ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ಬೈರಾಗಿ. ‘ಡಾಲಿ’ ಧನಂಜಯ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡು ಶಿವರಾಜ್ಕುಮಾರ್ ಮತ್ತು ಶರಣ್ ಕಂಠಸಿರಿಯಲ್ಲಿ ಮೂಡಿಬಂದಿರೋದು ವಿಶೇಷ. ‘ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್ ದನಿಗೂಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ‘ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್ ಶಾಟ್’ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ.
‘ರಿದಮ್ ಆಫ್ ಶಿವಪ್ಪ’ ಕಾನ್ಸೆಪ್ಟ್’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ‘ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್’ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ನಖರನಖ’ ಹಾಡಿಗೆ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು.
ಇದೀಗ ‘ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್ ದಾಖಲಾಗಿ ಟ್ರೆಂಡಿಂಗ್’ನಲ್ಲಿದೆ.
ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಮೊದಲಾದವರ ತಾರಾದಂಡೇ ಇದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ಗೆ ಬಂಡವಾಳ ಹೂಡಿದ್ದಾರೆ.