ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ “ಮಾಫಿಯಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಅರವತ್ತು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಬಹಳ ಮೆಚ್ಚುಗೆಯಾಗಲಿದೆ. “ಮಾಫಿಯಾ” ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಹಾಗೂ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ನಟನೆಯ ಮೂವತ್ತೈದನೇ ಚಿತ್ರವೂ ಹೌದು.
ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿವೆ. ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ಹತ್ತು ದಿನಗಳ ಕಾಲ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಕುಮಾರ್ ಬಿ.
ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.