ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ (75) ಇಂದು (ಬುಧವಾರ) ನಿಧನರಾಗಿದ್ದಾರೆ. ಸುಮಾರು ಮೂರುವರೆ ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅಶೋಕ್ ರಾವ್, ಖಳನಟರಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ಡಾ.ರಾಜ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದರು. ಇಲ್ಲಿಯವರೆಗೆ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಶೋಕ್ ರಾವ್ ಅವರು ಕೆಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಶೋಕ್ ರಾವ್ ಅವರು ತಮ್ಮ ನಟನೆ ಮೂಲಕ ಸಾಕಷ್ಟು ಗಮನಸೆಳೆದಿದ್ದರು. ಅದರಲ್ಲೂ ಖಳನಟರಾಗು ಹೀರೋ ಲೆವೆಲ್ ಪಾತ್ರಗಳಷ್ಟೇ ಗಮನ ಸೆಳೆದಿದ್ದರು.
ಮೃತರ ಅಂತ್ಯಕ್ರಿಯೆ ಹೆಬ್ಬಾಳ ಸಮೀಪದ ಚಿತಾಗಾರದಲ್ಲಿ ಮಧ್ಯಾಹ್ನ ಎರಡು ಗಂಟಗೆ ನೆರವೇರಲಿದೆ. ಮೃತರ ಕುಟುಂಬಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.
ಅಘೋರ ಹೊಸ ಬಗೆಯ ಸಿನಿಮಾ. ಹೊಸತನ ಸಾರುವ ಈ ಚಿತ್ರ ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ…
ಕನ್ನಡದಲ್ಲಿ ಈಗಾಗಲೇ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿವೆ. ಅವರ ಸಿನಿಮಾಗಳೂ ಸಹ ಹಲವು ಬಗೆಯ ಶೀರ್ಷಿಕೆ ಹೊತ್ತು ಬಂದಿವೆ. ಅದರೊಂದಿಗೆ ವಿಭಿನ್ನ ಕಥೆಯುಳ್ಳ ಸಿನಿಮಾಗಳೂ ಬಂದಿವೆ. ಅಂತಹ ಚಿತ್ರಗಳ ಸಾಲಿಗೆ ಈಗ “ಅಘೋರ” ಸಿನಿಮಾವೂ ಸೇರಿದೆ. ಹೌದು, ಅಘೋರ ಹೊಸಬಗೆಯ ಚಿತ್ರ. ಕೆಲ ಸಿನಿಮಾಗಳು ರಿಲೀಸ್ ಗೂ ಮೊದಲೇ ಜೋರು ಸೌಂಡು ಮಾಡುತ್ತವೆ. ಅಂಥದ್ದೊಂದು ಸೌಂಡಿಗೆ ಅಘೋರ ಸಿನಿಮಾ ಸೇರಿದೆ. ಅಂದಹಾಗೆ, ಈ ಚಿತ್ರವನ್ನು ಪ್ರಮೋದ್ ರಾಜ್ ಎನ್. ಎಸ್. ನಿರ್ದೇಶಿದ್ದಾರೆ. ಇವರು ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಅಘೋರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೋಕ್ಷ ಸಿನಿಮಾಸ್ ಬ್ಯಾನರ್ ನಲ್ಲಿ ಪುನಿತ್ ಎಂ.ಎನ್. ಚಿತ್ರವನ್ನು ನಿರ್ಮಿಸಿದ್ದಾರೆ.
ಇಷ್ಟಕ್ಕೂ ಅಘೋರ ಕಥೆ ಏನು?
ಅಘೋರ ಬಗ್ಗೆ ಹೇಳುವುದಾದರೆ, ಇದೊಂದು ಹಾರರ್ ಫ್ಯಾಂಟಸಿ ಸಿನಿಮಾ. ಅದರಲ್ಲೂ ಒಂದು ನಂಬಿಕೆ ಹಿಂದಿರುವ ಕಥಾಹಂದರ ಇಲ್ಲಿದೆ. ಜಗತ್ತಿನಲ್ಲಿ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ಇದೆಲ್ಲದರಲ್ಲೂ ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ. ಇಷ್ಟೆಲ್ಲಾ ಇದ್ದರೂ ಈ ಪ್ರಕೃತಿಯ ಸೃಷ್ಟಿಕರ್ತ ಯಾರು? ರಕ್ಷಕ ಯಾರು? ಇಂತಹ ಆಲೋಚನೆಯನ್ನು ಆಳವಾಗಿ ನೋಡಿದಾಗ ದೇವರೆಂದು ಕರೆಯುವ ಅದೃಶ್ಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಹುದು. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದಕ್ಕೆ ತಕ್ಕಂತೆ ಚಿತ್ರಕಥೆಯೂ ಇಲ್ಲಿದೆ.
ಇನ್ನು, ಈ ಚಿತ್ರದಲ್ಲಿ ಆಕಾಶ, ಭೂಮಿ, ಪ್ರಕೃತಿ, ಅಗ್ನಿ ಕೂಡ ಪಾತ್ರಗಳಾಗಿವೆ. ಪ್ರಕೃತಿಯೊಂದಿ ಗೆ ಏಕೆ ಬದುಕ ಬೇಕು ಮತ್ತು ಸಾವು ಏಕೆ ಅನಿವಾರ್ಯ ಇದು ಯಾರಿಂದ, ಯಾವಾಗ , ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಎಷ್ಟೇ ಪ್ರಯತ್ನಿಸಿದರೂ ಕರ್ಮದ ರೀತಿಯಲ್ಲಿ ಅದು ಸಂಭವಿಸುತ್ತದೆ. ಒಟ್ಟಾರೆ ಈ ಚಿತ್ರದ ಸಾರಾಂಶ ಬಗ್ಗೆ ಹೇಳುವುದಾದರೆ, ಕರ್ಮ ಅನ್ನೋದು ಯಾರಿಗೂ ಬಿಡಲ್ಲ ಎಂಬ ಅಂಶಗಳು ಇಲ್ಲಿವೆ.
