ಹೊಸಬರ ಭಜನೆ ಹಾಡಲ್ಲೊಂದು ಪ್ರಣಯ ಗೀತೆ
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ “ಭಜನಾ” ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ಸಂಭ್ರಮಕ್ಕೂ ಉಂಟು ದುಃಖಕ್ಕೂ ಉಂಟು. ಯಾವುದೇ ಕಾರ್ಯಕ್ರಮ, ಹಬ್ಬ, ಜಾತ್ರೆಗಳಿದ್ದರೆ, ಅಲ್ಲಿ ಈ ಭಜನಾ ಮಂಡಳಿ ಸದಸ್ಯರು ಒಂದೊಳ್ಳೆಯ ಕಾರ್ಯಕ್ರಮ ನೀಡುವುದು ಸಹಜ. ಈಗಲೂ ಗ್ರಾಮೀಣ ಭಾಗದಲ್ಲಿ ಅದೊಂದು ಪ್ರಮುಖವಾದ ಕಲಾ ಕಾರ್ಯಕ್ರಮವೆಂದೇ ಹೈಲೈಟ್ ಆಗಿದೆ. ಇಷ್ಟಕ್ಕೂ ಇಲ್ಲೇಕೆ “ಭಜನಾ” ಕುರಿತು ಹೇಳಲಾಗುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು.
ವಿಷಯವಿಷ್ಟೇ, “ಭಜನಾ” ವಿಷಯ ಇಟ್ಟುಕೊಂಡೇ ಇಲ್ಲೊಂದು ಹೊಸಬರ ತಂಡ ಹೀಗೊಂದು ಸಿನಿಮಾ ಮಾಡಿ ಮುಗಿಸಿದೆ. ಆ ಹೊಸ ಸಿನಿಮಾಗೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆ ನೋಡಿದರೆ, ಇದೊಂದು ಭಜನಾ ವಿಷಯಕ್ಕೆ ಸಂಬಂಧಿಸಿದ ಚಿತ್ರ ಇರಬೇಕು ಅಂದುಕೊಂಡರೆ ಆ ಊಹೆ ಖಂಡಿತವಾಗಿಯೂ ತಪ್ಪು. ಹೌದು, ಇಲ್ಲಿ ಭಜನಾ ಅಂಶಗಳಿವೆಯಾದರೂ, ಇಲ್ಲೊಂದು ಹಾಸ್ಯದ ಹೊನಲಿದೆ. ಜೊತೆಗೊಂದು ಗೆಳೆಯರ ಬಳಗದ ಬಾಂಧವ್ಯವಿದೆ. ಇವೆಲ್ಲದರ ಜೊತೆಯಲ್ಲೊಂದು ಪ್ರೀತಿಯ ಪಯಣವೂ ಇದೆ. ಈ ಸಿನಿಮಾ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಈ ಚಿತ್ರದ ಮೂಲಕ ಯತೀಶ್ ನೆಲ್ಕುದ್ರಿ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ರಾಘವೇಂದ್ರ ಕ್ರಿಯೇಟರ್ಸ್ ಅಂಡ್ ಮೂವೀಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಪ್ರಕಾಶ್ ವಾರದ್, ಪ್ರದೀಪ್ ಬಳ್ಳೆಕೆರೆ, ತೇಜಸ್, ಯತೀಶ್ ನೆಲ್ಕುದ್ರಿ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಸಾಮಾನ್ಯವಾಗಿ “ಕಲ್ಲಳ್ಳಿ ಭಜನಾ ಮಂಡಳಿ” ಅಂದಾಕ್ಷಣ, ಒಂದೂರಿನ ಭಜನಾ ಮಂಡಳಿ ಇರಬಹುದು ಎಂಬ ಮಾತು ಕೇಳಿಬರುತ್ತೆ. ಇಂಥದ್ದೊಂದು ಶೀರ್ಷಿಕೆ ಇಡಲು ಕಾರಣ, ಕಲ್ಲಳ್ಳಿ ಎಂಬ ಗ್ರಾಮದಲ್ಲಿ ಭಜನಾ ಮಂಡಳಿ ಸ್ಥಾಪನೆಯ ಉದ್ದೇಶದಿಂದ ಶುರುವಾಗುವ ಕಥೆ ಆಗಿರುವುದರಿಂದ ಚಿತ್ರಕ್ಕೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ಹೆಸರಿಡಲಾಗಿದೆ.
ಹೆಸರೇ ಹೇಳುವಂತೆ, ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಒಂದು ಹಾಸ್ಯಮಯ ಕಥೆ ಇಲ್ಲಿದೆ. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಯತೀಶ್ ನೆಲ್ಕುದ್ರಿ, “ನಾನು ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಅನುಭವಿ ನಿರ್ದೇಶಕರ ಬಳಿ ಒಂದಷ್ಟು ಕಲಿತಿದ್ದೇನೆ. ಆ ಅನುಭವದಿಂದ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಈ ಚಿತ್ರ ನೋಡುಗರಿಗೆ ತಮ್ಮ ಅಕ್ಕ-ಪಕ್ಕದಲ್ಲಿ ನಡೆಯುವ ಕಥೆಯೇನೋ ಎಂಬಂತೆ ಭಾಸವಾಗುತ್ತದೆ. ಆದಷ್ಟು ನೈಜತೆಗೆ ಹತ್ತಿರವಾಗಿರಲಿದೆ.
