ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೆ ಹಬ್ಬದ ಕಳೆ. ಸಾಲು ಸಾಲು ಚಿತ್ರಗಳು ತೆರೆಗೆ ಬರುತ್ತಿವೆ. ಅಷ್ಟೇ ಸಂಖ್ಯೆಯ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಆ ಚಿತ್ರಗಳ ಪೈಕಿ “ಮರ್ದಿನಿ” ಚಿತ್ರವೂ ಸೇರಿದೆ.
ಮಹಿಳಾ ಪ್ರಧಾನವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರಿ ಟ್ರೇಲರ್ ಬಿಡುಗಡೆ ಮಾಡಿದರು. ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾದ್ಯಕ್ಷ ನವೀನ್ ಗೌಡ, ಯೋಗೇಶ್ ಹಾಗೂ “ರೌಡಿ ಬೇಬಿ” ಚಿತ್ರದ ನಾಯಕ ರವಿಗೌಡ ಇತರರು ಹಾಜರಿದ್ದರು.
ಕನ್ನಡ ಚಿತ್ರರಂಗದೊಂದಿಗೆ ಹದಿನೆಂಟು ವರ್ಷಗಳ ನಂಟು ಹೊಂದಿರುವ ಜಗ್ಗಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಗ್ಗಿ ಅವರ ಪತ್ನಿ ಭಾರತಿ ಜಗ್ಗಿ ಈ ಚಿತ್ರದ ನಿರ್ಮಾಪಕರು.
ನಾನು ಚಿತ್ರ ನಿರ್ಮಾಣ ಮಾಡಲು ಮೂರು ಜನ ಮುಖ್ಯ ಕಾರಣ ಕಿಚ್ಚ ಸುದೀಪ್ ಸರ್, ನನ್ನ ಸ್ನೇಹಿತರಾದ ಯೋಗೀಶ್ ಹಾಗೂ ಸಾಜಿದ್ ಖುರೇಶಿ ಅವರು. ಹದಿನೆಂಟು ವರ್ಷಗಳ ಹಿಂದೆ ಪೈಂಟರ್ ಆಗಿ ಬಂದ ನಾನು, ಈಗ ನಿರ್ಮಾಪಕನಾಗಿದ್ದೇನೆ. ಚಿತ್ರ ನಿರ್ಮಾಣ ಅಂದುಕೊಂಡಷ್ಟು ಸುಲಭವಲ್ಲ. ಸಾಕಷ್ಟು ಶ್ರಮಪಟ್ಟು ಚಿತ್ರ ನಿರ್ಮಾಣ ಮಾಡಿದ್ದೀನಿ. ಆದಷ್ಟು ಹೊಸಬರಿಗೆ ಅವಕಾಶ ನೀಡಿದ್ದೀವಿ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಜಗ್ಗಿ.
ಹಿಂದೆ ಪ್ರಥಮ್ ಅಭಿನಯದ “ದೇವ್ರಂಥ ಮನುಷ್ಯ” ಚಿತ್ರ ನಿರ್ದೇಶನ ಮಾಡಿದ್ದೆ. ಇದು ಎರಡನೇ ಚಿತ್ರ ಎಂದ ಕಿರಣ್ ಕುಮಾರ್ , ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ.
ನಾನು ಈ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಜಿಮ್ ನಲ್ಲಿ ನಿರ್ಮಾಪಕ ಜಗ್ಗಿ ಅವರನ್ನು ಭೇಟಿ ಯಾದೆ. ಕೆಲವು ದಿನಗಳ ನಂತರ ಜಗ್ಗಿ ಅವರು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನೀವೇ ಅದರ ನಾಯಕ ಎಂದರು. ಇದೇನಪ್ಪ ನಾಯಕಿಗೆ ಇವರು ನಾಯಕ ಅನ್ನುತ್ತಿದ್ದಾರೆ ಅಂದುಕೊಂಡೆ. ಆಗ ಅವರು ಹೇಳಿದರು. ನಿಮ್ಮದೇ ಈ ಚಿತ್ರದಲ್ಲಿ ಮುಖ್ಯ ಪಾತ್ರ. ನೀವು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಿರಿ ಅಂದಾಗ ಸಂತೋಷವಾಯಿತು ಎಂದು ಮುಖ್ಯ ಪಾತ್ರಧಾರಿ ರಿತನ್ಯ ಪೂವಯ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಸಂಗೀತದ ಬಗ್ಗೆ ಹಿತನ್ ಹಾಸನ್, ಸಂಕಲನ ಕಾರ್ಯದ ಕುರಿತು ವಿಶ್ವ ಹಾಗೂ ಅಭಿನಯದ ಬಗ್ಗೆ ಅಕ್ಷಯ್, ಮನೋಹರ್ ಮಾತನಾಡಿದರು. ಅಕ್ಷಯ್ ಈ ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಅರುಣ್ ಸುರೇಶ್ ಈ ಚಿತ್ರದ ಛಾಯಾಗ್ರಹಕರು.