ಅವಿನಾಶ್ ಚಿತ್ರದಲ್ಲಿ ಅಘೋರಿಯಾಗಿ ನಟಿಸಿದ್ದಾರೆ. ಉಳಿದಂತೆ, ಅಶೋಕ್ ಶರ್ಮಾ, ಪುನಿತ್ ಗೌಡ, ರಚನಾ ದಶರತ್ ದ್ರವ್ಯಶೆಟ್ಟಿ ಇತರರು ಕಾಣಿಸಿಕೊಂಡಿದ್ದಾರೆ. ಶರತ್ ಜಿ ಕುಮಾರ್ ಛಾಯಾಗ್ರಹಣವಿದೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯವಿದೆ. ಎಲ್. ಆರ್ . ಜೀವನ್ ಸಂಭಾಷಣೆ ಇದೆ. ಎ.ಆರ್ .ರೆಹಮಾನ್ ಬಳಿ ಕೆಲಸ ಮಾಡಿರುವ ಎ. ಬಿ. ಮುರಳೀಧರನ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ಮಾಡಿರುವ ಪ್ರವೀಣ್ ಬಿಜಿಎಂ ಮಾಡಿದ್ದಾರೆ. ತ್ಯಾಗರಾಜ್ ಅವರು ಚಿತ್ರದ ಶೀರ್ಷಿಕೆ ಸಂಗೀತ ನೀಡಿದ್ದಾರೆ. ಇನ್ನು ಸಂಜಿತ್ ಹೆಗ್ಡೆ, ಸರಿಗಪ ಖ್ಯಾತಿಯ ಹನುಮಂತ, ಸಚಿನ್ ಹಾಡಿದ್ದಾರೆ. ಯುಡಿವಿ ವೆಂಕಟೇಶ್ ಸಂಕಲನವಿದೆ. ಮಾಸ್ ಮಾದ ಅವರ ಸಾಹಸವಿದೆ. ಅದೇನೆ ಇರಲಿ, ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡಿದ್ದು, ಚಿತ್ರ ಫೆಬ್ರವರಿ 25ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ಕೆ ಆರ್ ಜಿ ಸ್ಟುಡಿಯೋ ಸ್ ರಿಲೀಸ್ ಜವಾಬ್ದಾರಿ ಹೊತ್ತುಕೊಂಡಿದೆ.
ರಿಲೀಸ್ ಮೊದಲೇ ಪ್ರಶಸ್ತಿಯ ಗರಿ…
ಅಘೋರಿ ಸಿನಿಮಾ ಬಗ್ಗೆ ಹೇಳುವುದಾದರೆ ಸುಮಾರು 16 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ವಿವಿಧ ವಿಭಾಗಗಳಲ್ಲಿ 32 ಪ್ರಶಸ್ತಿಗಳನ್ನು ಪಡೆದಿದೆ. ಅತ್ಯುತ್ತಮ ಚೊಚ್ಚಲ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ನಟ, ಅತ್ಯುತ್ತಮ ಖಳ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಮೇಕಪ್ ಇತ್ಯಾದಿ ವಿಭಾಗದಲ್ಲಿ ಪ್ರಶಸ್ತಿ ಬಾಚಿದೆ.
ಹೊಸಬರ ಚಿತ್ರ “ವೆಡ್ಡಿಂಗ್ ಗಿಫ್ಟ್” ಸಿನಿಮಾ ಚಿತ್ರೀಕರಣ ಮುಗಿದಿರೋದು ಎಲ್ಲರಿಗೂ ಗೊತ್ತಿದೆ. ಈಗ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ಣಗೊಂಡಿದೆ. ಹೌದು, ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಡಬ್ಬಿಂಗ್ ಮುಗಿದಿದೆ. ಖ್ಯಾತ ನಟಿ ಪ್ರೇಮ ಚಿತ್ರದ ಮುಖ್ಯ ಆಕರ್ಷಣೆ. ಇತ್ತೀಚೆಗೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಪ್ರೇಮ್ ಅವರು ಡಬ್ಬಿಂಗ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತಾಡುವ ಪ್ರೇಮ, “ನಾನು ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ.
ನಿರ್ದೇಶಕ ವಿಕ್ರಂಪ್ರಭು ಅವರು ಉತ್ತಮ ಕಥೆ ಮಾಡಿದ್ದಾರೆ. ನಾನು ಕೋರ್ಟಿನಲ್ಲಿ ಕೆಲವು ಕಲಾಪಗಳನ್ನು ನೋಡಿದ್ದೀನಿ. ಅಲ್ಲಿ ವಕೀಲರು ಮಾತನಾಡುವ ಹತ್ತಿರದಿಂದ ಕಂಡ ನನಗೆ ಈ ಪಾತ್ರ ಮಾಡಲು ಅನುಕೂಲವಾಯಿತು ಎಂದು ಪ್ರೇಮ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ. ಈಗಿನ ಕಾಲದ ಕೆಲವು ಕಾನೂನುಗಳನ್ನು ಕೆಲವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಎಂಬ ವಿಷಯಯಿಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ನಿರ್ದೇಶಕ ವಿಕ್ರಂಪ್ರಭು ಅವರ ಮಾತು.
ಚಿತ್ರದಲ್ಲಿ ನಿಶಾನ್ ನಾಣಯ್ಯ, ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ, ಚಿತ್ರ ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನವಿದೆ. ಉದಯಲೀಲ ಛಾಯಾಗ್ರಹಣವಿದೆ. ವಿಜೇತ್ ಚಂದ್ರ ಅವರ ಸಂಕಲನ ಚಿತ್ರಕ್ಕಿದೆ.
ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಬಹು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಅಂತೆಯೇ ಆ ಸಿನಿಮಾ ರಿಲೀಸ್ ಆದ ನಂತರ ಆ ನಿರೀಕ್ಷೆ ಸುಳ್ಳಾಗಲೇ ಇಲ್ಲ. ಕೆಜಿಎಫ್2 ಸಿನಿಮಾ ಕೂಡ ಈಗ ರಿಲೀಸ್‌ಗೆ ರೆಡಿಯಾಗಿದೆ. ಕೊರೊನಾ ಅಬ್ಬರ ಇರದೇ ಹೋಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಬಹುದೊಡ್ಡ ನಿರೀಕ್ಷೆ ಹುಟ್ಟಿಸಿರುವ ಕೆಜಿಎಫ್ 2 ಇನ್ನೇನು ಏಪ್ರಿಲ್ 14ರಂದು ರಿಲೀಸ್ ಆಗೋಕೆ ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಕೆಜಿಎಫ್ 2 ಚಿತ್ರತಂಡ ಶ್ರೀ ಕೊಲ್ಲೂರು ಮೂಕಾಂಬಿಕಾ ಮತ್ತು ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದೆ.
ಹೌದು, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ನಟ ಯಶ್ ಹಾಗು ಸಂಗೀತ ನಿರ್ದೇಶಕ ರವಿಬಸ್ರೂರು ಹಾಗು ತಂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಸದ್ಯ ಆ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸದ್ಯ ಈ ಬೆಳವಣಿಗೆಗಳನ್ನು ಗಮನಿಸಿದರೆ, ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದೇ ತಡ, ಎಲ್ಲೆಡೆ ಕೆಜಿಎಫ್ 2 ಸಿನಿಮಾ ಪ್ರೇಕ್ಷಕರ ಮುಂದೆ ಯಾವಾಗ ಬರುತ್ತೋ ಎಂಬ ಉತ್ಸಾಹದಲ್ಲಿ ಯಶ್ ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ.
ಅಲ್ಲಿಗೆ ಇಡೀ ಜಗತ್ತು ಕೆಜಿಎಫ್ 2 ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಈಗ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿರುವುದು ತೆರೆಗೆ ಅಪ್ಪಳಿಸಲು ಸಾಕಷ್ಟು ತಯಾರಿ ನಡೆಸುತ್ತಿರುವುದನ್ನು ಹೇಳುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಮೂಲಕ ದೊಡ್ಡ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಕೆಜಿಎಫ್ ಸಿನಿಮಾ ಬಂದಿದ್ದೇ ತಡ, ಕನ್ನಡ ಚಿತ್ರರಂಗ ಮತ್ತಷ್ಟು ಶೈನ್ ಆಗಿದ್ದು ಸುಳ್ಳಲ್ಲ. ಕೆಜಿಎಫ್ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಯಶಸ್ಸು ಪಡೆದುಕೊಂಡಿತು.
ಆ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್ 2 ಕೂಡ ಶುರುವಾಗಿ, ಏಪ್ರಿಲ್ 14ರಂದು ಪ್ರೇಕ್ಷಕರ ಮುಂದೆ ಬರಲು ಅನೌನ್ಸ್ ಕೂಡ ಮಾಡಿತ್ತು. ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸಿನಿಮಾ ಮುಂದಕ್ಕೆ ಹೋಯಿತು. ಈಗ ಸದ್ಯ, ಇಡೀ ಚಿತ್ರತಂಡ ಒಂದೊಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ದೇವಾಲಯಗಳಿಗೆ ಭೇಟಿ ನೀಡುತ್ತಿದೆ. ಆ ಮೂಲಕ ಪ್ರಚಾರ ಕಾರ್ಯವೂ ಶುರುವಾಗುತ್ತಿದೆ.
ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ರಂಗಭೂಮಿಯ ಅಪ್ಪಟ ಪ್ರತಿಭೆಗಳ ಆಗಮನವಾಗಿದೆ. ಹೌದು, ಇಲ್ಲಿ ಇಬ್ಬರನ್ನು ಹೊರತುಪಡಿಸಿ ಬಹುತೇಕ ರಂಗಭೂಮಿ ಪ್ರತಿಭೆಗಳೇ ಎಂಟ್ರಿಯಾಗಿದ್ದಾರೆ. ಅಂದಹಾಗೆ, ಅವರು ಪ್ರೀತಿಯಿಂದಲೇ ಮಾಡಿರುವ ಚಿತ್ರಕ್ಕೆ “ಪ್ರೀತಿಗಿಬ್ಬರು” ಎಂದು ಹೆಸರಿಟ್ಟಿದ್ದಾರೆ.
ಹೌದು, ಪಾಂಡಿಲ್ಯ ಬಿ.ಟಿ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ಚೊಚ್ಚಲ ಪ್ರಯತ್ನ. ವಿಶೇಷ ಅಂದರೆ, ಇವರು ಕೆ.ವಿ.ರಾಜು ಮತ್ತು ಎಂ.ಎಸ್.ರಮೇಶ್ ಅವರಂತಹ ಯಶಸ್ವಿ ನಿರ್ದೇಶಕರೊಂದಿಗೆ ಕೆಲಸ ಮಾಡಿ ಮೊದಲ ಸಲ ನಿರ್ದೇಶನ ಪಟ್ಟ ಅಲಂಕರಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವಸ್ಟೋರಿ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ.
ಅಂದಹಾಗೆ ಇದೊಂದು ಪಕ್ಕಾ ಪ್ರೇಮಕಥೆ ಇರುವ ಸಿನಿಮಾ. ರಾಜಕೀಯ ಇರಲಿ, ಕ್ರಿಕೆಟ್ ಇರಲಿ, ಅಲ್ಲಿ ಒಂದಷ್ಟು ಮಂದಿ ಹೇಗೆ ನೆನಪಾಗುತ್ತಾರೋ ಹಾಗೆಯೇ ಪ್ರೀತಿಯ ಸಿನಿಮಾ ಅಂದಾಕ್ಷಣ, ಅಲ್ಲಿ ನಾಯಕ, ನಾಯಕಿಯೂ ನೆನಪಾಗುತ್ತಾರೆ. ಒಂದು ಹಳ್ಳಿಯಲ್ಲಿ ನಡೆಯುವಂತಹ ಪ್ರೇಮಕಥೆ ಇಲ್ಲಿದೆ. ಕಷ್ಟದ ಸನ್ನಿವೇಶದಲ್ಲಿ ಆ ಊರಿನ ಪ್ರೇಮಿಗಳು ಒಂದಾಗುತ್ತಾರೋ ಇಲ್ಲವೋ ಅನ್ನುವುದು ಕಥೆ. ಇಲ್ಲಿ ಜಾತಿ ವ್ಯವಸ್ಥೆಯೂ ಹೈಲೈಟ್. ಆದರೆ, ಅದೇ ಮುಖ್ಯವಲ್ಲ. ಇನ್ನು, ಈ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ರಂಗಭೂಮಿ ಹಿನ್ನಲೆಯಿಂದ ಬಂದವರು. ಇಬ್ಬರು ನಟಿಯರು ಇಲ್ಲಿ ಖಳನಾಯಕಿಯರಾಗಿ ಅಬ್ಬರಿಸಿದ್ದಾರೆ. ನಾಯಕನಾಗಿ ಗೋವಿಂದ ಕಾಣಿಸಿಕೊಂಡಿದ್ದಾರೆ. ನಿರೋಷಶೆಟ್ಟಿ ನಾಯಕಿ.
