Categories
ಸಿನಿ ಸುದ್ದಿ

ವಜ್ರಮುನಿ ಲುಕ್ ನಲ್ಲಿ ಕೋಮಲ್: ಯಲಾಕುನ್ನಿ ಈ ವಾರ ತೆರೆಗೆ

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ರವರು ನಿರ್ಮಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಹಾಗೂ ಹೊಸ ಪ್ರತಿಭೆ N R ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ “ಯಲಾಕುನ್ನಿ” ಚಿತ್ರ ಈ ವಾರ ಅಕ್ಟೋಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ‌. ಕೋಮಲ್ ಅವರು ಕನ್ನಡದ ಹೆಸರಾಂತ ನಟ ವಜ್ರಮುನಿ ಅವರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೊಡ್ಡ ದೊಡ್ಡ ಕಲಾವಿದರ ದಂಡೆ ಈ ಚಿತ್ರದಲ್ಲಿದೆ.

ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್(ಕಾಂತಾರ) , ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ , ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ದೇಶಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದರವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ.

ವಿಶೇಷವಾಗಿ ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ. ಮಯೂರ್ ಪಟೇಲ್ ಅವರು ಖಳ ನಾಯಕನಾಗಿ ನಟಿಸಿದ್ದಾರೆ.

ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. “ಯಲಾಕುನ್ನಿ” ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ.

Categories
ಸಿನಿ ಸುದ್ದಿ

ಮೂಕಜೀವ ಎಂಬ ಕಾದಂಬರಿ ಚಿತ್ರ : ಈ ವಾರ ರಿಲೀಸ್

ಜೆ ಎಂ ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಲನಚಿತ್ರ “ಮೂಕ ಜೀವ” ಈ ವಾರ ಬಿಡುಗಡೆಯಾಗುತ್ತಿದೆ. ಹಳ್ಳಿಯ ಬಡ ಕುಟುಂಬದಲ್ಲಿ ಪ್ರಾರಂಭವಾಗುವ ಈ ಕಥೆ ಪಟ್ಟಣದಲ್ಲಿ ಅಂತ್ಯವಾಗುತ್ತದೆ. ಯಾವುದೇ ವ್ಯಕ್ತಿ ತಾನು ಸ್ವಾವಲಂಬಿಯಾಗಿ ಬದುಕಲು ಬೇಕಾದ ಸಹಾಯ, ಮಾರ್ಗದರ್ಶನ ಮತ್ತು ಸಹಾಯ ಪಡೆಯುವ ವ್ಯಕ್ತಿಯು ಸ್ಪಂದಿಸುವ ರೀತಿಯನ್ನು ಎಳೆ ಎಳೆಯಾಗಿ ತೆರೆದಿಡುವ ಪ್ರಯತ್ನವನ್ನು ಈ ಚಲನಚಿತ್ರದಲ್ಲಿ ಮಾಡಲಾಗಿದೆ.

ಹಳ್ಳಿಯಲ್ಲಿ ಜೀವಿಸುತ್ತಿರುವ ಒಂದು ಬಡ ಕುಟುಂಬದ ಕಥೆ ಮೂಕ ಜೀವ, ಮನೆಗೆ ಆಸರೆಯಾಗಿ ಇರಬೇಕಿದ್ದ ತಂದೆ ಇಲ್ಲದ ಕುಟುಂಬ ಇವರದು, ತಾಯಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಮತ್ತು ಒಂದು ಗಂಡು, ಮಗಳು ಮದುವೆಯ ವಯಸ್ಸಿಗೆ ಬಂದಿದ್ದರು ತನ್ನ ಕುಟುಂಬದ ಪರಿಸ್ಥಿತಿಯನ್ನು ನೋಡಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಲು ಮನಸ್ಸಾಗದೆ ತಾಯಿಯ ಮನೆಯಲ್ಲಿ ಉಳಿದಿರುವ ಮಗಳು, ಮಗ ನಮ್ಮ ಕಥಾನಾಯಕ, ಇವನ ಹೆಸರು ಶ್ರೀಕಂಠ ಇವನಿಗೆ ಕಿವಿಯು ಕೇಳುವುದಿಲ್ಲ ಮಾತು ಬರುವುದಿಲ್ಲ, ಬಡತನದ ಬೇಗೆ ಮಗನ ಪರಿಸ್ಥಿತಿ ಹೀಗೆ, ಇದರ ನಡುವೆ ಇವರ ಕುಟುಂಬ ಜೀವನವನ್ನು ನಡೆಸುತ್ತಿದೆ.

ಅಂಗವಿಕಲ ವ್ಯಕ್ತಿಗಳಿಗೆ ತಮ್ಮ ಅಂಗವಿಕಲತೆಯೇ ನ್ಯೂನತೆ ಎಂದು ಭಾವಿಸದೆ ಅದರ ಜೊತೆಗೆ ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬ ಆತ್ಮಸ್ಥೈರ್ಯವನ್ನು ತುಂಬುವ ಕಥಾಹಂದರವನ್ನು ಹೇಳುವ ಚಲನಚಿತ್ರವೇ ಮೂಕ ಜೀವ.

ನಿರ್ಮಾಪಕರಾದ ಶ್ರೀ ಎಂ ವೆಂಕಟೇಶ ಮತ್ತು ಶ್ರೀಮತಿ ಮಂಜುಳಾ ಅವರು ಈ ಚಲನಚಿತ್ರವನ್ನು ಎ.ವಿ.ಎವ್ ಎಂಟರ್ ಟೈನರ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದಾರೆ. ಕನ್ನಡ ನಾಡು ಕಂಡ ಶ್ರೇಷ್ಠ ಕಲಾವಿದರ ಪಂಕ್ತಿಯ ಸಾಲಿಗೆ ಸೇರುವ ಶ್ರೀ ಶ್ರೀನಾಥ್ ವಸಿಷ್ಠ ಅವರು ಈ ಚಲನಚಿತ್ರದ ನಿರ್ದೇಶನ ಮಾಡಿದ್ದಾರೆ.

ಕೈ,ಕಾಲು, ಕಣ್ಣು, ಕಿವಿ ಎಲ್ಲವೂ ಸುರಕ್ಷಿತವಾಗಿ ಇರುವ ಜನಗಳ ಜೊತೆ ಅಂಗವಿಕಲರು ಹೇಗೆ ತಮ್ಮ ಬದುಕನ್ನ ಕಟ್ಟಿಕೊಳ್ಳಬಹುದು, ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬುದನ್ನು ಸೂಕ್ಷ್ಮವಾಗಿ ಈ ಚಲನಚಿತ್ರದ ಮೂಲಕ ನಾಡಿನ ಜನತೆಗೆ ತಿಳಿಸುವ ಒಂದು ಪ್ರಯತ್ನ ಈ ಮೂಕ ಜೀವ.

ಕಾರ್ತಿಕ್ ಮಹೇಶ್ (ಬಿಗ್ ಬಾಸ್ ಖ್ಯಾತಿ), ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ದೇವರ ರುಜುಗೆ ಕಾದ ಸಿಂಪಲ್ ಸುನಿ ಟೀಮ್: ದೇವರು ರುಜು ಮಾಡಿದನು ಸಿನಿಮಾಗೆ ಯುವ ನಟ ವೀರಾಜ್ ಹೀರೋ

ಜನರ ನಾಡಿಮಿಡಿತವನ್ನು ಅರಿತಿರುವ, ನಮ್ಮ ನಡುವೆ ನಡೆಯುವ ಘಟನೆಯನ್ನು ನಿರ್ಮಾಪಕರಿಗೆ ಹೊರೆಯಾಗದೆ ದೃಶ್ಯ ರೂಪಕ್ಕೆ ಇಳಿಸುವ ನಿರ್ದೇಶಕರಲ್ಲಿ ನಿಸ್ಸೀಮರು ಸಿಂಪಲ್ ಸುನಿ. ಅಪಾರ ಭಾಷಾಭಿಮಾನ ಹೊಂದಿರುವ ಕೆಲಸಲ್ಲಿ ಬದ್ಧತೆ, ಹಾಗೂ ಶುದ್ಧತೆ ತೋರುವ ನಿರ್ದೇಶಕ ಸುನಿ ಈಗ ದೇವರು ರುಜು ಮಾಡಿದನು ಎನ್ನುತ್ತಿದ್ದಾರೆ. ಕುವೆಂಪುರವರ ಆಶೀರ್ವಾದದೊಂದಿಗೆ ಅವರ ದೇವರು ರುಜು ಮಾಡಿದನು ಎಂಬ ರಸವತ್ತಾದ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ.

ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ದೇವರು ರುಜು ಮಾಡಿದನು ಚಿತ್ರ ಮೂಲಕ ಬೆಳ್ಳಿಪರದೆಗೆ ನವ ನಾಯಕನ್ನು ಪರಿಚಯಿಸಿದ್ದಾರೆ. ರಂಗಭೂಮಿ ಕಲಾವಿದರಾಗಿರುವ, ಅಪಾರ ಸಿನಿಮಾ ಪ್ರೀತಿ ಹೊಂದಿರುವ ವೀರಾಜ್ ಅವರು ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದಾರೆ. ಕೈಯಲ್ಲಿ ಗಿಟಾರ್ ಹಿಡಿದು ರಕ್ತಸಿಕ್ತರಾಗಿ ಕಾಣಿಸಿಕೊಂಡಿರುವ ವೀರಾಜ್ ಗೆ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಂಪಲ್ ಸುನಿ ಅವರ ಕಥನ, ವಚನ, ರಚನ ನಿರ್ದೇಶನ ಈ ಚಿತ್ರಕ್ಕಿದೆ.

ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ ನಾಯಕ ವೀರಾಜ್ ಟೀಸರ್ ಶೂಟ್ ಮಾಡಲಾಗಿದೆ. ರಕ್ತಚರಿತ್ರೆ ಜೊತೆಗೆ ಸಂಗೀತದ ಕಥೆಯನ್ನು ದೇವರು ರುಜು ಮಾಡಿದನು ಸಿನಿಮಾ ಮೂಲಕ ಸುನಿ ತೆರೆಯಲ್ಲಿ ಅನಾವರಣ ಮಾಡಲು ಹೊರಟಿದ್ದಾರೆ. ಇದೇ ತಿಂಗಳ 20ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಬರ್ತಿರುವ ದೇವರು ರುಜು ಮಾಡಿದನು ಸಿನಿಮಾಗೆ ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ ದೇವರು ರುಜು ಮಾಡಿದನು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ದುಷ್ಟ ಸಂಹಾರ: ಇದು ಮಾರಮ್ಮನ ಮಹಾತ್ಮೆ!

