ಕನ್ನಡದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಸಿನಿಮಾ “ರೇಮೊ”. ಇದು ಪವನ್ ಒಡೆಯರ್ ನಿರ್ದೇಶನದ ಸಿನಿಮಾ. ಈ ಸಿನಿಮಾ ಈಗಾಗಲೇ ಶೀರ್ಷಿಕೆಯಿಂದ ಹಿಡಿದು, ತನ್ನ ಹಲವು ಪೋಸ್ಟರ್ ಝಲಕ್ನಿಂದಲೇ ಕುತೂಹಲ ಕೆರಳಿಸಿದೆ. ಈಗ ರೇಮೊ ರಿಲೀಸ್ಗೂ ಸಜ್ಜಾಗಿದೆ. ಅದಕ್ಕೂ ಮುನ್ನ ಮತ್ತೊಂದು ಜೋರಾದ ಸೌಂಡು ಮಾಡೋಕೆ ಚಿತ್ರತಂಡ ರೆಡಿಯಾಗಿದೆ…
ಹೌದು, ರೇಮೊ ಸಿನಿಮಾದ ಟೀಸರ್ ಬಿಡುಗಡೆಗೆ ಇಡೀ ತಂಡ ಕಾತುರಗೊಂಡಿದೆ. ನವೆಂಬರ್ 25ರಂದು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಟೀಸರ್ ರಿಲೀಸ್ಗೆ ವಿಶೇಷ ಅತಿಥಿಗಳು ಸಾಕ್ಷಿಯಾಗಲಿದ್ದಾರೆ. ಅಂದರೆ, ಅವರಿಂದಲೇ ಟೀಸರ್ ಬಿಡುಗಡೆ ಮಾಡಿಸುವ ಯೋಚನೆ ನಿರ್ದೇಶಕ ಪವನ್ ಒಡೆಯರ್ ಅವರದ್ದು.
ರೇಮೊ ಸಿನಿಮಾದ ಟೀಸರ್ ಬಿಡುಗಡೆಯನ್ನು ಚಂದನವನದ ನಿರ್ದೇಶಕರು ಮತ್ತು ನಿರ್ಮಾಪಕರಿಂದಲೇ ಮಾಡಿಸಬೇಕು ಎಂಬ ನಿರ್ಧಾರ ಚಿತ್ರತಂಡದ್ದು. ಹಾಗಾಗಿ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿರುವ ಯೋಗರಾಜ ಭಟ್, ಜೋಗಿ ಪ್ರೇಮ್, ಚೇತನ್ ಕುಮಾರ್, ಎ.ಹರ್ಷ,ತರುಣ್ ಸುಧೀರ್, ಎಪಿ ಅರ್ಜುನ್ ಹಾಗು ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್, ಕಾರ್ತಿಕ್, ಕೆ.ಮಂಜು, ಜಯಣ್ಣ ಭೋಗೇಂದ್ರ ಅವರಿಂದ ಟೀಸರ್ ಬಿಡುಗಡೆ ಮಾಡಿಸಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಪವನ್ ಒಡೆಯರ್.
ಜಯಾದಿತ್ಯ ಫಿಲಂಸ್ ಬ್ಯಾನರ್ ಮೂಲಕ ಈಗಾಗಲೇ ಅದ್ಧೂರಿ ಸಿನಿಮಾಗಳನ್ನು ನಿರ್ಮಿಸಿರುವ ಸಿ.ಆರ್ ಮನೋಹರ್ ಅವರ ನಿರ್ಮಾಣದ ಸಿನಿಮಾ ಇದು. ಹೀಗಾಗಿ ನವೆಂಬರ್ 25ರಂದು ದೊಡ್ಡ ಮಟ್ಟದಲ್ಲೇ ಟೀಸರ್ ಲಾಂಚ್ ಆಗಲಿದೆ. ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಅಶಿಕಾ ರಂಗನಾಥ್ ಜೊತೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಶರತ್ ಕುಮಾರ್, ಮಧುಬಾಲ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈದಿ ಛಾಯಾಗ್ರಹಣವಿದೆ. ಸದ್ಯ, ರೇಮೊ ಸಿನಿಮಾ ಮೇಲೆ ಸಿನಿಮಾ ಇಂಡಸ್ಟ್ರಿ ಮಂದಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಅಂದಹಾಗೆ, ಇತ್ತೀಚೆಗಷ್ಟೇ, ಚಿತ್ರೀಕರಣ ಮುಗಿಸಿ ಕುಂಬಳ ಕಾಯಿ ಹೊಡೆದು ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ, ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರುವ ಉತ್ಸಾಹದಲ್ಲಿದೆ.
ಪವನ್ ಒಡೆಯರ್, ನಿರ್ದೇಶಕ
ಈಗ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲು ಸಜ್ಜಾಗಿದ್ದು, ಈ ಟೀಸರ್ ಅನ್ನು ಚಿತ್ರರಂಗದ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗುತ್ತಿರುವುದು ವಿಶೇಷ.