Categories
ಸಿನಿ ಸುದ್ದಿ

ಇದು ರುಕ್ಕಮ್ಮ ಅಲ್ಲ! ಹೊಸಬರ ರಕ್ಕಂ..ಜು.29ಕ್ಕೆ ಬಿಡುಗಡೆ

ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ಅವರು ನಿರ್ಮಿಸಿರುವ ರಕ್ಕಂ ಚಿತ್ರ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಸೆಂದಿಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ

ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ ಎಲ್ಲರಿಗೂ ರಂಗಭೂಮಿ, ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ‌. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್ ಎಸ್ ಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುತ್ತಿದ್ದ “ಕನ್ನಡದ ಕೋಟ್ಯಾಧಿಪತಿ” ಸೇರಿದಂತೆ ಅನೇಕ ರಿಯಾಲಿಟಿ ಶೋಗಳಿಗೆ ಕೆಲಸ ಮಾಡಿದ್ದೇನೆ. ಈಗ ಹಂಸಲೇಖ ಅವರ ಬಳಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಕೋವಿಡ್ ಪೂರ್ವದಲ್ಲಿ ನಿರ್ಮಾಣವಾದ ಚಿತ್ರವಿದು. ಪ್ರಧಾನಮಂತ್ರಿಗಳು ಡಿಮಾನಿಟೇಸೇಶನ್ ಮಾಡಿದ ಸಮಯದಲ್ಲಿ ಹುಟ್ಡಿದ ಕಥೆ ಇದು. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದರೂ ತಪ್ಪಾಗಲಾರದು. “ರಕ್ಕಂ” ಎಂದರೆ ಹಣದ ಗಂಟು ಎಂಬ ಅರ್ಥವಿದೆ.


ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ರಣಧೀರ್ ಗೌಡ ನಾಯಕನಾಗಿ ನಟಿಸಿದ್ದಾರೆ. ಅಮೃತ ನಾಯರ್ ನಾಯಕಿ. ಹಿರಿಯ ಕಲಾವಿದ ನಂಜಪ್ಪ ಬೆನಕ, ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಅವರು ಸೇರಿದಂತೆ ಸಾಕಷ್ಟು ಜನ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಇದೇ 29 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಸೆಂದಿಲ್.

ನಿರ್ದೇಶಕರು ಹೇಳಿದ ಕಥೆ ನನಗೆ ತುಂಬಾ ಹಿಡಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕಿ ಸ್ನೇಹಲತ‌.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಹಾಗೂ ರಂಗಾಯಣದಲ್ಲಿ ಅಭಿನಯ ಕಲಿತಿದ್ದೀನಿ. ಸಹಾಯಕ ನಿರ್ದೇಶಕನಾಗೂ ದುಡಿದಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಂಗ ಎಂಬುದು ನನ್ನ ಪಾತ್ರದ ಹೆಸರು. ಎರಡು ಶೇಡ್ ಗಳಲ್ಲಿ ಅಭಿನಯಿಸಿದ್ದೇನೆ. ಮೊದಲು ಹಳ್ಳಿಯವನಾಗಿ ನಂತರ ಪಟ್ಟಣವಾಸಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ರಣಧೀರ್ ಗೌಡ.

ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ನಂಜಪ್ಪ ಬೆನಕ, ನಿರ್ದೇಶಕ ಬಿ.ರಾಮಮೂರ್ತಿ, ನಟರಾದ ವಿನಯ್ ಪಾಂಡವಪುರ, ದಯಾನಂದ್,
ಸಹ ನಿರ್ದೇಶಕ ಗೋಪಾಲ್, ಛಾಯಾಗ್ರಾಹಕ ಶ್ಯಾಮ್, ಸಂಗೀತ ನಿರ್ದೇಶಕ ಶ್ರೀವತ್ಸ, ಗಾಯಕ ರವೀಂದ್ರ ಸೊರಗಾವಿ, ನೃತ್ಯ ನಿರ್ದೇಶಕರಾದ, ಚಾಮರಾಜ್, ಅರುಣ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸಂದೇಶ್ “ರಕ್ಕಂ” ಚಿತ್ರದ ಬಗ್ಗೆ ಮಾತನಾಡಿದರು.

ನಿರ್ಮಾಪಕ ಸಂಜಯ್ ಬಾಬು, ನಿರ್ದೇಶಕ ಮಾ ಚಂದ್ರು
ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ
ಶುಭ ಕೋರಿದರು.

Categories
ಸಿನಿ ಸುದ್ದಿ

ಆಗಸ್ಟ್ 5 ರಿಂದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ: ರಾಜಕುಮಾರ್, ಪುನೀತ್ ರಾಜಕುಮಾರ್ ವಿಷಯಾಧಾರಿತ ವಿಶೇಷ ಪ್ರದರ್ಶನ…

ಈ ಬಾರಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ರವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ

ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದಿಂದ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷರಾದ ಶ್ರೀ ವಾಸುದೇವ್. ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕರಾದ ಶ್ರೀಮತಿ ಜಿ ಕುಸುಮ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ರವರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಚೇತನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಇಶಾನ್ ಹೀರೋ…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”. ಈ ಚಿತ್ರವನ್ನು ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು.

ಜೇಮ್ಸ್” ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಜೇಮ್ಸ್” ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ.


