ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ “ಧೂಮಂ” ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಹನ್ನೆರಡನೇ ಚಿತ್ರ. ಮಲೆಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ಬರಲಿದ್ದು, “ಲೂಸಿಯಾ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.
ಮಲೆಯಾಳಂನ ಹೆಸರಾಂತ ನಟ
ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ(ಸೂರರೈ ಪೊಟ್ರು) ನಾಯಕ- ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು “ಕೆ ಜಿ ಎಫ್” ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಆಗಮಿಸಿ ಶುಭ ಕೋರಿದರು. ಮುಂದಿನ ತಿಂಗಳಿನಿಂದ “ಧೂಮಂ” ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಪ್ರೀತಾ ಜಯರಾಮನ್ ಛಾಯಾಗ್ರಹಣ “ಧೂಮಂ” ಚಿತ್ರಕ್ಕಿದೆ.
ಒಂದರ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಹೊಂಬಾಳೆ ಫಿಲಂಸ್ ಹಾಗೂ ಪ್ರತಿಭಾವಂತ ನಿರ್ದೇಶಕ ಪವನ್ ಕುಮಾರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಚಿತ್ರದ ಪೋಸ್ಟರ್ ಈಗಾಗಲೇ ಕುತೂಹಲ ಹುಟ್ಟಿಸಿದೆ.
“ಧೂಮಂ” ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆಯಿದೆ.