ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿನಯದಷ್ಟೇ, ಗಾಯನದಿಂದಲೂ ಜನಪ್ರಿಯರಾದವರು.
ಪ್ರಸ್ತುತ ಉಪೇಂದ್ರ ಅವರು “ಹುಷಾರ್” ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸತೀಶ್ ರಾಜ್ ಬರೆದಿರುವ “ನೀ ನೋಡೊಕೆ ಸಿಕ್ಸ್ ಟೀನ್ ಸ್ವೀಟಿ. ಬಿಟ್ಕೊಳೆ ಒಂದ್ ನೈಂಟಿ” ಎಂಬ ಹಾಡನ್ನು ಇತ್ತೀಚಿಗೆ ಸಾಧುಕೋಕಿಲ ಅವರ ಸ್ಟುಡಿಯೋದಲ್ಲಿ ಉಪೇಂದ್ರ ಹಾಡಿದ್ದಾರೆ.
ಸತೀಶ್ ರಾಜ್ ಮೂವೀ ಮೇಕರ್ಸ್ ಲಾಂಛನದಲ್ಲಿ ಸತೀಶ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನ್ ಅರುಣ್ ಕೃಷ್ಣ ಈ ಚಿತ್ರದ ಸಹ ನಿರ್ಮಾಪಕರು.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಸತೀಶ್ ರಾಜ್ ನಿರ್ದೇಶನವನ್ನು ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆಯಲ್ಲಿ ಬಂದಿರುವ ಸತೀಶ್ ರಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ನಮ್ಮ ಜೀವನದಲ್ಲಿ ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಅದಕ್ಕೆ ಯಾರು ಹೊಣೆಗಾರರಲ್ಲ. ನಾವು ಎಚ್ಚರಿಕೆಯಿಂದ ಇರಬೇಕು ಎನ್ನುವುದು ಕಥೆಯ ಸಾರಾಂಶ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೇಲಿನ ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಹಾಗೂ ನಾಗು ಸಂಗೀತ ನೀಡಿದ್ದಾರೆ. ರೆಮೋ ಹಾಗೂ ಉಪೇಂದ್ರ ಒಂದೊಂದು ಹಾಡನ್ನು ಹಾಡಿದ್ದಾರೆ. ನವೀನ್ ಮತ್ತು ನಾಗರಾಜ್ ಛಾಯಾಗ್ರಹಣ, ಜೆ.ಜೆ.ಶರ್ಮ ಸಂಕಲನ, ಚಂದ್ರು ಬಂಡೆ, ಜಾಗ್ವರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ಸ್ಟಾರ್ ನಾಗಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಸಿದ್ದೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಪ್ರಿಯದರ್ಶಿನಿ. ವಿನೋದ್, ರಚನಾ ಮಲ್ನಾಡ್, ಲಯ ಕೋಕಿಲ, ಡಿಂಗ್ರಿ ನಾಗರಾಜ್, ಪುಷ್ಪಸ್ವಾಮಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಸತೀಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.