Categories
ಸಿನಿ ಸುದ್ದಿ

ಕ್ಲಾಂತಗೆ ಅಜೇಯ್ ರಾವ್ ಸಾಥ್: ಇದು ಕಾಡೊಳಗಿನ ಕಥೆ: ಟ್ರೇಲರ್ ಬಂತು- ಜ.19ಕ್ಕೆ ರಿಲೀಸ್

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಕ್ಲಾಂತ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ. ಜನವರಿ 19ರಂದು ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ. ಟೀಸರ್ ಹಾಗೂ ಹಾಡಿನ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ SRV ಥಿಯೇಟರ್ ನಲ್ಲಿಂದು ನಟ ಅಜಯ್ ರಾವ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಅಜಯ್ ರಾವ್ ಮಾತನಾಡಿ, ಟ್ರೇಲರ್ ತುಂಬಾ ಆಕ್ಷನ್ ನಿಂದ ಕೂಡಿದೆ. ಹೀರೋ, ಹೀರೋಯಿನ್ ಎಲ್ಲರೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಒಂದೊಳ್ಳೆ ಪ್ರಯತ್ನ. ಯಾವುದೇ ಆಗಲಿ ಎಲ್ಲದಕ್ಕೂ ಒಂದು ಪ್ರಾರಂಭ ಅಂತಾ ಇರುತ್ತದೆ. ಪ್ರಯತ್ನ ಇರುತ್ತದೆ. ಪ್ರಯತ್ನಕ್ಕೂ, ಪ್ರಾರಂಭಕ್ಕೂ ಒಳ್ಳೆ ಉದ್ದೇಶ ಇದ್ದಾಗ ಗೆಲುವು ಸಿಗಬೇಕು ಎಂದು ಆಶಿಸಬೇಕು. ನಿರ್ದೇಶಕರು ಹಾಗೂ ಅವರ ಸಹೋದರರು ನನ್ನ ಸ್ನೇಹಿತರು. ಹೊಸಬರಿಗೆ ಆದಷ್ಟು ಪ್ರೋತ್ಸಾಹಿ ಎಂದರು.

ನಿರ್ದೇಶಕ ವೈಭವ ಪ್ರಶಾಂತ್ ಮಾತನಾಡಿ, ಕ್ಲಾಂತ ಒಂದೂವರೆ ವರ್ಷದ ಜರ್ನಿ ನನ್ನದು. ಟ್ರೇಲರ್ ಈಗ ರಿಲೀಸ್ ಮಾಡಿದ್ದೇವೆ. ಶೂಟಿಂಗ್ ಗಾಗಿ 34 ರಿಂದ 40 ದಿನ ಕಾಡಲ್ಲೇ ಇದ್ದೇವು. ಸುಬ್ರಹ್ಮಣ್ಯ, ಕುದುರೆಮುಖ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಲಾಕ್ ಡೌನ್ ಟೈಮ್ ನಲ್ಲಿಯೇ ಸ್ಕ್ರೀಪ್ಟ್ ಮಾಡಿದ್ದೇವೆ. ಕ್ಲಾಂತ ದಣಿವು, ಆಯಾಸ ಎಂದರ್ಥ. ಇದು ಸಂಸ್ಕೃತ ಶಬ್ಧ. ಈ ಮೊದಲು ವೀಕೆಂಡ್ ವಿತ್ ಲವರ್ ಎಂದು ಟೈಟಲ್ ಇಟ್ಟಿದ್ದೇವು. ಆ ಬಳಿಕ ಕ್ಲಾಂತ ಎಂದು ಬದಲಾಯಿಸಿದೆವು. ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಜನವರಿ 19ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು.

ನಟ ವಿಘ್ನೇಶ್‌ ಮಾತನಾಡಿ, ಕನ್ನಡದಲ್ಲಿ ನನ್ನದು ಮೊದಲ ಸಿನಿಮಾ. ಜ.19ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಶಾಂತ್ ಸರ್ ಮತ್ತು ನನ್ನದು ಇದು ಎರಡನೇ ಕಾಂಬಿನೇಷನ್. ‘ದಗಲ್ ಬಾಜಿಲು’ ಎಂಬ ತುಳು ಚಿತ್ರ ಮಾಡಿದ್ದೇವು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕ್ಲಾಂತ ಸಿನಿಮಾ ಒಳ್ಳೆ ಸಕ್ಸಸ್ ಸಿಗುತ್ತದೆ ಎಂಬ ಹೋಪ್ ಇದೆ. ತಂದೆ ತಾಯಿ, ಅಪ್ಪ ಅಮ್ಮ ಪ್ರತಿಯೊಬ್ಬರು ಸಿನಿಮಾ ನೋಡ್ಬೇಕು.