ಸದ್ಯದಲ್ಲೇ ಚೇತನ್ ಕುಮಾರ್ ನಿರ್ದೇಶನದ ಚಿತ್ರವೊಂದು ಆರಂಭವಾಗಲಿದೆ. “ರೆಮೋ” ಚಿತ್ರದ ಇಶಾನ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ.

“ರೆಮೋ” ಚಿತ್ರದ ಬಿಡುಗಡೆ ನಂತರ ಈ ಚಿತ್ರ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಲವ್ ಯು ಶ್ರೀನು! ಓ ಮೈ ಲವ್ ಅಂದ ನಿರ್ದೇಶಕನಿಗೆ ಟಾಲಿವುಡ್ ಭರ್ಜರಿ ಆಫರ್…

ಒಬ್ಬ ನಿರ್ದೇಶಕನಿಗೆ ತನ್ನ ಸಿನಿಮಾ ಹೀಗೇ ಮೂಡಿಬರಬೇಕೆಂಬ ಕನಸಿರುತ್ತದೆ. ಆತ ತನ್ನ ಕಲ್ಪನೆಯ ಪ್ರಕಾರವೇ ಚಿತ್ರವನ್ನು ತೆರೆಯಮೇಲೆ ತರಬೇಕಾದರೆ ಅದಕ್ಕೆ ನಿರ್ಮಾಪಕ ನೀಡುವ ಸಹಕಾರ ಬಹು
ಮುಖ್ಯ. ಯಾವುದೇ ಒಂದು ಚಿತ್ರಕ್ಕೆ ಅದರ ನಿರ್ಮಾಪಕ ಹಾಗೂ ನಿರ್ದೇಶಕ ಎರಡು ಕಣ್ಣುಗಳಿದ್ದಂತೆ. ಆರಂಭದಿಂದ ಕೊನೆಯವರೆಗೂ ಇಬ್ಬರಲ್ಲಿ ಪರಸ್ಪರ ಹೊಂದಾಣಿಕೆಯಿದ್ದು, ಅಷ್ಟೇ ಪ್ರೀತಿಯಿಂದ ಚಿತ್ರವನ್ನು ಹೊರತಂದಾಗ ಅದು ಖಂಡಿತ ಉತ್ತಮ ಚಿತ್ರವಾಗಿರುತ್ತದೆ. ಹಾಗೆ ಮೂಡಿಬಂದಿರುವ ಚಿತ್ರವೇ ಓ ಮೈ ಲವ್. ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ ಅಭಿನಯಿಸಿದ ಈ ಚಿತ್ರಕ್ಕೆ ಸ್ಮೈಲ್ ಶ್ರೀನು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮಾಂಜಿನಿ ಅವರು ತಮ್ಮದೇ ಕಥೆಗೆ ಬಂಡವಾಳ ಹೂಡಿದ್ದಾರೆ.


ಈಗ ರಾಜ್ಯದೆಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವ, ಪ್ರೇಕ್ಷಕರಿಂದ ಪ್ರಶಂಸೆ ಪಡೆದಿರುವ ಈ ಚಿತ್ರದ ಪ್ರಾರಂಭದಿಂದಲೂ ನಿರ್ದೇಶಕರ ಮೇಲೆ
ನಂಬಿಕೆಯಿಟ್ಟಿದ್ದ ಜಿ. ರಾಮಾಂಜಿನಿ ಅವರು ಬಿಗ್ ಬಜೆಟ್ ನಲ್ಲಿ ಭರ್ಜರಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ಅದರ ಫಲವಾಗಿ ಇಡೀ ಚಿತ್ರವನ್ನು ಪ್ರೇಕ್ಷಕ ಎಂಜಾಯ್ ಮಾಡುತ್ತಿದ್ದಾರೆ.

ಚಿತ್ರದ ಈ ಯಶಸ್ಸಿನ ಕುರಿತಂತೆ ಖುಷಿಯಿಂದ ಮಾತನಾಡಿರುವ ನಿರ್ದೇಶಕ ಸ್ಮೈಲ್ ಶ್ರೀನು, ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವುದು ನಿರ್ಮಾಪಕರೂ ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರದ ಪ್ರತಿ ಫ್ರೇಮ್ ಬಗ್ಗೆ ಜನ ನೀಡುತ್ತಿರುವ ಪ್ರತಿಕ್ರಿಯೆ, ಪ್ರಶಂಸೆ ವ್ಯಕ್ತಪಡಿಸುತ್ತಿರುವುದಕ್ಕೆ ನನ್ನ ಜೊತೆ ಕೆಲಸ ಮಾಡಿದ ಇಡೀ ಟೀಮ್ ಹಾಕಿದ ಎಫರ್ಟ್ ಕಾರಣ.ಮೆಲೋಡಿ ಹಾಡುಗಳನ್ನು ಮಾಡಿಕೊಟ್ಟ ಚರಣ್ ಅರ್ಜುನ್, ಇಡೀ ಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿರುವ ಛಾಯಾಗ್ರಾಹಕ ಎಸ್.ಹಾಲೇಶ್, ಸಂಕಲನಕಾರ ಡಿ.ಮಲ್ಲಿ, ಸಾಹಸ ನಿರ್ದೇಶಕ ರಿಯಲ್ ಸತೀಶ್,ಕೊರಿಯೋಗ್ರಾಫರ್‌ಗಳಾದ ವಿ.ಮುರುಳಿ, ಸಂತೋಷ್, ಸೇರಿದಂತೆ ಸಹಕಾರ ಎಲ್ಲರಿಗೂ ಧನ್ಯವಾದ.