ಚಿತ್ರ: ಸಿಂಹರೂಪಿಣಿ
ನಿರ್ದೇಶನ ಕಿನ್ನಾಳ್ ರಾಜ್
ನಿರ್ಮಾಣ: ಕೆ.ಎಂ.ನಂಜುಂಡೇಶ್ವರ
ತಾರಾಗಣ: ಯಶ್ ಶೆಟ್ಟಿ, ಅಂಕಿತಾಗೌಡ, ದಿವ್ಯಾ ಆಲೂರು, ಸುಮನ್, ದೀನಾ, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ಹರೀಶ್ ರಾಯ್, ನೀನಾಸಂ ಅಶ್ವಥ್ ಇತರರು
.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಭಕ್ತಿಪ್ರಧಾನ ಸಿನಿಮಾಗಳು ಬಂದಿವೆ. ಆ ಪೈಕಿ ಎಲ್ಲೋ ಬೆರಳೆಣಿಕೆ ಚಿತ್ರಗಳು ಮಾತ್ರ ನೋಡುಗರ ಮನಸಲ್ಲಿ ಬೇರೂರಿವೆ. ಆ ಸಾಲಿಗೆ ಸಿಂಹರೂಪಿಣಿ ಸಿನಿಮಾ ಕೂಡ ಸೇರಲಿದೆ ಅಂತ ಮುಲಾಜಿಲ್ಲದೆ ಹೇಳಬಹುದು. ಇದೊಂದು ಭಕ್ತಿಪ್ರಧಾನ ಸಿನಿಮಾ ಆಗಿದ್ದರೂ, ಇಲ್ಲಿ ಕಮರ್ಷಿಯಲ್ ಅಂಶಗಳಿಗೇನೂ ಕೊರತೆ ಇಲ್ಲ. ದೇವರು ಅಂದಮೇಲೆ ದುಷ್ಟ ಶಕ್ತಿಗಳಿರಲೇಬೇಕು. ಅದೇ ಕಾನ್ಸೆಪ್ಟ್ ಹೊತ್ತು ಬಂದಿರುವ ಈ ಸಿನಿಮಾ ನೋಡುಗರನ್ನು ಭಕ್ತಿಪರವಶರನ್ನಾಗಿಸುತ್ತೆ. ಕಾರಣ, ಕಥೆ ಹಾಗು ನಿರ್ದೇಶಕರ ನಿರೂಪಣೆ ಮತ್ತು ತೆರೆಮೇಲೆ ರಾರಾಜಿಸಿರುವ ಮಾರಮ್ಮ!

ಭೂಮಿಗೆ ದೇವಾನುದೇವತೆಗಳು ಬಂದಿದ್ದಕ್ಕೆ ಕಾರಣವಿದೆ. ಯಾವೆಲ್ಲ ದೇವತೆಗಳು ಎಲ್ಲೆಲ್ಲಿ ಯಾವ ಕಾರಣಕ್ಕೆ ನೆಲೆ ಕಂಡುಕೊಂಡವು ಅನ್ನುವುದನ್ನಿಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ. ದುಷ್ಟರು ಇದ್ದಕಡೆ ದೇವಿಯೂ ಇರ್ತಾಳೆ. ಕಾಲ ಕಾಲಕ್ಕೆ ಸತ್ಯಾ ಸತ್ಯತೆ ತಿಳಿಸುವುದಕ್ಕಾಗಿಯೇ ಭೂಮಿಗೆ ಕಾಲಿಟ್ಟ ಮಾರಮ್ಮನ ಕಥೆ ಇಲ್ಲಿ ನೋಡುಗರನ್ನು ಸೆಳೆಯುತ್ತೆ. ಮೊದಲರ್ಧ ಮಾರಮ್ಮ ದೇವಿ ನೆಲೆ ಕಂಡುಕೊಂಡ ಗ್ರಾಮವೊಂದರಲ್ಲಿ ನಡೆಯುವ ದ್ವೇಷ, ಪ್ರೀತಿ, ಗೆಳೆತನ ಇತ್ಯಾದಿಯನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಸಿನಿಮಾ ನೋಡುಗರಿಗೆ ಮಾರಮ್ಮನ ಮೇಲಿರುವ ಭಕ್ತಿ ಮತ್ತು ಗೌರವ ಮತ್ತಷ್ಟು ಹೆಚ್ಚುವಂತೆ ಮಾಡಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದೊಂದು ಭಕ್ತಪ್ರಧಾನ ಸಿನಿಮಾ ಆಗಿದ್ದರೂ, ಇಲ್ಲಿ ಸಣ್ಣದ್ದೊಂದು ಸಂದೇಶವಿದೆ. ಕಲ್ಮಶ ಮನಸ್ಸಿನ ಮನುಷ್ಯರನ್ನು ಸಂಹರಿಸುವ ಮಾರಿಯಾಗಿ ಮಾರಮ್ಮನ ಅವತಾರ ಇಲ್ಲಿ ಹೈಲೆಟ್.

ಗ್ರಾಮೀಣ ಸೊಗಡಿನಲ್ಲೇ ಸಾಗುವ ಈ ಚಿತ್ರದಲ್ಲಿ ಭಕ್ತರು, ಭಕ್ತಿಯೇ ಮುಖ್ಯ ಆಕರ್ಷಣೆ. ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಪವಾಡಗಳು ಸಹಜ. ಇಲ್ಲೂ ಅಂತಹ ಅದ್ಭುತ ಪವಾಡಗಳು ನೋಡೋಕೆ ಕಾಣಸಿಗುತ್ತವೆ. ಎಲ್ಲೂ ಕೂಡ ವಿನಾಕಾರಣದ ದೃಶ್ಯಗಳಿಗೆ ಇಲ್ಲಿ ಆಸ್ಪದ ನೀಡಿಲ್ಲ. ಅನಗತ್ಯ ಎನಿಸುವ ಮಾತುಗಳಿಲ್ಲ. ನೋಡುಗರಲ್ಲಿ ಮಾರಮ್ಮನ ಮೇಲಿನ ಭಕ್ತಿ ಇನ್ನಷ್ಟು ಹೆಚ್ಚಾಗುವಂತಹ ಅಂಶಗಳೇ ಇಲ್ಲಿವೆ. ಮಾರಮ್ಮನ ನೆಲೆ, ಆಕೆಯ ಪವಾಡ, ಶಕ್ತಿ ಮತ್ತು ನಂಬಿದ ಭಕ್ತರನ್ನು ಕಾಪಾಡುವ ಗುಣಗಳ ಮೂಲಕ ಮೊದಲರ್ಧ ಮುಗಿಯುತ್ತೆ. ದ್ವಿತಿಯಾರ್ಧದಲ್ಲಿ ದುಷ್ಟರ ಸಂಹಾರಕ್ಕೆ ಮಾರಮ್ಮ ಏನೆಲ್ಲಾ ಅವತಾರ ತಾಳುತ್ತಾಳೆ ಅನ್ನೋದು ಸಸ್ಪೆನ್ಸ್. ಕ್ಲೈಮ್ಯಾಕ್ಸ್ ಸಿನಿಮಾದ ಮತ್ತೊಂದು ಹೈಲೆಟ್. ನೋಡುಗರಿಗೆ ಮಾರಮ್ಮನ ಮೇಲಿರುವ ಭಕ್ತಿ ಮತ್ತಷ್ಟು ಹೆಚ್ಚುತ್ತೆ. ನೋಡುಗರಿಗೆ ಎಲ್ಲೂ ಸಹನೆ ಕೆಡದಂತೆ ನಿರೂಪಿಸಿರುವ ನಿರ್ದೇಶಕರ ಜಾಣತನ ಮೆಚ್ಚಬೇಕು. ಹೊಡಿ ಬಡಿ ಕಡಿ ಸಿನಿಮಾಗಳ ನಡುವೆ ಹೀಗೊಂದು ಭಕ್ತಿ ಪ್ರಧಾನ ಸಿನಿಮಾ ನಿಜಕ್ಕೂ ಗಮನಸೆಳೆಯುತ್ತೆ.

ಕಥೆ ಇಷ್ಟು…

ಅದೊಂದು ಹಳ್ಳಿ. ಅಲ್ಲೇ ನೆಲೆಸುವ ಮಾರಮ್ಮನಿಗೆ ಊರ ಜನರು ಭಕ್ತಿಯಿಂದ ಪೂಜಿಸುತ್ತಾರೆ. ಊರು ಅಂದಮೇಲೆ ಒಳ್ಳೆಯವರು, ಕೆಟ್ಟವರು ಇರೋದು ಸಹಜ. ಇಲ್ಲೂ ದುಷ್ಟ ಜನರ ಆರ್ಭಟವಿದೆ. ನಾಯಕನಿಗೆ ಮಾರಮ್ಮನ ಮೇಲೆ ಎಲ್ಲಿಲ್ಲದ ಭಕ್ತಿ ಮತ್ತು ನಂಬಿಕೆ. ಊರ ಜನರ ನಂಬಿಕೆ ಸುಳ್ಳು ಮಾಡದ ಮಾರಮ್ಮ ಸದಾ ಅಭಯಳಾಗಿರುತ್ತಾಳೆ. ಅಂತಹ ಊರಲ್ಲೊಬ್ಬ ದುಷ್ಟ ಗೌಡ. ಅವನ ಮಗಳ ಮೇಲೆ ನಾಯಕನಿಗೆ ಪ್ರೀತಿ. ಆದರೆ, ದುಷ್ಟ ಗೌಡನಿಗೆ ಇಷ್ಟವಿಲ್ಲ. ಇಬ್ಬರನ್ನು ದೂರ ಮಾಡಬೇಕೆಂದು ಸಂಚು ರೂಪಿಸೋ ಗೌಡರ ಗ್ಯಾಂಗ್ ಮೇಲೆ ಮಾರಮ್ಮನ ಕೋಪ. ಇಲ್ಲಿ ದುಷ್ಟ ಗೌಡನ ಸಂಚೊಂದು ನಡೆಯುತ್ತೆ. ದುಷ್ಟರನ್ನು ಬಗ್ಗುಬಡಿಯೋ ನಾಯಕನಿಗೆ ಮಾರಮ್ಮನ ಆಭಯವಿರುತ್ತೆ. ಆ ಊರ ಜನರ ವಿರುದ್ಧ ದುಷ್ಟ ರೂಪಿಸುವ ಸಂಚು ಏನು? ಮಾರಮ್ಮನ ಶಪಥವೇನು? ಇಲ್ಲಿ ದುಷ್ಟ ಶಕ್ತಿ ವಿರುದ್ಧ ಮಾರಮ್ಮನ ಶಾಪ ಎಂಥದ್ದು ಎಂಬುದನ್ನು ತಿಳಿಯಬೇಕಾದರೆ ಒಂದೊಮ್ಮೆ ಭಕ್ತಿ ಪ್ರಧಾನ ಸಿನಿಮಾ ನೋಡಬಹುದು.

ಯಾರು ಹೇಗೆ?

ಭಕ್ತಿ ಪ್ರಧಾನ ಸಿನಿಮಾ ಆಗಿರುವುದರಿಂದ ಇಲ್ಲಿ ಎಲ್ಲರೂ ಅಷ್ಟೇ ಅಚ್ಚುಕಟ್ಟಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ ಅವರ ನಟನೆ ಎಂದಿಗಿಂತ ಚೆನ್ನಾಗಿದೆ. ಅವರ ಪಾತ್ರ ಕೂಡ ವಿಭಿನ್ನ. ಅಂಕಿತಾಗೌಡ ಅವರು ಇರುವಷ್ಟು ಕಾಲ ಚಂದವಾಗಿ ಕಾಣುತ್ತಾರೆ. ಪ್ರೇಯಸಿಯಾಗಿ ಇಷ್ಟವಾಗುತ್ತಾರೆ. ದಿನೇಶ್ ಮಂಗಳೂರು ಪಾತ್ರ ವಿಶೇಷವಾಗಿದೆ. ನೀನಾಸಂ ಅಶ್ವಥ್ ಇಲ್ಲಿ ವಿಶೇಷ ಎನಿಸುತ್ತಾರೆ. ಅವರಿಲ್ಲಿ ಗಮನಸೆಳೆಯುತ್ತಾರೆ. ದಿವ್ಯಾ ಆಲೂರು, ಸುಮನ್, ದೀನಾ, ವಿಜಯ್ ಚೆಂಡೂರ್, ಹರೀಶ್ ರಾಯ್ ಇತರರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕಾಶ್ ಪರ್ವ ಸಂಗೀತದ ಎರಡು ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತವೂ ಪೂರಕವಾಗಿದೆ. ಕಿರಣ್ ಕ್ಯಾಮೆರಾ ಕೈಚಳಕದಲ್ಲಿ ಮಾರಮ್ಮನ ಅವತಾರಕ್ಕೆ ಜೈ ಎನ್ನಬಹುದು.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಅದ್ಧೂರಿತನದ ಮಾಸ್ಟರ್ ಮಾಸ್ ಮಾರ್ಟಿನ್!

ವಿಜಯ್ ಭರಮಸಾಗರ

ರೇಟಿಂಗ್: 4/5


ಚಿತ್ರ: ಮಾರ್ಟಿನ್
ನಿರ್ದೇಶನ: ಎ.ಪಿ.ಅರ್ಜುನ್
ನಿರ್ಮಾಣ: ಉದಯ್ ಕೆ. ಮೆಹ್ತಾ
ತಾರಾಗಣ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕೃತ ವಾಗ್ಲೆ, ಅಚ್ಯುತ್ ಕುಮಾರ್, ವಜ್ರಾಂಗ್ ಶೆಟ್ಟಿ ಇತರರು
.

ನೀರಲ್ಲಿ ಸ್ನಾನ ಮಾಡಬೇಕು ಅನ್ನೋರು ಹಿಂದೆ ಹೋಗಿ… ರಕ್ತದಲ್ಲಿ ಸ್ನಾನ ಮಾಡಬೇಕು ಅನ್ನೋರು ಮುಂದೆ ಬನ್ನಿ…

  • ಹೀಗೆ ಹೀರೋನ ಪವರ್ ಫುಲ್ ಡೈಲಾಗ್ ನೊಂದಿಗೆ ಶುರುವಾಗುವ ಮೊದಲ ಫೈಟ್, ಈ ಸಿನಿಮಾದ ಹೈಲೆಟ್. ಜೊತೆಗೆ ಭರ್ಜರಿ ಪ್ಲಸ್ ಕೂಡ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡೋಕೆ ಹೋಗುವವರಿಗೆ ಮಾರ್ಟಿನ್ ಖಂಡಿತ ಮೋಸ ಮಾಡೋದಿಲ್ಲ. ಒಂದೊಳ್ಳೆಯ ಕಥೆ ಇಲ್ಲಿದೆ. ಬಿಗಿ ಹಿಡಿತದ ನಿರೂಪಣೆ ಇದೆ. ದೇಶಾಭಿಮಾನದ ಕಥೆ ಅಂದುಕೊಂಡವರಿಗೆ ಇಲ್ಲೊಂದು ಸರ್ಪ್ರೈಸ್ ಸಹ ಇದೆ. ಮಾಸ್ ಎಲಿಮೆಂಟ್ಸ್ ಇಷ್ಟಪಡುವ ಪ್ರತಿಯೊಬ್ಬರಿಗೂ ಮಾರ್ಟಿನ್ ರುಚಿಸುತ್ತೆ ಜೊತೆಗೆ ಇಷ್ಟವಾಗುತ್ತೆ.

ಸಿನಿಮಾ ಕಥೆಗೆ ಪೂರಕವಾಗಿ ಅದ್ಧೂರಿತನದ ಮೇಕಿಂಗ್ ಇಲ್ಲಿ ಎದ್ದು ಕಾಣುತ್ತೆ. ನಿರ್ದೇಶಕರ ಸಿನಿಮಾ ಪ್ರೀತಿ, ತಾಂತ್ರಿಕ ವರ್ಗದ ಶ್ರಮ, ನಿರ್ಮಾಪಕರ ಅಗಾದ ಶಕ್ತಿ ಸಿನಿಮಾದ ಸಖತ್ ತಾಕತ್ತಿಗೆ ಕಾರಣವಾಗಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಮಾರ್ಟಿನ್ ಕಿಚ್ಚು ಹೆಚ್ಚಿಸುವ ಕಥಾಹಂದರದೊಂದಿಗೆ ನೋಡುಗನಿಗೆ ಹೂರಣ ತಿನಿಸಿದಷ್ಟೇ ಖುಷಿ ಕೊಡುತ್ತೆ. ಕ್ಲಾಸ್ ಇಷ್ಟಪಡುವ ಮಂದಿ ಕೂಡ ಮಾಸ್ ಎಲಿಮೆಂಟ್ಸ್ ಇಷ್ಟಪಡುವಂತಹ ಆಕ್ಷನ್ ಸೀಕ್ವೆನ್ಸ್ ಸಿನಿಮಾದ ವೇಗವನ್ನು ಹೆಚ್ಚಿಸಿದೆ. ಇದು ಪಕ್ಕಾ ಹೊಡಿ ಬಡಿ ಸಿನಿಮಾ ಆಗಿರುವುದರಿಂದ ಇಲ್ಲಿ ಗನ್ ಸದ್ದುಗಳದ್ದೇ ಕಾರುಬಾರು. ಆದರೂ, ಒಂಚೂರು ಪ್ರೀತಿ ಗೀತಿ ಇತ್ಯಾದಿ ಒಳಗೊಂಡಿದೆ. ಎಮೋಷನ್ಸ್ ಗೆ ಜಾಗ ಇಲ್ಲ. ಆದರೂ, ಪ್ರೀತಿ ಹೆಸರಿನ ಎಮೋಷನ್ಸ್ ಇಲ್ಲಿ ವರ್ಕೌರ್ಟ ಆಗಿದೆ. ಸಿನಿಮಾದಲ್ಲಿ ತಪ್ಪುಗಳೇ ಇಲ್ಲ ಅನ್ನೋದು ತಪ್ಪು. ಇಲ್ಲೂ ಸಣ್ಣಪುಟ್ಟ ಮಿಸ್ಟೇಕ್ ಇವೆ. ಆದರೆ, ಅಲ್ಲಲ್ಲಿ ಬರುವ ಭರ್ಜರಿ ಆಕ್ಷನ್ ಸಿನಿಮಾದ ಕೆಲ ತಪ್ಪುಗಳನ್ನು ಬದಿಗಿಡುತ್ತದೆ.

ಕಥೆ ಏನು?
ಇಲ್ಲಿ ಮಾರ್ಟಿನ್ ಎಂಬಾತನೇ ಸಿನಿಮಾದ ಆಕರ್ಷಣೆ. ಮಾರ್ಟಿನ್ ಯಾರು, ಅವನು ಒಳ್ಳೆಯವನಾ? ಟೆರರಿಸ್ಟಾ? ಅವನನ್ನು ಹುಡುಕಿ ದೂರದ ಪಾಕಿಸ್ತಾನಕ್ಕೆ ಹೋಗುವ ಒಬ್ಬ ಅಧಿಕಾರಿಗೆ ಆ ಮಾರ್ಟಿನ್ ಸಿಗ್ತಾನಾ? ಇಷ್ಟಕ್ಕೂ ಮಾರ್ಟಿನ್ ಹುಡುಕಿ ಹೊರಡುವ ಆ ಅಧಿಕಾರಿ ಯಾರು? ಮಾರ್ಟಿನ್ ಮಾಡಿದ ದ್ರೋಹವೇನು? ಕೊನೆಗೆ ಮಾರ್ಟಿನ್ ಸಿಗ್ತಾನಾ? ಈ ಎಲ್ಲಾ ಕುತೂಹಲಗಳಿಗೆ ಉತ್ತರ ಬೇಕಾದರೆ ಒಂದೊಮ್ಮೆ ಸಿನಿಮಾ ನೋಡಬಹುದು.

ಸಿನಿಮಾದಲ್ಲಿ ಕಂಪ್ಲೀಟ್ ಆಕ್ಷನ್ ಸೀಕ್ವೆನ್ಸ್ ಅಬ್ಬರವೇ ತುಂಬಿದೆ. ಕಥೆ ಸಿಂಪಲ್ ಎನಿಸಿದರೂ, ಚಿತ್ರಕಥೆಯಲ್ಲಿ ಬಿಗಿ ಹಿಡಿತವಿದೆ. ನಿರ್ದೇಶಕರ ನಿರೂಪಣೆ ಶೈಲಿಯಲ್ಲೂ ಧಮ್ ಇದೆ. ಉಳಿದಂತೆ ಸಿನಿಮಾ ರುಚಿಸುವುದಕ್ಕೆ ಕಾರಣ, ತೆರೆಯ ಮೇಲೆ ಕಾಣಬರುವ ಪ್ರತಿಯೊಂದು ಪಾತ್ರಗಳು. ಎಲ್ಲೋ ಒಂದು ಕಡೆ ಸಿನಿಮಾ ಬೇರೆ ಟ್ರ್ಯಾಕ್ ಹಿಡಿಯಿತು ಅನ್ನುವಷ್ಟರಲ್ಲೇ ಆಂಥೆಮ್ ಆಫ್ ಮಾರ್ಟಿನ್ ಸಾಂಗ್ ಕಾಣಿಸಿಕೊಂಡು ಕಾಣುವ ಸಣ್ಣಪುಟ್ಟ ಮಿಸ್ಟೇಕ್ ಮರೆಮಾಚಿಸುತ್ತೆ.

