Categories
ಸಿನಿ ಸುದ್ದಿ

ಕನ್ನಡಕ್ಕೆ ಮತ್ತೆ ಮಹಾಲಕ್ಷ್ಮೀ ಕೃಪೆ

ದಶಕಗಳ ಬಳಿಕ ಕನ್ನಡಕ್ಕೆ ಬರಲಿರುವ ಸ್ವಾಭಿಮಾನದ ಹೆಣ್ಣು

ಒಂದು ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮಿ ಈಗ ಮತ್ತೆ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ಇದೊಂದು ವಿಶೇಷ ಸುದ್ದಿಯೇ. ಒಂದು ದಶಕದ ಕಾಲ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾಗಿ ಸುಮ್ಮನಾದ ಅದ್ಭುತ ನಟಿ ಇವರು. ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿ ಅವರನ್ನು ಕನ್ನಡಕ್ಕೆ ಪುನಃ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೂ ಹೌದು. ಹಲವು ವರ್ಷಗಳ ಬಳಿಕ ಮಹಾಲಕ್ಷ್ಮಿ ಇದೀಗ, ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂಬುದು ಸುದ್ದಿ.

ಮಹಾಲಕ್ಷ್ಮಿ ಅಂದಾಕ್ಷಣ, ಸದಾ ಕಣ್ಣೀರಿಡುವ, ಎಲ್ಲರನ್ನೂ ಕಾಡುವ ನಟಿಯ ಛಾಯೆ ಕಣ್ಮುಂದೆ ಬರುತ್ತದೆ. “ಬಾರೆ ಮುದ್ದಿನ ರಾಣಿ”, “ಸ್ವಾಭಿಮಾನ”, “ಮದುವೆ ಮಾಡು ತಮಾಷೆ ನೋಡು”, “ತಾಯಿ ಕೊಟ್ಟ ತಾಳಿ”, “ಜಯಸಿಂಹ”, “ಬ್ರಹ್ಮ ವಿಷ್ಣು ಮಹೇಶ್ವರ”, “ಪರಶುರಾಮ”, “ಹೆಂಡ್ತೀಗೆ ಹೇಳ್ಬೇಡಿ”, “ಮನೇಲಿ ಇಲಿ ಬೀದಿಲಿ ಹುಲಿ” ಸೇರಿದಂತೆ ಒಂದಷ್ಟು ಸಿನಿಮಾಗಳು ಜನಮನಸೂರೆಗೊಂಡಿದ್ದವು.

ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ನಟಿ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿರುವಾಗಲೇ ಚಿತ್ರರಂಗದಿಂದ ಸ್ವಲ್ಪ ದೂರವಾದರು. “ದುರ್ಗಾಷ್ಟಮಿ” ಬಳಿಕ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಹುತೇಕರಿಗೆ ಮಹಾಲಕ್ಷ್ಮಿ ಅವರ ಸುದ್ದಿಯೇ ಇರಲಿಲ್ಲ. ಅವರ ಅಭಿಮಾನಿಗಳಿಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಇದೀಗ ಅವರು ಪುನಃ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡುವ ಸುದ್ದಿ ತಿಳಿದು ಹಿರಿಹಿರಿ ಹಿಗ್ಗುತ್ತಿದ್ದಾರೆ. ಇಷ್ಟು ವರ್ಷ ಮನೆ, ಮಕ್ಕಳು ಅಂತ ಬಿಝಿಯಾಗಿದ್ದರು. ಆ ಕುರಿತಂತೆ ಅವರೇ ಹೇಳಿದ್ದು “ಫ್ಯಾಮಿಲಿಗೋಸ್ಕರ ಕೆಲಸ ಅಂತ ಮಾಡಲೇಬೇಕು. ಇದರಿಂದ ಜವಾಬ್ದಾರಿ ಹೆಚ್ಚಾಗುತ್ತೆ, ಮಕ್ಕಳು ಬೆಳೆದಿದ್ದಾರೆ. ನನ್ನ ಉತ್ಸಾಹ ಹಾಗೆಯೇ ಇದೆ” ಅಂತ ಹೇಳಿಕೊಂಡಿದ್ದೂ ಉಂಟು. ಅದೇನೆ ಇರಲಿ, ಇದೀಗ ಮಹಾಲಕ್ಷ್ಮೀ ಅವರು ಎಂಟ್ರಿಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಆದಷ್ಟು ಬೇಗ ಅವರು ತೆರೆಗೆ ಬರುವಂತಾಗಲಿ ಅನ್ನೋದು ಕೂಡ “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ರೆಡ್‌ ಗರ್ಲ್!‌ ರಂಜಿನಿ ಫುಲ್‌ ಮಿಂಚಿಂಗ್

ಕೆಂಪಾದ ಕನ್ನಡತಿ…

ಕಿರುತೆರೆ ಮೂಲಕ ಜೋರು ಸುದ್ದಿಯಾಗಿರುವ ರಂಜಿನಿ ರಾಘವನ್‌, ಈಗಂತೂ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯಕ್ಕೆ “ಕನ್ನಡತಿ” ಧಾರಾವಾಹಿಯ ಆಕರ್ಷಣೆ ಎನಿಸಿರುವ ರಂಜಿನಿ ರಾಘವನ್‌, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ದಿಗಂತ್‌ ಜೊತೆ ಜೋಡಿಯಾಗಿರುವ ರಂಜಿನಿಯ ಆ ಚಿತ್ರವೀಗ ಮುಗಿದಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಸದ್ಯಕ್ಕೆ ರಂಜಿನಿಯಂತೂ ಕಿರುತೆರೆ, ಹಿರಿತೆರೆಯಲ್ಲಿ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಅಪ್ಪಟ ಕನ್ನಡತಿಯಾಗಿರುವ ರಂಜಿನಿ, ಸದ್ಯ ಕೆಂಪು ಕೆಂಪಾಗಿದ್ದಾರೆ!

