ಕೊರೊನಾ ಆರ್ಭಟಕ್ಕೆ ಈಗಾಗಲೇ ಅದೆಷ್ಟೋ ಜೀವಗಳು ಪ್ರಾಣಬಿಟ್ಟಿವೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದವರ ಬದುಕು ಕೂಡ ಬೀದಿಗೆ ಬಂದು ನಿಂತಿದೆ. ಅದರಲ್ಲೂ ಚಿತ್ರರಂಗದವರ ಪಾಲಿಗೆ ಕೊರೊನಾ ಹೆಮ್ಮಾರಿ ದೊಡ್ಡ ಆಘಾತ ತಂದೊಡ್ಡಿದೆ. ಈಗಾಗಲೇ ಚಿತ್ರರಂಗದ ಅನೇಕರು ಜೀವ ಬಿಟ್ಟಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ನದೀಮ್ ಶ್ರವಣ್ ರಾಥೋಡ್ (೬೬) ಅವರು ಕೊರೊನಾದಿಂದಾಗಿ ನಿಧನರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ಮುಂಬೈನ ಎಸ್.ಎಲ್. ರಹೇಜಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ತೀರ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶ್ರವಣ್ ನಿಧನದ ವಿಷಯವನ್ನು ನಿರ್ದೇಶಕ ಅನಿಲ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರವಣ್ ಸಾವಿಗೆ ಸಂತಾಪ ಸೂಚಿಸಿರುವ ಅನಿಲ್ ಶರ್ಮಾ, “ತುಂಬಾ ದುಃಖಕರ ವಿಚಾರವಿದು” ಎಂದಿದ್ದಾರೆ.
ಶ್ರವಣ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಟ್ವೀಟ್ ಮೂಲಕ, “ಶ್ರವಣ್ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅಪ್ಪಟ ವಿನಮ್ರ ಮನುಷ್ಯ. ಸಂಗೀತ ಲೋಕದಲ್ಲಿ ಅತೀ ದೊಡ್ಡ ಸಂಯೋಜಕರಲ್ಲಿ ಒಬ್ಬರಾಗಿದ್ದರು” ಎಂದಿದ್ದಾರೆ. ಶ್ರವಣ್ ರಾಥೋಡ್ 90ರ ದಶಕದಲ್ಲಿ ಬಿಜಿ ಸಂಗೀತ ನಿರ್ದೇಶಕರಾಗಿದ್ದರು. “ಆಶಿಕಿ”, “ಸಾಜನ್”, “ಹಮ್ ಹೈ ರಹಿ ಪ್ಯಾರ್ ಕಿ”, “ಪರ್ದೇಸ್”, “ರಾಜಾ ಹಿಂದುಸ್ತಾನಿ” ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಂದಿದ “ಅಂಬರೀಶ್- ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು” ಪುಸ್ತಕ ಈಗ ಹೊಸ ರೂಪ ಪಡೆದುಕೊಂಡಿದೆ. ಹೌದು, ಇದು ವಿಶೇಷವೇ ಸರಿ. ಕಳೆದ 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಬಿಡುಗಡೆಯಾಗಿದ್ದೇ ತಡ, ಈ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದಿತ್ತು.
ಮುದ್ರಣಗೊಂಡಿದ್ದ ಎಲ್ಲಾ ಪುಸ್ತಕಗಳೂ ಖಾಲಿಯಾಗಿದ್ದವು. ಹಾಗಾಗಿ ಸಾವಣ್ಣ ಪ್ರಕಾಶನ ಈಗ ಎರಡನೇ ಮುದ್ರಣ ಮಾಡಿದೆ. ಪ್ರಕಾಶನ ಸಂಸ್ಥೆಯಿಂದ ಹೊರ ಬಂದಿರುವ ಈ ಎರಡನೇ ಮುದ್ರಣದ ಪುಸ್ತಕ, ಹೊಸ ವಿನ್ಯಾಸ ಮತ್ತು ಹೊಸ ಮುಖಪುಟ ಹೊತ್ತು ಬಂದಿದೆ. ಇತ್ತೀಚೆಗೆ ಲೇಖಕ ಡಾ.ಶರಣು ಹುಲ್ಲೂರು ಮತ್ತು ಪ್ರಕಾಶಕ ಜಮೀಲ್ ಸಾವಣ್ಣ ಅವರು ಸರಳವಾಗಿಯೇ ಬಿಡುಗಡೆ ಮಾಡಿದ್ದಾರೆ. ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ಬಿಡುಗಡೆ ಮಾಡಿದ್ದರು.