ಯಾರು ಹೇಗೆ?
ಸಿನಿಮಾದ ಹೈಲೆಟ್ ಅಂದರೆ ಅದು ಧ್ರುವ ಸರ್ಜಾ. ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಅವರಿಲ್ಲಿ ತೆರೆಮೇಲೆ ಅಂದವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಅವರ ನಟನೆಯಲ್ಲೂ ಹೊಸತು ತುಂಬಿದೆ. ಡೈಲಾಗ್ ಡಿಲವರಿಯಲ್ಲೂ ಮಜಾ ಕೊಡುತ್ತಾರೆ. ಅವರ ಫ್ಯಾನ್ಸ್ ಗೆ ಧ್ರುವ ಅವರ ಆಕ್ಷನ್ ಇಲ್ಲಿ ಇಷ್ಟವಾಗುತ್ತೆ. ಉಳಿದಂತೆ ಇಲ್ಲಿ ವೈಭವಿ ಶಾಂಡಿಲ್ಯ ಅವರ ನಟನೆ ಚೆನ್ನಾಗಿದೆ. ಸಿನಿಮಾ ಮುಂದುವರೆಕೆಗೆ ಅವರ ಪಾತ್ರವೂ ಇಲ್ಲಿ ಮುಖ್ಯವಾಗಿ ಕಾಣುತ್ತೆ. ಅಚ್ಯುತ್, ಚಿಕ್ಕಣ್ಣ, ಅನ್ವೇಶಿ ಜೈನ್, ಸುಕೃತ, ವಜ್ರಾಂಗ್ ಶೆಟ್ಟಿ ಸೇರಿದಂತೆ ತೆರೆಮೇಲೆ ಕಾಣುವ ಪ್ರತಿ ಪಾತ್ರಗಳೂ ಇಲ್ಲಿ ಕಥೆಗೆ ನ್ಯಾಯ ಸಲ್ಲಿಸಿವೆ.


ಮಣಿ ಶರ್ಮ ಅವರ ಸಂಗೀತದ ಒಂದು ಹಾಡು ರುಚಿಸುತ್ತದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಸಿನಿಮಾ ಕಥೆಗೆ ಪೂರಕವಾಗಿದೆ. ಆಕ್ಷನ್ ಗೆ ತಕ್ಕಂತೆ ಭರ್ಜರಿಯಾಗಿಯೇ ಇದೆ. ಸತ್ಯ ಹೆಗಡೆ ಅವರ ಕ್ಯಾಮೆರಾ ಕೈಚಳಕ ಕೂ ಇಲ್ಲಿ ಮೋಡಿ ಮಾಡಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರದ ವೇಗ ಹಚ್ಚಿಸಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಭೈರಾದೇವಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅಬ್ಬರ!

ವಿಜಯ್ ಭರಮಸಾಗರ
ರೇಟಿಂಗ್ : 3.5/5

ಚಿತ್ರ: ಭೈರಾದೇವಿ
ನಿರ್ದೇಶನ: ಶ್ರೀಜೈ
ನಿರ್ಮಾಣ : ರಾಧಿಕಾ ಕುಮಾರಸ್ವಾಮಿ
ತಾರಾಗಣ: ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್, ರಂಗಾಯಣ ರಘು, ಅನು ಮುಖರ್ಜಿ, ರವಿಶಂಕರ್ ಇತರರು
.

ದೇವ್ರು ಇದ್ದಾನೆ ಅನ್ನುವುದಾದರೆ ದೆವ್ವ ಕೂಡ ಇದೆ! ದೇವರನ್ನು ನಂಬುವುದಾದರೆ ದೆವ್ವ ಇರುವಿಕೆಯನ್ನೂ ನಂಬಲೇಬೇಕು. ಅದೇನೆ ಇರಲಿ, ಸಿನಿಮಾಗಳಲ್ಲಂತೂ ದೆವ್ವ ಮತ್ತು ದೇವ್ರು ಇರುವಿಕೆ ಸಹಜ. ಹಾಗಾಗಿ ಈ ಎರಡನ್ನೂ ಬಲವಾಗಿ ನಂಬಲೇಬೇಕು. ಅಂಥದ್ದೊಂದು ನಂಬಿಕೆ ಮೂಡಿಸುವ ಅನೇಕ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದು ಹೋಗಿವೆ. ಈಗ ಅಂಥದ್ದೇ ಸಾಲಿಗೆ ಸೇರುವ ಸಿನಿಮಾ ಭೈರಾದೇವಿ. ಸಿನಿಮಾದ ಶೀರ್ಷಿಕೆಯಲ್ಲೇ ಫೋರ್ಸ್ ಇದೆ. ಅಂಥದ್ದೇ ಫೋರ್ಸ್ ಕಥೆಯಲ್ಲೂ ಇದೆ. ಸಿನಿಮಾ ನೋಡುಗರಿಗೆ ಒಂದೊಳ್ಳೆಯ ಫೀಲ್ ಕಟ್ಟಿಕೊಡುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು. ಆದರೆ, ಕೆಲವು ಸಣ್ಣಪುಟ್ಟ ಮಿಸ್ಟೇಕ್ ಇವೆಯಾದರೂ, ಅವೆಲ್ಲವನ್ನು ಬದಿಗೊತ್ತಿ ನೋಡುವುದಾದರೆ, ಭೈರಾದೇವಿ ಮೇಲೆ ತಕ್ಕಮಟ್ಟಿಗೆ ಭಕ್ತಿ ಉಕ್ಕಿಬರುವುದಂತೂ ದಿಟ!

ನಿರ್ದೇಶಕ ಶ್ರೀಜೈ ಅವರು ಆಯ್ಕೆ ಮಾಡಿಕೊಂಡ ಕಥೆಯ ಎಳೆ ಚೆನ್ನಾಗಿದೆ. ನಿರೂಪಣೆಯಲ್ಲಿ ಇನ್ನೂ ಒಂದಷ್ಟು ಧಮ್ ಕಟ್ಟಬೇಕಿತ್ತು. ಮೊದಲರ್ಧ ಅತ್ತಿತ್ತ ಅಲ್ಲಾಡದಂತೆ ತದೇಕಚಿತ್ತದಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಭಯ ಹುಟ್ಟಿಸುವ ದೃಶ್ಯಗಳಿಂದಲೇ ಶುರುವಾಗುವ ಚಿತ್ರದ ಮೊದಲರ್ಧದಲ್ಲಿ ಯಾವ ತಪ್ಪುಗಳೂ ಕಾಣಸಿಗಲ್ಲ. ದ್ವಿತಿಯಾರ್ಧ ಒಂಚೂರು ಸಣ್ಣಪುಟ್ಟ ತಪ್ಪುಗಳು ಕಾಣಸಿಗುತ್ತವೆ. ಆದರೆ, ಸಿನಿಮಾದ ಮೇಕಿಂಗ್, ಅದಕ್ಕೊಪ್ಪುವ ಲೊಕೇಷನ್ಸ್, ದೃಶ್ಯಕ್ಕೆ ಸರಿಹೊಂದುವ ಹಿನ್ನೆಲೆ ಸಂಗೀತ ಮತ್ತು ಅದ್ಭುತ ಎನಿಸುವ ಕ್ಯಾಮೆರಾ ಕೈಚಳಕ ಆ ತಪ್ಪುಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ ನೋಡುವಂತೆ ಮಾಡಿದೆ.

ಸಿನಿಮಾ ರೆಡಿಯಾಗಲು ತಡವಾಗಿದೆ ಅನ್ನೋದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹಾಗಾಗಿ ಇಲ್ಲಿ ಒಂದಷ್ಟು ಕಂಟಿನ್ಯುಟಿ ಕೂಡ ಮಿಸ್ ಆಗಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಸಿನಿಮಾದಲ್ಲಿ ಒಂದಷ್ಟು ಕೊರತೆ ಕಾಣುವುದುಂಟು. ಆದರೆ, ತೆರೆಮೇಲೆ ಅಬ್ಬರಿಸಿರುವ ಭೈರಾದೇವಿ ಪಾತ್ರ, ಅಘೋರಿಯ ಗುರು ಅಬ್ಬರ ಎಲ್ಲವೂ ಆ ಕೊರತೆಯನ್ನು ನೀಗಿಸಿರುವುದು ಸುಳ್ಳಲ್ಲ. ಕಥೆಯಲ್ಲಿ ಗಟ್ಟಿತನವಿದೆ. ಹಾಗಾಗಿ ಕೊನೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಹೋಗುತ್ತೆ. ಎಲ್ಲೋ ಒಂದು ಕಡೆ ಚಿತ್ರಕಥೆ ಬಿಗಿಹಿಡಿತ ತಪ್ಪುತ್ತಿದ್ದಂತೆಯೇ, ಭಯಾನಕ ದೃಶ್ಯಗಳು ಭೀತಿ ಹುಟ್ಟಿಸುವ ಮೂಲಕ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತೆ. ಮೊದಲರ್ಧ ಸಿನಿಮಾ ಪೂರ್ತಿ ನೋಡಲೇಬೇಕೆನಿಸೋದು ನಿಜ. ಆದರೆ, ದ್ವಿತಿಯಾರ್ಧದಲ್ಲಿ ಕೆಲ ಅನಗತ್ಯ ದೃಶ್ಯ, ಹಾಡೊಂದು ಕಾಣಿಸಿಕೊಂಡು ನೋಡುಗನ ಬೇಸರಕ್ಕೆ ದೂಡುತ್ತದೆ. ಇನ್ನು, ಕ್ಲೈಮ್ಯಾಕ್ಸ್ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಮೊದಲರ್ಧ ಇದ್ದ ಫೋರ್ಸ್ ಕ್ಲ್ಯೆಮ್ಯಾಕ್ಸ್ ನಲ್ಲಿ ಕಡಿಮೆ ಆಯ್ತಾ ಎನಿಸುತ್ತೆ. ಆದರೂ, ಭೈರಾದೇವಿಯ ಆರ್ಭಟ ಎಲ್ಲವನ್ನೂ ಮರೆಸುತ್ತೆ. ಒಂದೊಳ್ಳೆಯ ಫೀಲ್ ಕಟ್ಟಿಕೊಡುತ್ತೆ ಅನ್ನೋದೇ ಸಮಾಧಾನ.

ದುಷ್ಠ ಶಕ್ತಿ ಓಡಿಸಲು ದೈವ ಶಕ್ತಿಯೇ ಬೇಕು ಅನ್ನುವ ಮಾತು ಈ ಸಿನಿಮಾ ಕಥೆಗೆ ಅನ್ವಯಿಸುತ್ತೆ. ಫೈನಲಿ ಇಲ್ಲೂ ಕೂಡ ಪ್ರೇತಾತ್ಮ ಮತ್ತು ದೈವದ ಗುದ್ದಾಟವಿದೆ. ಆ ಗುದ್ದಾಟ ಯಾಕೆ, ಏನು, ಎತ್ತ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಒಂದೊಮ್ಮೆ ಭೈರಾದೇವಿಯ ದರ್ಶನ ಪಡೆಯಲು ಅಡ್ಡಿಯಿಲ್ಲ.

ಕಥೆ ಏನು?

ನಾಯಕ ಅರವಿಂದ್ ಒಬ್ಬ ಪೊಲೀಸ್ ಅಧಿಕಾರಿ. ಪತ್ನಿ ಸಾವನ್ನಪ್ಪಿದ್ದಾಳೆ. ಅವನಿಗೆ ಮಗಳೇ ಪ್ರಪಂಚ. ಆದರೆ, ಕಾಣದ ದುಷ್ಠ ಶಕ್ತಿಯೊಂದು ಅವನನ್ನು ಭೀತಿಗೊಳಪಡಿಸುತ್ತೆ. ಅಷ್ಟೇ ಅಲ್ಲ, ಕುಂತರೂ, ನಿಂತರೂ, ಮಲಗಿದರೂ ಆ ಪ್ರೇತಾತ್ಮದ ಕಾಟ ತಪ್ಪಲ್ಲ. ದೈವ ಮೊರೆ ಹೋದರೂ ಪ್ರೇತಾತ್ಮ ಕಾಡುವುದು ಬಿಡಲ್ಲ. ಆಗ ಮೊರೆ ಹೋಗೋದೇ ಘೋರ ತಪಸ್ಸು ಮಾಡುವ ಅಘೋರಿಗಳ ಮೊರೆ. ಅಲ್ಲಿಗೆ ಅಸಲಿ ಆಟ ಶುರು. ದೂರದ ವಾರಣಾಸಿಯ ಕಾಡೊಂದರಲ್ಲಿ ಯಾರಿಗೂ ಸಿಗದ ಸ್ಥಳದಲ್ಲಿ ಶಿವನ ಧ್ಯಾನ ಮಾಡುವ ಅಘೋರಿಗಳ ಹುಡುಕಿ ಹೊರಡುವ ಅರವಿಂದ್, ಅಘೋರಿಗಳ ಎದುರಾಗುತ್ತಾನೆ. ಅಲ್ಲಿ ತನಗಾಗುವ ಸಮಸ್ಯೆ ಹೇಳಿಕೊಳ್ತಾನೆ. ಅಘೋರಿಗಳ ಬಾಬಾ ಗುರು ಭೈರಾದೇವಿ ಎಂಬ ಅಘೋರಿಗೆ ಸೂಚಿಸುತ್ತಾನೆ. ನಂತರ ನಡೆಯೋದೆಲ್ಲಾ ಭಯಾನಕ ಆಟೋಟಾಪ! ಇಲ್ಲೊಂದು ಟ್ವಿಸ್ಟ್ ಇದೆ. ಅದೇ ಸಿನಿಮಾದ ಸಸ್ಪೆನ್ಸ್. ಅದನ್ನು ನೋಡುವ ನಿರೀಕ್ಷೆ ಇದ್ದರೆ ಮಿಸ್ ಮಾಡ್ಕೋಬೇಡಿ.

ಕಥೆಯಲ್ಲಿ ಚೂರು ಏರುಪೇರಿಲ್ಲ. ಪಾತ್ರಗಳ ಆಯ್ಕೆಯಲ್ಲೂ ನಿರ್ದೇಶಕರು ಎಡವಿಲ್ಲ. ಹಾಗಾಗಿ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಮೇಕಿಂಗ್ ವಿಷಯ ಹೇಳಲೇಬೇಕು. ಇಂತಹ ಕಥೆಗೆ ಬೇಕಾಗಿರೋದು ತಾಂತ್ರಿಕತೆ. ಅದಿಲ್ಲಿ ಅದ್ಭುತವಾಗಿ ಮೂಡಿಬಂದೆ. ಇನ್ನು, ಅಘೋರಿಗಳ ವಾಸದ ಗುಹೆಯ ಸೆಟ್ ಕೂಡ ಥೇಟ್ ಅಘೋರಿಗಳ ತಾಣವೆಂಬಂತೆ ಮಾಡಲಾಗಿದೆ. ಕಾಸ್ಟ್ಯೂಮ್ಸ್ ಮತ್ತು ಮೇಕಪ್ ಚಿತ್ರದ ಆಕರ್ಷಣೆ. ಜೊತೆಗೆ ಯಥೇ್ಚ್ಛವಾಗಿ ಬಳಕೆಯಾಗಿರುವ ಗ್ರಾಫಿಕ್ಸ್ ಕೂಡ ಹೈಲೆಟ್ ಆಗಿದೆ.

ಯಾರು ಹೇಗೆ?

ತುಂಬಾ ದಿನಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಒಂದೊಳ್ಳೆಯ ಪಾತ್ರದ ಮೂಲಕ ಕಮ್ ಬ್ಯಾಕ್ ಆಗಿ ರಂಜಿಸಿದ್ದಾರೆ. ಅವರಿಲ್ಲಿ ಅಘೋರಿಯಾಗಿ ಅಬ್ಬರಿಸಿದ್ದಾರೆ. ಪ್ರೇತಾತ್ಮ ಓಡಿಸುವ ಭೈರಾದೇವಿಯಾಗಿ ಇಷ್ಟವಾಗುತ್ತಾರೆ. ಹಿಂದಿನ ಸಿನಿಮಾಗಳಿಗಿಂತಲೂ ಅವರ ಈ ಭೈರಾದೇವಿ ಪಾತ್ರ ನಿಜಕ್ಕೂ ನೆನಪಲ್ಲುಳಿಯುವಂಥದ್ದು. ಅಘೋರಿಯಾಗಿ ಕಾಣುವ ಆ ರೂಪ ವಿರಾಟ ದರ್ಶನದಂತಿದೆ. ಇನ್ನು, ಮೇಕಪ್ ಕೂಡ ಭಯಾನಕವೆನಿಸಿದರೂ, ಅಂತ್ಯದಲ್ಲಿ ಪೂಜಿಸೋ ಭಾವನೆ ಮೂಡಿಸುತ್ತಾರೆ. ಇನ್ನು ಅವರ ಗ್ಲಾಮರ್ ಕೂಡ ಮಾಸಿಲ್ಲ. ಅದೇ ಜೋಶ್ ಉಳಿಸಿಕೊಂಡು ತೆರೆಮೇಲೆ ಚಂದ ಕಾಣುತ್ತಾರೆ. ಜೊತೆಗೆ ಎದುರಾಳಿಗಳನ್ನು ಹಿಗ್ಗಾಮುಗ್ಗ ಥಳಿಸುವಲ್ಲೂ ಅವರು ಹಿಂದೆ ಬಿದ್ದಿಲ್ಲ.


ರಮೇಶ್ ಅರವಿಂದ್ ಅವರು ಇಲ್ಲಿ ಪ್ರಮುಖ ಆಕರ್ಷಣೆ. ನಾವು ನೋಡದ ರಮೇಶ್ ಅರವಿಂದ್ ಇಲ್ಲಿ ಕಾಣಸಿಗುತ್ತಾರೆ. ರಮೇಶ್ ಅರವಿಂದ್ ಹೀಗಾ? ಎಂಬ ಪ್ರಶ್ನೆ ಕಾಡುವಷ್ಟರ ಮಟ್ಟಿಗೆ ಅವರ ಅಭಿನಯವಿದೆ. ಪಾತ್ರ ಕೂಡ ಸರಿಹೊಂದಿದೆ. ಅವರ ಪಾತ್ರದಲ್ಲೂ ಟ್ವಿಸ್ಟ್ ಇದೆ. ಇನ್ನುಳಿದಂತೆ, ರಂಗಾಯಣ ರಘು ಅವರ ಸಮಯೋಚಿತ ಹಾಸ್ಯ ವರ್ಕೌಟ್ ಆಗಿದೆ. ರವಿಶಂಕರ್ ತೆರೆಮೇಲೆ ಇರುವಷ್ಟು ಕಾಲ ಭಯಾನಕ ಎನಿಸುತ್ತಾರೆ. ಅನು ಮುಖರ್ಜಿ ಅಮ್ಮನ ಪಾತ್ರದಲ್ಲಿ ಗಮನಸೆಳೆದರೆ, ಶಿವರಾಮಣ್ಣ ಹಾಗು ಇತರೆ ಪಾತ್ರಗಳು ಕೂಡ ಪಾತ್ರಕ್ಕೆ ಮೋಸ ಮಾಡಿಲ್ಲ. ಜಗದೀಶ್ ವಾಲಿ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಅಂದ ಹೆಚ್ಚಿಸಿದೆ. ಕೆ.ಕೆ. ಸೆಂಥಿಲ್ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ. ಹಿನ್ನೆಲೆ ಸಂಗೀತದ ಸೌಂಡಿಂಗ್ ಚೆನ್ನಾಗಿದೆ. ಸಿನಿಮಾದ ಸಂಕಲನ ಕೂಡ ಚಿತ್ರದ ವೇಗ ಹೆಚ್ಚಿಸಿದೆ. ರವಿವರ್ಮ ಅವರ ಸ್ಟಂಟ್ ಕೂಡ ಇಲ್ಲಿ ಮಾತಾಡುತ್ತೆ.

Categories
ಸಿನಿ ಸುದ್ದಿ

ಭೈರಾದೇವಿಯ ಭರ್ಜರಿ ದರ್ಶನ: ಅಕ್ಟೋಬರ್ 3ಕ್ಕೆ ನಿಮ್ಮ ಮುಂದೆ

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಾನು ಹೆಣ್ಣು ಅಘೋರಿಯ ಬಗ್ಗೆ ಪುಸ್ತಕದಲ್ಲಿ ಓದಿದ್ದೆ.‌ ಅದರ ಬಗ್ಗೆ ಒಂದು ಕಥೆಯನ್ನು ಸಿದ್ದಮಾಡಿಕೊಂಡೆ.‌ ಆನಂತರ ರವಿರಾಜ್ ಅವರ ಪರಿಚಯವಾಯಿತು. ರವಿರಾಜ್ ಅವರು ನಾನು ಹೇಳಿದ ಕಥೆಯನ್ನು ರೆಕಾರ್ಡ್ ಮಾಡಿಕೊಂಡು ರಾಧಿಕಾ ಕುಮಾರಸ್ವಾಮಿ ಅವರಿಗೆ ಕಥೆ ಕೇಳಿಸಿದರು. ಕಥೆ ಇಷ್ಟಪಟ್ಟ ರಾಧಿಕಾ ಕುಮಾರಸ್ವಾಮಿ ಅವರು “ಭೈರಾದೇವಿ” ಚಿತ್ರಕ್ಕೆ ಚಾಲನೆ ನೀಡಿದರು. ಈವರೆಗೂ ನೀವು ನೋಡಿರದ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಮತ್ತೊಂದು ಪ್ರಮುಖಪಾತ್ರದ ಕುರಿತು ನಾನು ಬರೆಯಬೇಕಾದರೆ, ಈ ಪಾತ್ರವನ್ನು ರಮೇಶ್ ಅರವಿಂದ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡೆ.‌ ಅವರು ಕಥೆ ಮೆಚ್ಚಿ ಒಪ್ಪಿಕೊಂಡರು. ಅನು ಪ್ರಭಾಕರ್ ಹಾಗೂ ರಂಗಾಯಣ ರಘು ಅವರ ಪಾತ್ರಗಳು ತುಂಬಾ ಚೆನ್ನಾಗಿದೆ. ಅಘೋರಿಯಾಗಿ ರವಿಶಂಕರ್ ಅವರು ನಟಿಸಿದ್ದಾರೆ. ಹಾರಾರ್ ಜಾನರ್ ನ ಚಿತ್ರವಾಗಿರುವುದರಿಂದ ಶಬ್ದಗಳೇ ಚಿತ್ರದ ಹೈಲೆಟ್. ಇಲ್ಲಿನ ಚಿತ್ರಮಂದಿರಗಳಲ್ಲಿ ಅಂತಹ ಸೌಂಡ್ ಎಫೆಕ್ಟ್ ಇಲ್ಲ ಎಂದು ತಿಳಿಸಿದ ನಿರ್ದೇಶಕ ಶ್ರೀಜೈ, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದರು.

