ಯೋಗಿ ಅಂತಹ ನಟರಿದ್ದರೆ, ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾ ಸಹಕಾರ ಮನೋಭಾವ ಇರುವ ಯೋಗಿ ಅವರ ಪ್ರೋತ್ಸಾಹದಿಂದ ಲಂಕೆ ಸಿನಿಮಾ ಬೇರೆ ಲೆವೆಲ್ಗೆ ಹೋಗಿದೆ. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಖಂಡಿತ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ
“ಸೂರ್ಯನೆ ಕಾಣದ ಈ ಮಾಯಾ ಬಜಾರ್ನಲ್ಲಿ ಭಾವನೆಗೇ ಬೆಲೆ ಇಲ್ಲ… ರಾಮನ ತೇಜಸ್ಸು, ರಾವಣನ ವರ್ಚಸ್ಸು, ಇವೆರೆಡೂ ಇವನ ತಾಕತ್ತು. ಸೈನ್ಯ ಇಟ್ಕೊಂಡ್ ಹೋರಾಡೋನು ದಳಪತಿ, ಒಂಟಿಯಾಗಿ ಹೊಡೆದಾಡೋನು ಅಧಿಪತಿ…ʼ
ಇದು ಯೋಗಿ ಅಭಿನಯದ “ಲಂಕೆʼ ಚಿತ್ರದ ಅಫಿಷಿಯಲ್ ಟೀಸರ್ನಲ್ಲಿ ಬರೋ ಡೈಲಾಗ್. ಡೈಲಾಗ್ ಮಾತ್ರ ಖಡಕ್ ಆಗಿಲ್ಲ. ಆ ಟೀಸರ್ನಲ್ಲಿ ಕಾಣೋ ಫೈಟು ಕೂಡ ಅಷ್ಟೇ ಖದರ್ ಆಗಿದೆ. ಅಲ್ಲಿಗೆ “ಲಂಕೆʼ ಪಕ್ಕಾ ಮಾಸ್ ಅನ್ನೋದು ಸಾಬೀತಾಗುತ್ತದೆ. ಇಷ್ಟಕ್ಕೂ ಈ “ಲಂಕೆ” ಬಗ್ಗೆ ಹೇಳೋಕೆ ಹೊರಟಿರುವ ವಿಷಯ, ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿರುವ ಅಫಿಷಿಯಲ್ ಟೀಸರ್ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಟೀಸರ್ ನೋಡಿದವರಿಗೆ ಯೋಗಿಯ ತಾಕತ್ತಷ್ಟೇ ಅಲ್ಲ, ಆ ಸಿನಿದೊಳಗಿರುವ ತಾಕತ್ತು ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕ ರಾಮ್ ಪ್ರಸಾದ್ ಪವರ್ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ.
ಒಂದು ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ, ಆ ಸಿನಿಮಾದೊಳಗಿರುವ ಅಂಶಗಳನ್ನು ಗುರುತಿಸಿ, ಅದನ್ನೆಲ್ಲಾ ಟೀಸರ್ಗೆ ಸೇರಿಸಿ ಸಿನಿಮಾಗೂ ಮೊದಲೇ ಪ್ರೇಕ್ಷಕರ ಮುಂದೆ ಬಿಡುವ ಜಾಣತನ ದೊಡ್ಡದು. ಅಂಥದ್ದೊಂದು ಜಾಣತನ ಟೀಸರ್ನಲ್ಲಿ ಎದ್ದು ಕಾಣುತ್ತದೆ. ನಿರ್ದೇಶಕ ರಾಮ್ಪ್ರಸಾದ್ ಈ ಬಾರಿ ಸಕ್ಸಸ್ ದಾರಿಯಲ್ಲಿದ್ದಾರೆ ಅನ್ನುವುದಕ್ಕೆ ಆ ಟೀಸರ್ ಸಾಕ್ಷಿ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದ “ಲಂಕೆ” ಟೀಸರ್ಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಕೂಡ ಟ್ರೆಂಡಿಂಗ್ನಲ್ಲಿವೆ. ಶನಿವಾರ ಚಿತ್ರದ ಆಡಿಯೋ ಕೂಡ ಹೊರಬರಲಿದೆ ಅನ್ನೋದು ಹೊಸ ಸುದ್ದಿ.
