ನಿರ್ದೇಶಕರು ಹೀರೋ ಆಗಿರುವ ಸಿನಿಮಾಗಳು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿ ಈಗ ಒಂದೇ ಸಿನಿಮಾದಲ್ಲಿ ಹೀರೋ ಆಗಿದ್ದಾರೆ ಅನ್ನೋದು ವಿಶೇಷ. ಈ ಹಿಂದೆ ಕೂಡ ನಿರ್ದೇಶಕರುಗಳು ತೆರೆಯ ಮೇಲೆ ರಾರಾಜಿಸಿದ್ದಾರೆ. ಆದರೆ, ಇಲ್ಲಿರೋ ನಿರ್ದೇಶಕರು ತೆರೆ ಹಿಂದೆಯೂ ದೋಸ್ತಿಗಳು. ತೆರೆಮೇಲೂ ದೋಸ್ತಿಗಳು. ಹಾಗಂತ, ತೆರೆ ಮೇಲೆ ದೋಸ್ತಿಗಳಾಗಿದ್ದರೂ, ಒಂದಷ್ಟು ಕೋಪ, ಮನಸ್ತಾಪ, ಜಗಳ, ಎಲ್ಲವೂ ಇದೆ. ಈಗ ಪ್ರೇಕ್ಷಕರ ಮುಂದೆ ಬರಲು ಅವರು ಸಜ್ಜಾಗಿದ್ದಾರೆ.
ಹೌದು, “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಇದು ಇದೇ ತಿಂಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಆಸ್ಕರ್ ಕೃಷ್ಣ ನಿರ್ದೇಶನದ ಚಿತ್ರವಿದು. ಈ ಹಿಂದೆ. “ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು” ಚಿತ್ರ ನಿರ್ದೇಶಿಸಿ, ನಟಿಸಿದ್ದ ಲೋಕೇಂದ್ರ ಸೂರ್ಯ ಮತ್ತು ಆಸ್ಕರ್ ಕೃಷ್ಣ ಈ ಚಿತ್ರದ ಹೀರೋಗಳು.
ಇವರಿಗೆ ಗೌರಿ ನಾಯರ್ ಜೋಡಿ. ಇಲ್ಲಿ ನಾಯಕಿ ಯಾರ ಹಿಂದೆ ಹೋಗುತ್ತಾಳೆ ಅನ್ನೋದು ಸಸ್ಪೆನ್ಸ್. ಅಂದಹಾಗೆ, ಇದು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ ಚಿತ್ರ.
ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗ, ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಕೂಡ ಈಗ ತೆರೆದಿವೆ. ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರಮಂದಿರದಲ್ಲಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಕಾದಿದ್ದರು. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಅನಂತ್ ಆರ್ಯನ್ ಸಂಗೀತ ನೀಡಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಹಾಡಿದ್ದಾರೆ. ಈಗಾಗಲೇ ಹಾಡುಗಳು ಮೆಚ್ಚುಗೆ ಪಡೆದಿವೆ. ಇಲ್ಲಿ ನಾಯಕರ ಜೊತೆಗೆ ನಿರ್ಮಾಪಕ ಸೆವೆನ್ ರಾಜ್ ಕೂಡ ಒಂದು ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಗನ್ ಕುಮಾರ್ ಛಾಯಾಗ್ರಹಣ ಮಾಡಿದರೆ, ಮರಿಸ್ವಾಮಿ ಸಂಕಲನವಿದೆ. ಅಕುಲ್ ನೃತ್ಯ ಹಾಗೂ ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ.