RRR ಚಿತ್ರದ ನಂತರ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಇದೀಗ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರ ಪ್ರಾರಂಭವಾದರೂ ಚಿತ್ರತಂಡ ಮಾತ್ರ ಇದುವರೆಗೂ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಇಂದು ಜ್ಯೂನಿಯರ್ ಎನ್ಟಿಆರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಹೆಸರನ್ನು ಘೋಷಿಸಲಾಗಿದೆ. ಚಿತ್ರಕ್ಕೆ ‘ದೇವರ’ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು, ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ. 2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ.
ಕವಲುದಾರಿ ಮತ್ತು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರು ನಟಿಸುತ್ತಿರುವ ಬಹುಕೋಟಿ ಬಜೆಟ್ ನ ಚಿತ್ರವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಸೆಟ್ಟೇರುವ ತಯಾರಿಯಲ್ಲಿದೆ. ರಿಷಿ ಅವರು ನಿರ್ಮಾಪಕರ ನಟನಾಗಿದ್ದು ತಮ್ಮದೇ ಪ್ರೇಕ್ಷಕ ವರ್ಗವನ್ನು ಹೊಂದಿರುತ್ತಾರೆ ಮತ್ತು ಕಥೆಯ ಆಯ್ಕೆಯಲ್ಲಿಯೂ ಕೂಡ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಈ ಚಿತ್ರ ಜೂನ್ ಎರಡರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಸಿನಿಮಾದ ಹೆಸರು. ನಿರ್ಮಾಣ ಸಂಸ್ಥೆ ಮತ್ತು ತಾರಾ ಬಳಗದ ಬಗ್ಗೆ ಜೂನ್ 2ರಂದು ಚಿತ್ರತಂಡ ತಿಳಿಸಲಿದೆ. ಈ ಚಿತ್ರವನ್ನು ಡಿಯರ್ ವಿಕ್ರಂ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ ಎಸ್ ನಂದೀಶ್ ಅವರು ನಿರ್ದೇಶನ ಮಾಡಲಿದ್ದಾರೆ.
ತಮ್ಮ ಪ್ರಥಮ ಚಿತ್ರ ಓ ಟಿ ಟಿ ಯಲ್ಲಿ ಬಿಡುಗಡೆಗೊಂಡು ಅದ್ಭುತ ಯಶಸ್ಸು ಸಾಧಿಸಿರುವುದು ನಿರ್ದೇಶಕರಿಗೆ ಮತ್ತೊಂದು ಚಿತ್ರ ಮಾಡಲು ಹುಮ್ಮಸ್ಸು ಮತ್ತು ಪ್ರೋತ್ಸಾಹ ಕೊಟ್ಟಿದೆ. ಡಿಯರ್ ವಿಕ್ರಂ ಚಿತ್ರವನ್ನು ಓಟಿಟಿಯಲ್ಲಿ ನೋಡಿದ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ತೆಲುಗಿನಲ್ಲಿ ರೀಮೇಕ್ ಮಾಡಲು ಮಾತುಕತೆ ನಡೆಸುತ್ತಿದೆ.
ನೈಜ ಘಟನೆಗಳ ಆದರಿಸಿದ ಚಿತ್ರ “ಡಿಯರ್ ವಿಕ್ರಂ”, ನಕ್ಸಲ್ ಮತ್ತು ರಾಜಕೀಯ ಕಥಾಂದರ ಗಳನ್ನು ಒಳಗೊಂಡ ಚಿತ್ರವಾಗಿತ್ತು. ಓ ಟಿ ಟಿ ಯಲ್ಲಿ ಬಿಡುಗಡೆಗೊಂಡ ನಂತರ ತುಂಬಾ ಜನ ಇದು ಥಿಯೇಟರ್ ನಲ್ಲಿ ಬಿಡುಗಡೆ ಆಗಬೇಕಾಗಿತ್ತು ಎಂದು ಮಾತನಾಡಿದ್ದಾರೆ.. ಆದರೆ ನಿರ್ದೇಶಕರು ನೇರವಾಗಿ ಓಟಿಟಿ ನಲ್ಲಿ ಬಿಡುಗಡೆಗೊಂಡಿದ್ದಕ್ಕೆ ಯಾವುದೇ ಬೇಸರವಿಲ್ಲ ಯಾಕೆಂದರೆ ಪ್ರಸ್ತುತ ಕಾಲದಲ್ಲಿ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಅನಿವಾರ್ಯ.