‘ಅನುಗ್ರಹ ಪವರ್‌ ಮೀಡಿಯಾ’ ಬ್ಯಾನರಿನಲ್ಲಿ ಉದಯ್‌ ಅಮ್ಮಣ್ಣಾಯ ಕೆ. ನಿರ್ಮಿಸಿರುವ “ಕ್ಲಾಂತ’ ಸಿನಿಮಾಕ್ಕೆ ವೈಭವ ಪ್ರಶಾಂತ್‌ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್‌, “ಕ್ಲಾಂತ’ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕಿ ಸಂಗೀತಾ ಭಟ್‌ ಅವರೊಂದಿಗೆ ಶೋಭರಾಜ್‌, ವೀಣಾ ಸುಂದರ್‌, ಸಂಗೀತಾ, ದೀಪಿಕಾ, ಪ್ರವೀಣ್‌ ಜೈನ್‌, ಸ್ವಪ್ನಾ ಶೆಟ್ಟಿಗಾರ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ಸಕ್ರಿಯರಾಗಿರುವ ವೈಭವ್ ಪ್ರಶಾಂತ್ “ಕ್ಲಾಂತ’ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾಕ್ಕೆ ಮೋಹನ್‌ ಲೋಕನಾಥನ್‌ ಛಾಯಾಗ್ರಹಣ, ಪಿ. ಆರ್‌. ಸೌಂದರ ರಾಜ್‌ ಸಂಕಲನವಿದೆ. ಈ ಹಿಂದೆ ತೆರೆಕಂಡಿದ್ದ “ದಗಲ್ ಬಾಜಿಲು” ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್ ಮತ್ತೊಮ್ಮೆ ಜೊತೆಯಾಗಿ ಕ್ಲಾಂತ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ.

ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಗುಂಡ್ಯಾ, ಕುಕ್ಕೆ ಸುಬ್ರಮಣ್ಯ, ಕಳಸ, ಮಂಗಳೂರು, ಬೆಂಗಳೂರು ಮೊದಲಾದ ಕಡೆಗಳಲ್ಲಿ “ಕ್ಲಾಂತ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಅಂಶ ಎಂದರೆ ಕೊರಗಜ್ಜ ದೇವರ ಪವಾಡವನ್ನು ಈ ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ .

ಈಗಾಗಲೇ ಇದರ ಹಾಡು ಕೂಡ ತುಳುನಾಡಿನಲ್ಲಿ ಬಿಡುಗಡೆ ಆಗಿ ಬಹಳ ಜನಪ್ರಿಯಗೊಂಡಿದೆ. ‘ದಗಲ್ ಬಾಜಿಲು’ ಎಂಬ ತುಳು ಚಿತ್ರ ಮಾಡಿ ಗೆದ್ದಿರುವ ವೈಭವ್ ಪ್ರಶಾಂತ್ ಹಾಗೂ ವಿಘ್ನೇಶ್ ಕ್ಲಾಂತ ಸಿನಿಮಾ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Categories
ಸಿನಿ ಸುದ್ದಿ

ಸ್ಯಾಂಡಲ್ ವುಡ್ ಗೆ ಸೂಟ್ ಆದ ಕಲೀಂ ಪಾಷ: ದಿ ಸೂಟ್ ಮೂಲಕ ಸಿನಿಮಾ ರಂಗಕ್ಕೆ ಬಂದ ಪ್ರತಿಭೆ

ನಟರಾಗಿ, ಗಾಯಕರಾಗಿ, ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯ ಕಲೀಮ್‍ ಪಾಷ, ಈಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅವರು ‘ದಿ ಸೂಟ್‍’ ಎನ್ನುವ ಚಿತ್ರದಲ್ಲಿ ನಟಿಸಿದ್ದು, ಮಾಲತಿ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಭಗತ್‍ ರಾಜ್‍ ನಿರ್ದೇಶನ ಮಾಡಿದ್ದಾರೆ.


ಜೀವನದ ಹಲವು ಮುಖಗಳನ್ನು ಮತ್ತು ಭಾವನೆಗಳನ್ನು ಹಿಡಿದಿಡುವ ‘ದಿ ಸೂಟ್‍’ ಚಿತ್ರದಲ್ಲಿ ಕಲೀಮ್‍ ಪಾಷ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಲೀಮ್‍ ಅವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿ ಉದಯೋನ್ಮುಖ ನಟರಿಗೆ ಮಾದರಿಯಾಗಲಿದ್ದಾರೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ.


ಚಿತ್ರರಂಗಕ್ಕೆ ಹಲವು ನಟರು ಬಂದು ಹೋಗಿದ್ದಾರೆ. ಆದರೆ, ಕೆಲವರು ಮಾತ್ರ ಇಲ್ಲಿ ನೆಲೆಯೂರುವುದಕ್ಕೆ ಸಾಧ್ಯವಾಗಿದೆ. ಅದಕ್ಕೆ ಕಾರಣ ಅಭಿನಯ. ಕಲೀಂ ಪಾಷ ಅವರ ಪಾತ್ರ ಸಹ ಚಿತ್ರದ ಒಂದು ಹೈಲೈಟ್‍ ಆಗಿದ್ದು,

ಚಿತ್ರ ನೋಡುವ ಪ್ರೇಕ್ಷಕರಿಗೆ ಅವರು ಹಲವು ದಿಗ್ಗಜ ನಟರನ್ನು ತಮ್ಮ ಅಭಿನಯದಿಂದ ನೆನಪಿಸುತ್ತಾರೆ ಎಂದು ಚಿತ್ರತಂಡದವರು ಹೇಳುತ್ತಾರೆ.
‘ದಿ ಸೂಟ್‍’ ಚಿತ್ರವು 2024ರ ಜನವರಿಯಲ್ಲಿ ಬಿಡುಗಡೆ ಆಗುತ್ತಿದೆ.

Categories
ಸಿನಿ ಸುದ್ದಿ

ಪೃಥ್ವಿ ಅಂಬಾರ್ ಈಗ ಜೂನಿ: ಕ್ಯಾರೆಕ್ಟರ್ ಟೀಸರ್ ಹೊರ ಬಂತು; ಫೆ.9ಕ್ಕೆ ರಿಲೀಸ್

ಸ್ಯಾಂಡವುಡ್ ನಲ್ಲಿ ದಿಯಾ ಸಿನಿಮಾ ಬಂದಿತ್ತು. ಈ ಚಿತ್ರದ ನಾಯಕ ಪೃಥ್ವಿ ಅಂಬಾರ್ ಅದ್ಭುತವಾಗಿಯೇ ಅಭಿನಯಿಸಿದ್ದರು. ಇದೀಗ ಅಂತಹದ್ದೆ ಪ್ರೇಮಕಥೆಯ ಹೊತ್ತುಬಂದಿರುವ ಜೂನಿ ಕ್ಯಾರೆಕ್ಟರ್ ಟೀಸರ್ ಅನಾವರಣಗೊಂಡಿದೆ. ಜೂನಿ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೇಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಸಖತ್ ಇಂಪ್ರೆಸಿವ್ ಆಗಿದೆ ಕ್ಯಾರೆಕ್ಟರ್ ಟೀಸರ್.

‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ ಜೂನಿ ಸಿನಿಮಾದಲ್ಲಿ ನಾಯಕಿ ರಿಷಿಕಾ ನಾಯಕ್ ನಟಿಸಿದ್ದಾರೆ.

‘ಜೂನಿ’ ರೋಮ್ಯಾಂಟಿಕ್ ಕಥಾಹಂದರದ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ನಡಿ ಮೋಹನ್ ಕುಮಾರ್ ಎಸ್ ಹಣ ಹಾಕಿದ್ದು, ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ‘ಜೂನಿ’ ಫೆಬ್ರವರಿ 9ಕ್ಕೆ ತೆರೆಗೆ ಬರುತ್ತಿದೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

Categories
ಸಿನಿ ಸುದ್ದಿ

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಗಣನೆ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿ. ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

ಪ್ರಶಸ್ತಿಗಳ ವಿವರ

ದಿ. ರಾಮು (ರಾಮು ಎಂಟರ್ ಪ್ರೈಸಸ್), ಹಿರಿಯ ಚಲನಚಿತ್ರ ನಿರ್ಮಾಪಕರು*
( ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ )

ಮುರಳೀಧರ ಖಜಾನೆ, ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ )

ಶ್ರೀ ಹೇಮಂತ್ ಕುಮಾರ್, ಖ್ಯಾತ ಹಿನ್ನಲೆ ಗಾಯಕರು
( ಡಾ. ರಾಜ್‌ಕುಮಾರ್ ಪ್ರಶಸ್ತಿ- ಡಾ. ರಾಜ್‌ಕುಮಾರ್ ಕುಟುಂಬದವರಿಂದ )

ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕರು
(ಯಜಮಾನ’ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ – ಭಾರತಿ ವಿಷ್ಣುವರ್ಧನ ಅವರಿಂದ )

ಜಯಲಕ್ಷ್ಮಿ ಪಿ (ದುಬೈ), ಕಲಾವಿದರು
( ಖ್ಯಾತ ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ )

ಜೋ ಕೋಸ್ಟ, ಅತ್ಯತ್ತಮ ಸಂಗೀತ ನಿರ್ದೇಶನ ( ಹೊಂದಿಸಿ ಬರೆಯಿರಿ” ಚಿತ್ರಕ್ಕಾಗಿ ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿ )

ಹೇಮಂತ್ ರಾವ್, ಅತ್ಯುತ್ತಮ ಕಥಾಲೇಖಕರು ( ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ )
( ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ.ಕೆ.ವಿ. ಜಯರಾಂ ಪ್ರಶಸ್ತಿ – ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ )

ಬಿ.ಎಸ್. ಲಿಂಗದೇವರು ಹಾಗೂ ಶರಣು ಹುಲ್ಲೂರು, ಅತ್ಯುತ್ತಮ ಸಂಭಾಷಣೆ (ವಿರಾಟಪುರದ ವಿರಾಗಿ’ *ಚಿತ್ರಕ್ಕಾಗಿ )
( ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ – ಡಾ. ಎಚ್.ಕೆ. ನರಹರಿ ಅವರಿಂದ)

ಕುಮಾರಿ ಸಿಂಧು ಶ್ರೀನಿವಾಸಮೂರ್ತಿ , (` ಆಚಾರ್ & ಕೋ’ – ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ )
( ರಂಗ ತಜ್ಞ, ಹಿರಿತೆರೆ, ಕಿರುತೆರೆ ನಿರ್ದೇಶಕ ಶ್ರೀ ಬಿ.ಸುರೇಶ್ ಪ್ರಶಸ್ತಿ)

ಡಾಲಿ ಧನಂಜಯ, (‘ಟಗರು ಪಲ್ಯ* ’ ಚಿತ್ರದ – ಸಂಬಂಜ ಅನ್ನೋದು ದೊಡ್ಡದು ಕನಾ ಗೀತರಚನೆಗಾಗಿ )
( ಹಿರಿಯ ಪತ್ರಕರ್ತರಾದ ಶ್ರೀ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ – ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಸುಂದರರಾಜ್, ಹಿರಿಯ ಪೋಷಕ ಕಲಾವಿದರು
( ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ )

ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಶ್ರೀ ಬಿ.ಎನ್. ಸುಬ್ರಹ್ಮಣ್ಯ, ಶ್ರೀ ರಕ್ಷಿತ್ ಶೆಟ್ಟಿ ಹಾಗೂ ಶ್ರೀ ಅನಿರುದ್ಧ್ ಜತಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.

Categories
ಸಿನಿ ಸುದ್ದಿ

ಬೊಂಬಾಟ್ ಸಂಭ್ರಮ: ಸಿಹಿಕಹಿ ಚಂದ್ರು ಭೋಜನಕ್ಕೆ ಸಾವಿರ ಸಂಚಿಕೆ

ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ. ಈ ಕಾರ್ಯಕ್ರಮದ ಮೂರನೇ ಆವೃತ್ತಿ ಇದೀಗ ಮುಗಿದಿದ್ದು, ಜನವರಿ 15ರಂದು ಮಕರ ಸಂಕ್ರಾಂತಿಯಂದು ನಾಲ್ಕನೇ ಆವೃತ್ತಿ ಆರಂಭವಾಗಲಿದೆ.

ಮೂರನೇ ಸೀಸನ್‍ 1000 ಕಂತುಗಳನ್ನು ಮುಗಿಸಿರುವ ಹಾಗೂ ನಾಲ್ಕನೆಯ ಆವೃತ್ತಿ ಆರಂಭವಾಗಲಿರುವ ಈ ಹೊತ್ತಿನಲ್ಲಿ ಚಂದ್ರು ಸಂಭ್ರಮದ ಸಮಾರಂಭವೊಂದನ್ನು ಆಯೋಜಿಸಿದ್ದರು. ಆಪ್ತರು, ಮಿತ್ರರು ಮತ್ತು ವಾಹಿನಿಯವರನ್ನು ಆಮಂತ್ರಿಸಿ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಿ, ಬಂದವರಿಗೆ “ಬೊಂಬಾಟ್ ಭೋಜನ” ಹಾಕಿಸಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಣೆ ನೀಡಿದರು.

