Categories
ಸಿನಿ ಸುದ್ದಿ

ರೋಜಿಗೆ ಸಾಥ್ ಕೊಟ್ಟ ಶ್ರೀನಗರ ಕಿಟ್ಟಿ: ಯೋಗಿ ಜೊತೆ ಕಿಟ್ಟಪ್ಪ

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. “ಲಿಯೋ” ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಶ್ರೀನಗರ ಕಿಟ್ಟಿ “ರೋಜಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಗಿದೆ.

ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. “ಕ್ರಿಸ್ಟೋಫರ್” ನನ್ನ ಪಾತ್ರದ ಹೆಸರು ಎಂದರು ಶ್ರೀನಗರ ಕಿಟ್ಟಿ.

ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಆರಂಭಿಸಿದ ನಟ ಯೋಗಿ, ನಾವಿಬ್ಬರು “ಹುಡುಗರು” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ ಎಂದರು.

ನಿರ್ದೇಶಕ ಶೂನ್ಯ, ನಿರ್ಮಾಪಕ ಡಿ.ವೈ ರಾಜೇಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

800 – ಇದು ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್‌ ಜೀವನಗಾಥೆ! ಡಿಸೆಂಬರ್ 2ರಿಂದ ಜಿಯೋ ಸಿನಿಮಾದಲ್ಲಿ ಶುರುವಾಗಿದೆ

ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ ಅವರ ಜೀವನವನ್ನಾಧರಿಸಿದ, ಎಂ.ಎಸ್‌. ಶ್ರೀಪತಿ ನಿರ್ದೇಶಿಸಿರುವ ‘800’ ಸಿನಿಮಾ JioCinemaದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಡಿಸೆಂಬರ್ 2ರಂದು JioCinema ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್ ಬದುಕಿನ ತೆರೆ-ಮರೆಯ ಕಥೆಯನ್ನು ಹೇಳುವ ಈ ಸಿನಿಮಾ, ಕ್ರಿಕೆಟ್ ಪ್ರಿಯರಿಗಂತೂ ಮನರಂಜನೆಯ ಮೃಷ್ಟಾನ್ನವನ್ನೇ ಉಣಿಸುತ್ತದೆ.

ವಿವೇಕ್‌ ರಂಗಾಚಾರಿ ನಿರ್ಮಾಣದ ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿರುವುದು ವಿಶೇಷ.

ಸ್ಪಿನ್ನರ್ ಬದುಕಿನ ಸ್ಟನ್ನಿಂಗ್ ಸ್ಟೋರಿ!: ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕ್ರಿಕೆಟ್‌ ಬದುಕಿನ ಸಾಧನೆಗಳನ್ನು ಹೇಳುವ ‘800’ ಸಿನಿಮಾ, ಅವರ ಖಾಸಗಿ ಬದುಕಿನ ಸಂಕಷ್ಟಗಳನ್ನೂ ನೋಡುಗರ ಎದುರಿಗೆ ತೆರೆದಿಡುತ್ತದೆ. ಹಲವು ಸಂಕಷ್ಟಗಳು, ವಿವಾದಗಳನ್ನು ಹಾದು ಕ್ರಿಕೆಟ್‌ ಜಗತ್ತಿನ ಲೆಜೆಂಡ್ ಆದ ಸ್ಪೂರ್ತಿಕಥೆಯನ್ನು ಹೇಳುತ್ತದೆ.
ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಎಸ್ಟೆಟ್‌ ಕೆಲಸಗಾರರಾಗಿ ದಕ್ಷಿಣ ಭಾರತದಿಂದ ಶ್ರೀಲಂಕಾಗೆ ವಲಸೆ ಬರುವ ಮುತ್ತಯ್ಯ ಮುರಳೀಧರನ್ ಅವರ ತಾತನ ಕುಟುಂಬ ನಂತರ ಅಲ್ಲಿಯೇ ನೆಲೆಗೊಳ್ಳುತ್ತದೆ. ಬಾಲ್ಯದಿಂದಲೇ ಕ್ರಿಕೆಟ್ ವ್ಯಾಮೋಹ ಬೆಳೆಸಿಕೊಂಡಿದ್ದ ಮುತ್ತಯ್ಯ, ಬದುಕಿನುದ್ದಕ್ಕೂ ತಮ್ಮ ನೆಚ್ಚಿನ ಕ್ರೀಡೆಗೆ ಮತ್ತು ತಮ್ಮ ತಾಯ್ನೆಲಕ್ಕೆ ತೋರಿದ ಬದ್ಧತೆ ಅನನ್ಯವಾದದ್ದು. ವೈಯಕ್ತಿಕ ಬದುಕಿನ ಸಂಕಷ್ಟ-ಸವಾಲುಗಳ ನಡುವೆಯೂ ಕ್ರಿಕೆಟ್‌ ಜಗತ್ತಿನಲ್ಲಿ ಅವರು ನಿರ್ಮಿಸಿದ ದಾಖಲೆಗಳು, ಕ್ರೀಡಾಪ್ರೇಮಿಗಳಿಗಷ್ಟೇ ಅಲ್ಲ,ಸಾಧನೆಯ ಹಾದಿ ಹಿಡಿಯುವ ಹಂಬಲ ಇರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುವಂಥದ್ದು.