ಥಿಯೇಟರ್ ನಷ್ಟೇ ಓಟಿಟಿ ಕೂಡ ಮನರಂಜನೆಯನ್ನು ಜನಕ್ಕೆ ತಲುಪಿಸುವ ಒಂದು ಮಾಧ್ಯಮ ಎಂದು ಹೇಳಿದ್ದಾರೆ. ಆದರೆ ಈಗ ತಯಾರಿ ನಡೆಯುತ್ತಿರುವ ಈ ಚಿತ್ರ, ಚಿತ್ರಮಂದಿರಗಳಲ್ಲಿ ಮತ್ತು ಓ ಟಿ ಟಿ ಯಲ್ಲಿ ಬಿಡುಗಡೆಗೊಳ್ಳುತ್ತದೆ. ತಾರಾ ಬಳಗದಲ್ಲಿ ತೆಲುಗಿನ ಕೆಲವು ಪ್ರಖ್ಯಾತ ನಟರು ಕೂಡ ನಟಿಸುತ್ತಿದ್ದಾರೆ.
ಮನರಂಜನೆಯ ಹೊಸ ಪರ್ವ ಆರಂಭಿಸಲು ‘JioCinema’ ಓಟಿಟಿ ವೇದಿಕೆ ಸಿದ್ಧವಾಗಿದೆ. ತನ್ನ ವೀಕ್ಷಕರಿಗೆ ವೈವಿಧ್ಯಮಯ ರಂಜನೆಯ ರಸದೂಟ ಉಣಬಡಿಸುವ ಉದ್ದೇಶದ ಭಾಗವಾಗಿ ‘ಲವ್ ಯು ಅಭಿ’ ಎಂಬ ಕನ್ನಡ ವೆಬ್ ಸಿರೀಸ್ ಮೇ 19ರಂದು ‘JioCinema’ದಲ್ಲಿ ನೇರವಾಗಿ ಬಿಡುಗಡೆಗೊಳ್ಳುತ್ತಿದೆ. ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ!
ಕಾಳಿ ವೇಲಾಯುಧಂ ನಿರ್ಮಾಣ ಮಾಡಿ ನಿರ್ದೇಶಿಸಿರುವ ‘JioCinema’ ಒರಿಜಿನಲ್ ವೆಬ್ ಸಿರೀಸ್‌ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್ ಮತ್ತು ರವಿಶಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲರೊಳಗೊಬ್ಬ ಶಿವ: ಹಿರಿಯ ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೂ ಇದು ಮೊದಲ ವೆಬ್ ಸಿರೀಸ್. ತಮ್ಮ ಪಾತ್ರದ ಕುರಿತು ತುಂಬ ಉತ್ಸಾಹದಿಂದ ವಿವರಿಸುತ್ತಾರೆ ವಿಕ್ರಮ್. ‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ.
ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ‘ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ’ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’. ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್.
ವಿಕ್ರಮ್, ಅದಿತಿ ಜೋಡಿ- ರವಿಶಂಕರ್ ಅಬ್ಬರದ ಮೋಡಿ: ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅದಿತಿ ಪ್ರಭುದೇವ ‘ಲವ್ ಯು ಅಭಿ’ಯ ಮೂಲಕ ವೆಬ್ ಸಿರೀಸ್ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್ ಕಾಂಬಿನೇಷನ್ ಜೊತೆ ಖ್ಯಾತ ನಟ ರವಿಶಂಕರ್ ಅವರ ಅಬ್ಬರದ ಭರ್ಜರಿ ಮಸಾಲೆಯೂ ಇದೆ. ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ಅವರ ಆರ್ಭಟವನ್ನು ನೋಡಿಯೇ ಸವಿಯಬೇಕು. ‘ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಐ ಲವ್ ಅಭಿ. ಬಹುಶಃ ತುಂಬ ಜನರಿಗೆ ಅಭಿ ಇಷ್ಟ ಆಗ್ತಾಳೆ’ ಎಂದು ತುಂಬ ವಿಶ್ವಾಸದಿಂದ ಹೇಳುತ್ತಾರೆ ಅದಿತಿ ಪ್ರಭುದೇವ.
