ಈಗಾಗಲೇ ಸಿಂಗಲ್ ಶಾಟ್ ಸಿನಿಮಾಗಳು ಬಂದಿವೆ. ಹಾಗೆಯೇ ಕೆಲವು ಸಿನಿಮಾಗಳ ಸಿಂಗಲ್ ಶಾಟ್ ದೃಶ್ಯಗಳೂ ಸುದ್ದಿಯಾಗಿವೆ. ಈ ಸಿಂಗಲ್ ಶಾಟ್ ಸಂಸ್ಕೃತಿ ಈಗಿನದಲ್ಲ. ಮೊದಲಿನಿಂದಲೂ ಸಿಂಗಲ್ ಶಾಟ್ ಕುರಿತ ಅನೇಕ ವಿಷಯಗಳು ಸುದ್ದಿಯಾಗಿವೆ. ಈಗ ಆ ಸಾಲಿಗೆ ಆಲ್ಬಂ ಸಾಂಗ್ವೊಂದು ಸುದ್ದಿಯಾಗುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಹೌದು, ಆ ಆಲ್ಬಂ ಸಾಂಗ್ಗೆ “ಪಾರಿವಾಳ” ಎಂದು ಹೆಸರಿಡಲಾಗಿದೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ಸಹಾಯಕ ರಾಮ್ ಕಿರಣ್ ಅಂಥದ್ದೊಂದು ಸಾಹಸ ಮಾಡಿದ್ದಾರೆ.
ಸದ್ಯ “ಪಾರಿವಾಳ” ವಿಡಿಯೋ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಈ ವಿಡಿಯೋ ಆಲ್ಬಂ ಸಾಂಗ್ಗೆ ಅಗಸ್ತ್ಯ ಸಂತೋಷ್ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಇನ್ನು, ಈ ಹಾಡಲ್ಲಿ ೫೦ ಮಂದಿ ನೃತ್ಯ ಕಲಾವಿದರು ನಟಿಸಿದ್ದಾರೆ. “ಪಾರಿವಾಳ” ಅಂದಾಕ್ಷಣ, ಅದೊಂದು ಫೀಲ್ ಸಾಂಗ್ ಅನ್ನೋದು ಗೊತ್ತಾಗುತ್ತೆ. ಆ ಫೀಲ್ ಸಾಂಗ್ ಅನ್ನು ತುಂಬಾ ವಿಭಿನ್ನವಾಗಿಯೇ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಾಮ್ಕಿರಣ್, ಸಿಂಗಲ್ ಶಾಟ್ನಲ್ಲೇ ಸಾಂಗ್ ಚಿತ್ರೀಕರಿಸಬೇಕು ಎಂದು ನಿರ್ಧರಿಸಿ, ಕೊನೆಗೆ ತಾವು ಅಂದುಕೊಂಡಂತೆಯೇ ಸಾಂಗ್ ಮಾಡಿದ್ದಾರೆ.
ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಇಡೀ ಸಾಂಗ್ ಚಿತ್ರೀಕರಿಸಲಾಗಿದೆ. ಈ ಒನ್ ಶಾಟ್ ಸಾಂಗ್ನಲ್ಲಿ ರಾಮ್ ಕಿರಣ್ ಜೊತೆ ತೇಜಸ್ವಿನಿ ಶರ್ಮ ನಟಿಸಿದ್ದಾರೆ. “ಆರಂಭದಿಂದಲೂ ನಾಯಕ ತನ್ನ ಪ್ರೀತಿಯನ್ನು ಕಳೆದುಕೊಂಡು ತುಂಬಾನೇ ವ್ಯಥೆಯಲ್ಲೇ ತನ್ನ ಕಥೆ ಜೊತೆ ಪ್ರಿಯತಮೆ ಕುರಿತು ಹೇಳುವುದನ್ನು ಅರ್ಥಪೂರ್ಣವಾಗಿಯೇ ಸೆರೆಹಿಡಿಯಲಾಗಿದೆ.” ಈ ಹಾಡಲ್ಲಿ ನಾಯಕಿ ಕೂಡ ಪಾರಿವಾಳದಂತೆ ಬಂದು ಹೋಗುವುದು ವಿಶೇಷ. ಈ ಹಾಡಿನ ಇನ್ನೊಂದು ವಿಶೇಷ ಅಂದರೆ, ಕನ್ನಡ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಇದೂಂದು ರೀತಿ ಪ್ಯಾನ್ ಇಂಡಿಯಾ ಸಾಂಗ್.
