ಚಂದನವನದಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಪ್ರಶಾಂತ್ ರಾಜಪ್ಪ. ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಇದೀಗ ಅವೆಲ್ಲ ಅನುಭವವನ್ನು ಇಟ್ಟುಕೊಂಡು ನಿರ್ದೇಶಕನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.
ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್. ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.
‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಸಿನಿಮಾ ಖ್ಯಾತಿಯ ನಟ ರಿಷಿ ಪ್ರಶಾಂತ್ ರಾಜಪ್ಪ ಮೊದಲ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲವನ್ನೂ ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ತಿಳಿಸಿದ್ದಾರೆ.
ಕೆಲ ಸಿನಿಮಾಗಳು ತಮ್ಮ ಶೀರ್ಷಿಕೆಯ ಮೂಲಕವೇ ಒಂದಷ್ಟು ಸುದ್ದಿಯಾಗುತ್ತವೆ. ಅಷ್ಟೇ ಯಾಕೆ ಕುತೂಹಲವನ್ನೂ ಹೆಚ್ಚಿಸುತ್ತವೆ. ಬಹುತೇಕ ಹೊಸಬರ ಸಿನಿಮಾಗಳೇ ಸದ್ದು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಕೂಡ ಸೇರಿದೆ. ಹೌದು, ಇದು ಹೊಸಬರ ಸಿನಿಮಾ. ಸದ್ಯ ಟೈಟಲ್ಲು ಕ್ರೇಜ್ ಹೆಚ್ಚಿಸಿದೆ. ಆ ಸಿನಿಮಾ ಕುರಿತು ಒಂದಷ್ಟು ಮಾತುಕತೆ…
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಮಂಡ್ಯ, ಮಂಗಳೂರು, ಕುಂದಾಪುರ ಹೀಗೆ ಅದರ ಪಟ್ಟಿಗೆ ಈಗ ಹೊಸ ಜಾಗ ಸೇರ್ಪಡೆ ಆಗಿದೆ ಅದೇ ಉತ್ತರ ಕನ್ನಡ ಜಿಲ್ಲೆ, ಅದು “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರದ ಮೂಲಕ.
ಹೌದು, ಈ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿಯ ಸ್ಥಳೀಯ ಪ್ರತಿಭೆಗಳನ್ನೇ ಬಳಸಿಕೊಂಡಿರೋದು ವಿಶೇಷ.
ಈ ಚಿತ್ರದ ವಿಶೇಷತೆ ಚಿತ್ರಕ್ಕೆ ಬಳಸಿರುವ ಉತ್ತರಕನ್ನಡ ಭಾಷೆ ಹಾಗೂ ರಮಣೀಯ ಸ್ಥಳಗಳು ನೋಡುಗನ ಕಣ್ಮನ ಸೆಳೆದರೆ, ಚಿತ್ರಕಥೆಯ ಹೊಸತನ ಸ್ಪೆಷಲ್ ಆಗಿದೆ. ಇನ್ನು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಕೇಳದ ಮತ್ತು ನೋಡದ ಹೊಸ ಕಥೆ ಇಲ್ಲಿದೆ ಎಂಬುದು ತಂಡದ ಮಾತು.
ಕಥೆ ಇದು…
ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಹೋರಾಟ ಈ ಚಿತ್ರದ ಹೈಲೈಟ್, ಜೊತೆಗೆ, ಮುದ್ದಾದ ಪ್ರೇಮಿಗಳ ಕಥೆ, ಒಬ್ಬ ಇನ್ಶೂರೆನ್ಸ್ ಮಾಡಿಸುವವ ಹಾಗೂ ಅವನ ವೈಯಕ್ತಿಕ ಜೀವನದ ಬಗ್ಗೆ, ಒಬ್ಬ ಜಮೀನ್ದಾರ ಅವನ ಮತ್ತು ಫೋಟೋಗ್ರಾಫರ್ ನಡುವಿನ ನಡೆಯೋ ಸಂಘರ್ಷ ನೋಡುಗರಿಗೆ ಹೊಸ ಅನುಭವ ನೀಡಲಿದೆ ಎಂಬುದು ತಂಡದ ಹೇಳಿಕೆ.
ನಿರ್ಮಾಪರಾಗಿ ವೆಂಕಟೇಶ್ವರ ರಾವ್, ಬಳ್ಳಾರಿ ರವರು ಮೊದಲಬಾರಿಗೆ ಸೃಜನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನೆಮಾವಿದು.