ಎಲ್ಲರೂ ನನ್ನ ಆಲೋಚನೆಗಳಿಗೆ ಜೀವ ತುಂಬಿದವರು, ನಾನು ಏನೇ ಸೌಲಭ್ಯ ಕೇಳಿದರೂ ಯಾಕೆ ಎಂದು ಕೇಳದೆ ಎಲ್ಲವನ್ನೂ ಒದಗಿಸಿಕೊಟ್ಟ ನಿರ್ಮಾಪಕ ರಾಮಾಂಜಿನಿ ಅವರು ಈ ಯಶಸ್ಸು ಪ್ರಶಂಸೆಗೆ ಕಾರಣ ಎಂದಿದ್ದಾರೆ ಶ್ರೀನು. ನಾನೇನು ಅಂದುಕೊಂಡು ಸನ್ನಿವೇಶಗಳನ್ನು ಬರೆದಿದ್ದೆನೋ ಅದೇ ರೀತಿ ಪ್ರೇಕ್ಷಕರು ಪ್ರತಿಕ್ರಯಿಸುತ್ತಿದ್ದಾರೆ, ನಟ ಶಶಿಕುಮಾರ್ ಕೂಡ
ಕಾಲ್ ಮಾಡಿ ಸೂಪರ್ ಆಗಿ ಸಿನಿಮಾ ಮಾಡಿದ್ದೀಯ, ಇಷ್ಟು ಚೆನ್ನಾಗಿ ಬಂದಿರುತ್ತೆ ಅಂದ್ಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಥೇಟರ್ ಆಪರೇಟರ್‌ಗಳು ಸಹ ಕಾಲ್ ಮಾಡಿ ಇತ್ತೀಚೆಗೆ ಸ್ಟಾರ್ ಸಿನಿಮಾ ಬಿಟ್ಟರೆ ಬೇರೆ ಚಿತ್ರಗಳಿಗೆ ಜನ ಬರೋದೇ ಕಡಿಮೆಯಾಗಿತ್ತು. ನಿಮ್ಮ ಚಿತ್ರದಿಂದ ಮತ್ತೆ ಥೇಟರ್ ಜನರಿಂದ ತುಂಬುವಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಈಗಾಗಲೇ ತೆಲುಗಿನ ಅನೇಕ ನಿರ್ಮಾಪಕರು ಫೋನ್ ಮಾಡಿ ರೀಮೇಕ್, ಡಬ್ಬಿಂಗ್ ಮಾಡಲು ಕೇಳುತ್ತಿದ್ದಾರೆ. ಜೊತೆಗೆ ಒಂದೊಳ್ಳೆ ಕಥೆ ತನ್ನಿ, ಚಿತ್ರ ಮಾಡೋಣ ಎಂದು ಆಫರ್ ನೀಡುತ್ತಿದ್ದಾರೆ. ಇದಕ್ಕೆಲ್ಲ ಓ ಮೈ ಲವ್ ಚಿತ್ರವೇ ಕಾರಣ ಎಂದು ಹೇಳಿದ್ದಾರೆ.

ನಿರ್ಮಾಪಕರಿಗೆ ಯಾವುದೇ ಬರ್ಡನ್ ಹಾಕದೆ ಚಿತ್ರದ ವೈಭವಕ್ಕೆ ಏನು ಬೇಕೋ ಅಷ್ಟನ್ನು ಮಾತ್ರ ಖರ್ಚು ಮಾಡಿಸುವ ಸ್ಮೈಲ್‌ ಶ್ರೀನು ಅವರು ನಿಜವಾಗಿಯೂ ನಿರ್ಮಾಪಕರ ನಿರ್ದೇಶಕ.‌

Categories
ಸಿನಿ ಸುದ್ದಿ

ಮುಂದುವರೆದ ಕಿರುತೆರೆ ಕಿರಣ್ ರಾಜ್‌ ಸಹಾಯ ಹಸ್ತ: ಅಸಹಾಯಕರಿಗೆ ಸಾಥ್ ಕೊಟ್ಟ ನಟ

“ಬಡ್ಡೀಸ್” ಹೀರೋ ಕಿರಣ್ ರಾಜ್, ನಾಯಕನಾಗಿ ಅಷ್ಟೇ ಜನಪ್ರಿಯತೆ ಪಡೆದಿಲ್ಲ. ತಾವು ಮಾಡುವ ಸಾಮಾಜಿಕ ಕಾರ್ಯಗಳಿಂದಲೂ ಅವರು ಜನಪ್ರಿಯರು. ಕೊರೋನ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯಗಳನ್ನು ನೆನಪಿಸಿಕೊಳ್ಳುವ ಜನರಿದ್ದಾರೆ. ಕೊರೋನ ಮುಗಿದ ಮೇಲೂ ಕಿರಣ್ ರಾಜ್ ಒಂದಲ್ಲ ಒಂದು ಜನೋಪಕಾರಿ ಕಾರ್ಯ ಮಾಡುತ್ತಲೇ ಇದ್ದಾರೆ.