ಅರೇ, ಇದೇನಪ್ಪಾ ಕೆಂಪು ಕೆಂಪಾಗಿದ್ದಾರೆ ಅಂತೆಲ್ಲಾ ಮಾತುಗಳು ಕೇಳಿಬರುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು. ಕೆಂಪೆಂದರೆ, ಕೆಂಪಲ್ಲ. ಆವರು ರೆಡ್‌ ಕಲರ್‌ ಟಾಪ್‌ ಹಾಕ್ಕೊಂಡ್‌ ಹಾಗೊಂದು ಫೋಸು ಕೊಟ್ಟಿರುವ ಫೋಟೋ ಸಖತ್‌ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೇನು ವ್ಯಾಲಂಟೈನ್ಸ್‌ ಡೇ ಕೂಡ ಹತ್ತಿರ ಬರುತ್ತಿದೆ. ಅವರ ಈ ರೆಡ್‌ ಟಾಪ್‌ ಫೋಸ್‌ ನೋಡಿದರೆ ಲವರ್ಸ್‌ ಡೇಯನ್ನು ಸಖತ್‌ ಆಗಿಯೇ ಸ್ವಾಗತಿಸಲು ಸಜ್ಜಾದಂತಿದೆ. ಅದೇನೆ ಇರಲಿ, ರಂಜಿನಿ ಈಗ ಪಡ್ಡೆ ಹುಡುಗರ ಹಾಟ್‌ಫೇವರೇಟ್‌ ಅನ್ನೋದಂತೂ ಹೌದು.

Categories
ಸೌತ್‌ ಸೆನ್ಸೇಷನ್

ಇಳಯರಾಜರ ಹೊಸ ಮ್ಯೂಸಿಕ್‌ ಸ್ಟುಡಿಯೋ

ವೆಟ್ರಿಮಾರನ್ ನಿರ್ದೇಶನದ ಚಿತ್ರಕ್ಕೆ ಮೊದಲ ಹಾಡು ಕಂಪೋಸ್ ಶುರು

ಭಾರತದ ಸಿನಿಮಾ ಸಂಗೀತ ಮಾಂತ್ರಿಕ ಇಳಯರಾಜ ಅವರೀಗ ಹೊಸದೊಂದು ಮ್ಯೂಸಿಕ್‌ ಸ್ಟುಡಿಯೋ ಶುರು ಮಾಡಿದ್ದಾರೆ. ಅವರ ನೂತನ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ, ಸೂರಿ ನಟಿಸಲಿರುವ ಚಿತ್ರಕ್ಕೆ ಮೊದಲ ಹಾಡು ಸಂಯೋಜಿಸಿದ್ದಾರೆ.

ಆ ಹಾಡು ಸಂಯೋಜನೆ ವೇಳೆ ನಟರು ಸಾಕ್ಷಿಯಾಗಿದ್ದು ವಿಶೇಷ. “ನಾವೆಲ್ಲಾ ಇಳಯರಾಜ ಅವರ ಸಂಗೀತ ಆಲಿಸುತ್ತಾ ಬೆಳೆದವರು. ಮೊದಲ ಬಾರಿ ನನ್ನ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಅದರಲ್ಲೂ ಅವರ ಹೊಸ ಸ್ಟುಡಿಯೋದಲ್ಲಿ ನನ್ನ ಚಿತ್ರಕ್ಕಾದ ಸಂಯೋಜನೆಯೇ ಮೊದಲನೆಯದ್ದು! ಇದು ನಮಗೆಲ್ಲರಿಗೂ ಖುಷಿ, ಅದೃಷ್ಟದ ಸಂಗತಿ” ಅಂತ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೊಂಡಿದ್ದಾರೆ.


ಈ ಮೊದಲು ಇಳಯರಾಜ ಪ್ರಸಾದ್ ಸ್ಟುಡಿಯೋದಲ್ಲಿ ಸಂಗೀತ ಸಂಯೋಜನೆಯ ಕಾಯಕ ನಡೆಸುತ್ತಿದ್ದರು. ಖ್ಯಾತ ತಂತ್ರಜ್ಞ ಎಲ್‌.ವಿ.ಪ್ರಸಾದ್ ಅವರು ಇಳಯರಾಜ ಅವರಿಗೆ ತಮ್ಮ ಸ್ಟುಡಿಯೋದಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇಳಯರಾಜ ಕೂಡ ಇದು ತಮಗೆ ‘ಅದೃಷ್ಟವಂತ ಜಾಗ’ ಎಂದೇ ನಂಬಿದ್ದರು. ಇದೀಗ ಆಡಳಿತ ಮಂಡಳಿ ನಿರ್ಧಾರದಂತೆ ಪ್ರಸಾದ್ ಸ್ಟುಡಿಯೋ ನೆಲಸಮವಾಗುವ ಸೂಚನೆ ಇದೆ. ಹಾಗಾಗಿ ಇಳಯರಾಜ ಕೋಡಂಬಾಕಂನಲ್ಲಿ ಸ್ವಂತಕ್ಕೊಂದು ಭವ್ಯ ಸ್ಟುಡಿಯೋ ಆರಂಭಿಸಿದ್ದಾರೆ.

ಹೊಸ ಸ್ಟುಡಿಯೋದಲ್ಲಿ ತಮ್ಮ ಚಿತ್ರದ ಹಾಡು ಮೊದಲ ಸಂಯೋಜನೆ ಎನ್ನುವ ಸಂಗತಿ ನಟ ವಿಜಯ್ ಸೇತುಪತಿ ಅವರಿಗೂ ಖುಷಿ ಕೊಟ್ಟಿದೆ. “ನಾನು ಬಹುವಾಗಿ ಆರಾಧಿಸುವ ಸಂಗೀತ ಸಂಯೋಜಕ ನನ್ನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ” ಅಂತ ವಿಜಯ್ ಸೇತುಪತಿ ಹೇಳಿದ್ದಾರೆ.

