ಕನ್ನಡ ಸಿನಿಮಾರಂಗ ಈಗ ಮೆಲ್ಲನೆ ಗರಿಗೆದರುತ್ತಿದೆ. ಕನ್ನಡದಲ್ಲೀಗ ಹೊಸ ಸಿನಿಮಾಗಳ ಕಲರವ ಆಗುತ್ತಿರುವುದು ಹೊಸ ಬೆಳವಣಿಗೆಯೇ ಸರಿ. ಕೊರೊನಾ ಸಮಸ್ಯೆಗೆ ನಲುಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹೊಸಬರು ಆಸೆಯ ಕಂಗಳಲ್ಲೇ ತಮ್ಮ ನೂತನ ಸಿನಿಮಾಗಳಿಗೆ ಚಾಲನೆ ಕೊಡುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಕೂಡ ಇದೀಗ ಶುರುವಾಗುತ್ತಿವೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೂ ತಯಾರಾಗುತ್ತಿವೆ. ಈಗ ಆದರ ಬೆನ್ನಲ್ಲೇ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಆಷಾಢ ಶುರುವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೆಷ್ಟೋ ಸಿನಿಮಾಗಳು ಸೆಟ್ಟೇರಿವೆ. ಪೂಜೆ ಮುಗಿಸಿಕೊಂಡಿವೆ. ಅಂತೆಯೇ ನಿರ್ದೇಶಕ ನೂತನ್ ಉಮೇಶ್ ಅವರೂ ಸಹ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಹೌದು, ಈಗಾಗಲೇ ನೂತನ್ ಉಮೇಶ್ ಅವರು ಸದ್ದಿಲ್ಲದೆಯೇ, ಒಂದು ಸಿನಮಾ ಮಾಡಿದ್ದಾಗಿದೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ ಲಾಕ್‌ಡೌನ್ ಕಥಾಹಂದರ ಹೊಂದಿದೆ. ಅದೊಂದು ವಿಶೇಷ ಕಥೆ ಎನ್ನುವ ನಿರ್ದೇಶಕ ನೂತನ್ ಉಮೇಶ್, ನಾಲ್ಕು ಭಾಷೆಯಲ್ಲಿ ಬೇರೆ ಬೇರೆ ಹೀರೋಗಳಿದ್ದಾರೆ. ಹಾಗಂತ, ಆಯಾ ಭಾಷೆಯಲ್ಲೇ ನಟರಿದ್ದರೂ, ಎಲ್ಲಾ ನಟರಿಗೂ ಕಥೆಯೊಳಗಿನ ಲಿಂಕ್ ಇರಲಿದೆ ಎನ್ನುವ ಅವರು ಆ ಚಿತ್ರದ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ. ಈಗ ಹೊಸ ಸುದ್ದಿ ಅಂದರೆ, ಅವರು ತಮ್ಮ ಹೊಸ ಪ್ರಾಜೆಕ್ಟ್‌ಗೂ ಚಾಲನೆ ಕೊಟ್ಟಿದ್ದಾರೆ. ನೂತನ್ ಉಮೇಶ್ ಅವರ ಡ್ರೀಮ್ ಪ್ರಾಜೆಕ್ಟ್ ಅದು ಅನ್ನೋದು ವಿಶೇಷತೆಗಳಲ್ಲೊಂದು.
