ನಟ ಪುನೀತ್ ಅವರ ಕುರಿತಂತೆ ಸಾಕಷ್ಟು ಹಾಡುಗಳು ಬಂದಿವೆ. ಆ ಸಾಲಿಗೆ ಈಗ ಹೊಸಬರು ಹೊಸದೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಅದಕ್ಕೆ “ಯಾರೋ ನೀನು” ಎಂಬ ಹೆಸರಿಡಲಾಗಿದೆ. ಇತ್ತೀಚೆಗೆ ರಾಘವೇಂದ್ರ ರಾಜಕುಮಾರ್ ಅವರು ಸಾಂಗ್ ರಿಲೀಸ್ ಮಾಡಿ, ಹೊಸಬರ ತಂಡಕ್ಕೆ ಶುಭಕೋರಿದರು. ಈ ವೇಳೆ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿದ್ದಿಷ್ಟು. “ನನಗೆ ಇಂತಹ ದಿನ ಬರುತ್ತದೆ ಎಂದು ಊಹಿಸಿರಲಿಲ್ಲ. ನಾನು ಅಪ್ಪು ಇದ್ದಾಗ, ಅನೇಕ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದೀವಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟ್ಯಾಂತರ ಅಭಿಮಾನಿಗಳು ಕಾಣುತ್ತಿದ್ದಾರೆ. ಈ ಹಾಡಿನ ರಾಜ್ ಕಿಶೋರ್ ಅವರ ಸಾಹಿತ್ಯ- ಸಂಗೀತ ಚೆನ್ನಾಗಿದೆ. ಶಶಿಕುಮಾರ್ ಅದ್ಭುತವಾಗಿ ಹಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ಹಾಡಿನಲ್ಲಿ ಕಾಣಿಸುತ್ತಿದೆ. ಇದನ್ನು ನಾನು ಬಿಡುಗಡೆ ಅನ್ನುವುದಿಲ್ಲ. ಅರ್ಪಣೆ ಎನ್ನುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕನ್ನಡದ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಮತ್ತು ಈಗ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ “ಡಾಟರ್ ಆಫ್ ಇಂಡಿಯಾ” ಚಿತ್ರದ ಸಂಗೀತ ನಿರ್ದೇಶಕ ರಾಜ್ ಕಿಶೋರ್ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಒಬ್ಬ ನಾಯಕನ ಚಿತ್ರಕ್ಕೋ ಹುಟ್ಟುಹಬ್ಬಕ್ಕೋ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದೇ ಬೇರೆ. ಈ ಸಂದರ್ಭವೇ ಬೇರೆ. ಅವರ ಮನೆಯವರು , ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗುವುದು ಸಹಜ. ಆದರೆ, ಬರೀ ಈ ಊರು, ಈ ದೇಶವಲ್ಲದೇ, ಹೊರ ದೇಶಗಳಲ್ಲೂ ಇವರ ನಿಧನಕ್ಕೆ ನಮ್ಮವರನೇ ಕಳೆದುಕೊಂಡಿದ್ದೀವಿ ಎಂದು ದುಃಖಿಸುತ್ತಿದ್ದಾರಲ್ಲಾ ಇದೇ ನಾನು ಹಾಡು ಬರೆಯೋಕೆ ಕಾರಣವಾಯ್ತು. ಇದಕ್ಕೆ ಪ್ರೋತ್ಸಾಹ ನೀಡಿದ್ದ ನಿರ್ಮಾಪಕಿ ಭೈರವಿ ಅವರಿಗೆ, ಗಾಯಕ ಶಶಿಕುಮಾರ್ ಅವರಿಗೆ ಹಾಗೂ ಹಾಡು ಬಿಡುಗಡೆ ಮಾಡಿರುವ ರಾಘವೇಂದ್ರ ರಾಜಕುಮಾರ್ ಅವರಿಗೆ ನಾನು ಧನ್ಯವಾದ ಹೇಳ್ತೀನಿ ಅಂದರು ರಾಜ್ ಕಿಶೋರ್.
ಗಾಯಕ ಶಶಿಕುಮಾರ್ ಅವರು ಈ ಹಾಡು ಹಾಡಿದ್ದಾರೆ. “ದೇವರಿಗಾಗಿ ನಾನು ಯಾವುದೇ ವ್ರತ ಮಾಡಿಲ್ಲ. ಆದರೆ, ನಾನು ಅಪ್ಪು ಅವರಿಗಾಗಿ ಈ ಹಾಡನ್ನು ಹಾಡುವಾಗ ವ್ರತ ಮಾಡಿ ಹಾಡಿದ್ದೇನೆ. ಅವರು ನನ್ನ ಪಾಲಿನ ದೇವರು ಎಂದರೂ ತಪ್ಪಿಲ್ಲ. ಅವಕಾಶ ನೀಡಿದ ರಾಜ್ ಕಿಶೋರ್ ಹಾಗೂ ಭೈರವಿ ಅವರಿಗೆ ಧನ್ಯವಾದ ಎಂದರು ಶಶಿಕುಮಾರ್. ಇನ್ನು, ಈ ಹಾಡಿಗೆ ಭೈರವಿ ನಿರ್ಮಾಪಕರು. ಅವರು ಹೇಳಿದ್ದಿಷ್ಟು, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಪ್ಪು ಸರ್ ಅವರ ಸಾವಿನಿಂದ ಆಗುತ್ತಿರುವ ತಳಮಳ ಈ ಹಾಡನ್ನು ನಿರ್ಮಿಸಲು ಮುಖ್ಯ ಕಾರಣ. ಈ ಹಾಡು ನಿರ್ಮಾಣವಾಗಲು ಸಹಕಾರ ನೀಡಿದ ತಂಡಕ್ಕೆ ಥ್ಯಾಂಕ್ಸ್ ಹೇಳಿದರು. ಈ ವೇಳೆ ಎಸ್.ಮಹೇಶ್ ಇತರರು ಇದ್ದರು.