ಇನ್ನು, ಖಳನಟಿಯರಾಗಿ ಮಂಜುಳಾ ಮತ್ತು ಕಾವ್ಯಪ್ರಕಾಶ್ ನಟಿಸಿದ್ದಾರೆ. ಅಣ್ಣನಾಗಿ ಚಿರಾಗ್, ಇವರೊಂದಿಗೆ ಶೈಲೇಶ್, ಸಂದೀಪ್ ಇತರರು ನಟಿಸಿದ್ದಾರೆ. ಅನುರಾಗ್‌ರೆಡ್ಡಿ ಸಂಗೀತ ನೀಡಿದರೆ, ಎ.ಟಿ.ರವೀಶ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ರಮೇಶ್‌ಗೌಡ ಚಿತ್ರದ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ಡಾ.ದೊಡ್ಡರಂಗೇಗೌಡ ಅವರ ಗೀತ ಸಾಹಿತ್ಯವಿದೆ. ಆರ್ಯನ್ ಶ್ರೀನಿವಾಸನ್ ಮತ್ತು ಅಶೋಕ್ ಸಾಹಸವಿದೆ. ಪ್ರವೀಣ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಾಮರಾಜನಗರ, ಉಡುಪಿ, ಬಳ್ಳಾರಿ, ಬೀದರ್, ನಾಗಮಂಗಲ, ಕೊಳ್ಳೆಗಾಲ, ಮರವಂತೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿತರಕ ರಮೇಶ್ ಮೂಲಕ ಚಿತ್ರವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸ್ಪುರದ್ರೂಪಿ ನಟ ಅಂದಾಕ್ಷಣ ಥಟ್ಟನೆ ನೆನಪಾಗೋದೇ ನೆನಪಿರಲಿ ಪ್ರೇಮ್. ಹೌದು, ಹುಡುಗರಿಗಿಂತ ಹುಡುಗಿಯರೇ ತುಸು ಹೆಚ್ಚಾಗಿ ಇಷ್ಟಪಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಾವ್ಯ ಬರೆಯುವ ಮೂಲಕ ಫ್ಯಾಮಿಲಿ ಆಡಿಯನ್ಸ್‌ಗೆ ಹತ್ತಿರವಾದವರು. ಫ್ಯಾನ್ಸ್‌ಗೆ ಪ್ರಾಣ ಆಗುವ ಮೂಲಕ ನೆನಪಿರಲಿ ಈ ಪ್ರೇಮ್ ಅನ್ನುತ್ತಲೇ ಎಲ್ಲರೊಂದಿಗೂ ಜೊತೆ ಜೊತೆಯಲ್ಲೇ ಅಭಿಮಾನಿಗಳ ಪ್ರೀತಿಯ ಅಭಿಮಾನದ ಪಲ್ಲಕ್ಕಿ ಹೊತ್ತು ಬಂದ ಗುಣವಂತ ಸದಾ ಸದಭಿರುಚಿಯ ಸಿನಮಾ ಕೊಡಬೇಕೆಂಬ ಹೊಂಗನಸು ಕಂಡವರು. ಚಿತ್ರರಂಗದಲ್ಲಿ ಸಾಕಷ್ಟು ಸವಿ ಸವಿ ನೆನಪುಗಳನ್ನು ಉಣಬಡಿಸುತ್ತಲೇ ಬಂದಿರುವ ಪ್ರೇಮ್, ಬೆಳ್ಳಿಪರದೆಗೆ ಎಂಟ್ರಿಯಾಗಿ ಬರೋಬ್ಬರಿ ಎರಡು ದಶಕಗಳೇ ಕಳೆದಿವೆ
ಹೌದು, ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳು ಪೂರೈಸಿವೆ. ಈ ಚಂದದ ಹೀರೋ ಚಂದನವನದಲ್ಲಿ ಇಷ್ಟು ವರ್ಷ ಕಳೆಯುವುದೆಂದರೆ ಸುಲಭದ ಮಾತಲ್ಲ. ಎಲ್ಲಾ ನಟರಂತೆ ಪ್ರೇಮ್ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟ ಕಂಡವರು. ಆರಂಭದಲ್ಲಿ ಅವಕಾಶಕ್ಕಾಗಿ ಅಲೆದಾಡಿದ್ದೂ ಉಂಟು. ಮೊದಲ ಎಸೆತದಲ್ಲೇ ಬಾಲನ್ನು ಬೌಂಡರಿ ದಾಟಿಸಿದಂತೆ ಪ್ರೇಮ್, ಮೊದಲ ಸಿನಿಮಾ ಮೂಲಕವೇ ಎಲ್ಲರಿಗೂ ಇಷ್ಟವಾದರು. ಆಮೇಲೆ ನೆನಪಿರಲಿ ಮೂಲಕ ಅಚ್ಚಳಿಯದೇ ಉಳಿದ ಹೀರೋ ಎನಿಸಿಕೊಂಡರು. ಅಲ್ಲಿಂದ ದೊಡ್ಡ ಯಶಸ್ಸು ಪಡೆದ ಪ್ರೇಮ್ ಸಾಕಷ್ಟು ಯಶಸ್ಸು ಸಿನಿಮಾಗಳನ್ನು ಕೊಡುತ್ತಲೇ ಬಂದರು. ಪ್ರೇಮ್ ಸುಲಭವಾಗಿ ಸಕ್ಸಸ್ ಕಂಡವರಲ್ಲ. ಸಾಕಷ್ಟು ಶ್ರಮದಿಂದಲೇ, ಒಳ್ಳೆಯ ನಟನೆ ಮತ್ತು ಸ್ಕ್ರಿಪ್ಟ್ ಆಯ್ಕೆಯಿಂದಲೇ ಪ್ರೇಮ್ ತಮ್ಮ ಸಕ್ಸಸ್ ಕಂಡುಕೊಂಡವರು. ಹಾಗಂತ, ಯಶಸ್ಸಿನ ಮೆಟ್ಟಿಲ ಮೇಲೆಯೇ ಪ್ರೇಮ್ ನಡೆದು ಬಂದವರಲ್ಲ. ಅವರಿಗೂ ಅಡೆತಡೆಗಳಾಗಿದ್ದುಂಟು. ಒಂದಷ್ಟು ಸಿನಿಮಾಗಳು ಕೈ ಹಿಡಿಯಲಿಲ್ಲ. ಗೆಲುವು ಪಕ್ಕಕ್ಕೆ ಸರಿಯಿತು. ಸೋಲು ಕಣ್ಮುಂದೆಯೇ ಬರತೊಡಗಿತು. ಅಷ್ಟಾದರೂ ಪ್ರೇಮ್ ದೃತಿಗೆಡಲಿಲ್ಲ. ಒಂದಷ್ಟು ಸಾಲು ಸಾಲು ಸೋಲು ಕಂಡ ಪ್ರೇಮ್‌ಗೆ ಕಣ್ಣ ಮುಂದೆ ಬಂದಿದ್ದು ಚಾರ್ಮಿನಾರ್.