ಜುಲೈ ಆರಂಭವಾದಾಗಿನಿಂದಲೂ‌ ಕರುನಾಡ ಪೂರ್ತಿ ಮಳೆಯ ಅಬ್ಬರ ಜೋರಾಗಿದೆ. ಈ ಮಳೆಯ ಜೊತೆ ಎಷ್ಟೋ ಜನರ ನಿತ್ಯ ಜೀವನ ಸಾಗಬೇಕಿದೆ. ಬೀದಿ ಬದಿ ವ್ಯಾಪಾರಿಗಳು, ಸಿಗ್ನಲ್ ನಲ್ಲಿ ಮಾರಾಟ ಮಾಡುವವರು ಸಾಕಷ್ಟು ಜನರಿದ್ದಾರೆ. ಇಂತಹವರನ್ನು ಗುರುತಿಸಿರುವ ಕಿರಣ್ ರಾಜ್, ಮಳೆಯಿಂದ ರಕ್ಷಣೆ ನೀಡುವ ರೈನ್ ಕೋಟ್ ನೀಡಿದ್ದಾರೆ.

ಈ ಬಾರಿ ಇಂತಹ ಸಾಮಾಜಿಕ ಕಾರ್ಯವನ್ನು ಕಿರಣ್ ರಾಜ್ ತಾವಷ್ಟೇ ಮಾಡಿಲ್ಲ. ಸಾಮಾಜಿಕ ಸೇವೆಯಲ್ಲಿ ಆಸಕ್ತಿಯಿರುವ ಕಾಲೇಜು ವಿದ್ಯಾರ್ಥಿಗಳ ಮೂಲಕ ಕೂಡ ಮಾಡಿಸಿದ್ದಾರೆ.

ಇಂತಹ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಖುಷಿ ತಂದಿದೆ. ಮುಂದೆ ತಾವು ಸಹ ಸಹಾಯ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಗಳು ಅವರಿಗೆ ಅನುಕೂಲವಾಗಲಿದೆ.

ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮನಸ್ಸಿರುವ ವಿದ್ಯಾರ್ಥಿಗಳು ಕಿರಣ್ ರಾಜ್ ಫೌಂಡೇಶನ್ ಅನ್ನು ಸಂಪರ್ಕಿಸಬಹುದು ಎನ್ನುತ್ತಾರೆ ನಟ ಕಿರಣ್ ರಾಜ್.

Categories
ಸಿನಿ ಸುದ್ದಿ

ಮೊಗ್ಗಿನ ಮನಸ್ಸಿಗೆ ಹದಿನಾಲ್ಕು ವರ್ಷ! ಶಶಾಂಕ್ ನಿರ್ದೇಶನದ ಲವ್ 360 ಚಿತ್ರದ ಹೊಸ ಹಾಡು ರಿಲೀಸ್…

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ “ಮೊಗ್ಗಿನ ಮನಸ್ಸು” ಚಿತ್ರಕ್ಕೆ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಅವರ ನಿರ್ದೇಶನದ “ಲವ್ 360” ಚಿತ್ರದ “ಭೋರ್ಗರೆದು” ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್ ಅವರೆ ಬರೆದಿರುವ ಈ ಹಾಡನ್ನು ಕೀರ್ತನ್ ಹೊಳ್ಳ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ನಾನು “ಲವ್ 360” ಸಿನಿಮಾದ ಈ ಹಾಡನ್ನು ಇಂದು ಬಿಡುಗಡೆ ಮಾಡಲು ಪ್ರಮುಖ ಕಾರಣವಿದೆ. ಅದೇನೆಂದರೆ, ನನ್ನ ನಿರ್ದೇಶನದ “ಮೊಗ್ಗಿನ ಮನಸ್ಸು” ಚಿತ್ರ ತೆರೆಕಂಡು ಇಂದಿಗೆ(ಜಲೈ 18)ಹದಿನಾಲ್ಕು ವರ್ಷಗಳಾಗಿದೆ. ಹಾಗಾಗಿ ಇಂದು ಆ ಚಿತ್ರದ ನೆನಪುಗಳೊಂದಿಗೆ “ಲವ್ 360” ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. “ಮೊಗ್ಗಿನ ಮನಸ್ಸು” ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್ ಅವರಿಂದ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಶುಭಾ ಪುಂಜಾ ಮುಂತಾದವರು ಅಭಿನಯಿಸಿದ್ದ ಸಿನಿಮಾವದು. ಚಿತ್ರ ಹಾಗೂ ಹಾಡುಗಳು ಈಗಲೂ ಜನಪ್ರಿಯ.

ಮುಂದೊಂದು ದಿನ “ಮೊಗ್ಗಿನ ಮನಸ್ಸು ಭಾಗ 2” ಮಾಡುವ ಆಸೆಯಿದೆ. ಆ ಚಿತ್ರವನ್ನೂ ಹೊಸ ಕಲಾವಿದರೊಂದಿಗೆ ಮಾಡುತ್ತೇನೆ. ಇನ್ನು ಇಂದು ಬಿಡುಗಡೆಯಾಗಿರುವ “ಲವ್ 360” ಚಿತ್ರದ “ಭೋರ್ಗರೆದು” ಹಾಡನ್ನು ನಾನೇ ಬರೆದಿದ್ದೇನೆ. ಕೀರ್ತನ್ ಹೊಳ್ಳ ಹಾಡಿದ್ದಾರೆ. ಇನ್ನೊಂದು ಹಾಡಿದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಜನಪ್ರಿಯವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೆ” ಹಾಡಂತೂ ನಾವು ಅಂದುಕೊಂಡದಕ್ಕಿಂತ ದೊಡ್ಡ ಯಶಸ್ಸು ಕಂಡಿದೆ. ರೀಲ್ಸ್ ನಲ್ಲೂ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವವರು ಹೆಚ್ಚಾಗಿದ್ದಾರೆ ಎಂದು ನಿರ್ದೇಶಕ ಶಶಾಂಕ್ ಮಾಹಿತಿ ನೀಡಿದರು.

ನಮ್ಮ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. “ಜಗವೇ ನೀನು” ಹಾಡಿನಿಂದ ಈಗಾಗಲೇ ಜನ ನನ್ನನ್ನು ಹೋದ ಕಡೆ ಎಲ್ಲಾ ಗುರುತಿಸುತ್ತಿದ್ದಾರೆ. ಚಿತ್ರದ ಗೆಲುವಿನ ಖುಷಿಯನ್ನು ಈ ಹಾಡು ನನಗೆ ಈಗಾಗಲೇ ನೀಡಿದೆ. ಇಂತಹ ಅದ್ಭುತ ಹಾಡು ಕೊಟ್ಟಿರುವ ನಿರ್ದೇಶಕರಿಗೆ ಹಾಗೂ ಮೆಚ್ಚಿಕೊಂಡಿರುವ ಕಲಾರಸಿಕರಿಗೆ ಧನ್ಯವಾದ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಪ್ರವೀಣ್.

ಬಿಡುಗಡೆಯಾಗಿರುವ ಎರಡು ಹಾಡುಗಳು ಗೆದ್ದಿದೆ. ಹಿರಿಯರು, ಕಿರಿಯರು ಎಲ್ಲಾ ವಯಸ್ಸಿನವರಿಗೂ “ಜಗವೇ ನೀನು ಗೆಳತಿಯೆ” ಹಾಡು ಇಷ್ಟವಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲುತ್ತದೆ ಎಂದರು ನಾಯಕಿ ರಚನಾ ಇಂದರ್.

“ಲವ್ 360” ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದಕ್ಕೆ ಆನಂದ್ ಆಡಿಯೋ ಶ್ಯಾಮ್ ಸಂತಸಪಟ್ಟರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಇದ್ದರು.

Categories
ಸಿನಿ ಸುದ್ದಿ

ವಸಿಷ್ಠಗೆ ಲವ್ಲಿ ಹುಡುಗಿ ಜೋಡಿ! ಸಿಂಹದ ಜೊತೆ ಜಾರ್ಖಂಡ್ ಬೆಡಗಿ ಡಿಂಗು ಡಾಂಗು…

ಸ್ಯಾಂಡಲ್ ವುಡ್ ಟ್ಯಾಲೆಂಟೆಡ್ ನಟ ವಸಿಷ್ಠ ಸಿಂಹ. ನಟನೆ ಅಂತ ಬಂದ್ರೆ ರೋಸ್ ಹಿಡಿದು ಹೀರೋ ಆಗೋಕು ರೆಡಿ, ಲಾಂಗ್ ಹಿಡಿದು ವಿಲನ್ ಆಗೋಕೂ ಸೈ, ಅಷ್ಟೇ ಅಲ್ಲ ಗಾಯನಕ್ಕೂ ಸೈ ಎನಿಸಿಕೊಂಡಿರುವ ಕಂಚಿನ ಕಂಠದ ನಟ. ಶಿವಣ್ಣನ ಜೊತೆ ಟಗರು ನಲ್ಲಿ ಚಿಟ್ಟೆಯಾಗಿ ಮಿಂಚಿದ ವಸಿಷ್ಠ ಸಿಂಹ ಸ್ಟೈಲಿಶ್ ಲುಕ್ ನಲ್ಲಿ ‘ಲವ್ ಲಿ’ ಯಾಗಿ ಕಾಣಿಸಿಕೊಳ್ಳುತ್ತಿರೋದು ನಿಮಗೆಲ್ಲ ಗೊತ್ತೇ ಇದೆ.

ವಸಿಷ್ಠ ನಾಯಕ ನಟನಾಗಿ ನಟಿಸುತ್ತಿರುವ ‘ಲವ್ ಲಿ’ ಸೆಟ್ಟೇರಿ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಅಪ್ ಡೇಟ್ ಗಳು ಕೂಡ ಗಮನ ಸೆಳೆಯುತ್ತಿವೆ.

ಈ ಚಿತ್ರಕ್ಕೆ ವಸಿಷ್ಠ ಸಿಂಹ ಜೊತೆ ತೆರೆ ಹಂಚಿಕೊಳ್ಳುವರ್ಯಾರು ಎಂಬ ಕುತೂಹಲ ಎಲ್ಲರಲ್ಲಿತ್ತು. ಆ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದಾರೆ. ಹಿಂದಿ, ಕೊರಿಯನ್, ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್ ಗೆ ಇದು ಮೊದಲ ಕನ್ನಡ ಸಿನಿಮಾ.