ಪ್ರಕಾಶಕ ಜಮೀಲ್ ಸಾವಣ್ಣ ಜೊತೆ ಲೇಖಕ ಡಾ.ಶರಣು ಹುಲ್ಲೂರು
ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಜೊತೆಗಿದ್ದು, ಪುಸ್ತಕ ಬಿಡುಗಡೆಗೆ ಕೈ ಜೋಡಿಸಿದ್ದರು. ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಕೂಡ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಪುಸ್ತಕಕ್ಕೆ ಲಭಿಸಿದೆ. ಸದ್ಯ “ಅಂಬರೀಶ್- ವ್ಯಕ್ತಿ-ವ್ಯಕ್ತಿತ್ವ- ವರ್ಣರಂಜಿತ ಬದುಕು “ಪುಸ್ತಕ ಎಲ್ಲ ಮಳಿಗೆಗಳಲ್ಲೂ ಸಿಗಲಿದೆ. ಹಾಗೆಯೇ ಸಾವಣ್ಣ ಪ್ರಕಾಶನದಲ್ಲೂ ಲಭ್ಯವಿದೆ.
ಅದೇನೋ ಗೊತ್ತಿಲ್ಲ. ಎಲ್ಲರೂ ಸಿನಿಮಾರಂಗವನ್ನೇ ಟಾರ್ಗೆಟ್ ಮಾಡಿದಂತಿದೆ. ಸಿನಿಮಾ ಮಂದಿಯಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬರ್ಥದಲ್ಲೇ ಎಲ್ಲರೂ ಮಾತಾಡುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಕೊರೊನಾ ಪ್ರಕರಣ ಹೆಚ್ಚಾಗಲೂ ಸಿನಿಮಾ ರಂಗದವರೇ ಪರೋಕ್ಷ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್ 22 ರಂದು ಸುಮನಹಳ್ಳಿಗೆ ಭೇಟಿ ನೀಡಿದ್ದ ರವಿ ಅವರಿಗೆ ಮೃತರ ಕುಟುಂಬದವರು ಹಾಗು ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೊರೊನಾ ಹೆಚ್ಚಾಗಲು ಸರ್ಕಾರ ಕಾರಣವಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ಸರ್ಕಾರದ ಮೇಲೆ ಚಿತ್ರರಂಗದವರು ಹಾಗು ಇತರರು ಒತ್ತಡ ಹೇರಿದ್ದರಿಂದ ಇಂದು ಕೊರೊನಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದಿದ್ದಾರೆ.
ಸರ್ಕಾರ ಈ ಹಿಂದೆ ಕೊರೊನಾ ಹಾವಳಿ ತಡೆಗೆ ಥಿಯೇಟರ್ ಬಂದ್ ಮಾಡಬೇಕು, ಜಿಮ್ ಬಂದ್ ಮಾಡಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರರಂಗದವರು ಬಂದು ಒಕ್ಕೊರಲ ಧ್ವನಿ ಎತ್ತಿದರು. ಹಾಗಾಗಿ ಸರ್ಕಾರ ತುಸು ಸಡಿಲ ನಿರ್ಧಾರ ಕೈಗೊಂಡಿತು. ಜಿಮ್ ಬಂದ್ ಮಾಡೋಣ ಅಂತ ನಿರ್ಧರಿಸಿದಾಗಲೂ ಜಿಮ್‌ನವರು ಒತ್ತಡ ತಂದರು. ಆಗಲೂ ಸರ್ಕಾರ ತನ್ನ ನಿರ್ಧಾರವನ್ನು ಹಿಂದೆ ಪಡೆಯಬೇಕಾಯಿತು. ಇದರಿಂದ ಇಂದು ಸಮಸ್ಯೆ ತಲೆದೋರಿದೆ. ವಿಪಕ್ಷವೂ ಕೂಡ ಯಾಕೆ ಚಿತ್ರಮಂದಿರ ಬಂದ್ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಮಾಧ್ಯಮಗಳು ಕೂಡ ಅದನ್ನೇ ಬಿತ್ತರಿಸಿದವು. ಯಾರೋ ಸೆಲೆಬ್ರಿಟಿ ಬಂದು ಸ್ಟೇಟ್‌ಮೆಂಟ್ ಕೊಟ್ಟ ಕೂಡಲೇ ಮಾಧ್ಯಮಗಳೆಲ್ಲಾ ಆ ಕಡೆ ಫೋಕಸ್ ಮಾಡಿದವು. ಅದಕ್ಕೆ ಇಂದು ದೊಡ್ಡ ಬೆಲೆ ತೆರಬೇಕಾಗಿದೆ ಎಂದಿದ್ದಾರೆ ರವಿ.
ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಆದೇಶಿಸಿತು. ಸರ್ಕಾರದ ಈ ಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ನಂತರ ಪುನೀತ್ ಅವರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಬಳಿಕ ಆದೇಶವನ್ನು ಎರಡು ದಿನಗಳ ಮಟ್ಟಿಗೆ ಸಡಿಲಗೊಳಿಸಲಾಯಿತು. ಈಗ ನೋಡಿದರೆ, ಏಪ್ರಿಲ್ 21 ರಿಂದ ಮೇ 4 ರವರೆಗೆ ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಅದೇನೆ ಇರಲಿ, ಸಿನಿಮಾರಂಗದವರಿಂದಲೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಸಿ.ಟಿ.ರವಿ ಅವರ ಮಾತಿಗೆ ಸ್ಯಾಂಡಲ್‌ವುಡ್ ಜೋರಾದ ಧ್ವನಿ ಎತ್ತಿದೆ.