ಸದ್ಯ ಕೊರೊನಾ ಹಾವಳಿ ಅಲ್ಲಲ್ಲಿ ಇರುವುದರಿಂದ ಸಿನಿಮಾ ಬಿಡುಗಡೆ ಕೊಂಚ ತಡವಾಗಿದೆ. ವೀಕೆಂಡ್ ಕರ್ಪ್ಯೂ ಕೆಲವು ಜಿಲ್ಲೆಗಳಲ್ಲಿದೆ. ಅದೆಲ್ಲವೂ ತೆರೆವಾದ ನಂತರ “ಲಂಕೆ” ಪ್ರೇಕ್ಷಕನ ಮುಂದೆ ಬರಲಿದೆ. ಅಂದಹಾಗೆ, “ಲಂಕೆ” ಯೋಗಿ ಅವರಿಗೊಂದು ಕಮ್ಬ್ಯಾಕ್ ಸಿನಿಮಾ ಅಂದರೂ ತಪ್ಪಿಲ್ಲ. ಯಾಕೆಂದರೆ, ಯೋಗಿ ಅಭಿನಯದ ಹಿಂದಿನ ಸಿನಿಮಾ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ “ಲಂಕೆ” ಮೇಲೆ ಬಹು ನಿರೀಕ್ಷೆ ಇಟ್ಟುಕೊಂಡಿರುವ ಯೋಗಿಗೂ ಒಳ್ಳೆಯ ಯೋಗ ಬರುತ್ತೆ ಎಂಬ ನಂಬಿಕೆಯಂತೂ ಇದೆ. ಎಲ್ಲರ ಶ್ರಮದಿಂದಾಗಿ “ಲಂಕೆʼ ಚೆನ್ನಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕ ರಾಮ್ಪ್ರಸಾದ್ ಅವರ ಮಾತು.
ಯೋಗಿ ಅಂತಹ ನಟರಿದ್ದರೆ, ಖಂಡಿತವಾಗಿಯೂ ಇಂತಹ ಹತ್ತಾರು ಸಿನಿಮಾಗಳನ್ನು ಮಾಡಬಹುದು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತುಂಬಾನೇ ಸಪೋರ್ಟಿಂಗ್ ನೇಚರ್ ಇರುವ ಯೋಗಿ ಅವರ ಸಹಕಾರದಿಂದ ಸಿನಿಮಾ ಬೇರೆ ಲೆವೆಲ್ಗೆ ಹೋಗಿದೆ. ನಾವೂ ಕೂಡ ಇಷ್ಟು ದಿನಗಳ ಕಾಲ ಗಟ್ಟಿನೆಲೆ ಕಾಣಬೇಕು ಎಂಬ ತುಡಿತವಿತ್ತು. ಈಗ “ಲಂಕೆ”ಗೆ ಬಿಡುಗಡೆ ಮೊದಲೇ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ಖಂಡಿತವಾಗಿಯೂ ಇಲ್ಲಿ ಗಟ್ಟಿನೆಲೆ ಕಾಣುತ್ತೇವೆ ಎಂಬ ಭರವಸೆ ಇದೆ.
ಸದ್ಯ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿದೆ.
ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ಗೆ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಸಿನಿಮಾ ತಂಡ ಪ್ರಚಾರ ಶುರು ಮಾಡಿದೆ. “ಲಂಕೆ” ಒಂದು ಪಕ್ಕಾ ಮಾಸ್ ಸಿನಿಮಾ. ಅದು ಟೀಸರ್ನಲ್ಲೇ ಗೊತ್ತಾಗಲಿದೆ. ಯೋಗಿ ಅವರಿಲ್ಲಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ನಾಯಕಿಯರು. ವಿಶೇಷವೆಂದರೆ, ನಟ ಸಂಚಾರಿ ವಿಜಯ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ಇರುವ ನಾಲ್ಕು ಹಾಡುಗಳು ಕೂಡ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿವೆ. ಧನಂಜಯ್ ನೃತ್ಯ ನಿರ್ದೇಶನವಿದೆ. ಚಿತ್ರಕ್ಕೆ ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.