“ಭೈರಾದೇವಿ” ಚಿತ್ರಕ್ಕೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ, ನನಗೆ ಮೊದಲಿನಿಂದಲೂ ಸ್ವಲ್ಪ ಭಯದ ಸ್ವಭಾವ. ಅದರಲ್ಲೂ ಸ್ಮಶಾನ ಎಂದರೆ ಇನ್ನೂ ಭಯ. ನಿರ್ದೇಶಕರು ಈ ಚಿತ್ರದ ಕಥೆ ಹೇಳಿದಾಗ ಹೆಚ್ಚಿನ ಭಾಗದ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುತ್ತದೆ ಎಂದರು ನಾನು ಸೆಟ್ ಹಾಕೋಣ ಎಂದೆ.

ಕೊನೆಗೂ ನನ್ನನ್ನು ನಿರ್ದೇಶಕರು ಹಾಗೂ ನನ್ನ ಸಹೋದರ ಒಪ್ಪಸಿ ಸ್ಮಶಾನದಲ್ಲೇ ಚಿತ್ರೀಕರಣ ಮಾಡಿಸಿದರು. ಈ ಚಿತ್ರ ಆದ ಮೇಲೆ ಒಬ್ಬಳೇ ಸ್ಮಶಾನಕ್ಕೆ ಹೋಗಿ ಬರುವ ಧೈರ್ಯ ಬಂದಿದೆ. ನಿರ್ದೇಶಕ ಶ್ರೀಜೈ ಅವರು ಒಳ್ಳೆಯ ಕಥೆ ಮಾಡಿದ್ದಾರೆ. ಅದಕ್ಕೆ ಎಲ್ಲಾ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ ಚೆನ್ನಾಗಿದೆ. ಇದೇ ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭದ ದಿನ ನಮ್ಮ “ಭೈರಾದೇವಿ” ಚಿತ್ರ ತೆರೆಗೆ ಬರಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.

ನಾನು ಈ ಚಿತ್ರ ಒಪ್ಪಿಕೊಳ್ಳಲು ಮೂರು ಕಾರಣ ಎಂದು‌ ತಿಳಿಸಿದ ನಟ ರಮೇಶ್ ಅರವಿಂದ್ ಅವರು, ಮೊದಲು ಶ್ರೀಜೈ ಮಾಡಿಕೊಂಡಿರುವ ಕಥೆ , ಎರಡನೆಯದು “ಆಪ್ತಮಿತ್ರ” ನಂತರ ನಾನು ಹಾರಾರ್ ಚಿತ್ರ ಮಾಡಿಲ್ಲ ಹಾಗೂ ಮೂರನೆಯದು ಈ ತರಹದ ಪಾತ್ರವನ್ನು ಮಾಡಿ ಬಹಳ ವರ್ಷಗಳೇ ಆಗಿದೆ. ಹಾರಾರ್ ನೊಂದಿಗೆ ಕೌಟುಂಬಿಕ ಕಥಾಹಂದರವನ್ನು ನಿರ್ದೇಶಕರು ನಿರೂಪಣೆ ಮಾಡಿರುವ ರೀತಿ ಚೆನ್ನಾಗಿದೆ. ರಾಧಿಕಾ ಕುಮಾರಸ್ವಾಮಿ ಅವರು ಬರೀ ನಟಿಯಷ್ಟೇ ಅಲ್ಲ‌.‌ ಈ ಚಿತ್ರದ ನಿರ್ಮಾಪಕರು ಕೂಡ. ಯಾವುದೇ ಕೊರತೆ ಬರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂದರು ನಟ ರಮೇಶ್ ಅರವಿಂದ್.

ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಮೊದಲು ಕನ್ನಡದಲ್ಲಿ ಮಾತ್ರ ಸುಮಾರು 180 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಸಹ ನಿರ್ಮಾಪಕ ರವಿರಾಜ್ ತಿಳಿಸಿದರು.

ಅನು ಪ್ರಭಾಕರ್ ಹಾಗೂ ರಂಗಾಯಣ ರಘು ತಮ್ಮ ಅನುಭವವನ್ನು ಹಂಚಿಕೊಂಡರು. ಸಾಹಸ ನಿರ್ದೇಶನದ ಬಗ್ಗೆ ರವಿವರ್ಮ ‌ಮಾತನಾಡಿದರು. ಸಹ ನಿರ್ಮಾಪಕ ಯಾದವ್ ಪತ್ರಿಕಾಗೋಷ್ಠಿಯಲ್ಲಿದ್ದರು. ‌

ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ “ಭೈರಾದೇವಿ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಸಾತ್ವಿಕ ಚಿತ್ರದೊಳಗಿನ ಸಾರ್ಥಕ ಪ್ರೀತಿ !

ವಿಜಯ್ ಭರಮಸಾಗರ

ರೇಟಿಂಗ್ : 3/5

ಚಿತ್ರ: ಸಂಜು
ನಿರ್ದೇಶನ: ಯತಿರಾಜು
ನಿರ್ಮಾಣ : ಸಂತೋಷ್ ಡಿ.ಎಂ.
ತಾರಾಗಣ: ಮನ್ವಿತ್, ಸಾತ್ವಿಕ, ಯತಿರಾಜು, ಬಾಲರಾಜುವಾಡಿ, ಸುಂದರಶ್ರೀ, ಅಪೂರ್ವ, ಸಂಗೀತಾ ಇತರರು.

ನಾನೀಗ ವಿಷ ಕುಡಿದಿದ್ದೇನೆ. ನನ್ನನ್ನು ಬದುಕಿಸು… ಹಾಗಂತ ಆ ನಾಯಕಿ ಆಗಷ್ಟೇ ಪ್ರೀತಿಸಿದ ಪ್ರಿಯಕರನ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾಳೆ… ಅಷ್ಟಕ್ಕೂ ಆಕೆ ವಿಷ ಕುಡಿದಿದ್ದು ಯಾಕೆ? ತನ್ನ ಪ್ರಿಯತಮೆಯನ್ನು ಅವನು ಉಳಿಸಿಕೊಳ್ತಾನಾ? ಇಲ್ಲವಾ? ಅನ್ನೋದು ಈ ಸಿನಿಮಾದ ಕ್ಲ್ಯೆಮ್ಯಾಕ್ಸ್ ದೃಶ್ಯ. ಆ ಕುತೂಹಲವಿದ್ದರೆ, ಒಂದೊಮ್ಮೆ ಈ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.
ಮಸಾಲ ಸಿನಿಮಾಗಳ ಮಧ್ಯೆ, ಲಾಂಗು-ಮಚ್ಚು ಝಳಪಿಸೋ ಕಥೆಗಳ ನಡುವೆ ಹೀಗೊಂದು ಸುಂದರ ಪರಿಸರದೊಳಗೆ ಅರಳಿರುವ ಅಪ್ಪಟ ಪ್ರೀತಿಯ ಕಥೆ. ಇಲ್ಲಿ ನಿರ್ದೇಶಕರ ಜಾಣತನ ಹೈಲೆಟ್ ಅನ್ನಬಹುದು. ಕಾರಣ, ಒಂದೇ ಲೊಕೇಶನ್ನಲ್ಲಿ ಅರ್ಧ ಸಿನಿಮಾ ಮುಗಿಸುವ ಮೂಲಕ ಎಲ್ಲೂ ಬೋರ್ ಎನಿಸದ ರೀತಿ ಒಂದೊಳ್ಳೆಯ ಪ್ರೀತಿ ಕಥೆಯ ಎಳೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ.

ಪ್ರೀತಿ ಎಲ್ಲಿ ಬೇಕಾದರೂ ಹುಟ್ಟುತ್ತೆ ಅನ್ನೋದಕ್ಕೆ ಈಗಾಗಲೇ ಹಲವು ಸಿನಿಮಾಗಳಲ್ಲಿ ಸಾಬೀತಾಗಿದೆ. ಇಲ್ಲೂ ಕೂಡ ಪ್ರೀತಿ ಅರಳೋಕೆ ಇಂಥದ್ದೇ ಸ್ಥಳ ಬೇಕಾಗಿಲ್ಲ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಹೌದು, ಒಂದೊಳ್ಳೆಯ ಪರಿಸರ ಮಧ್ಯೆ ಇರುವ ಬಸ್ ಸ್ಟಾಪ್ ನಲ್ಲಿ ಅವರಿಬ್ಬರ ಪ್ರೀತಿ ಹುಟ್ಟುತ್ತೆ. ಒಂದೇ ಲೊಕೇಶನ್ ಇಟ್ಟುಕೊಂಡು ಒಂದಷ್ಟು ಕುತುಹೂಲ ಮೂಡಿಸುವ ಅಂಶಗಳನ್ನಿಟ್ಟುಕೊಂಡು ಕಥೆ ಹೇಳುವ ಶೈಲಿ ನೋಡುಗರಿಗೆ ಇಷ್ಟವಾಗುತ್ತೆ. ಮೊದಲರ್ಧ ಒಂದೇ ಲೊಕೇಶನಲ್ಲಿ ಕಥೆ ಸುತ್ತುವುದರಿಂದ ನೋಡುಗನ ನೋಟ ಕೊಂಚ ಅತ್ತಿತ್ತ ಬೀರುತ್ತಿದ್ದಂತೆಯೇ, ಅಲ್ಲೆಲ್ಲೋ ಒಂದು ಸುಂದರ ಹಾಡೊಂದು ಕಾಣಿಸಿಕೊಂಡು ಮತ್ತೆ ನೋಡುಗನನ್ನು ಅದೇ ಟ್ರ್ಯಾಕ್ ಗೆ ಕರೆದೊಯ್ಯುತ್ತೆ.