ವಿಜಯ್ ಸೇತುಪತಿ ಇದೀಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಅವರೀಗ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿ “ವಿದುತಲೈ” ಹೆಸರಿನ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. “ವಿದುತಲೈ” ಅಂದರೆ, ಮಾಸ್ಟರ್ ಅಥವಾ ಶಿಕ್ಷಕ ಎಂದರ್ಥ. ಮೂಲ ತಮಿಳಿನ ಈ ಸಿನಿಮಾ ಸೌತ್ ಇಂಡಿಯನ್ ಭಾಷೆಗಳು ಸೇರಿ ಹಿಂದಿಯಲ್ಲಿಯೂ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನ ಮಾಡಲಿದ್ದಾರೆ. ಗುರುವಾರವಷ್ಟೇ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಲ್ರೆಡ್ ಕುಮಾರ್ ಅವರ ಆರ್ ಎಸ್ ಇಂಫೋಟೈನ್ಮೆಂಟ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಮ್ಯೂಸಿಕ್ ಮ್ಯಾಸ್ಟ್ರೋ ಇಳಯರಾಜ ಸಂಗೀತ ನೀಡುತ್ತಿದ್ದಾರೆ. ವೆಟ್ರಿ ಮಾರನ್ ಮತ್ತು ಇಳಯರಾಜಾ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾ ಇದು. “ವಿದುತಲೈ” ಚಿತ್ರದ ಚಿತ್ರೀಕರಣ ಸಂಪೂರ್ಣ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಅಚ್ಚರಿಯ ವಿಷಯವೆಂದರೆ, ಈಗಾಗಲೇ ಲೊಕೇಶನ್ ಅಂತಿಮವಾಗಿದ್ದು, ವಿದ್ಯುತ್ ಮತ್ತು ಫೋನ್ ನೆಟ್ವರ್ಕ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ.
ಅಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಕಳೆಯಲಿದೆ. ಈಗಾಗಲೇ “ಅಸುರನ್” ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ವೆಟ್ರಿ ಮಾರನ್, ಇದೀಗ “ವಿದುತಲೈ” ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ. ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ವೆಲರಾಜ್ ಛಾಯಾಗ್ರಹಣವಿದೆ. ಆರ್. ರಮರ್ ಸಂಕಲನ ಮಾಡಿದರೆ, ಪೀಟರ್ ಹೇನ್ ಸಾಹಸ ನಿರ್ದೇಶನವಿದೆ. ಜಾಖಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
ಕನ್ನಡ ಚಿತ್ರರಂಗಕ್ಕೆ ಈ ಬಾರಿಯೂ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಕೊರೊನಾ. ಹೌದು, ಕಳೆದ ವರ್ಷ ಕೊಟ್ಟ ದೊಡ್ಡ ಹೊಡೆತಕ್ಕೆ ಮಕಾಡೆ ಮಲಗಿದ್ದ ಚಿತ್ರರಂಗ, ಹೇಗೋ ಕಳೆದ ಅಕ್ಟೋಬರ್ ವೇಳೆಗೆ ಚೇತರಿಸಿಕೊಳ್ಳೋಕೆ ಶುರುಮಾಡಿತು. ಆ ನಂತರ ವೇಗ ಜೋರು ಮಾಡಿಕೊಂಡ ಚಿತ್ರರಂಗ, ಇನ್ನೇನು ತನ್ನ ಮೈಲೇಜ್ ಹೆಚ್ಚಾಯ್ತು ಅನ್ನುವ ಹೊತ್ತಿಗೆ ಕೊರೊನಾ ತನ್ನ ಎರಡನೇ ಅಲೆಯ ಹೊಡೆತ ಕೊಟ್ಟಿತು. ಸ್ಟಾರ್ಸ್ ಸಿನಿಮಾಗಳು ಕೂಡ ಇದರಿಂದ ತತ್ತರಿಸಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗಕ್ಕೆ ಕೊರೊನಾಘಾತವಾಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್ ಐಸಿಯುನಲ್ಲಿದೆ. ಕೊರೊನಾ ಇಂತಹವರಿಗಷ್ಟೇ ಆವರಿಸಿಕೊಳ್ಳುತ್ತೆ ಎಂಬುದೆಲ್ಲಾ ಸುಳ್ಳು. ಈಗಾಗಲೇ ಸಾಕಷ್ಟು ನಟ, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ತಾಂತ್ರಿಕ ವರ್ಗದವರನ್ನೂ ಆವರಿಸಿಕೊಂಡಿದೆ. ಕೊರೊನಾ ನೃತ್ಯಕ್ಕೆ ನಲುಗಿರುವ ಸ್ಟಾರ್ಸ್, ಅದರಿಂದಾಚೆ ಬರೋಕೆ ಕಾಯುತ್ತಿದ್ದಾರೆ. ಕೊರೊನಾ ಅದೆಷ್ಟೋ ಸಿನಿಮಂದಿಯ ಬದುಕಲ್ಲಿ ಕರಾಳತೆಯನ್ನು ತುಂಬಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಜೀವ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಪ್ರತಿ ದಿನವೂ ಕೂಡ ನರಳುವಂತೆ ಮಾಡುತ್ತಿದೆ.