ಈಗಾಗಲೇ ಸ್ಟೆಫಿ ಪಟೇಲ್ ‘ಲವ್ ಲಿ’ ಚಿತ್ರತಂಡ ಸೇರಿಕೊಂಡಿದ್ದು ಜುಲೈ 19ರಿಂದ ಚಿತ್ರದ ಸೆಕೆಂಡ್ ಶೆಡ್ಯೂಲ್ ಆರಂಭವಾಗಲಿದೆ. ವಸಿಷ್ಠ ಸಿಂಹ ಹಾಗೂ ಸ್ಟೆಫಿ ಕಾಂಬಿನೇಶನ್ ಒಳಗೊಂಡ ಪೋಸ್ಟರ್ ಜುಲೈ 21ರಂದು ಚಿತ್ರತಂಡ ರಿವೀಲ್ ಮಾಡಲಿದೆ.

‘ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಕ್ಯಾಮೆರಾ ವರ್ಕ್ ಅಶ್ವಿನ್ ಕೆನಡಿ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ‘ಲವ್ ಲಿ’ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಎನ್ ಎಫ್ ಟಿ ಯಿಂದ ಕಿಚ್ಚನ ಫ್ಯಾನ್ಸ್ ಗೆ ಸ್ವೀಟ್ ನ್ಯೂಸ್: ಕಿಚ್ಚ ವರ್ಸ್ ಲಾಂಚ್

ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ, ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸೂಪರ್ ಡೂಪರ್ ಸರ್ಪ್ರೈಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದ್ದು. ಎನ್ ಎಫ್ ಟಿ ಸಂಸ್ಥೆ ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣವನ್ನು ಪ್ರಸ್ತುತ ಪಡಿಸಲಿದೆ.

ಈ ಕುರಿತು ಎನ್ ಎಫ್ ಟಿ ಸಂಸ್ಥೆ ಕಿಚ್ಚ ಸುದೀಪ ಒಳಗೊಂಡಂತೆ ವಿಕ್ರಾಂತ್ ರೋಣ ತಂಡದೊಂದಿಗೆ ಬಂದು ‘ಕಿಚ್ಚ ವರ್ಸ್’ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ‘ಕಿಚ್ಚ ವರ್ಸ್’ ಅನ್ನು ಎನ್ ಎಫ್ ಟಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರತಂಡದೊಂದಿಗೆ ಲಾಂಚ್ ಮಾಡಿದೆ. ಎನ್ ಎಫ್ ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್ ಜಗತ್ತು ಕಿಚ್ಚನಿಗೂ ಸಖತ್ ಸರ್ಪ್ರೈಸ್ ಆಗಿದ್ದು ಮೊದಲ ಬಾರಿ ಇದರ ಬಗ್ಗೆ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. ಆದ್ರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾನೇ ಅಧ್ಬುತ ಕೆಲಸವನ್ನು ಈ ತಂಡ ಮಾಡಿದೆ ಖಂಡಿತ ಎಲ್ಲರಿಗೂ ಇಂತಹದ್ದೇ ಒಂದು ಒಳ್ಳೆಯ ಅನುಭವವನ್ನು ಇದು ನೀಡಲಿದೆ ಎಂಬ ಭರವಸೆ ಇದೆ ಎಂದು ನಟ ಕಿಚ್ಚ ಸುದೀಪ ಕಿಚ್ಚ ವರ್ಸ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಕಿಚ್ಚ ವರ್ಸ್ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ನಿಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಎನ್ ಎಫ್ ಟಿ ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ಕಿಚ್ಚ ವರ್ಸ್ ಬಗ್ಗೆ ತಿಳಿಸಿದ್ದಾರೆ.

ಜುಲೈ 17 ಅಂದ್ರೆ ನಿನ್ನೆಯಿಂದ ಎನ್ ಎಫ್ ಟಿ ಸ್ಕೆಚ್ ಕಾಂಪಿಟೇಶನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅಧ್ಬುತ ಸ್ಕೆಚ್ ಮಾಡಿದವರಿಗೆ ಎನ್ ಎಫ್ ಟಿ ಮೆಂಬರ್ ಶಿಪ್ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ. ಹೀಗೆ ಎನ್ ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್ ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.

ಮತ್ತೊಂದು ಹೆಮ್ಮೆಯ ಸಂಗತಿಯಂದ್ರೆ ಜಗತ್ತಿನಲ್ಲೇ ಮೊದಲ ಬಾರಿ ವಿಕ್ರಾಂತ್ ರೋಣ ಸಿನಿಮಾವನ್ನು ಎನ್ ಎಫ್ ಟಿ ಪ್ರೀಮಿಯರ್ ಶೋ ನಡೆಸುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್ ಶೋ ನಡೆಸುತ್ತಿರೋದು ಇದೇ ಮೊದಲು. ಇದು ವಿಕ್ರಾಂತ್ ರೋಣ ಸಿನಿಮಾದ ಹೆಗ್ಗಳಿಕೆ. ಜುಲೈ 27ಕ್ಕೆ ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಎನ್ ಎಫ್ ಟಿ ಮೆಂಬರ್ ಶಿಪ್ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಓ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Categories
ಸಿನಿ ಸುದ್ದಿ

ಓಮಿನಿ ಇದು ಲ್ಯಾಟಿನ್ ಭಾಷೆ! ಈ ಚಿತ್ರದ ಹೈಲೆಟ್ ಓಮಿನಿ ಕಾರು: ಈ ಚಿತ್ರ ದಲ್ಲಿ ‘ಎಲ್ಲಾ’ ಅಂದ ಚಂದ…