ಮೂರನೆಯ ಆವೃತ್ತಿಯ ಬಗ್ಗೆ ಮಾತನಾಡಿದ ಚಂದ್ರು, ‘ನಾಡಿನ ಹಲವು ಜಿಲ್ಲೆಗಳಿಗೆ ಹೋಗಿ ಅಲ್ಲಿನ ಮಹಿಳಾ ಮಂಡಳಿ ಸದಸ್ಯರಿಗೆ ಅಡಿಗೆ ಮಾಡಿ ತೋರಿಸಲಾಗಿದೆ. ಆಹ್ವಾನಿಸಿದವರ ಮನೆಗೆ ಹೋಗಿ ಅವರು ಪ್ರೀತಿಯಿಂದ ಮಾಡಿದ ತಿಂಡಿಯನ್ನು ಸವಿದು ಬಂದಿದ್ದೇನೆ. ಬರೀ ಅಡುಗೆಯಷ್ಟೇ ಅಲ್ಲ, ‘ಅಂದ ಚೆಂದ’ ಎಂಬ ಹೊಸ ವಿಭಾಗಗಳ ಮೂಲಕ ಮಹಿಳೆಯರು ತಮ್ಮ ಅಂದ ಹೆಚ್ಚಿಸಿಕೊಳ್ಳು ಮೇಕಪ್‍, ಕೇಶವಿನ್ಯಾಸ ತರಬೇತಿ ನೀಡಲಾಗಿದೆ. ಗೌರಿಯಮ್ಮ ನಡೆಸಿಕೊಡುವ ‘ಅಂಗೈಲಿ ಆರೋಗ್ಯ’ ವಿಭಾಗದಲ್ಲಿ ಹಲವು ಆರೋಗ್ಯದ ಟಿಪ್ಸ್ ಗಳನ್ನು ನೀಡಲಾಗಿದೆ. ಈ ಬಾರಿ ಅಮೇರಿಕಾ, ಆಫ್ರಿಕಾ ಮುಂತಾದ ಕಡೆ ಹೋಗಿ ಅಡುಗೆ ಕಾರ್ಯಕ್ರಮ ಮಾಡಿ ಬಂದಿರುವುದು ವಿಶೇಷ ಎಂದರು.

‘ಬೊಂಬಾಟ್ ಭೋಜನ ” ಸೀಸನ್ 3ರಲ್ಲಿ ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭಾಸ್ಕರ್ ರಾವ್‍, ಸುಧಾ ಮೂರ್ತಿ, ಗುರುರಾಜ ಕರ್ಜಗಿ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದಾರೆ. ನಾನು ಶಿವಕುಮಾರ್ ‍ಇಬ್ಬರೂ ಬಾಲ್ಯ ಸ್ನೇಹಿತರು. ಯಾವತ್ತೂ ಏನೂ ಕೇಳಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವಂತೆ ಕೇಳಿದಾಗ, ಸಂತೋಷದಿಂದ ಬಂದು ಭಾಗವಹಿಸಿದರು. ಗುರುರಾಜ ಕರ್ಜಗಿ ನಮ್ಮ ಮೇಷ್ಟ್ರು. ಅವರು ಸಹ ಪ್ರೀತಿಯಿಂದ ಬಂದರು. ಹೀಗೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಚಂದ್ರು ತಿಳಿಸಿದರು.

‘ಬೊಂಬಾಟ್‍ ಭೋಜನ’ ಮೂರು ಸೀಸನ್‍ಗಳಿಂದ 2000ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಇದೊಂದು ದಾಖಲೆ ಎಂದು ಮಾಹಿತಿ ನೀಡಿದ ಸಿಹಿಕಹಿ ಚಂದ್ರು, ಮುಂದಿನ ದಿನಗಳಲ್ಲಿ ನೋಡಿಕೊಂಡು ಗಿನ್ನೀಸ್‍ ಅಥವಾ ಲಿಮ್ಕಾ ಬುಕ್‍ ಆಫ್‍ ರೆಕಾರ್ಡ್ಸ್ ಸಂಸ್ಥೆಗಳಿಗೆ ಸೂಕ್ತ ದಾಖಲೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ‘ಬೊಂಬಾಟ್‍ ಭೋಜನ 3’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ, ಚಂದ್ರು ಅವರನ್ನು ಸ್ಟಾರ್ ಸುವರ್ಣ ವಾಹಿನಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