‘800’ ಸಿನಿಮಾದಲ್ಲಿ, ತಮಿಳಿನ ಯುವನಟ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಹಿಮಾ ನಂಬಿಯತಾರ್, ನಾಸರ್, ಆರುಲ್‌ದಾಸ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಜೀವತುಂಬುವ ಅವಕಾಶ ಸಿಕ್ಕಿರುವುದು ಮಧುರ್ ಮಿತ್ತಲ್ ಅವರಿಗೆ ಸಾಕಷ್ಟು ಖುಷಿಕೊಟ್ಟಿದೆ. ತಮ್ಮ ಸಿನಿಮಾ JioCinemaದಲ್ಲಿ ಪ್ರೀಮಿಯರ್ ಆಗುತ್ತಿರುವ ಕುರಿತೂ ಅವರು ಅಷ್ಟೇ ಎಕ್ಸೈಟ್ ಆಗಿದ್ದಾರೆ.


‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್‌ ಅಭಿಮಾನಿಯಾಗಿದ್ದವನು. ಮುರಳೀಧರನ್ ಅವರ ಅಮೋಘ ಆಟವನ್ನು ನೋಡುತ್ತಲೇ ಬೆಳೆದವನು. ಈಗ ಅವರದ್ದೇ ಪಾತ್ರಕ್ಕೆ ತೆರೆಯ ಮೇಲೆ ಜೀವ ತುಂಬುವ ಅವಕಾಶ ಸಿಕ್ಕಿರುವುದು ನಿಜಕ್ಕೂ ನನಗೆ ಸಂದ ಬಹುದೊಡ್ಡ ಸಮ್ಮಾನ. ಈ ಪಾತ್ರಕ್ಕೆ ಗಟ್ಟಿತನವಿದೆ. ಇದೊಂದು ಸತತ ಪರಿಶ್ರಮ ಮತ್ತು ಬದ್ಧತೆಯ ಬದುಕನ್ನು ಬದುಕಿದ ವ್ಯಕ್ತಿಯ ಪಾತ್ರ. ಒಬ್ಬ ಕ್ರಿಕೆಟರ್.

ಆಗಿ ಮುರಳೀಧರನ್ ಕೋಟ್ಯಂತರ ಜನರನ್ನು ಪ್ರಭಾವಿಸಿದ್ದಾರೆ. ಇಂಥ ಸಾಧಕನ ಬದುಕನ್ನು ಜನರಿಗೆ
ಪರಿಚಯಿಸುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ‘800’ ತುಂಬ ಪರಿಣಾಮಕಾರಿಯಾಗಿ ಮಾಡಿದೆ. ಈಗ ಈ ಸಿನಿಮಾ JioCinemaದಲ್ಲಿ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬ ಖುಷಿಯ ಸಂಗತಿ’ ಎನ್ನುತ್ತಾರೆ ನಟ ಮಧುರ್ ಮಿತ್ತಲ್.

JioCinema ಒಟಿಟಿ ವೇದಿಕೆಯ ಮೂಲಕ ತಮ್ಮ ಜೀವನವನ್ನಾಧರಿಸಿದ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವುದು ಮುತ್ತಯ್ಯ ಮುರಳೀಧರನ್ ಅವರನ್ನೂ ರೋಮಾಂಚಿತಗೊಳಿಸಿದೆ. ‘ನನ್ನ ಬದುಕಿನ ಕಥೆ, ಸ್ಫೂರ್ತಿದಾಯಕ ಸಿನಿಮಾ ಆಗುತ್ತಿರುವುದು ನಿಜಕ್ಕೂ ನನ್ನಲ್ಲಿ ವಿನೀತಭಾವ ಹುಟ್ಟಿಸಿದೆ. ಇದಕ್ಕೆ ಕಾರಣರಾದವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಸಿನಿಮಾಗೆ ತುಂಬ ಒಳ್ಳೆಯ ಪ್ರತಿಸ್ಪಂದನ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿರುವ ಅಸಂಖ್ಯ ಯವ ಪ್ರತಿಭಾವಂತರಿಗೆ ಈ ಸಿನಿಮಾ ಸ್ಫೂರ್ತಿ ನೀಡಲಿ ಎಂದು ನಾನು ಹಾರೈಸುತ್ತೇನೆ. ನನ್ನ ಪಾಲಿಗೆ ಕ್ರಿಕೆಟ್‌ ಎನ್ನುವುದು ಬದುಕಿನ ಕ್ರಮವೇ ಆಗಿತ್ತು. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಂದ ದೊಡ್ಡ ಗೌರವ’’ ಎಂದು ಮುರಳೀಧರನ್‌ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ದಂತಕಥೆಯಾದ ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ, ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಎಕ್ಸ್‌ಕ್ಲ್ಯೂಸಿವ್ ಆಗಿ ವೀಕ್ಷಿಸಿ, JioCinemaದಲ್ಲಿ!

Categories
ಸಿನಿ ಸುದ್ದಿ

ಸಲಾರ್ ಟ್ರೇಲರ್ ಬಂತು: ಆ್ಯಕ್ಷನ್‍, ಥ್ರಿಲ್‍, ಕ್ರೋಧ ಎಲ್ಲವೂ ದುಪ್ಪಟ್ಟು

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಸಲಾರ್: ಪಾರ್ಟ್ 1: ಸೀಸ್‍ಫೈರ್’ ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ, ಟ್ರೇಲರ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಎಲ್ಲರಲ್ಲೂ ಇತ್ತು. ಪ್ರೇಕ್ಷಕರು ಚಿತ್ರದ ಬಗ್ಗೆ ಇಟ್ಟ ನಂಬಿಕೆಯನ್ನು ಚಿತ್ರತಂಡ ಉಳಿಸಿಕೊಂಡಿದೆ. ಶುಕ್ರವಾರ ರಾತ್ರಿ 07:19ಕ್ಕೆ ‘ಸಲಾರ್: ಪಾರ್ಟ್ 1: ಸೀಸ್‍ಫೈರ್’ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.


‘ಸಲಾರ್: ಪಾರ್ಟ್ 1: ಸೀಸ್‍ಫೈರ್’ ಚಿತ್ರದ ಟೀಸರ್ ನೋಡಿ ಪ್ರೇಕ್ಷಕರು ಏನು ಊಹಿಸಿದ್ದರೋ, ಅದಕ್ಕಿಂತ ದುಪ್ಪಟ್ಟಾದ ಆ್ಯಕ್ಷನ್‍, ಥ್ರಿಲ್‍ ಮತ್ತು ಕ್ರೋಧ ಈ ಟ್ರೇಲರ್ ನಲ್ಲಿದ್ದು, ‘ಸಲಾರ್’ ಜಗತ್ತನ್ನು ಮತ್ತು ಅಲ್ಲಿನ ಪಾತ್ರಧಾರಿಗಳನ್ನು ಪರಿಚಯಿಸುವುದರ ಜೊತೆಗೆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚುವಂತೆ ಮಾಡಿದೆ. ಆ್ಯಕ್ಷನ್‍ ಮತ್ತು ಮಾಸ್ ಹೀರೋ ಆಗಿ ಜನಪ್ರಿಯರಾಗಿರುವ ಪ್ರಭಾಸ್‍, ಈ ಚಿತ್ರದಲ್ಲಿ ಇನ್ನಷ್ಟು ಮಾಸ್‍ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಇಡೀ ಚಿತ್ರವೂ ಸಖತ್‍ ಮಾಸ್‍ ಚಿತ್ರವಾಗಿ ಹೊರಹೊಮ್ಮಿದೆ.


ಭಾರತೀಯ ಚಿತ್ರರಂಗದ ಮೂರು ಜನಪ್ರಿಯ ಹೆಸರುಗಳಾದ ಹೊಂಬಾಳೆ ಫಿಲಂಸ್‍, ಪ್ರಶಾಂತ್‍ ನೀಲ್‍ ಮತ್ತು ಪ್ರಭಾಸ್‍ ಒಟ್ಟಾಗಿ ಕೈಜೋಡಿಸಿದರೆ ಏನಾಗಬಹುದೋ ಅದೇ ‘ಸಲಾರ್’ ಚಿತ್ರದಲ್ಲೂ ಆಗಿದೆ. ಇದೊಂದು ಅದ್ಭುತ ದೃಶ್ಯವೈಭವವಾಗಿದ್ದು, ಅತೀ ದೊಡ್ಡ ಆ್ಯಕ್ಷನ್‍ ಚಿತ್ರವಾಗಿ ಹೊರಹೊಮ್ಮಿದೆ.
‘ಸಲಾರ್’ ಚಿತ್ರದಲ್ಲಿ ಪ್ರಭಾಸ್‍, ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್‍ ಕಿರಗಂದೂರು ನಿರ್ಮಿಸಿದ್ದಾರೆ. ಡಿ.22ರಂದು ‘ಸಲಾರ್: ಪಾರ್ಟ್ 1: ಸೀಸ್‍ಫೈರ್’ ಜಗತ್ತಿನಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

Categories
ಸಿನಿ ಸುದ್ದಿ

ಡಂಕಿ ಡ್ರಾಪ್-3 : ಶಾರುಖ್ ಹಾಗು ಸ್ನೇಹಿತರ ಎಮೋಷನಲ್ ಪಯಣದ ಹಾಡು ಬಂತು

ಶಾರುಖ್ ಖಾನ್ ಹಾಗೂ ರಾಜ್‌ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಡಂಕಿ..ಇದೇ 21ರಂದು ವರ್ಲ್ಡ್ ವೈಡ್ ಚಿತ್ರ ಬಿಡುಗಡೆಯಾಗ್ತಿದ್ದು, ಪ್ರಚಾರ ಭರಾಟೆ ಕೂಡ ಜೋರಾಗಿದೆ. ಡಂಕಿ ಡ್ರಾಪ್-1 ವಿಡಿಯೋ ಅನಾವರಣ ಮಾಡುವ ಮೂಲಕ ಪ್ರಮೋಷನ್ ಶುರು ಮಾಡಿದ್ದ ಚಿತ್ರತಂಡವೀಗ ಡಂಕಿ ಡ್ರಾಪ್-3 ಟೈಟಲ್ ನಡಿ ಎರಡನೇ ಹಾಡನ್ನು ರಿಲೀಸ್ ಮಾಡಿದೆ.

