ಕಾಂಗರೂ ಎಂಬ ಆಪ್ತ ಚಿತ್ರ: ತಾಯಿ ಹೃದಯಕ್ಕಿದು ಹತ್ರ!

ಚಿತ್ರ ವಿಮರ್ಶೆ – ರೇಟಿಂಗ್ 3.5 /5

ವಿಜಯ್ ಭರಮಸಾಗರ

ನಿರ್ದೇಶನ: ಕಿಶೋರ್ ಮೇಗಳಮನೆ

ನಿರ್ಮಾಣ: ಆರೋಹಾ ಪ್ರೊಡಕ್ಷನ್ಸ್

ತಾರಾಗಣ: ಆದಿತ್ಯ, ರಂಜನಿ ರಾಘವನ್‍, ಅಶ್ವಿನ್‍ ಹಾಸನ್‍, ಶಿವಮಣಿ, ನಾಗೇಂದ್ರ ಅರಸ್‍, ಕರಿಸುಬ್ಬು ಇತರರು.

ಅದು ಚಿಕ್ಕಮಗಳೂರಿನ ರೆಸಾರ್ಟ್. ಹೆಸರು ಆ್ಯಂಟೋನಿ ಕಾಟೇಜ್‍. ಅಲ್ಲಿ ಬಂದವರಿಗೆ ಭಯಾನಕ ಅನುಭವಗಳಾಗುತ್ತವೆ. ಕೆಲ ಕಪಲ್ಸ್ ನಾಪತ್ತೆಯಾದರೆ, ಇನ್ನೂ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಇಷ್ಟಕ್ಕೂ ಅಲ್ಲಿ ದೆವ್ವ- ಭೂತದ ಕಾಟವಿದೆಯಾ? ಯಾರಾದರೂ ಭಯ ಬೀಳಿಸುತ್ತಿದ್ದಾರಾ? ಇದು ನೋಡುಗರಿಗೆ ಕಾಡುವ ಪ್ರಶ್ನೆ. ಈ ಕುತೂಹಲದಲ್ಲೇ ಸಾಗುವ ಕಥೆಯಲ್ಲಿ ಪೊಲೀಸ್ ಅಧಿಕಾರಿ, ಡಾಕ್ಟರ್, ಆಸ್ಪತ್ರೆ ಇತ್ಯಾದಿ ಪ್ರಮುಖ ಅಂಶಗಳು ಕಾಣುತ್ತವೆ. ಅಷ್ಟಕ್ಕೂ ಆ ಕಾಟೇಜ್ ಒಳಗೆ ನಡೆಯೋ ಘಟನೆ ಎಂಥದ್ದು? ಈ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಒಂದು ಆತ್ಮಹತ್ಯೆ, ಇನ್ನೊಂದು ನಿಗೂಢ ನಾಪತ್ತೆ ಅಂಶ ಇಟ್ಟುಕೊಂಡು ನಿರ್ದೇಶಕ ಕಿಶೋರ್ ಮೇಗಳಮನೆ ಕುತೂಹಲಭರಿತ ಕಥೆ ಕಟ್ಟಿಕೊಟ್ಟಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ‌ ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಏನೋ ಇದೆ ಎಂಬ ಸಸ್ಪೆನ್ಸ್ ಕ್ರಿಯೇಟ್ ಮಾಡುವ ಚಿತ್ರ ದ್ವಿತಿಯಾರ್ಧ ಮತ್ತೊಂದು ಟ್ವಿಸ್ಟ್ ಜೊತೆ ಥ್ರಿಲ್ಲಿಂಗ್ ಅನುಭವ ಕೊಡುತ್ತೆ. ಸಸ್ಪೆನ್ಸ್ ಸಿನಿಮಾಗಳಲ್ಲಿರಬೇಕಾದ ಕುತೂಹಲ ಹಾಗು ನೋಡುವ ಇಂಟ್ರೆಸ್ಟ್ ಇಲ್ಲೂ ಇದೆ. ಎಲ್ಲೂ ಅತ್ತಿತ್ತ ಅಲುಗಾಡದಂತೆ ನೋಡುಗರಲ್ಲಿ ಹೊಸ ಅನುಭವ ಕೊಡುವುದರಲ್ಲಿ ನಿರ್ದೇಶಕರು ಜಾಣತನ ಮೆರೆದಿದ್ದಾರೆ.

ಇಂತಹ ಸಿನಿಮಾಗಳಿಗೆ ಅವಧಿ ಮುಖ್ಯ. ಇಲ್ಲಿ ಅನಗತ್ಯ ಎನಿಸುವ ಕೆಲ ದೃಶ್ಯಗಳನ್ನು ಕತ್ತರಿಸಲು ಅವಕಾಶ ಇತ್ತು. ಅದನ್ನು ತೆಗೆದಿದ್ದರೆ ಇನ್ನಷ್ಟು ಆಪ್ತವೆನಿಸುತ್ತಿತ್ತು. ಕೆಲವು ಕಡೆ ಟ್ರಾಕ್ ತಪ್ಪಿತ್ತಲ್ಲ ಅಂದುಕೊಳ್ಳುವಷ್ಟರಲ್ಲಿ ಸಣ್ಣ ಪುಟ್ಟ ಟ್ವಿಸ್ಟ್ ಗಳು ಬ್ಯಾಲೆನ್ಸ್ ಮಾಡುತ್ತವೆ.

