ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಎನ್ನುವ ಕಟುಸತ್ಯ ಇಡೀ ಮನುಕುಲಕ್ಕೆ ಗೊತ್ತಿದೆ. ಆದರೆ, ಹುಟ್ಟಿಗೆ ಒಂಭತ್ತು ತಿಂಗಳು ಟೈಮ್ ಕೊಡುವ ಬ್ರಹ್ಮ, ಉಸಿರು ನಿಲ್ಲಿಸಿ ದೇಹ ಹೊತ್ತೊಯ್ಯುವಾಗ ಟೈಮ್ ಕೊಡದೇ ಬಾರದ ಲೋಕಕ್ಕೆ ಕಳುಹಿಸಿಬಿಡ್ತಾನೆ.
ಇದ್ಯಾವ ನ್ಯಾಯವೋ? ಇದ್ಯಾವ ಸೀಮೆ ತೀರ್ಮಾನವೋ ಗೊತ್ತಿಲ್ಲ ಜವರಾಯ ಬಲೆಬೀಸಿದಾಗ ಬಲಿಯಾಗಲೇಬೇಕು. ಹೀಗಾಗಿಯೇ, ದೊಡ್ಮನೆಯ ಅರಸು, ಕರ್ನಾಟಕದ ಜನರ ಪಾಲಿನ ರಾಜರತ್ನ ವಿಧಿಯ ಆಟಕ್ಕೆ ಶರಣಾಗಬೇಕಾಗಿ ಬಂತು. ಅರ್ಧಕ್ಕೆ ಬದುಕಿನ ಪಯಣ ಮುಗಿಸಿ ಮುರಳಿಬಾರದೂರಿಗೆ ಹೋಗಬೇಕಾಗಿ ಬಂತು.
ಅಪ್ಪುದು ಸಾಯೋ ವಯಸ್ಸಲ್ಲ. ಇನ್ನೂ 46 ಅಷ್ಟೇ. ಬಾಳಿ ಬದುಕಬೇಕಿದ್ದ, ಸುಂದರ ಜೀವನ ನಡೆಸಬೇಕಿದ್ದ ಪುನೀತ್ ರಾಜ್ ಕುಮಾರ್
ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಅಗಲಿದ್ದು
ಆರೂವರೆ ಕೋಟಿ ಕನ್ನಡಿಗರನ್ನ ದುಃಖದ ಮಡಿಲಿಗೆ ನೂಕಿದೆ. ಹದಿನೇಳರಂದು ಭೂಮಿಗೆ ಬಂದ ಧ್ರುವತಾರೆಗಳನ್ನೇಕೆ ವಿಧಿ ಟಾರ್ಗೆಟ್ ಮಾಡ್ತಾನೆ ? ಅದ್ಯಾಕೆ ಅರ್ಧ ವಯಸ್ಸಿಗೆ ಬದುಕನ್ನು ಕೊನೆಗಾಣಿಸುತ್ತಾನೆ? ಏಕಾಏಕಿ ಅದ್ಯಾಕೆ ಕಿತ್ತುಕೊಳ್ತಾನೆ? ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಹೌದು, ಹದಿನೇಳನೇ ತಾರೀಖ್ ನಂದು ತಾಯಿ ಗರ್ಭದಿಂದ ಪೃಥ್ವಿಗೆ ಬಂದಂತಹ, ಬೆಳ್ಳಿತೆರೆ ಬೆಳಗಿದಂತಹ, ಕನ್ನಡಿಗರ ಮನೆಮನ ತಣಿಸಿದಂತಹ,
ಗಂಧದಗುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದಂತಹ ಕನ್ನಡದ ಮೂವರು ಧ್ರುವತಾರೆಗಳಾದ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ವಿಜಯ್ ವಿಧಿಯಾಟಕ್ಕೆ ಬಲಿಯಾದರು. ಜವರಾಯನ ಅಣತಿಯಂತೆ ತಮ್ಮೆಲ್ಲಾ ಆಸೆ – ಕನಸು- ಬದುಕು- ಕುಟುಂಬ- ಅಭಿಮಾನಿ ದೇವರುಗಳು ಹೀಗೆ ಎಲ್ಲರನ್ನೂ ಬಿಟ್ಟು ಬಹುದೂರ ಹೋಗಿಬಿಟ್ಟರು.
ಅಷ್ಟಕ್ಕೂ, ಹದಿನೇಳಕ್ಕೂ, ಹದಿನೇಳರಂದು ಹುಟ್ಟಿದ ಕನ್ನಡ ಚಿತ್ರರಂಗದ ಧ್ರುವತಾರೆಗಳ ಅಕಾಲಿಕ ಮರಣಕ್ಕೂ ಕಂಟಕವೋ?
ಬ್ರಹ್ಮ ನಿರ್ಣಯವೋ, ವಿಧಿ ಲಿಖಿತವೋ ಗೊತ್ತಿಲ್ಲ? 1975 ಮಾರ್ಚ್ 17 ರಂದು ಹುಟ್ಟಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,
1984 ಅಕ್ಟೋಬರ್ 17 ರಂದು ಜನಿಸಿದ ಚಿರಂಜೀವಿ ಸರ್ಜಾ, 1983 ಜುಲೈ 17 ರಂದು ಹುಟ್ಟಿದ ಸಂಚಾರಿ ವಿಜಯ್ ಮೂವರು ಸ್ಟಾರ್ ಗಳು ಹಠಾತ್ತನೇ ಉಸಿರು ಚೆಲ್ಲಿದರು. ಕನ್ನಡ ಚಿತ್ರರಂಗ ಕಂಡ ಅಪರೂಪದ ಈ ಮೂವರು ನಟಸಾರ್ವಭೌಮರ ಸಾವಿಗೆ ಕಾರಣ ಜವರಾಯ.
ಸದಾ ಕ್ರೂರತ್ವ ಮೆರೆಯೋ ಯಮಧರ್ಮ ಕೊಂಚಕರುಣಾಮಯಿಯಾಗಿದ್ರೆ ದೊಡ್ಮನೆಯ ರಾಜಕುಮಾರ, ಸರ್ಜಾ ಕುಟುಂಬದ ಕುವರ ಹಾಗೂ ಸಂಚಾರಿ ವಿಜಯ್ ಅವರು ಗೋಣು ಚೆಲ್ಲುತ್ತಿರಲಿಲ್ಲ. ಕುಟುಂಬವನ್ನು ಕೋಟ್ಯಾನುಕೋಟಿ ಭಕ್ತರನ್ನು ಬಿಟ್ಟು ಅಗಲುತ್ತಿರಲಿಲ್ಲ. ಆದರೆ ಏನ್ಮಾಡೋದು ಭಗವಂತನ್ನ, ಜವರಾಯನನ್ನ, ವಿಧಿನಾ ಫೇಸ್ ಮಾಡುವ ಶಕ್ತಿ ? ಪ್ರಶ್ನೆ ಮಾಡುವ ಪವರ್ ಯಾರಿಗಿದೆ ಹೇಳಿ. ಅಸ್ತು ಎಂದಾಗ ಹುಟ್ಟಬೇಕು, ಸುಸ್ತಾಗುವ ಮೊದಲೇ ಇಹಲೋಕ ತ್ಯಜಿಸಬೇಕು
ವಿಶಾಲಾಕ್ಷಿ,
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