ನೂತನ್ ಉಮೇಶ್, ನಿರ್ದೇಶಕ
ಹೌದು, ನೂತನ್ ಉಮೇಶ್ ಅವರು, ಬಹಳ ದಿನಗಳಿಂದಲೂ ಒಂದೊಳ್ಳೆಯ ಕಥೆ ಮಾಡಿಕೊಂಡು, ಸಿನಿಮಾ ಮಾಡುವ ಉತ್ಸಾಹದಲ್ಲಿದ್ದರು. ಇನ್ನೇನು ಶುರು ಮಾಡಬೇಕು ಅನ್ನುವ ಹೊತ್ತಿಗೆ ಕೊರೊನಾ ಇತ್ಯಾದಿ ಸಮಸ್ಯೆಗಳು ಎದುರಾಗಿಬಿಟ್ಟಿದ್ದವು. ಈಗ ಅವರು ಒಂದೊಳ್ಳೆಯ ಹಾರರ್ ಕಥೆ ಹಿಡಿದು ಹೊರಟಿದ್ದಾರೆ. ಆ ಚಿತ್ರಕ್ಕೆ “A tale of ಅಂಡಾಳಮ್ಮ” ಎಂದು ನಾಮಕರಣ ಮಾಡಿದ್ದಾರೆ. ಹೌದು, ” ಹನಿ ಹನಿ ಹಾರರ್ ಕಹಾನಿ” ಎಂಬ ಅಡಿಬರಹವಿರುವ ಈ ಚಿತ್ರದ ಟೈಟಲ್ ಮಾತ್ರ ಅನೌನ್ಸ್ ಮಾಡಿರುವ ನೂತನ್ ಉಮೇಶ್, ಚಿತ್ರಕ್ಕೆ ಶ್ರೀನಿ ಅವರನ್ನು ಹೀರೋ ಮಾಡಿದ್ದಾರೆ. ಶ್ರೀನಿ ಈ ಹಿಂದೆ “ಟೋಪಿವಾಲ” ನಿರ್ದೇಶಿಸಿದ್ದರು. “ಶ್ರೀನಿವಾಸ ಕಲ್ಯಾಣ” ಮತ್ತು ಬೀರ್‌ಬಲ್ʼ ಸಿನಿಮಾದಲ್ಲಿ ನಟಿಸುವುದರ ಜೊತೆಗೂ ನಿರ್ದೇಶನ ಮಾಡಿದ್ದರು.
ಶ್ರೀನಿ, ಹೀರೋ
ಈಗ “A tale of ಅಂಡಾಳಮ್ಮ” ಸಿನಮಾದಲ್ಲಿ ನಟಿಸುತ್ತಿದ್ದಾರೆ. ಈ ಶೀರ್ಷಿಕೆಯೇ ಒಂದೊಳ್ಳೆಯ ಮಜಾ ಎನಿಸುತ್ತದೆ. ಕಥೆ ಕೂಡ ಅಷ್ಟೇ ಮಜವಾಗಿದೆ ಎನ್ನುವ ನಿರ್ದೇಶಕರು, ಅಂಡಾಳಮ್ಮ ಅಂದರೇನು? ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂದಷ್ಟೇ ಹೇಳುತ್ತಾರೆ. ಅದೇನೆ ಇರಲಿ, ಕನ್ನಡದಲ್ಲಿ ಈಗಂತೂ ಹೊಸಬಗೆಯ ಕಥೆಗಳು ಹುಟ್ಟಿಕೊಳ್ಳುತ್ತಿವೆ.
ಆ ಮೂಲಕ ಹೊಸ ಸಂಚಲನವನ್ನೂ ಸೃಷ್ಟಿಸುತ್ತಿವೆ. ಶ್ರೀನಿ ಹಾಗು ನೂತನ್ ಉಮೇಶ್ ಅವರ ಈ “A tale of ಅಂಡಾಳಮ್ಮ” ಸಿನಿಮಾ ಕೂಡ ಸಕ್ಸಸ್ ಆಗಲಿ. ಅಂದಹಾಗೆ, ಈ ಚಿತ್ರ ಮೋಹಕ್ ಸಿನಿಮಾಸ್ ಪ್ರೆಸೆಂಟ್ಸ್ ಮೂಲಕ ಶುರುವಾಗುತ್ತಿದೆ. ಸದ್ಯಕ್ಕೆ ಶ್ರೀನಿ ಹೀರೋ. ಅವರಿಗೆ ನಾಯಕಿ ಯಾರು, ಯಾರೆಲ್ಲಾ ತಾಂತ್ರಿಕ ವರ್ಗದವರು ಇರುತ್ತಾರೆ, ಕಲಾವಿದರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.