ಕಿರುತೆರೆಯಲ್ಲಿ 6 ವರ್ಷಗಳ ಕಾಲ “ಅಗ್ನಿಸಾಕ್ಷಿ”ದಾರಾವಾಹಿಯಲ್ಲಿದ್ದ ನಟ ರಾಜೇಶ್ ಧ್ರುವ ನಿರ್ದೇಶಕರು. ಉಳಿದಂತೆ ರವಿ ಸಾಲಿಯಾನ್, ರಾಧಿಕಾ, ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವು ಹೊಸ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
ಕಥೆ – ಚಿತ್ರಕಥೆಯನ್ನು ಅಭಿಷೇಕ್ ಶಿರಸಿ, ಹಾಗೂ ಪೃಥ್ವಿಕಾಂತ ಬರೆದರೆ, ಸಂಭಾಷಣೆಯನ್ನು ಅಜಿತ್ ಬೊಪ್ಪನಳ್ಳಿ ಬರೆದಿದ್ದಾರೆ.
ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣ, ಗಣಪತಿ ಭಟ್ ಸಂಕಲನವಿದೆ. ,ಚಿತ್ರದ ಹಾಡುಗಳಿಗೆ ಶ್ರೀರಾಮ್ ಗಂಧರ್ವ ರವರ ಸಂಗೀತ ಮತ್ತು ಪ್ರಮೋದ್ ಮರವಂತೆ ಅವರ ಸಾಹಿತ್ಯ ಇದೆ. ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತವಿದೆ.
ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳಬಳ್ಳಿ(ಹೊಕ್ಕಳು ಬಳ್ಳಿ) ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷದಿಗೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೆ 70-80 ಸಾವಿರ ಜನರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟು ಕೊಂಡು “2 nd ಲೈಫ್” ಚಿತ್ರ ತಯಾರಾಗಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ.
ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದು. ನಿನ್ನ ಹೊಸಜೀವನ ಆರಂಭವಾಗಿದೆ ಅಂತ. ಈ ರೀತಿಯ ಘಟನೆ ಚಿತ್ರದಲ್ಲಿ ನಡೆಯುವುದರಿಂದ ಚಿತ್ರಕ್ಕೆ “2nd ಲೈಫ್” ಅಂತ ಹೆಸರಿಡಲಾಗಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ಚಿತ್ರದ ಕುರಿತು ವಿವರಣೆ ನೀಡಿದರು.
ನಾನು ಈ ಹಿಂದೆ “ಸ್ವಾರ್ಥ ರತ್ನ” ಎಂಬ ಚಿತ್ರದಲ್ಲಿ ಅಭನಯಸಿದ್ದೆ. ಈಗ “2 nd ಲೈಫ್” ಚಿತ್ರದಲ್ಲಿ ನಟಿಸಿದ್ದೇನೆ. ನಾನು ಮೂಲತಃ ಆಡಿಟರ್. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರದ ಕಥೆ ಹಿಡಿಸಿತು. ಪಿ.ಆರ್.ಕೆ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹಿಸಿ ಎಂದರು ನಾಯಕ ಆದರ್ಶ ಗುಂಡುರಾಜ್.
ಈ ಚಿತ್ರದಲ್ಲಿ ನನ್ನದು ಕುರುಡಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸಿಂಧೂ ರಾವ್ ತಿಳಿಸಿದರು.
ಸಂಗೀತ ನಿರ್ದೇಶಕ ಆರವ್ ರಿಶಿಕ್, ಛಾಯಾಗ್ರಹಕ ರಮೇಶ್ ಕೊಯಿರ, ನಟ ಶಿವಪ್ರದೀಪ್ ಹಾಗೂ ಸಹ ನಿರ್ಮಾಪಕ – ನಟ ರುದ್ರಮುನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ವೀರೇನ್ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ||ವರದರಾಜು ಡಿ.ಎನ್ ನಿರ್ಮಿಸಿರುವ, ವಿಜಯ್ ಭಾರ್ಗವ್ ನಿರ್ದೇಶಿಸಿರುವ ಚಿತ್ರ “ಪ್ರಜಾರಾಜ್ಯ”. ಇತ್ತೀಚೆಗೆ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ವಿವರಣೆ ನೀಡಿದರು.
ನಾನು ವೈದ್ಯ. ನರರೋಗ ತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟಕಾರ್ಪಣ್ಯಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ ಅವರ “ಉಪೇಂದ್ರ” ಚಿತ್ರ ನನಗೆ ಸ್ಪೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಈ ಚಿತ್ರಕ್ಕಿದೆ. “ಪ್ರಜಾರಾಜ್ಯ” ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ.
ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣ ಮಾಡಿದ್ದೇನೆ. ವಿಜಯ್ ಭಾರ್ಗವ್ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟರಾದ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯತಕುಮಾರ್ ತಬಲಾನಾಣಿ, ಸುಧಾ ಬೆಳವಾಡಿ, ಸಂಪತ್ ಮೈತ್ರೇಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ಇದು ನಾಯಕ ಪ್ರಧಾನ ಚಿತ್ರವಲ್ಲ. ಚಿತ್ರ ನೋಡಿದ ಪ್ರೇಕ್ಷಕನಿಗೆ ಈ ಚಿತ್ರ ಇಷ್ಟವಾಗಿ, ಆತನಿಗೆ ಹೌದು, ನಾವು ಈ ರೀತಿ ಬದಲಾಗಬೇಕು ಎನಿಸಿದರೆ ಆತನೇ ನಮ್ಮ ಚಿತ್ರದ ನಾಯಕ ಎಂದು ನಿರ್ಮಾಪಕ ವರದರಾಜ್ “ಪ್ರಜಾರಾಜ್ಯ” ಚಿತ್ರದ ಬಗ್ಗೆ ಸಂಪೂರ್ಣ ವಿವರ ನೀಡಿದರು.