ಹಾಗೆ ನೋಡಿದರೆ, ಕೊರೊನಾ ಹೀರೋಗಳಿಗೆ, ನಟಿಮಣಿಗಳಿಗೆ ಬರಲ್ಲ ಅಂತಂದುಕೊಳ್ಳುವಂತಿಲ್ಲ. ಕೊರೊನಾಗೆ ಹೀರೋ, ಯಾರು, ನಾಯಕಿ ಯಾರು ಅನ್ನೋದು ಗೊತ್ತಿಲ್ಲ. ಅದಕ್ಕೆ ಎಲ್ಲರೂ ಒಂದೇ. ಈಗಾಗಲೇ ಬಾಲಿವುಡ್ ಸೇರಿದಂತೆ ಸೌತ್ ಇಂಡಿಯಾ ಫಿಲ್ಮ್ ಫೀಲ್ಡ್‌ನಲ್ಲಿರುವ ಅನೇಕರಿಗೆ ಕೊರೊನಾ ವಕ್ಕರಿಸಿದೆ. ಕೆಲವರು ಕೊರೊನಾ ಹೊಡೆತಕ್ಕೆ ರೋಸಿಹೋಗಿದ್ದಲ್ಲದೆ, ಪ್ರಾಣವನ್ನೂ ಬಿಟ್ಟಿದ್ದಾರೆ. ಕೊರೊನಾ ನಟಿ ಸಂಜನಾ, ನಟ ಪ್ರಜ್ವಲ್, ನಿರ್ದೇಶಕ ಗುರುಪ್ರಸಾದ್, “ಲವ್ ಮಾಕ್ಟೇಲ್” ಖ್ಯಾತಿಯ ಡಾರ್ಲಿಂಗ್ ಕೃಷ್ಣ, ಮಿಲನಾ ದಂಪತಿ ಕೊರೊನಾ ಪಾಸಿಟಿವ್ ಆಗಿದೆ. ಇನ್ನು, ನಟಿ ಅನು ಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಬಗ್ಗೆ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತುಂಬಾ ಸುರಕ್ಷಿತವಾಗಿ, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೊರೊನಾ ಸೋಂಕು ತಗುಲಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ಕೊರೊನಾ ಸಮಸ್ಯೆಯಿಂದಾಗಿ ಚಿತ್ರರಂಗದ ಹಲವು ಮಂದಿ ಅಸುನೀಗಿದ್ದಾರೆ. ಕಳೆದ ವರ್ಷ ಮೃತಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ಈ ವರ್ಷದ ಎರಡನೇ ಅಲೆಗೆ ಚಿತ್ರರಂಗದ ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಬಲಿಯಾಗಿದ್ದಾರೆ. ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅಂತೆಯೇ ಸಿನಿಮಾ ಪತ್ರಕರ್ತ ಕರುಣೇಶ ಕೂಡ ಕೊರೊನಾ ಪಾಸಿಟಿವ್‌ನಿಂದಾಗಿ ಮೃತಪಟ್ಟಿದ್ದಾರೆ. ಹಲವು ನಟ,ನಟಿಯರು ಕೊರೊನಾದಿಂದ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇದ್ದು, ಎಲ್ಲೂ ಹೋಗದ ಹಾಗೆ ಎಚ್ಚರವಹಿಸಿ ಎಂದು ಹೇಳಿದ್ದಾರೆ. ಅದೇನೆ ಇದ್ದರೂ, ಚಿತ್ರರಂಗ ಮಾತ್ರ ಕೊರೊನಾ ಹೊಡೆತಕ್ಕೆ ನಲುಗಿರುವುದಂತೂ ನಿಜ. ಬೆಂಬಿಡದೆ ಕಾಡುತ್ತಿರುವ ಕೊರೊನಾ ಅಲೆ ಕಡಿಮೆ ಆಗೋವರೆಗೆ ಚಿತ್ರರಂಗ ಕೂಡ ಮೇಲೇಳುವುದಿಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ.
ದಿನ ಕಳೆದಂತೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಸೋಂಕಿತರು ಕೂಡ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೆಷ್ಟೋ ಮಂದಿ ಸರಿಯಾದ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ. ಇದು ತುಂಬಾನೇ ಆಘಾತಕಾರಿ ವಿಷಯ. ಇಂತಹ ಸಮಯದಲ್ಲಿ ಸ್ಟಾರ್ ನಟ,ನಟಿಯರು ಯಾಕೆ ಸಹಾಯಕ್ಕೆ ನಿಲ್ಲಬಾರದು? ಈ ಪ್ರಶ್ನೆ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಹೀಗೆ ಕೇಳಿರೋದು ಬೇರಾರೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್. ಹೌದು, ಈ ಕುರಿತಂತೆ ಅವರೀಗ ಸ್ಟಾರ್ ನಟರಿಗೆ ಒಂದು ಪತ್ರ ಬರೆದಿದ್ದಾರೆ. ಆ ಮೂಲಕ ಅವರು ಪ್ರೀತಿಯಿಂದಲೇ ಮನವಿ ಮಾಡಿದ್ದಾರೆ. ನೀವು ಕೋಟ್ಯಾಂತರ ಫ್ಯಾನ್ಸ್‌ಗೆ ಹೀರೋ ಆಗಿದ್ದೀರಿ. ಈಗ ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿ ಎಂದು ಮನಮಿಡಿಯುವಂತೆ ಪತ್ರವೊಂದನ್ನು ಬರೆದಿದ್ದಾರೆ. ಅಂದಹಾಗೆ, ವೀರಕಪುತ್ರ ಶ್ರೀನಿವಾಸ್ ಅವರು ಬರೆದ ಸುದೀರ್ಘ ಪತ್ರದ ಸಾರಾಂಶವಿದು.