Categories
ಸಿನಿ ಸುದ್ದಿ

ರಕ್ತ ಸಿಕ್ತ ಅವತಾರದಲ್ಲಿ ರಕ್ಷ್ ರಾಮ್: ಬರ್ಮ ಸಿನಿಮಾದ ಹೊಸ ಪೋಸ್ಟರ್ ಬಂತು

ಗಟ್ಟಿಮೇಳ ಸೀರಿಯಲ್ ಮೂಲಕ ಕರುನಾಡ ಮನ-ಮನೆ ಗೆದ್ದಿರುವ ರಕ್ಷ್ ರಾಮ್ ಇಂದು ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಬರ್ಮ ಚಿತ್ರತಂಡ ಹೊಸ ಪೋಸ್ಟರ್ ಉಡುಗೊರೆಯಾಗಿ ನೀಡಿದೆ. ರಕ್ಷ್ ಬರ್ತ್ ಡೇ ಅಂಗವಾಗಿ ಅವರು ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಬರ್ಮ ನಯಾ ಲುಕ್ ಅನಾವರಣ ಮಾಡಿ ಚಿತ್ರತಂಡ ಶುಭಾಶಯ ಕೋರಿದೆ‌.

ರಕ್ತಸಿಕ್ತ ಅವತಾರದಲ್ಲಿ ರಕ್ಷ್ ರಾಮ್

ಬರ್ಮ ಹೊಸ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದೆ. ಕೈಯಲ್ಲಿ ಕೊಡಲಿ ಹಿಡಿದು, ರಕ್ತಸಿಕ್ತ ಅವತಾರದಲ್ಲಿ ಮಾಸ್ ಗೆಟಪ್ ನಲ್ಲಿ ರಕ್ಷ್ ರಾಮ್ ಪ್ರತ್ಯಕ್ಷರಾಗಿದ್ದಾರೆ. ಅಂದಹಾಗೇ ಬರ್ಮ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಈ ಸಿನಿಮಾ ಮೂಲಕ ಕಿರುತೆರೆ ನಟ ರಕ್ಷ್ ಪ್ಯಾನ್ ಇಂಡಿಯಾ ಸ್ಟಾರ್ ಎಮರ್ಜ್ ಆಗಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹೆಚ್ಚಿರುವ ರಕ್ಷ್ ರಾಮ್, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ ಕಂಪನಿಯಡಿ ಬರ್ಮ ಸಿನಿಮಾಗೆ ಹಣ ಹಾಕಿದ್ದಾರೆ.

ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ‘ಬರ್ಮ’ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಬಹದ್ದೂರ್’ ಹಾಗೂ ‘ಭರ್ಜರಿ’ ಸಿನಿಮಾದಲ್ಲಿ ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಬರ್ಮ ಮೂಲಕ ಮೂರನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

‘ಜೇಮ್ಸ್’ ಹೊರತುಪಡಿಸಿ ಚೇತನ್ ಕುಮಾರ್ ನಿರ್ದೇಶಿಸಿದ ಅಷ್ಟೂ ಸಿನಿಮಾಗಳೂ ‘ಬ’ ಇಲ್ಲವೇ ‘ಭ’ದಿಂದಲೇ ಆರಂಭ ಆಗಿರುವುದು ವಿಶೇಷ. ಇವರು ನಿರ್ದೇಶಿಸಿರುವ ಜೇಮ್ಸ್ ಸೇರಿದಂತೆ ‘ಬಹದ್ದೂರ್’, ‘ಭರ್ಜರಿ’ ಹಾಗೂ ‘ಭರಾಟೆ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿವೆ. ಈಗ ಹೊಸ ಸಿನಿಮಾ ‘ಬರ್ಮ’ ಅಂತ ಟೈಟಲ್‌ ಇಟ್ಟಿದ್ದಾರೆ. ಈ ಮೂಲಕ ಮತ್ತೆ ಯಶಸ್ಸನ್ನು ಹುಡುಕಿ ಹೊರಟಿದ್ದಾರೆ ಚೇತನ್.

