Categories
ಸಿನಿ ಸುದ್ದಿ

ಬರಲಿದೆ ಗೆಲುವಿನ ಚಿತ್ರ: ಮಾರ್ಚ್ 19ಕ್ಕೆ ಪ್ರೀತಿಯ ಪರಂಪರೆ ಸಾರುವ ಲವ್ ಮಾಕ್ಟೇಲ್ 3

ಲವ್‌ಮಾಕ್ಟೇಲ್ 3 ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಟಿಸಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲವ್ ಮಾಕ್ಟೇಲ್ ಮೊದಲ ಆವೃತ್ತಿಯ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದರು. ಎರಡನೇ ಆವೃತ್ತಿಯ ಟ್ರೇಲರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಡೆಯಿಂದ ಬಿಡುಗಡೆಗೊಂಡಿತ್ತು. ಆದರೆ, ಮೂರನೇ ಆವೃತ್ತಿಯ ಈ ಟ್ರೇಲರ್ ಅನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪುತ್ರಿ ಪರಿ ಬಿಡುಗಡೆಗೊಳಿಸಿರುವುದು ವಿಶೇಷ.


ಈ ಟ್ರೇಲರ್ ಬಿಡುಗಡೆಯಲ್ಲಿ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಿಲನ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಮುಂತಾದವರು ಉಪಸ್ಥಿತರಿದ್ದರು.

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ, ಲವ್ ಮಾಕ್ಟೇಲ್3 ರೂಪುಗೊಂಡಿದ್ದರ ವಿಚಾರಗಳನ್ನು ತೆರೆದಿಡುತ್ತಲೇ, ಇದರಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರ ನಟನಾ ಚಾತುರ್ಯವನ್ನು ತೆರೆದಿಟ್ಟರು. ಡಾರ್ಲಿಂಗ್ ಕೃಷ್ಣ ಮಾತನಾಡಿ, ಯಾವುದೋ ಕ್ಷಣದಲ್ಲಿ ಈ ಸಿನಿಮಾದ ಒಂದೆಳೆ ಕಥೆ ಹೊಳೆಯಿತು. ಅದರ ಗುಂಗುಹತ್ತಿಸಿಕೊಂಡ ನಂತರ ಮನೆಯಲ್ಲಿ ಕಥೆ ಬರೆಯಲು ಸಾಧ್ಯವಿಲ್ಲವೆನ್ನಿಸಿ ಮೂರು ದಿನಗಳ ಕಾಲ ಗೋವಾಕ್ಕೆ ಹೋಗಿದ್ದೆ. ಅಲ್ಲಿಯೇ ಕಥೆ ಚಿತ್ರಕಥೆಗೊಂದು ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ' ಎನ್ನುತ್ತಲೇ ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.

ಇದಲ್ಲದೇ ಈ ಸಿನಿಮಾ ಪಾತ್ರಗಳ ಬಗ್ಗೆ, ಅದನ್ನು ನಿರ್ವಹಿಸಿರುವ ಕಲಾವಿದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿಗಳನ್ನು ಹಂಚಿಕೊಂಡರು. ಮಿಲನಾ ನಾಗರಾಜ್ ಟ್ರೈಲರ್ ಸಿದ್ಧಗೊಂಡ ಬಗೆಗಿನ ವಿವರಗಳ ಮೂಲಕ ಮಾತುಗಳನ್ನಾರಂಭಿಸಿಎಲ್ಲರೂ ಇಷ್ಟೊಂದು ಆತ್ಮವಿಶ್ವಾಸದಿಂದ ದೊಡ್ಡ ಸಿನಿಮಾದ ಮುಂದೆ ತೆರೆಗಾಣಲು ಸಿದ್ಧವಾದ ಬಗ್ಗೆ ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಿನಿಮಾ ಮೂಡಿ ಬಂದಿರುವ ರೀತಿ. ಈ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ ಅನ್ನೋ ವಿಶ್ವಾಸವಿದೆ. ಅದನ್ನು ಎಲ್ಲರೂ ನೋಡಿ, ಈ ಹಿಂದಿನ ಎರಡು ಸರಣಿಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹ ಕೊಡುತ್ತಾರೆಂಬ ನಂಬಿಕೆ ಇದೆ' ಎಂದರು.


ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವೀಡ್, ಶ್ವೇತಾ ಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಲೇ, ಇಂಥಾ ಅವಕಾಶ ದಕ್ಕಿದ ಬಗ್ಗೆ ಡಾಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಲವ್ ಮಾಕ್ಟೇಲ್ 3 ಪ್ರೇಕ್ಷಕರ ಮುಂದೆ ಬರಲು ರೆಡಿ: ಮಾರ್ಚ್ 19ಕ್ಕೆ ನಿರೀಕ್ಷಿತ ಚಿತ್ರ


ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಂದು ಲವ್ ಮಾಕ್ಟೇಲ್3 ಚಿತ್ರವನ್ನು ಬಿಡುಗಡೆಗೊಳಿಸಲು ಡಾರ್ಲಿಂಗ್ ಕೃಷ್ಣ ಅಣಿಯಾಗಿದ್ದಾರೆ.

ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗೋ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಸಕಾರಾತ್ಮಕವಾಗಿರುವ ಮುಹೂರ್ತ. ಅಂಥಾ ದಿನಾಂಕದಂದು ಟಾಕ್ಸಿಕ್ ಬಿಡುಗಡೆಗೊಳ್ಳದಿದ್ದರೂ, ಅದೇ ದಿನ ಲವ್ ಮಾಕ್ಟೇಲ್ ಚಿತ್ರವನ್ನು ತೆರೆಗಾಣಿಸಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.


ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್೩ ಚಿತ್ರವನ್ನು ಕೆವಿಎನ್ ಸಂಸ್ಥೆ ವಿತರಿಸುತ್ತಿದೆ. ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದೆ ಹೋಗುತ್ತಲೇ ಲವ್ ಮಾಕ್ಟೇಲ್೩ ಪಾಲಿಗೆ ಅದೃಷ್ಟ ಖುಲಾಯಿಸಿಕೊಂಡಿದೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂದೇ ಲವ್ ಮಾಕ್ಟೇಲ್೩ ತೆರೆಗಾಣಲಿದೆ. ಈ ದಿನದಂದೇ ಸಿನಿಮಾ ಬಿಡುಗಡೆಗೊಳಿಸಲು ಅನೇಕರು ಉತ್ಸುಕರಾಗಿದ್ದರು.


ಯಾಕೆಂದರೆ, ಆ ಹೊತ್ತಿನಲ್ಲಿ ಯುಗಾದಿ, ರಂಜಾನ್ ಮುಂತಾದ ಹಬ್ಬಗಳಿಗೆ ಸಾಲು ಸಾಲು ರಜೆಗಳಿವೆ. ಅಂಥಾ ಪ್ರಶಸ್ತವಾದ ಬಿಡುಗಡೆ ಮುಹೂರ್ಥವೀಗ ಲವ್ ಮಾಕ್ಟೇಲ್೩3 ಚಿತ್ರಕ್ಕೆ ಒಲಿದು ಬಂದಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಗಾರ್ಜಿಯಸ್ ರಾಸ್ಕಲ್! ಟೀಸರ್ ಚಿಂದಿ ಗುರೂ; ಈ ವಾರ ಚಿತ್ರ ರಿಲೀಸ್

ಅದೃಷ್ಟಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಚೇತನ್ ಕೃಷ್ಣ ನಿರ್ಮಿಸಿರುವ, ಶ್ರೀನಿವಾಸ್ ಬೆಟ್ಟದಪುರ ಸಹ ನಿರ್ಮಾಣವಿರುವ ಹಾಗೂ ಪ್ರಮೋದ್ ಜೋಯಿಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಡಾರ್ಕ್ ಕಾಮಿಡಿ ಜಾನರ್ ನ “ಗಾರ್ಜಿಯಸ್ ರಾಸ್ಕಲ್” ಚಿತ್ರದ ಟೀಸರ್ ಹೋಳಿ ಹುಣ್ಣಿಮೆಯಂದು ಬಿಡುಗಡೆಯಾಗಿದೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಇದೇ ಶುಕ್ರವಾರ ಮಾರ್ಚ್ 6 ರಂದು ತೆರೆಗೆ ಬರುತ್ತಿದೆ.

ಚೇತನ್ ಕೃಷ್ಣ ಅವರೆ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಶಂಕು ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ ಹಾಗೂ ನಂದು (ಕೆ.ಜಿ.ಎಫ್) ಅವರ ಶಬ್ದ ವಿನ್ಯಾಸವಿದೆ.ಕ್ರಿಯೇಟಿವ್ ಹೆಡ್ ಆಗಿ ಚರಣ್ ಸುವರ್ಣ ಕಾರ್ಯ ನಿರ್ವಹಿಸಿದ್ದಾರೆ.

ಪ್ರೇರಣಾ ಭಟ್, ಯುವಿನ್, ರಾಜವೀರ್ ಸಿಂಗ್, ಚೇತನ್ ಮಹೇಶ್, ಶಕ್ತಿಕುಮಾರ್, ಸುನೀಲ್ ಪುರಾಣಿಕ್, ಸ್ವಾತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಗಾರ್ಜಿಯಸ್ ರಾಸ್ಕಲ್! ಟೀಸರ್ ಚಿಂದಿ ಗುರೂ: ಈ ವಾರ ಚಿತ್ರ ರಿಲೀಸ್

ಅದೃಷ್ಟಲಕ್ಷ್ಮೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಚೇತನ್ ಕೃಷ್ಣ ನಿರ್ಮಿಸಿರುವ, ಶ್ರೀನಿವಾಸ್ ಬೆಟ್ಟದಪುರ ಸಹ ನಿರ್ಮಾಣವಿರುವ ಹಾಗೂ ಪ್ರಮೋದ್ ಜೋಯಿಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಡಾರ್ಕ್ ಕಾಮಿಡಿ ಜಾನರ್ ನ “ಗಾರ್ಜಿಯಸ್ ರಾಸ್ಕಲ್” ಚಿತ್ರದ ಟೀಸರ್ ಹೋಳಿ ಹುಣ್ಣಿಮೆಯಂದು ಬಿಡುಗಡೆಯಾಗಿದೆ.

ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಇದೇ ಶುಕ್ರವಾರ ಮಾರ್ಚ್ 6 ರಂದು ತೆರೆಗೆ ಬರುತ್ತಿದೆ.

ಚೇತನ್ ಕೃಷ್ಣ ಅವರೆ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಶಂಕು ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ ಹಾಗೂ ನಂದು (ಕೆ.ಜಿ.ಎಫ್) ಅವರ ಶಬ್ದ ವಿನ್ಯಾಸವಿದೆ.ಕ್ರಿಯೇಟಿವ್ ಹೆಡ್ ಆಗಿ ಚರಣ್ ಸುವರ್ಣ ಕಾರ್ಯ ನಿರ್ವಹಿಸಿದ್ದಾರೆ.

ಪ್ರೇರಣಾ ಭಟ್, ಯುವಿನ್, ರಾಜವೀರ್ ಸಿಂಗ್, ಚೇತನ್ ಮಹೇಶ್, ಶಕ್ತಿಕುಮಾರ್, ಸುನೀಲ್ ಪುರಾಣಿಕ್, ಸ್ವಾತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮಹತ್ವದ ಹೆಜ್ಜೆ: ಜಗತ್ತಿಗೆ ಹೆಮ್ಮೆಯ ಕಥೆ ತಲುಪಿಸೋ ಕಾರ್ಯ…

ರಾಜಕುಮಾರ, ಕೆಜಿಎಫ್ ಚಾಪ್ಟರ್ 1 & 2, ಕಾಂತಾರ, ಕಾಂತಾರ ಚಾಪ್ಟರ್ 1, ಮಹಾವತಾರ ನರಸಿಂಹ ಮತ್ತು ಸಲಾರ್
ಅಂತಹ ದೈತ್ಯ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ ‘ಓವರ್ಸೀಸ್ ಡಿಸ್ಟ್ರಿಬ್ಯೂಷನ್’ ಕ್ಷೇತ್ರಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿದೆ.

ನಮ್ಮ ಹೆಮ್ಮೆಯ ಕಥೆಗಳನ್ನು ಜಗತ್ತಿನ ಪ್ರತಿಯೊಬ್ಬ
ಪ್ರೇಕ್ಷಕನಿಗೂ ತಲುಪಿಸುವ ಈ ಪಯಣದ ಪ್ರಮುಖ ಉದ್ದೇಶಗಳು:
ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಈಗ ಭಾರತೀಯ ಸಿನಿಮಾ ನಿಮ್ಮ ಮನೆಬಾಗಿಲಿಗೆ!

ಈ ಮಹತ್ವದ ಹೆಜ್ಜೆಯ ವಿಶೇಷತೆ ಎಂದರೆ, ಇದು ಕೇವಲ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಭಾರತೀಯ ಚಿತ್ರರಂಗದ ವೈವಿಧ್ಯಮಯ ಕಥೆಗಳನ್ನು ಹಾಗೂ ಪ್ರತಿಭಾವಂತ ಸಿನಿಮಾಗಳನ್ನು ವಿಶ್ವದಾದ್ಯಂತ ತಲುಪಿಸುವ ಬೃಹತ್ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತುಕೊಂಡಿದೆ.

ಹೊಂಬಾಳೆ ಫಿಲ್ಮ್ಸ್‌ನ ಈ ಹೊಸ ಅಧ್ಯಾಯವು ಭಾರತೀಯ ಚಿತ್ರರಂಗದ ಜಾಗತಿಕ ಬೆಳವಣಿಗೆಗೆ ಹೊಸ ವೇಗವನ್ನು ನೀಡಲಿದೆ. ಇದು ಕೇವಲ ಒಂದು ಸಂಸ್ಥೆಯ ಬೆಳವಣಿಗೆಯಲ್ಲ, ಇದು ಪ್ರತಿ ಭಾರತೀಯನ ಹೆಮ್ಮೆ!

Categories
ಸಿನಿ ಸುದ್ದಿ

ಚಿತ್ರವಿಮರ್ಶೆ: ಕದ್ದ ಕಾರೊಳು ನಗುವಿನ ಕಾರುಬಾರು!

ವಿಭ

ಚಿತ್ರ: ಸೂಪರ್ ಹಿಟ್
ನಿರ್ದೇಶನ: ವಿಜಯಾನಂದ
ನಿರ್ಮಾಣ: ಜಿ.ಉಮೇಶ್
ತಾರಾಗಣ: ಗೌರವ್ ಶೆಟ್ಟಿ, ಗಿಲ್ಲಿ ನಟ, ಸಾಧುಕೋಕಿಲ, ಶ್ವೇತಾ, ಡ್ರ್ಯಾಗನ್ ಮಂಜು, ಪ್ರಮೋದ್ ಶೆಟ್ಟಿ, ಜೀ ಜೀ, ನಾಗೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಗಿರಿ ಕರಿಸುಬ್ಬು ಇತರರು.

ಕನ್ನಡದಲ್ಲಿ ಹಾಸ್ಯಮಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಆ ಸಾಲಿಗೆ ಸೇರುವ ಮತ್ತೊಂದು ಸಿನಿಮಾವನ್ನು ಹೆಸರಿಸುವುದಾದರೆ, ಈ ಚಿತ್ರವನ್ನು ಮುಲಾಜಿಲ್ಲದೆ ಹೇಳಬಹುದು. ಮನಸ್ಸಿಗೆ ಖುಷಿ ಕೊಡುವ, ನಗು ತರಿಸುವ ತಾಕತ್ತು ಈ ಚಿತ್ರಕ್ಕಿದೆ.

ಆರಂಭದಿಂದ ಅಂತ್ಯದವರೆಗೆ ನಗು ನಗು ನಗು. ಇದು ಬಿಟ್ಟರೆ ಬೇರೇನೂ ಇಲ್ಲ. ಭರಪೂರ ಮನರಂಜನೆಯ ಸಂತೃಪ್ತ ಭೋಜನ ಗ್ಯಾರಂಟಿ.

ಮೊದಲೇ ಹೇಳಿದಂತೆ ಇದೊಂದು ಹಾಸ್ಯಮಯ ಕಥಾಹಂದರದ ಸಿನಿಮಾ. ಹಾಗಾಗಿ ಇಲ್ಲಿ ಮಚ್ಚು, ಲಾಂಗು, ಗನ್ನು ಸದ್ದಿಲ್ಲ. ಆದರೂ ಇಲ್ಲೊಂದು‌ ಮರ್ಡರ್ ಸುತ್ತ ನಡೆಯೋ ಕಥೆ ಇದೆ. ಅಲ್ಲಿ ನೂರೆಂಟು ನಗುವಿನ ಕಥೆಗಳು ಹುಟ್ಟಿಕೊಳ್ಳುತ್ತವೆ. ಆ ಕಥೆಯಲ್ಲಿ ಒಂದಷ್ಟು ಟ್ವಿಸ್ಟು ಇದೆ. ನೋಡುಗರಿಗೆ ಕೊಂಚ ಟೆಸ್ಟೂ ಇದೆ. ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ನೋಡಿಸಿಕೊಂಡು‌ ಹೋಗುವ ಸಾಮರ್ಥ್ಯ ಚಿತ್ರಕ್ಕಿದೆ. ಶೀರ್ಷಿಕೆಗೆ ತಕ್ಕಂತೆಯೇ ಸಿನಿಮಾನೂ ಇದೆ. ಕಥೆ, ಚಿತ್ರಕಥೆ, ನಿರೂಪಣೆ ಶೈಲಿ, ಪಾತ್ರಗಳ ಆಯ್ಕೆ ಎಲ್ಲವೂ ಸೂಪರ್. ಹಾಗಾಗಿ ಸಿನಿಮಾವನ್ನು ಒಂದೊಮ್ಮೆ ನೋಡುವುದರಲ್ಲಿ ಯಾವುದೇ ಗೊಂದಲ ಬೇಡ.

ಒಂದು ಸರಳ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ ಎನ್ನಬಹುದು. ಪ್ರೇಕ್ಷಕ‌ ಮುಖ್ಯವಾಗಿ ಬಯಸೋದು ಮನರಂಜನೆ. ಅದರ ನಾಡಿಮಿಡಿತ ಅರಿತಿರುವ ನಿರ್ದೇಶಕರು, ಅದನ್ನು ಅತ್ಯದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ಧ ಹಾಸ್ಯಕ್ಕೇನೂ ಕೊರತೆ ಇಲ್ಲ. ದ್ವಿತಿಯಾರ್ಧ ಮುನ್ನ ಒಂದು ಟ್ವಿಸ್ಟ್ ಇದೆ. ಸೆಕೆಂಡ್ ಹಾಫ್ ಇನ್ನಷ್ಟು ಮಜವೆನಿಸೋ ಸನ್ನಿವೇಶ, ಪಾತ್ರಗಳು ಎದುರಾಗುತ್ತವೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತಾ ಹೋಗುತ್ತೆ.

ಸಿನಿಮಾ ಕಥೆಗೆ ಚಿತ್ರಕಥೆಯೇ ಹೂರಣ. ಹಿನ್ನೆಲೆ ಸಂಗೀತ ಸಿನಿಮಾದ ವೇಗ ಹೆಚ್ಚಿಸಿದೆ. ಕ್ಯಾಮರಾ ಕೈಚಳಕ ಕೂಡ ‘ಸೂಪರ್’ ಎನಿಸಿದೆ. ಎಲ್ಲೋ ಒಂದು ಕಡೆ ವೇಗ ಕಮ್ಮಿ ಆಯ್ತು ಅನ್ನುವಷ್ಟರಲ್ಲಿ ಹಾಡೊಂದು ಬಂದು ವೇಗ ಹೆಚ್ಚಿಸುತ್ತೆ. ಚಿತ್ರಕಥೆಗೆ ಸೇರುವ ಪಾತ್ರಗಳು ವೇಗಕ್ಕೆ ಸಾಥ್ ಕೊಟ್ಟಿವೆ.

ಕಥೆ ಏನು?

ಒಂದು ಕಾರು. ಅದೂ ಕದ್ದ ಕಾರು! ಆ ಕಾರಿನ ಡಿಕ್ಕಿಯಲ್ಲೊಂದು ಬಾಡಿ. ಆ ಕಾರನ್ನು ಕದ್ದಿದ್ದು ಒಬ್ಬ. ಆ ಕದ್ದ ಕಾರನ್ನು ಕದ್ದಿದ್ದು ಇನ್ನೊಬ್ಬ. ಆ ಕಾರಲ್ಲಿ ಜರ್ನಿ ಮಾಡೋದು ಒಬ್ಬಿಬ್ಬರಲ್ಲ. ಕದ್ದ ಕಾರಿನ ಜರ್ನಿ ಸ್ಟೋರಿಯೇ ಇಂಟ್ರೆಸ್ಟಿಂಗ್.

ಕಾರು ಕದ್ದಿದ್ದು ಯಾರೋ ಅದನ್ನು ಕದ್ದಿದ್ದು ಇನ್ಯಾರೋ ದಾರಿ‌ಮಧ್ಯೆ ಸಿಗುವ ಪಾತ್ರಗಳೆಲ್ಲವೂ ಒಂದಕ್ಕೊಂದು ಕನೆಕ್ಟ್ ಆಗ್ತಾ ಹೋಗುತ್ತವೆ. ಈ ಜರ್ನಿಯಲ್ಕಿ ಬರೀ ಮಾತು ಮತ್ತು ನಗು. ಅಲ್ಲಲ್ಲಿ ಸ್ಪೆಷಲ್ ಟ್ವಿಸ್ಟು. ಅಲ್ಲೊಂದು ಪೆನ್ ಡ್ರೈವ್ ಸ್ಟೋರಿ ಇದೆ. ಕೊನೆಗೊಂದು ತಿರುವು. ಕ್ಲೈಮ್ಯಾಕ್ಸ್ ಸಿನಿಮಾದ ಹೈಲೆಟ್. ಅದೇನು ಅನ್ನುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಲೇಬೇಕು.

ಯಾರು ಹೇಗೆ?

ಗೌರವ್ ಶೆಟ್ಟಿ ಸಿನಿಮಾದ ಹೈಲೆಟ್. ಅವರ ಡೈಲಾಗ್ ಡಿಲವರಿ, ಬಾಡಿ ಲಾಂಗ್ವೇಜ್ ಇಲ್ಲಿ ವರ್ಕೌಟ್ ಆಗಿದೆ. ಗಿಲ್ಲಿ ನಟ ಎಂದಿಗಿಂತಲೂ ನಗಿಸಿದ್ದಾರೆ. ಅವರ ಟೈಮಿಂಗ್ ಮತ್ತು ನಟನೆ ಆ ಎನರ್ಜಿ ಸಿನಿಮಾಗೆ ಪ್ಲಸ್. ಸಾಧು ಅವರ ಕಾಮಿಡಿ, ಜೀ ಜೀ ಟೈಮಿಂಗ್, ಪ್ರಮೋದ್ ಶೆಟ್ಟಿ ಪಾತ್ರಕ್ಕೆ ಕೊಟ್ಟ ನ್ಯಾಯ ಮೆಚ್ಚುಗೆಯಾಗುತ್ತೆ. ಉಳಿದಂತೆ ನಾಗೇಂದ್ರ ಪ್ರಸಾದ್ ಖಳನಟನೆಯಲ್ಲಿ ಇಷ್ಟ ಆಗುತ್ತಾರೆ. ಟೆನ್ನಿಸ್ ಕೃಷ್ಟ, ಗಿರಿ, ಕರಿಸುಬ್ಬು ಇತರರು ಗಮನ ಸೆಳೆಯುತ್ತಾರೆ.
ಚಿತ್ರದ ಸಂಗೀತದಲ್ಲಿ ಬರುವ ಸುಮ್ ಸುಮ್ನೆ ಶುರುವಾಗೋಯ್ತು ಕಣ್ಣ ಸನ್ನೆ.. ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತದಲ್ಲಿ ಹೊಸತನವಿದೆ. ನಾಗಾರ್ಜುನ ಕ್ಯಾಮರಾ ಕೈಚಳಕ ಪರವಾಗಿಲ್ಲ. ಶ್ರೀಕಾಂತ್ ಕತ್ತರಿ ಪ್ರಯೋಗದಲ್ಲಿ ಮ್ಯಾಜಿಕ್ ಇದೆ. ಸಣ್ಣ ಪುಟ್ಟ ಮಿಸ್ಟೇಕ್ಸ್ ಹೊರತು ಪಡಿಸಿದರೆ ಸಿನಿಮಾ ನೋಡಿಸಿಕೊಂಡು ಹೋಗುತ್ತೆ.

Categories
ಸಿನಿ ಸುದ್ದಿ

ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ- ಹಾರಾಟ-ಚೀರಾಟ!

ಚಿತ್ರ ವಿಮರ್ಶೆ : ವಿಭ

ಚಿತ್ರ: ಆಲ್ಫಾ
ನಿರ್ದೇಶನ: ವಿಜಯ್ ಎನ್
ನಿರ್ಮಾಪಕ: ಆನಂದ್ ಕುಮಾರ್
ತಾರಾಗಣ: ಹೇಮಂತ್ ಕುಮಾರ್, ಅಯಾನ, ಗೋಪಿಕಾ ಸುರೇಶ್, ಅಚ್ಯುತ್ ಕುಮಾರ್, ಅವಿನಾಶ್, ರಮೇಶ್ ಇಂದಿರಾ, ಕಾರ್ತಿಕ್ ಮಹೇಶ್, ಬಾಲು ನಾಗೇಂದ್ರ, ಗಿರಿರಾಜ್, ರಘು ಶಿವಮೊಗ್ಗ ಇತರರು.

ಅಪ್ಪ ಪೊಲೀಸ್ ಅಧಿಕಾರಿ. ಅವರಿಗೆ ಮಗ ಐಪಿಎಸ್ ಅಧಿಕಾರಿ ಮಾಡುವ ಆಸೆ. ಮಗನಿಗೆ ಬಿಜಿನೆಸ್ ಮಾಡೋ ಆಸೆ. ಅಪ್ಪನ ಕನಸು ಈಡೇರುತ್ತೋ, ಮಗನ ಆಸೆ ಈಡೇರುತ್ತೋ ಎಂಬ ಕುತೂಹಲದ ನಡುವೆ ಸಿನಿಮಾದೊಳಗೆ ಒಂದೊಳ್ಳೆಯ ಆಶಯ ಇದೆ. ಅದು ಏನು ಎಂಬ ಪ್ರಶ್ನೆ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಇದೊಂದು ಮಾಸ್ ಎಲಿಮೆಂಟ್ಸ್ ಇರುವ ಕಥೆ. ಹಾಗಾಗಿ ಇಲ್ಲಿ ಗನ್ನು, ಕತ್ತಿ ಸದ್ದು ಜೋರಾಗಿದೆ. ಅಲ್ಲಲ್ಲಿ ಖದರ್ ಡೈಲಾಗು, ಖಡಕ್ ಫೈಟು ಇದೆ.

ಕಥೆ ಸಿಂಪಲ್ ಆಗಿದೆ. ಚಿತ್ರಕಥೆ ಗಟ್ಟಿಯಾಗಿದೆ. ಅಲ್ಲಲ್ಲಿ ಬರುವ ತಿರುವುಗಳು ಮುಂದೇನಾಗುತ್ತೆ ಎಂಬ ಕುತೂಹಲ ಮೂಡಿಸುತ್ತೆ. ಆ ಕಾರಣಕ್ಕೆ ಸಿನಿಮಾ ಇಂಟ್ರೆಸ್ಟಿಂಗ್ ಎನಿಸುತ್ತೆ.

ಕಥೆ ತೀರಾ ವಿಶೇಷವೇನಲ್ಲ. ಕನ್ನಡದಲ್ಲಿ ಡ್ರಗ್ಸ್ ಮಾಫಿಯಾ ಕಥೆಗಳು ಬಂದಿವೆ. ಆ ಸಾಲಿಗೆ ಇದು ಹೊಸ ಸೇರ್ಪಡೆಯಾದರೂ, ನಿರೂಪಣೆ ಶೈಲಿ ವಿಶೇಷವಾಗಿದೆ. ಪಾತ್ರಗಳ ಡಿಸೈನ್ ಭಿನ್ನವಾಗಿದೆ. ಮೇಕಿಂಗ್ ವಿಷಯದಲ್ಲಿ ಹೊಸತನವಿದೆ. ಹಾಗಾಗಿ ಚಿತ್ರ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ.

ಕೆಲವು ಕಡೆ ಮಿಸ್ಟೇಕ್ಸ್ ಇವೆ. ಹೊಸ ತಂಡವಾದ್ದರಿಂದ ಅದೆಲ್ಲವನ್ನು ಪಕ್ಕಕ್ಕಿಡಬಹುದು. ತಾಂತ್ರಿಕತೆಯಲ್ಲಿ ಶ್ರೀಮಂತವಾಗದಿದ್ದರೂ, ಕಥೆ ಕಟ್ಟಿಕೊಟ್ಟಿರುವ ರೀತಿ ರುಚಿಸುತ್ತೆ.

ಕಥೆ ಏನು?

ಪೊಲೀಸ್ ಅಧಿಕಾರಿಯೊಬ್ಬ ಡ್ರಗ್ಸ್ ಮಾಫಿಯಾ ಬೆನ್ನತ್ತಿ ಹೋಗುತ್ತಾನೆ. ಅಲ್ಲಿ ನಡೆಯಬಾರದ ಘಟನೆ‌ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು. ಆ ಮಾಫಿಯಾದಲ್ಲಿ ಒಂದಷ್ಟು ಹೆಣಗಳು ಬೀಳುತ್ತವೆ. ಅಚ್ಚರಿ ಎನಿಸುವ ವ್ಯಕ್ತಿತ್ವಗಳು ಬಯಲಾಗುತ್ತವೆ. ಊಹಿಸದ ಸನ್ನಿವೇಶಗಳು ಎದುರಾಗುತ್ತವೆ. ಅಲ್ಲೊಂದು ನವಿರಾದ ಪ್ರೀತಿ ಚಿಗುರಿ ಹೂವಾಗುವ ಹೊತ್ತಿಗೆ ಬೆಂಕಿಯ ಕಿಡಿ ಹಾರುತ್ತೆ. ಅಪ್ಪನಿಗಾಗಿ ಹೋರಾಟವೊಂದು ನಡೆಯುತ್ತೆ. ಇಷ್ಟೆಲ್ಲದರ ನಡುವೆ ಡ್ರಗ್ಸ್ ಮಾಫಿಯಾ ಅಳಿಯುತ್ತಾ ಉಳಿಯುತ್ತಾ ಅನ್ನೋದೇ ಸಸ್ಪೆನ್ಸ್.

ಯಾರು ಹೇಗೆ?

ಹೇಮಂತ್ ಕುಮಾರ್ ನಟನೆಯಲ್ಲಿ ಗಮನ ಸೆಳೆದಿದ್ದಾರೆ. ಫೈಟು, ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಥೆಗಳ ಆಯ್ಕೆಯಲ್ಲಿ ಎಚ್ಚರ ವಹಿಸುತ್ತಾ ಹೋದರೆ ಒಳ್ಳೆಯ ಭವಿಷ್ಯವಿದೆ.
ಅಯಾನ, ಗೋಪಿಕಾ ಸುರೇಶ್ ನಟನೆಯಲ್ಲಿ ಇಷ್ಟವಾಗುತ್ತಾರೆ. ಅಚ್ಯುತ್ ಕುಮಾರ್ ತಂದೆ ಪಾತ್ರದಲ್ಲಿ ಮಿಂಚಿದ್ದಾರೆ.


ಅವಿನಾಶ್ ಅದೇ ಖದರ್ ತೋರಿಸಿದರೆ, ರಮೇಶ್ ಇಂದಿರಾ ವಿಲನ್ ಆಗಿ ಸಖತ್ ಇಷ್ಟ ಆಗುತ್ತಾರೆ. ಕಾರ್ತಿಕ್ ಮಹೇಶ್ ಖಳನಾಗಿ ಅಬ್ಬರಿಸಿದ್ದಾರೆ. ಉಳಿದಂತೆ ಬಾಲು ನಾಗೇಂದ್ರ, ಗಿರಿರಾಜ್, ರಘು ಶಿವಮೊಗ್ಗ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಸಂಗೀತ ಪೂರಕವಾಗಿದೆ. ಕ್ಯಾಮರಾ ಕೈಚಳಕ ಪರವಾಗಿಲ್ಲ.

Categories
ಸಿನಿ ಸುದ್ದಿ

ಸಿಂಪಲ್ ದಂಪತಿಯ ಸರಳ ಜೀವನ: ಸರಾಗವಲ್ಲದ ಚಿತ್ರಣ

ಚಿತ್ರ ವಿಮರ್ಶೆ : ವಿಭ

ನಿರ್ದೇಶಕ: ಮಂಜು ಸ್ವರಾಜ್
ನಿರ್ಮಾಣ: ಲೋಹಿತ್ ನಂಜುಂಡಯ್ಯ
ತಾರಾಗಣ: ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಮಕೃಷ್ಣ ರಘು ರಾಮನಕೊಪ್ಪ, ಇತರರು

ಇದು ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಿತ್ರ. ಅವರ ಕಾದಂಬರಿಗಳು ಪರಿಣಾಮಕಾರಿ ಆಗಿರುತ್ತವೆ. ಪ್ರಭಾವ ಕೂಡ ಬೀರುತ್ತವೆ. ಇದು ಎಲ್ಲರಿಗೂ ಗೊತ್ತು. ಹಾಗಂತ, ಈ ಸರಳ ಸುಬ್ಬರಾವ್ ಪರಿಣಾಮಕಾರಿನಾ? ಪ್ರಭಾವ ಬೀರುತ್ತಾ? ಈ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ಕುತೂಹಲಕ್ಕಾಗಿ ಒಮ್ಮೆ ನೋಡಲ್ಲಡ್ಡಿ ಇಲ್ಲ.

