ನಟಿ ಹರ್ಷಿಕಾ ಪೊಣಚ್ಚ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೌದು, ಇತ್ತೀಚೆಗಷ್ಟೇ ಅವರು ಮತ್ತೊಂದು ಭೋಜ್ಪುರಿ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಆ ಚಿತ್ರದ ಮುಹೂರ್ತ ನಡೆದ ಬೆನ್ನಲ್ಲೇ ಈಗ ಹೊಸ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸ್ತಬ್ಧ” ಎಂದು ಹೆಸರಿಡಲಾಗಿದೆ. ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಹೈಲೈಟ್. ಹರ್ಷಿಕಾ ಪೂಣಚ್ಚ ಅವರೊಂದಿಗೆ ಪ್ರತಾಪ್ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗರೆಡ್ಡಿ ಕ್ಲಾಪ್ ಮಾಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ಈ ಚಿತ್ರಕ್ಕೆ ಲಾಲಿ ರಾಘವ ನಿರ್ದೇಶಕರು. ಡಾ.ಡಿ.ವಿ.ವಿದ್ಯಾಸಾಗರ್ ನಿರ್ಮಾಪಕರು.
ನಿರ್ದೇಶಕ ಲಾಲಿ ರಾಘು ಅವರು ಈ ಹಿಂದೆ ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡದ ಈ ಚಿತ್ರ ಎರಡನೇ ನಿರ್ದೇಶನದ ಸಿನಿಮಾ. ಕಥೆ ಬಗ್ಗೆ ಹೇಳುವ ಅವರು, “ಮನುಷ್ಯನ ಮನಸ್ಸು, ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಸಾಗಿದಾಗ, ಆಗುವಂತಹ ಪರಿಣಾಮ ಮತ್ತು ಅದರಿಂದ ಹೊರಬರಲು ಚಿತ್ರದ ಕಥಾ ನಾಯಕ ನಡೆಸುವ ಹೋರಾಟದ ಸೂಕ್ಷ್ಮತೆಯ ಕಥೆಯನ್ನು ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಉದಯೋನ್ಮುಖ ನಟ ಪ್ರತಾಪ್ ಸಿಂಹ ಅವರೊಂದಿಗೆ, ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ.ಚಿನ್ಮಯ್ ಮತ್ತು ಪ್ರಿಯಾಂಕಾ ಹೀಗೆ ಹೊಸ ಪ್ರತಿಭೆಗಳು ನಟಿಸುತ್ತಿದ್ದಾರೆ. ಇನ್ನು, ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಅವರ ಸಂಗೀತವಿದೆ ಎಂದು ವಿವರ ಕೊಟ್ಟರು ನಿರ್ದೇಶಕ ಲಾಲಿ ರಾಘವ್.
ರಾಘವೇಂದ್ರ ರಾಜಕುಮಾರ್ ಅವರಿಗೆ ಇಲ್ಲಿ ಕಥೆ ಇಷ್ಟವಾಯಿತಂತೆ. ನಿರ್ದೇಶಕರು ಹೆಣೆದ ಕಥೆಯ ಆಶಯ ಚೆನ್ನಾಗಿದೆ. ಪಾತ್ರವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಕಥೆಯೇ ಒಂದು ಪಾತ್ರ. ನಾವೆಲ್ಲ ಚಿಕ್ಕ ಪಾತ್ರ ಮಾಡುತ್ತಿದ್ದೇವೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೇಳುವಂತಿಲ್ಲ ಎಂದರು ರಾಘವೇಂದ್ರ ರಾಜಕುಮಾರ್.
ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ “ಜಾಕಿ” ಚಿತ್ರದಲ್ಲಿ ನೀವು ನಟಿಸಬೇಕೆಂದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ.ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ ಎಂಬುದು ನಟಿ ಹರ್ಷಿಕಾ ಮಾತು.
ಹೊಸ ಪ್ರತಿಭೆ ಪ್ರತಾಪ್ ಸಿಂಹ ಅವರು, ಈಗಾಗಲೇ ರಾಘಣ್ಣ ಅವರೊಂದಿಗೆ “ರಾಜತಂತ್ರ”, ” ರಾಜಿ” ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ರಾಘಣ್ಣ ಅವರೊಟ್ಟಿಗೆ ಅಭಿನಯಿಸುವುದೇ ಒಂದು ಸುಂದರ ಅನುಭವವಂತೆ. ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಶುಭಹಾರೈಕೆ ಇರಲಿ ಎಂದರು ಪ್ರತಾಪ್ ಸಿಂಹ.
ನಿರ್ಮಾಪಕ ಡಾ.ಡಿ.ವಿ.ವಿದ್ಯಾಸಾಗರ್ ಅವರು ನಿರ್ದೇಶಕ ಲಾಲಿ ರಾಘವ್ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದಾರಂತೆ. ಅವರ ಸಹೋದರ ನನ್ನ ಸಹೋದ್ಯೋಗಿ. ಆತ ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂಬುದು ವಿದ್ಯಾಸಾಗರ್ ಮಾತು. ಪ್ರಶಾಂತ್ ಸಿದ್ದಿ, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ ಹಾಗೂ ಸಂಗೀತ ನಿರ್ದೇಶಕ ಆರವ್ ರಿಷಿಕ್ ಇತರರು ಸಿನಿಮಾ ಕುರಿತು ಮಾತಾಡಿದರು.