ಹಳ್ಳಿಯ ಸೊಗಡಿನ ಜೊತೆಗೆ ಮುಗ್ಧತೆ ತುಂಬಿರುವ ಪ್ರೀತಿಯ ಹಾದಿಯಲ್ಲಿ ಚಿತ್ರದ ಕಥೆ ಸಾಗುತ್ತದೆ, ಕಲ್ಲಳ್ಳಿ ಎಂಬ ಹಳ್ಳಿಯಲ್ಲಿ ಭಜನಾ ಮಂಡಳಿಯ ಸ್ಥಾಪನೆಯ ಉದ್ಧೇಶದಿಂದ ಶುರುವಾಗುವ ಕಥೆಯಲ್ಲಿ ಅನೇಕ ಹಾಸ್ಯಮಯ ಪ್ರಸಂಗಗಳಿವೆ. ಇಲ್ಲಿ ಪ್ರೀತಿ, ಗೆಳೆತನ ಇತ್ಯಾದಿ ವಿಷಯಗಳೂ ತುಂಬಿವೆ. ಚಿತ್ರಕ್ಕೆ ಹರೀಶ್ ಕಿಲಗೆರೆ ಕಥೆ ಬರೆದಿದ್ದಾರೆ. ಅವರೊಂದಿಗೆ ನಾನು ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದೇನೆ” ಎಂದು ವಿವರ ಕೊಡುತ್ತಾರೆ ಯತೀಶ್ ನೆಲ್ಕುದ್ರಿ.
ಇನ್ನು, ಈ ಚಿತ್ರದಲ್ಲಿ ತೇಜಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಿರೂಷ ಶೆಟ್ಟಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಿಶಾಂತ್ ಗುಡಿಹಳ್ಳಿ, ಪ್ರದೀಪ್ ಬಳ್ಳೆಕೆರೆ, ಪ್ರಕಾಶ್ ವಾರದ್, “ಕಾಮಿಡಿ ಕಿಲಾಡಿ” ಖ್ಯಾತಿಯ ರವಿ, ಎಸ್ ಮತ್ತು ಮಣಿಕಂಠ ಜೊತೆಗಿದ್ದಾರೆ. “ಭಜನಾ ಮಂಡಳಿಯ” ಮಾಸ್ತರ್ ಆಗಿ ಮನದೀಪ್ ರಾಯ್ ನಟಿಸಿದ್ದಾರೆ. ವೇಣುಗೋಪಾಲ್ ಮತ್ತು ಪ್ರಣಯಮೂರ್ತಿ ಅವರು ಪ್ರಮುಖ ಅಕರ್ಷಣೆ. ಕಿರುತೆರೆಯ “ನಂದಿನಿ” ಧಾರಾವಾಹಿಯ ಭರತ್ ಎಂ.ಜೆ. ಮತ್ತಿತರು ಕಾಣಿಸಿಕೊಂಡಿದ್ದಾರೆ.
ಮಲ್ಲೇಶ್ ವಂದಿಲ್ಲರ್ ಮಾತುಗಳನ್ನು ಪೋಣಿಸಿದ್ದಾರೆ. ವಿನೋದ್ ಕುಮಾರ್ ಅವರು ಚಿತ್ರದ ಗೀತೆಗಳನ್ನು ಬರೆದಿದ್ದಾರೆ. ಸಂದೀಪ್ ಸಂಗೀತ ನೀಡಿದ್ದಾರೆ, “ಕಲ್ಲಳ್ಳಿ ಭಜನಾ ಮಂಡಳಿ” ಎಂಬ ಚಿತ್ರಕ್ಕೆ ಭಜನೆಯ ಹಾಡು ಇಲ್ಲದಿದ್ದರೆ ಹೇಗೆ? ಮೂರು ದಶಕಗಳ ಕಾಲ ಭಜನೆ ಹಾಡುಗಳಲ್ಲಿ ಅನುಭವ ಇರುವ ಬೆಳಗಾವಿಯ ಪರುಶುರಾಮ್ ದೇವಗಾವ್ ಮತ್ತು ತಂಡ ಚಿತ್ರದ ಹಾಡಿಗೆ ಧ್ವನಿಯಾಗಿದೆ.
ಇನ್ನು, ನವೀನ್ ಸಜ್ಜು ಕೂಡ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರಕ್ಕೆ ರಾಮಲಿಂಗಮ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯದಲ್ಲಿ ನಿರತವಾಗಿದೆ. ಎಲ್ಲಾ ಕೆಲಸ ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ.