ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣದ, ಶಶಿಕಾಂತ್ ಗಟ್ಟಿ ನಿರ್ದೇಶನದ, ನೈಜಘಟನೆ ಆಧಾರಿತ “ರಾಂಚಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ.
ನಾನು ಐ ಪಿ ಸಿ ಸೆಕ್ಷನ್ 300 ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ನನಗೆ “ರಾಂಚಿ”ಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ, ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ “ರಾಂಚಿ” ಸಿನಿಮಾ ಮಾಡಿದ್ದೇವೆ.
ನಾಯಕ ಪ್ರಭು ಮುಂಡ್ಕರ್ ಕಥೆ ಕೇಳಿ ನಟಿಸಲು ಒಪ್ಪಿದರು. ರುದ್ರಾನಂದ ಹಾಗೂ ಅರುಣ್ ಕುಮಾರ್ ನಿರ್ಮಾಣಕ್ಕೆ ಮುಂದಾದರು. ನೈಜಘಟನೆ ಆಧಾರಿತ ಸಿನಿಮಾವಿದು. “ರಾಂಚಿ”ಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. 2020 ರಲ್ಲೇ ಸೆನ್ಸಾರ್ ಆಗಿತ್ತು. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಿವ್ಯ ಉರುಡಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ಕುರಿತು ನಿರ್ದೇಶಕ ಶಶಿಕಾಂತ್ ಗಟ್ಟಿ ಮಾಹಿತಿ ನೀಡಿದರು.
ಕೋವಿಡ್ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನರ ನಿರೀಕ್ಷೆ ಬೇರೆ ತರಹ ಇದೆ.
” ಕೆ.ಜಿ.ಎಫ್”, “ಚಾರ್ಲಿ”, ” ಕಾಂತಾರ” ದಂತಹ ಚಿತ್ರಗಳ ಗೆಲುವು ಇದಕ್ಕೆ ಸಾಕ್ಷಿ. ನಾನು ಸೈಂಟಿಸ್ಟ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆನಂತರ ಚಿತ್ರರಂಗಕ್ಕೆ ಬಂದೆ. ನಾನು “ಡಬಲ್ ಇಂಜಿನ್” ಚಿತ್ರದಲ್ಲಿ ನಟಿಸಬೇಕಾದರೆ ಶಶಿಕಾಂತ್ ಈ ಚಿತ್ರದ ಕಥೆ ಹೇಳಿದರು. ನನಗೂ ನೈಜಘಟನೆ ಆಧಾರಿತ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆ ಸಮಯದಲ್ಲಿ ಈ ಕಥೆ ಕೇಳಿ, ನಟಿಸಲು ಒಪ್ಪಿದೆ ಎಂದರು ನಟ ಪ್ರಭು ಮುಂಡ್ಕರ್.
ಪ್ರಭು ಅವರ ಮೂಲಕ ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಆರತಿ ನಾಯರ್, ಲಕ್ಷ್ಮಣ್ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.