ನಟಿ ಮೇಘನಾ ಗಾಂವ್ಕರ್ ಈಗ ಡಿಸಿಪಿಯಾಗಿದ್ದಾರೆ. ಅರೇ ಡಿಸಿಪಿ ಆಗಿರೋದು ನಿಜ. ಅದು ಸಿನಿಮಾದಲ್ಲಿ. ಕಳೆದ ವರ್ಷ ಬಿಡುಗಡೆಯಾಗಿ ಜೋರು ಸುದ್ದಿಯಾದ “ಶಿವಾಜಿ ಸುರತ್ಕಲ್” ಸಿನಿಮಾ ಎರಡನೇ ಭಾಗ ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ ಅವರು ಇಲ್ಲೂ ಮುಂದುವರಿಯುತ್ತಿದ್ದಾರೆ.
ಈ ಪಾತ್ರಗಳ ಜೊತೆಗೆ ಈಗ ಮೇಘನಾ ಗಾಂವ್ಕರ್ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಅವರಿಲ್ಲಿ ಡಿಸಿಪಿ ದೀಪ ಕಾಮತ್ ಆಗಿ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ. ಬೆಂಗಳೂರ್ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೇಘನ ಗಾಂವ್ಕರ್ ಅವರು ಮೊದಲ ಬಾರಿಗೆ ಟಫ್ ಕಾಪ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾದ ಡಿಸಿಪಿ ದೀಪ ಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಂತೆ.
ಇನ್ನಷ್ಟು ಹೊಸ ಪಾತ್ರಗಳು ಚಿತ್ರತಂಡ ಸೇರಲಿದ್ದು ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ಹೋಗುವುದಾಗಿ ಚಿತ್ರತಂಡ ತಿಳಿಸಿದೆ. ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶಿಸಿ, ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.