ಕಥೆ ಇಷ್ಟು…

ಆ ಕಾಟೇಜ್ ವೊಂದರಲ್ಲಿ ಹೋದವರೆಲ್ಲ ನಿಗೂಢವಾಗಿ ನಾಪತ್ತೆಯಾದರೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ವೇಳೆಗೆ ಬೆಂಗಳೂರಿನಲ್ಲಿರುವ ಪೊಲೀಸ್ ಅಧಿಕಾರಿ ಪೃಥ್ವಿ (ಆದಿತ್ಯ)ಗೆ ಚಿಕ್ಕಮಗಳೂರು ಪೊಲೀಸ್‍ ಠಾಣೆಗೆ ವರ್ಗಾವಣೆ ಆಗುತ್ತೆ. ಕಾರಣ ಆ ಊರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದು ಅದನ್ನು ತಡೆಯಲು ಆ ಠಾಣೆಗೆ ವರ್ಗವಾಗುತ್ತೆ. ಅಲ್ಲಿಗೆ ಹೋದ ಮೇಲೆ ಪೃಥ್ವಿಗೆ ಕಾಟೇಜ್ ಪ್ರಕರಣ ಗೊತ್ತಾಗುತ್ತೆ. ಅದು ದೆವ್ವದ ಸಮಸ್ಯೆಯೇ ಅಥವಾ ಯಾರ ಕೈವಾಡವಿದೆಯೇ ಎಂಬ ಪ್ರಶ್ನೆಯಲ್ಲಿ ತನಿಖೆಗೆ ಮುಂದಾಗುತ್ತಾನೆ. ಅಲ್ಲಿಂದು ಶುರುವಾಗೋದೇ ರೋಚಕತೆ.

ನಿಜಕ್ಕೂ ಈ ಕಥೆ ಎಲ್ಲಾ ವರ್ಗಕ್ಕೂ ಇಷ್ಟ ಆಗುತ್ತೆ. ಎಲ್ಲೂ ಬೋರ್ ಆಗಲ್ಲ. ಅನಗತ್ಯ ವಿಷಯವಿಲ್ಲ. ಹೊಡಿ‌ಬಡಿ ಸಿನಿಮಾಗಳೇ ಬರುವ ಮಧ್ಯೆ ಭಾವುಕತೆ ತುಂಬುವ ಈ ಚಿತ್ರ ಮನಸ್ಸಿಗೆ ಆಪ್ತವೆನಿಸುತ್ತೆ.

ಎಲ್ಲರಿಗೂ ಇಷ್ಟ ಆಗುವ ಸಂದೇಶ ಇಲ್ಲಿದೆ. ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ನೋಡುಗರಿಗೆ ಇದು ಹಾರರ್ ಫೀಲ್ ಚಿತ್ರ ಎನಿಸಿದರೂ ಒಂದೊಳ್ಳೆಯ ಅಂಶ ಇಲ್ಲಿದೆ. ನಿರೂಪಣೆ ಸಿನಿಮಾದ ಮತ್ತೊಂದು ಹೈಲೆಟ್. ಎಷ್ಟು ಬೇಕೋ ಅಷ್ಟು ಮಾತುಕತೆ ಇಲ್ಲಿದೆ. ಚಿತ್ರಕಥೆಯ ವೇಗ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಹೆಚ್ಚಿದೆ. ಇಲ್ಲಿ ಕುಣಿತ, ಫೈಟ್ ಇಲ್ಲ. ಅಂತ್ಯದಲ್ಲಿ ಬರುವ ಒಂದೇ ಹಾಡು ಕಣ್ಣಾಲಿಗಳನ್ನ ಒದ್ದೆ ಮಾಡುತ್ತೆ.

ಯಾರು ಹೇಗೆ?

ಇಲ್ಲಿ ಆದಿತ್ಯ ಪೊಲೀಸ್ ಅಧಿಕಾರಿ ಪಾತ್ರಕ್ಕಿನ್ನೂ ಧಮ್ ಕಟ್ಟಬಹುದಿತ್ತು. ಆದರೂ ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ರಂಜನಿ ಇಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಕರಿಸುಬ್ಬು, ಶಿವಮಣಿ, ಅಶ್ವಿನ್ ಹಾಸನ್, ನಾಗೇಂದ್ರ ಅರಸ್ ಇತರರು ಇಷ್ಟವಾಗುತ್ತಾರೆ. ಸಾಧುಕೋಕಿಲ ಅವರ ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಉದಯ್‍ ಲೀಲಾ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ.

Related Posts

error: Content is protected !!