ಕಥೆ ತುಂಬಾ ಸಿಂಪಲ್. ನಿರೂಪಣಾ ಶೈಲಿ ಕೊಂಚ ವಿಭಿನ್ನವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇದ್ದಿದ್ದರೆ ನೋಡುಗನನ್ನು ಮತ್ತಷ್ಟು ಆಕರ್ಷಿಸುತ್ತಿತ್ತು. ಆದರೂ, ಇಲ್ಲಿ ಅನಗತ್ಯ ದೃಶ್ಯಗಳಿಲ್ಲ. ವಿನಾಕಾರಣ ಕೊರೆತಗಳಿಲ್ಲ. ಅಸಹ್ಯದ ಮಾತುಗಳಿಲ್ಲ. ಏನು ಹೇಳಬೇಕೋ, ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ಹೇಳುವ ಮೂಲಕ ಪರಿಶುದ್ಧ ಪ್ರೇಮ ಕಥೆಯೊಂದನ್ನು ಪರದೆ ಮೇಲೆ ತೋರಿಸಿದ್ದಾರೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ನಡೆಯುವ ಕಥೆಯೊಳಗೆ, ಆತಂಕ, ತೊಳಲಾಟ, ಪ್ರೀತಿ, ಸಣ್ಣದ್ದೊಂದು ಹೊಡೆದಾಟ, ಅಮ್ಮನ ವಾತ್ಸಲ್ಯ, ಅಪ್ಪನ ಕಾಳಜಿ, ಅಲ್ಲೆಲ್ಲೋ ಪುಟ್ಟಿಯೊಳಗೆ ಹಣ್ಣು ತುಂಬಿಕೊಂಡು ಮಾರಲು ಕೂತ ಅಜ್ಜಿಯೊಬ್ಬಳ ಹೆಣಗಾಟ, ಪುಟ್ಟದ್ದೊಂದು ಟೀ ಅಂಗಡಿ ಇಟ್ಟುಕೊಂಡು ತಮ್ಮದೇ ಲೋಕದಲ್ಲಿ ಮಿಂದೇಳುವ ಜೋಡಿ…

ಹೀಗೆ ತರಹೇವಾರಿ ಪಾತ್ರಗಳು ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗುತ್ತವೆ. ರಸ್ತೆಯಲ್ಲಿ ಸಣ್ಣಪುಟ್ಟ ಏರಿಳಿತಗಳಿರುವಂತೆ ಇಲ್ಲೂ ಒಂದಷ್ಟು ಮೈನಸ್ ಅಂಶಗಳಿವೆಯಾದರೂ, ನಾಯಕಿಯ ಒದ್ದಾಟದ ನಟನೆ ಅವೆಲ್ಲವನ್ನೂ ಮರೆಸಿ, ಕನಿಕರ ತೋರಿಸುವಂತೆ ಮಾಡುತ್ತೆ. ಇಂತಹ ಕಥೆಗಳಿಗೆ ಬಜೆಟ್ ಮುಖ್ಯ ಎನಿಸಲ್ಲ. ಕಥೆ ಹೇಳುವ ರೀತಿ ಸರಿಯಾಗಿದ್ದರೆ, ಫ್ರೇಮ್ ಹಿಂದೆ ಏನಿಲ್ಲವಾದರೂ ಸರಿದೂಗಿಸುತ್ತೆ. ಅಂಥದ್ದೊಂದು ಪ್ರಾಮಾಣಿಕ ಪ್ರಯತ್ನ ಇಲ್ಲಾಗಿದೆ. ಒಂದೇ ಲೊಕೇಶನ್ ಇಟ್ಟುಕೊಂಡು ಒಂದಷ್ಟು ಪಾತ್ರಗಳನ್ನು ಸೃಷ್ಟಿಸಿಕೊಂಡು ಎಲ್ಲವನ್ನೂ ತೂಗಿಸಿಕೊಂಡು ಹೋಗಿರುವ ರೀತಿ ಇಷ್ಟವಾಗುತ್ತೆ. ಒಂದಷ್ಟು ಹೊಸತನ ಈ ಚಿತ್ರದಲ್ಲಿ ಕಾಣಬಹುದು. ಉಳಿದಂತೆ ಸಿನಿಮಾ ಸಿದ್ಧ ಸೂತ್ರಗಳನ್ನು ಬಿಟ್ಟು ಹೊರಬಂದಿಲ್ಲ.

ಕಥೆ ಏನು?

ನಾಯಕಿಯ ಬದುಕಲ್ಲಿ ಒಂದು ಘಟನೆ ನಡೆದಿರುತ್ತೆ. ನನ್ ಲೈಫು ಸಾಕು ಇನ್ನು ಸಾಯಬೇಕು ಅಂತ ನಿರ್ಧರಿಸಿಯೇ ಆಕೆ ಬಸ್ ಸ್ಟಾಪ್ ಬಳಿ ಬಂದು ಬರುವ ಬಸ್ ಕಾಯುತ್ತಿರುತ್ತಾಳೆ. ಆದರೆ, ಬಸ್ ಬರಲ್ಲ ಅಂತ ತಿಳಿದು ಅಲ್ಲೇ ಕೂರುತ್ತಾಳೆ. ಅದೇ ಸಮಯಕ್ಕೆ ಹೀರೋ ಕೂಡ ಅದೇ ಬಸ್ ಸ್ಟಾಪ್ ಬಳಿ ಬರ್ತಾನೆ. ಇಬ್ಬರೂ ಅಪರಿಚಿತರು. ನೋಡುತ್ತಲೆ, ಮಾತಾಡುತ್ತಲೇ ಲವ್ ಶುರುವಾಗುತ್ತೆ. ಆದರೆ, ಆಕೆ ಸಾಯಲು ತೀರ್ಮಾನಿಸಿದ್ದು ಯಾಕೆ ಅನ್ನೋದೇ ಸಸ್ಪೆನ್ಸ್. ಅವರಿಬ್ಬರ ಲೈಫಲ್ಲಿ ಒಂದೊಂದು ಘಟನೆ ನಡೆದು ಹೋಗಿರುತ್ತೆ. ಅದು ಏನು ಅಂತ ತಿಳಿಯುವ ಆಸಕ್ತಿ ಇದ್ದರೆ, ಒಮ್ಮೆ ಸಂಜು ನೋಡಬಹುದು.

ಯಾರು ಹೇಗೆ?
ಸಾತ್ವಿಕ (ಶ್ರಾವ್ಯ) ಸಿನಿಮಾದ ಹೈಲೆಟ್. ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದು ಅವರ ಗಟ್ಟಿ ಪಾತ್ರದ ಸಿನಿಮಾ. ಇನ್ನು, ಮನ್ವಿತ್ ಮೊದಲ ಸಿನಿಮಾವಾದರೂ ಅನುಭವಿ ನಟರಂತೆ ಕಾಣುತ್ತಾರೆ. ಹೊಡೆದಾಟದ ದೃಶ್ಯದಲ್ಲಿನ್ನೂ ಪಳಗಬೇಕು. ಬಾಡಿಲಾಂಗ್ವೇಜ್ ಬಗ್ಗೆ ಸ್ವಲ್ಪ ಗಮನಹರಿಸಿದರೆ ಒಂದಷ್ಟು ವರ್ಷ ನೆಲೆ ಕಾಣಬಹುದು. ಸಂಜು ಮೂಲಕ ಕನ್ನಡಕ್ಕೆ ಒಬ್ಬ ಹೀರೋ ಬಂದಂತಾಗಿದೆ. ಇನ್ನು, ಬಾಲರಾಜುವಾಡಿ, ಸುಂದರಶ್ರೀ, ಸಂಗೀತಾ, ಅಪೂರ್ವ, ಬೌಬೌ ಜಯರಾಮ್ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಿದ್ಯಾ ನಾಗೇಶ್ ಕ್ಯಾಮೆರಾ ಕೈಚಳಕದಲ್ಲಿ ಸಂಜು ಅಂದವಾಗಿದ್ದಾನೆ. ವಿಜಯ್ ಹರಿತ್ಸ ಸಂಗೀತದ ಹಾಡೊಂದು ಗುನುಗುವಂತಿದೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಸಂಜೀವ ರೆಡ್ಡಿ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಅಕ್ಟೋಬರ್ 3ಕ್ಕೆ ಭೈರಾದೇವಿ ಅವತಾರ: ನಿರೀಕ್ಷೆ ಹುಟ್ಟಿಸಿದ ರಾಧಿಕಾ ಕುಮಾರ ಸ್ವಾಮಿ ಚಿತ್ರ

ರಾಧಿಕಾ ಕುಮಾರ ಸ್ವಾಮಿ ಅಭಿನಯದ ಭೈರಾದೇವಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟ್ರೇಲರ್ ಸಖತ್ ಸೌಂಡ್ ಮಾಡಿದೆ. ಚಿತ್ರ ಅಕ್ಟೋಬರ್ 3ಕ್ಕೆ ರಿಲೀಸ್ ಆಗಲಿದೆ.

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು ಎಲ್ಲೆಡೆ ಸದ್ದು ಮಾಡಿದೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ನಿರ್ದೇಶಕ ಶ್ರೀಜೈ, ನೃತ್ಯ ನಿರ್ದೇಶಕ ಮೋಹನ್, ಸಹ ನಿರ್ಮಾಪಕರಾದ ರವಿರಾಜ್, ಯಾದವ್ ಮುಂತಾದವರು ಟ್ರೇಲರ್ ಹೊರಬಂದ ಘಳಿಗೆಗೆ ಸಾಕ್ಷಿಯಾದರು.

ಸಿನಿಮಾ ಕುರಿತು ರಾಧಿಕಾ ಕುಮಾರಸ್ವಾಮಿ ಹೇಳಿದ್ದಿಷ್ಟು. ನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು‌. ಕಥೆ ಇಷ್ಟಾವಾಗಿ, ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿದೆ‌. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆ ಮಾಡಿರಲಿಲ್ಲ‌. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಗಂಡ ಹೆಂಡತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ.

ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. “ಭೈರಾದೇವಿ” ಚಿತ್ರ ಪ್ರೇಕ್ಷಕರಿಗೆ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೀನಿ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೀನಿ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಈ ಚಿತ್ರದ ಸಂಪೂರ್ಣ ಕ್ರೆಡಿಟ್‍ ನಿರ್ದೇಶಕರಿಗೆ ಸಲ್ಲಬೇಕು’ ಎಂದರು.

ನಾನು ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೇಲರ್ ನೋಡಿದಾಗ, ನನಗೆ “ಆಪ್ತಮಿತ್ರ” ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತು ಎಂದರು ನಟ ರಮೇಶ್ ಅರವಿಂದ್.

ಈ ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ಕಾರಣ ನಮ್ಮ‌ ನಿರ್ಮಾಪಕರು‌ ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು, ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ‌ ಅದ್ಭುತವಾಗಿದೆ ಎಂದು ನಿರ್ದೇಶಕ ಶ್ರೀಜೈ ತಿಳಿಸಿದರು.

“ಹೃದಯ ಹೃದಯ” ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ‌ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆ ಎಂದರು ಅನು ಪ್ರಭಾಕರ್.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಗುಡ್ ಫೀಲ್ ಕೊಡುವ ಲಂಗೋಟಿ ಕಥೆ!

