‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ಈಗ ಸಿಸಿಬಿ ಪೊಲೀಸ್
‘ರಾಮಾ ರಾಮಾ ರೇ’ ಚಿತ್ರದ ಖ್ಯಾತಿಯ ನಟ ನಟರಾಜ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ.’ ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ನಂತರದ ಸಣ್ಣ ಗ್ಯಾಪ್ ಬಳಿಕ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಸಿಸಿಬಿ ಪೋಲಿಸ್ ಆಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಸುಧೀರ್ ಶಾನ್ ಬೋಗ್ ನಿರ್ದೇಶನದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟರಾಜ್, ಮಫ್ತಿಯಲ್ಲಿರುವ ಸಿಸಿಬಿ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಮುಗಿದು ಹೋಗಿದೆ. ಇದಕ್ಕಾಗಿಯೇ ಚಿತ್ರ ತಂಡ ಮಂಗಳೂರು, ಮಲ್ಪೆ, ಮರವಂತೆ ಬೀಚ್ ಸುತ್ತು ಹಾಕಿ ಬಂದಿದೆ. ಒಂದೆರೆಡು ದಿನ ಬೆಂಗಳೂರಿನಲ್ಲೂ ಶೂಟಿಂಗ್ ನಡೆದಿದೆ. ಈ ಹಂತದಲ್ಲಿ ನಟರಾಜ್ ಅವರ ಪಾತ್ರದ ಗೆಟಪ್ ರಿವೀಲ್ ಆಗುವ ಮೂಲಕ ಸುಧೀರ್ ಶಾನ್ ಬೋಗ್ ನಿರ್ದೇಶನದ ಹೊಸ ಸಿನಿಮಾ ವಿಚಾರ ಬಹಿರಂಗಗೊಂಡಿದೆ.
“ಅನಂತು ವರ್ಸಸ್ ನುಸ್ರತ್ʼ ಚಿತ್ರದ ನಂತರ ನಿರ್ದೇಶಕ ಸುಧೀರ್ ಶಾನ್ ಬೋಗ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಸೆಕ್ರೆಡ್ ವುಡ್ಸ್ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿದ್ದು, ನಟರಾಜ್ ಹುಳಿಯಾರ್ ಅವರ ಸಣ್ಷಕತೆ ಆಧರಿಸಿ ಗೌತಮ್ ಜೋತ್ಸಾ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ ಹಾಗೂ ಸುನಾದ್ ಗೌತಮ್ ಸಂಗೀತ ಸೇರಿದಂತೆ ಅನುಭವಿ ತಂತ್ರಜ್ಞರನ್ನೇ ಚಿತ್ರ ತಂಡ ಆಯ್ಕೆ ಮಾಡಿಕೊಂಡಿದೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ನಟರಾಜ್ ಜತೆಗೆ ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್, ಕೃತಿಕಾ ರವೀಂದ್ರ , ಸಂಪತ್ ಮೈತ್ರಿಯಾ, ಮಠ ಚಿತ್ರದ ಖ್ಯಾತಿಯ ಶಶಿಧರ್ ಭಟ್ ಹಾಗೂ ಮೋಹನ್ ಶೆಣೈ ಸೇರಿದಂತೆ ದೊಡ್ಡ ತಂಡವೆ ಇದೆ. ಒಟ್ಟಿನಲ್ಲಿ ಒಂದೊಳ್ಳೆ ಟೀಮ್ ಮೂಲಕ ಅಷ್ಟೇ ಒಳ್ಳೆಯ ಸಿನಿಮಾ ಮಾಡುವ ಕಾತರದಲ್ಲಿದೆ ಚಿತ್ರತಂಡ. ಈ ತಂಡದೊಂದೊಗೆ ನಟರಾಜ್ ಇದೇ ಮೊದಲು ಪೊಲೀಸ್ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದ ಹಾಗೆ ಚಿತ್ರದಲ್ಲಿ ಅವರ ಪಾತ್ರದ ಹೆಸರು ಜಯರಾಮ್.