ಸರಿಸುಮಾರು ೪೦೦ ಕ್ಕೂ ಅಧಿಕ ಚಿತ್ರಗಳು ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ನೋಡುಗರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಸಾಮಾಜಿಕ ಕಳಕಳಿಯಿಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ಡಾಕ್ಟರ್ ವರದರಾಜ್ ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದು. ಅವರಿಗೆ ಹಾಗೂ ತಂಡಕ್ಕೆ ಶುಭವಾಗಲಿ ಎಂದರು ನಾಗಾಭರಣ.
ಈ ಚಿತ್ರದಲ್ಲಿ ನನ್ನದು ಆಟೋ ಡ್ರೈವರ್ ಪಾತ್ರ. ನನಗೆ ತಪ್ಪು ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ ಕೂಡ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಟ ತಬಲನಾಣಿ.
ನನ್ನ ಮೇಲೆ ಭರವಸೆಯಟ್ಟು ಇಂತಹ ಉತ್ತಮ ಕಥೆಯುಳ್ಳ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ವಿಜಯ್ ಭಾರ್ಗವ್.
ಚಿತ್ರದಲ್ಲಿ ನಟಿಸಿರುವ ಕೆ.ಜಿ.ಎಫ್ ತಾತ ಎಂದೆ ಖ್ಯಾತರಾಗಿರುವ ಕೃಷ್ಣೋಜಿರಾವ್ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಹಾಗೂ ನಿರ್ಮಾಣ ನಿರ್ವಾಹಕ ರವಿಶಂಕರ್ ಚಿತ್ರದ ಕುರಿತು ಮಾತನಾಡಿದರು.
ಯೋಗರಾಜ್ ಭಟ್ ಹಾಗೂ ಡಾ.ವಿ.ನಾಗೇಂದ್ರ ಪ್ರಸಾದ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. “ಕೆ.ಜಿ.ಎಫ್” ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ‘ಮಕ್ಕಳ ಚಿತ್ರೋತ್ಸವ’ ಲೋಗೋ ಲಾಂಚ್ ಮಾಡಲಾಗಿದೆ.. ಜನವರಿ 26ರಿಂದ ಮೂರು ದಿನ ನಡೆಯುವ ಮಕ್ಕಳ ಚಲನ ಚಿತ್ರೋತ್ಸವವನ್ನು ಇದೇ ಮೊದಲ ಬಾರಿಗೆ ಉಲ್ಲಾಸ್ ಸ್ಕೂಲ್ ಸಿನಿಮಾಸ್ ಆಯೋಜನೆ ಮಾಡಿದೆ. ಅದರ ಪೂರ್ವಭಾವಿಯಾಗಿ ಇತ್ತೀಚೆಗೆ ಚಂದನವನದ ಬಾಲನಟರನ್ನೆಲ್ಲ ಒಟ್ಟು ಗೂಡಿಸಿ ಮಕ್ಕಳ ಚಲನಚಿತ್ರೋತ್ಸವ ಲೋಗೋ ಲಾಂಚ್ ಮಾಡಿಸಲಾಗಿದೆ.
ಜನವರಿ 26ರಿಂದ ಮೂರು ದಿನಗಳ ಕಾಲ ‘ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದ್ದು, ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಬಾಲ ನಟರಾಗಿ ಪ್ರಖ್ಯಾತಿ ಗಳಿಸಿದ್ದ ಕಲಾವಿದರನ್ನು ಒಂದೆಡೆ ಸೇರಿಸಿದ್ದು ವಿಶೇಷವಾಗಿತ್ತು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್, ಸುನಿಲ್ ರಾವ್, ವಿಜಯ ರಾಘವೇಂದ್ರ, ಮಾಸ್ಟರ್ ಆನಂದ್, ಅಭಿಷೇಕ್, ವಿನಾಯಕ ಜೋಶಿ, ಹೇಮಾ ಪಂಚಮುಖಿ, ಎಸ್.ಎಸ್. ಕೀರ್ತನ, ನಟರಾಜ್ ಗುಬ್ಬಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಕ್ಕಳ ಚಿತ್ರಕ್ಕೆ ಆದ್ಯತೆ ಕಡಿಮೆಯಾಗುತ್ತಿದೆ. ಎಲ್ಲಾ ಫಿಲಂ ಪೆಸ್ಟಿವಲ್ ಗಳಿಗೆ ಹತ್ತು ಹದಿನೈದು ಸಿನಿಮಾಗಳನ್ನು ಕಳುಹಿಸಿದ್ರು ಒಂದೂ ಸಿನಿಮಾ ಕೂಡ ಸೆಲೆಕ್ಟ್ ಆಗೋದಿಲ್ಲ. ಮಕ್ಕಳ ಚಿತ್ರಕ್ಕೆ ಆದ್ಯತೆ ನೀಡೋ ದೃಷ್ಟಿಕೋನದಿಂದ ಉಲ್ಲಾಸ್ ಸ್ಕೂಲ್ ಸಿನಿಮಾಸ್ ವತಿಯಿಂದ ಇದೇ ಮೊದಲ ಬಾರಿಗೆ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.