ಈ ಚಾರ್ಮಿನಾರ್ ಸಿನಿಮಾ ಪ್ರೇಮ್ ಅವರಿಗೆ ಮತ್ತೊಂದು ಹೊಸ ಬದುಕು ರೂಪಿಸಿತು ಅಂದರೆ ಸುಳ್ಳಲ್ಲ. ಪ್ರೇಮ್ ಅಲ್ಲಿಂದ ಮತ್ತೆ ಹಿಂದಿರುಗಿ ನೋಡಿದವರಲ್ಲ. ಚಾರ್ಮಿನಾರ್ ಪ್ರೇಮ್ ಮಟ್ಟಿಗೆ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ. ಒಂದೊಳ್ಳೆಯ ಬ್ಯೂಟಿಫುಲ್ ಲವ್‌ಸ್ಟೋರಿ ಮೂಲಕ ಪ್ರೇಮ ಪುನಃ ತನ್ನ ಫ್ಯಾನ್ಸ್ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದರು. ಈ ಚಿತ್ರದ ನಟನೆಗೆ ಅವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಬಂತು. ಅದಾದ ಮೇಲೆ ಒಂದಷ್ಟು ಸಾಲು ಸಾಲು ಸಿನಿಮಾಗಳು ಹುಡುಕಿ ಬಂದರೂ, ಪ್ರೇಮ್‌ಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಈ ನಡುವೆ ಪ್ರೇಮ್ ಒಂದೇ ಪಾತ್ರ, ಕಥೆಗಳಿಗೆ ಸೀಮಿತವಾಗಬಾರದು ಅಂತ ತನ್ನ ಸುಂದರ ಮೈಕಟ್ಟನ್ನು ಹುರಿಗೊಳಿಸಿದರು. ಶತ್ರು ಎಂಬ ಸಿನಿಮಾಗೆ ಅವರು ಬಾಡಿ ಬಿಲ್ಡ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡರು. ತಾನೊಬ್ಬ ಕ್ಲಾಸ್ ಹೀರೋ ಅಷ್ಟೇ ಅಲ್ಲ, ಮಾಸ್ ಹೀರೋ ಆಗೋಕು ಸೈ ಅಂತ ಆ ಸಿನಿಮಾದಲ್ಲಿ ತೋರಿಸಿಕೊಟ್ಟರು.
ಅಲ್ಲಿ ಪ್ರೇಮ್ ಅವರ ಶ್ರಮ ಎದ್ದು ಕಂಡರೂ, ಗೆಲುವು ಮಾತ್ರ ಏಳಲಿಲ್ಲ. ಹಾಗಂತ ಪ್ರೇಮ್ ಸುಮ್ಮನೆ ಕೂರಲೇ ಇಲ್ಲ. ಮತ್ತೆ ಒಂದಷ್ಟು ಹೊಸ ಬಗೆಯ ಕಥೆಗಳತ್ತ ಮುಖ ಮಾಡಿದರು. ಮೆಲ್ಲನೆ ಬಿಝಿಯಾಗತೊಡಗಿದರು. ನಂತರ ಚೌಕ ಚಿತ್ರ ಅವರಿಗೊಂದು ಹೊಸ ಚೌಕಟ್ಟು ಹಾಕಿ ಕೊಟ್ಟಿದ್ದು ಸುಳ್ಳಲ್ಲ. ಅಲ್ಲಿಂದ ಪ್ರೇಮ್ ಮೈಲೇಜ್ ಮತ್ತೆ ಜೋರಾಯಿತು. ಪ್ರೇಮ್ ಕೂಡ ಅದೇ ಮುಗುಳ್ನಗೆಯಲ್ಲಿ ಸಿನಿಮಾಗಳನ್ನು ಕೊಡುತ್ತಲೇ ಬಂದರು. ಅಷ್ಟೊತ್ತಿಗಾಗಲೇ ಪ್ರೇಮ್ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಇಪ್ಪತ್ತೈದನೇ ಸಿನಿಮಾ ಮಾಡುವ ಹಂತಕ್ಕೆ ಬಂದ ಪ್ರೇಮ್‌ಗೆ ಅದೊಂದು ಮೈಲಿಗಲ್ಲು ಸಿನಿಮಾ ಆಗಬೇಕು ಅಂದುಕೊಂಡರು. ಹಾಗಾಗಿಯೇ ನೂರಾರು ಕಥೆಗಳನ್ನು ಕೇಳಿದ್ದುಂಟು. ಕೊನೆಗೆ ಅವರ ತೆಕ್ಕೆಗೆ ಬಿದ್ದಿದ್ದು, ಪ್ರೇಮಂ ಪೂಜ್ಯಂ. ಈ ಚಿತ್ರ ಆರಂಭದಿಂದಲೇ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ. ಪ್ರೇಮ್ ಆಯ್ಕೆ ಮಾಡಿಕೊಂಡ ಕಥೆ ಮತ್ತು ಪಾತ್ರ ನಿಜಕ್ಕೂ ವಿಶೇಷವಾಗಿತ್ತು. ಈ ಚಿತ್ರದ ಒಂದೊಂದು ಗೀತೆ, ಪೋಸ್ಟರ್ ಎಲ್ಲವೂ ಕುತೂಹಲ ಮೂಡಿಸುತ್ತಲೇ ಬಂದಿತ್ತು. ಅದಕ್ಕೆ ಕಾರಣ, ಪ್ರೇಮ್ ಅವರ ಇಪ್ಪತ್ತೈದನೇ ಸಿನಿಮಾ ಅನ್ನೋದು.