ವೀರಕಪುತ್ರ ಶ್ರೀನಿವಾಸ್
ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ.
ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ.
ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸದೆ ನಿಮ್ಮ ಪರ ನಿಂತು ಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ. ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು. ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ, ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು, ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೆ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ, ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚುಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ, ಅಷ್ಟೇ ಸಲೀಸಾಗಿ ಕೊರೊನಾಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ.
ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್? ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ “ಸ್ಟೇ ಹೋಮ್, ಸ್ಟೇ ಸೇಫ್” ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತು ಬಿಡೋದು ಯಾವ ನ್ಯಾಯ? ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ?
ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ.. ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೊನಾ ಬಂದರೆ ಮನೆಯವರೆಲ್ಲರೂ ಕೊರೊನಾ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ.
ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ! ಕೊರೊನಾ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ? ಕೊನೇ ಮಾತು.. ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಬಾಲಿವುಡ್ ನಟ ಸೋನುಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ! ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನುಸೂದ್ ಮಾದರಿಯಾಗಲೆಂದು ಆಶಿಸುವೆ.. -ವೀರಕಪುತ್ರ ಶ್ರೀನಿವಾಸ.
ಕನ್ನಡದಲ್ಲಿ ಹಾಸ್ಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಇಲ್ಲಿ ಸಾಕಷ್ಟು ಕಾಮಿಡಿ ಜಾನರ್ ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಶ್ರೀರಂಗ” ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ಈ ಚಿತ್ರ ಈಗ ಚಿತ್ರೀಕರಣ ಪೂರೈಸಿ, ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 21ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕೊರೊನಾ ಹಾವಳಿ ಕಡಿಮೆಯಾದ ಬಳಿಕ, ಆಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.
ರತು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾ. ಇಲ್ಲಿ ಮೂರು ಹಾಡುಗಳಿದ್ದು, ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.
ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರು, ವೆಂಕಟ್ ಭಾರದ್ವಾಜ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ರಾಮನ್ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.
ಕನ್ನಡದಲ್ಲಿ ’ಸಿರಿ ಕನ್ನಡ ವಾಹಿನಿ’ಯು ಸದ್ಯ ಕನ್ನಡಿಗರ ಕಣ್ಮಣಿ. ಯಾವುದೇ ಸಂಚಿಕೆಗಳಿರಲಿ, ಗರಿಷ್ಟ 65ಕ್ಕೆ ನಿಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡಂತೆ, ಸಪಲರವಾಗಿದೆ ವಾಹಿನಿ. ಪ್ರತಿಫಲವಾಗಿ ಶಾರ್ಟ್ ಅಂಡ್ ಸ್ವೀಟ್ ಎನ್ನುವಂತೆ ರಿಯಾಲಿಟಿ ಶೋ, ಅಧ್ಯಾತ್ಮಿಕ ಹೂರತುಪಡಿಸಿ, ಒಂದಷ್ಟು ವಿನೂತನ ಧಾರವಾಹಿ, ಹೀಗೆ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ಸಿದ್ದಪಡಿಸಿದೆ. ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ’ಧರ್ಮ ದರ್ಶನ’ ಕಾರ್ಯಕ್ರಮ ಬೆಳಗ್ಗೆ 7.30ಕ್ಕೆ ಪ್ರಸಾರವಾಗಲಿದೆ. 12.30ಕ್ಕೆ ’ಸಿರಿ ಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಶೆಫ್‌ಗಳು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಿಕೊಡಲಿದ್ದಾರೆ.
ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ಉತ್ತರ ಕರ್ನಾಟಕದ ಸೊಗಡು ಇರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಧಾರಾವಾಹಿಯನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಇದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಇನ್ನು, ನಟ,ನಿರ್ಮಾಪಕ, ನಿರ್ದೇಶಕ ಮತ್ತು ’ನನ್ ಮಗಂದ್’ ಖ್ಯಾತಿಯ ಹುಚ್ಚ ವೆಂಕಟ್ ನಿರೂಪಕರಾಗಿರುವ ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಕಿರುತೆರೆ ಕಲಾವಿದ ಮುರಳಿ ಇದನ್ನು ನಡೆಸಿಕೊಡಲಿದ್ದಾರೆ. ’ಕಲ್ಪನ’ ಎಂಬ ಹಾರರ್ ಮತ್ತು ಪ್ರೀತಿ ಕಥೆ ಹೊಂದಿರುವ ಧಾರವಾಹಿಯನ್ನು ಸುಶೀಲ್‌ಮೊಕಾಶಿ ನಿರ್ದೇಶಿಸುತ್ತಿದ್ದಾರೆ. ಇದು ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ಮೂಡಿಬರಲಿದೆ. ಇವುಗಳ ಜೊತೆ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳ ಕುರಿತಂತೆ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್‌ಜೆ ನಿಖಿಲ್‌ಸ್ವಾಮಿ ಸಾರಥ್ಯದಲ್ಲಿ ರಾತ್ರಿ 9.30 ಕ್ಕೆ ಮೂಡಿಬರಲಿದೆ. ಸೋಮವಾರದಿಂದ ಶುಕ್ರವಾರವರೆಗೆ ಏಪ್ರಿಲ್ 19ರಿಂದ ಪ್ರಸಾರವಾಗಲಿವೆ ’ಸಿರಿ ಕನ್ನಡ’ ವಾಹಿನಿ ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮ ರೂಪಿಸಿ ಮನರಂಜನೆ ನೀಡುವುದಾಗಿ ವಾಹಿನಿ ಮುಖ್ಯಸ್ಥ ಸಂಜಯ್ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅದೃಷ್ಟವಂತೆ…! ಹೌದು, ಈ ಮಾತು ಅಕ್ಷರಶಃ ನಿಜ. ಮೊದಲ ಸಿನಿಮಾದಲ್ಲೇ ಗೆಲುವು ಕಂಡ ಬೆಡಗಿ. ಅಷ್ಟೇ ಅಲ್ಲ, ತನ್ನ ಅಂದದ ಮೊಗದಿಂದಲೇ ಎಲ್ಲರನ್ನೂ ಮೋಡಿ ಮಾಡಿದವೃು. ನೋಡ ನೋಡುತ್ತಿದ್ದಂತೆಯೇ ಕನ್ನಡ ಮಾತ್ರವಲ್ಲ, ಟಾಲಿವುಡ್, ಕಾಲಿವುಡ್, ಬಾಲಿವುಡ್‌ಗೂ ಕಾಲಿಟ್ಟ ಚೆಲುವೆ ಈಕೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ, ಒಂದು ಸುತ್ತು ಎಲ್ಲಾ ಸ್ಟಾರ್‌ಗಳ ಜೊತೆ ಡಿಂಗುಡಾಂಗು ಅಂತ ಕುಣಿದು ಕುಪ್ಪಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ಗೆ ಹಾರಿದ್ದ ರಶ್ಮಿಕಾಗೆ ಈಗ ಮತ್ತೊಂದು ಭರ್ಜರಿ ಅವಕಾಶವೊಂದು ಸಿಕ್ಕಿದೆ. ಹಾಗಂತ, ಅದು ಹೊಸ ಬಾಲಿವುಡ್ ಸಿನಿಮಾನಾ ಅಂತಂದುಕೊಳ್ಳುವಂತಿಲ್ಲ. ಅವರೀಗ ಜನಪ್ರಿಯ ಕಂಪೆನಿಯೊಂದಕ್ಕೆ ರಾಯಭಾರಿಯಾಗಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.
ಈಗಾಗಲೇ ಅನೇಕ ಸ್ಟಾರ್ ನಟಿಯರು ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿರುವುದು ಗೊತ್ತೇ ಇದೆ. ರಶ್ಮಿಕಾ ಕೂಡ ಈಗ ದೊಡ್ಡ ಕಂಪೆನಿಗೆ ರಾಯಭಾರಿಯಾಗಿದ್ದಾರೆ. ಫಾಸ್ಟ್ ಫುಡ್ ತಯಾರಿಕಾ ಕಂಪೆನಿಯೊಂದು ರಶ್ಮಿಕಾ ಮಂದಣ್ಣ ಅವರನ್ನು ಸೌತ್ ಇಂಡಿಯಾ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಅಂದಹಾಗೆ, ಅದು ಮೆಕ್‌ಡೊನಾಲ್ಡ್ ಬ್ರ್ಯಾಂಡ್. ಸದ್ಯಕ್ಕೆ ರಶ್ಮಿಕಾ ಮೆಕ್‌ಡೊನಾಲ್ಡ್ ಬ್ರ್ಯಾಂಡ್‌ನ ಸೌತ್ ಇಂಡಿಯಾ ರಾಯಭಾರಿ. ಅದೇನೆ ಇರಲಿ, ಒಂದರ ಮೇಲೊಂದು ಅದೃಷ್ಟ ರಶ್ಮಿಕಾ ಅವರನ್ನು ಹುಡುಕಿ ಬರುತ್ತಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾಗೆ ಇನ್ನಷ್ಟು ಬ್ರ್ಯಾಂಡ್ ಸಿಕ್ಕರೆ ಅಚ್ಚರಿಯೇನಿಲ್ಲ.
ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಅಷ್ಟು ಸುಲಭವಾಗಿ ಜಾಗ ಸಿಗೋದಿಲ್ಲ. ಸಿಕ್ಕರೂ, ಅದನ್ನು ಭದ್ರಪಡಿಸಿಕೊಳ್ಳೋಕೆ ಹೆಣಗಾಡಲೇಬೇಕು. ಇಲ್ಲಿ ಹೊಸಬರ ಸಂಖ್ಯೆಯೇ ಹೆಚ್ಚು. ದಿನ ಕಳೆದಂತೆ ಹೊಸಬರು ನೂರಾರು ಕನಸು ಕಟ್ಟಿಕೊಂಡು ಇಲ್ಲಿಗೆ ಬಂದೇ ಬರ್ತಾರೆ. ಅಂತಹವರ ಸಾಲಿಗೆ ಈಗ “ಸೈದಾಪುರ” ಚಿತ್ರತಂಡವೂ ಒಂದು. ಹೌದು, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮುಂಚೆ ಚಿತ್ರದ ಆಡಿಯೋ ರಿಲೀಸ್ ಕೂಡ ಆಗಿದೆ. ಇಲ್ಲಿ ಸಿನಿಮಾ ಮತ್ತು ಹಾಡುಗಳ ಬಗ್ಗೆ ಹೇಳುವುದಕ್ಕಿಂತ ಅವರೊಳಗಿರುವ ಸಿನಿಮಾ ಪ್ರೀತಿ ಬಗ್ಗೆ ಹೇಳಲೇಬೇಕು. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ. ಇಲ್ಲಿ ಪ್ರೀತಿ ಗೀತಿ ಇತ್ಯಾದಿ ಬಗ್ಗೆ ಹೇಳೋಕೆ ಕಾರಣವೇನು ಗೊತ್ತಾ? ಇಲ್ಲಿ ಇಡೀ ಚಿತ್ರತಂಡ ನೋವಲ್ಲೇ ಸಿನಿಮಾ ಮಾಡಿ ಮುಗಿಸಿದೆ. ಹಾಗಾದರೆ ಆ ನೋವೇನು? ಯಾಕೆ? ಆ ಬಗ್ಗೆ ಒಂದು ರೌಂಡಪ್.
ಸಿನಿಮಾ ಎಂಬ ರಂಗಿನ ಪ್ರಪಂಚದಲ್ಲಿ ಮಿಂದೇಳಬೇಕೆಂಬ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಬಣ್ಣದ ಲೋಕಕ್ಕೆ ಎಂಟ್ರಿಯಾಗಬೇಕು, ತಾನೂ ಇಲ್ಲೊಂದು ಗುರುತು ಮಾಡಬೇಕು ಅನ್ನೋ ಆಸೆ ಕಟ್ಟಿಕೊಂಡೇ ಇಲ್ಲಿ ಕಾಲಿಡುತ್ತಾರೆ. ಅಂತಹ ಆಸೆ ಹೊತ್ತುಕೊಂಡು ಬಂದವರಲ್ಲಿ ಭಾನುಪ್ರಕಾಶ್ ಬ್ರದರ್ಸ್ ಕೂಡ ಸೇರಿದ್ದಾರೆ. ಇವರಿಬ್ಬರ ಕನಸಿಗೆ ಸಾಕಾರವಾಗಿದ್ದೇ “ಸೈದಾಪುರ” ಎಂಬ ಸಿನಿಮಾ. ಈ ಚಿತ್ರ ಇನ್ನೇನು ಮುಗಿದು, ಸೆನ್ಸಾರ್‌ಗೆ ಹೋಗಬೇಕು ಅನ್ನುವ ಹೊತ್ತಿಗೆ ಒಂದು ಆಘಾತ ಎದುರಾಗುತ್ತೆ. ಅದು ಇಡೀ ಚಿತ್ರತಂಡವನ್ನೇ ಕುಸಿದು ಬೀಳುವಂತೆ ಮಾಡುತ್ತೆ. ಅದು ಮತ್ತೇನೂ ಅಲ್ಲ, ತನ್ನ ಸಹೋದರನಿಗಾಗಿಯೇ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದ ಅಣ್ಣನ ಸಾವು!