ಈ ಬಾರಿ ಅಪ್ಪು ಅವರ ಸ್ಮರಣಾರ್ಥ ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಮುಖ್ಯಸ್ಥ ಉಲ್ಲಾಸ್ ಮಾಹಿತಿ ಹಂಚಿಕೊಂಡಿದ್ದಾರೆ.
ಲೋಗೋ ಲಾಂಚ್ ಮಾಡಿ ಮಾತನಾಡಿದ ನಟ ವಿಜಯ ರಾಘವೇಂದ್ರ, ನಾವು ತುಂಬಾ ಅದೃಷ್ಟವಂತ ತಲೆಮಾರು ಅಂತ ಹೇಳೋಕೆ ಇಷ್ಟಪಡ್ತೀನಿ. ಮುಂಬರುವ ಜನರೇಷನ್ ಗೆ ಈ ರೀತಿ ಸಪೋರ್ಟ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಇವತ್ತು ಎಲ್ಲಾ ಬಾಲನಟರೂ ಒಂದೇ ವೇದಿಕೆಯಲ್ಲಿ ಮತ್ತೆ ಸೇರುವಂತಾಯ್ತು ಇದನ್ನು ಸಾಧ್ಯವಾಗಿಸಿದಕ್ಕೆ ಎಲ್ಲರಿಗೂ ಆಭಾರಿ.
ಬಾಲನಟರಾಗಿದ್ದಾಗ ನಿರ್ದೇಶಕರಿಂದ, ಹಿರಿಯ ಕಲಾವಿದರಿಂದ ಸಿಕ್ಕ ಸಪೋರ್ಟ್, ತರಭೇತಿ ಎಲ್ಲವೂ ನಮ್ಮನ್ನು ಇಲ್ಲಿವರೆಗೆ ಕರೆತಂದು ನಿಲ್ಲಿಸಿವೆ. ಮಕ್ಕಳ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾಗಿರುವ ಮಕ್ಕಳ ಚಲನಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಸುಂದರ್ ರಾಜ್, ಎಮ್ ಏನ್ ಕುಮಾರ್, ಟಿ ಪಿ ಸಿದ್ದರಾಜು ಸೇರಿದಂತೆ ಹಲವರು ಇದ್ದರು.
ಕೆ.ರಾಮ್ ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ ಅಬ್ಬರ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಚಿತ್ರವಿದು. ಸಿ. ಅಂಡ್ ಎಂ.ಮೂವೀಸ್ ಬ್ಯಾನರ್ ನಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ.
ಆಕ್ನ್ , ಫ್ಯಾಮಿಲಿ ಬಾಂಡಿಂಗ್, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಅದರ ಮಹತ್ವದ ಕುರಿತು ಹೇಳಲಾಗಿದೆ. ಪ್ರಜ್ವಲ್ ಜೊತೆ ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.
ನಾಯಕ ತನ್ನ ಫ್ಯಾಮಿಲಿಗೋಸ್ಕರ ಏನೆಲ್ಲ ಮಾಡುತ್ತಾನೆ ಅನ್ನೋದನ್ನು ಪ್ರೇಕ್ಷಕರ ಮನಮುಟ್ಟುವ ಹಾಗೆ ನಿರೂಪಿಸಲಾಗಿದೆ. ತಂದೆ ಒಂದು ಒಂದು ತಪ್ಪು ಮಾಡ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ ಎಳೆ.
ತಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿದ್ದರೂ ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಅಬ್ಬರ ಚಿತ್ರದ ಸಂದೇಶ.
ನಾಯಕ ಪ್ರಜ್ವಲ್ ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ಎರಡು ಡ್ಯುಯೆಟ್ ಹಾಡುಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ.
ಶೋಭರಾಜ್, ರವಿಶಂಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ರವಿ ಬಸ್ರೂರು ಅವರ ಅದ್ಭುತ ಮ್ಯೂಸಿಕ್, ಜೆ.ಕೆ.ಗಣೇಶ್ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿದೆ.
ಹಲವಾರು ವರ್ಷಗಳಿಂದ ಗೀತರಚನೆಕಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಮಂಜುಕವಿ, ಟೆಂಪರ್ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್‌ಸ್ಟೋರಿ ಒಳಗೊಂಡ ಟೆಂಪರ್ ಚಿತ್ರದ ಟ್ರೇಲರ್ ನವೆಂಬರ್ ನಲ್ಲಿ ಬಿಡುಗಡೆಯಾಗಲಿದ್ದು,, ಚಿತ್ರ ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ.
ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಮಡಿಕೇರಿ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಚಿಕ್ಕವನಿದ್ದಾಗಿಂದಲೂ ಯಾವುದೇ ವಿಷಯಕ್ಕಾದರೂ ತಕ್ಷಣ ಕೋಪಗೊಳ್ಳುವಂಥ ಗುಣವಿರುವ ನಾಯಕ, ಕಾರ್ ಗ್ಯಾರೇಜ್ ಇಟ್ಟುಕೊಂಡಿರುತ್ತಾನೆ, ಅದೇ ಊರಿನ ಗೌಡನ ಮಗಳು ಗೀತಾ ಮೇಲೆ ಆತನಿಗೆ ಲವ್ವಾಗುತ್ತದೆ, ಆ ಸಂದರ್ಭದಲ್ಲಿ ಆತ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿ ಇಬ್ಬರನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಕಥೆ ಅಂತ ನಿರ್ದೇಶಕರು ಹೇಳುತ್ತಾರೆ.
ಶ್ರೀಬಾಲಾಜಿ ಎಂಟರ್ ಪ್ರೈಸಸ್ ಲಾಂಚನದಲ್ಲಿ ಮೋಹನ್ ಬಾಬು ಬಿ. ಹಾಗೂ ವಿ. ವಿನೋದ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುಕವಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ.
ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದು, ಪತ್ರಕರ್ತ ಧನು ಯಲಗಚ್ ಹಾಗೂ ಮಜಾ ಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಬಾಲನಟನಾಗಿ ಮಾಸ್ಟರ್ ಪವನ್ ಮೋರೆ ಅಭಿನಯಿಸಿದ್ದಾರೆ.
ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್ ಕೃಷ್ಣ, ಊರಗೌಡನಾಗಿ ಬಲ ರಾಜವಾಡಿ, ಯತಿರಾಜ್ ನಂದಿನಿ ವಿಠಲ, ಪ್ರಿಯ ತರುಣ್, ಸನತ್ ವಿನೋದ್ ಮೀಥಾಲಿ ಶಶಿ ಹಾಗೂ ಅನೇಕ ಹಿರಿಯ ಕಲಾವಿದರು ಈ ಚಿತ್ರದಲಿ ನಟಿಸಿದ್ದಾರೆ. ಅಲ್ಲದೆ ನಿರ್ದೇಶನ ತಂಡದಲ್ಲಿ ಎಸ್ ಜೆ. ಸಂಜಯ್ ಜೀವನ್, ಪ್ರವಿ, ಸಂಜಯ್ ಕಿರಣ್, ಎಂ.ಎಸ್. ಶ್ರೀಮಂತ್ ರಾಜ್, ಸುಯೋದ ಕಾರ್ಯ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ. ಶಿವಕುಮಾರ್ ಅವರ ಕ್ಯಾಮರಾ ವರ್ಕ್, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಕೆ.ಆರ್.ಮುರಳಿ (_63) ಕೃಷ್ಣ ನಿಧನರಾಗಿದ್ದಾರೆ
ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಆದರೆ, ಬ್ರೈನ್ ಟೂಮರ್ ಇರೋದು ತಡವಾಗಿ ಬೆಳಕಿಗೆ ಬಂದಿದೆ. ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಟ್ಯೂಮರ್ ಪತ್ತೆಯಾಗಿದೆ.
ಈ ಸಂಬಂಧ ಲಾಲ್ ಬಾಗ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದರೂ, ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗು ಪತ್ನಿಯನ್ನ ಅಗಲಿದ್ದಾರೆ.
ಅವರು, ಗರ ಸಿನಿಮಾಗಾಗಿ ಬಾಲಿವುಡ್ ನ ಜಾನಿ ಲಿವರ್’ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ವೃತ್ತಿಯಲ್ಲಿ ವಕೀಲರಾದರೂ, ಸಿನಿಮಾನ ಅವರು ಪ್ರವೃತ್ತಿಯಾಗಿಸಿಕೊಂಡಿದ್ದರು.
ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ನಂತರ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ಅವರು ನಿರ್ಮಿಸಿದ್ದರು
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಬಿಂಗೊ” ಚಿತ್ರದ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.
“ಬಿಂಗೊ” ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ” ನಲ್ಲಿರುತ್ತಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ವಿವರಣೆ ನೀಡಿದರು.
ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದೆ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೀನಿ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದರು ನಟಿ ರಾಗಿಣಿ ದ್ವಿವೇದಿ.
ನಾನು ಧಾರಾವಾಹಿಯಲ್ಲಿ ಅಭಿನಯಿಸಬೇಕಾದರೆ, ಶಂಕರ್ ಅವರ ಪರಿಚಯವಾಯಿತು. ಈ ಚಿತ್ರದ ಕುರಿತು ಮಾತನಾಡಿದರು. ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಆರ್ ಕೆ ಚಂದನ್.
