲೆ ಏನು ಅನ್ನೋದರ ಮೇಲೆ ಈ ಸಿನಿಮಾ ನಿಂತಿದೆ ಎಂದವರು ಹೇಳಿದರು.
ನಟ ಬಲ ರಾಜವಾಡಿ, ಸೂರಜ್, ಜಗ್ಗಿ, ವಿತರಕ ಕಮರ್ ಚಿತ್ರದ ಕುರಿತಂತೆ ಮಾತನಾಡಿದರು. ರಿಜೋ ಪಿ.ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.
ಕನ್ನಡ ಚಿತ್ರರಂಗದಲ್ಲಿ ರನ್ ಆಂಟೋನಿ ಹಾಗೂ ಟಕ್ಕರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಘು ಶಾಸ್ತ್ರಿ ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ‘ಲೈನ್ ಮ್ಯಾನ್’ ಎಂಬ ಶೀರ್ಷಿಕೆ ಇಡಲಾಗಿದೆ. ಡಿಫ್ರೆಂಟ್ ಟೈಟಲ್ ಮೂಲಕ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಇದೀಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಲೈನ್ ಮ್ಯಾನ್ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಸರಿಗಮ ಕನ್ನಡ ಯೂಟ್ಯೂಬ್ ನಲ್ಲಿ ಚಿತ್ರದ ಝಲಕ್ ರಿಲೀಸ್ ಆಗಿದ್ದು, ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿದೆ. ಕದ್ರಿ ಮಣಿಕಾಂತ್ ಮ್ಯೂಸಿಕ್ ಕಿಕ್ ಕೊಡ್ತಿದೆ. ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆರ್.ಜಿ.ವಿ ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗಿದು ನಾಯಕ ನಟನಾಗಿ ಚೊಚ್ಚಲ ಚಿತ್ರ. ಹಾಗಾಗಿ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ, ಭರವಸೆಯನ್ನಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ವಿದ್ಯುತ್ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕಥೆ ಸುತ್ತುತ್ತದೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರವೇ ‘ಲೈನ್ ಮ್ಯಾನ್’. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.