ಮಹದೇವ ಫಿಲ್ಮ್ ಪ್ರೊಡಕ್ಷನ್ ಮೂಲಕ ಈ ಚಿತ್ರ ತಯಾರಾಗಿದೆ. ಈ ಸಿನಿಮಾಗೆ ಭಾನುಪ್ರಕಾಶ್ ಹೀರೋ. ತನ್ನ ತಮ್ಮನಿಗಾಗಿಯೇ ಚಿತ್ರ ನಿರ್ಮಾಣಕ್ಕಿಳಿದಿದ್ದ ಸಹೋದರ ಮಹದೇವ ಅವರು ಸಿನಿಮಾವನ್ನು ಚೆನ್ನಾಗಿಯೇ ನಿರ್ಮಾಣ ಮಾಡಿದ್ದರು. ಇನ್ನೇನು ಚಿತ್ರವನ್ನು ಸೆನ್ಸಾರ್ ಮಾಡಿಸಬೇಕು ಅನ್ನುವ ಹೊತ್ತಿಗೆ ಅವರು ಇಹಲೋಕ ತ್ಯಜಿಸಿಬಿಟ್ಟರು. ಈ ಆಘಾತ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ದಿಕ್ಕೇ ತೋಚದಂತಾದ ಹೀರೋ ಭಾನುಪ್ರಕಾಶ್, ಮುಂದೇನು ಎಂಬ ಚಿಂತೆಗೀಡಾದರು. ಅವರ ಕುಟುಂಬ ಕೂಡ ಮಹದೇವನ ನೆನಪಲ್ಲೇ ಕಣ್ಣೀರು ಹಾಕತೊಡಗಿತು. ಅಣ್ಣನ ಸಿನಿಮಾ ಪ್ರೀತಿಯಿಂದಲೇ “ಸೈದಾಪುರ” ಚಿತ್ರ ತಯಾರಾಗಿದ್ದರಿಂದ, ಏನೇ ಆದರೂ ಸರಿ, ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದು, ಅಣ್ಣನ ಆಸೆಯನ್ನು ಈಡೇರಿಸಬೇಕು ಎಂಬ ಛಲ ತೊಟ್ಟರು ಭಾನುಪ್ರಕಾಶ್. ಈಗ ಸಿನಿಮಾದ ಆಡಿಯೋ ರಿಲೀಸ್ ಮಾಡಲಾಗಿದೆ. ರಿಲೀಸ್ ವೇಳೆ ಒಂದು ಮನಕಲಕುವ ಸನ್ನಿವೇಶವೂ ಜರುಗಿತು.
ಭಾನುಪ್ರಕಾಶ್,
ಅಂದು ಆಡಿಯೋ ರಿಲೀಸ್‌ಗೆ ಭಾನುಪ್ರಕಾಶ್ ತಮ್ಮ ಕುಟುಂಬವನ್ನು ಕರೆತಂದಿದ್ರು. ವೇದಿಕೆ ಏರಿದ ಆ ಕುಟುಂಬ ಕಣ್ಮರೆಯಾದ ಮಹದೇವನನ್ನು ನೆನೆದು ಕಣ್ಣೀರಾಯಿತು. ಉತ್ತರ ಕರ್ನಾಟಕ ಮೂಲದ ಯಾದಗಿರಿಯಿಂದ ಬಂದಿದ್ದ ಮಹದೇವನ ಅಪ್ಪ, ಅಮ್ಮ, ತಂಗಿ ಮತ್ತು ಬಳಗ ಕಣ್ಣುತುಂಬಿಕೊಂಡಿತು. ವೇದಿಕೆ ಮೇಲಿದ್ದ ಚಿತ್ರತಂಡದ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದವು. ಆ ಕ್ಷಣ ಎಲ್ಲವೂ ಮೌನ, ಎಲ್ಲರ ಹೃದಯವೂ ಭಾರ. ಅಲ್ಲಿ ಮಾತಿಲ್ಲ ಬರೀ ದುಃಖ-ದುಮ್ಮಾನ. ವೇದಿಕೆಯಲ್ಲಿ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಕಳೆದುಕೊಂಡ ಅಣ್ಣನ ಬಗ್ಗೆ ಗುಣಗಾನ ಮಾಡಿದ್ದೇ ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಅವರೆಲ್ಲರ ಕಣ್ಣಂಚಲ್ಲಿ ನೀರು ಜಿನುಗಿದ್ದೇ ಹೆಚ್ಚು.
ಅದೇನೆ ಇರಲಿ, ದೂರವಾಗಿರುವ ಮಹದೇವನ ಆತ್ಮ ಅಲ್ಲಿಂದಲೇ ತನ್ನ ತಮ್ಮನ ಸಿನಿಮಾಗೆ ಆಶೀರ್ವದಿಸಲಿದೆ ಅನ್ನೋದು ಚಿತ್ರತಂಡದ ಬಲವಾದ ನಂಬಿಕೆ. ಅಂದಹಾಗೆ, ಈ ಚಿತ್ರಕ್ಕೆ ಶ್ರೀರಾಮ್ ನಿರ್ದೇಶಕರು. ಸಿನಿಮಾ ಬಗ್ಗೆ ಹೇಳೋದಾದರೆ, ಪ್ರೀತಿ ಸಿಗದೆ ಪರಿತಪಿಸೋ ಹುಡುಗನ ಪರದಾಟವನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಹಳ್ಳಿ ಹುಡುಗನ ಹಳ್ಳಿಗಾಡಿನ ಸಿನಿಮಾಗೆ ಭಾನುಪ್ರಕಾಶ್ ಹೀರೋ. ಅವರಿಗೆ ಸಂಗೀತ ನಾಯಕಿ. ಈ ಚಿತ್ರಕ್ಕೆ ಅಶೋಕ್ ಮತ್ತು ಸುರೇಶ್ ಚಿಕ್ಕಣ್ಣ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವಿನುಮನಸು ಸಂಗೀತ ನೀಡಿದರೆ, ಲೋಕೇಶ್ ಸಾಹಿತ್ಯವಿದೆ. ಬಾಲ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯ ರಿಲೀಸ್‌ಗೆ ಸಜ್ಜಾಗಿರುವ ಸೈದಾಪುರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.