ಲಾಕ್ಡೌನ್ ನಂತರ ಚಿತ್ರರಂಗ ಗರಿಗೆದರಿದ ಬೆನ್ನಲ್ಲೇ, ಸಿನಿಮಾಗಳು ತಮ್ಮ ಕೆಲಸಗಳನ್ನು ಆರಂಭಿಸಿವೆ. ಅಂತೆಯೇ, ಜಗ್ಗೇಶ್ ಅಭಿನಯದ “ತೋತಾಪುರಿ” ಇದೀಗ ತನ್ನ ಕಾರ್ಯಚಟುವಟಿಕೆ ಶುರುವಿಟ್ಟುಕೊಂಡಿದೆ. ಹೌದು, “ತೋತಾಪುರಿ 2 ” ಚಿತ್ರತಂಡ ಡಬ್ಬಿಂಗ್ ಕಾರ್ಯ ಆರಂಭಿಸಿದೆ.
ಎರಡನೇ ಅಲೆ ಲಾಕ್ ಡೌನ್ ಬಳಿಕ ಸಿನಿ ಕೆಲಸಕ್ಕೆ ಮುಂದಾಗಿದ್ದು, ಈಗಾಗಲೇ ನವರಸ ನಾಯಕ ಜಗ್ಗೇಶ್ ಅವರು ಡಬ್ಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಸಹಜವಾಗಿಯೇ ಇದು, ಚಿತ್ರತಂಡಕ್ಕೆ ಖುಷಿ ನೀಡಿದೆ. ನಿರ್ದೇಶಕ ವಿಜಯ್ ಪ್ರಸಾದ್ ಈ ಹಿಂದೆ ಜಗ್ಗೇಶ್ ಅವರಿಗಾಗಿಯೇ “ನೀರ್ದೋಸೆ” ಸಿನಿಮಾ ಮಾಡಿದ್ದರು. ಹರಿಪ್ರಿಯಾ ಮತ್ತು ಜಗ್ಗೇಶ್ ಕಾಂಬಿನೇಷನ್ನಲ್ಲಿ ಮೂಡಿಬಂದ ಆ ಚಿತ್ರ ಸೂಪರ್ ಹಿಟ್ ಆಗಿತ್ತು.
ಅದೇ ಖುಷಿಯ ಅಲೆಯಲ್ಲಿದ್ದ ವಿಜಯ್ ಪ್ರಸಾದ್ ಇದೀಗ “ತೋತಾಪುರಿ” ಸಿನಿಮಾ ಮಾಡಿದ್ದಾರೆ. ಸುರೇಶ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೊರೊನಾ ದೂರವಾದರೆ, ಲಾಕ್ಡೌನ್ ಇಲ್ಲವಾದರೆ, ಚಿತ್ರಮಂದಿರಗಳು ಶೇ.100 ರಷ್ಟು ಆರಂಭಗೊಂಡರೆ “ತೋತಾಪುರಿ” ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.