ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಅನೇಕ ಪ್ರತಿಭೆಗಳು ಕಾಲಿಡುತ್ತಲೇ ಇವೆ. ನೂರಾರು ಆಸೆ, ಆಕಾಂಕ್ಷೆ ಹೊತ್ತು ಬಣ್ಣದ ಲೋಕದಲ್ಲಿ ಮಿಂದೆದ್ದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ನಟಿಯಾದವರು ಇಲ್ಲಿ ನಿರ್ಮಾಪಕರಾದ ಉದಾಹರಣೆಗೇನು ಕಮ್ಮಿ ಇಲ್ಲ. ಅಂತಹವರ ಸಾಲಿಗೆ ಈಗ ಯುವ ನಟಿಯೊಬ್ಬರೂ ಸೇರಿದ್ದಾರೆ. ಅವರು ಬೇರಾರೂ ಅಲ್ಲ, ಸಾತ್ವಿಕ. ಈ ಸಾತ್ವಿಕ ಬಗ್ಗೆ ಈಗ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರು ಮೇ. 20 ರಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಖುಷಿಯಲ್ಲಿ ಅವರು ಒಂದಷ್ಟು ಹೊಸ ಹೊಸ ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷೆಗೂ ಜಿಗಿದಿದ್ದಾರೆ.
ನಟಿಯಷ್ಟೇ ಅಲ್ಲ…
ಹೌದು, ಸಾತ್ವಿಕ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈಗಾಗಲೇ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಸಾತ್ವಿಕ, ಆ ಧಾರಾವಾಹಿಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿಯೂ ಕೆಲಸ ಮಾಡಿದ್ದಾರೆ. ಇದಷ್ಟೇ ಅಲ್ಲ, ಸಾತ್ವಿಕ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು, ವಿಶೇಷವೆಂದರೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಿಗೆ ತಮ್ಮ ಅದ್ಭುತ ಮನೆಗಳನ್ನೂ ಇವರು ಚಿತ್ರೀಕರಣಕ್ಕಾಗಿ ನೀಡುತ್ತಿದ್ದಾರೆ. ಹಾಗಾಗಿ ಸಾತ್ವಿಕ ಅಂದರೆ ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಇವರು ಗೊತ್ತಿಲ್ಲವೆಂದವಲ್ಲ. ಸದ್ಯದ ಮಟ್ಟಿಗೆ ಸಾತ್ವಿಕ ಎಲ್ಲಾ ವಿಭಾಗಗಳಲ್ಲೂ ಗುರುತಿಸಿಕೊಂಡಿದ್ದಾರೆ.
ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ, ಕಲರ್ಸ್ ಕನ್ನಡದ ಕನ್ಯಾಕುಮಾರಿ ಹಾಗು ಸುವರ್ಣ ಚಾನೆಲ್ ನ ಬೆಟ್ಟದ ಹೂ ಧಾರಾವಾಹಿಗಳಿಗೆ ಸಾತ್ವಿಕ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಅವರ ಕೆಲಸ ಸೀರಿಯಲ್ ನಲ್ಲಿ ಹೈಲೈಟ್.
ಕಿರುತೆರೆ ಟು ಬೆಳ್ಳಿತೆರೆ…
ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ಹಲವು ಸಿನಿಮಾಗಳಿಗೂ ಸಾತ್ವಿಕ ಕಾಸ್ಟ್ಯೂಮ್ ಡಿಸೈನರ್ ಆಗಿ, ಸ್ಟೈಲಿಶ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಅವರು ಬೆಳ್ಳಿತೆರೆಯಲ್ಲೂ ಕಾಣಿಕೊಂಡಿದ್ದಾರೆ. ಮಾರಿಗೋಲ್ಡ್ ಚಿತ್ರದಲ್ಲಿ ನಟಿಸಿರುವ ಸಾತ್ವಿಕ, ಪೃಥ್ವಿ ಅಂಬರ್ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.
ಜೊತೆಯಲ್ಲಿ ತೆರೆಯ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ನಟ ಭಯಂಕರ ಮತ್ತು ದಿಲ್ ಪಸಂದ್ ಸಿನಿಮಾಗಳ ಸ್ಪೆಷಲ್ ಸಾಂಗ್ ಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಕೋವಿಡ್ ವೇಳೆ ಸೇವೆ…
ಇನ್ನು ಕೋವಿಡ್ ವೇಳೆ ಸಾತ್ವಿಕ ಅವರು ತಮ್ಮ ಶೂಟಿಂಗ್ ಮನೆಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ, ರೋಗಿಗಳ ಗುಣಮುಖಕ್ಕೆ ಕಾರಣರಾಗಿದ್ದರು.
ಆಗ ಒಂದಷ್ಟು ಕೈಲಾದ ಸೇವೆ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಬಣ್ಣದ ಲೋಕದಲ್ಲಿ ಬಿಝಿ ಡಿಸೈನರ್ ಆಗಿದ್ದಾರೆ. ಅದೇನೆ ಇರಲಿ ಸಾತ್ವಿಕ ನಟನೆ, ನಿರ್ಮಾಣದ ಜೊತೆಯಲ್ಲಿ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿರುವುದು ವಿಶೇಷ.