ಇದು ಎಪ್ಪತ್ತರ ದಶಕದ ಕಥೆ. ಹಾಗಾಗಿ ರೆಟ್ರೋ ಶೈಲಿಯಲ್ಲೇ ಸಿನಿಮಾ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಕಡೆ ಇಲ್ಲಿ ರೆಟ್ರೋ ಫೀಲ್ ಆಗೋದಿಲ್ಲ. ಆದರೆ, ಕಾದಂಬರಿಯನ್ನು ಸಿನಿಮಾ ಮಾಡಿರುವುದರಿಂದ ಪ್ರಯತ್ನ ಮೆಚ್ಚಲೇಬೇಕು.

ಕಥೆ ಸರಳ ಆದರೆ, ಸರಳ ಸುಬ್ಬರಾವ್ ಚಿತ್ರಕಥೆ ಸರಳ ಅನಿಸಲ್ಲ. ಇನ್ನಷ್ಟು ಬಿಗಿಯಾಗಿರಬೇಕಿತ್ತು. ಮೊದಲರ್ಧ ತುಂಬಾ ನಿಧಾನ ಅನಿಸುತ್ತೆ. ದ್ವಿತಿಯಾರ್ಧ ತುಸು ವೇಗ ಪಡೆದುಕೊಳ್ಳುತ್ತೆ. ಸರಳವಾದ ಪ್ರೀತಿ ಇದೆ. ಎಮೋಷನಲ್ ಜರ್ನಿಯ ಜೊತೆ ಬಾಂಧವ್ಯದ ಬೆಸುಗೆ ನೋಡುಗರಲ್ಲಿ ಖುಷಿ ಕೊಡುತ್ತೆ. ಆ ಕಾಲಘಟ್ಟದ ಕಥೆಯನ್ನು ದೃಶ್ಯಕ್ಕಿಳಿಸಿರುವ ಹರಸಾಹಸ ಕಾಣುತ್ತೆ. ಯಥಾವತ್ ಕಾದಂಬರಿಯೊಳಗಿನ ಕಥೆಯನ್ನು ರೂಪಕವಾಗಿಸುವುದು ಕಷ್ಟದ ಕೆಲಸನಾ ಅನ್ನುವ ಪ್ರಶ್ನೆ ಮೂಡುತ್ತೆ. ಕೆಲವೆಡೆ ಅನಗತ್ಯ ದೃಶ್ಯಗಳು ಬೇಕಿತ್ತಾ ಅನಿಸುತ್ತವೆ. ಉಳಿದಂತೆ ಗಂಡ ಹೆಂಡತಿಯ ಅನ್ಯೋನ್ಯತೆ, ಸಂಬಂಧಗಳ ಮೌಲ್ಯ ಇಲ್ಲಿ ಹೈಲೆಟ್.

ಆರಂಭದಲ್ಲಿ ಸಿನಿಮಾ ನಿಧಾನ ಅನ್ನುವುದು ಬಿಟ್ಟರೆ, ಅಲ್ಲಲ್ಲಿ ಮನಸ್ಸಿಗೆ ನಾಟುವ ವಿಷಯಗಳಿವೆ. ಆ ಕಾರಣಕ್ಕೆ ಸರಳ ಮತ್ತು ಸುಬ್ಬರಾವ್ ಇಷ್ಟ ಆಗುತ್ತಾರೆ.

ಕಥೆ ಏನು?

ಸುಬ್ಬರಾವ್ ಆಂಗ್ಲ ಪ್ರಾಧ್ಯಾಪಕ. ಅಕ್ಕನ ಮಗಳು ದೇವಿಯಾನಿ ಇದ್ದರೂ, ಸರಳ ಅನ್ನುವ ಸರಳತೆಯ ಹುಡುಗಿ ಮೇಲೆ ಪ್ರೀತಿ. ಕೊನೆಗೆ ಮದ್ವೆ. ಆಮೇಲೆ ಟ್ವಿಸ್ಟು ಒಂದಷ್ಟು ಟೆಸ್ಟು. ಇಲ್ಲಿ ಭಾವುಕ‌ ಸನ್ನಿವೇಶಗಳಿವೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಅಂಶಗಳಿವೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಸುಬ್ಬರಾವ್ ಬದುಕಲ್ಲೊಂದು‌ ಘಟನೆ ನಡೆಯುತ್ತೆ.‌ ಅದೇ ಸಿನಿಮಾದ ಸಸ್ಪೆನ್ಸ್.

ಬದುಕು, ಬಾಂಧವ್ಯ, ಅದಮ್ಯ ಪ್ರೀತಿ, ತೊಳಲಾಟವಿದೆ. ವಿಷಾದ, ವಿನೋದ ಇತ್ಯಾದಿ ಅಂಶಗಳು ನೋಡುಗರಿಗೆ ಹತ್ತಿರವಾಗುತ್ತವೆ.

ಸಿನಿಮಾ ನಿಧಾನ ಎನಿಸಿದಾಗ ‘ರಂಗೋಲಿ ಅಂಗಾಲಿನಲ್ಲೇ ಚಂದ ಮರಿ ಹಾಕಿದೆ’ ಎಂಬ ಹಾಡು ವೇಗವನ್ನು ಹೆಚ್ಚಿಸುತ್ತೆ.

ಎಪ್ಪತ್ತರ ದಶಕದ ಪ್ರೀತಿ, ಕುಟುಂಬ, ಬಾಂಧವ್ಯದ ಚಿತ್ರಣವನ್ನು ಉಣಬಡಿಸಿರುವ ಚಿತ್ರ ಇವತ್ತಿನ ಕಾಲಘಟ್ಟಕ್ಕೆ ರುಚಿಸುತ್ತಾ ಎಂಬ ಪ್ರಶ್ನೆ ಇದ್ದರೆ ಒಮ್ಮೆ ಸಿನಿಮಾ ನೋಡಬಹುದು.

ಇನ್ನು ಹಾಡುಗಳ ಬಗ್ಗೆ ಹೇಳುವುದಾದರೆ ಒಂದು ಹಾಡು ಗುನುಗಬಹುದು. ಇನ್ನು ರೆಟ್ರೋ ಶೈಲಿಯ ಕಥೆಗೆ ಕಾಬೂಲ್ ದ್ರಾಕ್ಷಿ ಕಾಶ್ಮೀರಿ ಕೇಸರಿ ಹಾಡು ರುಚಿಸಲ್ಲ. ಸಂಚಿತ್ ಹೆಗ್ಡೆ ದನಿಯೂ ಹೊಂದಿಕೆ ಆಗಿಲ್ಲ.
ಉಳಿದಂತೆ ತಾಯಿ ಬಳ್ಳಿಗೆ ಹಾಡು ಅರ್ಥಪೂರ್ಣ.

ಯಾರು ಹೇಗೆ?

ಅಜೇಯ್ ರಾವ್ ನಟನೆ ಎಂದಿನಂತೆ ಇದೆ. ಯಾವುದೇ ಬದಲಾವಣೆ ಇಲ್ಲ. ಕೆಲ ದೃಶ್ಯಗಳಲ್ಲಿ ಓವರ್ ಅನಿಸುತ್ತಾರೆ. ಇನ್ನೂ ಚೆನ್ನಾಗಿ ಪಾತ್ರದಲ್ಲಿ ಜೀವಿಸಬಹುದಿತ್ತು. ಮಿಶಾ ನಾರಂಗ್ ಪಾತ್ರಕ್ಕೆ ಮೋಸ ಮಾಡಿಲ್ಲ. ರಂಗಾಯಣ ರಘು ಇರುವಷ್ಟು ಕಾಲ ಭಾವುಕತೆ ಹೆಚ್ಚಿಸುತ್ತಾರೆ. ವಿಜಯ್ ಚೆಂಡೂರ್, ವೀಣಾ ಸುಂದರ್, ರಾಮಕೃಷ್ಣ , ರಘು ರಾಮನಕೊಪ್ಪ ಪಾತ್ರಕ್ಕೆ‌ ಮೋಸ ಮಾಡಿಲ್ಲ.
ಪ್ರದೀಪ್ ಪದ್ಮ ಕುಮಾರ್ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ಸರಳವಾಗಿದೆ. ಸೂರಜ್ ಎಸ್.ವಾಸುದೇವ್ ಸಂಗೀತ ಪೂರಕವಾಗಿದೆ. ಬಸವರಾಜ್ ಅರಸ್ ಕತ್ತರಿ ಪ್ರಯೋಗ ಪರವಾಗಿಲ್ಲ.