ಹಲವು ಭಾವಗಳ ಸಂಗಮ: ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ.
ಯುವನಟರ ಧಮಾಲ್; ಅನುಭವಿಗಳ ಕಮಾಲ್: ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‍ರಾಜ್ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್ ಯು ಅಭಿ’ಗೆ ಅರುಣ್ ಬ್ರಹ್ಮ ಅವರ ಕ್ಯಾಮೆರಾ ಚಳಕವಿದ್ದು, ಪ್ರದಿಪ್ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಕುಮಾರ್ ಜಂಟಿಯಾಗಿ ಮಾತುಗಳನ್ನು ಪೋಣಿಸಿದ್ದಾರೆ.
ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ “ರಿಚ್ಚಿ” ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿರುವ “ಕಳೆದು ಹೋಗಿರುವೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಕುನಾಲ್ ಗಾಂಜಾವಾಲ ಸ್ವತಃ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.
ಸಾಮಾನ್ಯವಾಗಿ ನಾನು ನನ್ನ ಹಾಡುಗಳ ಬಿಡುಗಡೆ ಸಮಯದಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ, ಇಲ್ಲಿ ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಗೂ”ರಿಚ್ಚಿ” ಅವರಿಗಾಗಿ ಬಂದಿದ್ದೇನೆ. ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದೇನೆ. ಒಂದು ಮೆಲೋಡಿ, ಮತ್ತೊಂದು ಪ್ಯಾಥೋ ಸಾಂಗ್ ಇಂದು ಮೆಲೋಡಿ ಸಾಂಗ್ ಬಿಡುಗಡೆಯಾಗಿದೆ. ಅಗಸ್ತ್ಯ ಅವರ ಸಂಗೀತ ಸಂಯೋಜನೆ ಚೆನ್ನಾಗಿದೆ. ಚಿನ್ನಿಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್ ಫೀರ್ ಹಾಡು ಬರೆದಿದ್ದಾರೆ. “ರಿಚ್ಚಿ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಕುನಾಲ್ ಗಾಂಜಾವಾಲ ಹಾರೈಸಿದರು.
2005 ನೇ ಇಸವಿಯಲ್ಲಿ “ಆಕಾಶ್” ಚಿತ್ರದ ಹಾಡು ಹಾಡಲು ಬಂದಾಗ ಡಾ.ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಕೈಗೊಂದು ಮುತ್ತು ಕೊಟ್ಟಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದ ಕುನಾಲ್ ಗಾಂಜಾವಾಲ, ಪುನೀತ್ ರಾಜಕುಮಾರ್ ಅವರೊಟ್ಟಿಗಿನ ಒಡನಾಟವನ್ನು ನೆನಪಿಸಿಕೊಂಡರು.
“ರಿಚ್ಚಿ” ಒಂದು ಪ್ರೇಮಕಥೆಯ ಚಿತ್ರ. ನಾನು ಚಿಕ್ಕಂದಿನಿಂದಲೇ ಕುನಾಲ್ ಗಾಂಜಾವಾಲ ಅವರ ಅಭಿಮಾನಿ. ನನ್ನ ಚಿತ್ರಕ್ಕೆ ಅವರು ಹಾಡಬೇಕೆಂಬುದು ನನ್ನ ಆಸೆ. ಅದು ಈಡೇರಿದೆ. ಎರಡು ಹಾಡುಗಳನ್ನು ಅವರು ಹಾಡಿದ್ದಾರೆ. ಒಂದು ಈಗ ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಬರಲಿದೆ. ಆಗಸ್ಟ್ ನಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ “ರಿಚ್ಚಿ” ಹೇಳಿದರು.
ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಸಹ ನಿರ್ಮಾಪಕ ರಾಕೇಶ್ ರಾವ್, ಪ್ರಕೃತಿ ಬನವಾಸಿ, ನಿರ್ಮಾಪಕರಾದ ಅಣಜಿ ನಾಗರಾಜ್, ವೆಂಕಟೇಶ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವುದೇ ಒಂದು ಅದ್ಭುತ ಅನುಭವ. ಆದರೆ ಪಿವಿಆರ್ ಹಾಗೂ ಐನಾಕ್ಸ್ ಗಳಂಥಹಾ ಮಲ್ಟಿಪ್ಲೆಕ್ಸ್ಗಳು ಕೊಡುವ ಸೇವೆಗಿಂತಲೂ ಹೆಚ್ಚೇ ಶುಲ್ಕವನ್ನು ಪಡೆಯುತ್ತವೆ ಎಂಬುದು ಗ್ರಾಹಕರ ಅಪವಾದ. ಇದೀಗ ಪಿವಿಆರ್ ಹಾಗೂ ಐನಾಕ್ಸ್ ಜಂಟಿಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಂಪರ್ ಆಫರ್ ಕೊಟ್ಟಿದೆ.
ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಸಿನಿಮಾಗಳನ್ನು ಸಂಭ್ರಮಿಸುವ ಸುವರ್ಣ ಅವಕಾಶವನ್ನು ನೀಡಿದೆ. ಕನ್ನಡ ಸ್ಪೆಷಲ್ ಎಂಬ ವಿಶೇಷ ಆಫರ್ ನೀಡಿದೆ. ಅಂದರೆ ಕನ್ನಡ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ರೀ ರಿಲೀಸ್ ಮಾಡುತ್ತಿದೆ. ಅದು ಕಡಿಮೆ ಬೆಲೆಯಲ್ಲಿ. ಕೇವಲ 99 ರೂಪಾಯಿಂದ ಟಿಕೆಟ್ ಶುರು ಮಾಡಿದೆ. ಹಾಗಿದ್ರೆ ಪಿವಿಆರ್ ಹಾಗೂ ಐನಾಕ್ಸ್ ಗಳಲ್ಲಿ ಮತ್ತೊಮ್ಮೆ ರಿಲೀಸ್ ಆಗಲಿರುವ ಬ್ಲಾಕ್ ಬಸ್ಟರ್ಸ್ ಚಿತ್ರಗಳಿವು.
ರಾಜಕುಮಾರ
ಯಜಮಾನ
ಕೆಜಿಎಫ್-1
ಮಫ್ತಿ
ಮಾಸ್ಟರ್ ಪೀಸ್
ಗಂಧದಗುಡಿ
ಗರುಡ ಗಮನ ವೃಷಭ ವಾಹನ
ಯಾವಾಗ ಯಾವ ಚಿತ್ರ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಫ್ಯಾಮಿಲಿ ಎಂಟರ್ ಟೈನರ್ ಸೂಪರ್ ಹಿಟ್ ಸಿನಿಮಾ ರಾಜಕುಮಾರ ಇದೇ ಶುಕ್ರವಾರದಂದು ರೀ ರಿಲೀಸ್ ಆಗ್ತಿದ್ರೆ, ಶನಿವಾರದಂದು ಯಜಮಾನ, ಭಾನುವಾರ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ -1, ಸೋಮವಾರ ಶಿವಣ್ಣ ಶ್ರೀಮುರಳಿ ನಟನೆಯ ಮಫ್ತಿ, ಮಂಗಳವಾರದಂದು ಯಶ್ ನಟನೆಯ ಮಾಸ್ಟರ್ ಪೀಸ್, ಬುಧವಾರ ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ರಿಲೀಸ್ ಆಗಲಿವೆ.
ಗುರುವಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಬಿಡುಗಡೆಯಾಗಲಿವೆ. ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಪ್ರೇಕ್ಷಕರಿಗೆ ಸಂಭ್ರಮಿಸುವ ಅವಕಾಶ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ www.pvrcinemas.com ಭೇಟಿ ನೀಡಿ ಹಾಗೂ ಬುಕ್ ಮೈ ಶೋ ನಲ್ಲಿ ಟಿಕೇಟ್ಸ್ ಲಭ್ಯವಿದೆ.
ಟಾಲಿವುಡ್ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪವಿತ್ರಾ ಹಾಗೂ ನರೇಶ್ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಜೋಡಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
ಇದು ನಿಮ್ಮ ಜೀವನದ ರಿಯಲ್ ಲೈಫ್ ಸ್ಟೋರಿನಾ? ಟೀಸರ್ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ”ಒಂದೆರಡು ನಿಮಿಷದ ಟೀಸರ್ ಟ್ರೇಲರ್ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ, ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ.