Categories
ಸೌತ್‌ ಸೆನ್ಸೇಷನ್

ರೈತರ ಉಗ್ರ ಪ್ರತಿಭಟನೆ ಎಫೆಕ್ಟ್‌ – ಒಳ್ಳೇ ನಿರ್ಧಾರ ಕೈಗೊಳ್ಳಿ ಎಂದ ಸಲ್ಲು

ನಿಲುವು ಸ್ಪಷ್ಟಪಡಿಸಲು ಸ್ಟಾರ್ಸ್‌ ಮೇಲೆ ಒತ್ತಡ!

ಪ್ರಶ್ನೆಗಳಿಗೆ  ಸ್ಟಾರ್ಸ್ ತಬ್ಬಿಬ್ಬು

ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆ ಈಗ ಸಿನಿಮಾ ತಾರೆಯರಿಗೂ ತಟ್ಟಿದೆ. ಪಾಪ್‌ ಸ್ಟಾರ್‌ ರಿಹಾನಾರ ಟ್ವೀಟ್‌ ನಂತರದ ಬೆಳವಣಿಗೆಗಳಿವು ಅನ್ನೋದೇ ವಿಶೇಷ. ರೈತರ ಪರವಾಗಿ ದನಿ ಎತ್ತಿದ ರಿಹಾನಾಗೆ ಪ್ರತಿಕ್ರಿಯಿಸುವಂತೆ ಬಾಲಿವುಡ್‌ನ ಕೆಲವು ಸ್ಟಾರ್ ಹೀರೋಗಳು ಟ್ವೀಟ್ ಮಾಡಿದ್ದರು. ನಟಿ ಕಂಗನಾ ಒಂದು ಹೆಜ್ಜೆ ಮುಂದೆ ಹೋಗಿ ರಿಹಾನಾರ ಆಕ್ಷೇಪಾರ್ಹ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದೂ ಆಯ್ತು. ಈ ವಿಚಾರವಾಗಿ ನಟಿ ತಾಪಸಿಪನ್ನು ತಮ್ಮ ಕಾಳಜಿಯನ್ನು ಟ್ವೀಟ್‌ನೊಂದಿಗೆ ಹಂಚಿಕೊಂಡರು. ಅವರೊಂದಿಗೆ ಮತ್ತಷ್ಟು ನಟ-ನಟಿಯರು ಸೇರಿಕೊಂಡರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ತಾರೆಯರ ಮೇಲೆ ಒತ್ತಡ ಬಿದ್ದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರಿಗೆ ಈ ಕುರಿತಂತೆ ಪ್ರಶ್ನೆಗಳು ಎದುರಾಗುತ್ತಿವೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ ಕೂಡ ಮುಂಬಯಿಯಲ್ಲಿ ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಗ ರೈತರ ಪ್ರತಿಭಟನೆ, ಕೇಂದ್ರದ ಕೃಷಿ ನೀತಿ ಕುರಿತಂತೆ ಅವರಿಗೆ ಒಂದಷ್ಟು ಪ್ರಶ್ನೆಗಳು ಎದುರಾದವು. ಪ್ರಶ್ನೆಗಳಿಗೆ ಉತ್ತರಿಸಲು ಸಲ್ಮಾನ್‌ ಒಲ್ಲೆ ಎಂದರೂ ಪತ್ರಕರ್ತರು ಬಿಲ್‌ಕುಲ್‌ ಬಿಡಲಿಲ್ಲ. ಅವರ ಒತ್ತಾಯಕ್ಕೆ ಮಣಿದ ಸಲ್ಮಾನ್‌, “ಈ ವಿಚಾರವಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವಂತಾಗಲಿ. ಎಲ್ಲರಿಗೂ ಒಳಿತಾಗುವಂತಾಗಲಿ” ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ ನುಣುಚಿಕೊಂಡಿದ್ದಾರೆ.


ಇದೀಗ ದಕ್ಷಿಣ ಭಾರತದಲ್ಲಿ ತಮಿಳು, ತೆಲುಗು ಚಿತ್ರರಂಗದ ತಾರೆಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿ ಎನ್ನುವ ಚರ್ಚೆ ಶುರುವಾಗಿದೆ. ನಟ-ನಟಿಯರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಒತ್ತಡ ಹೇರುತ್ತಿದ್ದಾರೆ. ಇದು ತಾರೆಯರಿಗೀಗ ನುಂಗಲಾರದ ತುತ್ತಾಗಿದೆ. “ತಮ್ಮ ‘ಮಹರ್ಷಿ’ ತೆಲುಗು ಚಿತ್ರದಲ್ಲಿ ನಟ ಮಹೇಶ್ ಬಾಬು ರೈತರ ಕುರಿತ ಕಾಳಜಿಯ ಕಥೆ ಮಾಡಿದ್ದರು. ಈಗ ಡೆಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲಿ” ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟನನ್ನು ಪ್ರಶ್ನಿಸಿದ್ದಾರೆ.


ಟಾಲಿವುಡ್ ಸ್ಟಾರ್ ಹೀರೋಗಳಾದ ಪ್ರಭಾಸ್, ಜ್ಯೂನಿಯರ್ ಎನ್‌ಟಿಆರ್‌, ಅಲ್ಲು ಅರ್ಜುನ್‌ ಅಭಿಮಾನಿಗಳೂ ಈ ಬಗ್ಗೆ ತಮ್ಮ ನೆಚ್ಚಿನ ತಾರೆಯರ ನಿಲುವುಗಳಿಗಾಗಿ ಕಾಯುತ್ತಿದ್ದಾರೆ. ಮತ್ತೊಂದೆಡೆ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟ ಚಿರಂಜೀವಿ ಅವರನ್ನೂ ಇದು ಸಂದಿಗ್ಧಕ್ಕೆ ಸಿಲುಕಿಸಿದೆ. ಕಾಲಿವುಡ್‌ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಪ್ರಮುಖ ತಾರೆಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುವಂತಾಗಿದೆ.

Categories
ಆಡಿಯೋ ಕಾರ್ನರ್

ಮೇಘಾಶೆಟ್ಟಿ ಡ್ಯಾನ್ಸ್‌ ನೋಡು ಶಿವಾ…! ಚಂದನ್‌ ಜೊತೆ ಡಿಂಗು ಡಾಂಗು

ಆಲ್ಬಂ ಸಾಂಗ್‌ ಶೂಟಿಂಗ್‌ ಮುಗೀತು

ಮೇಘಾಶೆಟ್ಟಿ

ಮೇಘಾಶೆಟ್ಟಿ…

ಸದ್ಯಕ್ಕೆ ಕಿರುತೆರೆಯಲ್ಲಿ ಓಡುತ್ತಿರುವ ಹೆಸರಿದು. ಈ ಮೇಘಾಶೆಟ್ಟಿ ಈಗ ಕನ್ನಡ ಚಿತ್ರರಂಗಕ್ಕೂ ಎಂಟ್ರಿಯಾಗಿದ್ದಾಗಿದೆ. ಈ ಹಿಂದೆ ಮೇಘಾಶೆಟ್ಟಿ ಕನ್ನಡ ಆಲ್ಬಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆ ಹಾಡಿಗೆ ಕುಣಿಸಿದ್ದು ಬೇರಾರೂ ಅಲ್ಲ, ಚಂದನ್‌ ಶೆಟ್ಟಿ. ಹೌದು, ಅದ್ಧೂರಿಯಾಗಿ ತಯಾರಾಗಿರುವ ಕನ್ನಡ ಆಲ್ಬಂ ಸಾಂಗ್‌ನಲ್ಲಿ ಮೇಘಾಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ.

ಇಲ್ಲಿ ಸುಮಿತ್‌ ಮತ್ತು ಮೇಘಾಶೆಟ್ಟಿಯ ಜೊತೆಗೆ ಚಂದನ್‌ ಶೆಟ್ಟಿ ಕೂಡ ಒಂದೆರೆಡು ಸ್ಟೆಪ್‌ ಹಾಕಿರೋದು ವಿಶೇಷ. ಅಂದಹಾಗೆ, “ನೋಡು ಶಿವ” ಎಂದು ಶುರುವಾಗುವ ಈ ಆಲ್ಬಂ ಸಾಂಗ್‌ ಅನ್ನು, ಸುಮಿತ್ ಎಂ.ಕೆ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಈ ಸುಮಿತ್‌ ಅವರು “ಪರಾರಿ” ಎಂಬ ಸಿನಿಮಾ ಮಾಡಿದ್ದರು.

ಸುಮಿತ್

ಇನ್ನೊಂದು ವಿಶೇಷವೆಂದರೆ, ಸುಮಿತ್ ಅವರೆ “ನೋಡು ಶಿವ” ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತದ ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಈ ಹಾಡಲ್ಲಿ ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹ ಕಲಾವಿದರು ಕಾಣಿಸಿಕೊಂಡಿದ್ದು, ಕನ್ನಡದ ಮಟ್ಟಿಗೆ ಇದೊಂದು ಅದ್ದೂರಿಯಾಗಿ‌ ಮೂಡಿಬಂದಿರುವ ಮೊದಲ‌‌ ಆಲ್ಬಂ ಸಾಂಗ್ ಎಂಬುದು ವಿಶೇಷ.

ಇತ್ತೀಚೆಗೆ ಬನ್ನೇರುಘಟ್ಟ ‌ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ. ಎಂ.ಕೆ‌ ಆರ್ಟ್ಸ್ ಬ್ಯಾನರ್‌ನಲ್ಲಿ ಮೋನಿಕಾ‌ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, “ಭಜರಂಗಿ” ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.‌ “ಹೆಬ್ಬುಲಿ” ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣವಿದೆ. ಮೂರುವರೆ ನಿಮಿಷಗಳ‌ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ‌ಆನಂದ್ ಆಡಿಯೋ‌ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ.

 

Categories
ಸಿನಿ ಸುದ್ದಿ

ಆ ದಿನಗಳತ್ತ ಮರಳಿದ ಕನ್ನಡ ಚಿತ್ರರಂಗ… ದೊಡ್ಡ ಮಂದಹಾಸ ಬೀರಿದ ಸಿನಿಮಾ ಪ್ರೇಮಿ

ಈ ವಾರ ತೆರೆಗೆ ಮೂರು ಮತ್ತೊಂದು

ಅಂತೂ ಇಂತೂ ಆ ದಿನಗಳು ಮರುಕಳಿಸುತ್ತಿವೆ. ಹೌದು, ಇದು ಪುಟಿದೇಳುತ್ತಿರುವ ಸ್ಯಾಂಡಲ್‌ವುಡ್‌ ವಿಷಯ. ಇಲ್ಲೀಗ ಹೇಳಹೊರಟಿರೋದು ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಬಗ್ಗೆ. ಕೊರೊನಾ ಹಾವಳಿಗೆ ತತ್ತರಿಸಿದ್ದ ಕನ್ನಡ ಸಿನಿಮಾ ರಂಗ ಮತ್ತು ಸಿನಿ ಮಂದಿ ಮೊಗದಲ್ಲೀಗ ಮಂದಹಾಸ ಬೀರಿದೆ. ಇದಕ್ಕೆ ಕಾರಣ, ಸಾಲು ಸಾಲು ಸಿನಿಮಾಗಳ ಬಿಡುಗಡೆ. ಕಳೆದ ವರ್ಷ ವಾರಕ್ಕೆ ಎಂಟು, ಹತ್ತು ಸಿನಿಮಾಗಳ ಬಿಡುಗಡೆಯನ್ನು ಕಂಡಿದ್ದ ಚಿತ್ರರಂಗಕ್ಕೆ ಕೊರೊನೊ ದೊಡ್ಡ ಹೊಡೆತ ಕೊಟ್ಟಿತ್ತು.

