ಸೈಕಲ್ ಸವಾರಿ: ಇದು ಮಿಡ್ಲ್‌ಕ್ಲಾಸ್ ಹುಡುಗ, ಶ್ರೀಮಂತ ಹುಡುಗಿಯ ಲವ್ ಸ್ಟೋರಿ

ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುದನ್ನು ಸೈಕಲ್ ಸವಾರಿ ಚಿತ್ರದ ಮೂಲಕ ನಿರ್ದೇಶಕ ದೇವು ಕೆ‌.ಅಂಬಿಗ ಅವರು ಹೇಳಹೊರಟಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ವತಿಯಿಂದ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ‌ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೋಹನ್ ಎಸ್. ದೇಸಾಯಿ ಅವರು ಸಂಗೀತದ ಜೊತೆಗೆ ಕ್ಯಾಮೆರಾ ವರ್ಕ್, ಡಿ.ಐ. ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ.

ನ.3ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದೇವು ವಿಜಯಪುರದಲ್ಲಿ ನಮ್ಮದೇ ಸ್ಟುಡಿಯೋ ಆರಂಭಿಸಿ ಒಂದಷ್ಟು ಶಾರ್ಟ್ ಫಿಲಂಗಳನ್ನು ಮಾಡಿರುವೆ. ಸಿನಿಮಾವೊಂದರ ಪೋಸ್ಟ್ ಪ್ರೊಡಕ್ಷನ್ ಕೂಡ ಅದರಲ್ಲೇ ನಡೆದಿದೆ. ಲಾಕ್ ಡೌನ್ ಸಮಯದಲ್ಲಿ 2 ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಈ ಕಥೆ ಬರೆದಿದ್ದೆ. ನಂತರ ಅದು ಸಿನಿಮಾ ಆಯಿತು. ಅಗ ನಮ್ಮಲ್ಲಿದ್ದುದು 5ಲಕ್ಷ ಮಾತ್ರ. ನಂತರ ಸುರೇಶ್ ಶಿವೂರು ಅವರು ನಮ್ಮ ಸಹಾಯಕ್ಕೆ ನಿಂತರು. ಕಡ್ಡಿಹೋಗಿ ದೊಡ್ಡ ಗುಡ್ಡವೇ ಆಯ್ತು‌.
ಚಿತ್ರದಲ್ಲಿ 5 ಹಾಡುಗಳಿದ್ದು ಯಾವುದೂ ಕಥೆಯನ್ನು ಬಿಟ್ಟು ಇಲ್ಲ. ನಂತರ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಲೋಕೇಶ್ ಸವದಿ ಅವರು ಕೈಜೋಡಿಸಿದರು. ಅವರಿಂದಲೇ ಈಗ ಸಿನಿಮಾ ಬಿಡುಗಡೆಯಾಗುತ್ತಿದೆ.

ಶಿವಾಜಿ ಮೆಟಗಾರ್ ಪ್ರತಿ ಹಂತದಲ್ಲೂ ಜೊತೆಗಿದ್ದು ಸಹಕರಿಸಿದರು. ನಾನು ಊರಲ್ಲಿ ಬಾಂಬೆ ಮಿಠಾಯಿ‌ ಮಾರುವ ಬಸು ಎಂಬ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾಹುಕಾರ್ ಮ‌ನೆಯ ಹುಡುಗಿ ಈತನ ಹಿಂದೆ ಬಿದ್ದು‌ ಲವ್ ಮಾಡಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾ ಎಂದರು. ನಾಯಕಿ ದೀಕ್ಷಾ ಬೀಸೆ ಮಾತನಾಡಿ ಮೂಲತಃ ನಾನೊಬ್ಬ ಭರತನಾಟ್ಯ‌ ನೃತ್ಯಗಾರ್ತಿ. ಚಿಕ್ಕ‌ವಯಸಿನಿಂದಲೂ ಕಲಾವಿದೆಯಾಗಬೇಕೆಂಬ ಆಸೆಯಿತ್ತು. ಅದು ಈ ಚಿತ್ರದಿಂದ ಈಡೇರಿದೆ. ಯಾವುದೇ ತರಬೇತಿ ಇಲ್ಲದೆ ಅಭಿನಯಿಸಿದ್ದೇನೆ ಎಂದರು.

ಸಂಗೀತ-ಕ್ಯಾಮೆರಾ ಎರಡನ್ನೂ ನಿಭಾಯಿಸಿರುವ ರೋಹನ್ ದೇಸಾಯಿ ಮಾತನಾಡಿ ಕಡಿಮೆ ಟೆಕ್ನೀಷಿಯನ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಅಕ್ಷನ್, ಮಾಸ್, ಕಾಮಿಡಿ, ಸಸ್ಪೆನ್ಸ್, ಲವ್ ಎಲ್ಲಾ ಥರದ ಅಂಶಗಳು ಚಿತ್ರದಲ್ಲಿವೆ ಎಂದರು. ನಿರ್ಮಾಪಕರಲ್ಲೊಬ್ಬರಾದ ಲೋಕೇಶ್ ಸವದಿ‌ ಮಾತನಾಡಿ ಮೊದಲು ನನಗೆ ಸಿನಿಮಾ ಬಗ್ಗೆ ಅಂಥಾ ಇಂಟರೆಸ್ಟ್ ಇರಲಿಲ್ಲ. ಒಮ್ಮೆ ಶಿವಾಜಿ ಬಂದು ಈ ವಿಚಾರ ಹೇಳಿದರು. ಒಂದು ಐಟಂ ಸಾಂಗನ್ನು 5 ದಿನ ಮಾಡಿದ್ದನ್ನು ನೋಡಿದಾಗ ಚಿತ್ರತಂಡದವರು ಎಷ್ಟು ಎಫರ್ಟ್ ಹಾಕ್ತಾರೆ ಅನ್ನೋದು ಗೊತ್ತಾಯ್ತು ಎಂದು ಹೇಳಿದರು‌.


ವಿಲನ್ ಪಾತ್ರ ಮಾಡಿರುವ ಶಿವಾಜಿ ಮಾತನಾಡಿ ನನ್ನ ಒಂದೇ ಮಾತಿಗೆ ಸ್ನೇಹಿತರೂ ಆದ ಲೋಕೇಶ್ ಹಣ ಹಾಕಲು ಒಪ್ಪಿದರು. ಮರಳುದಂದೆ ನಡೆಸುವ ಖಳನಾಯಕ, ನಾಯಕಿಯ ತಾತನಾಗೂ ಕಾಣಿಸಿಕೊಂಡಿದ್ದೇನೆ ಎಂದರು. ನಾಯಕನ ತಾಯಿ ಪಾತ್ರಧಾರಿ ಗೀತಾ ರಾಘವೇಂದ್ರ, ಎರಡನೇ ನಾಯಕಿ ಕಾವ್ಯ ಚಿತ್ರದ ಕುರಿತು ಮಾತನಾಡಿದರು.

ಬಹುತೇಕ‌ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ನಿರ್ದೇಶಕ ದೇವು ಅವರೇ ಬರೆದಿದ್ದಾರೆ.

Related Posts

error: Content is protected !!