ನನ್ನ ವೃತ್ತಿಗೂ ವೈಯಕ್ತಿಕ ವಿಚಾರಕ್ಕೂ ಲಿಂಕ್ ಮಾಡುವುದು ನನಗೆ ಇಷ್ಟವಿಲ್ಲ. ನನ್ನನ್ನು ಒಬ್ಬ ನಟಿಯಾಗಿ ಮಾತ್ರ ನೋಡಿ, ಬೇಕಂತಲೇ ಯಾರೂ ಸುದ್ದಿಯಾಗುವುದಿಲ್ಲ. 1994ನಲ್ಲಿ ಅಂಬರೀಶ್ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಇದುವರೆಗೂ ನಾನು ಯಾವುದೇ ವಿಚಾರವನ್ನು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿರಲಿಲ್ಲ. ದುರುದ್ದೇಶಪೂರ್ವಕವಾಗಿ ನನ್ನ ಹೆಗಲ ಮೇಲೆ ಗನ್ ಇಟ್ಟು ನರೇಶ್ ಅವರನ್ನು ಶೂಟ್ ಮಾಡುವ ಪಿತೂರಿ ನಡೆದಿತ್ತು” ಎಂದು ಪವಿತ್ರಾ ಹೇಳಿದರು.
ನರೇಶ್ ಮಾತನಾಡಿ, ”ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂಕೋರ್ಟ್ ಲಿವ್ ಇನ್ ರಿಲೇಶನ್‌ಶಿಪ್ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ? ನಾನಂತೂ ಸಿಂಗಲ್ ಅಲ್ಲ, ಪವಿತ್ರಾ ಹಾಗೂ ನಾವಿಬ್ಬರೂ ಲಿವ್ ಇನ್ ರೀಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಂಡರು.
ಮಳ್ಳಿ ಪೆಳ್ಳಿ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮಳ್ಳಿ ಪೆಳ್ಳಿ’ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ.
ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೇ 26ಕ್ಕೆ ಮಳ್ಳಿ ಪೆಳ್ಳಿ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಕನ್ನಡದಲ್ಲಿ ಇನ್ನೂ ರಿಲೀಸ್ ಡೇಟ್ ಫೈನಲ್ ಆಗಿಲ್ಲ.
ಮೇ 24 ರಂದು ನಟಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಮೇ 24 ರಂದು ಬೆ.10 ರಿಂದ ಸಂಜೆ 5 ರವರೆಗೂ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ಜನರಿಗೆ ಉಪಕಾರವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಗಿಣಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಅನುರಾಗ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಆರ್ಯವರ್ಧನ್ ನಿರ್ದೇಶನದ “ತುಂಟರು” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕೆಂಗೇರಿಯ ನವದುರ್ಗಿ ಶ್ರೀ ಗಂಗಮ್ಮ ಹಾಗೂ ಶ್ರೀ ಸೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
“ತುಂಟರು” ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರದಲ್ಲಿ ಸುಮಾರು 45 ರಿಂದ 50 ಮಕ್ಕಳು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ, ನಾಯಕಿ, ಪೋಷಕಪಾತ್ರಗಳಲ್ಲಿ ಮಕ್ಕಳೆ ಕಾಣಿಸಿಕೊಳ್ಳುತ್ತಿದ್ದಾರೆ. “ತುಂಟರು” ಚಿತ್ರಕ್ಕೆ “ಪೋಲಿ ಹುಡುಗರು” ಎಂಬ ಅಡಿಬರಹವಿದೆ .
ಇದೊಂದು ಲವ್ ಜಾನರ್ ನ ಸಿನಿಮಾ. ಮೇ ಹದಿನೈದರಿಂದ ಹದಿನೈದು ದಿನಗಳ ಕಾಲ ಕೆಂಗೇರಿಯ ಕಾಲೋನಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಜೂನ್ ನಲ್ಲಿ ಮಕ್ಕಳಿಗೆ ಶಾಲೆ ಆರಂಭವಾಗುವುದರಿಂದ ಶನಿವಾರ ಹಾಗೂ ಭಾನುವಾರ ಚಿತ್ರೀಕರಣ ಮಾಡುವುದಾಗಿ ನಿರ್ದೇಶಕ ಆರ್ಯವರ್ಧನ್ ತಿಳಿಸಿದ್ದಾರೆ.