ಪ್ರೇಮ್ ಎಂದಿಗಿಂತಲೂ ಈ ಚಿತ್ರದ ಮೇಲೆ ತುಂಬಾನೇ ಆಸಕ್ತಿ ವಹಿಸಿದರು. ತನ್ನ ವೃತ್ತಿ ಜೀವನದ ಇಪ್ಪತ್ತೈದನೇ ಸಿನಿಮಾ ಆಗಿರುವುದರಿಂದ ಇದೊಂದು ಗೆಲುವಿನ ಸಿನಿಮಾ ಆಗಿ ಉಳಿಯಬೇಕು ಅನ್ನೋದು ಅವರ ಆಸೆ ಆಗಿತ್ತು. ಅವರ ಫ್ಯಾನ್ಸ್ ಆಶಯ ಕೂಡ ಹಾಗೆಯೇ ಇತ್ತು. ಅದರಂತೆಯೇ ಪ್ರೇಮಂ ಪೂಜ್ಯಂ ಸಿನಿಮಾ ರಿಲೀಸ್ ಆಯ್ತು. ಜನ ಕೈ ಹಿಡಿದರು. ಅವರಿಗೆ ಅದೇ ಪ್ರೀತಿಯಿಂದ ಪ್ರೇಮ್ ಕೈ ಜೋಡಿಸಿದರು. ತಮ್ಮ ಇಪ್ಪತ್ತು ವರ್ಷಗಳ ಈ ಸಿನಿಮಾ ಪಯಣದಲ್ಲಿ ಪ್ರೇಮ್ ಸೋಲು-ಗೆಲುವು ಎರಡನ್ನೂ ಸಮಾನವಾಗಿಯೇ ಕಂಡುಕೊಂಡಿದ್ದಾರೆ.
ಗೆದ್ದಾಗ ಬೀಗಲಿಲ್ಲ. ಸೋತಾಗ ಬೀಳಲಿಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಬಂದ ಪ್ರೇಮ್ ಅಪ್ಪಟ ಸಿನಿಮಾ ಪ್ರೇಮಿ. ಸದಾ ಸಿನಿಮಾ ಧ್ಯಾನಿಸುವ ಪ್ರೇಮ್‌ಗೆ ಸುಂದರ ಫ್ಯಾಮಿಲಿ ಇದೆ. ಪತ್ನಿ, ಮಗಳು ಮತ್ತು ಮಗ ಅವರ ಪ್ರಪಂಚ. ಆ ಪ್ರಪಂಚದ ಸುತ್ತವೇ ಸುತ್ತುವ ಪ್ರೇಮ್, ತನ್ನ ಅಭಿಮಾನಿಗಳಿಗೂ ಅಷ್ಟೇ ಪ್ರೀತಿ ಕೊಟ್ಟವರು. ಇಷ್ಟು ವರ್ಷಗಳ ಸಿನಿಪಯಣದಲ್ಲಿ ನೋವು-ನಲಿವು ಕಂಡ ಪ್ರೇಮ್, ಇನ್ನೂ ಸಾಧಿಸುವ ಹಂಬಲದಲ್ಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹದಲ್ಲೇ ಅವರು ಸದಾ ಸಿನಿಚಟುವಟಿಕೆಯಲ್ಲಿ ತೊಡಗುತ್ತಾರೆ.
ಇನ್ನು ಪ್ರೇಮ್ ಸಿನಿಮಾ ಪ್ರೀತಿಸುವಷ್ಟೇ ಕುಟುಂಬ ಹಾಗು ಗೆಳೆತನವನ್ನೂ ಪ್ರೀತಿಸುತ್ತಾರೆ. ಅವರಿಗೆ ಒಂದೊಳ್ಳೆಯ ಗೆಳೆಯರ ಬಳಗವೂ ಇದೆ. ಸಿನಿಮಾರಂಗದ ಗೆಳೆಯರೂ ಇದ್ದಾರೆ. ಅದರಾಚೆಯೂ ಒಂದಷ್ಟು ಗೆಳೆಯರ ಬಳಗವಿದೆ. ಮೊದಲಿನಿಂದಲೂ ಸ್ನೇಹ ಸಂಪಾದಿಸಿಕೊಂಡು ಬಂದಿರುವ ಪ್ರೇಮ್‌ಗೆ ಗೆಳೆಯರ ಆಸ್ತಿ ದೊಡ್ಡದೇ ಇದೆ. ಅದೇ ನನ್ನ ಮೌಲ್ಯ ಹೆಚ್ಚಿಸಿದೆ ಎನ್ನುವ ಪ್ರೇಮ್, ಈ ಇಪ್ಪತ್ತು ವರ್ಷಗಳ ಸಿನಿಮಾ ಜರ್ನಿ ಸುಲಭವಾದುದಲ್ಲ. ಈ ಜರ್ನಿಗೆ ಹಲವು ಗೆಳೆಯರ ಸಹಕಾರ, ಪ್ರೋತ್ಸಾಹವೂ ಇದೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಸಿನಿಮಾರಂಗದ ಬಳಗವಿದೆ. ಈ ಇಪ್ಪತ್ತು ವರ್ಷದ ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಜೊತೆಯಾಗಿ ನಿಂತು ನನ್ನನ್ನು ಸಲುಹಿ ಬೆಳೆಸಿದ ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ, ,ಮಾಧ್ಯಮಕ್ಕೆ, ಸ್ನೇಹಿತರಿಗೆ ಹಾಗು ನನ್ನ ಕುಟುಂಬಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು… ನಿಮ್ಮ ಪ್ರೀತಿ, ಅಭಿಮಾನ, ಆಶೀರ್ವಾದ ಸದಾ ಹೀಗೆ ಇರಲಿ.. ಎಂಬುದು ನೆನಪಿರಲಿ ಮಾತು….