“ಓಮಿನಿ” ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ “ಓಮಿನಿ” ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ‌ಸಮಾರಂಭ ಅದ್ದೂರಿಯಾಗಿ ನಡೆಯಿತು. ಸಚಿವ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ತೀರ್ಥಹಳ್ಳಿ ಸುಂದರ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ “ಓಮಿನಿ” ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು. ಇವರೆಲ್ಲಾ ಬಂದು ನನ್ನನ್ನು ಸಮಾರಂಭಕ್ಕೆ ಆಹ್ವಾನಿಸಿದಾಗ ಬರಲ್ಲ ಎಂದು ಹೇಳಲು ಆಗಲಿಲ್ಲ. ಅವರೆಲ್ಲರ ಪ್ರೀತಿ ನನ್ನ ಇಲ್ಲಿಯವರೆಗೂ ಕರೆತಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ರವಿಸಿಂಗ್ ಮುಂತಾದ ಗಣ್ಯರು ಇದ್ದರು.

“ಓಮಿನಿ” ಎಂದರೆ ಲ್ಯಾಟಿನ್ ಭಾಷೆಯಲ್ಲಿ ಎಲ್ಲಾ ಎಂದು ಅರ್ಥ. ಆದರೆ “ಓಮಿನಿ” ಕಾರ್ ಸಹ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ‌. ಇದು ನನ್ನ ಪಾಲಿಗೆ ಅತೀ ದೊಡ್ಡ ಸಮಾರಂಭ. ನಮ್ಮೂರಿನವರೇ ಆದ ಸ ಗೃಹ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ನಿರ್ದೇಶನದೊಂದಿಗೆ ಹಲವು ಜವಾಬ್ದಾರಿ ಹೊತ್ತುಕೊಂಡಿದ್ದೀನಿ. ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದೀನಿ ಎಂದರು ನಿರ್ದೇಶಕ ಮಂಜು ಹೆದ್ದೂರ್.

ಇದೊಂದು ವಿಭಿನ್ನ ಕಥೆಯ ಚಿತ್ರ. ಚಿತ್ರವೊಂದರಲ್ಲಿ ಚಿತ್ರವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಲವ್, ಸಸ್ಪೆನ್ಸ್, ಹಾರರ್ ಎಲ್ಲಾ‌ ಅಂಶಗಳು ನಮ್ಮ ಚಿತ್ರದಲ್ಲಿದೆ.‌ ನಮ್ಮ ಚಿತ್ರದಲ್ಲಿ “ಓಮಿನಿ” ಪ್ರಮುಖಪಾತ್ರ ವಹಿಸುತ್ತದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಅತೀ ದೊಡ್ಡದಾದ ದಾವಣಗೆರೆಯ ಗ್ಲಾಸ್ ಹೌಸ್ ನಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. ಆಗಸ್ಟ್ 19 ರಂದು ರಾಜ್ಯಾದ್ಯಂತ “ಓಮಿನಿ” ಸಂಚಾರ ಆರಂಭವಾಗಲಿದೆ. ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ನೋಡಿ. ಹಾರೈಸಿ ಎಂದರು ನಾಯಕ ಸಿದ್ದು ಮೂಲಿಮನಿ.

ಹಲವು ವರ್ಷಗಳ ನಂತರ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ‌ ನೀಡಿದ್ದಾರೆ.‌ ನಾನು ಮಲೆನಾಡ ಹುಡುಗಿ. ಅದೇ ಊರಿನ ಹುಡುಗಿ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ ಎಂದರು ನಾಯಕಿ ಅಶ್ವಿನಿ ಚಂದ್ರಶೇಖರ್.

ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು “ಓಮಿನಿ” ಬಗ್ಗೆ ಮಾತನಾಡಿದರು.

ಶ್ರೀ ಬೆಳ್ಳುಡಿ ಫಿಲಂಸ್ ಹಾಗೂ ಎಸ್ ಆರ್ ಗ್ರೂಪ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮಂಜು ಹೆದ್ದೂರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನಿರ್ದೇಶನ ಹಾಗೂ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸಿದ್ದು ಮೂಲಿಮನಿ, ಪೂಜಾ ಜನಾರ್ದನ, ಅಶ್ವಿನಿ ಚಂದ್ರಶೇಖರ್, ಭರತ್‌ ಬೋಪ್ಪಣ್ಣ, ಮಂಜು ಹೆದ್ದೂರ್, ಆಕಾಂಕ್ಷ ಪಟಮಕ್ಕಿ, ಮೋಹನ್ ಜುನೇಜ, ಪ್ರಕಾಶ್ ತುಮ್ಮಿನಾಡು, ಮನಸ್ವಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಹಾನ್‌ ಚಿತ್ರಕ್ಕೆ ಪರಂವಃ ಸ್ಟುಡಿಯೋಸ್‌ ನಿರ್ಮಾಣ: ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ನಾಯಕಿ…

“ಕಾಲ್‌ ಕೆಜಿ ಪ್ರೀತಿ”, “ಪಂಚತಂತ್ರ” ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ವಿಹಾನ್‌ ಮತ್ತೆ ಬೆಳ್ಳಿತೆರೆಮೇಲೆ ಮಿಂಚಲು ಬರುತ್ತಿದ್ದಾರೆ. ವಿಶೇಷ ಏನೆಂದರೆ, ಈ ಸಲ ವಿಹಾನ್‌ಗೆ ರಕ್ಷಿತ್‌ ಶೆಟ್ಟಿ ಸಾಥ್‌ ನೀಡುತ್ತಿದ್ದಾರೆ. ಅಂದರೆ, ರಕ್ಷಿತ್‌ ಶೆಟ್ಟಿ ಹೋಮ್‌ ಬ್ಯಾನರ್‌ “ಪರಂವಃ‌ ಸ್ಟುಡಿಯೋಸ್‌” ಬ್ಯಾನರ್‌ನಲ್ಲಿ ಮೂಡಿಬರುವ ಚಿತ್ರದಲ್ಲಿ ವಿಹಾನ್‌ ಹೀರೋ!