ಇದು ನಮ್ಮ ನಿರ್ಮಾಣದ ಮೊದಲ ಚಿತ್ರ. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎನ್ನುತ್ತಾರೆ ನಿರ್ಮಾಪಕ ಪುನೀತ ಹಾಗೂ ಆರ್ ಪರಾಂಕುಶ್.
ನಾಯಕಿ ರಕ್ಷಾ ನಿಂಬರ್ಗಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ನಟರಾಜ್ ಮುದ್ದಾಲ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಸಿನಿಮಾ ಅನ್ನೋದೇ ಹಾಗೆ. ಇಲ್ಲೊಮ್ಮೆ ಎಂಟ್ರಿಕೊಟ್ಟರೆ ಮುಗೀತು ಏನಾದರೊಂದು ಸಾಧಿಸಲೇಬೇಕೆಂಬ ಹಠ ಸಾಮಾನ್ಯ. ಅದೆಷ್ಟೋ ಪ್ರತಿಭಾವಂತ ನಟ, ನಟಿಯರು ಹಾಗು ತಂತ್ರಜ್ಞರು ಇಲ್ಲಿ ಬೇರೂರಿದ್ದಾರೆ. ಒಂದಷ್ಟು ಮಂದಿ ಗಟ್ಟಿ ನೆಲೆ ಕಾಣಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ತಯಾರಿಯಲ್ಲಿದ್ದಾರೆ. ಅಂತಹವರ ಸಾಲಿಗೆ ಸಂಗೀತ ನಿರ್ದೇಶಕ ಶ್ರೀ ಗುರು ಕೂಡ ಸೇರಿದ್ದಾರೆ. ಕಳೆದ ಒಂದುವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿರುವ ಶ್ರೀಗುರು, ನಿರಂತರವಾಗಿ ತಮ್ಮ ಸಂಗೀತ ಯಾನ ಮುಂದುವರೆಸಿದ್ದಾರೆ. ಅವರ ಬದುಕಿನ ರಾಗ ಕುರಿತು ‘ಸಿನಿಲಹರಿ’ ಜೊತೆ ಒಂದಷ್ಟು ಮಾತಾಡಿದ್ದಾರೆ…
ಓವರ್ ಟು ಶ್ರೀ ಗುರು…
‘ನಾನು ದೂರದ ಬೀದರ್ ನವನು. ಸಿನಿಮಾ ರಂಗ ಸ್ಪರ್ಶಿಸಿದ್ದೇ ಅಕಸ್ಮಿಕ. 2007ರಲ್ಲಿ ನಾನು ಈ ಗಂಧದ ಗುಡಿಗೆ ಕಾಲಿಟ್ಟೆ. ನನ್ನ ಮೊದಲ ಸಂಗೀತ ಕೆಲಸ ಶುರು ಮಾಡಿದ್ದು, ‘ ನಿನ್ನ ವಿನಹ’ ಸಿನಿಮಾಗೆ. ಆ ಚಿತ್ರದ ಸಂಗೀತ ಕೆಲಸಕ್ಕಾಗಿ ತಿಂಗಳುಗಟ್ಟಲೆ ಮಡಿಕೇರಿಯಲ್ಲೇ ಇದ್ದು, ರಾಗ ಸಂಯೋಜಿಸಿದೆ. ಅದೇಕೋ ಏನೋ, ಆ ಚಿತ್ರ ಶುರುವಾಗಲೇ ಇಲ್ಲ. ಮೊದಲ ಸಿನಿಮಾ ಹೀಗಾಯಿತಲ್ಲ ಎಂಬ ಬೇಸರವಾಯ್ತು. ಇಲ್ಲಿ ಯಾರೂ ಪರಿಚಯ ಇರಲಿಲ್ಲ. ಇಲ್ಲಿ ಸಾಧಿಸೋಕೆ ಅಗತ್ತಾ ಅಂತಂದುಕೊಂಡೇ, ಮತ್ತೆ ನನ್ನೂರಿನ ಕಡೆ ಮುಖ ಮಾಡಿದೆ. ಆರಂಭದಲ್ಲೇ ಪರಿಚಯವಾಗಿದ್ದ ನಿರ್ದೇಶಕ ರವೀಂದ್ರ ವೆಂಶಿ ಅವರು ಸ್ವಲ್ಪ ದಿನಗಳ ಬಳಿಕ ಕಾಲ್ ಮಾಡಿ, ಒಂದು ಸಿನಿಮಾ ಸಿಕ್ಕಿದೆ. ಬನ್ನಿ ಕೆಲಸ ಮಾಡುವ ಅಂದರು.