ಅಲ್ಲಿಂದ ಸತತ ಹತ್ತು ತಿಂಗಳ ಕಾಲ ಚಿತ್ರರಂಗ ಚೈತನ್ಯ ಕಳೆದುಕೊಂಡಿದ್ದು ನಿಜ. ಈಗ ಎಲ್ಲಾ ಸಮಸ್ಯೆಯಿಂದಲೂ ಹೊರಬಂದಿದೆ. ಕೇಂದ್ರ ಸರ್ಕಾರ ಕೂಡ ಶೇ.೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ ಸ್ಟಾರ್‌ ಸಿನಿಮಾಗಳೂ ಈಗ ಬಿಡುಗಡೆ ತಯಾರಿ ಮಾಡಿಕೊಂಡಿವೆ. ಎಂದಿನಂತೆ ಚಿತ್ರರಂಗ ಶೈನ್‌ ಆಗುತ್ತಿದೆ. ಈ ವಾರ (ಫೆ.೫) ರಾಜ್ಯಾದ್ಯಂತ ನಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕನ್ನಡ ಚಿತ್ರರಂಗ ಪುನಃ ಆ ದಿನಗಳತ್ತ ಮರಳಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗದ ಜನರಿಗೆ ಖುಷಿಕೊಟ್ಟಿದೆ.

ಕೊರೊನಾ ಹಾವಳಿ ಕೊಂಚ ಕಮ್ಮಿಯಾಗುತ್ತಿದ್ದಂತೆಯೇ, ಮೆಲ್ಲನೆ ಒಂದೊಂದೇ ಚಿತ್ರಗಳು ಚಿತ್ರಮಂದಿರ ಕಡೆ ವಾಲಿದವು. ಈಗ ಬಿಡುಗಡೆಯ ಸಂಖ್ಯೆಯಲ್ಲೂ ಚೇತರಿಕೆ ಕಂಡಿದೆ. ಈ ವಾರ ನಾಲ್ಕು ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಆ ನಾಲ್ಕು ಚಿತ್ರಗಳ ಪೈಕಿ ನಟ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೋ” ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ವಿನೋದ್‌ ಪ್ರಭಾಕರ್‌ ಅವರು ಈ ವರ್ಷ ತಮ್ಮ ಖಾತೆ ಆರಂಭಿಸುತ್ತಿದ್ದಾರೆ.

ಈ ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ. ಶೋಭಿತಾ ರಾಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಚ್ಚು ಅವರ ಸಂಗೀತವಿದೆ. ಮನೋಹರ್ ಜೋಶಿ ಛಾಯಾಗ್ರಹಣವಿದೆ. ಛೋಟಾ ಕೆ ಪ್ರಸಾದ್ ಸಂಕಲನ ಹಾಗೂ ವಿನೋದ್ ಅವರ ಸಾಹಸವಿದೆ. ಚಕ್ರವರ್ತಿ ಸಿ.ಹೆಚ್‌ ಈ ಚಿತ್ರದ ನಿರ್ಮಾಪಕರು. ಶರತ್ ಲೋಹಿತಾಶ್ವ, ಶ್ರೀಗಿರಿ, ಗಿರಿಶಾಮ್, ಸತ್ಯದೇವ್, ಸಿರಿ ಇತರರು ನಟಿಸಿದ್ದಾರೆ.

ಇನ್ನು, ಇವರೊಂದಿಗೆ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಚಿತ್ರ ಕೂಡ ತೆರೆಗೆ ಬರುತ್ತಿದೆ. “ಬಿಗ್ ಬಾಸ್” ಖ್ಯಾತಿಯ ಚಂದನ್ ಆಚಾರ್ ಅವರ  ‘ಮಂಗಳವಾರ ರಜಾದಿನ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದೊಂದು ಕ್ಷೌರಿಕನ ಸುತ್ತ ಹೆಣೆದ ಕಥೆಯಾಗಿದ್ದು, ಒಂದೊಳ್ಳೆಯ ಮನರಂಜನೆಗೆ ಇಲ್ಲಿ ಕಮ್ಮಿ ಇಲ್ಲ ಎಂಬುದು ತಂಡದ ಮಾತು. ಚಂದನ್ ಆಚಾರ್ ಅವರೊಂದಿಗೆ ಲಾಸ್ಯ ನಾಗರಾಜ್, ಜಹಾಂಗೀರ್, ಹರಿಣಿ ಮತ್ತು ರಜನಿಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಸಬರು ನಟಿಸಿರುವ ಮಾಂಜ್ರಾ ಎಂಬ ಸಿನಿಮಾನೂ ಈ ವಾರ ತೆರೆಗೆ ಬರುತ್ತಿದೆ.

Categories
ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ಗೆ ಮಣಿದ ಸರ್ಕಾರ -ಶೇ.100 ಸೀಟು ಭರ್ತಿಗೆ ಸಿಕ್ತು ಷರತ್ತುಬದ್ಧ ಅವಕಾಶ

ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರವೇ ವಿಲನ್‌ ಆಯ್ತಾ?
– ಇಂಥದ್ದೊಂದು ಪ್ರಶ್ನೆ ಎಲ್ಲರಿಗೂ ಕಾಡಿದ್ದು ನಿಜ. ಅದಕ್ಕೆ ಕಾರಣ, ಕೇಂದ್ರ ಸರ್ಕಾರದ ಅದೇಶವನ್ನು ಮಾರ್ಪಡಿಸಿದ್ದು. ಹೌದು, ಕೇಂದ್ರ ಸರ್ಕಾರ ಚಿತ್ರಮಂದಿರಗಳ ಆಸನಗಳಿಗೆ ನೂರರಷ್ಟು ಅನುಮತಿ ಕೊಟ್ಟರೂ, ರಾಜ್ಯ ಸರ್ಕಾರ ಮಾತ್ರ ಶೇ.50ರಷ್ಟು ಅನುಮತಿ ನೀಡಿದೆ. ಇದಕ್ಕೆ ಚಿತ್ರೋದ್ಯಮ ಸಂಪೂರ್ಣ ವಿರೋಧ ವ್ಯಕ್ತಪಡಿಸಿತ್ತು. ಇಡೀ ಚಿತ್ರರಂಗದ ಸ್ಟಾರ್‌ ನಟರು ತಮ್ಮ ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶಪಟ್ಟಿದ್ದರು. ಈ ಬೆಳವಣಿಗೆ ಕಾಣುತ್ತಿದ್ದಂತೆಯೇ, ಎಚ್ಚೆತ್ತ ರಾಜ್ಯ ಸರ್ಕಾರ ಚಿತ್ರೋದ್ಯಮದ ಜೊತೆ ಸಭೆ ನಡೆಸಿ, ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ನಟ ಶಿವರಾಜಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸಚಿವ ಸುಧಾಕರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ, ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ಅದೇಶವನ್ನೇ ಮಾರ್ಪಡಿಸಿ, ಶೇ.50ರಷ್ಟು ಆಸನಗಳಿಗೆ ಮಾತ್ರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಸ್ಟಾರ್‌ ನಟರು ಟ್ವೀಟ್‌ ಮೂಲಕ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸಂಜೆಯ ವೇಳೆಗೆ ಎಲ್ಲೆಡೆಯಿಂದಲೂ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ಶಿವರಾಜಕುಮಾರ್‌ ಅವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಅಕಾಡೆಮಿ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ, ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮಾರ್ಗಸೂಚಿ ರಚಿಸುವಂತೆ ಹೇಳಲಾಗಿದೆ.


ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್‌, “ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ್‌, ಸಾ.ರಾ.ಗೋವಿಂದು, ಚೇಂಬರ್‌ ಅಧ್ಯಕ್ಷ ಜೈರಾಜ್‌, ತಾರಾ, ಅಕಾಡೆಮಿ ಮೂಲಕ ಸುನೀಲ್‌ ಪುರಾಣಿಕ್ ಜೊತೆ ಚರ್ಚಿಸಿದ್ದೇನೆ. ಸಿಎಂ ಸಲಹೆ ಮೇರೆಗೆ ನಡೆಸಿದ ಸಭೆಯಲ್ಲಿ ನಾವು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದೆ ಮಾರ್ಗಸೂಚಿಯಲ್ಲಿ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಶೇ.100ರಷ್ಟು ತುಂಬಿಸುವ ಅವಕಾಶವಿದೆ. ಆದರೆ, ಆಯಾ ರಾಜ್ಯಗಳು ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಿ ಎಂದಿದ್ದರು. ಹಾಗಾಗಿ ನಾವು ಶೇ.50ರಷ್ಟು ಅನುಮತಿ ನೀಡಿದ್ದೆವು. ಆದರೆ, ಸ್ಯಾಂಡಲ್‌ವುಡ್‌ ಮನವಿ ಮಾಡಿದೆ. ಕಾರ್ಮಿಕರು, ಒಕ್ಕೂಟ, ನಟರು, ತಾಂತ್ರಿಕ ವರ್ಗದವರು ಸಮಸ್ಯೆಯಲ್ಲಿದ್ದಾರೆ.

ಸರ್ಕಾರ ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ನಾವು ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚನೆಯಂತೆ, ನಾಲ್ಕು ವಾರಗಳವರೆಗೆ ಶೇ.100ರಷ್ಟು ಆಸನಗಳು ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಕಠಿಣ ಮಾರ್ಗಸೂಚನೆಗಳನ್ನು ಆದೇಶದಲ್ಲಿ ಹೊರಡಿಸಲಿದ್ದಾರೆ. ಜನರು ಇದನ್ನು ಅಳವಡಿಸಬೇಕು. ಜರೂರಾಗಿ ಸ್ವೀಕರಿಸಬೇಕು. ಚಿತ್ರಮಂದಿರಗಳ ಮಾಲೀಕರು ಕೂಡ ನಿಯಂತ್ರಣ ಮಾಡಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಮಂದಿರಗಳ ಕಾರಣದಿಂದ ನಾಲ್ಕು ವಾರಗಳಲ್ಲಿ ಸೋಂಕು ತಗುಲಿದರೆ, ಪುನಃ ನಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದೇವೆ ಎಂದು ವಿವರಿಸಿದ್ದಾರೆ.
ಅಧಿಕಾರಿಗಳು ಮಾರ್ಗಸೂಚಿ ಕುರಿತಂತೆ ನನಗೆ ಹಾಗೂ ಸಿಎಂ ಅವರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಗೊಂದಲ ಆಗಿದೆ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದ್ದರಿಂದಲೇ ಸರ್ಕಾರ ಇಂದು ಮಣಿದು, ಶೇ.100ರಷ್ಟು ಅವಕಾಶ ಮಾಡಿಕೊಡುವ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದೆ. ಶಿವರಾಜಕುಮಾರ್‌ ನೇತೃತ್ವದ ನಿಯೋಗದಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇತರರು ಇದ್ದರು.  ಇದಕ್ಕೂ ಮುನ್ನ ಮಾತನಾಡಿದ್ದ ಶಿವರಾಜಕುಮಾರ್‌, “ಚಿತ್ರರಂಗಕ್ಕೆ ದ್ರೋಹ ಮಾಡಲಾಗುತ್ತಿದೆಯೋ ಏನೋ ಅನಿಸುತ್ತಿದೆ. ಸಾಮಾಜಿಕ ಅಂತರ ಎಲ್ಲಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ಹೇಳಿದರೆ ಹೇಳ್ತೀವಿ ನಮ್ಮ ಸಮಸ್ಯೆ ಸರಿ ಮಾಡುತ್ತಾರೆ ಎಂಬ ಭರವಸೆ” ಇದೆ ಎಂದು ಹೇಳಿದ್ದರು.

Categories
ಸಿನಿ ಸುದ್ದಿ

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ?