ಕಳೆದ ಮೂರು ವರ್ಷಗಳ ಹಿಂದೆ ಯೋಗರಾಜ್‌ ಭಟ್‌ ನಿರ್ದೇಶನದಲ್ಲಿನ “ಪಂಚತಂತ್ರ” ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ ವಿಶೇಷ ಕಥೆಯೊಂದಿಗೆ ಅವರ ಆಗಮನವಾಗುತ್ತಿದೆ. ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳೂ ಈಗಾಗಲೇ ಶುರುವಾಗಿವೆ.

ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳು. ಕಾಲೇಜ್‌ ವಿದ್ಯಾರ್ಥಿ, ಕ್ರಿಕೆಟ್‌ ಆಟಗಾರ ಹಾಗೂ ಬಿಜಿನೆಸ್‌ ಮ್ಯಾನ್‌ ಆಗಿಯೂ ವಿಹಾನ್‌ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದಕ್ಕೂ ಸೂಟ್‌ ಆಗಲಿದ್ದಾರೆ ಎಂಬ ಕಾರಣಕ್ಕೆ ಚಿತ್ರತಂಡ ವಿಹಾನ್‌ರನ್ನು ಆಯ್ಕೆ ಮಾಡಿದ್ದಾರೆ.

ಹಾಗಾದರೆ ಈ ಚಿತ್ರದ ನಿರ್ದೇಶಕರು ಯಾರು? ಅದಕ್ಕೂ ಇಲ್ಲಿ ಉತ್ತರವಿದೆ. ರಕ್ಷಿತ್‌ ಅವರ ಸೆವೆನ್‌ ಆಡ್ಸ್‌ ಟೀಮ್‌ನಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಚಂದ್ರಜೀತ್‌ ಬೆಳ್ಳಿಯಪ್ಪ, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ರಿಷಬ್‌ ಶೆಟ್ಟಿ ಅವರ ಕಥಾಸಂಗಮ ಸಿನಿಮಾದಲ್ಲಿನ “ರೇನ್‌ಬೋ ಲ್ಯಾಂಡ್‌” ಏಪಿಸೋಡ್‌ ಅನ್ನು ಚಂದ್ರಜಿತ್‌ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು “ಅವನೇ ಶ್ರೀಮನ್ನಾರಾಯಣ” ಚಿತ್ರದ ಬರವಣಿಗೆಯ ಭಾಗವಾಗಿದ್ದರು.

ಈ ಚಿತ್ರಕ್ಕೆ ನಾಯಕಿಯಾಗಿ ನಮ್ಮನ್ನೆ ಯುವರಾಣಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಮರ್‌ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಪರಮ್‌ವಾ ಸ್ಟುಡಿಯೋಸ್‌ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರ ಜನ್ಮದಿನಕ್ಕೆ ಪೋಸ್ಟ್‌ ಹಾಕಿ ಸುಳಿವು ನೀಡಿತ್ತು. ಇದೀಗ ಅವರೇ ನಮ್ಮ ನಾಯಕಿ ಎಂದು ತಂಡ ಅಧಿಕೃತವಾಗಿ ಘೋಷಿಸಿದೆ.

ಹಾಗಾದರೆ ಏನಿದು ಸಿನಿಮಾ? ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಂಡ, ಆಗಸ್ಟ್‌ ವೇಳೆಗೆ ಚಿತ್ರದ ಶೀರ್ಷಿಕೆ ಘೋಷಣೆ ಮಾಡಿಕೊಳ್ಳುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದೆ. ಅದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಚಿತ್ರದ ಶೂಟಿಂಗ್‌ ಶುರುಮಾಡುವುದು ತಂಡದ ಪ್ಲಾನ್.

ರೊಮ್ಯಾನ್ಸ್‌ ಡ್ರಾಮಾ ಮತ್ತು ಮ್ಯೂಸಿಕಲ್‌ ಲವ್‌ಸ್ಟೋರಿ ಹಿನ್ನಲೆಯ ಈ ಸಿನಿಮಾದಲ್ಲಿ ಕಾಲೇಜು ಜೀವನವೂ ಕಾಣಿಸಲಿದೆ. ತಾಂತ್ರಿಕ ವರ್ಗದ ವಿಚಾರಕ್ಕೆ ಬಂದರೆ, ಅಮೆರಿಕಾದ ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಪದವಿ ಪಡೆದು, ಅಲ್ಲಿಯೇ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀವಾತ್ಸವನ್‌ ಸೆಲ್ವರಾಜನ್‌ ಈ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿರಲಿದೆ. ಗಗನ್‌ ಬದೇರಿಯಾ ಸಂಗೀತ ಸಂಯೋಜಿಸಲಿದ್ದಾರೆ.

error: Content is protected !!