ಮಮತ ರಾಹುತ್ ನಾಯಕಿಯಾಗಿ ನಟಿಸಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ “ತಾರಿಣಿ” ಚಿತ್ರ ಗರ್ಭಿಣಿಯ ಕುರಿತಾದ ಕಥಾಹಂದರ ಹೊಂದಿದೆ. ಈ ಚಿತ್ರದ ಮೊದಲ ನೋಟ(ಫಸ್ಟ್ ಲುಕ್) ಇತ್ತೀಚೆಗೆ ಬಿಡುಗಡೆಯಾಯಿತು. ಸಾಹಿತಿ, ಹೋರಾಟಗಾರ್ತಿ ಬಿ.ಟಿ.ಲಲಿತ ನಾಯಕ್ ಸೇರಿದಂತೆ ಹಲವು ಗಣ್ಯರು “ತಾರಿಣಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
“ತಾರಿಣಿ” ಗರ್ಭಿಣಿ ಹೆಣ್ಣಿನ ಕಥೆಯನ್ನು ಹೊಂದಿರುವ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಈ ಚಿತ್ರದ ವಿಶೇಷವೆಂದರೆ, ನಾಯಕಿ ಮಮತ ರಾಹುತ್ ಅವರು ಗರ್ಭಿಣಿ ಇರುವಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಗರ್ಭಿಣಿ ಕುರಿತಾದ ಚಿತ್ರದಲ್ಲಿ ನಿಜವಾದ ಗರ್ಭಿಣಿಯೇ ನಟಿಸಿದ್ದಾರೆ. ಮಗು ಆದ ನಂತರವೂ ಅಭಿನಯಿಸಿದ್ದಾರೆ. ಅವರಿಗೆ ಅನಂತ ಧನ್ಯವಾದ. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವಿರುವ ಈ ಚಿತ್ರವನ್ನು ಮಮತ ರಾಹುತ್ ಅವರ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೋಡಿ ಹಾರೈಸಿ ಎಂದರು.
ನಾನು ಏಳು ತಿಂಗಳ ಗರ್ಭಿಣಿ ಇದ್ದಾಗ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಕೆಲವು ದಿನಗಳ ಮುಂಚೆಯೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೆ. ಇಂದು ನಾನು ನಿಮ್ಮೆಲ್ಲರಿಗೂ ನನ್ನ ಮಗುವನ್ನು ಪರಿಚಯಿಸುತ್ತಿದ್ದೇನೆ. ನಮ್ಮ ಮೊದಲ ನಿರ್ಮಾಣದ ಚಿತ್ರವಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿತ್ತು. ಚಿತ್ರ ಚೆನ್ನಾಗಿ ಬಂದಿದೆ. ಇಡೀ ತಂಡಕ್ಕೆ ಧನ್ಯವಾದ ಎಂದರು ನಾಯಕಿ ಮಮತಾ ರಾಹುತ್.
ನಮ್ಮ ಮೊದಲ ನಿರ್ಮಾಣದ ಚಿತ್ರವಿದು. ಒಳ್ಳೆಯ ಕಥೆ ನೀಡಿರುವ ನಿರ್ದೇಶಕರಿಗೆ, ಆ ಕಥೆಗೆ ಜೀವ ತುಂಬಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನನ್ನ ಧನ್ಯವಾದ. ಸಮಾಜಕ್ಕೆ ಈ ಚಿತ್ರ ಉತ್ತಮ ಸಂದೇಶ ಕೊಡಲಿದೆ ಎಂದರು ನಿರ್ಮಾಪಕ ಸುರೇಶ್ ಕೊಟ್ಯಾನ್ ಚಿತ್ರಾಪು.
ಚಿತ್ರದ ನಾಯಕ ರೋಹಿತ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು “ತಾರಿಣಿ” ಚಿತ್ರದ ಕುರಿತು ಮಾತನಾಡಿದರು.
“ತಾರಿಣಿ” ಯಾಗಿ ಮಮತ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ.ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.