ಡಂಕಿ ಸಿನಿಮಾದ ಲುಟ್ ಪುಟ್ ಗಯಾ ಹಾಡು ಮೋಡಿ ಮಾಡ್ತಿದೆ. ಶಾರುಖ್ ಹಾಗೂ ತಾಪ್ಸಿ ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಡಂಕಿ ಸಿನಿಮಾದ ಎಮೋಷನಲ್ ನಂಬರ್ ಬಿಡುಗಡೆಯಾಗಿದೆ. ‘ನಿಕ್ಲೆ ದ ಕಭಿ ಹಮ್ ಘರ್ ಸೆ’ ಎಂಬ ಸಾಹಿತ್ಯದ ಸಾಂಗ್ ರಿಲೀಸ್ ಆಗಿದೆ. ಜಾವೇದ್ ಅಖ್ತಾರ್ ಸಾಹಿತ್ಯ ಬರೆದಿದ್ದು, ಸೋನು ನಿಗಂ ಕಂಠ ಕುಣಿಸಿದ್ದು, ಪ್ರೀತಂ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ..

ನಾಲ್ಕು ಜನ ಸ್ನೇಹಿತರು ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದ್ದೇ ಚಿತ್ರದ ಕಥೆ. ಆ ಕಥೆಯ ಎಮೋಷನಲ್ ಪಯಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ‘3 ಇಡಿಯಟ್ಸ್’, ‘ಲಗೆ ರಹೋ ಮುನ್ನಾಭಾಯಿ’, ‘ಪಿಕೆ’, ‘ಸಂಜು’, ‘ಮುನ್ನಾಭಾಯಿ ಎಂಬಿಬಿಎಸ್’ ರೀತಿಯ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ಕುಮಾರ್ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಸೇರಿ ‘ಡಂಕಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದಲ್ಲಿ ಶಾರುಖ್ ಖಾನ್ ಗೆ ನಾಯಕಿಯಾಗಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇನ್ನೂ ಕೆಲವು ನಟರು ನಟಿಸಿದ್ದಾರೆ. ಭಾರತದಿಂದ ಅಕ್ರಮವಾಗಿ ಕೆಲ ಯುವಕರು ವಿದೇಶಕ್ಕೆ ತೆರಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 21ಕ್ಕೆ ‘ಡಂಕಿ’ ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಡಂಕಿ ಕ್ರೇಜ್: ಕಿಂಗ್ ಖಾನ್ ಸಿನಿಮಾ ನೋಡಲು ವಿದೇಶಗಳಿಂದ ಭಾರತಕ್ಕೆ ಬರ್ತಾರಂತೆ ಫ್ಯಾನ್ಸ್

ಶಾರುಖ್ ಖಾನ್ ಈ ವರ್ಷದಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ವರ್ಷಾರಂಭದಲ್ಲಿ ಬಿಡುಗಡೆಯಾದ ಪಠಾಣ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬಳಿಕ ಬಿಡುಗಡೆ ಆದ ಜವಾನ್ ಸಹ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಶಾರುಖ್ ನಟನೆಯ ಮತ್ತೊಂದು ಸಿನಿಮಾ ‘ಡಂಕಿ’ ಇದೇ ವರ್ಷ ಬಿಡುಗಡೆಗೆ ಸಜ್ಜಾಗಿದ್ದು, ಹ್ಯಾಟ್ರಿಕ್ ಬಾರಿಸಲು ಕಿಂಗ್ ಖಾನ್ ಸನ್ನದ್ಧರಾಗಿದ್ದಾರೆ.

‘ಡಂಕಿ’ ಸಿನಿಮಾ ಅಂಳದಿಂದ ಹೊರಬಂದಿರುವ ಡ್ರಾಪ್ 1 ಹಾಗೂ ಡ್ರಾಪ್ 2 ಹಿಟ್ ಆಗಿದೆ. ಇನ್ನೇನೂ ಚಿತ್ರ ತೆರೆಗೆ ಬರಲು ಕೆಲ ದಿನಗಳು ಮಾತ್ರ ಬಾಕಿ ಉಳಿದ್ದು, ಚಿತ್ರದ ಕ್ರೇಜ್ ಜೋರಾಗಿದೆ. ಯಾವ ಮಟ್ಟಕ್ಕೆ ಎಂದರೆ ಡಂಕಿ ಸಿನಿಮಾ ನೋಡಲು ವಿದೇಶಗಳಿಂದ ಭಾರತಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಆಗಮಿಸುತ್ತಿದ್ದಾರೆ. ನೇಪಾಳ, ಕೆನಡಾ, ಯುಎಸ್ ಎ, ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100ಕ್ಕೂ ಹೆಚ್ಚು ಅಭಿಮಾನಿಗಳು ಇಂಡಿಯಾಗೆ ಲ್ಯಾಂಡ್ ಆಗುತ್ತಿದ್ದಾರೆ.

‘ಡಂಕಿ’ ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ‘ಡಂಕಿ’ಗೆ ಕಥೆ ಹೆಣೆದಿದ್ದಾರೆ.