Categories
ಸಿನಿ ಸುದ್ದಿ

ಸುಖ ಸಂಸಾರದೊಳ್ ಮಾರ್ನಮಿಯ ಎಮೋಷನಲ್ ಜರ್ನಿ!

ಚಿತ್ರ ವಿಮರ್ಶೆ: ವಿಭ

ಚಿತ್ರ; ಮಾರ್ನಮಿ
ನಿರ್ದೇಶನ: ರಿಶಿತ್ ಶೆಟ್ಟಿ
ನಿರ್ಮಾಣ: ಶಿಲ್ಪ ನಿಶಾಂತ್
ತಾರಾಗಣ: ರಿತ್ವಿಕ್, ಚೈತ್ರಾ ಆಚಾರ್, ಸೋನುಗೌಡ, ಪ್ರಕಾಶ್ ತುಮ್ಮಿನಾಡ್, ಸುಮನ್, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ ಇತರರು.

‘ ನನ್ನ ಮದ್ವೆ ಆಗಿ ಆಯ್ತಾ… ನಾನ್ ನಿಮ್ಮ ಜೊತೆ ಮತ್ತು ನಿಮ್ಮ ಎಲ್ಲ ಕನಸಿನ ಜೊತೆ ಇರ್ತೀನಿ..’

ಈ ಡೈಲಾಗ್ ಬರುವ ಹೊತ್ತಿಗೆ ಅವನ ಹಿಂದೆ ಅವಳು ಸುತ್ತುತ್ತಿರುತ್ತಾಳೆ. ಅವನಿಗೂ ಆಕೆಯ ಮೇಲೆ ಲವ್ ಆಗಿರುತ್ತೆ. ಅದರ ಹಿಂದೆ ಸಾಕಷ್ಟು ಘಟನೆ ನಡೆದು ಹೋಗಿರುತ್ತೆ. ಆ ಘಟನೆಯಲ್ಲಿ ಒಂದಷ್ಟು ತಿರುವುಗಳಿವೆ. ಆ ಟ್ವಿಸ್ಟು ಏನು ಅನ್ನುವ ಕುತೂಹಲ ಇದ್ದರೆ, ಒಮ್ಮೆ ‘ಮಾರ್ನಮಿ’ ಜಾತ್ರೆ ನೋಡಿ ಬರಬಹುದು.

ಇದನ್ನು ಲವ್ ಸ್ಟೋರಿ ಅನ್ನಬೇಕಾ? ಸೆಂಟಿಮೆಂಟ್ ಕಥೆ ಅನ್ನಬೇಕಾ? ರಿವೇಂಜ್ ಸ್ಟೋರಿ ಅಂತ ಹೇಳಬೇಕಾ? ಪ್ರೆಂಡ್ ಶಿಪ್ ಕಥೆ ಅಂದುಕೊಳ್ಳಬೇಕಾ ಒಟ್ಟಾರೆ ಈ ಎಲ್ಲಾ ಅಂಶಗಳ ಜೊತೆಗೊಂದು ಮೀನಿಂಗ್ ಫುಲ್ ಸ್ಟೋರಿ ಇಲ್ಲಿದೆ. ಎಮೋಷನಲ್ ಜರ್ನಿಯ ನೋಟವಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ. ಹಾಗಂತ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗಲ್ಲ. ಇಲ್ಲೂ ಒಂದಷ್ಟು ಏರಿಳಿತಗಳಿವೆ. ಅವೆಲ್ಲವನ್ನು ಅಡ್ಜೆಸ್ಟ್ ಮಾಡಿಕೊಂಡು ನೋಡಿದರೆ ಕನ್ನಡಕ್ಕೆ ಒಂದು ಹೊಸಬಗೆಯ ಚಿತ್ರ ಅನ್ನಬಹುದು.

ಮೊದಲರ್ಧ ಸಿನಿಮಾದ ವೇಗ ಗೊತ್ತಾಗುವುದಿಲ್ಲ. ಅಲ್ಲಿ ಕಥೆ ಕುತೂಹಲದ ಜೊತೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಕಥೆ ಲ್ಯಾಗ್ ಅನಿಸುತ್ತೆ. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ವಿನಾಕಾರಣ ಬೇಡದ ಅಂಶಗಳು ಇವೆ. ಅದನ್ನು ಗಮನಿಸಿದ್ದರೆ ಇನ್ನಷ್ಟು ಸ್ವೀಟ್ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಆದರೆ, ನಿರ್ದೇಶಕರು ಎಲ್ಲವನ್ನೂ ಪರಿಪೂರ್ಣವಾಗಿ ಹೇಳುವ ಧಾವಂತದಲ್ಲಿ ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದಾರೆ. ಅಷ್ಟೇ ವಿಷಯವನ್ನು ಕಡಿಮೆ ಅವಧಿಯಲ್ಲೂ ಅರ್ಥ ಮಾಡಿಸಬಹುದಿತ್ತು. ಉಳಿದಂತೆ ಸಿನಿಮಾ ಕರಾವಳಿಯ ಸೊಬಗು ಮತ್ತು ಸೊಗಡನ್ನು ಹೊಂದಿದೆ. ಮಂಗಳೂರು ಸೀಮೆಯ ಭಾಷೆ ಖುಷಿ ಕೊಡುತ್ತೆ. ಜೊತೆಗೆ ಕಟ್ಟಿಕೊಟ್ಟಿರುವ ಪರಿಸರ ಸಿನಿಮಾದ ಅಂದ ಹೆಚ್ಚಿಸಿದೆ.

ಮೇಕಿಂಗ್ ವಿಷಯಕ್ಕೆ ಬಂದರೆ, ಅಚ್ಚುಕಟ್ಟಾಗಿದೆ. ಎಲ್ಲೂ ವೈಭವೀಕರಿಸಿಲ್ಲ. ಅಲ್ಲಿನ ಆಚಾರ ವಿಚಾರ, ಭಾಗದ ಕಲ್ಚರ್ ಎಲ್ಲವನ್ನೂ ಅರ್ಥಪೂರ್ಣಗೊಳಿಸಿದೆ. ವಿಶೇಷ ಅಂದರೆ ಇಲ್ಲಿ ಬಹುತೇಕ ಕರಾವಳಿ ಭಾಗದ ಸ್ಥಳೀಯ ಕಲಾವಿದರ ಸ್ಪರ್ಶ ಚಿತ್ರಕ್ಕೊಂದು ಮೆರಗು ಎನ್ನಬಹುದು.

ಇನ್ನು, ಸಿನಿಮಾದ ಅವಧಿ ತುಸು ಹೆಚ್ಚಾಯ್ತು ಅನ್ನುವುದು ಬಿಟ್ಟರೆ, ಉಳಿದಂತೆ ಇದೊಂದು ಭಾವನಾತ್ಮಕ ಚಿತ್ರ. ತಾಯಿ ಮಗನ ಸೆಂಟಿಮೆಂಟ್, ಗಂಡ ಹೆಂಡತಿಯ ಬಾಂಧವ್ಯ, ನಂಬಿಕೆ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಆ ಕಾರಣಕ್ಕೆ ಸಿನಿಮಾ ರುಚಿಸುತ್ತೆ.

ಕಥೆ ಏನು?

ಅವನಿಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅವಳಿಗೆ ಮಗನೇ ಪ್ರಪಂಚ. ಮಗ ಖಾಯಿಲೆ ಬಿದ್ದಾಗ, ಅಮ್ಮ ದೇವಿಗೆ ಹರಕೆ ಹೊತ್ತು, ಮಗ ಹುಷಾರಾದರೆ ಮಗನ ಕೈಲಿ ಹುಲಿವೇಷ ಹಾಕಿಸಿ ಕುಣಿಸಿ ಹರಕೆ ತೀರಿಸಿತ್ತೇನೆ ಅಂತಾಳೆ. ಅದರಂತೆ ಹರಕೆ ತೀರುತ್ತೆ. ಅತ್ತ ಅಮ್ಮನೂ ಭಯಾನಕ ಖಾಯಿಲೆಗೆ ಬಿದ್ದಾಗ, ಅಮ್ಮ ಹುಷಾರಾದರೆ, ಹುಲಿ ವೇಷ ಹಾಕಿ ಕುಣಿದು ಹರಕೆ ತೀರಿಸುವುದಾಗಿ ಹೇಳುತ್ತಾನೆ. ಅಲ್ಲಿ ಅವನ ಹರಕೆ ಫಲಿಸುತ್ತಾ ಅನ್ನೋದು ಸಸ್ಪೆನ್ಸ್.