ರಾಜ್ಯ ಸರ್ಕಾರದ ವಿರುದ್ಧ ಶ್ರೀಮುರಳಿ ಆಕ್ರೋಶ

ಕೇಂದ್ರ ಸರ್ಕಾರ ಚಿತ್ರಮಂದಿರಗಳಿಗೆ ನೂರರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಶೇ.೫೦ರಷ್ಟು ಅನುಮತಿ ಮುಂದುವರೆಸಿದೆ. ಇದು ಸಹಜವಾಗಿಯೇ ಚಿತ್ರರಂಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಶಿವರಾಜಕುಮಾರ್‌ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್‌ ನಟರುಗಳು ತಮ್ಮ ಟ್ವೀಟ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗೊಂದು ಟ್ವೀಟ್‌ ಅಭಿಯಾನ ಕೂಡ ಶುರುವಾಗಿದೆ. ಅದರ ಬೆನ್ನಲ್ಲೇ,  ನಟ ಶ್ರೀಮುರಳಿ ಅವರು ಕೂಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಮದಗಜ” ಚಿತ್ರದ ಚಿತ್ರೀಕರಣದಲ್ಲಿರುವ ಶ್ರೀಮುರಳಿ ಅವರು, ಚಿತ್ರೀಕರಣ ಸ್ಥಳದಿಂದಲೇ ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ನೂರರಷ್ಟು ಭರ್ತಿ ಆಸನಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ “ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್‌ ಕೊಟ್ಟುಬಿಟ್ಟು, ನಮ್ಮ ಇಂಡಸ್ಟ್ರಿಗೆ ಮಾತ್ರ ಶೇ.೫೦ ಕೊಟ್ಟಿದ್ದೀರಿ.

ಇದರಿಂದ ಬಹಳ ಬೇಸರವಿದೆ. ಬಹಳಷ್ಟು ಸಂಸಾರ ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು, ಸರ್ಕಾರಕ್ಕೆ ಕೇಳಿಕೊಳ್ಳುತ್ತಿರುವುದೇನೆಂದರೆ ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಆಸನಗಳ ಭರ್ತಿಗೆ ಅವಕಾಶ ಮಾಡಿಕೊಟ್ಟು ನಮ್‌ ಲೈಫ್‌ ಅನ್ನೂ ನಾರ್ಮಲ್‌ ಮಾಡಿಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು, ದಯವಿಟ್ಟು ನಮ್ಮ ಈ ಆಸೆಯನ್ನು ನೆರವೇರಿಸಿಕೊಡಿ ಎಂದು ಇಂಡಸ್ಟ್ರಿ ಪರ ಕೇಳಿಕೊಳ್ಳುತ್ತಿದ್ದೇನೆ.

Categories
ಸಿನಿ ಸುದ್ದಿ

ಸರ್ಕಾರಕ್ಕೆ ಟಾಂಗ್‌ ಕೊಟ್ಟ ಧ್ರುವ ಸರ್ಜಾ

ಬೇರೆಡೆ ಇಲ್ಲದ ಕಾನೂನು ಇಲ್ಲೇಕೆ?

ಎಲ್ಲೆಡೆ ಕೊರೊನಾ ಹಾವಳಿ ಕಮ್ಮಿಯಾಗಿದೆ. ಬಹುತೇಕ ಕ್ಷೇತ್ರಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಇನ್ನೂ ಸರಿಯಾದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಮಾತ್ರ, ಅನುಮತಿ ನೀಡದೆ, ಇನ್ನೂ ಶೇ.೫೦ರಷ್ಟು ಅನುಮತಿಯಲ್ಲೇ ಚಿತ್ರಮಂದಿರಗಳು ಪ್ರದರ್ಶನ ಕೊಡಬೇಕು ಎಂದು ಹೇಳಿದೆ. ಸರ್ಕಾರದ ಈ ನಡೆಯನ್ನು ಇಡೀ ಚಿತ್ರೋದ್ಯಮವೇ ಪ್ರಶ್ನಿಸಿದೆ. ಟ್ವಿಟ್ಟರ್‌ನಲ್ಲಿ ಧ್ರುವ ಸರ್ಜಾ ಕೂಡ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ನಟ ಧ್ರುವಸರ್ಜಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬೇಸರ ಹೊರಹಾಕಿದ್ದು, ಸರ್ಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.


ಈ ವಿಚಾರದ ಕುರಿತು, ಟ್ವೀಟರ್ ನಲ್ಲಿ ‌ಪೋಸ್ಟ್ ಮಾಡಿರುವ ಇವರು ತನ್ನ ಧೋರಣೆಯನ್ನು ಸಲೀಸಾಗಿ ತೆರೆದಿಟ್ಟಿದ್ದಾರೆ. “ಬಸ್​ನಲ್ಲಿ ಫುಲ್ ರಶ್..! ಮಾರ್ಕೆಟ್​ನಲ್ಲಿ ಗಿಜಿ ಗಿಜಿ ಅಂತ ಜನರು ತುಂಬಿಕೊಂಡಿರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ..” ಹೀಗೆ ಬರೆದ ಒಂದು ಪೋಸ್ಟ್‌ ಹಾಕಿರುವ ಧ್ರುವ ಸರ್ಜಾ ಅವರಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಸಿನಿಮಾರಂಗದ ಅನೇಕ ನಟ,ನಟಿಯರು ಕೂಡ ಟ್ವೀಟ್‌ಗೆ ಬೆಂಬಲ ಸೂಚಿಸಿದ್ದಾರೆ. “ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಜನ ಸೇರಲು ಅವಕಾಶ ನೀಡಲಾಗಿದೆ ಆದರೆ, ‌ನಮ್ಮ ರಾಜ್ಯದಲ್ಲಿ ಯಾಕೆ ಹೀಗೆ ಎಂದು ಹೇಳಿರುವ ಧ್ರುವ ಸರ್ಜಾ ಅವರ ಮಾತಿಗೆ ಅನೇಕರು ಸಾಥ್‌ ಕೊಟ್ಟಿದ್ದಾರೆ.
ಅಂದಹಾಗೆ, ಫೆ‌.18ರಂದು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೊಗರು” ರಿಲೀಸ್ ಆಗಲಿದೆ. ಸರ್ಕಾರದ ಈ ರೀತಿಯ ಮಾರ್ಗಸೂಚಿಯಿಂದ ಸಿನಿಮಾರಂಗದ ಮಂದಿ ಬೇಸರ ಹೊರಹಾಕಿದ್ದಾರೆ. ಧ್ರುವ ಅವರ ಈ ಟ್ವೀಟ್‌ಗೆ ಅಭಿಮಾನಿಗಳೂ ಕೂಡ ಒಂದು ರೀತಿಯ ಅಭಿಯಾನ ಶುರುಮಾಡಿದ್ದಾರೆ. ಸದ್ಯಕ್ಕೆ ಧ್ರುವ ಸರ್ಜಾ ಅವರ ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ.