‘ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 22ಕ್ಕೆ ‘ಡಂಕಿ’ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಬ್ರಹ್ಮ ರಾಕ್ಷಸ ಟೀಸರ್ ಬಂತು: ಎಲ್ಲೆಡೆ ಸಖತ್ ರೆಸ್ಪಾನ್ಸ್: ಇದು ಕಲಿವೀರ ಹೀರೋ ಚಿತ್ರ

ಸ್ಯಾಂಡಲ್ ವುಡ್ ಈಗೀಗ ಹೊಸಬರ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಹೊಸಬರ ಚಿತ್ರಗಳಲ್ಲಿ ಹೊಸತನದ ತಾಂತ್ರಿಕತೆಯ ಸ್ಪರ್ಶವಿರುತ್ತದೆ. ಅಂತಹ ಸಿನಿಮಾಗಳ ಸಾಲಿಗೆ ಸೇರಲಿರುವ ಮೊತ್ತೊಂದು ಚಿತ್ರವೇ ಬ್ರಹ್ಮರಾಕ್ಷಸ. ಒಬ್ಬ ಲೈಟ್‌ಮ್ಯಾನ್ ಆಗಿ ಫಿಲಂ ಇಂಡಸ್ಟ್ರಿಗೆ ಬಂದು ಹಲವಾರು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್.ವಿ. ಮೊದಲ ಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ ಬ್ರಹ್ಮರಾಕ್ಷಸ. ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ. ಶ್ರೀನಿವಾಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಂಕುಶ್ ಏಕಲವ್ಯ, ಪಲ್ಲವಿಗೌಡ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಮತೊಂದು ವಿಶಿಷ್ಠ ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಮೆಚ್ಚುಗೆ ಪಡೆದಿದೆ.

ನಿರ್ಮಾಪಕ ಶ್ರೀನಿವಾಸ ಮಾತನಾಡಿ,
ನನ್ನ‌ ಮೊದಲ ಚಿತ್ರ ಕಲಿವೀರ. ಮೀಡಿಯಾದವರ ಮಾತು ಮೀರಿ ಅದನ್ನು ರಾಂಗ್ ಟೈಂನಲ್ಲಿ ರಿಲೀಸ್ ಮಾಡಿದ್ದೆ. ಇದು ಹಾಗಾಗಲ್ಲ. ನೂರು ಪಟ್ಟು ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್ ಇದೆ. ಇದರಲ್ಲಿ 5 ಹಾಡುಗಳಿವೆ. ಕನ್ನಡ ಜನ ಚಿತ್ರವನ್ನು ಕೈ ಹಿಡಿಯುವರೆಂಬ ನಂಬಿಕೆಯಿದೆ. ಹೊಸಬರು ಗೆದ್ದರೆ ಇನ್ನೊಂದಷ್ಟು ಸಿನಿಮಾಗಳು ಬರುತ್ತವೆ ಎಂದರು.

ನಾಯಕನ ತಾಯಿಯಾಗಿ ನಟಿಸಿರುವ ಭವ್ಯ ಮಾತನಾಡಿ ನಾನು ಚಿಕ್ಕ ಹೀರೋಗೆ ತಾಯಿಯ ಪಾತ್ರ ಮಾಡಿದ್ದೇನೆ. ನಿರ್ದೇಶಕ ಶಂಕರ್ ಎಲ್ಲಾ ವಿಭಾಗದಲ್ಲಿ ಪರಿಣತಿ ಪಡೆದು ನಿರ್ದೇಶಕನಾಗಿದ್ದಾರೆ. ಏಕಲವ್ಯ ತುಂಬಾ ಪ್ರತಿಭಾವಂತ, ಚಿತ್ರದ ಮ್ಯೂಸಿಕ್ ಕ್ಯಾಮೆರಾ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದರು.
ನಂತರ ವೈಜನಾಥ್ ಬಿರಾದಾರ್ ಮಾತನಾಡಿ ಇದೊಂದು ಡಿಫರೆಂಟ್ ಕ್ಯಾರೆಕ್ಟರ್, ೩೦ ವರ್ಷ ಆದಮೇಲೆ ಮೊದಲಬಾರಿಗೆ ನನ್ನ ದಾರಿಬಿಟ್ಟು ಮಾಡಿದ ಚಿತ್ರ ಎಂದು ಹೇಳಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಸಿನಿಮಾ ಇಷ್ಟು ಚೆನ್ನಾಗಿ ಬರಲು ನಿರ್ಮಾಪಕರೇ ಕಾರಣ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ. ಏಕಲವ್ಯ ಪರ್ ಫಾರ್ಮನ್ಸ್ ನೋಡಿ ಜಾಕಿಚಾನ್ ನೆನಪಾದರು ಎಂದು ಹೊಗಳಿದರು.

ಏಕಲವ್ಯ ಮಾತನಾಡಿ ಇದು 80-90ರ ದಶಕದಲ್ಲಿ ನಡೆವಂಥ ಕಥೆ. ಕಲಿವೀರ ಮಾಡುವಾಗಲೇ ಶಂಕರ್ ಪರಿಚಯವಾದರು. ನಾನೇ ನಿರ್ಮಾಪಕರಿಗೆ ಪರಿಚಯಿಸಿದೆ. ನಾವೆಷ್ಟೇ ಕಷ್ಟಪಟ್ಟಿದ್ದರೂ ತೆರೆಮೇಲೆ ನೋಡಿದಾಗ ಅದೆಲ್ಲ ಮರೆತುಹೋಗುತ್ತದೆ ಎಂದು ಭಾವುಕರಾದರು.