ಈ ಮಧ್ಯೆ ಪ್ರೀತಿ. ಆ ಪ್ರೀತಿ ಪಡೆದ ಮೇಲೆ ಆಗುವ ನೋವು. ಒಂದಷ್ಟು ಕೆಟ್ಟ ವ್ಯಕ್ತಿತ್ವದ ಜೊತೆಗಿನ ಗುದ್ದಾಟ. ಇವೆಲ್ಲದರ ಜೊತೆ ದ್ವೇಷಗುಣ ಹೆಚ್ಚಾಗಿ ಭೀಕರ ಘಟನೆಗೆ ಕೆಲ ಸನ್ನಿವೇಶ ಸಾಕ್ಷಿಯಾಗುತ್ತೆ. ಅದೇ ಸಿನಿಮಾದ ತಿರುವು. ಕ್ಲೈಮ್ಯಾಕ್ಸ್ ಸಿನಿಮಾದ ವಿಶೇಷತೆ ಹೊಂದಿದೆ. ಇಡೀ ಸಿನಿಮಾದಲ್ಲಿ ಆವರಿಸಿರೋದು ನಾಯಕ, ನಾಯಕಿಯ ವಿಶೇಷ ಪಾತ್ರ. ಅದು ಹೇಗೆ ವರ್ಕೌಟ್ ಆಗಿದೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು.

ಇಲ್ಲಿ ಮಾರ್ನಮಿಗೆ ಹುಲಿ ವೇಷ ಹಾಕಿ ಹರಕೆ ತೀರಿಸುವ ದೃಶ್ಯ ವೈಭವ ಚೆನ್ನಾಗಿದೆ. ನೈಜತೆಗೆ ಹತ್ತಿರವಾಗುವ ದೃಶ್ಯಗಳು ಇಲ್ಲಿವೆ. ಒಂದು ಪ್ರಾಂತ್ಯದಲ್ಲಿ ಸ್ಥಳೀಯವಾಗಿ ನಡೆಯುವ ಕೆಲ ಘಟನೆಗಳು ಮನಸ್ಸಿಗೆ ಎಷ್ಟೊಂದು ಘಾಸಿ ಮಾಡುತ್ತವೆ ಎನ್ನುವುದಕ್ಕೆ
ಮಾರ್ನಮಿ ಕಥೆ ಸಾಕ್ಷಿ. ಆ ಕಾರಣಕ್ಕೆ ಸಿನಿಮಾವನ್ನು ನೋಡಬಹುದು.

ಯಾರು ಹೇಗೆ?

ರಿತ್ವಿಕ್ ಇಡೀ ಚಿತ್ರ ಆವರಿಸಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಮುಗ್ಧ ಹುಡುಗನಾಗಿ, ತಂಟೆಗೆ ಬಂದವರನ್ನು ಹಿಗ್ಗಾಮುಗ್ಗ ಚಚ್ಚುವ ಯುವಕನಾಗಿ, ಪ್ರೇಮಿಯಾಗಿ, ತಾಯಿಹೆ ಒಳ್ಳೇ ಮಗನಾಗಿ, ಗೆಳೆಯನಾಗಿ, ಗಂಡನಾಗಿ ಗಮನ ಸೆಳೆದಿದ್ದಾರೆ‌. ಫೈಟ್ ಸೀನ್ ನಲ್ಲಿ ಶಿಳ್ಳೆ ಗಿಟ್ಟಿಸುತ್ತಾರೆ. ನಟನೆಯಲ್ಲೂ ಹಿಂದೆ ಬಿದ್ದಿಲ್ಲ. ಬಾಡಿ ಲಾಂಗ್ವೇಜ್, ಡೈಲಾಗ್ ಡಿಲವರಿ ಮೂಲಕ ಇಷ್ಟ ಆಗುತ್ತಾರೆ.
ಚೈತ್ರಾ ಆಚಾರ್, ಪಾತ್ರವನ್ನು ಜೀವಿಸಿದ್ದಾರೆ. ಸೋನುಗೌಡ ಅಮ್ಮನಾಗಿ ಗಮನ ಸೆಳೆಯುತ್ತಾರೆ. ಪ್ರಕಾಶ್ ತುಮ್ಮಿನಾಡ್ ಇಲ್ಲಿ ಗಂಭೀರ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಸುಮನ್, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ ಇತರರು ಪಾತ್ರಗಳಿಗೆ ಮೋಸ ಮಾಡಿಲ್ಲ.
ಚರಣ್ ರಾಜ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಪೂರಕವಾಗಿದೆ.
ಶಿವಸೇನ ಕ್ಯಾಮರಾ ಕೈ ಚಳಕ ಮಾರ್ನಮಿಯ ಅಂದ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ಕೊಲೆಗಡುಕ ರಾಕ್ಷಸನ ಬೆನ್ನತ್ತುವ ಕುತೂಹಲ…

ವೆಬ್‌ಸಿರೀಸ್‌ ವಿಮರ್ಶೆ

ವೆಬ್‌ಸಿರೀಸ್:‌ ರಾಕ್ಷಸ
ನಿರ್ದೇಶನ ಸುಹಾನ್‌ ಪ್ರಸಾದ್‌
ನಿರ್ಮಾಣ: ತರುಣ್‌ ಸುಧೀರ್‌
ತಾರಾಗಣ: ವಿಜಯ ರಾಘವೇಂದ್ರ, ಮಯೂರಿ, ಅಭಿಜಿತ್‌,‌ ಜಹಾಗೀರ್, ಅಪ್ಪಣ್ಣ, ಅವಿನಾಶ್‌ ಇತರರು.

ಅದು ಉತ್ತರ ಕರ್ನಾಟಕದ ಸವದತ್ತಿ. ಆ ಊರಲ್ಲಿ ಒಂದಲ್ಲ, ಎರಡಲ್ಲ, ಮೂರಲ್ಲ ಒಂದಷ್ಟು ಸಾಲು ಸಾಲು ಜನರ ಕಣ್ಮರೆ. ಆದರೆ, ಅಲ್ಲಿ ಹರಿಯುವ ನದಿಯೊಂದರಲ್ಲಿ ಒಂದು ಮೊಸಳೆಯೇ ಜನರನ್ನು ತಿಂದು ಹಾಕುತ್ತಿದೆ ಅನ್ನೋ ಅನುಮಾನ. ಆ ಅನುಮಾನಕ್ಕೆ ಆ ನದಿಯ ದಡದಲ್ಲಿ ಸಿಗುವ ಕೈ ತುಂಡು ಕಾರಣ. ಆದರೂ, ಒಂದು ಮೊಸಳೆ ಜನರನ್ನು ತಿಂದು ಹಾಕುತ್ತಿದೆಯೋ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯೋ? ಈ ಪ್ರಶ್ನೆ ಇಟ್ಟುಕೊಂಡು ಇನ್ಸ್‌ಪೆಕ್ಟರ್‌ ಹನುಮಂತು ತನ್ನ ಪೊಲೀಸ್‌ ತಂಡದ ಜೊತೆ ತನಿಖೆ ಶುರುಮಾಡುತ್ತಾನೆ. ಆ ತನಿಖೆಯಲ್ಲಿ ನಿಜವಾಗಿಯೂ ನಡೆದಿದ್ದೇನು? ಈ ಕುತೂಹಲವಿದ್ದರೆ ಒಂದೊಮ್ಮೆ ಈ ವೆಬ್‌ಸರಣಿ ನೋಡಲು ಯಾವುದೇ ಅಡ್ಡಿ ಇಲ್ಲ.

