ನಟ್ವರ್ ಲಾಲ್ ಎಂಬ ಕ್ರೈಮ್ ಲೋಕದ ರೋಚ ‘ಕಥೆ’!

ಚಿತ್ರ ವಿಮರ್ಶೆ
ರೇಟಿಂಗ್ 3.5/5

ನಿರ್ದೇಶನ : ಲವ.ವಿ
ನಿರ್ಮಾಣ : ತನುಷ್ ಶಿವಣ್ಣ
ತಾರಾಗಣ: ತನುಷ್, ಸೋನಾಲ್ ಮೊಂಟೇರೊ, ರಾಜೇಶ್ ನಟರಂಗ, ನಾಗಭೂಷಣ್, ಕಾರಂತ್ ಇತರರು.

ಅವನು ರಂಗ ಅಲಿಯಾಸ್ ನಟ್ವರ್ ಲಾಲ್! ಹೆಸರು ಕೇಳಿದರೆ ಮಹಾವಂಚಕನ ಲೈಫ್ ಸ್ಟೋರಿ ಇರಬಹುದು ಅನಿಸುತ್ತೆ. ಆದರೆ, ಈ ನಟ್ವರ್ ಲಾಲ್ ಒಳಗಿನ ಹೂರಣವೇ ಬೇರೆ. ಹಾಗಾದರೆ ಅವನ ವಂಚನೆ ಏನು, ಯಾಕೆ ಎಂಬ ಕುತೂಹಲವಿದ್ದರೆ , ಒಮ್ಮೆ‌ ಸಿನಿಮಾ ನೋಡಿ.

ಈಗ ಡಿಜಿಟಲ್ ಯುಗ. ಮೋಸ ವಂಚನೆ ಕಾಮನ್. ಅದರಂತೆ ಇಲ್ಲೂ ಅದೇ ಹೈಲೆಟ್. ಆದರೆ ಇಲ್ಲಿರೋ ನಟ್ವರ್ ಲಾಲ್ ಯಾಕೆ ವಂಚನೆ ಮಾಡ್ತಾನೆ ಅನ್ನೋದೇ ವಿಶೇಷ. ಈಗ ಜಾಲತಾಣ ಎಷ್ಟೆಲ್ಲ ಪವರ್ ಅನ್ನೋದ್ದಕ್ಕೆ ಉದಾಹರಣೆಯಂತಿದೆ ಈ ಚಿತ್ರ.

ಇದೊಂದು ಬುದ್ಧಿವಂತ ಯುವಕನ ಚುರುಕುತನದ ಕಥೆ. ಇಲ್ಲಿ ತೆಳುವಾದ, ನವಿರಾದ ಪ್ರೀತಿ ಇದೆ. ದ್ವೇಷ ಇದೆ, ರೋಷವಿದೆ, ಅನ್ಯಾಯ ವಿರುದ್ಧದ ಧ್ವನಿ ಇದೆ, ಮೋಸಗಾರರ ಮೇಲಿನ ಸಿಟ್ಟಿದೆ. ಆ ಎಲ್ಲದರ ವಿರುದ್ಧ ರೋಚಕವೆನಿಸುವಂತೆ ಓಡಾಡುವ ಮತ್ತು ಹೋರಾಡುವ ಹೀರೋನ ಬುದ್ಧಿವಂತಿಕೆ ಇದೆ. ಅದೇ ಸಿನಿಮಾದ ಟ್ವಿಸ್ಟು ಮತ್ತು ಟೆಸ್ಟು.

ಸಿನಿಮಾದ ಆರಂಭದಲ್ಲೊಂದು ಮಹಿಳೆಯ ಮರ್ಡರ್ ಆಗುತ್ತೆ. ಅದು ಗೌರಿಲಂಕೇಶ್ ಅವರ ಶೂಟೌಟ್ ಪ್ರಕರಣ ನೆನಪಿಸುತ್ತದೆ. ಆದರೆ, ಅದೇ ಸಿನಿಮಾ ವೇಗದ ಜೊತೆ ಕುತೂಹಲ ಕಾಯ್ದಿರಿಸುತ್ತೆ. ಆ ಕೊಲೆಯಾಗಿದ್ದು ಯಾಕೆ, ಅವಳು ಯಾರು ಅನ್ನೋ ಪ್ರಶ್ನೆಗೆ ಕ್ಲೈಮ್ಯಾಕ್ಸ್ ಉತ್ತರ ಕೊಡುತ್ತೆ. ಅಲ್ಲಿವರೆಗೆ ಬರೀ ಕುತೂಹಲ.