ಪಲ್ಲವಿಗೌಡ ಮಾತನಾಡಿ ಇಡೀ ಸಿನಿಮಾ ರಾತ್ರಿಯಲ್ಲೇ ನಡೆಯುತ್ತೆ. ಅಂಕುಷ್ ಗರ್ಲ್ ಫ್ರೆಂಡ್ ಆಗಿ, ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.
ನಿರ್ದೇಶಕ ಶಂಕರ್ ಮಾತನಾಡಿ ನಾನು ಸಿನಿಮಾಗೆ ಬರುತ್ತೇನೆ ಅಂದುಕೊಂಡೇ ಇರಲಿಲ್ಲ.
ಬಡತನದಲ್ಲೇ ಬೆಳೆದವನು. ೩ ಕಿರುಚಿತ್ರಗಳನ್ನು ಮಾಡಲು ನನ್ನ ತಾಯಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.


ಬ್ರಹ್ಮರಾಕ್ಷಸ 80-90 ಸಮಯದಲ್ಲಿ ನಡೆಯುವ ಒಂದು ರಿವೆಂಜ್ ಸ್ಟೋರಿಯಾಗಿದ್ದು, ಜೊತೆಗೊಂದು ಮೆಸೇಜ್ ಕೂಡ ಇದೆ. 3 ಜನ ಸಮಾಜಕ್ಕೆ ಒಳ್ಳೆಯದು ಮಾಡಲೆಂದು ಹೊರಟಾಗ ಏನೋ ಒಂದು ಘಟನೆ ನಡೆಯುತ್ತದೆ, ಇಲ್ಲಿ ನಾಯಕ ಹಾಗೂ ಬಿರಾದಾರ್ ಮಾವ ಅಳಿಯನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಚಿತ್ರದ ೯೦ರಷ್ಟು ಭಾವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದ್ದು, ಬಹುತೇಕ ಕಥೆ ಮಳೆಯಲ್ಲೇ ನಡೆಯುತ್ತದೆ, ಅನಿರುದ್ದ ಅವರ ಕ್ಯಾಮೆರಾವರ್ಕ್ ಈ ಚಿತ್ರದಲ್ಲಿದ್ದು, ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.


ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ. ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ,

Categories
ಸಿನಿ ಸುದ್ದಿ

ನಾನು ಮತ್ತು ಗುಂಡ 2 ಟೈಟಲ್ ಟೀಸರ್ ಬಂತು: ರಿಲೀಸ್ ಮಾಡಿ ಶುಭ ಹಾರೈಸಿದ ಧ್ರುವ ಸರ್ಜಾ

ನಾಯಿ ಹಾಗೂ ಅದರ ಮಾಲೀಕ ಗೋವಿಂದೇಗೌಡನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ‘ನಾನು ಮತ್ತು ಗುಂಡ’ ಚಿತ್ರವು ಎರಡು ವರ್ಷಗಳ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ಅಭಿನಯಿಸಿದ್ದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾಗಿ “ನಾನು ಮತ್ತು ಗುಂಡ -2” ತಯಾರಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ.
ಮೊದಲ ಭಾಗದಲ್ಲಿ ಮರಣ ಹೊಂದಿದ್ದ ಮಾಲೀಕನಿಗೆ ಇಲ್ಲಿ ಪುನರ್ಜನ್ಮವಾಗಿರುತ್ತದೆ.

ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದ್ದು, ಬುಧವಾರ ಸಂಜೆ ಈ ಚಿತ್ರದ ಟೈಟಲ್ ಟೀಸರನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಘು ಹಾಸನ್ ಮಾತನಾಡುತ್ತ ಈ ಚಿತ್ರದಲ್ಲಿ ಸಿಂಬನ ಮಗ ನಟಿಸುತ್ತಿದ್ದಾನೆ. ಸಿಂಬು ನಾಲ್ಕು ದಿನವಷ್ಟೇ ಶೂಟಿಂಗ್ ನಲ್ಲಿ ಭಾಗವಹಿಸಿ ನಿಧನ ಹೊಂದಿದ. ಈಗ ಅವನ ಮಗ ಸಿಂಬ ನಟಿಸುತ್ತಿದ್ದಾನೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಮೊದಲಭಾಗ ಮಾಡುವಾಗಲೇ 2ರ ಕಥೆ ರೆಡಿ ಮಾಡಿಕೊಂಡಿದ್ದೆ.

ಸೋಷಿಯಲ್ ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ 50 ದಿನಗಳ ಶೂಟಿಂಗ್ ನಡೆಸಲಾಗಿದ್ದು, ಊಟಿ ಭಾಗದ‌ 20 ದಿನದ ಚಿತ್ರೀಕರಣವಷ್ಟೇ ಬಾಕಿಯಿದೆ. ನಾನು ಪಾತ್ರವನ್ನು ಸದ್ಯದಲ್ಲೇ ರಿವೀಲ್ ಮಾಡುತ್ತೇವೆ.