ಯಾವುದೇ ನಟ ಇರಲಿ, ತನ್ನ ಸಿನಿಮಾ ಅರ್ಧ ಸೆಂಚುರಿ ದಾಟುವುದೇ ವಿಶೇಷ. ಅದರಲ್ಲೂ ಅದೊಂದು ಸಂಭ್ರಮವೇ ಸರಿ. ಈಗ ವಿಜಯರಾಘವೇಂದ್ರ ಅವರು ಅರ್ಧ ಸೆಂಚುರಿ ದಾಟಿ, ತಮ್ಮ ಅಭಿನಯದ ಐವತ್ತೊಂದನೇ ಚಿತ್ರ ಮಾಡಿದ್ದಾರೆ. ಅದೇ ಈ ಹೊತ್ತಿನ ವಿಶೇಷ. ಅಂದಹಾಗೆ, “ಸಾವಿತ್ರಿ” ಅವರ 51ನೇ ಸಿನಿಮಾ….
“ಸಾವಿತ್ರಿ” ಇದು ವಿಜಯರಾಘವೇಂದ್ರ ಅಭಿನಯದ ಚಿತ್ರ. ಈ ಚಿತ್ರವನ್ನು ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಜೊತೆಗೆ ಟ್ರೇಲರ್ ಕೂಡ ಪ್ರದರ್ಶನ ಕಂಡಿದೆ. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಡು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ವಿಜಯರಾಘವೇಂದ್ರ ಅವರಿಗೆ ಈ ಸಿನಿಮಾ ವಿಶೇಷತೆಗಳಲ್ಲೊಂದು. ಆ ಕುರಿತು ಹೇಳುವ ಅವರು, “ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ ಸಂತೋಷವಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂಬುದು ಅವರ ಮಾತು.
ನಿರ್ದೇಶಕ ಎಸ್ ದಿನೇಶ್ ಮಾತನಾಡಿ, “ಸಾವಿತ್ರಿ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ವಿಜಯರಾಘವೇಂದ್ರ ಅವರ ಐವತ್ತೊಂದನೇ ಚಿತ್ರ. ಆದರೆ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ಈಗಲೂ ಹೊಸತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರು ಚಿತ್ರದಲ್ಲಿದ್ದಾರೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದರು.
ಗೀತ ಸಾಹಿತಿ ಹೃದಯಶಿವ, “ನಾನು ದಿನೇಶ್ ಅವರ ಮೊದಲ ಚಿತ್ರ “ಉಯ್ಯಾಲೆ”ಗೆ ಸಂಭಾಷಣೆ ಬರೆದಿದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದೆ ಇವರು. ಈಗ ” ಸಾವಿತ್ರಿ” ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸ ಪಯಣ ಆರಂಭಿಸಿದ್ದೀನಿ. ಈವರೆಗೂ ಎಂಟನೂರಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲು. ನಾಲ್ಕು ಹಾಡುಗಳು ಚೆನ್ನಾಗಿದೆ ಎಂದರು ಹೃದಯಶಿವ.
ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಉತ್ತಮವಾಗೂ ಮೂಡಿಬಂದಿದೆ. ಸರ್ಕಾರ ನೂರರಷ್ಟು ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಓಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್.
ಚಿತ್ರದ ನಟಿಸಿರುವ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಲವಾರು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು
ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗಾಯಕರ ಮೂಲಕ ಹಾಡಿಸೋದು ಗೊತ್ತು. ಈಗ ಅವರೇ ಮೊದಲ ಸಲ ಹಾಡಿದ್ದಾರೆ. ಅದು ಶೋಕಿವಾಲ ಸಿನಿಮಾಗೆ. ಈಗಾಗಲೆ ಮೊದಲನೇ ಲಿರಿಕಲ್ ವೀಡಿಯೋ ರಿಲೀಸ್ ಅಗಿ ಹಿಟ್ ಅಗಿತ್ತು…
ಈಗ ಎರಡನೇ ಲಿರಿಕಲ್ ವೀಡಿಯೋ ನಾಟಿ ಕೋಳಿ… ನೀನು ನಾಟಿ ಹುಂಜ ನಾನು… ಹಾಡು ಹಾಡಿದ್ದಾರೆ. ಅಂದಹಾಗೆ, ಈ ಹಾಡು ಫೆಬ್ರವರಿ 3ರಂದು ಸಂಜೆ 5:04ಕ್ಕೆ ಕ್ರಿಸ್ಟಲ್ ಮ್ಯೂಸಿಕ್ ಚಾನಲ್ ನಲ್ಲಿ ರಿಲೀಸ್ ಆಗುತ್ತಿದೆ.