ಇಲ್ಲೂ ಬಿಟ್ ಕಾಯಿನ್ ದಂಧೆ ಸದ್ದು ಮಾಡುತ್ತೆ. ವೈದ್ಯಲೋಕದ ಕರಾಳತನ ಕಾಣುತ್ತೆ. ಅದರೊಂದಿಗೆ ಸಮಾಜದೊಳಗಿನ ಹಲವು ದಂಧೆಗಳು ಕಳಚಿ ಬೀಳುತ್ತವೆ. ಇವೆಲ್ಲದರ ವಿರುದ್ಧ ಹೀರೋ ಹೋರಾಡುವ ಬೆಳಕು ಪ್ರಜ್ವಲಿಸುತ್ತೆ.

ಅಂದಹಾಗೆ ಇಲ್ಲಿ ಹ್ಯಾಕರ್ ಕಥೆ ತೆರೆದುಕೊಳ್ಳುತ್ತಾದರೂ, ಒಂದೊಂದೇ ಪ್ರಕರಣಗಳ ಮುಖವಾಡವನ್ನು ಹೀರೋ ಕಳಚುತ್ತಾ ಹೋಗುತ್ತಾನೆ. ವ್ಯವಸ್ಥೆಯ ವಿರುದ್ಧ ಕೂತಲ್ಲೇ ಸಾಮಾಜಿಕ ಜಾಲತಾಣ ಮೂಲಕ ಹೋರಾಡುತ್ತಾನೆ. ಹಾಗಾದರೆ ಅವನು ವಂಚಕನೋ, ಒಳ್ಳೆಯವನೋ ಎಂಬ ಕುತೂಹಲದಲ್ಲೇ ಸಿನಿಮಾ ಸಾಗುತ್ತಾದರೂ, ಒಂದೊಂದು ತಿರುವು ಸಿನಿಮಾ ವೇಗ ಹೆಚ್ಚಿಸುತ್ತಾ ಹೋಗುತ್ತದೆ.

ಇಲ್ಲಿ ಮುಖ್ಯವಾಗಿ ವಂಚಕ ಮತ್ತು ಪೊಲೀಸ್ ಸುತ್ತ ಕಥೆಯ ರೋಚಕತೆ ಹೆಚ್ಚಿಸುತ್ತೆ. ತನಿಖೆ ಸಾಗುವ ಪರಿಯೇ ಸಿನಿಮಾದ ಗಟ್ಟಿತನಕ್ಕೆ ಸಾಕ್ಷಿಯಾಗುತ್ತೆ.

ಹೊಡಿಬಡಿ ಸಿನಿಮಾಗಳ ಜೊತೆಗೆ ಈ ರೀತಿಯ ಟ್ಚಿಸ್ಟ್ ಕಥೆಗಳು ಹೊಸತನಕ್ಕೆ ಸಾಥ್ ಕೊಡುತ್ತವೆ. ಇಲ್ಲಿ ಮುಖ್ಯವಾಗಿ ಆನ್ಲೈನ್ ಬಳಸಿಕೊಂಡು ಹೇಗೆಲ್ಲಾ ಉಳ್ಳವರು ಮತ್ತು ವಂಚಕರನ್ನು ಬಗ್ಗು ಬಡಿಯಬಹುದು ಅನ್ನೋದನ್ನ ತೋರಿಸಿದರೂ, ಆ ನಾಯಕನ ಒಳಗೊಬ್ಬ ಸಮಾಜ ಪರಿವರ್ತನೆಯ ಮನಸ್ಸಿದೆ ಅದೇ ಸಿನಿಮಾದ ವಿಶೇಷ.