ಕಳೆದಬಾರಿ ಫಂಡಿಂಗ್ ಕೊರತೆಯಿಂದ ಹೆಚ್ಚು ಪ್ರಚಾರ ಮಾಡಲಾಗಿರಲಿಲ್ಲ, ಈಗ ಆರಂಭದಿಂದಲೇ ಪ್ರೊಮೋಷನ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಧ್ರುವ ಸರ್ಜ ಮಾತನಾಡಿ ನಾನು ಮತ್ತು ಗುಂಡ ನನಗೆ ಮತ್ತು ನನ್ನ ಪತ್ನಿಗೆ ತುಂಬಾ ಇಷ್ಟವಾಗಿತ್ತು. ಅದರ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಈ ಟೈಟಲ್ ಟೀಸರ್ ತುಂಬಾ ಚನ್ನಾಗಿ ಬಂದಿದೆ. ಯುವ ಪ್ರತಿಭೆಗಳಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಅಂತವರು ಬೆಳೆಯುತ್ತಾರೆ ಎಂದು ಹೇಳಿದರು.
ಸಂಭಾಷಣೆ ಸಾಹಿತ್ಯ ಬರೆದ ರೋಹಿತ್ ರಮನ್ ಮಾತನಾಡಿ ಮೊದಲ ಭಾಗದಲ್ಲೂ ನಾನೇ ಸಾಹಿತ್ಯ ಬರೆದಿದ್ದೆ. ನಾಯಿ ಇಟ್ಟುಕೊಂಡು ಸಿನಿಮಾ ಮಾಡೋದು ದೊಡ್ಡ ಚಾಲೆಂಜ್, ಅಂತಾದ್ರಲ್ಲಿ ರಘು ಎರಡನೇ ಭಾಗವನ್ನೂ ಮಾಡ್ತಿದ್ದಾರೆ ಎಂದರು.


ಹಿನ್ನೆಲೆ ಸಂಗೀತ ನೀಡಿದ ರುತ್ವಿಕ್ ಮುರಳೀಧರ್ ಮಾತನಾಡಿ ಟೀಸರ್ ಎಲ್ಲರಿಗೂ ಇಷ್ಟವಾಗುತ್ತೆ ಎಂದರು.
ಛಾಯಾಗ್ರಹಣ ನಿರ್ವಹಿಸಿದ ತನ್ವಿಕ್ ಮಾತನಾಡಿ ಹಿಂದೆ ದಿಲ್ ಮಾರ್ ಚಿತ್ರಕ್ಕೆ ಕ್ಯಾಮೆರಾ ಮಾಡಿದ್ದೆ. ತಕ್ಷಣ ಒಪ್ಪಿಕೊಂಡು ಮಾಡಿದ ಚಿತ್ರವಿದು ಎಂದರು.

ಈ ಚಿತ್ರದಲ್ಲಿ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಅಭಿನಯಿಸಿದೆ. ಸಿಂಬು ಈಗಾಗಲೇ ಅವನು ಮತ್ತು ಶ್ರಾವಣಿ ಎಂಬ ಧಾರಾವಾಹಿಯಲ್ಲೂ ನಟಿಸುತ್ತಿದೆ.
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನ, ನವೀನ್ ಅವರ ಸೌಂಡ್ ಡಿಸೈನ್ ಇದೆ.

Categories
ಸಿನಿ ಸುದ್ದಿ

ದಿ ಗೋಟ್ ಲೈಫ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್: ಏಪ್ರಿಲ್ 10ಕ್ಕೆ ಪ್ರೇಕ್ಷಕರ ಮುಂದೆ ಪೃಥ್ವಿರಾಜ್ ಸುಕುಮಾರನ್ ಚಿತ್ರ

ಪೃಥ್ವಿ ರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್, ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾಗೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. 2024ರ ಏಪ್ರಿಲ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ.


ದಿ ಗೋಟ್ ಲೈಫ್ ಚಿತ್ರದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

ಬ್ಲೆಸ್ಸಿ ನಿರ್ದೇಶನದ ಈ ಸಿನಿಮಾವನ್ಬು ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದೆ. ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್.ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ.

ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ.

ಅ‌ಂದಹಾಗೆ ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಕಾದಂಬರಿ ‘ಆಡು ಜೀವಿತಂ’ ಆಧರಿಸಿದೆ, ಇದು ವಿದೇಶಿ ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ.

ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಾದಂಬರಿ 90 ರ ದಶಕದಲ್ಲಿ ಅದೃಷ್ಟ ಹುಡುಕಿ ವಲಸೆ ಬಂದ ನಜೀಬ್ ಎಂಬ ಯುವಕನ ನೈಜ ಕಥೆಯನ್ನು ಹೊಂದಿದೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಬ್ಲೆಸ್ಸಿ, “ದಿ ಗೋಟ್ ಲೈಫ್ ಎಲ್ಲೆಡೆ ಸಲ್ಲುವ ಕಥೆ. ನಿರೂಪಣೆ ಸಲುವಾಗಿ ಸಾಜಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ಕಾದಂಬರಿಯನ್ನು ಸಿನಿಮಾ ಮಾಡುವಾಗ ಅನೇಕ ಸವಾಲು ಎದುರಾದವು. ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ.

