ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಚಿತ್ರರಂಗ ಮತ್ತೆ ಗರಿಗೆದರಿದ್ದು ಗೊತ್ತೇ ಇದೆ. ಹಾಗಾಗಿ, ಇಲ್ಲಿ ಹೊಸಬರು ಮತ್ತು ಹಳಬರು ಮತ್ತದೇ ಉತ್ಸಾಹದಲ್ಲಿ ತಮ್ಮ ಸಿನಿಮಾ ಕೆಲಸಗಳತ್ತ ನಿರತರಾಗಿದ್ದಾರೆ. ಇನ್ನು, “ಟಗರು” ಖ್ಯಾತಿಯ ಪುಟ್ಟಿ ಎಂದೇ ಹೆಸರಾಗಿರುವ ಮಾನ್ವಿತಾ ಕಾಮತ್ ಕೂಡ ಸದ್ದಿಲ್ಲದೆಯೇ ಹೊಸದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌದು, “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ಜೊತೆ ಮಾನ್ವಿತಾ ಕಾಮತ್ ನಟಿಸುತ್ತಿದ್ದಾರೆ ಅನ್ನೋ ವಿಷಯ ಹರಡಿದೆ.
ಅಂದಹಾಗೆ, ಸಬೂ ಅಲೋಶಿಯಸ್ ಮತ್ತು ಅರುಣ್ ಕುಮಾರ್ ಜೋಡಿ ನಿರ್ದೇಶಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಅದಾಗಲೇ ಮೆಲ್ಲನೆ ಶುರುವಾಗಿದೆ. “ದಿಯಾ” ಸಿನಿಮಾ ಸಕ್ಸಸ್ ಆಗಿದ್ದೇ ತಡ, ನಟ ಪೃಥ್ವಿ ಅಂಬರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಿವರಾಜಕುಮಾರ್ ಅಭಿನಯದ “ಬೈರಾಗಿ” ಚಿತ್ರದಲ್ಲೂ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೃಥ್ವಿ ಅಂಬರ್ ಅವರು ತಮಿಳು ಸಿನಿಮಾದಲ್ಲೂ ನಟಿಸುವ ಅವಕಾಶ ಬಂದಿದ್ದು, ಅಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಮಾನ್ವಿತಾ ಕಾಮತ್ ಕೂಡ ಇತ್ತೀಚೆಗೆ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.