ಈ “ಪಾರಿವಾಳ” ಹಾಡನ್ನು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
“ನಾನು “ಯುವರತ್ನ” ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ರಾಮ್ ಕಿರಣ್ ಬಂದು ನನಗೆ ಈ ಸಾಂಗ್ ಕೇಳಿಸಿದಾಗ, ನನಗೆ ಶಾಕ್ ಆಯಿತು. ಹಾಡು ತುಂಬಾ ಚೆನ್ನಾಗಿದೆ ಅಂದೆ. ನೀವು ಸಾಂಗ್ ಮಾಡಿಕೊಡಬೇಕು ಅಂದಾಗ, ಡೇಟ್ ಸಮಸ್ಯೆ ಅಂದೆ. ಕೊನೆಗೆ ರಾಮ್ ಕಿರಣ್, ಒಂದು ದಿನ ಕಾಲ್ ಮಾಡಿ, ನಾನು ವಿಡಿಯೊ ಆಲ್ಬಂ ಸಾಂಗ್ ಮಾಡುತ್ತಿದ್ದೇನೆ. ಅದು ಒನ್ ಶಾಟ್ ನಲ್ಲಿ ಅಂದರು. ನನಗೆ ಇನ್ನೂ ಗಾಬರಿಯಾಯಿತು. ಹೇಗೆ ಮಾಡುತ್ತಿರಿ? ಅದು ತುಂಬಾ ಕಷ್ಟ ಎಂದೆ. ಆದರೆ, ನನ್ನನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ರಾಮ್ ಕಿರಣ್, ಒಂದೊಂದು ವಿಷಯವನ್ನು ವಿವರಿಸಿದರು. ಆಗ ನನಗೆ ಅನಿಸಿದ್ದು, ಓಹೋ, ಈ ತರಹನೂ ಮಾಡಬಹುದಾ ಅಂತ. ನನ್ನ ಅಸಿಸ್ಟೆಂಟ್ ನಂಬರ್ ಒನ್ ಆಗಬೇಕು, ನಂಬರ್ ೨ ಆಗೋದು ಬೇಡ ಅನ್ನೋದೇ ನನ್ನ ಆಸೆ. ಈ ಹಾಡು ಸಖತ್ ಆಗಿದೆ ಎಂದು ಶಿಷ್ಯನ ಬೆನ್ನು ತಟ್ಟಿದರು ಚಿನ್ನಿ ಪ್ರಕಾಶ್.
ನಟ ರಾಮ್ ಕಿರಣ್ ಅವರು ತುಂಬಾನೇ ನರ್ವಸ್ ಆಗಿದ್ದರು. ಭಾವುಕರಾಗಿದ್ದ ಅವರು, “ಏನಾದರೂ ಡಿಫರೆಂಟ್ ಮಾಡು ಅಂತ ಮಾಸ್ಟರ್ ಹೇಳಿದ ಮಾತುಗಳು ನನಗೆ ಮಾದರಿಯಾಯಿತು. ಒಂದು ವರ್ಷದಿಂದ ತಯಾರು ಮಾಡುತ್ತಿದ್ದೆ. ಅವರ ಹೆಸರು ಉಳಿಸಬೇಕು. ಅದಕ್ಕೆ ಹೊಸದೇನಾದರೂ ಮಾಡಬೇಕು ಅಂತ ಒನ್ ಶಾಟ್ನಲ್ಲಿ ಈ ಹಾಡು ಮಾಡುವ ಬಗ್ಗೆ ಯೋಚಿಸಿದೆ. ಅಂದುಕೊಂಡಂತೆ ಮಾಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಇನ್ನು, ನನ್ನ ಈ ಹಾಡಿಗೆ ಸಾಥ್ ಕೊಟ್ಟಿದ್ದು ಡಾನ್ಸರ್ಸ್. ರಾತ್ರಿಯಿಂದ ಮುಂಜಾನೆಯವರೆಗೂ ಎನರ್ಜಿಯಲ್ಲಿದ್ದು, ಸಹಕಾರ ನೀಡಿದರು.
ಈ ಹಾಡನ್ನು ಕನ್ನಡ ಮಾತ್ರವಲ್ಲಿ ಬೇರೆ ಭಾಷೆಯಲ್ಲೂ ಮಾಡಬೇಕು ಅಂದುಕೊಂಡೆ. ಹಾಗಾಗಿ ಐದು ಭಾಷೆಯಲ್ಲಿ ತಯಾರು ಮಾಡಿದ್ದೇನೆ” ಎಂದು ವಿವರ ಕೊಟ್ಟರು ರಾಮ್ ಕಿರಣ್.
ನಟಿ ತೇಜಸ್ವಿನಿ ಶರ್ಮಾ ಅವರಿಗೆ ಇದೊಂದು ಹೊಸ ಅನುಭವವಂತೆ. “ರಾಮ್ ಕಿರಣ್ ಅವರು ವಿಡಿಯೋ ಆಲ್ಬಂ ಬಗ್ಗೆ ಹೇಳಿದಾಗ, ಸ್ವಲ್ಪ ಕಷ್ಟ ಎನಿಸಿದರೂ ಓಕೆ ಅಂದೆ, ಕಷ್ಟ ಅಂದುಕೊಂಡಿದ್ದನ್ನು ಸುಲಭವಾಗಿ ಮಾಡಿದೆವು. ಚಿನ್ನಿ ಮಾಸ್ಟರ್ ಅವರ ಪ್ರೋತ್ಸಾಹ, ಡಾನ್ಸರ್ ಗಳ ಶ್ರಮ ಮೆಚ್ಚಲೇಬೇಕು ಎಂಬುದು ತೇಜಸ್ವಿನಿ ಶರ್ಮಾ ಮಾತು. ಇನ್ನು, ಶಶಾಂಕ್ ಶೇಷಗಿರಿ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಅವರು ಈ ಐದು ಭಾಷೆಯಲ್ಲೂ ಹಾಡಿದ್ದಾರೆ ಅನ್ನೋದೇ ವಿಶೇಷ.