ಭಟ್ಟರ ಜೊತೆ ಸಾಹಿತ್ಯ ಬರೆಸುವಾಗ
ಇಲ್ಲಿಗೆ ಬಂದಾಗ, ಮೊದಲು ಶುರುವಾಗಿ ನಿಂತಿದ್ದ ಸಿನಿಮಾ ನಿರ್ಮಾಪಕರೇ ರವೀಂದ್ರ ವೆಂಶಿ ಸಿನಿಮಾ ಮಾಡುತ್ತಿದ್ದರು. ಸೋ, ಕೆಲಸಕ್ಕಾಗಿ ಹಪಹಪಿಸುತ್ತಿದ್ದೆ. ಕೆಲಸ ಮಾಡಿದೆ. ಆಗ ಗೀತ ಸಾಹಿತಿ ಗೌಸ್ ಪೀರ್ ಪರಿಚಯವಾದರು. ಮೆಲ್ಲನೆ ಇಂಡಸ್ಟ್ರಿಯ ಹಲವು ಮಂದಿ ಗೆಳೆಯರಾದರು. ಆಗಲೂ ನಾನು ಕೆಲಸ ಮಾಡಿದ ಸಿನಿಮಾ ಶುರುವಾಗಲಿಲ್ಲ. ಮತ್ತದೇ ಬೇಸರ. ಆದರೆ, ನಾನು ಆತ್ಮವಿಶ್ವಾಸ ಕಳೆದುಕೊಳ್ಳದೆ, ಸಂಗೀತ ಯಾನ ಮುಂದುವರೆಸಿದೆ.
ಸಂಗೀತ ನಿರ್ದೇಶಕ ಶ್ರೀ ಗುರು
ಹೊಸ ಜೀವನ…
ಮತ್ತೆ ಅದೇ ನಿರ್ದೇಶಕ ರವೀಂದ್ರ ವೆಂಶಿ ಜೊತೆ ‘ ಕಥೆ ಅಲ್ಲ ಜೀವನ’ ಸಿನಿಮಾಗೆ ಕೆಲಸ ಮಾಡಿದೆ. ಅಲ್ಲಿಂದ ಗೆಳೆಯರ ಸರ್ಕಲ್ ಬೆಳೀತಾ ಹೋಯ್ತು. ‘ಮಾರ್ಚ್ 23’ ಸಿನಿಮಾಗೂ ಕೆಲಸ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಇಂಡಸ್ಟ್ರಿ ನನ್ನನ್ನೂ ಗುರುತಿಸುತ್ತಾ ಬಂತು. ನನ್ನೀ ಸಂಗೀತ ಪಯಣ ಈಗಲೂ ಮೊದಲಿಗಿಂತ ತುಸು ಹೆಚ್ಚೇ ಸದ್ದು ಮಾಡುತ್ತಿದೆ ಎಂಬ ಖುಷಿ ಇದೆ.
ಸದ್ಯ ರವೀಂದ್ರ ವೆಂಶಿ ಅವರ ‘ಮಠ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 18ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, ಸಿನಿಮಾದ ಹಾಡು. ಯೋಗರಾಜ್ ಭಟ್ಟರು ಬರೆದ ‘ಕಲ್ಲ ಮೇಲೆ ಕಲ್ಲ ಇಟ್ಟು’ ಹಾಡು ಎಲ್ಲೆಡೆ ಮೆಚ್ಚುಗೆ ಪಡೆದಿದೆ. ‘ಮಠ’ಕ್ಕೊಂದು ಇತಿಹಾಸವಿದೆ. ಆ ಪರಂಪರೆ ಹೊಸ ಮಠಕ್ಕೂ ಇದೆ ಎಂಬ ವಿಶ್ವಾಸವಿದೆ.
ಇದರ ಜೊತೆ ರವೀಂದ್ರ ವೆಂಶಿ ಅವರ ‘ವಾಸಂತಿ ನಲಿದಾಗ’ ಸಿನಿಮಾ ಕೂಡ ರಿಲೀಸ್ ಆಗೋಕೆ ರೆಡಿ ಇದೆ. ಇದರಲ್ಲೂ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದೇನೆ. ಇನ್ನು, ‘ ಬೀಗ’ ಎಂಬ ಹಾರರ್ ಸಿನಿಮಾ ಮತ್ತು ಅದೇ ಸಿನಿಮಾ ತೆಲುಗಲ್ಲೂ ಲೈ ಲವರ್ಸ್ ಹೆಸರಲ್ಲಿ ರೆಡಿಯಾಗಿದ್ದು, ಅಲ್ಲೂ ಸಂಗೀತ ನೀಡಿದ್ದೇನೆ. ಇದರ ಹೊರತಾಗಿ, ನಟ ಕಿಶೋರ್ ಅವರ ‘ಫೈ’ ಮತ್ತು ‘ಉದಾಹರಣೆ’ ಎಂಬ ಮಕ್ಕಳ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದೇನೆ. ನನ್ನ ಕೆಲಸ ನೋಡಿ ಒಂದಷ್ಟು ನಿರ್ದೇಶಕರು ಜೊತೆಗೆ ಕೆಲಸ ಮಾಡಲು ಹೇಳುತ್ತಿದ್ದಾರೆ.