ನಿರ್ಮಾಪಕರ ಪೈಕಿ ನಾಗರಾಜ್ ಹಾಗೂ ಕಲಾವಿದರ ಬಳಗದಿಂದ ಸ್ನೇಹ ಚಿತ್ರದ ಕುರಿತು ಮಾತನಾಡಿದರು. ಹರ್ಷ ಕಾಗೋಡ್ ಸಂಗೀತ ನಿರ್ದೇಶನ ಹಾಗೂ ಸೂರ್ಯ ಛಾಯಾಗ್ರಹಣ “ತುಂಟರು” ಚಿತ್ರಕ್ಕಿದೆ.
ಟಾಲಿವುಡ್ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ 24ರಂದು ಪಂಚ ಭಾಷೆಯಲ್ಲಿ ಅನಾವರಣಗೊಳ್ತಿರುವ ಫಸ್ಟ್ ಲುಕ್ ಕನ್ನಡ ಝಲಕ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ.
ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಮ್ಯಾಜಿಕಲ್ ವಾಯ್ಸ್ ಮೂಲಕ ಟೈಗರ್ ನಾಗೇಶ್ವರ್ ರಾವ್ ಪ್ರಪಂಚಕ್ಕೆ ನಿಮ್ಮನ್ನು ಕೊಂಡೊಯ್ಯಲಿದ್ದಾರೆ. ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ಅಭಿಷೇಕ್ ಅಗವಾಲ್ ಆರ್ಟ್ಸ್ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದಾರೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.
ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ “ಸೈರನ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಮೇ 26ರಂದು ಕೆ.ಆರ್ ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಡೆಕ್ಕನ್ ಕಿಂಗ್ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ರಾಜಾ ವೆಂಕಯ್ಯ ಕೆಲಸ ಮಾಡಿದ್ದಾರೆ. “ಸೈರನ್” ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ್, ‘ಪ್ರವೀರ್ ಶೆಟ್ಟಿ ಅವರನ್ನು ಮೊದಲು ನೋಡಿದಾಗ ಚಿಕ್ಕ ಹುಡುಗ. ಈಗ ಹೀರೋ ಆಗಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹೆಚ್ಚಾಗಿ ಅವಕಾಶ ಸಿಗಲಿ’ ಎಂದು ಹಾರೈಸಿದರು.
‘ಕನ್ನಡ ಎಂದು ಬಂದಾಗ ಹೋರಾಟ ನೆನಪಾಗುತ್ತದೆ. ನಾನು ಹಲವಾರು ವರ್ಷಗಳಿಂದ ಪ್ರವೀಣ್ ಶೆಟ್ಟಿ ಅವರನ್ನು ನೋಡುತ್ತಾ ಬಂದಿದ್ದೇವೆ. ಅವರ ಮನೆಯಿಂದ ಚಿತ್ರರಂಗಕ್ಕೆ ಒಂದು ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು ಜೊತೆಗೆ ತಾಳ್ಮೆ ಇರಬೇಕು’ ಎಂದರು ರಾಕ್ ಲೈನ್ ವೆಂಕಟೇಶ್.
ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ‘ನಾನು ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದೆ. ಶ್ರೀಮುರಳಿ ಅವರು ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಿದೆ. ನಿರ್ದೇಶಕರು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು.
‘ಮೂಲತಃ ನಾನು ಚೆನ್ನೈನವನು. “ಸೈರನ್” ಚಿತ್ರದ ಮೂಲಕ ಪ್ರವೀರ್ ಶೆಟ್ಟಿ ಲಾಂಚ್ ಆಗುತ್ತಿದ್ದಾರೆ. ಒಳ್ಳೆಯ ನಟನಾಗುವ ನಿರೀಕ್ಷೆ ಇದೆ’ ಎಂದರು.
ತಮಿಳು ನಟ ದೀನಾ, ಚಿತ್ರದ ನಾಯಕಿ ಲಾಸ್ಯ, ನಟಿ ಸ್ಪರ್ಶ ರೇಖಾ, ಸಂಗೀತ ನಿರ್ದೇಶಕ ಭಾರದ್ವಾಜ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.