ಅಂದಹಾಗೆ, ಗೋಟ್ ಲೈಫ್ ಏಪ್ರಿಲ್ 10 ರಂದು ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಘೋಸ್ಟ್ ಸಂಭ್ರಮ! ಜೀ 5ನಲ್ಲಿ ಶಿವಣ್ಣ ಸಿನಿಮಾ ಹಂಗಾಮ

ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಮೆಚ್ಚುಗೆ ಪಡೆದಿರೋದು ಗೊತ್ತೇ ಇದೆ. ಆ ಸಿನಿಮಾ ಜೀ 5ನಲ್ಲಿ ಪ್ರಸಾರವಾಗುತ್ತಿದ್ದು, ಆ ಯಶಸ್ಸಿನ ಮಹಾ ಸಂಭ್ರಮನ್ನು ಜೀ5 ಆಚರಿಸುತ್ತಿದೆ.

ಅಂದಹಾಗೆ ಶಿವಣ್ಣ ಅವರ ಅಭಿಮಾನಿಗಳು ಆಟೋಗೆ ಘೋಸ್ಟ್ ಪೋಸ್ಟರ್ ಅಂಟಿಸಿ ಪ್ರಮೋಷನ್ ಮಾಡಿ ಸಂಭ್ರಮಿಸಿದ್ದಾರೆ.

ಝೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸುತ್ತಿರುವ ಘೋಸ್ಟ್ ಸಿನಿಮಾ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ.

ಘೋಸ್ಟ್ 100 ಮಿಲಿಯನ್ಸ್ ನಿಮಿಷಗಳಷ್ಟು ವೀಕ್ಷಣೆ ಕಂಡು ಹೊಸ ದಾಖಲೆ ಬರೆದಿದೆ.

Categories
ಸಿನಿ ಸುದ್ದಿ

ಬಹು ನಿರೀಕ್ಷೆಯ ಆಡು ಜೀವಿತಂ ( the goat life) ರಿಲೀಸ್ ಡೇಟ್ ನವೆಂಬರ್ 30ಕ್ಕೆ ಅನೌನ್ಸ್ : ಇದು ಬೆಸ್ಲಿ- ಪೃಥ್ವಿರಾಜ್ ಚಿತ್ರ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಹಾಗು ಪೃಥ್ವಿ ರಾಜ್ ಸುಕುಮಾರನ್, ಅಮಲಾಪಾಲ್ ಅಭಿನಯದ ಆಡು ಜೀವಿತಂ ಸಿನಿಮಾ ಬಿಡುಗಡೆ ದಿನಾಂಕವನ್ನು ನವೆಂಬರ್ 30 ರಂದು ಚಿತ್ರತಂಡ ಘೋಷಣೆ ಮಾಡಲಿದೆ.

ಬಹು ನಿರೀಕ್ಷೆ ಹುಟ್ಟಿಸಿರು ಈ ಸಿನಿಮಾದ ಪೋಸ್ಟರ್ಸ್ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿವೆ. ಈ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಸಂಗೀತ ಸ್ಪರ್ಶವಿದೆ.

ಅಂದಹಾಗೆ ಈ ಆಡು ಜೀವಿತಂ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ.
ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವತ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.

ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಈಗ ಚಿತ್ರ ತೆರೆಗೆ ಕಾಣಲು ಸಿದ್ಧವಿದ್ದು ಈ ಚಿತ್ರದ ರಿಲೀಸ್ ಡೇಟ್ ಅನ್ನು ನವೆಂಬರ್ 30ರಂದು ಚಿತ್ರತಂಡ ಪ್ರಕಟಿಸಲಿದೆ.

ಕಥೆ ಇಷ್ಟು…
ಬಹುನಿರೀಕ್ಷಿತ ಮಲಯಾಳಂ ಚಿತ್ರ ಆಡು ಜೀವಿತಂ (ಗೋಟ್ಲೈಫ್) ಬಿಡುಗಡೆಗೆ ಸಜ್ಜಾಗುತ್ತಿದೆ.
ನವೆಂಬರ್ 30 ರ ಸಂಜೆ 4 ಗಂಟೆಗೆ ಬಿಡುಗಡೆ ದಿನ ಘೋಷಣೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
ಈ ಕುರಿತು ನಟ ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ಆಡುಜೀವಿತಂ 2008 ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು.
ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತಾರೆ.

ಪೃಥ್ವಿರಾಜ್ ನಜೀಬ್ ಪಾತ್ರ ನಿರ್ವಹಿಸಿದ್ದಾರೆ. ಮರುಭೂಮಿಯಲ್ಲಿ ಆಡುಗಳ ಹಿಂಡಿನ ಮಧ್ಯೆ ಪೃಥ್ವಿರಾಜ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲೆಡೆ ಮೆಚ್ಚುಗೆ ಪಡೆದಿದೆ.

ಅಂದಹಾಗೆ, ಚಿತ್ರದ ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು‌ ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ‌ ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುದು ವಿಶೇಷ.
ನಿರ್ಮಾಣ ಸಂಸ್ಥೆ ಕೂಡ ಸಾಕಷ್ಟು ಸಮಸ್ಯೆಗಳ ನಡುವೆ ಸಿನಿಮಾ ನಿರ್ಮಿಸಿದೆ. ಈ ವರ್ಷದ ಆರಂಭದಲ್ಲಿ, ಚಿತ್ರದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿತ್ತು.

ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್‌ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಕೆಲಸವಿದೆ.

error: Content is protected !!