ನಿರಂತರ ಕೆಲಸ ಮಾಡಬೇಕು…
ನಾನು ಮೊದಲು ಕೆಲಸ ಮಾಡುವಾಗ, ನಿರ್ದೇಶಕರೊಬ್ಬರು ಕಥೆ ಮತ್ತು ತಂಡ, ಬ್ಯಾನರ್ ನೋಡಿಕೊಂಡು ಕೆಲಸ ಮಾಡಿ ಹಾಗಾದರೆ ಗಟ್ಟಿ ನೆಲೆ ಕಾಣುತ್ತೀರಿ ಅಂದಿದ್ದರು. ನಾನೂ ಕೂಡ ಅವರ ಮಾತು ಪಾಲಿಸಿದೆ. ಆಗ ಅದು ವರ್ಕೌಟ್ ಆಗಲಿಲ್ಲ. ದೊಡ್ಡದೋ, ಚಿಕ್ಕದೋ, ಹೊಸಬರೋ, ಹಳಬರೋ ಕೆಲಸ ನಿರಂತರವಾಗಿದ್ದರೆ ಮಾತ್ರ ಇಲ್ಲಿರಲು ಸಾಧ್ಯ ಅಂತಂದುಕೊಂಡೆ. ಹಾಗಾಗಿ ನಾನೀಗ ಎಲ್ಲಾ ಬಗೆಯ ಕಥೆ ಇರುವ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದೇನೆ. ಆ ಮೂಲಕ ಹೊಸ ಹೊಸ ಜನರ ಪರಿಚಯ ಆಗುತ್ತಿದೆ.
ಮಧ್ಯೆ ಎರಡು ವರ್ಷ ಗ್ಯಾಪ್ ಆಯ್ತು. ತಂದೆಯ ಅನಾರೋಗ್ಯ ಇತ್ತು. ಇಲ್ಲೂ ಸಹ ಆಗ ಕೆಲಸ ಇರಲಿಲ್ಲ ಪುನಃ ಬೀದರ್ ಕಡೆ ಮುಖ ಮಾಡಿದೆ. ಎರಡು ವರ್ಷ ಬದುಕಿಗಾಗಿ ರೋಡ್ ಕಂಟ್ರ್ಯಾಕ್ಟ್ ಕೆಲಸ ಮಾಡಿದೆ. ಮತ್ತೆ ರವೀಂದ್ರ ಅವರ ಜೊತೆ ಕೆಲಸ ಶುರುವಾಗಿ ಈಗ ಒಂದಷ್ಟು ಸಿನಿಮಾಗಳು ಕೈಯಲ್ಲಿವೆ ಎಂಬ ಸಮಾಧಾನವಿದೆ.
ಗೆಳೆಯರ ಸಾಥ್ ಮರೆಯಲ್ಲ…
ಈಗ ಅನುಭವ ಆಗಿದೆ. ಯಾರ ಜೊತೆ ಹೇಗೆ ಇರಬೇಕೆಂಬ ತಿಳಿವಳಿಕೆಯೂ ಇದೆ. ಎಲ್ಲರ ಜೊತೆ ಕೆಲಸ ಮಾಡುವ ಉತ್ಸಾಹವಿದೆ. ಹಗಲಿರುಳು ದುಡಿಯೋ ಹುಮ್ಮಸ್ಸು ಇದೆ. ಇಂಡಸ್ಟ್ರಿ ದೊಡ್ಡ ಹೆಸರು ಮಾಡಿದೆ. ನಮ್ಮಂತಹ ಅದೆಷ್ಟೋ ಸಂಗೀತ ನಿರ್ದೇಶಕರು ಬಿಜಿಯಾಗುತ್ತಿದ್ದಾರೆ. ನಾನು ಸಂಗೀತ ನಿರ್ದೇಶಕನಾಗಿ ಹೊಸ ಗಾಯಕರನ್ನೂ ಇಂಡಸ್ಟ್ರಿಗೆ ಪರಿಚಯಿಸಿದ ಖುಷಿ ಇದೆ.
ನನ್ನ ಈ ಸಂಗೀತ ಪಯಣದಲ್ಲಿ ಹಲವು ಗೆಳೆಯರ ಸಾಥ್ ಇದೆ. ಅದರಲ್ಲಿ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಬೆಂಬಲ ಮರೆಯಂಗಿಲ್ಲ. ಅಂತೆಯೇ ಒಂದಷ್ಟು ನಿರ್ದೇಶಕರ ಪ್ರೋತ್ಸಾಹವೂ ಇದೆ.
ಈಗ ನನ್ನ ಹೊಸ ರಾಗ ರೀಸ್ಟಾರ್ಟ್ ಆಗಿದೆ. ರಿಲೀಸ್ ಆಗಲಿರುವ ಮಠ ಮತ್ತು ವಾಸಂತಿ ನಲಿದಾಗ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಲೆ ಮಾತು ಮುಗಿಸುತ್ತಾರೆ ಶ್ರೀಗುರು.