ನಾನಿಲ್ಲಿ ಪೊಲೀಸ್ ಇನ್ಸ್ ಸ್ಪೆಕ್ಟರ್. ಹೆಸರು ಜಯರಾಮ್ ಅಂತ. ಆತ ಸಿಟಿ ಕ್ರೈಮ್ ಬ್ರ್ಯಾಂಚ್ ನಲ್ಲಿ ಕೆಲಸ ಮಾಡುವ ಅಧಿಕಾರಿ. ಹಾಗಂತ ಆತ ಎಂದಿಗೂ ಪೊಲೀಸ್ ಡ್ರೆಸ್ ಹಾಕಿಕೊಂಡವನಲ್ಲ. ಆತನದ್ದು ಮಫ್ತಿ ನಲ್ಲಿರುವ ಪೊಲೀಸ್. ಒಂಥರ ಅಂಡರ್‌ಕಾಪ್. ಒಂದು ಕೊಲೆ ಕೇಸಿನ ತನಿಖೆಯಲ್ಲಿ ಆತನ ಪಾತ್ರ ಹೇಗಿರುತ್ತೆ, ಆತನ ವರ್ಕ್ ಶೈಲಿ ಎಂಥದ್ದು, ಆ ಕೊಲೆ ಕೇಸಿನ ಹಿಂದಿನ ಜಾಡು ಎಂಥದ್ದು ಎನ್ನುವುದೆಲ್ಲ ಚಿತ್ರದ ಕತೆಯೊಳಗಿನ ಸಸ್ಪೆನ್ಸ್ ಸಂಗತಿ. ತುಂಬಾ ಇಂಟೆರೆಸ್ಟಿಂಗ್ ಆಗಿರುವ ಕತೆ ಇದು. ಮೇಲ್ನೊಟಕ್ಕೆ ಇದಿಷ್ಟೇ ಇರಬಹುದು ಅಂತೆನಿಸಿದರೂ, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಸಬ್ಜೆಕ್ಟ್ ನಲ್ಲೂ ತುಂಬಾ ಹೊಸತಾದ ವಿಚಾರಗಳು ಇಲ್ಲಿವೆ. ಅವೆಲ್ಲ ಕನ್ನಡ ಪ್ರೇಕ್ಷಕರಿಗೆ ನಿಜಕ್ಕೂ ಹೊಸತಾದ, ಇಂಟೆರೆಸ್ಟಿಂಗ್ ಹುಟ್ಟಿಸುವ ವಿಷಯಗಳೇ . ನಾನು ಕೂಡ ಇಂಪ್ರೆಸ್ ಆಗಿದ್ದೇ ಈ ಕಂಟೆಂಟ್ ಕಾರಣದಿಂದಲೇ.
ಕಳ್ಬೆಟ್ಟದ ದರೋಡೆಕೋರರು ಚಿತ್ರದ ನಂತರ ಹೊಸ ಪಾತ್ರಗಳಿಗೆ ತಮ್ಮನ್ನು ತಾವು ರೆಡಿ ಮಾಡಿಕೊಳ್ಳುವಾಗ ನಟರಾಜ್, ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದರು. ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದರು. ಅವೆಲ್ಲವುದರ ನಡುವೆ ಒಂದೆರೆಡು ಸಿನಿಮಾಗಳು ಮಾತುಕತೆಯಲ್ಲಿವೆ ಅಂತಲೂ ಹೇಳಿದ್ದರು. ಆದರೆ ಅವ್ಯಾವು ಅಂತ ಹೇಳಿರಲಿಲ್ಲ. ಆಗಲೇ ಫಿಕ್ಸ್ ಆಗಿದ್ದು ಈ ಚಿತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಸಿದ್ದತೆ ಇದು. ಈ ಪಾತ್ರಕ್ಕೆ ಹೇಗೆ ಸೆಲೆಕ್ಟ್ ಆಗಿದ್ದು ಎನ್ನುವುದಕ್ಕೆ ನಟರಾಜ್ ಹೇಳಿವುದು ಇದಿಷ್ಟು ;
ʼ ನಾನು ಈ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದಕ್ಕೆ ಕಾರಣ ಭಾಗ್ಯರಾಜ್ ಚಿತ್ರದಲ್ಲಿನ ನನ್ನ ಪಾತ್ರ. ಅಲ್ಲೊಂದು ನೆಗೆಟಿವ್ ರೂಲ್ ಮಾಡಿದ್ದೆ. ನಂಗೆ ತುಂಬಾ ಖುಷಿ ಕೊಟ್ಟ ಪಾತ್ರ ಅದು. ನಿರ್ದೇಶಕ ಸುಧೀರ್ ಅವರು ಆ ಪಾತ್ರ ನೋಡಿದ್ದರಂತೆ. ಆ ಪಾತ್ರ ಅವರಿಗೆ ತುಂಬಾ ಹಿಡಿಸಿದ್ದರಿಂದಲೇ ಈ ಸಿನಿಮಾಕ್ಕೆ ಅವರು ನನ್ನನ್ನು ಅಪ್ರೋಚ್ ಮಾಡಿದ್ದು. ಆರಂಭದಲ್ಲಿ ಪಾತ್ರದ ಬಗ್ಗೆ ಹೇಳಿದ್ದರು. ಆದರೆ ಗೆಟಪ್ ಹೇಗಿರುತ್ತೋ ಏನೋ ಎನ್ನುವ ಅನುಮಾನ ಅವರಲ್ಲಿತ್ತಂತೆ. ಒಂದಿನ ಭೇಟಿ ಮಾಡಿದಾಗ, ಪಾತ್ರಕ್ಕೆ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ, ಅದೇ ರೀತಿ ನೀವಿದ್ದೀರಿ. ಸೂಪರ್, ಚೆನ್ನಾಗಿದೆ ನಿಮ್ಮ ಗೆಟಪ್ ಅಂದ್ರು. ಅಲ್ಲಿಂದ ಶುರುವಾಯ್ತು ಈ ಜರ್ನಿʼ ಅಂತ ಅಂಡರ್ ಕಾಪ್ ಪೊಲೀಸ್ ಜಯರಾಮ್ ಆದ ಬಗೆಯನ್ನು ವಿವರಿಸಿದರು ನಟ ನಟರಾಜ್.
ಸದ್ಯಕ್ಕೆ ಈ ಚಿತ್ರದಲ್ಲಿ ಬ್ಯುಸಿಯಾಗಿರುವ ನಟರಾಜ್, ಇನ್ನೇರೆಡು ಚಿತ್ರ ಒಪ್ಪಿಕೊಂಡಿದ್ದಾರಂತೆ.