ಮೊದಲರ್ಧ ಕಥೆ ತೆರೆದುಕೊಂಡರೆ, ದ್ವಿತಿಯಾರ್ಧ ಕುತೂಹಲದ ಜೊತೆ ಸಾಗುತ್ತೆ. ಇಲ್ಲಿ ನಿರ್ದೇಶಕರ ನಿರೂಪಣೆ ಶೈಲಿ ಚೆನ್ನಾಗಿದೆ. ಕಥೆ ಸರಳವಾಗಿದ್ದರೂ, ಚಿತ್ರಕಥೆಯಲ್ಲಿ ಹಿಡಿತವಿದೆ. ಎಲ್ಲೋ ಒಂದು ಕಡೆ ಕಥೆ ಜಾಡು ಬೇರೆಡೆ ಹೋಗುತ್ತೆ ಎನ್ನುವಷ್ಟರಲ್ಲಿ ಬರುವ ಕೆಲ ಟ್ವಿಸ್ಟುಗಳು ಮತ್ತಷ್ಟು ಕುತೂಹಲ ಕೆರಳಿಸುತ್ತವೆ. ಮೇಕಿಂಗ್ ವಿಚಾರದಲ್ಲಿ ಸಿನಿಮಾ ಹಿಂದೆ ಬಿದ್ದಿಲ್ಲ. ತೆರೆ ಮೇಲೆ ಬಜೆಟ್ ಎದ್ದು ಕಾಣುತ್ತೆ. ಮುಖ್ಯವಾಗಿ ಸ್ಟಂಟ್ ಸಿನಿಮಾದ ಇನ್ನೊಂದು ಭಾಗ ಎನ್ನಬಹುದು.

ಡೇವಿಡ್ ಅವರ ಕ್ಯಾಮರ ಕೈಚಳಕ ಖುಷಿ ಕೊಡುತ್ತದೆ. ಧರ್ಮವಿಶ್ ಅವರ ಸಂಗೀತಕ್ಕಿನ್ನು ಧಮ್ ಇರಬೇಕಿತ್ತು. ಕತ್ತರಿ ಪ್ರಯೋಗ ವೇಗ ಹೆಚ್ಚಿಸಿದೆ.

ಯಾರು ಹೇಗೆ?

ತನುಷ್ ಶಿವಣ್ಣ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಅವರ ಬಾಡಿಲಾಂಗ್ವೇಜ್, ಡೈಲಾಗ್ ಬಿಡುವ ಪರಿ ಗಮನಸೆಳೆಯುತ್ತದೆ. ಸ್ಟಂಟ್ ವಿಚಾರದಲ್ಲಿ ಅವರು ಭಿನ್ನ ಎನಿಸುತ್ತಾರೆ. ನೋಡುಗರಿಗೆ ಪಕ್ಕಾ ವಂಚಕ ಎನಿಸಿದರೂ, ಕೊನೆಯಲ್ಲಿ ಮನಸ್ಸಿಗೆ ಇಷ್ಟವಾಗುವ ಹೀರೋ ಆಗಿಬಿಡುತ್ತಾರೆ.

ಸೋನಾಲ್ ಲ್ ತೆರೆ ಮೇಲೆ ಇರುವಷ್ಟು ಸಮಯ ಇಷ್ಟ ಆಗುತ್ತಾರೆ. ರಾಜೇಶ್ ನಟರಂಗ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದರೆ, ಸ್ನೇಹಿತನ ಪಾತ್ರದಲ್ಲಿ ನಾಗಭೂಷಣ್ ವಿಶೇಷ. ವಿಶೇಷ. ತೆರೆ ಮೇಲೆ ಶ್ರೀಧರ್, ಬಲರಾಜವಾಡಿ, ಹರಿಣಿ, ವಿಜಯ್ ಚೆಂಡೂರ್, ಸುಧೀ ಕಾಕ್ರೋಚ್, ಯಶ್ ಶೆಟ್ಟಿ ಹಾಗೂ ರಘು ರಾಮನಕೊಪ್ಪ ಪಾತ್ರಕ್ಕೆ ಮೋಸ‌ ಮಾಡಿಲ್ಲ.

Related Posts

error: Content is protected !!