ಈಗ ಸಿನಿಮಾ ಪ್ರಚಾರದ ಪರ್ವ. ಹೌದು, ಲಾಕ್ಡೌನ್ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಹಾಗಾಗಿ, ಸದ್ಯ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಈಗಿನಿಂದಲೇ ಬಿಡುಗಡೆಯ ಕೆಲಸವನ್ನು ಶುರುವಿಟ್ಟುಕೊಂಡಿವೆ. ಎರಡನೇ ಅಲೆ ನಂತರದಲ್ಲಿ ಸಿನಿಮಾಗಳು ಪ್ರಚಾರಕ್ಕೆ ಇಳಿದಿವೆ. ಆ ಸಾಲಿಗೆ ಈಗ “ಶಂಭೋ ಶಂಕರ” ಸಿನಿಮಾ ಕೂಡ ಸೇರಿದೆ.
ಅಘನ್ಯ ಪಿಕ್ಚರ್ಸ್ ಬ್ಯಾನರ್ನಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ ‘ಶಂಭೋ ಶಿವ ಶಂಕರ’ ಚಿತ್ರದ ನಾಯಕರಲೊಬ್ಬರಾದ ಅಭಯ್ ಪುನೀತ್ ಅವರ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಟೀಸರ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆಗಸ್ಟ್ 3 ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಗೌಸ್ಫೀರ್ ಸಾಹಿತ್ಯವಿದೆ.
ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದೆ. ‘ಶಂಭೋ ಶಿವ ಶಂಕರ’ ಮೂವರು ಹೀರೋಗಳ ಹೆಸರು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ನಟಿಸಿದ್ದಾರೆ.