ಶೂಟಿಂಗ್ ಅಖಾಡದಲ್ಲಿರುವ ಬರ್ಮ ಸಿನಿಮಾದಲ್ಲಿ ಶಾವರ್ ಅಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಡ ತಾರಾ ಬಳಗವೇ ಇದೆ. ಬರ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತದೆ. ಆ ನಿಟ್ಟಿನಲ್ಲಿಯೇ ದೊಡ್ಡಮಟ್ಟದಲ್ಲಿಯೇ ಈ ಚಿತ್ರ ತಯಾರಾಗುತ್ತಿದೆ.

Categories
ಸಿನಿ ಸುದ್ದಿ

ಕೊರಗಜ್ಜ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ಗೋಪಿ ಸುಂದರ್ ಸಂಗೀತ

ಹಲವಾರು ಬಾರಿ ಮರು ಚಿತ್ರೀಕರಣ, ಮತ್ತೆ ಮತ್ತೆ ತಿದ್ದುಪಡಿಗಳು, ಹಲವಾರು ಬದಲಾವಣೆಗಳೊಂದಿಗೆ ಕ್ರೇಜ್ ಹುಟ್ಟುಹಾಕುತ್ತಿರುವ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸಿ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ “ಗೋಪಿ ಸುಂದರ್” ಈಗ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಜೊತೆ ಎಲ್ಲಾ ಹಾಡುಗಳನ್ನು ಮತ್ತೆ ಹೊಸದಾಗಿ ಕಂಪೋಸ್ ಮಾಡುತ್ತಿದ್ದಾರೆ.


ಬಹುಕೋಟಿ ವೆಚ್ಚದಲ್ಲಿ ತ್ರಿವಿಕ್ರಮ ಸಪಲ್ಯ ರವರು ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ “ಕೊರಗಜ್ಜ” ಚಿತ್ರಕ್ಕೆ RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.


ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಜೊತೆ ಶ್ರುತಿ, ಭವ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಋತಿಕ ಎನ್ನುವ ಹೊಸ ಮುಖ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪರಿಚಯ ವಾಗುತ್ತಿದ್ದಾರೆ.


ಉಳಿದಂತೆ ಜೀತ್ ಜೊಸ್ಸಿ ಮತ್ತು ವಿದ್ಯಾಧರ್ ಶೆಟ್ಟಿ ಸಂಕಲನ, ಮನೋಜ್ ಪಿಳ್ಳೈ ಮತ್ತು ಪವನ್ ವಿ ಛಾಯಾಗ್ರಹಣ, ಸುಧೀರ್ ಅತ್ತಾವರ್ ಕಲಾ ನಿರ್ದೇಶನ, ಬಿಬಿನ್ ದೇವ್ ಸೌಂಡ್ ಡಿಸೈನಿಂಗ್ ಚಿತ್ರಕ್ಕಿದೆ. ಮಾರ್ಚ್ ಕೊನೆಗೆ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆದಿದೆ.

Categories
ಸಿನಿ ಸುದ್ದಿ

ರಂಗ ಸಮುದ್ರ ಜನವರಿ 19ಕ್ಕೆ ರಿಲೀಸ್: ಇದು ಭಾವನೆಗಳ ಸಮುದ್ರ!

ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೋಣನೂರು ನಿರ್ಮಿಸಿರುವ, ರಾಜಕುಮಾರ್ ಅಸ್ಕಿ ನಿರ್ದೇಶನದ ಹಾಗೂ ರಂಗಾಯಣ ರಘು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಸಂಪತ್ ರಾಜ್ ಇನ್ನಿತರರು ಪ್ರಮುಖಪಾತ್ರದಲ್ಲಿ ನಟಿಸಿರಯವ “ರಂಗ ಸಮುದ್ರ” ಚಿತ್ರ ಜನವರಿ 19ರಂದು ಬಿಡುಗಡೆಯಾಗಲಿದೆ.

ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಮೂಲಕ “ರಂಗ ಸಮುದ್ರ” ಈಗಾಗಲೇ ಜನರ ಮನ ಗೆದ್ದಿದೆ. ಜಾನಪದ ಸೊಗಡಿನ ಹಾಗೂ ಕೌಟುಂಬಿಕ ಮನರಂಜನೆಯ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.

ವಾಗೀಶ್ ಚನ್ನಗಿರಿ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ದೇಸಿ ಮೋಹನ್ ಸಂಗೀತ ನೀಡಿದ್ದಾರೆ. ಕೀರವಾಣಿ, ಕೈಲಾಶ್ ಖೇರ್, ವಿಜಯ ಪ್ರಕಾಶ್ ನವೀನ್ ಸಜ್ಜು ಮುಂತಾದ ಖ್ಯಾತ ಗಾಯಕರು ಹಾಡುಗಳನ್ನು ಹಾಡಿದ್ದಾರೆ.

ಆರ್ ಗಿರಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ರಾಘವೇಂದ್ರ ರಾಜಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಸಂಪತ್ ರಾಜ್, ಕೆವಿಆರ್, ದಿವ್ಯ ಗೌಡ, ಮೂಗುರು ಸುರೇಶ್, ಉಗ್ರಂ ಮಂಜು, ಸ್ಕಂದ ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಮಾರ್ಟಿನ್ ಗೆ ಭರ್ಜರಿ ಆಡಿಯೋ ರೈಟ್ಸ್: ಒಂಭತ್ತು ಕೋಟಿಗೆ ಸಾಂಗ್ಸ್ ಮಾರಾಟ

ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ
ನಟಿಸುತ್ತಿರುವ ಬಹು ನಿರೀಕ್ಷಿತ “ಮಾರ್ಟಿನ್” ಪ್ಯಾನ್ ಇಂಡಿಯಾ ಚಿತ್ರದ ಆಡಿಯೋ ಹಕ್ಕು ಅಧಿಕ ಮೊತ್ತಕ್ಕೆ (ಒಂಭತ್ತು ಕೋಟಿ ರೂಪಾಯಿ) ಮಾರಾಟವಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆಯಾದ “ಸರೆಗಮ”, ” ಮಾರ್ಟಿನ್ ” ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.

“ನನಗೆ ತಿಳಿದ ಇಷ್ಟು ದೊಡ್ಡ ಮೊತ್ತಕ್ಕೆ ಯಾವುದೇ ಚಿತ್ರದ ಆಡಿಯೋ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ” ನಮ್ಮ ಚಿತ್ರದ ಆಡಿಯೋ ರೈಟ್ಸ್ ಈ ಬಾರಿ ಮೊತ್ತಕ್ಕೆ ಮಾರಾಟವಾಗಿರುವುದು ತುಂಬಾ ಖುಷಿಯಾಗಿದೆ. ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.

ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ ಎಂದು ನಿರ್ಮಾಪಕ ಉದಯ್ ಕೆ ಮೆಹ್ತಾ ತಿಳಿಸಿದ್ದಾರೆ.

ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ ನಲ್ಲಿ ಮೂಡಿಬರಿತ್ತಿರುವ ಬಹು ನಿರೀಕ್ಷಿತ “ಮಾರ್ಟಿನ್” ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ “ಮಾರ್ಟಿನ್” ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ರೊಮ್ಯಾಂಟಿಕ್ ಮೂಡಲ್ಲಿ ಪ್ರಜ್ವಲ್-ಅದಿತಿ: ಮಾಫಿಯಾ ಹಾಡು ಬಂತು

ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮಾಫಿಯಾ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿದೆ. ಮಾಫಿಯಾ ಈಗಾಗಲೇ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ಇದೀಗ ಪ್ರಜ್ವಲ್ ರೊಮ್ಯಾಂಟಿಕ್ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ತಾಯಿಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದ ಅದಿತಿ ಇದೀಗ ಮಾಫಿಯಾ ಮೂಲಕ ಅಭಿಮಾನಿಗಳ ಮುಂದೆ ಬರಲಿ ಸಜ್ಜಾಗಿದ್ದಾರೆ.
ಅಂದಹಾಗೆ ಮಾಫಿಯಾ ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ಲೋಹಿತ್ ಮತ್ತು ಪ್ರಜ್ವಲ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದೆ. ಹಾಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಸದ್ಯ ರಿಲೀಸ್ ಆಗಿರುವ ‘ತುಂಬನೇ ಕೇಳಲಾರೆ…’ ಸಾಲುಗಳಿಂದ ಪ್ರಾರಂಭವಾಗುವ ಈ ರೊಮ್ಯಾಂಟಿಕ್ ಹಾಡು ಹರಿಚರಣ್ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಈ ಹಾಡಿಗಿದೆ. ಪ್ರಜ್ವಲ್ ಮತ್ತು ಅದಿತಿ ಅವರನ್ನು ಈ ರೊಮ್ಯಾಂಟಿಕ್ ಹಾಡಿನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಮಾಫಿಯಾ ಈಗಾಗಲೇ ಚಿತ್ರೀಕಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ. ಸದ್ಯ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರಕ್ಕೆ ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

error: Content is protected !!