ಡಾ”ಟಿ.ಆರ್,ಚಂದ್ರಶೇಖರ್ ಸರ್ ನಿರ್ಮಾಣದ ಈ ಚಿತ್ರವನ್ನು, ಜಾಕಿ ನಿರ್ದೇಶನ ಮಾಡಿದ್ದಾರೆ. ಶ್ರೀಧರ್. ವಿ.ಸಂಭ್ರಮ್ ಸಂಗೀತವಿದೆ. ಮೊದಲ ಬಾರಿಗೆ ಅವರಿಲ್ಲಿ ಹಾಡಿದ್ದಾರೆ. ಅವರೊಂದಿಗೆ ಜೋಗಿ ಸುನೀತ ಧ್ವನಿಗೂಡಿಸಿದ್ದಾರೆ. ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಬರೆದಿರುವ ಹಾಡು ಕ್ರಿಸ್ಟಲ್ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
ಶಾಂತಾ ಸಿನಿಮಾಸ್ ನಡಿ ಎಸ್ ಕೆ ರಾಮಕೃಷ್ಣ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಒಂದಷ್ಟು ಹೊಸಬರೇ ಸೇರಿ ಮಾಡುತ್ತಿರುವ ಈ ಸಿನಿಮಾಗೆ ಧರ್ಮಂ ಎಂಬ ಪವರ್ ಫುಲ್ ಟೈಟಲ್ ಇಡಲಾಗಿದ್ದು, ಇತ್ತೀಚೆಗೆಷ್ಟೇ ಈ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಕನ್ನಡದ ಚಿತ್ರರಂಗದ ಸ್ಫೂರ್ತಿಯ ನಟರಾದ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಶೀರ್ಷಿಕೆಯನ್ನು ಚಿತ್ರತಂಡ ಅರ್ಪಣೆ ಮಾಡಿದೆ.
ಕಳೆದ ಹದಿಮೂರು ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗಮುಖ ಧರ್ಮಂ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಇದು ಇವರು ನಿರ್ದೇಶನದ ಮೊದಲ ಸಿನಿಮಾವಾಗಿದೆ. 1980ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಧರ್ಮಂ ಸಿನಿಮಾದಲ್ಲಿ ಶಶಿ ನಾಯಕ ನಟನಾಗಿ ಅಭಿನಯಿಸಿದ್ದು, ವರಿಣಿಕಾ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಸರವಣ ಸಂಗೀತ, ವಿನೋದ್ ಕುಮಾರ್ ಸಂಕಲನ, ನಾಗಶಟ್ಟಿ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿರಲಿದೆ.
ಆನೇಕಲ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ 90ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಾಂಗ್ ಹಾಗೂ ಫೈಟ್ ಸೀನ್ಸ್ ಶೂಟಿಂಗ್ ನ್ನು ಬಾಕಿ ಉಳಿಸಿಕೊಂಡಿದೆ. ಸದ್ಯಕ್ಕೆ ಟಾಕಿ ಪೋಷನ್ ನಲ್ಲಿ ಬ್ಯುಸಿಯಾಗಿರುವ ಧರ್ಮಂ ಟೀಂ ಕೊರೋನಾ ಆರ್ಭಟ ಕೊಂಚ ಕಡಿಮೆಯಾದ್ಮೇಲೆ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ.
ಕನ್ನಡದಲ್ಲಿ ಈಗಾಗಲೇ ವಿಭಿನ್ನ ಬಗೆಯ ಶೀರ್ಷಿಕೆಯ ಸಿನಿಮಾಗಳು ಬಂದಿವೆ. ಅದರ ಜೊತೆಯಲ್ಲಿ ಪೋಸ್ಟರ್ ಹಾಗು ಟೈಟಲ್,ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯೂ ಆಗುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಫೋರ್ ವಾಲ್ಸ್ ಸಿನಿಮಾವೂ ಸೇರಿದೆ.
ಫಾರ್ ದ ಫಸ್ಟ್ ಟೈಮ್ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಅವರ ಜೊತೆ ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಇತರರು ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 11ಕ್ಜೆ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಜೋರು ತಯಾರಿ ನಡೆಸಿದೆ.
ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿ ಬಂದಿದ್ದ ‘ಕಣ್ಮಣಿಯೇ ಕಣ್ಮಣಿಯೇ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಈ ಹಿಂದೆ ಎಲ್ಲೆಡೆ ಜೋರು ಸದ್ದು ಮಾಡಿತ್ತು. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತ, ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗಂತೂ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಶ್ರೀ ತಲಗೇರಿ ಅವರ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಆನಂದ ರಾಜಾ ವಿಕ್ರಮ ಇಂಪಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಕೂಡ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸೌಂಡ್ ಮಾಡ್ತಿದೆ ಅನ್ನೋದು ಪ್ರತ್ಯೇಕವಾಗಿ ಹೇಳುವಂತಿಲ್ಲ.
‘ಫೋರ್ ವಾಲ್ಸ್’ ಚಿತ್ರಕ್ಕೆ ಮಂತ್ರಂ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟಿದ್ದ ಎಸ್.ಎಸ್ ಸಜ್ಜನ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ಇಲ್ಲಿ ಹೀರೋ ಆಗಿ ಮಿಂಚಿದ್ದು, ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿ, ಅಚ್ಯುತ್ ಕುಮಾರ್ ಹೊಸ ಗೆಟಪ್ ನಲ್ಲಿ ಕಂಡ ಚಿತ್ರಪ್ರೇಮಿಗಳು ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆಯನ್ನು ಇಟ್ಟುಕೊಂಡಿರುವುದಂತು ನಿಜ.
ಹಾಗಾದರೆ, ಈ ಫೋರ್ ವಾಲ್ಸ್ ಸ್ಟೋರಿ ಏನ್ ಗೊತ್ತಾ? ಹೇಳಿ ಕೇಳಿ ಇದೊಂದು ಫ್ಯಾಮಿಲಿ ಎಂಟಟೈನ್ಮೆಂಟ್ ಚಿತ್ರ. ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಕತೆ ಚಿತ್ರದಲ್ಲಿದೆ.
ಮನರಂಜನೆಗೆ ಎಲ್ಲೂ ಕೊರತೆ ಇಲ್ಲ ಎನ್ನುವುದು ಚಿತ್ರತಂಡದ ಮಾತು. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ನಿರ್ಮಾಪಕರು. ಡಾ. ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.