ಕನ್ನಡದಲ್ಲಿ ಇಂತಹ ಪ್ರಯೋಗ ಮಾಡಿರುವ ತಂಡವನ್ನು ಪ್ರೋತ್ಸಾಹಿಸಿ, ಚೆಂದದ ವೇದಿಕೆ ಕಲ್ಪಿಸಿ ಕೊಟ್ಟಿರುವ ಜೀ5 ಕನ್ನಡಿಗರಿಗೊಂದು ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಜಾನರ್‌ನ ಸರಣಿ ನೀಡಿದೆ. ಇದೊಂದು ಕುತೂಹಲ ಕೆರಳಿಸುವ ಕಥೆ. ಜೊತೆಗೆ ಮುಂದೇನಾಗುತ್ತೆ ಅನ್ನೋ ಪ್ರಶ್ನೆ. ಇವುಗಳ ಜೊತೆ ಅಲ್ಲಲ್ಲಿ ಬರುವ ಟ್ವಿಸ್ಟ್.‌ ಎಲ್ಲಕ್ಕಿಂತಲೂ ಹೆಚ್ಚಾಗಿ ಇದೇ ಮೊದಲ ಸಲ ವೆಬ್‌ ಸರಣಿಯಲ್ಲಲಿ ಉತ್ತರ ಕರ್ನಾಟಕದ ಭಾಷೆ ಬಳಸಿರುವುದು. ಇಡೀ ಕಥೆ ಸವದತ್ತಿಯಲ್ಲೇ ನಡೆಯುವುದರಿಂದ ಅಲ್ಲಿನ ಸೊಗಡು, ಸೊಬಗು, ಆಚಾರ-ವಿಚಾರಗಳೆಲ್ಲವೂ ಈ ಸರಣಿಗೊಂದು ಬಲ ಕೊಟ್ಟಿವೆ. ಒಂದು‌ ಸೈಕಲಾಜಿಲ್‌ ಕ್ರೈಂ ಥ್ರಿಲ್ಲರ್ ಹೇಗೆಲ್ಲಾ ಇರಬೇಕೋ, ಎಷ್ಟೆಲ್ಲಾ ಕುತೂಹಲ ಕೆರಳಿಸಬೇಕೋ ಆ ಎಲ್ಲಾ ಅಂಶಗಳು ಇಲ್ಲಿವೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ್ದು ನಿರ್ದೇಶಕರ ಜಾಣತನ. ಜನರ ಕಣ್ಮರೆ ಮತ್ತು ಮೊಸಳೆ ಇಟ್ಟುಕೊಂಡು ಕುತೂಹಲ ಮೂಡಿಸುವ‌ ನಿರೂಪಣೆಯೊಂದಿಗೆ ಹೆಣೆದಿರುವ ಕಥೆ ನೋಡಿಸಿಕೊಂಡು ಹೋಗುತ್ತೆ. ವೆಬ್‌ಸೀರಿಸ್‌ ಕೂಡ ಯಾವುದೇ ಸಿನಿಮಾಗಿಂತಲೂ ಮೇಕಿಂಗ್‌ನಲ್ಲಿ ಕಡಿಮೆ ಇಲ್ಲ. ಅಷ್ಟೊಂದು ಅದ್ಭುತವಾಗಿ ಸರಣಿ ಮೂಡಿಬಂದಿದೆ. ಕಥೆ ಬಗ್ಗೆ ಹೇಳುವುದಾದರೆ, ಮಲಪ್ರಭಾ ನದಿ ತೀರದ ನಿಗೂಢತೆಯ ಅಚ್ಚರಿಯ ವಿಷಯಗಳು ಇಲ್ಲಿ ಹೈಲೆಟ್.‌ ಮೊಸಳೆಯೊಂದರ ದಾಳಿ ಸುತ್ತ ಈ ಕಥೆ ಹೇಳಲಾಗಿದೆ. ಕಣ್ಮರೆ ಆಗುವ ಜನರನ್ನು ಯಾರಾದರೂ ಕೊಲೆ ಮಾಡುತ್ತಿದ್ದಾರೋ ಅಥವಾ ನದಿಯ ಹಿನ್ನೀರಿನಲ್ಲಿರುವ ಮೊಸಳೆಯ ದಾಳಿಯೋ ಅನ್ನೋದರ ಕುತೂಹಲಕರ ಸಂಗತಿ ನೋಡುಗರನ್ನು ಸೀಟಿನಂಚಿಗೆ ತಂದುಕೂರಿಸುತ್ತೆ. ಈ ವಿಷಯದಲ್ಲಿ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕತೆ ಎನಿಸುತ್ತೆ.

ಒಂದು ಕಡೆ ಮೊಸಳೆ ದಾಳಿ ಮಾಡುತ್ತಿದೆಯೋ, ಯಾರದ್ದಾದರೂ ಕೈವಾಡವಿದೆಯೋ ಅನ್ನೋದರ ಸುತ್ತ ತನಿಖೆ ನಡೆಸುವ ಪೊಲೀಸ್‌ ಅಧಿಕಾರಿ. ಇನ್ನೊಂದು ಕಡೆ ಆ ಅಧಿಕಾರಿಯ ಹೆಂಡತಿ ಹೆರಿಗೆ ವೇಳೆಯೂ ಆಸ್ಪತ್ರೆಯಲ್ಲಿರದೆ ಪ್ರಾಮಾಣಿಕವಾಗಿ ಕೆಲಸಕ್ಕೆ ಹೋಗುವ ಸಂದರ್ಭ. ಇವೆಲ್ಲದರ ನಡುವೆ ಬರುವ ಒಂದಷ್ಟು ತಿರುವುಗಳು ವೆಬ್‌ಸಿರೀಸ್‌ನ ವೇಗಕ್ಕೆ ಹೆಗಲು ಕೊಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿ ಆ ಭಾಷೆ ಮತ್ತು ಅಲ್ಲಿನ ಪರಿಸರ ರುಚಿಸುತ್ತಾ ಹೋಗುತ್ತೆ. ಒಂದು ಕಡೆ ಥ್ರಿಲ್ಲಿಂಗ್‌ ಎಪಿಸೋಡ್.‌ ಇನ್ನೊಂದು ಕಡೆ ಎಮೋಷನಲ್‌ ಕಂಟೆಂಟ್‌ ಈ ಎರಡರ ನಡುವೆ ಅಲ್ಲಲ್ಲಿ ಬರುವ ಹಾಸ್ಯ ಸನ್ನಿವೇಶಗಳು ಸರಣಿಯ ತೂಕವನ್ನು ಹೆಚ್ಚಿಸಿವೆ. ಪ್ರತಿ ಎಪಿಸೋಡ್‌ ಕೂಡ ಮುಂದಿನ ಎಪಿಸೋಡ್‌ ನೋಡಲೇಬೇಕೆನ್ನುವ ಕುತೂಹಲ ಕೆರಳಿಸುವುದು ನಿಜ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥೆಗಳನ್ನು ಇಷ್ಟಪಡುವ ವರ್ಗಕ್ಕೆ ರಾಕ್ಷಸ ಇಷ್ಟವಾಗುತ್ತೆ ಅಂತ ಮುಲಾಜಿಲ್ಲದೆ ಹೇಳಬಹುದು.

ಇನ್ನು, ಇದೇ ಮೊದಲ ಸಲ ವಿಜಯ್‌ ರಾಘವೇಂದ್ರ ಅವರು ವೆಬ್‌ಸಿರೀಸ್‌ನಲ್ಲಿ ನಟಿಸಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿ ಒಂದು ಕಡೆ ಹೆಂಡತಿಯನ್ನು ನೋಡಿಕೊಳ್ಳುವ ಜವಾಬ್ದಾರಿ. ಮತ್ತೊಂದು ಕಡೆ ಇಲಾಖೆಯಲ್ಲಿನ ಒತ್ತಡದ ಕೆಲಸ ನಡುವೆ ಹೇಗೆಲ್ಲಾ ಒದ್ದಾಡುತ್ತಾನೆ ಅನ್ನುವ ಸನ್ನಿವೇಶವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಉತ್ತರ ಕರ್ನಾಟಕದ ಭಾಷೆ. ಅವರ ನೈಜ ಅಭಿನಯ ಮೂಲಕ ನೋಡುಗರಲ್ಲಿ ಇನ್ನಷ್ಟು ಹತ್ತಿರವಾಗುತ್ತಾರೆ. ಮಯೂರಿ ಎಮೋಷನಲ್‌ ಆಗಿ ಕನೆಕ್ಟ್‌ ಆಗುವಂತಹ ಪಾತ್ರದಲ್ಲಿ ಮಿಂಚಿದ್ದಾರೆ. ಅಭಿಜಿತ್‌ ಪೊಲೀಸ್‌ ಅಧಿಕಾರಿಯಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಜಹಾಗೀರ್‌, ಅಪ್ಪಣ್ಣ ಇತರರು ಪಾತ್ರಗಳಿಗೆ ಬಲ ಕೊಟ್ಟಿದ್ದಾರೆ. ಈ ವೆಬ್‌ಸರಣಿಯ ವೇಗಕ್ಕೆ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಿದೆ. ಛಾಯಾಗ್ರಹಣ ರಾಕ್ಷಸನನ್ನು ಅಂದಗಾಣಿಸಿದೆ.

error: Content is protected !!