ವಿಜಯ್ ಭರಮಸಾಗರ
ರೇಟಿಂಗ್ : 3/5

ನಿರ್ದೇಶಕಿ: ಸಂಜೋತ ಭಂಡಾರಿ
ನಿರ್ಮಾಣ: ತನು ಟಾಕೀಸ್
ತಾರಾಗಣ: ಆಕಾಶ್ ರ‍್ಯಾಂಬೋ, ಸ್ನೇಹ ಖುಷಿ, ಸಂಹಿತ ವಿನ್ಯಾ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್, ಧೀರೇಂದ್ರ ಇತರರು.

ನಿನ್ನ ಹಂಗು ನನಗೆ ಬೇಡವಾದಮೇಲೆ ಈ ಲಂಗೋಟಿಯೂ ಬೇಡ…”
-ಹೀಗೆ ತಾತನ ಎದುರು ನಿಂತ ಮೊಮ್ಮಗ, ಆಕ್ರೋಶಭರಿತವಾಗಿ ತಾನು ಧರಿಸಿದ್ದ ಲಂಗೋಟಿಯನ್ನು ಕಿತ್ತೆಸೆದು ಮನೆಯಿಂದ ಹೊರ ನಡೆಯುತ್ತಾನೆ. ಒಂದು ಲಂಗೋಟಿ ಮುದ್ದಾದ ಫ್ಯಾಮಿಲಿಯಲ್ಲಿ ಏನೆಲ್ಲಾ ಅವಘಡಕ್ಕೆ ಕಾರಣವಾಗುತ್ತೆ ಅನ್ನೋದು ಸಿನಿಮಾದ ಇಂಟ್ರೆಸ್ಟಿಂಗ್ ಸ್ಟೋರಿ.

ಇದೊಂದು ಮನರಂಜನಾತ್ಮಕ ಚಿತ್ರ. ಮೊದಲರ್ಧ ಜಾಲಿಯಾಗಿ ಸಾಗುವ ಕಥೆಯಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್ ಗಳಿವೆ. ನೋಡುಗನಿಗೆ ಟೆಸ್ಟೂ ಇದೆ. ಆದರೂ ಸಿನಿಮಾ ಅತ್ತಿತ್ತ ಅಲ್ಲಾಡದಂತೆ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಕಥೆ ಸಿಂಪಲ್ ಏನಲ್ಲ. ಸರಳ ಕಥೆಗೆ ನಿರೂಪಣೆಯ ಶೈಲಿ ವಿಶೇಷವಾಗಿದೆ. ಇಲ್ಲಿ ಲಂಗೋಟಿಯೇ ಹೀರೋ! ಅಂಡರ್‌ವೇರ್ ಇಲ್ಲಿ ವಿಲನ್. ಇಷ್ಟು ಹೇಳಿದ ಮೇಲೆ ಸಿನಿಮಾ ಮೇಲಿನ ಕುತೂಹಲ ಹೆಚ್ಚದೇ ಇರದು.

ಹೊಡಿ, ಬಡಿ, ಕಡಿ ಸಿನಿಮಾಗಳ ನಡುವೆ ಇದೊಂದು ಪಕ್ಕಾ ದೇಸಿ ಸೊಗಡಿನ, ಮನರಂಜನಾತ್ಮಕ ಚಿತ್ರ. ಇಲ್ಲಿ ಹಾಸ್ಯ ಪ್ರಧಾನವಾಗಿದ್ದರೂ, ಕಥೆಯಲ್ಲಿ ಎಮೋಷನ್ ಅಂಶಗಳು ಮೈದುಂಬಿಕೊಂಡಿವೆ. ಆ ಕಾರಣಕ್ಕೆ ಸಿನಿಮಾದಲ್ಲಿ ಇರುವ ಸಣ್ಣ ಪುಟ್ಟ ತಪ್ಪುಗಳೆಲ್ಲವೂ ಮಾಯವಾಗುತ್ತವೆ. ಮೊದಲರ್ಧ ಕಥೆ ಸ್ವಲ್ಪ ಲ್ಯಾಗ್ ಎನಿಸಿದರೂ, ದ್ವಿತಿಯಾರ್ಧದಲ್ಲಿ ಬರುವ ಒಂದಷ್ಟು ಸನ್ನಿವೇಶಗಳು ನೋಡುಗರನ್ನು ಕುತೂಹಲಕ್ಕೆ ದೂಡುತ್ತದೆ. ಸಿನಿಮಾದಲ್ಲಿ ಲಂಗೋಟಿ ಪ್ರಧಾನ ಪಾತ್ರವಹಿಸಿದೆ. ಲಂಗೋಟಿಯನ್ನು ಧರಿಸಿ ಪ್ರಬುದ್ಧವಾಗಿ ನಟಿಸಿರುವ ನಾಯಕ ಕೂಡ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಅಲ್ಲಲ್ಲಿ ಕೆಲ ಸನ್ನಿವೇಶಗಳು ವಿನಾಕಾರಣ ಬಂದು ಹೋಗುತ್ತವೆಯಾದರೂ, ಸಿನಿಮಾದಲ್ಲಿ ಕಾಣಸಿಗುವ ಹಾಡೊಂದು ಕೆಲವು ಮಿಸ್ಟೇಕ್‌ಗಳನ್ನು ಪಕ್ಕಕ್ಕೆ ಸರಿಸುತ್ತದೆ. ಸರಾಗವಾಗಿ ಕಚಗುಳಿ ಇಡುವ ಸಂಭಾಷಣೆಯಲ್ಲೂ ಒಂದಷ್ಟು ಮಾತುಗಳು ನಗುತರಿಸಿದರೆ, ಒಂದಷ್ಟು ಮಾತುಗಳು ಅತಿ ಎನಿಸುತ್ತವೆ. ಆದರೂ, ಕಥೆಯ ಓಟಕ್ಕೆ ಮಾತುಗಳೂ ಕೂಡ ಹೆಗಲಾಗಿವೆ. ಸಿನಿಮಾ ಅವಧಿ ತುಸು ಕಡಿಮೆ ಮಾಡಬಹುದಿತ್ತು. ಹಾಸ್ಯಮಯ ಎನಿಸುವ ಕೆಲ ದೃಶ್ಯಗಳಿಗೂ ಕತ್ತರಿ ಹಾಕಬಹುದಿತ್ತು. ಆದರೆ, ಲಂಗೋಟಿ ವಿಷಯ ಬಿಟ್ಟು ಕಥೆ ಬೇರೆಲೂ ಅಡ್ಡಾಡಿಲ್ಲವಾದ್ದರಿಂದ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ. ಇಲ್ಲಿ ಲಂಗೋಟಿಯೇ ಕೇಂದ್ರಬಿಂದು ಆಗಿರುವುದರಿಂದ ಎಲ್ಲರ ಚಿತ್ತ ಲಂಗೋಟಿಯ ಸರಿತಪ್ಪುಗಳ ಕಡೆಗೆ ಇರಿಸುತ್ತೆ.

ಕಥೆ ಬಗ್ಗೆ ಹೇಳುವುದಾದರೆ, ಸಂಪ್ರದಾಯಸ್ಥ ಕುಟುಂಬದಲ್ಲಿ ಲಂಗೋಟಿಗೆ ಬಹಳ ಗೌರವ. ಅನಾದಿಕಾಲದಿಂದಲೂ ಲಂಗೋಟಿ ಧರಿಸುತ್ತ ಬಂದಿರುವ ಆ ಕುಟುಂಬದ ಯುವಕನಿಗೂ ಕೂಡ ಲಂಗೋಟಿ ಧರಿಸಬೇಕೆಂಬ ನಿಯಮ. ಆದರೆ, ಅವನಿಗೋ ಬ್ರಾಂಡೆಡ್ ಅಂಡರ್‌ವೇರ್ ಹಾಕುವ ಆಸೆ. ಚಿಕ್ಕಂದಿನಿಂದಲೂ ಲಂಗೋಟಿ ಹಾಕುವ ಅವನನ್ನು ಹೀಯಾಳಿಸುವ ಗೆಳೆಯರಿಂದ ರೋಸಿ ಹೋದ ಆ ನಾಯಕ ಅದರಿಂದ ಮುಕ್ತಿ ಪಡೆದುಕೊಳ್ಳಬೇಕೆಂದು ಹೋರಾಡುತ್ತಾನೆ. ಆದರೆ, ಆಚಾರ, ಸಂಪ್ರದಾಯ ಅಂತ ಅವನ ತಾತ ಲಂಗೋಟಿ ಧರಿಸುವಂತೆ ಪಟ್ಟು ಹಿಡಿಯುತ್ತಾನೆ. ಒಂದು ಹಂತದಲ್ಲಿ ಲಂಗೋಟಿ ನಾಯಕನ ಲೈಫಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತೆ. ಅದರಿಂದ ಕಿಡ್ನಾಪ್, ಅತ್ಯಾಚಾರ, ಕೊಲೆಗೂ ಅವನ ಹೆಸರು ಕೇಳಿಬರುತ್ತೆ. ಅಷ್ಟೆಲ್ಲಾ ಏರಿಳಿತಗಳಿಗೆ ಕಾರಣವಾಗುವ ಲಂಗೋಟಿ ಕ್ಲೆöÊಮ್ಯಾಕ್ಸ್ ಹಂತದಲ್ಲಿ ವಿಚಿತ್ರ ಘಟನೆಗೆ ಕಾರಣವಾಗುತ್ತೆ. ಅದೇನು ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ನಾಯಕರಾಗಿ ಕಾಣಿಸಿಕೊಂಡಿರುವ ಆಕಾಶ್ ರ‍್ಯಾಂಬೋ ಅವರಿಗೆ ಮೊದಲ ಸಿನಿಮಾವಾದರೂ, ಅನುಭವಿ ನಟರಂತೆ ಕಾಣುತ್ತಾರೆ. ನಗಿಸೋಕು ಸೈ, ಭಾವುಕರಾಗುವಲ್ಲೂ ಸೈ ಅನ್ನೋದನ್ನು ಪಾತ್ರದ ಮೂಲಕ ತೋರಿಸಿದ್ದಾರೆ. ತಾತನ ಪಾತ್ರಧಾರಿ ಮತ್ತೊಂದು ಹೈಲೆಟ್ ಎನ್ನಬಹುದು. ಇಲ್ಲಿ ಹುಲಿ ಕಾರ್ತಿಕ್ ಮತ್ತೊಂದು ವಿಶೇಷ ಎನ್ನಬಹದು. ಅವರ ಪಾತ್ರ ತುಂಬಾನೇ ಗಮನಸೆಳೆಯುತ್ತದೆ. ಉಳಿದಂತೆ ಸ್ನೇಹ ಖುಷಿ, ಸಂಹಿತ, ಪಲ್ಟಿ ಗೋವಿಂದ್, ಸಾಯಿ ಪವನ್, ಧೀರೇಂದ್ರ ಇತರರು ಪಾತ್ರಕ್ಕೆ ಮೋಸ ಮಾಡಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವಿದೆ. ಛಾಯಾಗ್ರಹಣ ಲಂಗೋಟಿಯನ್ನು ಅಂದಗಾಣಿಸಿದೆ.

error: Content is protected !!