Categories
ಸಿನಿ ಸುದ್ದಿ

ನಮಗೂ ನೂರರಷ್ಟು ಭರ್ತಿಗೆ ಅವಕಾಶ ಸಿಗಲಿ

ಸರ್ಕಾರಕ್ಕೆ ಚಿತ್ರರಂಗದ ಟ್ವೀಟ್‌ ಅಭಿಯಾನ

ಮಾರ್ಕೆಟ್‌ನಲ್ಲಿ ಗಿಜಿಗಿಜಿ ಜನ… ಬಸ್‌ನಲ್ಲೂ ಫುಲ್‌ ರಶ್…‌. ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ…?
– ಇದು ಕನ್ನಡ ಚಿತ್ರರಂಗ ಶುರು ಮಾಡಿರುವ ಅಭಿಯಾನ. ಹೌದು, ಕೇಂದ್ರ ಸರ್ಕಾರ ಈಗಾಗಲೇ ಫೆಬ್ರವರಿಯಿಂದ ಚಿತ್ರಮಂದಿರಗಳ ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಅನುಮತಿ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಅನುಮತಿ ನೀಡದೆ, ಶೇ.೫೦ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬೇಸತ್ತಿರುವ ಕನ್ನಡ ಚಿತ್ರೋದ್ಯಮ ಈಗ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದಕ್ಕೆಂದೇ ಕನ್ನಡ ಚಿತ್ರರಂಗದ ಸ್ಟಾರ್‌ ನಟರು, ನಿರ್ಮಾಪಕರು, ನಿರ್ದೇಶಕರು ಈಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ನಮಗೂ ಶೇ.೧೦೦ರಷ್ಟು ಅವಕಾಶ ಮಾಡಿಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಸ್ಟಾರ್‌ ನಟರೆಲ್ಲರೂ ತಮ್ಮ ಟ್ವೀಟ್‌ ಮೂಲಕ ಹೀಗೊಂದು ಅಭಿಯಾನವನ್ನೂ ಶುರುಮಾಡಿದ್ದಾರೆ.


ಶಿವರಾಜಕುಮಾರ್‌ ತಮ್ಮ ಟ್ವೀಟ್‌ ಮೂಲಕ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆ ವಿಡಿಯೋದಲ್ಲಿ ” ಎಲ್ಲರಿಗೂ ೧೦೦ರಷ್ಟು ಸೀಟು ಭರ್ತಿಗೆ ಅವಕಾಶ ಕೊಟ್ಟಿರಬೇಕಾದರೆ, ನಮಗೆ ಮಾತ್ರ ಶೇ.೫೦ ಯಾಕೆ? ನಮಗೂ ೧೦೦% ಭರ್ತಿ ಬೇಕೇ ಬೇಕು. ಇಂಡಸ್ಟ್ರಿಗೋಸ್ಕರ ನಾವೆಲ್ಲಾ ಜೊತೆಗಿದ್ದೇವೆ. ಸರ್ಕಾರದ ನಿರ್ಧಾರ ಬದಲಾಗಬೇಕು. ಜೈ ಹಿಂದ್‌ ಜೈ ಕರ್ನಾಟಕ ಮಾತೆ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇನ್ನು, ನಟ ಧನಂಜಯ್‌ ಕೂಡ ಟ್ವೀಟ್‌ ಮಾಡಿದ್ದು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲು, ಥಿಯೇಟರ್‌ ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಬರೆದುಕೊಳ್ಳುವ ಮೂಲಕ ಸರ್ಕಾರ ಕೂಡಲೇ ಶೇ>೧೦೦ಭರ್ತಿಗೆ ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ. ನಿರ್ದೇಶಕ ಸುನಿ ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ” ವಿಮಾನದೊಳಗೆ ಭುಜಕ್ಕೆ ಭುಜ ತಾಕಿ ಕೂರಬಹುದು.. ದೇವಸ್ಥಾನದಲ್ಲಿ ಎಲ್ಲರ ಕೈಗಳು ಒಂದೇ ಗಂಟೆ ಬಾರಿಸಬಹುದು.. ಮಾರ್ಕೆಟ್ ನಲ್ಲಿ ಮಾಮುಲಿ ವ್ಯಾಪಾರ, ರಾಜಕೀಯ ರ಼್ಯಾಲಿಗೆ ಜನಸಾಗರ.
ಪಬ್ ಹೋಟೆಲ್ ನಲ್ಲಿ ಎಲ್ಲರ ವಿಹಾರ, ಚಿತ್ರಮಂದಿರಕೆ ಮಾತ್ರ ಯಾಕೆ ಕಟ್ಟೆಚ್ಚರ?” ಎಂದು ಬರೆದಿದ್ದಾರೆ. ಉಳಿದಂತೆ ಪುನೀತ್‌ರಾಜಕುಮಾರ್‌, ಪ್ರಶಾಂತ್‌ ನೀಲ್, ಧ್ರುವಸರ್ಜಾ, ದುನಿಯಾ ವಿಜಯ್‌, ಶಶಾಂಕ್‌, ಪವನ್‌ ಒಡೆಯರ್ ಸೇರಿದಂತೆ ಹಲವರು ಟ್ವೀಟ್‌ ಅಭಿಯಾನ ಶುರುಮಾಡಿದ್ದಾರೆ.

error: Content is protected !!